Tuesday, March 17, 2026
Tuesday, March 17, 2026
Home Blog Page 1513

ಸಿದ್ಧರಾಮಯ್ಯನವರಿಗೆ ಬೊಮ್ಮಾಯಿ ತಿರುಗೇಟು

0

ಪಿಎಸ್‌ಐ ಅಕ್ರಮ ನೇಮಕಾತಿ‌ ಪ್ರಕರಣ ಸಂಬಂಧ ರಾಜೀನಾಮೆ ನೀಡಬೇಕೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಈ‌ ಮಾನದಂಡದಲ್ಲಿ ಹೇಳುವುದಾದರೆ ಸಿದ್ದರಾಮಯ್ಯ ಹತ್ತು ಸಲ ರಾಜೀನಾಮೆ ಕೊಡಬೇಕಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಹಿಂದೆ ಅಧಿಕಾರದಲ್ಲಿದ್ದಾಗ ಇದೇ ಪೊಲೀಸ್ ನೇಮಕಾತಿ ವಿಚಾರದಲ್ಲಿ ಗುಲ್ಬರ್ಗಾದಲ್ಲಿ ಪ್ರಶ್ನೆಪತ್ರಿಕೆ ಲೀಕ್ ಆಗಿತ್ತು. ಪ್ರಶ್ನೆಪತ್ರಿಕೆ ಸಿದ್ದ ಮಾಡಿದ್ದ ಡಿಐಜಿ ಮನೆಯಿಂದಲೇ ಲೀಕ್ ಆಗಿತ್ತು. ಅದು ತನಿಖೆಯಾಗಿ ಆ ಡಿಐಜಿಯನ್ನು ಆರೋಪಿ ಎಂದು ಹೆಸರಿಸಲಾಗಿತ್ತು. ಮುಂದೆ ಈ ಪ್ರಕರಣ ಏನಾಯಿತು? ಅವರು ಯಾವ ಕ್ರಮ ಕೈಗೊಂಡಿದ್ದರು? ಆ ಡಿಐಜಿಯನ್ನು ಅಮಾನತು ಮಾಡಿದ್ದರಾ? ಬಂಧಿಸಿದ್ದರೇ? ನನ್ನ ರಾಜೀನಾಮೆ ಕೇಳಲು ಸಿದ್ದರಾಮಯ್ಯಗೆ ಯಾವ ನೈತಿಕತೆಯಿದೆ ಎಂದರು.

ಸಚಿವ ಆರ್.ಅಶೋಕ್ ಮಾತನಾಡಿ, ಪಿಎಸ್ ಐ ಅಕ್ರಮ ನೇಮಕ ಕುರಿತು ನಿನ್ನೆಯೇ ಸಿಎಂ ಸ್ಪಷ್ಟವಾಗಿ ನಿಲುವು ತೆಗೆದುಕೊಂಡಿದ್ದಾರೆ.

ಹಿಂದೆ ಕೂಡ ಅನೇಕ ಸರ್ಕಾರದ ಮೇಲೆ ಆಪಾದನೆ ಬಂದಿತ್ತು. ಆದರೆ ಅದನ್ನು ಮುಚ್ಚಿ ಹಾಕುತ್ತಿದ್ದರು. ನಮ್ಮ‌ ಸಿಎಂ‌ ಎಲ್ಲರಿಗೂ ಸ್ವಾತಂತ್ರ್ಯ ನೀಡಿದ ಕಾರಣ ಬಂಧನವಾಗಿದೆ. ಬೇರೆ ಸರ್ಕಾರದ ರೀತಿ ಇದ್ದಿದ್ದರೆ ಇದು ಹೊರಗೆ ಬರುತ್ತಿರಲಿಲ್ಲ ಎಂದರು.

ತುಂಬಿ ಹರಿಯುತ್ತಿರುವ ಕಾವೇರಿ & ತುಂಗಾ ನದಿಗಳು

0

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.

ಸದ್ಯ 13,418 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಕೆಆರ್‌ಎಸ್ ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಸದ್ಯ 109.52 ಅಡಿ ಭರ್ತಿಯಾಗಿದೆ. ಟಿಎಂಸಿ ಪ್ರಮಾಣದಲ್ಲಿ ಕೆಆರ್‌ಎಸ್ ಗರಿಷ್ಠ ಸಾಂದ್ರತೆ 49.452 ಟಿಎಂಸಿ ಇದ್ದರೆ, ಪ್ರಸ್ತುತ 31.242 ಟಿಎಂಸಿಯಷ್ಟು ನೀರು ತುಂಬಿದೆ.

ಶಿವಮೊಗ್ಗ ನಗರದ ಮಧ್ಯ ಭಾಗದಲ್ಲಿ ಹರಿಯುವ ತುಂಗಾ ನದಿಯು ತುಂಬಿ ಹರಿಯುತ್ತಿದೆ.‌ ತುಂಗಾ‌ ನದಿ ಹುಟ್ಟುವ ಪಶ್ಚಿಮ ಘಟ್ಟದ ಶೃಂಗೇರಿ, ಕಿಗ್ಗಾ ಸೇರಿದಂತೆ ಇತರೆ ಕಡೆ ವಿಪರೀತ ಮಳೆಯಾಗುತ್ತಿದೆ. ಇದರಿಂದ ತುಂಗಾ ಅಣೆಕಟ್ಟೆಗೆ ಸುಮಾರು 50 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಇದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.

ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿದ ಘಟನೆಸಾಂಸ್ಕೃತಿಕ ಭಯೋತ್ಪಾದನೆ- ಸಿದ್ಧರಾಮಯ್ಯ

0

ಶಿವಮೊಗ್ಗದ ಆನವಟ್ಟಿಯಲ್ಲಿ ‘ರಂಗಬೆಳಕು’ ತಂಡ ಪ್ರಸ್ತುತ ಪಡಿಸುತ್ತಿದ್ದ ‘ಜತೆಗಿರುವನು ಚಂದಿರ’ ಪ್ರದರ್ಶನಕ್ಕೆ ಆರೆಸ್ಸೆಸ್‌ ಅಡ್ಡಿಪಡಿಸಿರುವುದು ಸಾಂಸ್ಕೃತಿಕ ಭಯೋತ್ಪಾದನೆಯಲ್ಲದೆ ಮತ್ತೇನಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ರಾತ್ರಿ ಆಯೋಜಿಸಿದ್ದ ಈ ನಾಟಕ ಪ್ರದರ್ಶನಕ್ಕೆ ಬಜರಂಗದಳ, ಆರೆಸ್ಸೆಸ್‌ ಕಾರ್ಯಕರ್ತರು ಅಡ್ಡಿಪ‍ಡಿಸಿದ್ದರು.
ಈ ಬಗ್ಗೆ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ ಈ ಗೂಂಡಾಗಿರಿಯಲ್ಲಿ ಪಾಲುದಾರರಾದ ಎಲ್ಲಾ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮದ ಪರವಾಗಿರುವ ಸಾಹಿತ್ಯ,‌ ನಾಟಕ, ಕಲೆ‌ ಮೊದಲಾದ‌‌ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ಕಂಡರೆ ಆರೆಸ್ಸೆಸ್‌ ಮತ್ತು ಪರಿವಾರಕ್ಕೆ ಭಯ. ಈ ದಾಳಿಗೂ ಇದೇ ಕಾರಣ. ಇಂತಹ ಅಡ್ಡಿ- ಆತಂಕಗಳನ್ನು ಎದುರಿಸುವ ಚೈತನ್ಯ‌ ಕನ್ನಡದ ಸಾಂಸ್ಕೃತಿಕ‌ ಲೋಕಕ್ಕೆ ಇದೆ’ ಎಂದಿದ್ದಾರೆ.

ಅತಿಥಿ ಉಪನ್ಯಾಸಕರ ಸಂಭಾವನೆ ₹ 12000 ಕ್ಕೆ ಏರಿಕೆ

0

ಕರ್ನಾಟಕದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಸಂಭಾವನೆಯನ್ನು ‘ಪರಿಷ್ಕರಣೆ’ ಮಾಡಲಾಗಿದ್ದು, 9,000 ದಿಂದ 12,000 ರೂ.ಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸಕ್ತ ಸಾಲಿನಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು 3,708 ಅತಿಥಿ ಉಪನ್ಯಾಸಕರ ಸೇವೆಯನ್ನು ಭರ್ತಿ ಮಾಡಲಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.

2022-23ನೇ ಶೈಕ್ಷಣಿಕ ಸಾಲಿನಲ್ಲಿ ಬಡ್ತಿ, ವಯೋನಿವೃತ್ತಿ, ನಿಧನ ಹಾಗೂ ಇತರೆ ಕಾರಣಗಳಿಂದ ತೆರವಾಗಿರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳಿಗೆ ಒಟ್ಟು 3708 ಅತಿಥಿ ಉಪನ್ಯಾಸಕರುಗಳನ್ನು ನೇಮಕಾತಿ ಮಾಡಿಕೊಳ್ಳಬೇಕಾಗಿದೆ.

ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಪ್ರತಿಯಾಗಿ ಪ್ರಸಕ್ತ ಸಾಲಿನಲ್ಲೂ 3500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಹಾಗೂ ಆ ಬೋಧಕರ ಸಂಭಾವನೆಯನ್ನು 9 ಸಾವಿರ ರೂ. ನಿಂದ 15 ಸಾವಿರ ರು.ಗೆ ಹೆಚ್ಚಿಸುವಂತೆ ಕೋರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಪಿಯು ಇಲಾಖೆ ನಿರ್ದೇಶಕರಾದ ಆರ್‌.ರಾಮಚಂದ್ರನ್‌ 2022-23ನೇ ಸಾಲಿನಲ್ಲಿ ಸರ್ಕಾರಿ ಪಿಯು ಕಾಲೇಜುಗಳಿಗೆ 3500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಹಾಗೂ ಅವರ ಗೌರವ ಧನವನ್ನು 15 ಸಾವಿರ ರು.ಗಳಿಗೆ ಹೆಚ್ಚಿಸಬೇಕೆಂದು ಕೋರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಕಾಮೆಡ್ ಕೆ ಪರೀಕ್ಷೆ ಪ್ರಥಮ ಹತ್ತರಲ್ಲಿ ರಾಜ್ಯದ ಐವರು

0

ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಕಾಮೆಡ್ ಕೆ ನಡೆಸಿದ್ದ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ಮೊದಲ 10 ರ್‍ಯಾಂಕ್‌ಗಳಲ್ಲಿ 5 ಬೆಂಗಳೂರಿನ ಪಾಲಾಗಿವೆ.

ತಮಿಳುನಾಡು ಹೊಸೂರಿನ ಎ.ವೆಂಕಟ್‌ ಪ್ರಥಮ, ಬೆಂಗಳೂರಿನ ವಿಶಾಲ್‌ ಬೈಸಾನಿ ದ್ವಿತೀಯ, ಅಪೂರ್ವ್‌ ಟಂಡನ್‌ ತೃತೀಯ ರ್‍ಯಾಂಕ್ ಪಡೆದಿದ್ದಾರೆ.

ಮೊದಲ 100 ರ‍್ಯಾಂಕ್‌ಗಳಲ್ಲಿ 52 ರ‍್ಯಾಂಕ್‌ಗಳನ್ನು ಗಳಿಸುವ ಮೂಲಕ ಕರ್ನಾಟಕದ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ದೇಶದ 154 ನಗರಗಳ 230 ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 19ರಂದು ಆನ್‌ಲೈನ್‌ ಮೂಲಕ ಪರೀಕ್ಷೆ ನಡೆದಿತ್ತು. 61,635 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 57,387 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಅರ್ಹ ಅಭ್ಯರ್ಥಿಗಳ ರ್‍ಯಾಂಕ್‌ ಕಾರ್ಡ್‌ಗಳನ್ನು ರಚಿಸಲಾಗಿದೆ. ಕಾಮೆಡ್‌-ಕೆ ವೆಬ್‌ಸೈಟ್ www.comedk.orgನ ಅರ್ಜಿದಾರರ ಲಾಗಿನ್‌ನಲ್ಲಿ ಅಭ್ಯರ್ಥಿಗಳಿಗೆ ಮಾಹಿತಿ ಲಭ್ಯವಾಗಲಿದೆ. ಆನ್‌ಲೈನ್ ಮೋಡ್‌ನಲ್ಲಿ ಕೌನ್ಸೆಲಿಂಗ್ ನಡೆಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಲಾಗಿನ್ ಮೂಲಕ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು. ನಂತರ ದಾಖಲೆಗಳನ್ನು ಪರಿಣತ ಪರಿಶೀಲನಾ ಅಧಿಕಾರಿಗಳ ಸಮಿತಿ ಪರಿಶೀಲಿಸುತ್ತದೆ. ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುತ್ತದೆ ಎಂದು ಕಾಮೆಡ್‌ ಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸೇರಲು ಸಮ್ಮತಿ ನೀಡಿದೆ. ಇದು ಕಾಮೆಡ್‌ ಕೆ ಪರೀಕ್ಷೆಯ ಕೊನೆಯ ಫಲಿತಾಂಶವಾಗಿದೆ.

ಭದ್ರಾ ಜಲಾಶಯಕ್ಕೆ ಮೂರು ಅಡಿ ನೀರು ಹೆಚ್ಚಳ

0

ಚಿಕ್ಕಮಗಳೂರು ಜಿಲ್ಲೆ ವ್ಯಾಪ್ತಿಯ ನದಿ ಪಾತ್ರದ ಜಲಾನಯನ ಪ್ರದೇಶದಲ್ಲಿ ಮಳೆ ಚುರುಕುಗೊಂಡಿದೆ. ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳಗೊಂಡಿದೆ.

ಜುಲೈ ತಿಂಗಳ ಮೊದಲ 4 ದಿನಗಳಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣ 3 ಅಡಿಯಷ್ಟು ಹೆಚ್ಚಳಗೊಂಡಿದೆ.

ಆರಿದ್ರೆಯ ಆರ್ಭಟದ ಫಲವಾಗಿ ಜುಲೈ 1ರಿಂದ 4ರವರೆಗೆ ಭದ್ರಾ ಜಲಾಶಯಕ್ಕೆ 33,964 ಕ್ಯುಸೆಕ್ ನೀರು ಹರಿದುಬಂದಿದೆ. ಜುಲೈ 1ರಂದು 3,717 ಕ್ಯುಸೆಕ್ ಇದ್ದ ಒಳಹರಿವಿನ ಪ್ರಮಾಣ, ಸೋಮವಾರ 13,405 ಕ್ಯುಸೆಕ್‌ಗೆ ಹೆಚ್ಚಳಗೊಂಡಿತ್ತು. ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ ಇದ್ದು, ಜಲಾಶಯದಲ್ಲಿ ಶುಕ್ರವಾರ 152.6 ಅಡಿ ಇದ್ದ ನೀರಿನ ಪ್ರಮಾಣ ಸೋಮವಾರ 155.7 ಅಡಿಗೆ ಏರಿಕೆಯಾಗಿತ್ತು. ಮುಂಗಾರು ಹಂಗಾಮಿನ ಬೆಳೆಗಳಿಗಾಗಿ ಜಲಾಶಯದಿಂದ ಕಾಲುವೆಗೆ ನೀರು ಹರಿಸಲು ನೀರಿನ ಮಟ್ಟ 165 ಅಡಿಗೆ ಹೆಚ್ಚಳವಾಗಬೇಕಿದೆ.

ಚೀನಾದಲ್ಲಿ ಡೇಟಾ ಸೋರಿಕೆ ಪ್ರಕರಣ

0

ಚೀನಾದಿಂದ ಅತೀದೊಡ್ಡ ದತ್ತಾಂಶ ಸೋರಿಕೆ ಪ್ರಕರಣ ಬೆಳಕಿಗೆ ಬಂದಿದೆ.ಇದು ದೃಢಪಟ್ಟರೆ, ಇದು ಇತಿಹಾಸದಲ್ಲಿ ಅಂತಹ ಅತಿದೊಡ್ಡ ಸೈಬರ್ ಭದ್ರತಾ ಉಲ್ಲಂಘನೆಯಾಗಬಹುದು. ಹ್ಯಾಕರ್‌ಗಳ ಹೇಳಿಕೆಯ ಪ್ರಕಾರ, 1 ಬಿಲಿಯನ್ ಜನರ ವೈಯಕ್ತಿಕ ದಾಖಲೆಗಳನ್ನ ಪೊಲೀಸ್ ಡೇಟಾಬೇಸ್‌ನಿಂದ ಪಡೆಯಲಾಗಿದೆ.

ಬ್ರೀಚ್ ಫೋರಂಸ್ ಎಂಬ ಅಂತರ್ಜಾಲದ ಹ್ಯಾಕಿಂಗ್ ಫೋರಂನಲ್ಲಿ 24 ಟೆರಾಬೈಟ್‌ಗಳ ಬೃಹತ್ ಡೇಟಾಬೇಸ್ ಮಾರಾಟಕ್ಕೆ ಇಟ್ಟಾಗ ಈ ಸುದ್ದಿ ಬೆಳಕಿಗೆ ಬಂದಿದೆ. ಚೈನಾಡಾನ್ ಹೆಸರಿನ ಬಳಕೆದಾರರು 10 ಬಿಟ್ ಕಾಯಿನ್ ಬೆಲೆಗಾಗಿ ಬಿಲಿಯನ್ ಜನರ ದಾಖಲೆಗಳನ್ನ ಮತ್ತು ಅನೇಕ ಬಿಲಿಯನ್ ಕೇಸ್ ರೆಕಾರ್ಡ್ಗಳನ್ನು ಹಾಕುವುದಾಗಿ ಹೇಳಿಕೊಂಡಿದ್ದಾರೆ. ಇದು ಸುಮಾರು 200,000 ಡಾಲರ್ ಗೆ ಸಮನಾಗಿರುತ್ತದೆ.

ಶಾಂಘೈ ರಾಷ್ಟ್ರೀಯ ಪೊಲೀಸ್ ಡೇಟಾಬೇಸ್‌ನಿಂದ ಹೊರತೆಗೆಯಲಾಗಿದೆ ಎಂದು ಹೇಳಲಾದ ಹೆಸರುಗಳು, ವಿಳಾಸಗಳು, ರಾಷ್ಟ್ರೀಯ ಗುರುತು ಸಂಖ್ಯೆಗಳು ಮತ್ತು ಮೊಬೈಲ್ ಫೋನ್ ಸಂಖ್ಯೆಗಳು ಮತ್ತು ಪ್ರಕರಣ ವಿವರಗಳಂತಹ ಮಾಹಿತಿಯನ್ನ ಇದು ಒಳಗೊಂಡಿದೆ ಎಂದು ಆರೋಪಿಸಲಾಗಿದೆ.

ರಾಜ್ಯದಲ್ಲಿ ಕೊರೋನ ಸೋಂಕಿತರ ಏರಿಕೆ

0

ರಾಜ್ಯದಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳು ಏರಿಕೆಯಾಗಿದೆ. ಮಂಗಳವಾರ 839 ಜನರಲ್ಲಿ ಕೊರೋನಾ ದೃಢಪಟ್ಟಿದೆ. 913 ಮಂದಿ ಗುಣಮುಖರಾಗಿದ್ದಾರೆ. ಕಲಬುರಗಿಯಲ್ಲಿ 33 ವರ್ಷದ ಪುರುಷ, ಕೋಲಾರದಲ್ಲಿ 85 ವರ್ಷದ ವೃದ್ಧ ಸೋಂಕಿನಿಂದ ಸಾವಿಗೀಡಾಗಿದ್ದಾರೆ.

ಸದ್ಯ 6,398 ಸೋಂಕಿತರು ಆಸ್ಪತ್ರೆ ಅಥವಾ ಮನೆಯಲ್ಲಿ ಚಿಕಿತ್ಸೆ ಅಥವಾ ಆರೈಕೆಯಲ್ಲಿದ್ದಾರೆ.

84 ಸಾವಿರ ಸೋಂಕು ಪರೀಕ್ಷೆಗಳು ನಡೆದಿದೆ. ಪಾಸಿಟಿವಿಟಿ ದರ ಶೇ.3.4 ರಷ್ಟು ದಾಖಲಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಆರು ಸಾವಿರ ಹೆಚ್ಚು ನಡೆಸಲಾಗಿದೆ. ಆದ್ದರಿಂದ, ಹೊಸ ಪ್ರಕರಣಗಳು ಕೂಡಾ 90 ಹೆಚ್ಚಳವಾಗಿವೆ. ಸಕ್ರಿಯ ಸೋಂಕಿತರ ಪೈಕಿ 97 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ. 6,301 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ. ರಾಜ್ಯದಲ್ಲಿ ಈವರೆಗೆ 39.7 ಲಕ್ಷ ಸೋಂಕು ಪ್ರಕರಣಗಳು ವರದಿಯಾಗಿದೆ. 39.2 ಲಕ್ಷ ಮಂದಿ ಗುಣಮುಖರಾಗಿದ್ದಾರೆ. 40,080 ಜನ ಸಾವನ್ನಿಪ್ಪಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ 5000 ಶಿಕ್ಷಕರನ್ನ ನೀಡಲಾಗುತ್ತದೆ

0

ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಬಲಗೊಳಿಸುವ ಸಲುವಾಗಿ ಸರ್ಕಾರದಿಂದ 15 ಸಾವಿರ ಹೊಸ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಪೈಕಿ 5 ಸಾವಿರ ಶಿಕ್ಷಕರನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ.ನಾಗೇಶ್ ಅವರು ತಿಳಿಸಿದ್ದಾರೆ.

ಅವರು ಮಂಗಳವಾರ ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ಅಳವಡಿಸಿರುವ ಮಳೆ ನೀರು ಕೊಯ್ಲು ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಇದೆ. ಅದನ್ನು ನಿವಾರಿಸಲು ಶಿಕ್ಷಕರ ನೇಮಕಾತಿಗೆ ಚಾಲನೆ ನೀಡಲಾಗಿದೆ. 371ಜೆ ಮೀಸಲಾತಿಯಡಿ ಸ್ಥಳೀಯರು ನೇಮಕಾತಿ ಆಗುವುದರಿಂದ ಪ್ರದೇಶ ಬಿಟ್ಟು ಶಿಕ್ಷಕರು ಬೇರೆಡೆ ವರ್ಗಾವಣೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ಕೊರೋನಾ ಕಾರಣದಿಂದ ಕಳೆದ ವರ್ಷ ಸರಿಯಾಗಿ ಶಾಲೆಗಳು ನಡೆಯದ ಕಾರಣ ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದೆ. ಆದ್ದರಿಂದ, ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಕಲಿಕಾ ಚೇತರಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಕಲಿಕಾ ಚೇತರಿಕೆ ಕೋರ್ಸ್ ಬೋಧಿಸಿದ ಬಳಿಕವೇ ಪಠ್ಯ ಬೋಧನೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಅಗ್ನಿಪಥ್ ವಿರುದ್ಧ ಪ್ರತಿಭಟನೆ ತಪ್ಪುತಿಳುವಳಿಕೆಯಿಂದ ಆಗಿದೆ-ಲೆ.ಪ್ರತಾಪ್

0

ಅಗ್ನಿಪಥ್ ಯೋಜನೆ ಮೂಲಕ ಭಾರತೀಯ ಸೇನಾಪಡೆಯಲ್ಲಿ ಅಗ್ನಿವೀರರನ್ನು ನೇಮಕಾತಿ ಮಾಡಿಕೊಳ್ಳಲು ಈಗಾಗಲೇ ತೀರ್ಮಾನಿಸಲಾಗಿದೆ. ಇದಕ್ಕೆ ಪೂರಕವಾಗಿ ಸೇನಾ ಪಡೆ, ವಾಯುಪಡೆ ಹಾಗೂ ನೌಕಾಪಡೆಯಲ್ಲಿ ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಿವೆ. ಲಕ್ಷಾಂತರ ಸಂಖ್ಯೆಯಲ್ಲಿ ಯುವ ಜನತೆ ಅಗ್ನಿವೀರರಾಗಲು ತಮ್ಮ ಅರ್ಜಿ ಸಲ್ಲಿಸಿದ್ದಾರೆ.

ಇದರ ಮಧ್ಯೆ ಅಗ್ನಿಪಥ್ ಯೋಜನೆ ಘೋಷಿಸಿದ ವೇಳೆ ರಾಜಸ್ಥಾನ ಬಿಹಾರ, ಜಾರ್ಖಂಡ್ಗಳಲ್ಲಿ ಪ್ರತಿಭಟನೆ ನಡೆಸಿದ್ದ ಯುವಕರು ಸರ್ಕಾರಿ ಆಸ್ತಿಪಾಸ್ತಿಗೆ ಅಪಾರ ಹಾನಿ ಮಾಡಿದ್ದರು. ರೈಲುಗಳಿಗೆ ಬೆಂಕಿ ಹಚ್ಚಿದ ಘಟನೆಯೂ ನಡೆದಿದ್ದು ನೂರಾರು ಕೋಟಿ ರೂಪಾಯಿಗಳ ನಷ್ಟ ಸಂಭವಿಸಿತ್ತು.
ಇದೀಗ ಅಗ್ನಿಪಥ್ ಯೋಜನೆ ಕುರಿತಂತೆ ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ‘ಇಂಡಿಯಾ ಟುಡೇ ಕಾನ್ಕ್ಲೇವ್ ಈಸ್ಟ್ 2022’ ದಿಲ್ಲಿ ಮಾತನಾಡಿದ ಅವರು 2030 ರ ವೇಳೆಗೆ ಭಾರತೀಯ ಸೇನೆಯಲ್ಲಿ ಶೇಕಡಾ 50ರಷ್ಟು ಅಗ್ನಿವೀರರು ಇರಲಿದ್ದಾರೆ ಎಂದು ತಿಳಿಸಿದ್ದಾರೆ.

‘ಅಗ್ನಿಪಥ್’ ಯೋಜನೆಯನ್ನು ಘೋಷಿಸುವ ಮುನ್ನ ಇದರ ಸಾಧಕ ಬಾಧಕಗಳನ್ನು ಅಮೂಲಾಗ್ರವಾಗಿ ಪರಿಶೀಲಿಸಲಾಗಿತ್ತು. ಎಲ್ಲ ಚರ್ಚೆಗಳನ್ನು ನಡೆಸಿದ ಬಳಿಕ ಯೋಜನೆ ಯುವ ಜನತೆಗೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಅಂತಿಮವಾಗಿ ಇದಕ್ಕೆ ಅನುಮೋದನೆ ನೀಡಲಾಯಿತು ಎಂದು ಹೇಳಿದ್ದಾರೆ.

ಇನ್ನು ಯೋಜನೆ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆ ಕುರಿತು ಮಾತನಾಡಿದ ಲೆಫ್ಟಿನೆಂಟ್ ಜನರಲ್ ರಾಣಾ ಪ್ರತಾಪ್, ತಪ್ಪು ಗ್ರಹಿಕೆಯಿಂದ ಇದು ಆಗಿದ್ದು, ಯುವ ಜನತೆಗೆ ಯೋಜನೆ ಕುರಿತು ಸವಿವರವಾಗಿ ತಿಳಿದುಕೊಳ್ಳಬೇಕಾಗಿತ್ತು ಎಂದು ಹೇಳಿದ್ದಾರೆ.