Wednesday, September 16, 2026
Wednesday, September 16, 2026
Home Blog

ಕನ್ನಡದ ಖ್ಯಾತ ನಟಅನಂತ್ ನಾಗ್ ಮುಡಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ, ಮುಖ್ಯಮಂತ್ರಿ ಅಭಿನಂದನೆ

0

ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಬಹುಮುಖ ಪ್ರತಿಭೆ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿರುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗಕ್ಕೆ ಅನಂತ್ ನಾಗ್ ಅವರು ನೀಡಿರುವ ಅಪಾರ ಕೊಡುಗೆ ಹಾಗೂ ಸುದೀರ್ಘ ಕಲಾ ಪಯಣವನ್ನು ಗುರುತಿಸಿ ಈ ಪ್ರತಿಷ್ಠಿತ ಗೌರವ ಘೋಷಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ತಮ್ಮ ವಿಶಿಷ್ಟ ಅಭಿನಯದ ಮೂಲಕ ಭಾರತೀಯ ಸಿನಿರಂಗಕ್ಕೆ ಅನಂತ್ ನಾಗ್ ಅವರು ಸಲ್ಲಿಸಿರುವ ಸೇವೆ ಶ್ಲಾಘನೀಯವಾಗಿದ್ದು, ಈ ಗೌರವ ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ ಎಂದಿದ್ದಾರೆ.

ಅನಂತ್ ನಾಗ್ ಅವರ ಕಲಾ ಪಯಣ ಮುಂದಿನ ಪೀಳಿಗೆಗಳಿಗೂ ಸದಾ ಸ್ಫೂರ್ತಿಯಾಗಲಿದೆ ಎಂದು ಡಿ.ಕೆ. ಶಿವಕುಮಾರ್ ಹಾರೈಸಿದ್ದಾರೆ.

ಇಲಿಗಳ ಪಾಲಾದ ಗಣಪತಿ ದೇವಸ್ಥಾನದ ಹುಂಡಿ ಹಣ

0

ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನು ಇಲಿಗಳು ಕಡಿದು ನುಚ್ಚುನೂರು ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗದ ಶಾಂತಿನಗರದ ಬಂಗಾರಪ್ಪ ಬಡಾವಣೆಯ ಶ್ರೀ ವಿಜಯ ಗಣಪತಿ ದೇವಸ್ಥಾನದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ದೇವಸ್ಥಾನದ ಹುಂಡಿ ತೆರೆಯುವ ವೇಳೆ ಹಲವು ನೋಟುಗಳು ಇಲಿಗಳಿಂದ ಕಚ್ಚಿ ಹಾನಿಗೊಳಗಾಗಿರುವುದು ಪತ್ತೆಯಾಗಿದೆ. ಹುಂಡಿ ಎಣಿಕೆ ಸಂದರ್ಭದಲ್ಲಿ ₹100, ₹50, ₹20 ಹಾಗೂ ₹10 ಮುಖಬೆಲೆಯ ನೋಟುಗಳು ಹಾನಿಯಾಗಿರುವುದು ಕಂಡುಬಂದಿದೆ.

ಸುಮಾರು ₹5 ಸಾವಿರದಿಂದ ₹6 ಸಾವಿರ ಮೌಲ್ಯದ ಹಣ ಇಲಿಗಳಿಂದ ಹಾನಿಗೊಳಗಾಗಿರಬಹುದು ಎಂದು ಅಂದಾಜಿಸಲಾಗಿದೆ.

ಹುಂಡಿಯಲ್ಲಿ ಹಣವನ್ನು ಸುರಕ್ಷಿತವಾಗಿ ಸಂಗ್ರಹಿಸುವ ವ್ಯವಸ್ಥೆ ಹಾಗೂ ಇಲಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಮಾತುಗಳು ಕೇಳಿಬಂದಿವೆ.

ಕಸ್ತೂರಿ ರಂಗನ್ ವರದಿ: ಸೆ.19ರಂದು ತೀರ್ಥಹಳ್ಳಿಯಲ್ಲಿ ಸಿಎಂ ಸಮಾವೇಶ

0

ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಭಾಗದಲ್ಲಿ ಉಂಟಾಗಿರುವ ಆತಂಕದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

ತೀರ್ಥಹಳ್ಳಿಯ ಯು.ಆರ್. ಅನಂತಮೂರ್ತಿ ಪಿಯು ಕಾಲೇಜು ಮೈದಾನದಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಬಹಿರಂಗ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶಕ್ಕೂ ಮುನ್ನ ಮುಖ್ಯಮಂತ್ರಿ ಅವರು ರೈತರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮುಖಂಡರೊಂದಿಗೆ ಸಂವಾದ ನಡೆಸಿ, ವರದಿಯಿಂದ ಎದುರಾಗಬಹುದಾದ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲಿದ್ದಾರೆ.

ಕಸ್ತೂರಿ ರಂಗನ್ ವರದಿ ಕುರಿತು ತುರ್ತು ಅಧಿವೇಶನದಲ್ಲಿ ಚರ್ಚೆ ನಡೆಸಲು ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ವರದಿಯಿಂದ ಬಾಧಿತವಾಗಿರುವ ಆರು ಜಿಲ್ಲೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡುತ್ತಿದ್ದಾರೆ. ಈ ಭಾಗದ ರೈತರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಆತಂಕ ಮತ್ತು ಸಮಸ್ಯೆಗಳನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಪ್ರವಾಸ ಕೈಗೊಂಡಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.

ಈಗಾಗಲೇ ಹಲವು ಪಾದಯಾತ್ರೆಗಳು ಹಾಗೂ ಪ್ರತಿಭಟನೆಗಳ ಮೂಲಕ ಕಸ್ತೂರಿ ರಂಗನ್ ವರದಿಯ ವಿರುದ್ಧ ಗಮನ ಸೆಳೆಯಲಾಗಿದೆ. ವರದಿಯಿಂದ ಮಲೆನಾಡಿನ ರೈತರು ಹಾಗೂ ಜನಸಾಮಾನ್ಯರ ಜೀವನೋಪಾಯಕ್ಕೆ ತೊಂದರೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಮಾವೇಶದ ಮೂಲಕ ರಾಜ್ಯದ ಗಮನ ಸೆಳೆಯಲಾಗುತ್ತಿದೆ.

ತೀರ್ಥಹಳ್ಳಿಯ ಸಮಾವೇಶದಲ್ಲಿ ಸುಮಾರು 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಮಧ್ಯಾಹ್ನ 1 ಗಂಟೆಗೆ ಬಾಳೆಹೊನ್ನೂರಿನಲ್ಲಿ ಮತ್ತೊಂದು ಕಾರ್ಯಕ್ರಮ ಇರುವುದರಿಂದ ಮುಖ್ಯಮಂತ್ರಿ ಅವರು ತೀರ್ಥಹಳ್ಳಿಯ ಕಾರ್ಯಕ್ರಮವನ್ನು ಮಧ್ಯಾಹ್ನ 12 ಗಂಟೆಯೊಳಗೆ ಮುಗಿಸಿ ತೆರಳಲಿದ್ದಾರೆ ಎಂದು ಅವರು ತಿಳಿಸಿದರು.

“ಜನರ ಹಸಿವು, ಉದ್ಯೋಗ ಹಾಗೂ ಜೀವನೋಪಾಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಿದೆ. ಕಸ್ತೂರಿ ರಂಗನ್ ವರದಿ ಕುರಿತು ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಕಿಮ್ಮನೆ ರತ್ನಾಕರ್ ಹೇಳಿದರು.

‘ವಂದೇ ಮಾತರಂ’ ವಿವಾದದ ಕುರಿತು

ಶಾಸಕ ಚನ್ನಬಸಪ್ಪ ಅವರು ‘ವಂದೇ ಮಾತರಂ’ ಗಾಯನದ ಕುರಿತು ವ್ಯಕ್ತಪಡಿಸಿರುವ ಅಪಸ್ವರದ ಬಗ್ಗೆ ಪ್ರತಿಕ್ರಿಯಿಸಿದ ಕಿಮ್ಮನೆ ರತ್ನಾಕರ್, ಜನರನ್ನು ಒಗ್ಗೂಡಿಸಲು ಹಾಡುಗಳು ಮತ್ತು ಬಾವುಟಗಳಂತಹ ಸಂಕೇತಗಳು ಅಗತ್ಯ ಎಂದರು.

“ಇಂತಹ ಹಾಡುಗಳು ಹಾಗೂ ಬಾವುಟಗಳು ನಮ್ಮಲ್ಲಿ ಏಕತೆಯ ಭಾವನೆ ಮೂಡಿಸುತ್ತವೆ. ಆದರೆ ಇವುಗಳಿಂದ ಮಾತ್ರ ಜನರ ಹಸಿವು ನೀಗುವುದಿಲ್ಲ ಅಥವಾ ಜೀವನೋಪಾಯದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಹೀಗಾಗಿ ಇಂತಹ ವಿಷಯಗಳ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ. ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸುವುದು ಮುಖ್ಯ. ಗಾಯನ ಯಾವ ಸ್ವರೂಪದಲ್ಲಿದೆ ಎನ್ನುವುದಕ್ಕಿಂತ ಅದರ ಉದ್ದೇಶ ಮುಖ್ಯ” ಎಂದು ಅವರು ಹೇಳಿದರು.

ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಆಡಳಿತ ವ್ಯವಸ್ಥೆಯೇ ಪ್ರಜಾಪ್ರಭುತ್ವ : ಪ್ರೊ.ಬಿ.ಎಲ್.ರಾಜಪ್ಪ

0

ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಆಡಳಿತ ವ್ಯವಸ್ಥೆಯೇ ಪ್ರಜಾಪ್ರಭುತ್ವ, ಇಲ್ಲಿ ಜನರೇ ದೇಶದ ಆಡಳಿತದ ಕೇಂದ್ರಬಿಂದುವಾಗಿರುತ್ತಾರೆ. ಪ್ರಜಾಪ್ರಭುತ್ವದ ಮೌಲ್ಯಗಳು, ಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವವನ್ನು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಭಾಗವಾಗಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ದೇಶದಾದ್ಯಂತ ಆಚರಿಸಲಾಗುತ್ತಿದೆ ಎಂದು ರಿಪ್ಪನ್‌ಪೇಟೆ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಎಲ್.ರಾಜಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳನ್ನು ನೀಡಿದೆ. ಚುನಾವಣೆಗಳ ಮೂಲಕ ಜನರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಪ್ರಜಾಪ್ರಭುತ್ವದ ಪ್ರಮುಖ ಅಂಶವಾಗಿದೆ ಎಂದವರು ನುಡಿದರು.
ಮತದಾನದ ಮಹತ್ವ, ಕಾನೂನಿನ ಗೌರವ, ಮಾನವ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಸಹಬಾಳ್ವೆ ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಪ್ರಜಾಪ್ರಭುತ್ವವು ಕೇವಲ ಮತ ಚಲಾಯಿಸುವುದಕ್ಕೆ ಸೀಮಿತವಾಗಿರದೆ, ಪ್ರತಿಯೊಬ್ಬ ನಾಗರಿಕನು ತನ್ನ ಹಕ್ಕುಗಳನ್ನು ಅರಿತುಕೊಳ್ಳುವುದರ ಜೊತೆಗೆ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದನ್ನೂ ಒಳಗೊಂಡಿದೆ ಎಂದರು.
ಯುವಜನತೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಂಡು, ಜವಾಬ್ದಾರಿಯುತ ನಾಗರಿಕರಾಗಿ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ವೈವಿಧ್ಯತೆಯಲ್ಲಿ ಏಕತೆ, ಸಹಿಷ್ಣುತೆ, ಸಂವಾದ ಮತ್ತು ಪರಸ್ಪರ ಗೌರವ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದ ಅವರು, ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ನೆನಪಿಸುವುದರ ಜೊತೆಗೆ, ಬಲಿಷ್ಠ, ಸಮಾನತೆಯ ಮತ್ತು ಜವಾಬ್ದಾರಿಯುತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಕೈಗೊಳ್ಳುವಲ್ಲಿ ಈ ಕಾರ್ಯಕ್ರಮ ಪ್ರಧಾನ ಭೂಮಿಕೆಯಾಗಲಿದೆ ಎಂದರು.
ಪ್ರಜಾಪ್ರಭುತ್ವದ ಪ್ರಮುಖ ಶಿಲ್ಪಿಗಳಾದ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯವನ್ನು ಪ್ರಜಾಪ್ರಭುತ್ವದ ಮೂಲ ಮೌಲ್ಯಗಳಾಗಿ ಪ್ರತಿಪಾದಿಸಿದರು. ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆ ಮತ್ತು ಬಹುಮತದ ಆಡಳಿತವಲ್ಲ; ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಅವಕಾಶ, ಗೌರವ ಮತ್ತು ಹಕ್ಕುಗಳು ದೊರೆಯುವ ಜೀವನ ವಿಧಾನವೂ ಆಗಿದೆ. ಜಾತಿ, ಧರ್ಮ, ಲಿಂಗ ಅಥವಾ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯ ಇರಬಾರದು ಎಂದವರು ನುಡಿದರು.
ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮೂಲಭೂತ ಹಕ್ಕುಗಳು, ಕಾನೂನಿನ ಮುಂದೆ ಸಮಾನತೆ, ಅಸ್ಪೃಶ್ಯತೆ ನಿರ್ಮೂಲನೆ, ಸಾಮಾಜಿಕ ನ್ಯಾಯ ಮತ್ತು ದುರ್ಬಲ ವರ್ಗಗಳ ರಕ್ಷಣೆಗೆ ಬಲವಾದ ಅಡಿಪಾಯ ಹಾಕಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ಸಂವಿಧಾನಾತ್ಮಕ ನೈತಿಕತೆ, ಜವಾಬ್ದಾರಿಯುತ ನಾಗರಿಕತೆ ಮತ್ತು ಪರಸ್ಪರ ಗೌರವ ಅಗತ್ಯವೆಂದು ಅವರು ಪ್ರತಿಪಾದಿಸಿದರು ಎಂದ ಅವರು, ಅಂಬೇಡ್ಕರ್ ಅವರ ಚಿಂತನೆಗಳು ಪ್ರಜಾಪ್ರಭುತ್ವವನ್ನು ರಾಜಕೀಯ ಸಮಾನತೆಯಿಂದ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯತ್ತ ಕೊಂಡೊಯ್ಯುವ ಮಾರ್ಗದರ್ಶಕ ಶಕ್ತಿಯಾಗಿವೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್‌ ಅವರು ಮಾತನಾಡಿ, ಸಂವಿಧಾನ ಮುಖ್ಯ ಅಂಗಗಳಲ್ಲಿ ಕಾರ್ಯಾಂಗ ಪ್ರಮುಖ ಪಾತ್ರ ವಹಿಸುತ್ತದೆ. ಶಾಸಕಾಂಗ ಕಾನೂನು ರೂಪಿಸಿದರೆ, ಅದನ್ನು ಅನುಷ್ಟಾನಕ್ಕೆ ತರುವಲ್ಲಿ ಕಾರ್ಯಾಂಗ ಸಕ್ರಿಯವಾಗಿರುತ್ತದೆ. ಯಾವುದೇ ಕಾನೂನು ಅನುಷ್ಠಾನಗೊಳ್ಳುವ ಮುನ್ನ ಅದು ಸಂಸತ್‌ನಲ್ಲಿ ಚರ್ಚೆಗೆ ಒಳಪಡಲಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌ ಅವರು ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸು ಅಡಗಿರುವುದೇ ಜನನಾಯಕನನ್ನು ಆಯ್ಕೆ ಮಾಡುವ ಮತದಾರರಿಂದ. ಮತದಾನ ನಿರ್ಲಕ್ಷಿಸುವುದರಿಂದ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯವಿಲ್ಲ. ಪ್ರತಿ ಮತವೂ ಅಮೂಲ್ಯವಾಗಿದೆ. ಪ್ರತಿ ವ್ಯಕ್ತಿ ತಾನು ಉಮೇದುವಾರನ ಮೇಲೆ, ಪ್ರಜಾಪ್ರಭುತ್ವದ ಮೇಲೆ ಹೊಂದಿರುವ ನಂಬಿಕೆಯಿಂದ ಮನತ ಚಲಾಯಿಸಬೇಕು ಎಂದರು.
ಪ್ರತಿ ವ್ಯಕ್ತಿ ಸ್ವಾವಲಂಬಿಯಾಗಬೇಕು ಎನ್ನುವ ಗಾಂಧೀಜಿಯವರ ಸ್ವರಾಜ್, ಸ್ವದೇಶಿ ಉತ್ಪನ್ನಗಳ ಬಳಕೆ ಮತ್ತು ಉತ್ತೇಜನ ಮತ್ತು ಸಮಾನತೆ ಇದ್ದಲ್ಲಿ ಪ್ರಜಾಪ್ರಭುತ್ವ ಬಲಗೊಳ್ಳಲಿದೆ ಎಂದರು.
ಕಾರ್ಯಕ್ರಮದ ಅ‍ಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಮಾತನಾಡಿ, ಈ ದೇಶದ ಪ್ರತಿ ನಾಗರೀಕರೂ ಸಾಮಾಜಿಕ ಮತ್ತು ಕಾನೂನಿನ ಅರಿವನ್ನು ಹೊಂದಬೇಕು. ಪ್ರತಿ ವ್ಯಕ್ತಿಯೂ ಮುಕ್ತವಾಗಿ ಮಾತನಾಡುವ ಅಭಿವ್ಯಕ್ತಿ ಸ್ವಾತಂತ್ರ್ಯ ಹೊಂದಬೇಕು. ನಾಯಕತ್ವ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಅಭಿವ್ಯಕ್ತಿಗೆ ಅವಕಾಶ ಪಡೆದುಕೊಳ್ಳಬೇಕು ಎಂದವರು ನುಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಲ್ಲೇಶಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಂಸಹಾರಿ ಹೊಟೇಲ್‌ಗಳ ಮೇಲೆ ದಾಳಿ : ಸ್ವಚ್ಚತೆ ಕಾಪಾಡದಿದ್ದಲ್ಲಿ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ

0

ಶಿವಮೊಗ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ತಿಲಕ್‌ನಗರದಲ್ಲಿರುವ ಮಾಂಸಾಹಾರಿ ಹೊಟೇಲ್‌ಗಳ ಮೇಲೆ ಶಿವಮೊಗ್ಗ ಉಪವಿಭಾಗಾಧಿಕಾರಿ ಡಾ|| ಮೈತ್ರಿ ಅವರು ಕಂದಾಯ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳೊಂದಿಗೆ ದಿಢೀರ್‌ದಾಳಿ ನಡೆಸಿ, ಹೊಟೇಲ್‌ಗಳ ಶುಚಿತ್ವ, ಆಹಾರದ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿದರು.
ಪರಿಶೀಲನೆ ಸಂದರ್ಭದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳದಿರುವ ಮಾಂಸಹಾರಿ ಹೊಟೇಲ್‌ಗಳ ಮಾಲೀಕರಿಗೆ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸೂಚಿಸಿದ ಅವರು, ಸ್ವಚ್ಚತೆ ಕಾಪಾಡಿಕೊಳ್ಳದಿದ್ದಲ್ಲಿ ಶುದ್ಧ ನೀರು ಬಳಸಿ ಆಹಾರ ತಯಾರಿಸದಿದ್ದಲ್ಲಿ ಹಾಗೂ ಗ್ರಾಹಕರಿಗೆ ಶುದ್ಧ ಕುಡಿಯುವ ನೀರು ಪೂರೈಸದಿದ್ದಲ್ಲಿ ಹೊಟೇಲ್‌ಗಳ ಪರವಾನಿಗೆ ರದ್ದುಗೊಳಿಸುವುದಾಗಿ ಎಚ್ಚರಿಸಿದ ಅವರು, ಹೊಟೇಲ್‌ಗಳಲ್ಲಿದ್ದ ಆಹಾರದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗಾಗಿ ಕಳುಹಿಸಿಕೊಡಲಾಗುವುದು ಎಂದರು.
ಆಹಾರ ತಯಾರಿಕೆಯಲ್ಲಿ ಬಣ್ಣ, ಮತ್ತಿತರ ಕ್ಯಾನ್ಸರ್‌ಕಾರಕ ರಸಾಯನಿಕಗಳ ಬಳಕೆ ಕಂಡುಬಂದಲ್ಲಿ ಹೊಟೇಲ್‌ಗಳ ಪರವಾನಿಗೆ ರದ್ದುಗೊಳಿಸಲಾಗುವುದಲ್ಲದೆ ನಿಯಾಮಾನುಸಾರ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುವುದು ಅನಿವಾರ್ಯವಾಗಲಿದೆ ಎಂದ ಅವರು, ಅಶುಚಿಯಾಗಿರುವ ಹೊಟೇಲ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳದಿರುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದಲ್ಲದೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಸಕ್ಷಮ ಪ್ರಾಧಿಕಾರಿಗಳಿಗೆ ವರದಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್‌, ತಹಶೀಲ್ದಾರ್‌ರಾಜೀವ್‌, ಕಂದಾಯಾಧಿಕಾರಿ ಸತೀಶ್‌, ಕಂದಾಯ ನಿರೀಕ್ಷಕ ಹೊತ್ತಾರೆ ಶಿವಕುಮಾರ್‌, ದೀಪಕ್‌ಬಿ., ವಿನಾಯಕಸ್ವಾಮಿ ಜಿ.ಎಂ., ನಿಂಗರಾಜಪ್ಪ, ಮೋಹನ್‌ಕುಮಾರ್‌ಮತ್ತಿತರರು ಉಪಸ್ಥಿತರಿದ್ದರು.

ಸೈಲ್-ವಿಐಎಸ್‌ಪಿಯಲ್ಲಿ ಇಂಜಿನಿಯರ್ಸ್ ದಿನಾಚರಣೆ

0

ಅತ್ಯುತ್ತಮ ಇಂಜಿನೀಯರ್, ರಾಜನೀತಿಙ್ಞ, ದಾರ್ಶನಿಕ, ಸರ್. ಎಮ್. ವಿಶ್ವೇಶ್ವರಾಯರವರ ಜನ್ಮದಿನವನ್ನು ಇಂಜಿನೀಯರ್, ದಿನಾಚರಣೆಯನ್ನಾಗಿ ಆಚರಿಸಿ, ದಿನಾಂಕ ೧೫-೦೯-೨೦೨೬ ರಂದು ವಿಐಎಸ್‌ಪಿಯ ಸಮುದಾಯವು ತಮ್ಮ ಗೌರವ ವಂದನೆಗಳನ್ನು ಸಲ್ಲಿಸಿತು. ಶ್ರೀ ಅನೂಪ್ ಕುಮಾರ್ ಕಾರ್ಯಪಾಲಕ ನಿರ್ದೇಶಕರು, ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಮಾನವ ಸಂಪನ್ಮೂಲ), ಶ್ರೀ ಪ್ರಮೋದ್ ಕುಮಾರ್ ಸಿಂಗ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಅಮೃತ್ ಕುಮಾರ್, ಅಧ್ಯಕ್ಷರು, ವಿಐಎಸ್‌ಎಲ್ ಕಾರ್ಮಿಕರ ಸಂಘ, ಶ್ರೀ ಅಜಯ್ ಡಿ. ಸೋಂಕುವಾರ್, ಅಧ್ಯಕ್ಷರು, ವಿಐಎಸ್‌ಎಲ್ ಅಧಿಕಾರಿಗಳ ಸಂಘ ಇವರುಗಳು ವಿಐಎಸ್‌ಪಿ ಆವರಣದೊಳಗಿರುವ ಸರ್. ಎಮ್. ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಇಂಜಿನೀಯರಿಂಗ್ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ ಹಾಗೂ ತಲೆಮಾರುಗಳಿಗೆ ಸ್ಫೂರ್ತಿಯ ಸೆಲೆಯಾಗಿರುವ ಈ ಮಹಾನ್ ವ್ಯಕ್ತಿತ್ವಕ್ಕೆ ತಮ್ಮ ಗೌರವ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶಿಕ್ಷಕ ವೃತ್ತಿ ಪವಿತ್ರವಾದದ್ದು; ಭಕ್ತಿಯ ಜೊತೆಗೆ ಸಮಾಜ ಸೇವೆಯೂ ಮುಖ್ಯ: ರಮೇಶ್ ಭಟ್

0

ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಹಾಗೂ ಸಂಸ್ಕಾರ ಬೆಳೆಸಿಕೊಳ್ಳಲು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರ ವೃತ್ತಿ ಪವಿತ್ರವಾದದ್ದು. ಶಿಕ್ಷಕರು ತಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಗೂ ಆದ್ಯತೆ ನೀಡಬೇಕು ಎಂದು ಸಹ್ಯಾದ್ರಿ ಚಿಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಭಟ್ ಅಭಿಪ್ರಾಯಪಟ್ಟರು.

ನಗರದ ಸಹ್ಯಾದ್ರಿ ಚಿಟ್ಸ್ ಕಚೇರಿಯಲ್ಲಿ ಸಾಧಕ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡಿದ ಅವರು, ಉತ್ತಮ ಸಂಸ್ಕಾರ ಹೊಂದಿದ ವ್ಯಕ್ತಿಯನ್ನು ರೂಪಿಸುವಲ್ಲಿ, ಕೌಶಲ್ಯ ಬೆಳೆಸುವಲ್ಲಿ ಹಾಗೂ ಜೀವನದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುವಲ್ಲಿ ಗುರುವಿನ ಪಾತ್ರ ಬಹಳ ಮುಖ್ಯ. ಕೇವಲ ಪಾಠ ಹೇಳಿಕೊಟ್ಟ ಮಾತ್ರಕ್ಕೆ ಗುರುವಾಗುವುದಿಲ್ಲ. ಗುರುಗಳ ನಡತೆ, ವ್ಯಕ್ತಿತ್ವ ಹಾಗೂ ವಿದ್ಯಾರ್ಥಿಗಳೊಂದಿಗಿನ ಒಡನಾಟವೂ ಅಷ್ಟೇ ಮಹತ್ವದ್ದಾಗಿದೆ ಎಂದು ಸಹ್ಯಾದ್ರಿ ಚಿಟ್ಸ್‌ನ ನಿರ್ದೇಶಕ ಶಿವರಾಜ್ ಹೇಳಿದರು.

ಸಂಸ್ಥೆಯ ಮತ್ತೊಬ್ಬ ನಿರ್ದೇಶಕ ಜಿ. ವಿಜಯಕುಮಾರ್ ಮಾತನಾಡಿ, ಉತ್ತಮ ಗುರುಗಳನ್ನು ಗೌರವಿಸುವುದು ಸಮಾಜವನ್ನು ಗೌರವಿಸಿದಂತೆ. ಮನುಷ್ಯ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಗುರುವಿನ ಮಾರ್ಗದರ್ಶನ ಅತ್ಯಂತ ಪ್ರಮುಖವಾಗಿದೆ. ನಮಗೆ ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಗುರುಹಿರಿಯರನ್ನು ಗೌರವಿಸುವ ಸಮಾಜವು ಸಂಸ್ಕಾರಯುತವಾಗಿ, ಸದೃಢವಾಗಿ ಬೆಳೆಯುತ್ತದೆ. ನಮ್ಮ ಸಂಸ್ಥೆಯ ವತಿಯಿಂದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಾಲ್ವರು ಸಾಧಕ ಶಿಕ್ಷಕರಾದ ಮಾನಸ, ಶಿಲ್ಪಾಶ್ರೀ, ಕೆಂಡಪ್ಪ ಹಾಗೂ ರವಿಕುಮಾರ್ ಎಸ್.ಆರ್. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಚಿಟ್ಸ್‌ನ ನಿರ್ದೇಶಕರಾದ ಅನುಪ್, ಯು. ರವೀಂದ್ರನಾಥ್ ಐತಾಳ್ ಸೇರಿದಂತೆ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಬೌದ್ಧಿಕ ಸಾಮರ್ಥ್ಯ ವೃದ್ಧಿಸುತ್ತದೆ: ಬಿ.ಗೋಪಿನಾಥ್

0

ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರಿಂದ ಬೌದ್ಧಿಕ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಸರ್ ಎಂ.ವಿಶ್ವೇಶ್ವರಯ್ಯ ದಿನಾಚರಣೇ ಪ್ರಯುಕ್ತ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ರಸಪ್ರಶ್ನೆ ಹಾಗೂ ಭಾಷಣ ಕಲೆ ಸ್ಪರ್ಧೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಸಪ್ರಶ್ನೆ ಹಾಗೂ ಭಾಷಣದ ಕಲೆ ವಿದ್ಯಾರ್ಥಿಗಳ ಭೌತಿಕ ಸಾಮರ್ಥ್ಯ ಹೆಚ್ಚಿಸುತ್ತವೆ. ವಿದ್ಯಾಭ್ಯಾಸದ ಜೊತೆಗೆ ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿವೆ. ಇದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಡಿವಿಎಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಭಾಸ್ಕರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪುಸ್ತಕ ಜ್ಞಾನದ ಜೊತೆಗೆ ಮಸ್ತಕದ ಜ್ಞಾನವೂ ಬೇಕು. ಈ ರೀತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಾಗ ಅಪಾರವಾದ ಜ್ಞಾನ ವೃದ್ಧಿಯಾಗುತ್ತದೆ. ಮುಂಬರುವ ಪರೀಕ್ಷೆಗಳಿಗೆ ಸಹಕಾರಿಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ನಗರದ 40 ಪ್ರೌಢಶಾಲೆಗಳಿಂದ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಅಂತಿಮವಾಗಿ ಎಂಟು ಜನ ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ್, ನಿರ್ದೇಶಕ ಗಣೇಶ್ ಎಂ.ಅಂಗಡಿ, ಡಿವಿಎಸ್ ಪ್ರಾಧ್ಯಾಪಕ ರಾಜೇಶ್, ಸರ್ ಎಂ ವಿ

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

0

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ ಸೇವೆಗೆ ಒಂದಲ್ಲ ಒಂದು ದಿನ ಹತ್ತು ಪಟ್ಟು ಫಲ ದೊರೆಯುತ್ತದೆ. ಆಶ್ರಮವಾಸಿಗಳಿಗೆ ಸೇವೆ ಮಾಡುವುದರಿಂದ ದೇವರ ಸೇವೆ ಮಾಡಿದಷ್ಟು ಆತ್ಮತೃಪ್ತಿ ದೊರೆಯುತ್ತದೆ ಎಂದು ಸಮಾಜ ಸೇವಕಿ ಹೇಮಾ ಗೋಣೂರು ಹೇಳಿದರು.

ಶಿವಮೊಗ್ಗ ನಗರದ ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಅಗತ್ಯ ಸಾಮಗ್ರಿಗಳೊಂದಿಗೆ ರೂ.50 ಸಾವಿರ ದೇಣಿಗೆ ನೀಡಿ ಅವರು ಮಾತನಾಡಿದರು.

ನಾವು ನೀಡುವ ದೇಣಿಗೆ ಸಾರ್ಥಕವಾಗಬೇಕು. ಅಗತ್ಯವಿರುವವರಿಗೆ ನೆರವು ನೀಡುವ ಮೂಲಕ ಸಮಾಜಕ್ಕೆ ನಮ್ಮ ಕೈಲಾದ ಕೊಡುಗೆ ನೀಡಬೇಕು ಎಂದು ಹೇಮಾ ಗೋಣೂರು ಹೇಳಿದರು.

ಗುಡ್ ಲಕ್ ಆರೈಕೆ ಕೇಂದ್ರದ ಕಾರ್ಯದರ್ಶಿ ಪಂಚಾಕ್ಷರಯ್ಯ ಹಿರೇಮಠ ಮಾತನಾಡಿ, ಹೇಮಾ ಗೋಣೂರು ಅವರು ಪ್ರತಿವರ್ಷ ಇದೇ ರೀತಿಯಲ್ಲಿ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಾ ನಮ್ಮ ಆಶ್ರಮಕ್ಕೆ ನೆರವು ನೀಡುತ್ತಿದ್ದಾರೆ. ಇಂತಹ ದಾನಿಗಳ ಸಹಕಾರದಿಂದ ಆಶ್ರಮವು ಯಾವುದೇ ಕೊರತೆಯಿಲ್ಲದೆ ನಡೆಯಲು ಸಾಧ್ಯವಾಗಿದೆ. ಅವರಿಗೆ ದೇವರು ಆಯಸ್ಸು, ಆರೋಗ್ಯ ಹಾಗೂ ಇನ್ನಷ್ಟು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಶಕ್ತಿಯನ್ನು ನೀಡಲಿ ಎಂದು ಹಾರೈಸಿದರು.

ಆಶ್ರಮದ ಉಪಾಧ್ಯಕ್ಷ ಶಿವಪ್ಪಗೌಡ ಅವರು ದಾನಿಗಳನ್ನು ಅಭಿನಂದಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಆಶ್ರಮವಾಸಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ: ಡಿ.ಎಸ್. ಅರುಣ್

0

ಹಬ್ಬಗಳು ನಮ್ಮ ಸಂಸ್ಕೃತಿಯನ್ನು ಬೆಳೆಸಿ, ಉಳಿಸುವುದರ ಜೊತೆಗೆ ಪರಸ್ಪರ ಬಾಂಧವ್ಯವನ್ನು ವೃದ್ಧಿಸುತ್ತವೆ. ಅಲ್ಲದೆ, ಜೀವನದಲ್ಲಿ ಹೊಸ ಉತ್ಸಾಹ ಮತ್ತು ಸಂತಸವನ್ನು ಮೂಡಿಸುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅಭಿಪ್ರಾಯಪಟ್ಟರು.

ಅವರು ತಮ್ಮ ನಿವಾಸದಲ್ಲಿ ಸಂಪ್ರದಾಯಬದ್ಧವಾಗಿ ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮಾತನಾಡಿದ ಅವರು, ಗೌರಿ-ಗಣೇಶ ಹಬ್ಬಗಳು ಒಟ್ಟಿಗೆ ಬಂದಿರುವುದು ಎಲ್ಲರಿಗೂ ಸಂತಸ ತಂದಿದೆ. ಹಿಂದೂಗಳ ಪಾಲಿಗೆ ಅತ್ಯಂತ ವಿಶೇಷವಾದ ಗಣೇಶ ಹಬ್ಬವನ್ನು ಇಂದು ದೇಶಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಇತರರ ಭಾವನೆಗಳಿಗೆ ಧಕ್ಕೆ ಉಂಟಾಗದಂತೆ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಹಬ್ಬಗಳ ಆಚರಣೆಯಿಂದ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷ ದೊರೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ಪ್ರತಿಭಾ ಅರುಣ್ ಮಾತನಾಡಿ, ಪ್ರತಿ ವರ್ಷ ನೈಸರ್ಗಿಕವಾಗಿ ತಯಾರಿಸಲಾದ ಪರಿಸರ ಸ್ನೇಹಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬವನ್ನು ಆಚರಿಸುತ್ತಿದ್ದೇವೆ. ಇದೇ ರೀತಿ ಎಲ್ಲರೂ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಪರಿಸರ ಮಾಲಿನ್ಯವನ್ನು ತಡೆಯಲು ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅಂಬೆಗಾಲು ತಂಡದ ಸದಸ್ಯರು, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್, ಖಜಾಂಚಿ ಆರ್. ಮನೋಹರ್, ಡಿ.ಎಸ್. ಅರುಣ್ ಅವರ ಕುಟುಂಬ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.