Adichunchanagiri Education Trust 2026-27 ನೇ ಸಾಲಿನ 14 ವರ್ಷ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆ ಆಯ್ಕೆಯ ಪ್ರಕ್ರಿಯೆಯನ್ನು ದಿನಾಂಕ:13-09-2026 ರಂದು ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಶಿವಮೊಗ್ಗ,ಹಾಗೂ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಗುರುಪುರದ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಸ್ಪರ್ಧೆಯನ್ನು ನಡೆಸಲು ತೀರ್ಮಾನಿಸಲಾಗಿದ್ದು ,ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸರ್ಕಾರಿ, ಅನುದಾನ ಮತ್ತು ಅನುದಾನ ರಹಿತ ಪ್ರಾಥಮಿಕ ಶಾಲೆಗಳ ಬಾಲಕ ಮತ್ತು ಬಾಲಕಿಯರು ಅಂದು ಗುರುಪುರದ ಬಿಜಿಎಸ್ ಕ್ರೀಡಾಂಗಣ ದಲ್ಲಿ ಬೆಳಗ್ಗೆ 9 ಗಂಟೆ ಯೊಳಗಾಗಿ ಇಲಾಖೆಯ ನಿಯಮಾನುಸಾರ ಅಗತ್ಯ ದಾಖಲೆಗಳೊಂದಿಗೆ ಶಾಲಾ ಶಿಕ್ಷಣ Adichunchanagiri Education Trust ಇಲಾಖೆಯ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿ ಗಾಗಿ ,ಶ್ರೀ ರಮೇಶ್ ಬಾಬು -ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳು, 9113547166, ಮತ್ತು ರಾಮಚಂದ್ರಪ್ಪ ಹೆಚ್ ತಿಮ್ಮೇನಹಳ್ಳಿ, ಬಿಜಿಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಗುರುಪುರ,ಶಿವಮೊಗ್ಗ ದೈಹಿಕ ಶಿಕ್ಷಣ ಶಿಕ್ಷಕರು 9880839575 ಇವರನ್ನು ಸಂಪರ್ಕಿಸಬಹುದು.
B.Y.Raghavendra ಸ್ಥಳೀಯರ ಆಹವಾಲು ಕೇಳದೇ , ವಾಸ್ತವ ಸ್ಥಿತಿ ಅರಿಯದೇ ಕಸ್ತೂರಿ ರಂಗನ್ ವರದಿ ನೀಡಲಾಗಿದೆ- ಬಿ.ವೈ.ರಾಘವೇಂದ್ರ
B.Y.Raghavendra ಕಸ್ತೂರಿ ರಂಗನ್ ಸಮಿತಿಯ ಶಿಫಾರಸ್ಸುಗಳಲ್ಲಿ ಕೆಲವು ಮಾರ್ಪಾಡುಗೊಳಿಸಿ, ಅರಣ್ಯ ಭೂಮಿಯೆಂದು ಗುರುತಿಸಲಾಗಿರುವ ಭೂಮಿಯನ್ನು ಹೊರತುಪಡಿಸಿ, ಉಳಿದಂತೆ ಜನವಸತಿ ಪ್ರದೇಶ, ರೈತರು ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಭೂಮಿ, ವನವಾಸಿಗಳು ವಾಸಿಸುವ ಪ್ರದೇಶಗಳನ್ನು ಕೈಬಿಟ್ಟು ನಿರ್ಣಯ ಕೈಗೊಳ್ಳುವಂತೆ ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಕಸ್ತೂರಿ ರಂಗನ್ ಸಮಿತಿಯ ವರದಿಯು ಸ್ಥಳೀಯ ಜನರ ಅಹವಾಲುಗಳನ್ನು ಆಲಿಸದೆ, ಸ್ಥಳೀಯವಾಗಿರುವ ವಾಸ್ತವ ಸ್ಥಿತಿಗತಿಗಳನ್ನು ಅರಿಯದೇ ಮಾಡಿದ ವರದಿ ಇದಾಗಿದೆ ಎಂದವರು ನುಡಿದರು.
ಪ್ರಸಕ್ತ ಸಾಲಿನಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಪ್ರಮಾಣದ ಮಳೆ ಆಗಿರುವುದು, ಕೆರೆ-ಕಟ್ಟೆ ಕಾಲುವೆಗಳಲ್ಲಿ ನೀರಿಲ್ಲದೆ ಬರಿದಾಗಿರುವುದರಿಂದ ಜನಜಾನುವಾರುಗಳ ರಕ್ಷಣೆ, ಕುಡಿಯುವ ನೀರು, ಜಾನುವಾರುಗಳ ಮೇವು, ಅಲ್ಲದೇ ಬಹುಮುಖ್ಯವಾಗಿ ಜಿಲ್ಲೆಯ ಜನರ ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೆ ಅನೇಕ ಸಮಸ್ಯೆ ಸವಾಲುಗಳನ್ನು ಎದುರಿಸಬೇಕಾಗಬಹುದು.
ಆದ್ದರಿಂದ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಂಭಾವ್ಯ ಸಮಸ್ಯೆ-ಸವಾಲುಗಳನ್ನು ಎದುರಿಸಲು ಸನ್ನದ್ಧರಾಗಿರುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ ಅನೇಕ ಏತ ನೀರಾವರಿ ಯೋಜನೆಗಳು ಅನುಷ್ಠಾನದಲ್ಲಿದ್ದು, ಇದರಿಂದಾಗಿ ಏತ ನೀರಾವರಿ ಪ್ರದೇಶದ ವ್ಯಾಪ್ತಿಗೊಳಪಡುವ ಗ್ರಾಮಗಳ ಕೆರೆಗಳನ್ನು ತ್ವರಿತವಾಗಿ ಭರ್ತಿಗೊಳಿಸುವಂತೆ ಹಾಗೂ ನೀರನ್ನು ಎತ್ತಿ ಸಾಗಿಸಲು ವಿದ್ಯುತ್ ಕೊರತೆ ಎದುರಾಗದಂತೆ ಗಮನಹರಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದ ಅವರು ಮೆಸ್ಕಾಂನ ಅಭಿಯಂತರರು ಏತ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯಗಳಾಗದಂತೆ ಕ್ರಮವಹಿಸಲು ಸೂಚನೆ ನೀಡಿದರು. ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಸಹಸ್ರಾರು ಎಕರೆ ಭೂಪ್ರದೇಶದಲ್ಲಿ ಬೆಳೆ ಕಾಣದಾಗಿದೆ. ಇದರಿಂದಾಗಿ ರೈತರ ಜೀವನ ನಿರ್ವಹಣೆ ದುಸ್ತರವಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಆದ್ದರಿಂದ ಸರ್ಕಾರವು ಭದ್ರಾವತಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಆಯ್ಕೆ ಮಾಡಿಕೊಂಡಿರುವ ಮಾದರಿಯಲ್ಲಿಯೇ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಪರಿಗಣಿಸುವಂತೆ ಅವರು ಮನವಿ ಮಾಡಿದ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಮಳೆ ಮಾಪನ ಕೇಂದ್ರಗಳ ಅಸಮರ್ಪಕ ಅಳತೆಯಿಂದಾಗಿ ಮಳೆಯ ವಾಸ್ತವಿಕ ವರದಿ ದಾಖಲಾಗದಿರುವುದರಿಂದ ರೈತರಿಗೆ ನೀಡಲಾಗುವ ಬೆಳೆವಿಮೆ ಪರಿಹಾರ ಸಮರ್ಪಕವಾಗಿ ನೀಡುವಲ್ಲಿ ವ್ಯತ್ಯಯಗಳಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ನ್ಯೂನತೆಗಳಾಗದಂತೆ ಹಾಗೂ ವಿಮಾ ಇಲಾಖೆಗೆ ನೀಡಲಾಗುವ ಮಾಹಿತಿಯಲ್ಲಿ ಸರಿಯಾದ ಮಾಹಿತಿಯನ್ನು ದಾಖಲಿಸಿ, ಸೂಕ್ತ ಪರಿಹಾರ ಮೊತ್ತ ಕೊಡಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಗೆ ಹೊಸದಾಗಿ ಏಳು ರೈಲ್ವೇ ಕ್ರಾಸಿಂಗ್‌ಗಳು ಮಂಜೂರಾಗಿದ್ದು, ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಪರಸ್ಪರ ಸಮನ್ವಯತೆ ಸಾಧಿಸಿಕೊಂಡು ಸಕಾಲದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದ ಅವರು, ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋ ಕಾಮಗಾರಿಯನ್ನು ನವೆಂಬರ್ ಮಾಸಾಂತ್ಯದೊಳಗಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು ಎಂದವರು ನುಡಿದರು.
B.Y.Raghavendra ಶಿರಾಳಕೊಪ್ಪ-ಸೊರಬ ರಸ್ತೆಯಲ್ಲಿ ಹೊಂಡ ಗುಂಡಿಗಳು ಬಿದ್ದು, ಸಾರ್ವಜನಿಕರಿಗೆ ಸುಗಮ ಸಂಚಾರ ಕಷ್ಟಸಾಧ್ಯವಾಗಿದೆ. ಜಿಲ್ಲೆಯಲ್ಲಿ ಜಲಜೀವನ ಮಿಷನ್ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ನಿರೀಕ್ಷಿತ ಪ್ರಗತಿ ಸಾಧಿಸದಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಸಂಬಂಧಿಸಿದ ಇಲಾಖಾ ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಸಿ, ಕೂಡಲೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಪಶ್ಚಿಮ ಘಟ್ಟದ ಕೆಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಪ್ರಕ್ರಿಯೆ ಹಲವು ವರ್ಷಗಳಿಂದ ನಡೆಯುತ್ತಿದೆ. ಸರ್ಕಾರದ ಹೊರಡಿಸಿದ ಕರಡು ಅಧಿಸೂಚನೆಯಲ್ಲಿ ರಾಜ್ಯದ ಒಟ್ಟು 20,668 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ತರಲು ಪ್ರಸ್ತಾಪಿಸಲಾಗಿದ್ದು, ಜಿಲ್ಲೆಯ ಹೊಸನಗರ, ಸಾಗರ, ಶಿಕಾರಿಪುರ, ಶಿವಮೊಗ್ಗ ಗ್ರಾಮಾಂತರ ಮತ್ತು ತೀರ್ಥಹಳ್ಳಿ ತಾಲೂಕಿನ 447 ಗ್ರಾಮಗಳು ವರದಿಯಲ್ಲಿವೆ.
ಶಿವಮೊಗ್ಗ ಜಿಲ್ಲೆಯ ದೊಡ್ಡ ಪ್ರಮಾಣದ ಮಲೆನಾಡು ಪ್ರದೇಶ ಈ ಚರ್ಚೆಯ ಕೇಂದ್ರದಲ್ಲಿದೆ. ಮಲೆನಾಡಿನಲ್ಲಿ ಬಹುತೇಕ ಕುಟುಂಬಗಳ ಆರ್ಥಿಕ ಜೀವನ ಅಡಿಕೆ, ಕಾಫಿ, ಮೆಣಸು, ತೆಂಗು, ಭತ್ತ ಮುಂತಾದ ಕೃಷಿ ಮತ್ತು ತೋಟಗಾರಿಕೆ ಮೇಲೆ ಅವಲಂಬಿತವಾಗಿದೆ. ಪರಿಸರ ಸೂಕ್ಷ್ಮ ಪ್ರದೇಶದ ನಿಯಮಗಳು ಅನುಷ್ಟಾನಕ್ಕೆ ಬಂದಲ್ಲಿ ಹಲವು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬಂದ ಜಮೀನು, ಮನೆ-ಮಠ ಕಟ್ಟಿಕೊಂಡವರು ಬದುಕು ಸಾಗಿಸುವುದು ಹೇಗೆ ಎಂಬ ಆತಂಕ ರೈತರಲ್ಲಿದೆ.
ಮಲೆನಾಡಿನ ಗ್ರಾಮಗಳಲ್ಲಿ ಕುಟುಂಬಗಳು ತಮ್ಮದೇ ಜಮೀನಿನಲ್ಲಿ ಮನೆ ಕಟ್ಟುವುದು ಸಾಮಾನ್ಯ. ದೊಡ್ಡ ಕಟ್ಟಡ ಮತ್ತು ಟೌನ್‌ಶಿಪ್ ಯೋಜನೆಗಳಿಗೆ ಕರಡು ಅಧಿಸೂಚನೆಯಲ್ಲಿ ನಿರ್ಬಂಧಗಳಿವೆ. ಇದೂ ಕೂಡ ಜನರಲ್ಲಿನ ಆತಂಕಕ್ಕೆ ಕಾರಣವಾಗಿದೆ. ಮಲೆನಾಡಿನ ಅನೇಕ ಗ್ರಾಮಗಳಿಗೆ ಇನ್ನೂ ಉತ್ತಮ ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್, ಶಾಲೆ ಮತ್ತು ಆರೋಗ್ಯ ಮೂಲಸೌಕರ್ಯ ಅಗತ್ಯವಿದೆ. ನಿಯಮಗಳೇನಾದರೂ ಕಟ್ಟುನಿಟ್ಟಾದರೆ ಹೊಸ ರಸ್ತೆ, ದೊಡ್ಡ ನಿರ್ಮಾಣ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಪರಿಸರ ಅನುಮತಿಗಳು ಬೇಕಾಗಬಹುದು ಎಂಬ ಮತ್ತೊಂದು ಆತಂಕವೂ ಇದೆ.
ಜಮೀನಿನ ಬಳಕೆ ಮತ್ತು ನಿರ್ಮಾಣದ ಮೇಲೆ ನಿರ್ಬಂಧ ಹೆಚ್ಚಾದರೆ ಭೂಮಿಯ ಅಭಿವೃದ್ಧಿ ಸಾಮರ್ಥ್ಯ ಮತ್ತು ಭವಿಷ್ಯದ ವಾಣಿಜ್ಯ ಬಳಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲಿಯೇ ರೈತರು ಜನವಸತಿ ಮತ್ತು ಕೃಷಿ ಪ್ರದೇಶಗಳನ್ನು ಸೂಕ್ಷ್ಮ ವಲಯದಿಂದ ಹೊರಗಿಡಬೇಕು. ಇಂತಹ ಅನೇಕ ಕಾರಣಗಳಿಂದಾಗಿ ಸ್ಥಳೀಯರು, ರೈತ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ಜನವಸತಿ ಪ್ರದೇಶಗಳನ್ನು ಹೊರತುಪಡಿಸಿ ವೈಜ್ಞಾನಿಕವಾಗಿ ಮರುಸರ್ವೆ ಮಾಡಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಸಂಸದರಾದ ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ. ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳನ್ನು ಅನುಷ್ಟಾನಕ್ಕೆ ತರವು ಮುನ್ನ ಕೆಲವು ಮಾರ್ಪಾಡುಗಳನ್ನು ಅಗತ್ಯವಾಗಿ ಮಾಡಿಕೊಳ್ಳಲೇಬೇಕಾದ ಅಗತ್ಯವಿದೆ. ಇಲ್ಲಿ ಜನರು, ಅರಣ್ಯದಲ್ಲಿನ ವನವಾಸಿಗಳು ಹಲವು ದಶಕಗಳಿಂದ ಬದುಕು ಕಟ್ಟಿಕೊಂಡಿರುವುದನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1932ಕ್ಕೂ ಮುಂಚೆ ಭೂಸ್ವಾದೀನ ಪಡೆದುಕೊಂಡ ಜಮೀನನ್ನು ಕೂಡ ಅರಣ್ಯ ಭೂಮಿ ವ್ಯಾಪ್ತಿಗೆ ಸೇರಿಸಿ ವರದಿ ನೀಡಿರುವುದು ಸರಿಯಲ್ಲ.
ಮಲೆನಾಡಿನ ಜನವಸತಿ ಪ್ರದೇಶಗಳನ್ನು ESA ವ್ಯಾಪ್ತಿಯಿಂದ ಹೊರಗಿಡಬೇಕು. ಸಾಂಪ್ರದಾಯಿಕ ಕೃಷಿ ಮತ್ತು ತೋಟಗಾರಿಕೆಗೆ ಸಂಪೂರ್ಣ ರಕ್ಷಣೆ ನೀಡಬೇಕು. ರೈತರ ಸಾಮಾನ್ಯ ಮನೆ ನಿರ್ಮಾಣಕ್ಕೆ ಅನಗತ್ಯ ನಿರ್ಬಂಧ ಇರಬಾರದು. ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್ ಮುಂತಾದ ಮೂಲಸೌಕರ್ಯ ಯೋಜನೆಗಳಿಗೆ ವಿಶೇಷ ವಿನಾಯಿತಿ ಇರಬೇಕು. ಗ್ರಾಮವಾರು ಮಾತ್ರವಲ್ಲದೆ ಭೂಮಿಯ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಿ ಸ್ಥಳೀಯ ಮಟ್ಟದಲ್ಲಿ ವೈಜ್ಞಾನಿಕ ಮರುಸರ್ವೆ ನಡೆಸಬೇಕು. ಕಾಡು ಪ್ರದೇಶ, ನದಿ ಮೂಲ ಮತ್ತು ಅತ್ಯಂತ ಸೂಕ್ಷ್ಮ ಪರಿಸರ ಪ್ರದೇಶಗಳನ್ನು ಮಾತ್ರ ಕಟ್ಟುನಿಟ್ಟಾಗಿ ರಕ್ಷಿಸಬೇಕು.
ಸ್ಥಳೀಯ ಗ್ರಾಮಸ್ಥರು, ರೈತರು, ಜನಪ್ರತಿನಿಧಿಗಳು ಮತ್ತು ತಜ್ಞರನ್ನು ಒಳಗೊಂಡ ಸಾರ್ವಜನಿಕ ಸಮಾಲೋಚನೆ ನಡೆಸಬೇಕು. – ಆರಗ ಜ್ಞಾನೇಂದ್ರ, ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್. ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಸೇರಿದಂತೆ ಜಿಲ್ಲಾ ಮಟ್ಟದ ಅಭಿವೃದ್ಧಿ, ಸಮನ್ವಯತೆ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯ ನಾಮನಿರ್ದೇಶಿತ ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಸೇವೆ ಇಲಾಖೆ ಮೂಲಕ ಜನರ ಕುಂದುಕೊರತೆಗಳಿಗೆ ತ್ವರಿತ ಪರಿಹಾರ- ಹರ್ಷ ಗುಪ್ತಾ
ಪ್ರಜಾಸೇವೆ ಇಲಾಖೆ ಮೂಲಕ ರಾಜ್ಯದಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಮತ್ತು ಆಡಳಿತದಲ್ಲಿ ಸುಧಾರಣೆ ತರಲು ಸರ್ಕಾರ ಮುಂದಾಗಿದೆ ಎಂದು ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಹರ್ಷ ಗುಪ್ತಾ ಅವರು ತಿಳಿಸಿದರು.
ಅವರು ವಿಕಾಸಸೌಧದಲ್ಲಿ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮ ಮತ್ತು ಪ್ರಜಾಸೇವಾ ಇಲಾಖೆಯ ರಚನೆ, ಸ್ವರೂಪ ಹಾಗೂ ಕಾರ್ಯವೖಖರಿ ಕುರಿತಂತೆ ಮಾಹಿತಿ ನೀಡುವ ಸಲುವಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿದರು.
ಇದೇ ಸೆಪ್ಟೆಂಬರ್ 5 ರಂದು ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ನಡೆದ ಪ್ರಜಾ ಸೇವಾ ಅಭಿಯಾನದಲ್ಲಿ 26,387 ಕಂದುಕೊರತೆಯು ನೋಂದಣೆಯಾಗಿದ್ದು, ಅದರಲ್ಲಿ 13, 872 ಕುಂದುಕೊರತೆಗಳಿಗೆ ಪರಿಹಾರವನ್ನು ಒದಗಿಸಲಾಗಿದೆ. ಉಳಿದ 12,514 ಕುಂದುಕೊರತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಕಂದಾಯ ಇಲಾಖೆಯಿಂದ ಅತಿ ಹೆಚ್ಚು ಕುಂದುಕೊರತೆ ಬಂದಿದ್ದು, ಅವುಗಳಲ್ಲಿ ಹೆಚ್ಚು ವೃದ್ಧಾಪ್ಯವೇತನಗಳಿಗೆ ಸಂಬಂಧಿಸಿದವಾಗಿದೆ. ಇತ್ತೀಚಿಗೆ ಪಿಂಚಣಿಯಲ್ಲಿ ಅನರ್ಹರನ್ನು ಪರಿಷ್ಕರಣೆ ಮಾಡಲಾಗುತ್ತಿರುವುದರಿಂದ ಈ ವಿಚಾರದಲ್ಲಿ ಹೆಚ್ಚಿನ ಮನವಿ ಬಂದಿವೆ. ಹಾಗೆಯೇ ಪಡಿತರ ಚೀಟಿಗೆ ಸದಸ್ಯರನ್ನು ಸೇರಿಸುವ ವಿಚಾರದಲ್ಲೂ ಹೆಚ್ಚಿನ ಮನವಿಗಳು ಬಂದಿವೆ ಎಂದರು.
ಸರ್ಕಾರದ ಆದೇಶದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (DPAR) ಇಲಾಖೆಯ ಆಡಳಿತ ಸುಧಾರಣೆ ವಿಭಾಗ, ಸಕಾಲ ಮಿಷನ್, ಮತ್ತು ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ವಿಭಾಗಗಳನ್ನು ಈ ನೂತನ ‘ಪ್ರಜಾಸೇವೆ’ ಇಲಾಖೆಯಲ್ಲಿ ವಿಲೀನಗೊಳಿಸಲಾಗಿದೆ.
‘ಇ-ಆಫೀಸ್’ ಮತ್ತು ನ್ಯಾಯಾಲಯದ ಪ್ರಕರಣಗಳ ಉಸ್ತುವಾರಿಗಾಗಿ ಇರುವ ‘ಸಿಸಿಎಂಎಸ್’ (CCMS) ವ್ಯವಸ್ಥೆಯನ್ನು ಈ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೆ ಸೇವಾ ಸಿಂಧು ಪೋರ್ಟಲ್ ನಲ್ಲಿ 898 ಸೇವೆಗಳಿವೆ. ಇದಲ್ಲದೆ ವಿವಿಧ ಇಲಾಖೆಗಳಿಂದ ಇನ್ನು ಸುಮಾರು 2456 ಸೇವೆಗಳನ್ನು ಗುರುತಿಸಲಾಗಿದೆ. ಅದರಲ್ಲಿ 2300 ಸೇವೆಗಳು ಈಗಾಗಲೇ ಆನ್ಲೈನ್ ಇದ್ದು, ಉಳಿದ 156 ಸೇವೆಗಳನ್ನು ಆನ್ಲೈನ್ ಮಾಡಲಾಗುವುದು, ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರದ ಈ ಎಲ್ಲಾ ಸೇವೆಗಳನ್ನು ‘ಸಕಾಲ’ ಯೋಜನೆಯಡಿ ತರುವ ಗುರಿ ಹೊಂದಲಾಗಿದೆ ಎಂದರು.
ಸಾರ್ವಜನಿಕರು ಸಲ್ಲಿಸುವ ಕುಂದುಕೊರತೆ ಅರ್ಜಿಗಳನ್ನು ತ್ವರಿತವಾಗಿ ವರ್ಗೀಕರಣ ಮಾಡಲು ಹಾಗೂ ಪಿಡಿಎಫ್ ದಾಖಲೆಗಳನ್ನು ಓದಿ, ಸರಿಯಾದ ವಿಭಾಗಕ್ಕೆ ವರ್ಗಾಯಿಸಲು ‘ಎಐ’ ಸಾಫ್ಟ್‌ವೇರ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಈ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಇನ್ನು ಸ್ವಲ್ಪ ದಿನಗಳ ಕಾಲಾವಕಾಶ ಬೇಕಾಗುತ್ತದೆ.
ಪ್ರತಿ ಶನಿವಾರ ಜನಸ್ಪಂದನಾ ಸಭೆಗಳನ್ನು ನಡೆಸುವುದು ಕಡ್ಡಾಯವಾಗಿದ್ದು, 1ನೇ ಮತ್ತು 3ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ 2ನೇ ಮತ್ತು 4ನೇ ಶನಿವಾರ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದಲ್ಲಿ ಸಭೆಗಳು ನಡೆಯಲಿವೆ.
ಸಾರ್ವಜನಿಕರಿಂದ ಸ್ವೀಕರಿಸುವ ಪ್ರತಿಯೊಂದು ಅರ್ಜಿಯನ್ನು ಆನ್‌ಲೈನ್ ಸಿಸ್ಟಮ್‌ನಲ್ಲಿ ಕಡ್ಡಾಯವಾಗಿ ನಮೂದಿಸಿ, ಸ್ವೀಕೃತಿ ನೀಡಲಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿನ ಜನಸ್ಪಂದನಾ ಸಭೆಯಲ್ಲಿ ಸ್ವೀಕರಿಸಲಾಗಿರುವ ಎಲ್ಲಾ ಅರ್ಜಿಗಳು ಮತ್ತು ದೂರುಗಳನ್ನು ಪ್ರತಿ ಬುಧವಾರ ಬೆಳಿಗ್ಗೆ 9 ರಿಂದ 11 ಗಂಟೆಗೆ ತಹಸೀಲ್ದಾರ್ ಮತ್ತು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಂದ, ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಹಾಯಕ ಆಯುಕ್ತರಿಂದ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಜಿಲ್ಲಾಧಿಕಾರಿಗಳಿಂದ ನಡೆಯುವ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರು ತಮ್ಮ ದೂರಿನ ಇತ್ಯರ್ಥವನ್ನು ಪರಿಶೀಲಿಸಬಹುದು. ಈ ಮೂರು ಹಂತದ ಪರಿಶೀಲನಾ ಸಭೆಯಲ್ಲಿಯೂ ತಮ್ಮ ದೂರಿಗೆ ದೊರೆತ ಇತ್ಯರ್ಥದಿಂದ ತೃಪ್ತರಾಗದವರು ಖುದ್ದು ಹಾಜರಾಗಿ ತಮ್ಮ ಅಹವಾಲನ್ನು ಮಂಡಿಸಬಹುದು. ಆಗ ಇಲಾಖಾ ಅಧಿಕಾರಿಯ ಸಮ್ಮುಖದಲ್ಲಿಯೇ ಅವರ ದೂರನ್ನು ಇತ್ಯರ್ಥಗೊಳಿಸಲಾಗುವುದೆಂದು ತಿಳಿಸಿದರು.
ದೂರುಗಳ ಪರಿಶೀಲನೆಗೆ ಅನುಕೂಲವಾಗಲು ಪ್ರತ್ಯೇಕ
ಎರಡು ಸರತಿ (ಕ್ಯೂ) ಸಾಲನ್ನು ವ್ಯವಸ್ಥೆಯನ್ನು ಮಾಡಲಾಗಿದ್ದು, ಮೊದಲ ಬಾರಿಗೆ ದೂರು ನೀಡುವವರಿಗೆ ಮತ್ತು ಈಗಾಗಲೇ ದೂರು ನೀಡಿ ಪರಿಹಾರ ಸಿಗದವರಿಗೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಲಾಗಿನ್‌ಗೆ ವಿಶೇಷ ಅಧಿಕಾರ ನೀಡಲಾಗಿದ್ದು, 21 ದಿನಗಳಾದರೂ ದೂರು ಇತ್ಯರ್ಥವಾಗದಿದ್ದಲ್ಲಿ, ಅವರ ಲಾಗಿನ್ ಮೂಲಕ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಮರುಪರಿಶೀಲನೆಗೆ ಕಳುಹಿಸಬಹುದು ಅಥವಾ ಅಂತಿಮವಾಗಿ ಕ್ಲೋಸ್ ಮಾಡಬಹುದು.
ಪ್ರಸ್ತುತ ಸೇವಾ ಸಿಂಧು ಪೋರ್ಟಲ್‌ನಲ್ಲಿ ಲಭ್ಯವಿರುವ 898 ಸೇವೆಗಳ ಜೊತೆಗೆ, ಈಗಾಗಲೇ ಗುರುತಿಸಲಾಗಿರುವ ಒಟ್ಟು 2,456 ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿಯಲ್ಲಿ ತರಲು ನಿರ್ಧರಿಸಲಾಗಿದೆ. ನಾಗರಿಕರಿಗೆ
ಸಿಂಗಲ್ ಸೈನ್-ಆನ್ ಮೂಲಕ ಎಲ್ಲಾ ಸರ್ಕಾರಿ ಸೇವೆಗಳನ್ನು ಪಡೆಯಲು ಒಂದೇ ಬಾರಿಯ ಲಾಗಿನ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹಾಗೆಯೇ
ಯೋಜನೆಗಳ ಹುಡುಕಾಟ ಮತ್ತು ಅರ್ಜಿ ಪ್ರಕ್ರಿಯೆಯನ್ನು ಸುಲಭಗೊಳಿಸಲು AI ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಸಾರ್ವಜನಿಕರು ಧ್ವನಿ ಅಥವಾ ಬರಹ ಮೂಲಕ ತಮ್ಮಗೆ ಬೇಕಾಗಿರವ ಯೋಜನೆಗಳನ್ನು ತಿಳಿದುಕೊಳ್ಳಬಹುದು.
ದಾಖಲೆಗಳನ್ನು ಪದೇ ಪದೇ ಅಪ್‌ಲೋಡ್ ಮಾಡುವುದನ್ನು ತಪ್ಪಿಸಲು ಡಿಜಿ ಲಾಕರ್ (DigiLocker) ಸಂಪರ್ಕ ಕಲ್ಪಿಸಲಾಗುತ್ತಿದ್ದು, ನೀಡಲಾಗುವ ಪ್ರಮಾಣಪತ್ರಗಳಿಗೆ ನೈಜತೆ ಪರಿಶೀಲನೆಗಾಗಿ ‘QR ಕೋಡ್’ ನೀಡಲಾಗುವುದೆಂದರು.
ಅಕ್ಟೋಬರ್ 2 ಕ್ಕೆ ನಮ್ಮ ಸೇವಾ ಆ್ಯಪ್ ಬಿಡುಗಡೆ ಮಾಡಲು ಸಿದ್ಧತೆ:
ನಾಗರಿಕರು ತಮ್ಮ ಮೊಬೈಲ್‌ನಲ್ಲೇ ಎಲ್ಲಾ ಸೇವೆಗಳನ್ನು ಸಂಪೂರ್ಣವಾಗಿ ಹಣರಹಿತ, (cashless) ಕಾಗದರಹಿತ (Paperless) ಮತ್ತು ಸಂಪರ್ಕರಹಿತವಾಗಿ (Contactless) ಪಡೆಯಲು ‘ನಮ್ಮ ಸೇವೆ’ ಎಂಬ ಮೊಬೈಲ್ ಆ್ಯಪ್ ಅನ್ನು ಅಕ್ಟೋಬರ್ 2 ರಂದು ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ. ಹಾಗೆಯೇ
WhatsApp ಚಾಟ್‌ಬಾಟ್ ಮೂಲಕ
ನಾಗರಿಕರು ತಮ್ಮ ದೂರುಗಳನ್ನು ಸರಳವಾಗಿ ವಾಟ್ಸಾಪ್ ಚಾಟ್‌ಬಾಟ್ ಮೂಲಕ ಸಲ್ಲಿಸುವ ವ್ಯವಸ್ಥೆಯನ್ನು ಮಾಡಲಾಗುವುದು.
ಸಾರ್ವಜನಿಕರು ನೀಡುವ ಆಡಿಯೋ ಅಥವಾ ಪಠ್ಯ ಸಂದೇಶದ ಸ್ಥಳ (Location) ಆಧರಿಸಿ, ಎಐ ತಂತ್ರಜ್ಞಾನ ವ್ಯವಸ್ಥೆಯು ಸಂಬಂಧಪಟ್ಟ ಅಧಿಕಾರಿಗಳಿಗೆ ನೇರವಾಗಿ ದೂರು ತಲುಪಿಸಲಿದೆ. ಒಟ್ಟಿನಲ್ಲಿ ಜನಸೇವಾ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು.
ಅರಣ್ಯ ಇಲಾಖೆಯ ಹುತಾತ್ಮ ಸಿಬ್ಬಂದಿಗಳ ತ್ಯಾಗ ಮರೆಯಲಾಗದು- ನ್ಯಾ.ಜಿ.ಎ.ಮಂಜುನಾಥ
ಅರಣ್ಯ, ವನ್ಯಜೀವಿ ಮತ್ತು ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರ ತ್ಯಾಗವನ್ನು ಮರೆಯಲಾಗದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಮಂಜುನಾಥ ಜಿ.ಎ. ಅವರು ಹೇಳಿದರು.
ಅವರು ಇಂದು ಅರಣ್ಯ ಇಲಾಖೆಯು ನಗರದ ಶ್ರೀಗಂಧದ ಕೋಠಿಯಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದು ಸಾಮಾನ್ಯ ವಿಷಯವೇನಲ್ಲ. ಅನೇಕ ಸಂಘರ್ಷಗಳು ಕಾಣುತ್ತವೆ. ಅರಣ್ಯದಲ್ಲಿನ ಕೆಲಸ ಕಚೇರಿಯಲ್ಲಿನ ಕೆಲಸಕ್ಕಿಂತ ಭಿನ್ನವಾದುದು. ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆ-ಸವಾಲುಗಳನ್ನು ಎದುರಿಸಲು ಚಾಣಾಕ್ಷತೆ, ಕಠಿಣ ನಿರ್ಧಾರ, ಗಟ್ಟಿ ಗುಂಡಿಗೆ ಇರಬೇಕು ಎಂದ ಅವರು, ನಾಲ್ಕು ಗೋಡೆಗಳ ನಡುವಿನ ಸಮಸ್ಯೆಯನ್ನು ಎದುರಿಸಬಹುದು. ಆದರೆ, ಹೊರಗಿನ ಸಮಸ್ಯೆಗಳ ಇತ್ಯರ್ಥಕ್ಕೆ ಕೌಶಲ್ಯ, ವೃತ್ತಿಪರತೆ ಇರಬೇಕು. ಇವೆಲ್ಲವೂ ಅರಿತಿದ್ದು, ಸಾವು-ನೋವುಗಳು ನಡೆಯುವುದು ಮನುಷ್ಯನ ಬದುಕನ್ನು ಆತಂಕಕ್ಕೆ ತಳ್ಳುತ್ತದೆ. ನೆಮ್ಮದಿ ಕಳೆದು ಹೋಗುತ್ತದೆ ಎಂದವರು ನುಡಿದರು.
ಎಲ್ಲಾ ವಾಸ್ತವ ಸತ್ಯಗಳನ್ನು ಅರಿತ ನಾವು ಮೌಲಿಕವಾದ ವನ ಸಂಪತ್ತನ್ನು ಉಳಿಸಿ, ಬೆಳೆಸದೆ ಹೋದರೆ ಅದೊಂದು ಸಾಮಾಜಿಕ ದುರಂತವಲ್ಲದೇ ಮತ್ತೇನೂ ಅಲ್ಲ. ಅರಣ್ಯದ ನಾಶ ಎಂದರೆ ಅದು ಮನುಕುಲದ ವಿನಾಶವೇ ಸರಿ ಎಂದ ಅವರು, ಅರಣ್ಯ ರಕ್ಷಣೆಯಲ್ಲಿ ಕಾರ್ಯನಿರತ 65ಸಿಬ್ಬಂದಿಗಳು ಹುತಾತ್ಮರಾಗಿದ್ದು, ಅತ್ಯಂತ ನೋವಿನ ಸಂಗತಿ. ಅವರೆಲ್ಲರನ್ನು ಸ್ಮರಿಸಿಕೊಂಡು ಶ್ರದ್ಧಾಂಜಲಿ ಅರ್ಪಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ ಅವರು ಮಾತನಾಡಿ, ಅರಣ್ಯ ಹುತಾತ್ಮರ ತ್ಯಾಗವು ಕೇವಲ ಇಲಾಖೆಯ ಕರ್ತವ್ಯನಿಷ್ಠೆಯ ಸಂಕೇತವಲ್ಲ; ಅದು ಪರಿಸರ ಸಂರಕ್ಷಣೆ, ಜೀವವೈವಿಧ್ಯ ರಕ್ಷಣೆ ಮತ್ತು ಭವಿಷ್ಯದ ಪೀಳಿಗೆಯ ಹಿತಕ್ಕಾಗಿ ಮಾಡಿದ ಸೇವೆಯ ಪ್ರತೀಕವಾಗಿದೆ ಎಂದರು.
ಅರಣ್ಯ ಸಂರಕ್ಷಣೆಯಲ್ಲಿ ಎದುರಾಗುವ ಅಪಾಯಗಳು, ಕಾಡುಗಳ ಮಹತ್ವ ಹಾಗೂ ವನ್ಯಜೀವಿಗಳ ರಕ್ಷಣೆಯ ಅಗತ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದುದು ಇಂದಿನ ತುರ್ತು ಅಗತ್ಯ. ಅರಣ್ಯ ಸಂಪತ್ತು ಮಾನವನಿಗೆ ಶುದ್ಧ ಗಾಳಿ, ನೀರು, ಮಳೆ, ಔಷಧೀಯ ಸಸ್ಯಗಳು ಹಾಗೂ ಜೀವವೈವಿಧ್ಯವನ್ನು ಒದಗಿಸುವ ಅರಣ್ಯವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.
ಅರಣ್ಯ ಹುತಾತ್ಮರನ್ನು ಸ್ಮರಿಸುವ ಈ ಸಂದರ್ಭದಲ್ಲಿ ಅವರ ಧೈರ್ಯ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮತ್ತು ತ್ಯಾಗದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು. ಅರಣ್ಯ ಸಿಬ್ಬಂದಿಯ ಸೇವೆಗೆ ಗೌರವ ಸಲ್ಲಿಸುವುದರ ಜೊತೆಗೆ, ಅರಣ್ಯ ನಾಶ, ಅಕ್ರಮ ಬೇಟೆ ಮತ್ತು ಅವ್ಯಾಹತವಾಗಿ ಅಕ್ರಮವಾಗಿ ಮರಗಳ ಹನನ ಮಾಡುವುದರ ವಿರುದ್ಧ ಸಮಾಜ ಜಾಗೃತವಾಗಬೇಕು ಎಂದ ಅವರು, ಹುತಾತ್ಮರ ಕುಟುಂಬಕ್ಕೆ ಇಲಾಖೆ ನೆರವಾಗಿದೆ. ಸರ್ಕಾರವೂ ಕೂಡ ಕಾನೂನು ಬದ್ಧವಾಗಿ ನೆರವಿಗೆ ಬರಲಿದೆ. ಅಂತೆಯೇ ಜಿಲ್ಲಾಡಳಿತ ಮತ್ತು ಪೊಲೀಸ್ಇಲಾಖೆಯ ಸಹಕಾರ ನಿರಂತರವಾಗಿದ್ದು, ಅಧಿಕಾರಿ-ಸಿಬ್ಬಂಧಿಗಳಲ್ಲಿ ಆತ್ಮವಿಶ್ವಾಸ ಮತ್ತು ಬಲತುಂಬುವ ಮೂಲಕ ಪ್ರಕೃತಿ ನೈಜ ರಕ್ಷಣೆಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕೃಷ್ಣ ಪಟಗಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹುತಾತ್ಮ ಹೆಸರನ್ನು ವಾಚಿಸಿ ಸ್ಮರಿಸಿದರು. ಮೂರು ವಿಶಾಲ ತೋಪುಗಳನ್ನು ಹಾರಿಸುವ ಮೂಲಕ ಹಾಗೂ ಪುಷ್ಪಗುಚ್ಛ ಅರ್ಪಿಸುವ ಮೂಲಕ ಹುತಾತ್ಮ ಅರಣ್ಯ ಸಿಬ್ಬಂಧಿಗಳಿಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯ ಯೋಜನೆ ಮತ್ತು ಭೂ-ಮಾಪನ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿ ಬಿ.ನಿಖಿಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಸೇರಿದಂತೆ ಅರಣ್ಯ ಇಲಾಖೆಯ ವಿವಿಧ ವೃಂದದ ಅಧಿಕಾರಿ-ಸಿಬ್ಬಂಧಿಗಳು, ಹುತಾತ್ಮರ ಕುಟುಂಬದ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.
.
ಶಿವಮೊಗ್ಗ ದಸರಾ: ನಾಗರಿಕರಿಗೆ,ಪ್ರವಾಸಿಗರಿಗೆ ಯಾವುದೇ ಕೊರತೆಯಾಗದಂತೆ ಸಕಲ ಸೌಲಭ್ಯಗಳನ್ನ ಕಾಲಮಿತಿಯೊಳಗೆ ಪೂರ್ಣಗೊಳಿಸಿ- ಎಸ್.ಎನ್.ಚನ್ನಬಸಪ್ಪ
ನಾಡಿನ ಸಾಂಸ್ಕೃತಿಕ ಹೆಗ್ಗುರುತಾಗಿರುವ ಶಿವಮೊಗ್ಗ ನಗರದ ಐತಿಹಾಸಿಕ ಹಾಗೂ ವೈಭವೋಪೇತ ‘ಶಿವಮೊಗ್ಗ ದಸರಾ ಮಹೋತ್ಸವ’ವನ್ನು ಅತ್ಯಂತ ವಿಜೃಂಭಣೆಯಿಂದ, ಶಿಸ್ತುಬದ್ಧವಾಗಿ ಮತ್ತು ಜನಸ್ನೇಹಿಯಾಗಿ ಆಚರಿಸುವ ನಿಟ್ಟಿನಲ್ಲಿ ಇಂದು ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಭಾಗವಹಿಸಲಾಯಿತು.
ಶ್ರೀ ಕೋಟೆ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಜಗನ್ಮಾತೆ ಶ್ರೀ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆ, ಸಕ್ರೆಬೈಲು ಆನೆ ಬಿಡಾರದ ಗಜಪಡೆಗಳ ಆಕರ್ಷಕ ಹಾಗೂ ಭವ್ಯ ಜಂಬೂಸವಾರಿ ಮೆರವಣಿಗೆ, ಮಕ್ಕಳ ದಸರಾ, ಮಹಿಳಾ ದಸರಾ, ರಂಗ ದಸರಾ, ಯುವ ದಸರಾ ಸೇರಿದಂತೆ ಹತ್ತಾರು ಸಾಂಸ್ಕೃತಿಕ ಹಾಗೂ ಜ್ಞಾನ ದಸರಾ ಕಾರ್ಯಕ್ರಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸಲು ಪಾಲಿಕೆಯ ವತಿಯಿಂದ ರಚಿಸಲಾಗುವ ಉಪಸಮಿತಿಗಳ ಕಾರ್ಯವೈಖರಿ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ನಗರದಲ್ಲಿ ವಿದ್ಯುತ್ ದೀಪಾಲಂಕಾರ, ಸ್ವಚ್ಛತೆ, ಕುಡಿಯುವ ನೀರು ಹಾಗೂ ಸಾರ್ವಜನಿಕ ಸುರಕ್ಷತೆ ಸೇರಿದಂತೆ ಉತ್ಸವಕ್ಕೆ ಆಗಮಿಸುವ ನಾಗರೀಕರಿಗೆ ಹಾಗೂ ಪ್ರವಾಸಿಗರಿಗೆ ಯಾವುದೇ ಕೊರತೆಯಾಗದಂತೆ ಸಕಲ ಸೌಲಭ್ಯಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಮಾಯಣ್ಣ ಗೌಡ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಮ್ಮ BMTC 2.0 ಆ್ಯಪ್ ಲೋಕಾರ್ಪಣೆ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬಿಎಂಟಿಸಿಯ ಪ್ರಯಾಣಿಕರ ಅನುಕೂಲಕ್ಕಾಗಿ ‘ನಮ್ಮ BMTC 2.0’ ಮೊಬೈಲ್ ಆ್ಯಪ್ ಅನ್ನು ಪರಿಚಯಿಸಿದೆ.
ಪ್ರಯಾಣಿಕರಿಗೆ ಬಸ್ ಸಂಚಾರದ ಮಾಹಿತಿ, ಮಾರ್ಗ ಹಾಗೂ ಪ್ರಯಾಣದ ಯೋಜನೆ ಸೇರಿದಂತೆ ಹಲವು ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವುದು ಈ ಆ್ಯಪ್‌ನ ಪ್ರಮುಖ ಉದ್ದೇಶವಾಗಿದೆ.
‘ನಮ್ಮ BMTC 2.0’ ಆ್ಯಪ್‌ನಲ್ಲಿ ಪ್ರಯಾಣಿಕರು ಬಸ್‌ನ ಲೈವ್ ಲೋಕೇಷನ್, ಬಸ್ ಮಾರ್ಗ, ನಿಲ್ದಾಣಗಳ ಮಾಹಿತಿ ಸೇರಿದಂತೆ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಇದರ ಜೊತೆಗೆ QR ಟಿಕೆಟ್ ವ್ಯವಸ್ಥೆಯನ್ನೂ ಆ್ಯಪ್‌ನಲ್ಲಿ ಪರಿಚಯಿಸಲಾಗಿದ್ದು, ಪ್ರಯಾಣಿಕರು ಸುಲಭವಾಗಿ ಡಿಜಿಟಲ್ ಟಿಕೆಟ್ ಪಡೆಯಬಹುದಾಗಿದೆ.
BMTC ಮತ್ತು BMRCL ನಡುವಿನ ಮಲ್ಟಿಮೋಡಲ್ ಸಾರಿಗೆ ಸಂಪರ್ಕಕ್ಕೂ ಆ್ಯಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಬಸ್ ಹಾಗೂ ಮೆಟ್ರೋ ಪ್ರಯಾಣವನ್ನು ಒಳಗೊಂಡಂತೆ ಪ್ರಯಾಣಿಕರು ತಮ್ಮ ಸಂಪೂರ್ಣ ಪ್ರಯಾಣವನ್ನು ಸುಲಭವಾಗಿ ಯೋಜಿಸಿಕೊಳ್ಳಬಹುದಾಗಿದೆ.
ಆ್ಯಪ್‌ನ ಜರ್ನಿ ಪ್ಲ್ಯಾನರ್ ಮೂಲಕ ಪ್ರಯಾಣಿಕರು ತಮ್ಮ ಆರಂಭಿಕ ಸ್ಥಳದಿಂದ ಗಮ್ಯಸ್ಥಾನದವರೆಗೆ ಲಭ್ಯವಿರುವ ಮಾರ್ಗಗಳನ್ನು ತಿಳಿದುಕೊಂಡು ಪ್ರಯಾಣ ಯೋಜನೆ ರೂಪಿಸಬಹುದು.
ಇದಲ್ಲದೆ, ವಿವಿಧ ಬಸ್ ಸೇವೆಗಳು, ಮಾರ್ಗಗಳು ಮತ್ತು ಪ್ರಯಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಆ್ಯಪ್ ಮೂಲಕ ಪಡೆಯಬಹುದಾಗಿದೆ.
UPI ಮೂಲಕ ಡಿಜಿಟಲ್ ಪಾವತಿ ಸೇರಿದಂತೆ ಹಲವು ಡಿಜಿಟಲ್ ಸೌಲಭ್ಯಗಳನ್ನೂ ಆ್ಯಪ್‌ನಲ್ಲಿ ಒದಗಿಸಲಾಗಿದೆ.
ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (NCMC) ಬಳಕೆದಾರರಿಗೂ ಅನುಕೂಲವಾಗುವಂತೆ ಸೇವೆಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.
ಒಟ್ಟಾರೆ, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸರಳ, ವೇಗ ಮತ್ತು ಡಿಜಿಟಲ್‌ಗೊಳಿಸುವ ನಿಟ್ಟಿನಲ್ಲಿ ‘ನಮ್ಮ BMTC 2.0’ ಆ್ಯಪ್ ಮಹತ್ವದ ಹೆಜ್ಜೆಯಾಗಿದೆ.
ಪ್ರಯಾಣಿಕರು Google Play Store ಮೂಲಕ ‘Namma BMTC 2.0’ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ
S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ ಸಮಗ್ರ ಮೂಲಸೌಕರ್ಯಗಳನ್ನು ಕಲ್ಪಿಸುವುದು ಮತ್ತು ನಾಗರಿಕರಿಗೆ ಸುಗಮ ಸಂಚಾರ ಒದಗಿಸುವುದು ನಮ್ಮ ಪ್ರಮುಖ ಸಂಕಲ್ಪವಾಗಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದರು.
ಇಂದು ಸಂಜೆ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ. 1ರ ಸರ್ವಜ್ಞ ನಗರ, ವಾರ್ಡ್ ನಂ. 3ರ ಬೊಮ್ಮನಕಟ್ಟೆ ‘ಎಫ್’ ಬ್ಲಾಕ್ ಹಾಗೂ ವಾರ್ಡ್ ನಂ. 6ರ ಗಾಡಿಕೊಪ್ಪದ ಬಡಾವಣೆಗಳಲ್ಲಿ ನೂತನ ರಸ್ತೆ ನಿರ್ಮಾಣ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ವಿವಿಧ ಜನಪರ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, “ಬಡಾವಣೆಗಳ ಅಭಿವೃದ್ಧಿ ಕಾರ್ಯಗಳಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಾಗ ಸಾರ್ವಜನಿಕರ ದೈನಂದಿನ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗಬಾರದು, ನಿಗದಿತ ಕಾಲಮಿತಿಯೊಳಗೆ ಅತ್ಯುನ್ನತ ಗುಣಮಟ್ಟದಿಂದ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಒದಗಿಸಬೇಕು” ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
S. N. Channabasappa ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಜ್ಞಾನೇಶ್ವರ್, ಬಿಜೆಪಿ ನಗರ ಅಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ನಗರ ಉಪಾಧ್ಯಕ್ಷರಾದ ಶ್ರೀ ಗಾಡಿಕೊಪ್ಪ ಕುಮಾರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನವಲೆ ಮಂಜು, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶ್ರೀಮತಿ ಆಶಾ ಚಂದ್ರಪ್ಪ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ನವಲೆ ರವೀಂದ್ರ, ವಾರ್ಡ್ ಅಧ್ಯಕ್ಷರಾದ ಶ್ರೀ ಶಿವು, ಪಾಲಿಕೆಯ ಇಂಜಿನಿಯರ್‌ಗಳು, ಪಕ್ಷದ ಪ್ರಮುಖ ಮುಖಂಡರು ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
ಶಿವಮೊಗ್ಗದ ಹಿರಿಯ ಯೋಗಪಟು ಕೆ.ಎಸ್.ಮೃತ್ಯುಂಜಯ ನಿಧನ. ವಿವಿಧ ಗಣ್ಯರಿಂದ ಸಂತಾಪ
ಗೋಪಾಳಗೌಡ ಬಡಾವಣೆಯ ನಿವಾಸಿ, ಹಿರಿಯ ಯೋಗಪಟು ಹಾಗೂ ಪ್ರಾಧ್ಯಾಪಕರಾದ ಶ್ರೀಯುತ ಕೆ.ಎಸ್. ಮೃತ್ಯುಂಜಯ (78 ವರ್ಷ) ಅವರು ನಿನ್ನೆ ಸಂಜೆ 4:30ರ ಸುಮಾರಿಗೆ ತುಮಕೂರಿನಲ್ಲಿರುವ ತಮ್ಮ ಮಗಳ ಮನೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಪಾರ ಬಂಧು-ಬಳಗ, ಶಿಷ್ಯರು ಹಾಗೂ ಸ್ನೇಹಿತರನ್ನು ಬಿಟ್ಟು ಅಗಲಿರುವ ಅವರ ನಿಧನದಿಂದ ಯೋಗ ಕ್ಷೇತ್ರ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಅಪಾರ ಶೋಕ ವ್ಯಕ್ತವಾಗಿದೆ.
ಮೃತರ ಅಂತ್ಯಕ್ರಿಯೆಯನ್ನು ಶನಿವಾರ ಸಂಜೆ ಅವರ ಹುಟ್ಟೂರಾದ ಚಿಕ್ಕನಾಯಕನಹಳ್ಳಿಯಲ್ಲಿ ನೆರವೇರಿಸಲಾಗುವುದು. ಪುತ್ರರು ಅಮೆರಿಕದಿಂದ ಆಗಮಿಸಬೇಕಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯನ್ನು ಶನಿವಾರಕ್ಕೆ ನಿಗದಿಪಡಿಸಲಾಗಿದೆ.
ಶ್ರೀಯುತ ಕೆ.ಎಸ್. ಮೃತ್ಯುಂಜಯ ಅವರು ಶಿವಗಂಗಾ ಯೋಗ ಕೇಂದ್ರದ ವಿಶ್ವಸ್ಥ ಮಂಡಳಿಯ ಸದಸ್ಯರಾಗಿ ಹಾಗೂ ಸುಮಾರು 15 ವರ್ಷಗಳ ಕಾಲ ಸಂಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಬ್ರದರ್ ಡಿವೈನ್ ಪಾರ್ಕಿನ ಸದಸ್ಯರಾಗಿದ್ದು, ಹಲವು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಅವರ ನಿಧನಕ್ಕೆ ವಿಧಾನ ಪರಿಷತ್ತಿನ ಮಾಜಿ ಸದಸ್ಯರು ಹಾಗೂ ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾದ ರುದ್ರಗೌಡರು, ಯೋಗಾಚಾರ್ಯ ಸೇವಾ ರುದ್ರಾರಾಧ್ಯರು, ಕಾರ್ಯದರ್ಶಿ ಚಂದ್ರಶೇಖರಯ್ಯ, ಎಸ್.ಎಸ್.ಜ್ಯೋತಿ ಪ್ರಕಾಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ.ವಿಜಯ್ ಕುಮಾರ್, ಯೋಗ ಶಿಕ್ಷಕರು ಹಾಗೂ ಯೋಗ ಬಂಧುಗಳು ಸಂತಾಪ ಸೂಚಿಸಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.
ಬಡಾವಣೆಗಳಲ್ಲಿ ಸುಗಮ ಸಂಚಾರಕ್ಕೆ ರಸ್ತೆ & ನೈರ್ಮಲ್ಯ ಕಾಪಾಡಲು ವ್ಯವಸ್ಥಿತ ಚರಂಡಿ ನಿರ್ಮಾಣ- ಎಸ್.ಎನ್.ಚನ್ನಬಸಪ್ಪ
ಶಿವಮೊಗ್ಗ: ನಗರದ ಬಡಾವಣೆಗಳಲ್ಲಿ ಸುಗಮ ಸಂಚಾರಕ್ಕೆ ಸುಸಜ್ಜಿತ ರಸ್ತೆ ಹಾಗೂ ನೈರ್ಮಲ್ಯ ಕಾಪಾಡಲು ವ್ಯವಸ್ಥಿತ ಚರಂಡಿ ನಿರ್ಮಾಣ ನಮ್ಮ ಪ್ರಮುಖ ಕರ್ತವ್ಯವಾಗಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದರು. ಇಂದು ಬೆಳಿಗ್ಗೆ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ. 14ರ ವಿದ್ಯಾನಗರ, ವಾರ್ಡ್ ನಂ. 5ರ ಪುರಲೆ ಹಾಗೂ ವಾರ್ಡ್ ನಂ. 34ರ ನಂಜಪ್ಪ ಲೇಔಟ್‌ನಲ್ಲಿ ನೂತನ ರಸ್ತೆ ನಿರ್ಮಾಣ ಹಾಗೂ ಒಳಚರಂಡಿ ವ್ಯವಸ್ಥೆಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಕಾಮಗಾರಿಗಳಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದ ಕೊರತೆಯಾಗದಂತೆ ಮತ್ತು ನಿಗದಿತ ಅವಧಿಯೊಳಗೆ ಮುಕ್ತಾಯಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ನಗರ ಪ್ರಧಾನ ಕಾರ್ಯದರ್ಶಿ ಶ್ರೀ ನವುಲೆ ಮಂಜುನಾಥ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀ ಹರೀಶ್, ಪ್ರಮುಖರಾದ ಶ್ರೀ ಲಕ್ಷ್ಮಣ್, ಶ್ರೀ ಮಲ್ಲಿಕಾರ್ಜುನ, ಶ್ರೀ ಜಗದೀಶ್, ವಾರ್ಡ್ ಅಧ್ಯಕ್ಷರಾದ ಶ್ರೀ ಮಾಲತೇಶ ಸೇರಿದಂತೆ ಸ್ಥಳೀಯ ಪ್ರಮುಖರು, ಕಾರ್ಯಕರ್ತ ಬಂಧುಗಳು ಹಾಗೂ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.
ತೀರ್ಥಹಳ್ಳಿ ಗೋಶಾಲೆಯಿಂದಲೇ ಗೋಮಾಂಸ ಮಾರಾಟ, ಪತ್ತೆ ಹಚ್ಚಿದ ಪೊಲೀಸ್ ಇಲಾಖೆ, ಓರ್ವನ ಬಂಧನ
ತೀರ್ಥಹಳ್ಳಿ ತಾಲೂಕಿನ ಕಲ್ಗುಂಡಿ ಬಳಿ ಪಿಕ್‌ಅಪ್ ವಾಹನದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಆರೋಪದಡಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಪಿಕ್‌ಅಪ್ ವಾಹನದಲ್ಲಿ ಸುಮಾರು 8ರಿಂದ 10 ಗೋವುಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು, ವಾಹನದಲ್ಲಿದ್ದ ನಾಲ್ವರಲ್ಲಿ ಮೂವರು ಪರಾರಿಯಾಗಿದ್ದಾರೆ. ಕುಂದಾಪುರ ಮೂಲದ ಇಲಿಯಾಸ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಗೋವುಗಳನ್ನು ವಧೆ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿತ್ತು ಎಂದು ವಶಕ್ಕೆ ಪಡೆದ ವ್ಯಕ್ತಿ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಇನ್ನೊಂದೆಡೆ, ಗೋಶಾಲೆಗಳಿಂದಲೇ ಗೋವುಗಳನ್ನು ಸಾಗಿಸಲಾಗುತ್ತಿತ್ತು ಎಂಬ ಗಂಭೀರ ಆರೋಪವನ್ನು ಸ್ಥಳೀಯರು ಮಾಡಿದ್ದು, ಪ್ರಕರಣದ ಕುರಿತು ಹಲವು ಅನುಮಾನಗಳು ವ್ಯಕ್ತವಾಗಿವೆ.
ಪೊಲೀಸರು ಪಿಕ್‌ಅಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದು, ಪರಾರಿಯಾಗಿರುವ ಮೂವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೋವುಗಳನ್ನು ಎಲ್ಲಿಂದ ತರಲಾಗಿತ್ತು? ಎಲ್ಲಿಗೆ ಸಾಗಿಸಲಾಗುತ್ತಿತ್ತು? ಈ ಸಾಗಾಟದ ಹಿಂದೆ ಇನ್ನೂ ಯಾರು ಇದ್ದಾರೆ? ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
