Wednesday, September 16, 2026
Wednesday, September 16, 2026
Home Blog Page 4

ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ” ಯೂತ್ ಈಸ್ ವಾಯ್ಸ್ ಆಫ್ ಚೇಂಜ್ ” ಕಾರ್ಯಕ್ರಮ

0

ಯುವಜನರು ಸಮಾಜದ ಬದಲಾವಣೆಯ ಪ್ರಮುಖ ಶಕ್ತಿಯಾಗಿದ್ದು, ಅವರಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಹಾಗೂ ಪ್ರಜ್ಞಾವಂತ ಚಿಂತನೆ ಬೆಳೆಸುವ ಉದ್ದೇಶದಿಂದ ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ 777 ಜೆಸಿಐ ವೀಕ್ ಅಂಗವಾಗಿ ‘ಯೂಥ್ ಲೀಡರ್ ಶಿಪ್ ಅಂಡ್ ವಾಯ್ಸ್ ಡೇ’ (Youth Leadership & Voice Day) ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ಸಹ್ಯಾದ್ರಿ ಸೈನ್ಸ್ ಕಾಲೇಜಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ “ರಾಜಕೀಯ ಸಂಘಟನೆಗಳಿಗಿಂತ ಯುವ ಸಂಘಟನೆಗಳು ಹೆಚ್ಚಿನ ಸಾಮಾಜಿಕ ಬದಲಾವಣೆಯನ್ನು ಸೃಷ್ಟಿಸಬಹುದು” ಎಂಬ ವಿಷಯದ ಕುರಿತು ಚರ್ಚಾ ಸ್ಪರ್ಧೆ ಆಯೋಜಿಸಲಾಗಿತ್ತು. ಚರ್ಚಾ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ವಿಷಯದ ಪರ-ವಿರೋಧವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಈ ಮೂಲಕ ವಿದ್ಯಾರ್ಥಿಗಳು ತಮ್ಮ ವಿಚಾರಧಾರೆ, ವಾಕ್ಚಾತುರ್ಯ, ತಾರ್ಕಿಕ ಚಿಂತನೆ ಹಾಗೂ ಸಾಮಾಜಿಕ ಅರಿವನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದರು.

ಯುವಜನರು ಕೇವಲ ತಮ್ಮ ವೈಯಕ್ತಿಕ ಭವಿಷ್ಯದ ಬಗ್ಗೆ ಮಾತ್ರ ಚಿಂತಿಸದೆ, ಸಮಾಜದ ಅಭಿವೃದ್ಧಿ, ಜನರ ಸಮಸ್ಯೆಗಳು ಹಾಗೂ ದೇಶದ ಭವಿಷ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಯುವಜನರಲ್ಲಿ ಪ್ರಶ್ನಿಸುವ ಮನೋಭಾವ, ವಿಚಾರ ವಿನಿಮಯ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಇಂತಹ ಚರ್ಚಾ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಯುವಕರು ತಮ್ಮ ಆಲೋಚನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಹಾಗೂ ಸಮಾಜದ ವಿವಿಧ ವಿಚಾರಗಳ ಕುರಿತು ಆರೋಗ್ಯಕರ ಚರ್ಚೆ ನಡೆಸಲು ಇಂತಹ ವೇದಿಕೆಗಳು ಅಗತ್ಯವೆಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿ ಅಗತ್ಯ ಸಹಕಾರ ನೀಡಿದ ಸಹ್ಯಾದ್ರಿ ಸೈನ್ಸ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗಕ್ಕೆ ಜೆಸಿಐ ಶಿವಮೊಗ್ಗ ವಿವೇಕ್ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಡಾ. ನಾಗರಾಜ್ ಪರಿಸರ, ಜೆಸಿಐ ವೀಕ್ ಕೋ ಆರ್ಡಿನೇಟ್ ಜಗದೀಶ್, ಐಪಿಪಿ ಮಂಜುಳಾ ಕೇಶವ್, ಕಾರ್ಯದರ್ಶಿ ಶ್ವೇತಾ ಸಚಿನ್, ಪೂಜಾ ನಾಗರಾಜ್ ಹಾಗೂ ಶ್ಯಾಮಲಾ ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಆಯೋಜನೆ ಹಾಗೂ ಯಶಸ್ವಿ ನಿರ್ವಹಣೆಗೆ ಅವರ ಕೊಡುಗೆಯನ್ನು ಶ್ಲಾಘಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ಉತ್ಸಾಹದಿಂದ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡರು. ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ದೊರೆಯಿತು. ಯುವಜನರಲ್ಲಿ ಸಾಮಾಜಿಕ ಸಮಸ್ಯೆಗಳ ಕುರಿತು ಅರಿವು ಮೂಡಿಸುವುದು, ನಾಯಕತ್ವದ ಗುಣಗಳನ್ನು ಬೆಳೆಸುವುದು ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯುತ ಚಿಂತನೆ ಬೆಳೆಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

“ಯೂತ್ ಈಸ್ ವಾಯ್ಸ್ ಆಫ್ ಚೇಂಜ್” ಎಂಬ ಆಶಯದೊಂದಿಗೆ ಯುವಜನರಲ್ಲಿ ಸಾಮಾಜಿಕ ನಾಯಕತ್ವದ ಬೀಜ ಬಿತ್ತುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಯುವಕರಿಗೆ ತಮ್ಮ ಧ್ವನಿಯನ್ನು ಪರಿಣಾಮಕಾರಿಯಾಗಿ ಸಮಾಜದ ಮುಂದೆ ಇಡಲು ಹಾಗೂ ಬದಲಾವಣೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು ಎಂಬ ಆಶಯವನ್ನು ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಲಾಯಿತು.

ಜೆಸಿಐ ಶಿವಮೊಗ್ಗ ವಿವೇಕ್ ಅಧ್ಯಕ್ಷರಾದ ಜಿ.ಸಿ. ವಿಜಯಲಕ್ಷ್ಮಿ ಯು. ಕಡಂಬ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಶಿವಮೊಗ್ಗದಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಪಂದ್ಯಾವಳಿ ಯಶಸ್ವಿ: ಸ್ಪರ್ಧಿಗಳಿಂದ ಉತ್ತಮ ಪ್ರದರ್ಶನ

0

ಇತ್ತೀಚೆಗೆ ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ದಿನಾಂಕ 10ರಂದು ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಇವರ ವತಿಯಿಂದ ಆಯೋಜಿಸಲಾದ ಈ ಪಂದ್ಯಾವಳಿಯಲ್ಲಿ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿ, ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ.

ಪಂದ್ಯಾವಳಿಯಲ್ಲಿ ಪದಕಗಳನ್ನು ಗಳಿಸಿದ ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ ಶಿವಮೊಗ್ಗ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹ ನಿರ್ದೇಶಕರಾದ ಶ್ರೀಯುತ ರೇಖಾ ನಾಯಕ್ ಅವರು ಅಭಿನಂದನೆ ಸಲ್ಲಿಸಿ, ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಶುಭ ಹಾರೈಸಿದರು.

ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮುಂದಿನ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಮುಂದಿನ ಹಂತದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತರಲಿ ಎಂದು ಹಾರೈಸಲಾಯಿತು.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಶ್ರೀಯುತ ನವೀನ್, ಉಪಾಧ್ಯಕ್ಷರಾದ ಶ್ರೀಯುತ ಸಾಧಿಕ್, ಖಜಾಂಚಿಗಳಾದ ಶ್ರೀಯುತ ಮಂಜುನಾಥ್ ಹಾಗೂ ಅಸೋಸಿಯೇಷನ್‌ನ ಎಲ್ಲಾ ಪದಾಧಿಕಾರಿಗಳು ಪದಕ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದರು.

ವಿದ್ಯಾರ್ಥಿಗಳ ಈ ಸಾಧನೆಗೆ ತರಬೇತುದಾರರು, ಪೋಷಕರು ಹಾಗೂ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್‌ನ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ಕ್ರೀಡಾಕೂಟ ಕೇವಲ ಸ್ಪರ್ಧೆಯಲ್ಲ.ಆರೋಗ್ಯವಂತ,ಶಿಸ್ತುಬದ್ಧ,ಆತ್ಮ ವಿಶ್ವಾಸವುಳ್ಳ ಯುವಜನರನ್ನ ರೂಪಿಸುವ ವೇದಿಕೆ- ವಿ.ಅಭಿಷೇಕ್

0

ದಸರಾ ಕ್ರೀಡಾಕೂಟ ಕೇವಲ ಸ್ಪರ್ಧೆಯಲ್ಲ; ಆರೋಗ್ಯವಂತ, ಶಿಸ್ತಿನ, ಆತ್ಮವಿಶ್ವಾಸಿ ಮತ್ತು ಜವಾಬ್ದಾರಿಯುತ ಯುವಜನತೆಯನ್ನು ರೂಪಿಸುವ ಪ್ರಮುಖ ವೇದಿಕೆಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಅಭಿಷೇಕ್‌ವಿ. ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೈಹಿಕ ಆರೋಗ್ಯ: ದೇಹದ ಸದೃಢತೆ, ಚುರುಕುತನ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಕ್ರೀಡೆಗಳು ಸಹಕಾರಿಯಾಗಿರುವಂತೆಯೇ ಮಾನಸಿಕ ಆರೋಗ್ಯ: ಒತ್ತಡ, ಆತಂಕ ಮತ್ತು ಏಕತಾನತೆ ಕಡಿಮೆಯಾಗಿ ಉತ್ಸಾಹ ಹೆಚ್ಚುತ್ತದೆ ಮಾತ್ರವಲ್ಲ ಶಿಸ್ತು ಮತ್ತು ಸಮಯಪಾಲನೆ, ನಿಯಮಗಳನ್ನು ಪಾಲಿಸುವ ಮತ್ತು ಗುರಿ ಸಾಧಿಸುವ ಮನೋಭಾವ ಮೂಡುತ್ತದೆ ಎಂದವರು ನುಡಿದರು.
ದಸರಾ ಕ್ರೀಡಾಕೂಟದಂತಹ ಕ್ರೀಡಾಕೂಟಗಳು ಯುವಕರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಮಹತ್ವದ ವೇದಿಕೆಯಾಗಿವೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಯುವಕರಲ್ಲಿ ಆರೋಗ್ಯ, ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಮತ್ತು ತಂಡದ ಮನೋಭಾವ ಬೆಳೆಯಲಿದೆ. ಪರಸ್ಪರ ಸಹಕಾರ, ಸ್ನೇಹ ಮತ್ತು ಸಾಮಾಜಿಕ ಬಾಂಧವ್ಯ ಗಟ್ಟಿಗೊಳ್ಳುವಲ್ಲಿಯೂ ಕ್ರೀಡೆಗಳು ಸಹಕಾರಿಯಾಗಿವೆ ಎಂದವರು ನುಡಿದರು.
ನಾಡಹಬ್ಬ ದಸರಾ ನಾಡಿನ ಸಂಸ್ಕೃತಿ ಮತ್ತು ಭವ್ಯ ಪರಂಪರೆಯ ಪ್ರತೀಕವಾಗಿದೆ ಎಂದ ಅವರು ಕ್ರೀಡೆಗಳೂ ಸಹ ಆ ಸಂಭ್ರಮದ ಭಾಗವಾಗಿವೆ. ಎಲ್ಲಾ ಯುವಕರು ವ್ಯಕ್ತಿಯನ್ನು ಸದಾ ಕ್ರಿಯಾಶೀಲವಾಗಿರುವ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಅವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಗ್ರಾಮೀಣ ಹಾಗೂ ಪ್ರತಿಭಾವಂತ ಯುವಕರಿಗೆ ತಮ್ಮ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ಕ್ರೀಡಾಕೂಟದಲ್ಲಿ ಅವಕಾಶ ದೊರೆಯಲಿದೆ. ಉತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳು ಹಾಗೂ ಕ್ರೀಡಾ ಕೋಟಾದ ಮೂಲಕ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ದೊರೆಯಲಿವೆ ಎಂದ ಅವರು, ಯುವಕರನ್ನು ಮಾದಕ ವ್ಯಸನ, ಅಕ್ರಮ ಚಟುವಟಿಕೆ ಮತ್ತು ಅಸಾಮಾಜಿಕ ಪ್ರವೃತ್ತಿಗಳಿಂದ ದೂರವಿರಿಸಲು ಕ್ರೀಡೆ ಸಹಕಾರಿಯಾಗಿವೆ. ಅಂತೆಯೇ ಗೆಲುವನ್ನು ವಿನಯದಿಂದ ಸ್ವೀಕರಿಸುವುದು ಮತ್ತು ಸೋಲಿನಿಂದ ಪಾಠ ಕಲಿಯುವ ಗುಣ ಬೆಳೆಸುವುದರ ಜೊತೆಗೆ ಸಮಗ್ರ ವ್ಯಕ್ತಿತ್ವ ವಿಕಸನಗೊಳ್ಳಲಿದೆ ಎಂದರು.
ಈಗಾಗಲೇ ತಾಲೂಕು ಮಟ್ಟದಲ್ಲಿ ನಡೆದ ಕ್ರೀಡೆಗಳಲ್ಲಿ ಆಯ್ಕೆಗೊಂಡ ಪ್ರತಿಭಾವಂತ ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಕ್ರೀಡೆಯಲ್ಲಿ ವಿಜೇತರಾದ ಕ್ರೀಡಾಪಟುಗಳು ಶ್ರಮವಹಿಸಿ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕ್ರೀಡೆಗಳಲ್ಲಿ ಪದಕ ಗಳಿಸಿ, ಜಿಲ್ಲೆಗೆ ಕೀರ್ತಿ ತರುವಂತೆ ಮನವಿ ಮಾಡಿದರು.
ಕ್ರೀಡೆಯಲ್ಲಿ ಅತಿ ಹೆಚ್ಚಿನ ಪ್ರತಿಭಾವಂತರು, ಸಾಧಕರು ಜಿಲ್ಲೆಯಲ್ಲಿದ್ದಾರೆ. ನಾವೆಲ್ಲರೂ ಗಮನಿಸಿದಂತೆ ಓಲಂಪಿಕ್ಸ್‌ನಂತಹ ಕ್ರೀಡೆಗಳಲ್ಲಿ ದೇಶದ ಪ್ರತಿಭೆಗಳು ನಿರೀಕ್ಷೆ ಪ್ರಮಾಣದಲ್ಲಿ ಕಾಣದಿರುವುದು ಬೇಸರದ ಸಂಗತಿ ಎಂದ ಅವರು, ಮಲೆನಾಡ ಯುವ ಕ್ರೀಡಾಪಟುಗಳು ಇಂತಹ ಮಹತ್ವದ ಕ್ರೀಡೆಗಳಲ್ಲಿ ಭಾಗವಹಿಸಿ, ಪದಕ ವಿಜೇತರಾಗಿ ದೇಶದ ಕೀರ್ತಿ ಹೆಚ್ಚಿಸುವಲ್ಲಿ ಯತ್ನಿಸಬೇಕೆಂದವರು ನುಡಿದರು.
ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್‌, ಮೇರಾ ಭಾರತ್ ‌ಸಂಸ್ಥೆಯ ಯುವಸಮನ್ವಯಾಧಿಕಾರಿ ಶ್ರೀಮತಿ ಐಶ್ವರ್ಯಾ ಶ್ರೀನಿವಾಸ್‌, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಮಾರುತಿ ಸೇರಿದಂತೆ ಗಣ್ಯರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಸುಸ್ಥಿರ ಪರಿಸರ ನಿರ್ಮಾಣಕ್ಕೆ ಅರಣ್ಯೀಕರಣಕ್ಕೆ ಹೆಚ್ಚು ಒತ್ತು- ಜಿ.ವಿಜಯ್ ಕುಮಾರ್

0

ಹಸಿರು ಉಪಕ್ರಮಗಳ ಮೂಲಕ ಭೂಮಿಯನ್ನು ಸಂರಕ್ಷಿಸುವ ಹಾಗೂ ಮುಂದಿನ ಪೀಳಿಗೆಗೆ ಸುಸ್ಥಿರ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಅರಣ್ಯೀಕರಣ ಮತ್ತು ಪರಿಸರ ಸಂರಕ್ಷಣಾ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಮಾಜಿ ರೋಟರಿ ಸಹಾಯಕ ಗವರ್ನರ್ ಹಾಗೂ ರೋಟೇರಿಯನ್ ಜಿ. ವಿಜಯ್ ಕುಮಾರ್ ಕರೆ ನೀಡಿದರು.

ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ‘ಹಸಿರು ಭವಿಷ್ಯದತ್ತ ರೋಟರಿ ಪರಿಸರ ಯೋಜನೆ’ ಕಾರ್ಯಕ್ರಮದ ಅಂಗವಾಗಿ, ಸರ್ಕಾರಿ ಪ್ರೌಢಶಾಲೆ ಕೊಮ್ಮನಾಳು, ಶಿವಮೊಗ್ಗ ತಾಲೂಕು ಇವರ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ವನಮಹೋತ್ಸವ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳೊಂದಿಗೆ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮರಗಳನ್ನು ನೆಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಸಮಗ್ರವಾದ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದರು.

ಕೆರೆಗಳ ಪುನರುಜ್ಜೀವನ, ಅರಣ್ಯೀಕರಣ, ಹಣ್ಣು ಮತ್ತು ಔಷಧೀಯ ಸಸ್ಯಗಳ ತೋಟಗಳ ಮೂಲಕ ಗ್ರಾಮೀಣ ಜೀವನೋಪಾಯಕ್ಕೆ ಉತ್ತೇಜನ, ಸಾಂಪ್ರದಾಯಿಕ ಜಲಮೂಲಗಳ ಪುನಶ್ಚೇತನ, ಮಳೆನೀರು ಕೊಯ್ಲಿಗೆ ಪ್ರೋತ್ಸಾಹ ಹಾಗೂ ಶಾಲೆಗಳು ಮತ್ತು ಸಮುದಾಯಗಳಲ್ಲಿ ಸುಸ್ಥಿರ ಜೀವನಶೈಲಿಯ ಕುರಿತು ಅರಿವು ಮೂಡಿಸುವಂತಹ ಹಲವು ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಹಮ್ಮಿಕೊಂಡಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ ಡಿ.ಕೆ. ಮಾತನಾಡಿ, ಒಟ್ಟಾಗಿ ನಾವು ಹಸಿರು ಭವಿಷ್ಯದತ್ತ ಒಂದು ಸಣ್ಣ ಆದರೆ ಅರ್ಥಪೂರ್ಣ ಹೆಜ್ಜೆ ಇಟ್ಟಿದ್ದೇವೆ. ಪರಿಸರವನ್ನು ಪೋಷಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸೋಣ. ಪ್ರತಿಯೊಂದು ಮರವೂ ಮುಖ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್‌ನ ಕಾರ್ಯದರ್ಶಿ ಆರ್. ಮನೋಹರ್ ಅವರು, ಪರಿಸರ ವ್ಯವಸ್ಥೆಗಳ ಪುನಶ್ಚೇತನ, ಜಲಮೂಲಗಳ ಪುನರುಜ್ಜೀವನ, ಅರಣ್ಯೀಕರಣ ಹಾಗೂ ಸಮುದಾಯ ಆಧಾರಿತ ಪರಿಸರ ಯೋಜನೆಗಳ ಮೂಲಕ ಸುಸ್ಥಿರ ಜೀವನೋಪಾಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ‘ಸೇವೆ ಅಬೌವ್ ಸೆಲ್ಫ್’ ಎಂಬ ಧ್ಯೇಯದೊಂದಿಗೆ ನಾಗರಿಕರು, ಸಂಸ್ಥೆಗಳು ಮತ್ತು ಸಮುದಾಯಗಳನ್ನು ಪರಿಸರ ಸಂರಕ್ಷಣೆಯಲ್ಲಿ ಒಗ್ಗೂಡಿಸುವ ಕಾರ್ಯವನ್ನು ರೋಟರಿ ವಿಶ್ವದಾದ್ಯಂತ ನಡೆಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಗುರುರಾಜ್ ಎಂ.ಒ. ಅವರು ಜಾಗತಿಕ ತಾಪಮಾನ ಏರಿಕೆಯ ಹಿನ್ನೆಲೆಯಲ್ಲಿ ಪರಿಸರ ಜಾಗೃತಿಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಇಂಟರಾಕ್ಟ್ ಕ್ಲಬ್‌ನ ಪದಾಧಿಕಾರಿಗಳೊಂದಿಗೆ ಶಾಲಾ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಅವುಗಳಿಗೆ ನೀರುಣಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆ ಕೊಮ್ಮನಾಳುವಿನ ಹಿರಿಯ ಶಿಕ್ಷಕಿ ಇಂದಿರಾ ಎಸ್.ಪಿ., ರಾಘವೇಂದ್ರ ವಿ.ಟಿ., ಕಿರಣ್ ಎಚ್., ವೀಣಾ ಎಸ್., ಗಿರಿಧರ್ ಸಿ.ಪಿ., ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಪ್ರಿಯ, ಕಾರ್ಯದರ್ಶಿ ಹೇಮಂತ್, ಉಪಾಧ್ಯಕ್ಷೆ ಪಲ್ಲವಿ, ಇತರೆ ಪದಾಧಿಕಾರಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Department of Kannada and Culture ಬೆಂಗಳೂರಿನಲ್ಲಿ ” ಕಲಾಸಂಗಮ ಕನ್ನಡ ಪುಸ್ತಕ ಮಾರಾಟ ಮೇಳ: ಆಸಕ್ತರು ಮಳಿಗೆ ಪಡೆಯಲು ಮಾಹಿತಿ

0

Department of Kannada and Culture ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿರುವ “ಕಲಾ ಸಂಗಮ” ಕಾರ್ಯಕ್ರಮದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ದಿನಾಂಕ: 25.09.2026 ರಿಂದ 27.09.2026ರವರೆಗೆ “ಕಲಾ ಸಂಗಮ ಕನ್ನಡ ಪುಸ್ತಕ ಮಾರಾಟ ಮೇಳ-2026”ನ್ನು ರವೀಂದ್ರ ಕಲಾಕ್ಷೇತ್ರ ಆವರಣ, ಜೆ.ಸಿ. ರಸ್ತೆ, ಬೆಂಗಳೂರು ಇಲ್ಲಿ ಏರ್ಪಡಿಸಿದೆ.
ಈ ಪುಸ್ತಕ ಮೇಳದಲ್ಲಿ ಕನ್ನಡ ಪ್ರಕಾಶಕರು/ಮಾರಾಟಗಾರರು ಭಾಗವಹಿಸಬಹುದಾಗಿದ್ದು, ಮಳಿಗೆಯೊಂದಕ್ಕೆ ರೂ.1,000-00 ಗಳ ಭದ್ರತಾ ಠೇವಣಿ ಡಿ.ಡಿ.ಯನ್ನು ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು – ಅವರ ಹೆಸರಿನಲ್ಲಿ ಡಿಡಿ ಸಲ್ಲಿಸಬೇಕು. ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಪ್ರಕಾಶಕರು/ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ಕಚೇರಿ ಅಥವಾ ಪ್ರಾಧಿಕಾರದ ವೆಬ್‌ಸೈಟ್ https://kpp.karnataka.gov.in ನಲ್ಲಿ ಉಚಿತವಾಗಿ ಪಡೆದುಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ದಿನಾಂಕ:22.09.2026 ರಂದು ಸಂಜೆ 5.00 ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು – ಇವರಿಗೆ ಖುದ್ದಾಗಿ ಅಥವಾ ನೋಂದಾಯಿತ ಅಂಚೆಯ ಮೂಲಕ ಸಲ್ಲಿಸಲು ಕೋರಿದೆ. ಸೀಮಿತ ಮಳಿಗೆಗಳು ಲಭ್ಯವಿರುವುದರಿಂದ ಮೊದಲು ಪ್ರಾಧಿಕಾರದಲ್ಲಿ ಸ್ವೀಕೃತವಾದ ಅರ್ಜಿಗಳಿಗೆ ಆದ್ಯತೆಯ ಮೇರೆಗೆ ಹಂಚಿಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560 002 ದೂ:080-22484516 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ತಿಳಿಸಿದ್ದಾರೆ.

ಶಾಲಾ ಸಮಯಕ್ಕೆ ಬಸ್ ಸೌಕರ್ಯ ಬೇಕು: ರಸ್ತೆ ಮಧ್ಯೆ ನಿಂತು ವಿದ್ಯಾರ್ಥಿಗಳ ಪ್ರತಿಭಟನೆ, ಬೇಡಿಕೆ

0

ತೀರ್ಥಹಳ್ಳಿ ನಗರ ಭಾಗದಿಂದ ತೀರ್ಥಹಳ್ಳಿಗೆ ಆಗಮಿಸುವ ಬಸ್ ವ್ಯವಸ್ಥೆ ಸರಿ ಇಲ್ಲದೆ ಇರುವುದರಿಂದ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿತ್ತು ಆದರೆ ಅದು ಸಹ ಸರಿಯಾದ ಸಮಯಕ್ಕೆ ಬರುತ್ತಿಲ್ಲ ನಮಗೆ ಶಾಲೆಗೆ ಹೋಗಲು ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ರಸ್ತೆ ಮಧ್ಯದಲ್ಲೇ ಕುಳಿತು ಪ್ರತಿಭಟನೆ ನಡೆಸಿದಂತಹ ಘಟನೆ ತೀರ್ಥಹಳ್ಳಿ ತಾಲೂಕಿನ ಕೊಂಡ್ಲೂರು ಬಳಿ ನಡೆದಿದೆ..

ನಗರದಿಂದ ಸರಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀರ್ಥಹಳ್ಳಿಯ ಬೇರೆ ಬೇರೆ ಶಾಲೆ -ಕಾಲೇಜುಗಳಿಗೆ ಬರುತ್ತಿದ್ದು
ನಗರದಿಂದ ಹೊರಡುವ ಬಸ್ ತೀರ್ಥಹಳ್ಳಿಗೆ 10:30 ಕ್ಕೆ ಬರುತ್ತಿದೆ. ಇದರಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಸ್ಯೆಯಾಗುತ್ತಿದೆ.. ನಗರದಿಂದ 8:30 ಕ್ಕೆ ಹೊರಟು ತೀರ್ಥಹಳ್ಳಿಗೆ 9:30ಕ್ಕೆ ಬರುವ ರೀತಿಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಆಗ್ರಹಿಸಿದ್ದಾರೆ..

ಪ್ರತಿಭಟನೆಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯೊಬ್ಬರು ಈಗ ಬರುತ್ತಿರುವ ಬಸ್ ಸಮಯದಲ್ಲಿ ಶಾಲೆಗೆ ತೆರಳಲು ತೊಂದರೆಯಾಗುತ್ತಿದೆ.. ಬಸ್ ಸಮಯದಲ್ಲಿ ಸರಿಯಾದ ಬದಲಾವಣೆ ಮಾಡಿ ಎಲ್ಲಾ ವಿದ್ಯಾರ್ಥಿಗಳಿಗೂ ತೊಂದರೆಯಾಗದ ರೀತಿಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಜೊತೆಗೆ ಮತ್ತೊಂದು ಬಸ್ ಓಡಾಡುವ ರೀತಿ ಮಾಡಿದರೆ ಅನುಕೂಲ ಆಗುತ್ತದೆ ಎಂದು ತಿಳಿಸಿದ್ದಾರೆ..

ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಜೊತೆಗೆ ಪೋಷಕರು ಸೇರಿದಂತೆ ಶಿಕ್ಷಕರು ಇದ್ದರು.

ಮೀನುಮರಿ ಖರೀದಿಗೆ ಸಹಾಯಧನ.ಆನ್ ಲೈನ್ ಅರ್ಜಿ ಆಹ್ವಾನ

0

ಮೀನುಗಾರಿಕೆ ಇಲಾಖೆಯು 2026-27ನೇ ಸಾಲಿನ ಜಿಲ್ಲಾ ವಲಯ ಮೀನುಗಾರಿಕೆ ಯೋಜನೆಯಡಿ ಮೀನುಮರಿ ಖರೀದಿಗೆ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಸ್ವಂತ ಕೊಳ/ಇಲಾಖೆಯಿಂದ ಗುತ್ತಿಗೆ/ ಹರಾಜಿನಲ್ಲಿ ಪಡೆದ ಕೆರೆಯಲ್ಲಿ ವೈಜ್ಞಾನಿಕವಾಗಿ ಮೀನುಮರಿ ಬಿತ್ತನೆ/ ಸ್ವಂತ ಕೊಳ ನಿರ್ಮಿಸಿಕೊಂಡು ಮೀನುಮರಿ ಪಾಲನೆಗೆ ಬಳಸಲು ಖರೀದಿಸಿದವರಿಗೆ ಮಾತ್ರ ಸಹಾಯಧನ ನೀಡಲಾಗುವುದು.
ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಪಂಚಾಯತ್ ಯೋಜನೆಗಳ ಅಧಿಕೃತ ಪೋರ್ಟಲ್ https://shimoga.nic.in ಮುಖಾಂತರ ಆನ್‌ಲೈನ್‌ನಲ್ಲಿ ಸೆ. 30 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಆಯಾ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಮೊಬೈಲ್ ಸಂಖ್ಯೆ ಶಿವಮೊಗ್ಗ-9986040981, ಭದ್ರಾವತಿ-9743370815, ಶಿಕಾರಿಪುರ- 9686939028, ಸಾಗರ -9538044365, ಸೊರಬ -9535386449, ತೀರ್ಥಹಳ್ಳಿ- 8655132438 ಇವರುಗಳನ್ನು ಸಂಪರ್ಕಿಸಬಹುದೆಂದು‌ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿರುತ್ತಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಅಜೋಲಾ ಮೇವಿನ 350 ಘಟಕ ಮಂಜೂರು.₹ 11.02.500 ನಿಗದಿ

0

ರಾಜ್ಯದಲ್ಲಿ ಜಾನುವಾರುಗಳಿಗೆ, ಅದರಲ್ಲೂ ವಿಶೇಷವಾಗಿ ಹಾಲು ನೀಡುವ ದನ-ಕರುಗಳಿಗೆ ಸ್ಥಳೀಯವಾಗಿಯೇ ಪೌಷ್ಟಿಕ ಪೂರಕ ಮೇವನ್ನು ಒದಗಿಸುವ ಸಲುವಾಗಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯು ಅಜೋಲಾ ಉತ್ಪಾದನಾ ಘಟಕಗಳನ್ನು ಉತ್ತೇಜಿಸಲು ಮಹತ್ವದ ಯೋಜನೆ ಹಮ್ಮಿಕೊಂಡಿದೆ. ಮಳೆಯ ಅಭಾವ, ಹಸಿರು ಮೇವಿನ ಕೊರತೆ ಹಾಗೂ ವ್ಯತ್ಯಾಸದ ಸಂದರ್ಭಗಳಲ್ಲಿ ಪ್ರೋಟೀನ್, ಖನಿಜಾಂಶಗಳು ಸೇರಿದಂತೆ ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವ ಅಜೋಲಾವನ್ನು ಪೂರಕ ಆಹಾರವಾಗಿ ಬಳಸಬಹುದಾಗಿದೆ.
ಈ ಯೋಜನೆಯಡಿ ರಾಜ್ಯದ ಎಲ್ಲಾ 31 ಜಿಲ್ಲೆಗಳ 240 ತಾಲ್ಲೂಕುಗಳಲ್ಲಿ ಒಟ್ಟು 3,78,00,000 ರೂಪಾಯಿಗಳ ವೆಚ್ಚದಲ್ಲಿ 12,000 ಅಜೋಲಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಜಿಲ್ಲಾವಾರು ಭೌತಿಕ ಮತ್ತು ಆರ್ಥಿಕ ಗುರಿಯನ್ನು ನಿಗದಿಪಡಿಸಲಾಗಿದೆ. ಪ್ರತಿ ಘಟಕ ಸ್ಥಾಪನೆಗೆ ಅಂದಾಜು 3,150 ರೂಪಾಯಿ ವೆಚ್ಚವಾಗಲಿದೆ.
ಬೆಳಗಾವಿ ಜಿಲ್ಲೆಯಲ್ಲಿ 15 ತಾಲ್ಲೂಕುಗಳಿದ್ದು 750 ಘಟಕಗಳಿಗೆ 23,62,500 ರೂಪಾಯಿ ನಿಗದಿಪಡಿಸಲಾಗಿದೆ. ವಿಜಯಪುರ ಜಿಲ್ಲೆಯ 13 ತಾಲ್ಲೂಕುಗಳಿಗೆ 650 ಘಟಕಗಳಿಗೆ 20,47,500 ರೂಪಾಯಿ ಹಾಗೂ ಉತ್ತರ ಕನ್ನಡ ಜಿಲ್ಲೆಯ 12 ತಾಲ್ಲೂಕುಗಳಿಗೆ 600 ಘಟಕಗಳಿಗೆ 18,90,000 ರೂಪಾಯಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಕಲಬುರಗಿ ಜಿಲ್ಲೆಯ 11 ತಾಲ್ಲೂಕುಗಳಿಗೆ 550 ಘಟಕಗಳಿಗಾಗಿ 17,32,500 ರೂಪಾಯಿ ವೆಚ್ಚವಾಗಲಿದೆ.
ಬಾಗಲಕೋಟೆ ಜಿಲ್ಲೆಯ 10 ತಾಲ್ಲೂಕು ಮತ್ತು ತುಮಕೂರು ಜಿಲ್ಲೆಯ 10 ತಾಲ್ಲೂಕುಗಳಿಗೆ ತಲಾ 500 ಘಟಕಗಳಂತೆ ತಲಾ 15,75,000 ರೂಪಾಯಿಗಳನ್ನು ನಿಗದಿಗೊಳಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ 9 ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆಯ 9 ತಾಲ್ಲೂಕು ಹಾಗೂ ಮೈಸೂರು ಜಿಲ್ಲೆಯ 9 ತಾಲ್ಲೂಕುಗಳಿಗೆ ತಲಾ 450 ಘಟಕಗಳನ್ನು ಸ್ಥಾಪಿಸಲು ತಲಾ 14,17,500 ರೂಪಾಯಿ ಕಾಯ್ದಿರಿಸಲಾಗಿದೆ.
ಬೀದರ್ ಜಿಲ್ಲೆಯ 8 ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆಯ 8 ತಾಲ್ಲೂಕು, ಧಾರವಾಡ ಜಿಲ್ಲೆಯ 8 ತಾಲ್ಲೂಕು, ಹಾಸನ ಜಿಲ್ಲೆಯ 8 ತಾಲ್ಲೂಕು, ಹಾವೇರಿ ಜಿಲ್ಲೆಯ 8 ತಾಲ್ಲೂಕು ಮತ್ತು ರಾಯಚೂರು ಜಿಲ್ಲೆಯ 8 ತಾಲ್ಲೂಕುಗಳಿಗೆ ತಲಾ 400 ಘಟಕಗಳನ್ನು ಹಂಚಿಕೆ ಮಾಡಲಾಗಿದ್ದು, ಪ್ರತಿಯೊಂದು ಜಿಲ್ಲೆಗೆ ತಲಾ 12,60,000 ರೂಪಾಯಿ ಅನುದಾನ ನೀಡಲಾಗಿದೆ.
ಗದಗ ಜಿಲ್ಲೆಯ 7 ತಾಲ್ಲೂಕು, ಕೊಪ್ಪಳ ಜಿಲ್ಲೆಯ‌ 7 ತಾಲ್ಲೂಕು, ಮಂಡ್ಯ ಜಿಲ್ಲೆಯ 7 ತಾಲ್ಲೂಕು, ಶಿವಮೊಗ್ಗ ಜಿಲ್ಲೆಯ 7 ತಾಲ್ಲೂಕು ಮತ್ತು ಉಡುಪಿ ಜಿಲ್ಲೆಯ 7 ತಾಲ್ಲೂಕುಗಳಿಗೆ ತಲಾ 350 ಘಟಕಗಳಿಗೆ ತಲಾ 11,02,500 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕು, ದಾವಣಗೆರೆ ಜಿಲ್ಲೆಯ 6 ತಾಲ್ಲೂಕು, ಕೋಲಾರ ಜಿಲ್ಲೆಯ 6 ತಾಲ್ಲೂಕು, ವಿಜಯನಗರ ಜಿಲ್ಲೆಯ 6 ತಾಲ್ಲೂಕು ಹಾಗೂ ಯಾದಗಿರಿ ಜಿಲ್ಲೆಯ 6 ತಾಲ್ಲೂಕುಗಳಿಗೆ ತಲಾ 300 ಘಟಕಗಳ ಗುರಿ ನೀಡಲಾಗಿದ್ದು, ತಲಾ 9,45,000 ರೂಪಾಯಿ ವೆಚ್ಚವಾಗಲಿದೆ.
ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕು, ಬಳ್ಳಾರಿ ಜಿಲ್ಲೆಯ 5 ತಾಲ್ಲೂಕು, ಚಾಮರಾಜನಗರ ಜಿಲ್ಲೆಯ‌ 5 ತಾಲ್ಲೂಕು, ಕೊಡಗು ಜಿಲ್ಲೆಯ 5 ತಾಲ್ಲೂಕು ಮತ್ತು ರಾಮನಗರ 5 ತಾಲ್ಲೂಕುಗಳಿಗೆ ತಲಾ 250 ಘಟಕ ಸ್ಥಾಪನೆಗೆ ತಲಾ 7,87,500 ರೂಪಾಯಿ ನೀಡಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳಿಗೆ 200 ಘಟಕ ಸ್ಥಾಪಿಸಲು 6,30,000 ರೂಪಾಯಿ ವೆಚ್ಚ ಮಾಡಲಾಗುವುದು.
ತಾಂತ್ರಿಕ ಹಾಗೂ ವೆಚ್ಚದ ವಿವರ:
ಈ ಅಜೋಲಾ ಘಟಕಗಳನ್ನು ರೈತರ ಮನೆ ಅಥವಾ ಕೊಟ್ಟಿಗೆಯ ಸಮೀಪವೇ ಕಡಿಮೆ ಸ್ಥಳದಲ್ಲಿ ನಿರ್ಮಿಸಬಹುದಾಗಿದೆ. ಸುಮಾರು 10 ಅಡಿ ಉದ್ದ, 4 ಅಡಿ ಅಗಲ ಹಾಗೂ 1 ಅಡಿ ಆಳದ (2.60 ಮೀ. x 1.60 ಮೀ.) ಅಳತೆಯಲ್ಲಿ ಘಟಕವನ್ನು ನಿರ್ಮಿಸಲಾಗುತ್ತದೆ.
ಪ್ರತಿ ಘಟಕದ ಒಟ್ಟು ವೆಚ್ಚವಾದ 3,150 ರೂಪಾಯಿ ಯಲ್ಲಿ ಸಾಮಗ್ರಿ ಹಾಗೂ ಕೂಲಿ ವೆಚ್ಚ ಸೇರಿದೆ. ಯುವಿ-ಸ್ಟೆಬಿಲೈಸ್ಡ್ ಎಚ್‌ಡಿಪಿಇ ಶೀಟ್ (450 GSM, 10×6 ಅಡಿ) – 1,350 ರೂಪಾಯಿ
ಶೇಕಡಾ 80 ರಷ್ಟು ನೆರಳು ಬಲೆ (Shade Net) ಮತ್ತು ಬಿದಿರು/ಜಿಐ ಫ್ರೇಮ್ – 650 ರೂಪಾಯಿ
ಫಲವತ್ತಾದ ಮಣ್ಣು, ಸಗಣಿ ಮತ್ತು ಸೂಪರ್ ಫಾಸ್ಫೇಟ್ ಮಿಶ್ರಣ – 250 ರೂಪಾಯಿ
ಅಜೋಲಾ ತಳಿ/ಬೀಜ (Starter Culture/Inoculum) 2 ಕೆಜಿ – 200 ರೂಪಾಯಿ
(ಸಾಮಗ್ರಿಗಳ ಒಟ್ಟು ವೆಚ್ಚ: 2,450 ರೂಪಾಯಿ)
ಸ್ಥಳ ಸಿದ್ಧತೆ, ತೊಟ್ಟಿ ಅಳವಡಿಕೆ, ಸಂರಕ್ಷಣೆ ಮತ್ತು ಬೀಜ ಬಿತ್ತನೆ ಕೆಲಸಕ್ಕಾಗಿ 2 ಮಾನವ ದಿನಗಳ ಕೂಲಿ ವೆಚ್ಚ (ದರ ದಿನಕ್ಕೆ 350 ರೂ. ನಂತೆ) – 700 ರೂಪಾಯಿ.
ಅನುಷ್ಠಾನ ಮತ್ತು ಮಾರ್ಗದರ್ಶಿ ಸೂತ್ರಗಳು:
ಜಿಲ್ಲೆಗೆ ನಿಗದಿಪಡಿಸಿದ ಗುರಿಯನ್ನು ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿವಾರು ಹಂಚಿಕೆ ಮಾಡಿ, ಸೂಕ್ತ ಸ್ಥಳ ಮತ್ತು ನೀರಿನ ಲಭ್ಯತೆ ಇರುವ ಜಾನುವಾರು ಸಾಕಣೆದಾರರನ್ನು ಆದ್ಯತೆಯ ಮೇಲೆ ಆಯ್ಕೆ ಮಾಡಲಾಗುವುದು. ಕಲುಷಿತ ನೀರಿನಲ್ಲಿ ಅಜೋಲಾ ಬೆಳೆಸಿದರೆ ಮಾಲಿನ್ಯಕಾರಕಗಳ ಅಪಾಯವಿರುವುದರಿಂದ ಕೇವಲ ಸ್ವಚ್ಛ ನೀರು ಲಭ್ಯವಿರುವ ಸ್ಥಳಗಳನ್ನಷ್ಟೇ ಆಯ್ಕೆ ಮಾಡಲಾಗುತ್ತದೆ. ಫಲಾನುಭವಿಗಳಿಗೆ ಅಜೋಲಾ ಉತ್ಪಾದನೆ, ಕೊಯ್ದು, ಸ್ವಚ್ಛತೆ, ಸಂಸ್ಕರಣೆ ಹಾಗೂ ಜಾನುವಾರುಗಳಿಗೆ ನೀಡುವ ಕುರಿತು ತಾಂತ್ರಿಕ ತರಬೇತಿ ನೀಡಲಾಗುತ್ತದೆ.
ಯೋಜನೆಯನ್ನು VB-G RAM G ಮಾರ್ಗಸೂಚಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಗೊಳಪಟ್ಟು ಅನುಷ್ಠಾನಗೊಳಿಸಲಾಗುತ್ತದೆ. ಪ್ರತಿಯೊಂದು ಘಟಕದ ಫಲಾನುಭವಿಯ ವಿವರಗಳು, ಆಧಾರ್, ಜಿಪಿಎಸ್ ಸ್ಥಳ (GPS Location), ಕಾರ್ಯನಿರ್ವಹಣೆಯ ಮೊದಲು ಮತ್ತು ನಂತರದ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ದಾಖಲಿಸಲಾಗುತ್ತದೆ. ಜಿಲ್ಲಾ ಉಪ ನಿರ್ದೇಶಕರು ಮಾಸಿಕ ವೇಳಾಪಟ್ಟಿ ಸಿದ್ಧಪಡಿಸಿ ಅನುಷ್ಠಾನಗೊಳಿಸಲಿದ್ದು, ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಪ್ರಗತಿ ವರದಿಯನ್ನು ರಾಜ್ಯ ಕಚೇರಿಗೆ ಸಲ್ಲಿಸಬೇಕೆಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

Sahyadri Narayana Multispeciality Hospital ಡಾ.ಶರತ್ ಸಂಗನಗೌಡರ್ ಅವರ ಪ್ರಬಂಧಕ್ಕೆ ತೃತೀಯ ಅತ್ಯುತ್ತಮ ಪ್ರಶಸ್ತಿ

0

Sahyadri Narayana Multispeciality Hospital ಶಿವಮೊಗ್ಗ ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಶರತ್ ಸಂಗನಗೌಡರ್‌ ರವರು ಸಿನ್ಸಿಟಿಯಂ ಹೃದಯ ಆರೋಗ್ಯ ಹಾಗೂ ಸಂಶೋಧನಾ ಪ್ರತಿಷ್ಠಾನದಿಂದ ಕೇರಳಂನ ಕೊಚ್ಚಿಯಲ್ಲಿ ಇತ್ತೀಚೆಗೆ ಆಂಜಿಯೋಪ್ಲಾಸ್ಟಿ ಬಗ್ಗೆ ನಡೆದ ಚಿಪ್ ಸಮ್ಮಿಟ್ – 2026 ಅಂತಾರಾಷ್ಟ್ರೀಯ ಹೃದ್ರೋಗ ತಜ್ಞರ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೂರನೇ ಅತ್ಯುತ್ತಮ ಪ್ರಶಸ್ತಿ ದೊರಕಿದೆ. ಮುಚ್ಚಿ ಹೋಗಿರುವ ಹೃದಯದ ಪ್ರಮುಖ ರಕ್ತನಾಳವನ್ನು ಮತ್ತೆ ಕಾರ್ಯನಿರ್ವಹಿಸುವಂತೆ ಮಾಡುವ ವಿಷಯದ ಬಗ್ಗೆ ಡಾ.ಶರತ್ ರವರು ಸಮ್ಮೇಳನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.

ಶಿವಮೊಗ್ಗ ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ ಸುರೇಶ್ ಜಮ್ಮಲದಿನ್ನಿ ಅವರ ಹಿಂದೂಸ್ತಾನಿ ಹಾಡುಗಾರಿಕೆ

0

ಶಿವಮೊಗ್ಗ :- ನಗರದ ಸಾಗರ ರಸ್ತೆಯ ಡಾ. ಪುಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸಂಗೀತ ವಿದ್ಯಾಲಯ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮ ಉಚಿತ ಸಂಸ್ಕೃತ ಪಾಠ ಶಾಲೆಯಲ್ಲಿ ಗಾನಲಹರಿ ೧೨೩ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮವನ್ನು ಸೆ. ೧೧ರ ಸಂಜೆ ೬.೩೦ಕ್ಕೆ ಆಯೋಜಿಸಲಾಗಿದೆ.
ರಾಜ್ಯ ಪ್ರಶಸ್ತಿ ಪುgಸ್ಕತ ಆರ್.ಬಿ. ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸುವರು. ನಗರದ ಮಹೇಶ್ವರಿ ಭಜನಾ ಮಂಡಳಿಯಿಂದ ಭಜನಾ ಸೇವೆ ಮತ್ತು ಆಶ್ರಮದ ಅಂಧ ಮಕ್ಕಳು ಪ್ರಾರ್ಥಿಸಲಿದ್ದಾರೆ. ಕಡೂರಿನ ಹಿಂದೂಸ್ಥಾನಿ ಗಾಯಕರಾದ ಸುರೇಶ್ ಜಮ್ಮಲದಿನ್ನಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾಜ್ಯ ಪ್ರಶಸ್ತಿ ಪುರಸ್ಕತ ರಾಮಣ್ಣ ಭಜಂತ್ರಿ, ವೀರಭದ್ರಶಾಸ್ತ್ರಿ ವೇದ ಘೋಷ, ತುಕಾರಾಂ ರಂಗದೋಳ್, ವಿನಾಯಕ ಭಟ್ ತಬಲ, ಸಿದ್ದಣ್ಣ ಬಡಿಗೇರ್ ಹಾರ್‍ಮೋನಿಯಂ ಜೊತೆ ಸಾಥ್ ನೀಡಲಿದ್ದಾರೆ. ರೇವಣ್ಣ ಸಿದ್ದಯ್ಯ ಶಾಸ್ತ್ರಿಗಳು ನಿರೂಪಿಸಲಿದ್ದಾರೆ.