Sunday, August 2, 2026
Sunday, August 2, 2026
Home Blog Page 5

ಶಿವಮೊಗ್ಗ ಅಂಚೆ ಇಲಾಖೆಯಲ್ಲಿ ಪ್ರತಿನಿಧಿಗಳ ನೇಮಕಾತಿಗೆ ನೇರ ಸಂದರ್ಶನ: ಅರ್ಜಿ ಆಹ್ವಾನ

0

ಶಿವಮೊಗ್ಗ ಅಂಚೆ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ನೇರ ಸಂದರ್ಶನವು ಆಗಸ್ಟ್ 13 ಮತ್ತು 14 ರಂದು ಬೆಳಿಗ್ಗೆ 11 ಗಂಟೆಗೆ ಅಂಚೆ ಅಧೀಕ್ಷಕರ ಕಚೇರಿ, ಕೋಟೆ ರಸ್ತೆ, ಶಿವಮೊಗ್ಗ ವಿಭಾಗ, ಶಿವಮೊಗ್ಗ-2ರಲ್ಲಿ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ, ಸ್ವವಿವರ ಹಾಗೂ ಶೈಕ್ಷಣಿಕ ಪ್ರಮಾಣಪತ್ರಗಳ ನಕಲುಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಅಭ್ಯರ್ಥಿಗಳು ಕಡ್ಡಾಯವಾಗಿ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ ಇರುವುದಿಲ್ಲ.
ನಿರುದ್ಯೋಗಿ ಹಾಗೂ ಸ್ವಯಂ ಉದ್ಯೋಗ ನಿರತ ಯುವಕರು, ವಿಮಾ ಕಂಪನಿಗಳ ಮಾಜಿ ಏಜೆಂಟರು ಮತ್ತು ಸಲಹೆಗಾರರು, ಮಾಜಿ ಸೈನಿಕರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮಂಡಳದ ಕಾರ್ಯಕರ್ತೆಯರು, ನಿವೃತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಸೇರಿದಂತೆ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಸಂವಹನ ಕೌಶಲ್ಯ ಹಾಗೂ ವಿಮಾ ಮಾರಾಟ ಕ್ಷೇತ್ರದಲ್ಲಿ ಪೂರ್ವಾನುಭವ ಹೊಂದಿರುವವರಿಗೆ ವಿಶೇಷ ಆದ್ಯತೆ ಇರುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ರೂ.5,000 ಮೌಲ್ಯದ ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ ಪತ್ರದ ರೂಪದಲ್ಲಿ ಭದ್ರತಾ ಠೇವಣಿ ಇಡಬೇಕಾಗುತ್ತದೆ. ಆಯ್ಕೆಯಾದ ನೇರ ಪ್ರತಿನಿಧಿಗಳಿಗೆ ಅವರು ಮಾಡಿದ ವ್ಯವಹಾರದ ಆಧಾರದ ಮೇಲೆ ಇಲಾಖೆಯ ನಿಯಮಾನುಸಾರ ಪ್ರೋತ್ಸಾಹಧನ ನೀಡಲಾಗುವುದು. ಟಿಎ/ಡಿಎ ಸೇರಿದಂತೆ ಇತರೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ.ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಭತ್ಯೆ ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಅಂಚೆ ಜೀವ ವಿಮಾ ಅಭಿವೃದ್ಧಿ ಅಧಿಕಾರಿಗಳು, ದೂ.ಸಂ: 9036842084 ನ್ನು ಸಂಪರ್ಕಿಸಬಹುದು ಎಂದು ಅಂಚೆ ಅಧೀಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವ್ಯಸನ ಮುಕ್ತ ದಿನವನ್ನಾಗಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದಂದು ವಿಶೇಷ ಕಾರ್ಯಕ್ರಮ

0

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಹ್ಯಾದ್ರಿ ಕಲಾ ಕಾಲೇಜು
ಹಾಗೂ ಎನ್.ಎಸ್.ಎಸ್. ಘಟಕ 1 ಮತ್ತು 2, ಶಿವಮೊಗ್ಗ ,ಇವರ ಸಂಯುಕ್ತ ಆಶ್ರಯದಲ್ಲಿ
ಶ್ರೀ ಮ.ನಿ.ಪ್ರ.ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಅಂಗವಾಗಿ ಆ.01 ರ ಬೆಳಿಗ್ಗೆ 10.30 ಕ್ಕೆ ಸಹ್ಯಾದ್ರಿ ಕಲಾ ಕಾಲೇಜು ಸಭಾಂಗಣದಲ್ಲಿ ವ್ಯಸನಮುಕ್ತ ದಿನಾಚರಣೆಯನ್ನು‌ ಆಯೋಜಿಸಲಾಗಿದೆ.
ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.
ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಿರಾಜ್ ಅಹಮದ್ ಎಸ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭೆ, ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಸಹ್ಯಾದ್ರಿ ಕಲಾ ಕಾಲೇಜಿನ ಎನ್ ಎಸ್ ಎಸ್ ಘಟಕ1,2 ರ ಕಾರ್ಯಕ್ರಮಾಧಿಕಾರಿಗಳು, ವಿದ್ಯಾರ್ಥಿ ಕ್ಷೇಮಾಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಪಾಲ್ಗೊಳ್ಳುವರು.
ಶಿವಮೊಗ್ಗ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ
ಡಾ. ಸಚಿನ್ ಓ. ಎನ್. ವಿಶೇಷ ಉಪನ್ಯಾಸ ನೀಡುವರು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು (ಪ್ರ) ತುಕಾರಾಮ್ ರಾವ್ ಬಿ. ವಿ. ತಿಳಿಸಿದ್ದಾರೆ.

ಪಿಳ್ಳಂಗೆರೆಯಲ್ಲಿ ಡಿಜಿಪೇ ಲೈಟ್ ಸೇವೆಯಲ್ಲಿ ಡೆಬಿಟ್ ಕಾರ್ಡ್ ಮೂಲಕ ನಗದು ವಿತರಣೆ

0

ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ), ವತಿಯಿಂದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರ ಮಾರ್ಗದರ್ಶನದಂತೆ ಶಿವಮೊಗ್ಗ ತಾಲೂಕಿನಲ್ಲಿ ಸಿ.ಎಸ್.ಸಿ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಎಲ್ಲಾ ಹಣ ಸಂಗ್ರಹಣಾ ಕೇಂದ್ರಗಳಲ್ಲಿ ಡಿಜಿ ಪೇ ಲೈಟ್ ಕಾರ್ಯಕ್ರಮವನ್ನು ಪ್ರಥಮವಾಗಿ ಪಿಳ್ಳಂಗೆರೆ ವಲಯದ ಹೊಳೆಬೆನವಳ‍್ಳಿ ಕಾರ್ಯಕ್ಷೇತ್ರದಲ್ಲಿ ಉದ್ಘಾಟನೆ ಮಾಡಲಾಯಿತು.
ಶಿವಮೊಗ್ಗ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಗಳಾದ ಶ್ರೀಮತಿ ಯಶೋಧರವರು ಡಿಜಿ ಪೇ ಲೈಟ್ ಸೇವೆಯಲ್ಲಿ ಡೆಬಿಟ್ ಕಾರ್ಡ್ ಗಳ ಮೂಲಕ ನಗದು ವಿತರಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತಾಲೂಕು ಯೋಜನಾಧಿಕಾರಿಗಳು ಕಾರ್ಯಕ್ರಮದಿಂದ ಗ್ರಾಮೀಣ ಭಾಗದ ಜನರು ಬ್ಯಾಂಕ್ ಸೇವೆಗಳನ್ನು ಗ್ರಾಮ ಮಟ್ಟದಲ್ಲಿ ಪಡೆದುಕೊಳ್ಳಲು ಅನುಕೂಲವಾಗುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ಶೇಖರ್, ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಶಿವನಾಯಕ್, ವಲಯದ ಮೇಲ್ವಿಚಾರಕರಾದ ಶ್ರೀಮತಿ ಸುಜಾತ, ತಾಲೂಕು ನೋಡಲ್ ಅಧಿಕಾರಿ ಮಹೇಶ್ ಕೆ, ಸೇವಾಪ್ರತಿನಿಧಿ, ಸಿ.ಎಸ್.ಸಿ ಸೇವಾದಾರರು ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು.

ಆಗಸ್ಟ್ 1 & 2 . ಶ್ರೀವಿಜಯ ಕಲಾನಿಕೇತನ ಟ್ರಸ್ಟ್ ನಿಂದ “ಕಲಾ ಸಂಭ್ರಮ- 2026”.

0

ಆಗಸ್ಟ್ ಒಂದು ಮತ್ತು ಎರಡನೇಯ ತಾರೀಕು ಎಂದರೆ ಬರುವ ಶನಿವಾರ ಮತ್ತು ಭಾನುವಾರದಂದು, ಶ್ರೀವಿಜಯ ಕಲಾನಿಕೇತನ ಟ್ರಸ್ಟ್ (ರಿ) ವತಿಯಿಂದ ಕಲಾ ಸಂಭ್ರಮ – ೨೦೨೬ ನಡೆಯಲಿದೆ. ಮೊದಲ ದಿನ, ಕಾಳಿದಾಸ ಕವಿಯ ಸಾಹಿತ್ಯ, ಎಸ್ ವಿ ಪರಮೇಶ್ವರ ಭಟ್ಟ ಅವರ ಅನುವಾದ ಮತ್ತು ವಿ. ಜಿ ಎಸ್ ನಟೇಶ್ ಅವರ ಕನ್ನಡ ಸಾಹಿತ್ಯ ಒಳಗೊಂಡ “ಕವಿಕುಲಗುರು ನಮನ” ನೃತ್ಯ ಕಾರ್ಯಕ್ರಮ ಡಾ|| ಕೆ.ಎಸ್. ಚೈತ್ರಾ ಮತ್ತು ಡಾ|| ಕೆ.ಎಸ್. ಶುಭ್ರತಾ ಅವರಿಂದ ಮತ್ತು ಎರಡನೇಯ ದಿನ, ಡಾ ಕೆ ಎಸ್ ಶುಭ್ರತಾ ಅವರ ವಿದ್ಯಾರ್ಥಿನಿಯರಿಂದ ನೃತ್ಯ ಸಂಭ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪೇಸ್ ಪಿಯು ಕಾಲೇಜಿನಲ್ಲಿ ಸಂಸ್ಕÈತ ಉಪನ್ಯಾಸಕರಾದ ಡಾ ಮೈತ್ರೇಯಿ ಆದಿತ್ಯ, ಸಹೃದಯಿಗಳಾದ ಶ್ರೀಮತಿ ಶಾರದಾ ಶಂಕರ ಭಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗದ ಸಹಾಯಕ ನಿರ್ದೇಶಕರಾದ ಶ್ರೀ ಹೆಚ್.ಉಮೇಶ್ ಆಗಮಿಸುವರು. ಶ್ರೀವಿಜಯದ ಅಧ್ಯಕ್ಷರಾದ ಡಾ|| ಕೆ.ಆರ್. ಶ್ರೀಧರ್, ಅಧ್ಯಕ್ಷತೆ ವಹಿಸುವರು. ಸಂಜೆ ಆರಕ್ಕೆ, ರಾಜೇಂದ್ರ ನಗರದ ಪವಿತ್ರಾಂಗಣದಲ್ಲಿ ನಡೆಯಲಿರುವ ಈ ಕರ‍್ಯಕ್ರಮಕ್ಕೆ, ಕಲಾಭಿಮಾನಿಗಳು ಆಗಮಿಸುವಂತೆ ಶ್ರೀವಿಜಯದ ಕಲಾನಿರ್ದೇಶಕಿ, ಡಾ ಕೆ ಎಸ್ ಪವಿತ್ರ ಕೋರಿದ್ದಾರೆ.

B.Y. Raghavendra ಪೇಜಾವರಶ್ರೀಗಳ ಚಾತುರ್ಮಾಸ್ಯ ವ್ರತವು ದೇಶದಲ್ಲಿ ಶಾಂತಿ,ಸಮೃದ್ಧಿ , ಧರ್ಮ ಹಾಗೂ ಸಾಂಸ್ಕೃತಿಕ ಜಾಗೃತಿಗೆ ಕಾರಣವಾಗಲಿ- ಬಿ.ವೈ.ರಾಘವೇಂದ್ರ.

0

B.Y. Raghavendra ರಾಷ್ಟ್ರ ರಾಜಧಾನಿ ನವದೆಹಲಿಯ ವಸಂತ್ ಕುಂಜ್‌ನಲ್ಲಿರುವ ಶ್ರೀ ವೇದವ್ಯಾಸ ಗುರುಕುಲ ಹಾಗೂ ಶ್ರೀ ಕೃಷ್ಣಧಾಮದಲ್ಲಿ ಉಡುಪಿಯ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ತಮ್ಮ 39ನೇ ಚಾತುರ್ಮಾಸ್ಯ ವ್ರತವನ್ನು ನಿನ್ನೆ ಸಂಕಲ್ಪಿಸಿದ್ದು, ನಿನ್ನೆ ನಡೆದ ಚಾತುರ್ಮಾಸ್ಯ ವ್ರತದ ಉದ್ಘಾಟನಾ ಸಮಾರಂಭದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ.ವೈ.ರಾಘವೇಂದ್ರ ಪಾಲ್ಗೊಂಡಿದ್ದರು. ನಿನ್ನೆ ಗುರುಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ, ಚಾತುರ್ಮಾಸ್ಯ ವ್ರತ ಸಂಕಲ್ಪ ಮಾಡಿದ ಪೂಜ್ಯ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಸಂಸದ ರಾಘವೇಂದ್ರ, ಶ್ರೀಗಳಿಗೆ ವಿಶೇಷ ಪ್ರಣಾಮ, ಗೌರವಗಳನ್ನು ಸಲ್ಲಿಸಿ, ಆಶೀರ್ವಾದ ಪಡೆದರು. ಶ್ರೀಗಳ ದೆಹಲಿ ಚಾತುರ್ಮಾಸ್ಯ ಅತ್ಯಂತ ಯಶಸ್ವಿಯಾಗಲಿ ಎಂದು ಇದೇ ಸಂದರ್ಭದಲ್ಲಿ ಸಂಸದರು ಭಕ್ತಿಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು.

B.Y. Raghavendra ದೆಹಲಿಯಲ್ಲಿ ತಮ್ಮ 39ನೇ ಚಾತುರ್ಮಾಸ್ಯ ವ್ರತದ ಸಂಕಲ್ಪ ಮಾಡಿರುವ ಪೇಜಾವರ ಶ್ರೀಗಳ ಗೌರವಾರ್ಥ ನಡೆದ ಸ್ವಾಗತ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ, ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಶ್ರೀ ಅಲೋಕ್ ಕುಮಾರ್, ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ ಸೇರಿದಂತೆ ಹಲವು ರಾಜಕೀಯ ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ನಿನ್ನೆಯಿಂದ ಸೆಪ್ಟೆಂಬರ್ 26ರವರೆಗೆ ಶ್ರೀಗಳು ದೆಹಲಿಯಲ್ಲೇ ವಾಸ್ತವ್ಯ ಮಾಡಲಿದ್ದು, ತಮ್ಮ ನಿತ್ಯಾನುಷ್ಠಾನ, ಧರ್ಮ ಪ್ರಚಾರ ಇತ್ಯಾದಿ ಕಾರ್ಯಗಳನ್ನು ನೆರವೇರಿಸಲಿದ್ದಾರೆ. ‘ದೆಹಲಿಯಲ್ಲಿ ಪೇಜಾವರ ಶ್ರೀಗಳು ಚಾತುರ್ಮಾಸ್ಯ ವ್ರತ ಕೈಗೊಂಡಿರುವುದರಿಂದ ದೆಹಲಿಯ ಭಕ್ತರಿಗೆ ಉಡುಪಿ ಶ್ರೀ ಕೃಷ್ಣನ ಮತ್ತು ಗುರುಗಳ ವಿಶೇಷ ಅನುಗ್ರಹಾಶೀರ್ವಾದಗಳು ಪ್ರಾಪ್ತವಾಗಲಿದೆ. ದೆಹಲಿಯಲ್ಲಿ ನಡೆಯುತ್ತಿರುವ ಶ್ರೀಗಳ ಚಾತುರ್ಮಾಸ್ಯ ವ್ರತವು ದೇಶದಲ್ಲಿ ಶಾಂತಿ, ಸಮೃದ್ಧಿ, ಧರ್ಮ ಹಾಗೂ ಸಾಂಸ್ಕೃತಿಕ ಜಾಗೃತಿಗೆ ಕಾರಣವಾಗಲಿ ಎಂದು ಶ್ರೀಗಳವರಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪ್ರಾರ್ಥನೆ ಸಲ್ಲಿಸಿದರು.

ಬರಪರಿಸ್ಥಿತಿ: ರೈತರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಿ- ಶಾರದಾ ಪೂರ್ಯಾನಾಯ್ಕ್

0

: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ್ ಅವರು ಬುಧವಾರ ಹಾರನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸ್ಥಳದಲ್ಲೇ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಕುಂಚೇನಹಳ್ಳಿ, ಮಲ್ಲಾಪುರ, ರಾಮನಗರ, ಬಾಳೆಕೊಪ್ಪ, ಹಾರನಹಳ್ಳಿ, ಕೊನಗವಳ್ಳಿ, ತ್ಯಾಜವಳ್ಳಿ ಹಾಗೂ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಕೃಷಿ ಜಮೀನುಗಳು, ಬೆಳೆಗಳ ಸ್ಥಿತಿ ಹಾಗೂ ಕುಡಿಯುವ ನೀರಿನ ಲಭ್ಯತೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ರೈತರಿಂದ ನೇರವಾಗಿ ಮಾಹಿತಿ ಪಡೆದರು.

ರೈತರು ಮಳೆಯ ಅಭಾವದಿಂದ ಬೆಳೆಗಳು ಒಣಗುತ್ತಿರುವುದು, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಕೊರತೆ ಎದುರಾಗಿರುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ಸಮಸ್ಯೆಗಳನ್ನು ಆಲಿಸಿದ ಶಾಸಕರು, ರೈತರ ಸಮಸ್ಯೆಗಳ ಕುರಿತು ಸರ್ಕಾರ ಮತ್ತು ಮಾನ್ಯ ಮುಖ್ಯಮಂತ್ರಿಗಳ ಗಮನಸೆಳೆಯುವ ಮೂಲಕ ತ್ವರಿತ ಪರಿಹಾರ ಕಂಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಗ್ರಾಮವಾರು ಸಮಗ್ರ ವರದಿ ಸಿದ್ಧಪಡಿಸಿ, ಬೆಳೆ ಹಾನಿಯ ನಿಖರ ಮೌಲ್ಯಮಾಪನ ನಡೆಸುವಂತೆ ಹಾಗೂ ಕುಡಿಯುವ ನೀರು, ಮೇವು, ನೀರಾವರಿ ಮತ್ತು ಇತರೆ ಅಗತ್ಯ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಕಲ್ಪಿಸುವಂತೆ ಸೂಚಿಸಿದರು. ಬರ ನಿರ್ವಹಣೆಗೆ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳು ಅರ್ಹ ರೈತರಿಗೆ ತಲುಪುವಂತೆ ಕ್ರಮವಹಿಸುವಂತೆ ನಿರ್ದೇಶನ ನೀಡಿದರು.

ಬರ ಪರಿಸ್ಥಿತಿಯನ್ನು ಕೇವಲ ಕಚೇರಿ ವರದಿಗಳ ಆಧಾರದ ಮೇಲೆ ಅಂದಾಜಿಸುವ ಬದಲು, ನೈಜ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಗ್ರಾಮಗಳಿಗೆ ಭೇಟಿ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು. ರೈತರ ಹಿತಾಸಕ್ತಿ ಸರ್ಕಾರದ ಮೊದಲ ಕರ್ತವ್ಯವಾಗಿದ್ದು, ಯಾವುದೇ ರೈತ ಸಂಕಷ್ಟಕ್ಕೆ ಸಿಲುಕದಂತೆ ಅಗತ್ಯ ನೆರವು ಒದಗಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.

ಬರ ವೀಕ್ಷಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ದಾದಾಪೀರ್, ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸತೀಶ್ ಕಸಟಿ, ಕಾರ್ಯಾಧ್ಯಕ್ಷ ಕಾಂತರಾಜ್ ಸೋಮಿಕೊಪ್ಪ, ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ ದೀಪಕ್ ಪುರ್ಯಾನಾಯ್ಕ್, ಜಿಲ್ಲಾ ಮುಖಂಡ ಕುಮಾರ್ ನಾಯ್ಕ್, ಕಸಟಿ ರುದ್ರೇಶ್, ಗೀತಾ ಸತೀಶ್, ಬಸವರಾಜ್ ಮತ್ತು ಯೋಗೇಶ್ ಸೇರಿದಂತೆ ಸ್ಥಳೀಯ ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಹಿರಿಯ ಮುಖಂಡರು ಹಾಗೂ ರೈತರು ಉಪಸ್ಥಿತರಿದ್ದು, ತಮ್ಮ ಗ್ರಾಮಗಳ ಸಮಸ್ಯೆಗಳನ್ನು ವಿವರಿಸಿ ತ್ವರಿತ ಪರಿಹಾರಕ್ಕೆ ಮನವಿ ಸಲ್ಲಿಸಿದರು.

ಬಾಕ್ಸ್:
ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಅಡಿಕೆ ತೋಟಗಳಲ್ಲಿ ನೂರಾರು ಅಡಿಕೆ ಗಿಡಗಳು ನೆಲಕ್ಕುರುಳಿ ರೈತರಿಗೆ ಅಪಾರ ನಷ್ಟ ಉಂಟಾಗಿದೆ. ಈ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿ (ಎಸ್‌ಡಿಆರ್‌ಎಫ್) ಮಾರ್ಗಸೂಚಿಗಳಡಿ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ದೊರಕುವಂತೆ ವಿಧಾನಸಭೆಯಲ್ಲಿ ಧ್ವನಿಯೆತ್ತಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಶಾಸಕಿ ಶಾರದಾ ಪೂರ್ಯನಾಯ್ಕ್ ಭರವಸೆ ನೀಡಿದರು.

Klive Special Article ಮೋಸದ ಬಲೆಯ ಹಿಂದೆ ಸಿಲುಕಿದವರು.ವಿಶೇಷ ಲೇಖನ:ತಾಜುದ್ದೀನ್ ಖಾನ್.ಶಿವಮೊಗ್ಗ.

0

Klive Special Article ವಿಶ್ವ ಮಾನವ ಕಳ್ಳಸಾಗಣೆ ವಿರುದ್ಧದ ದಿನ –
2026ರ ಘೋಷವಾಕ್ಯ: “Trapped Behind the Scam – ಮೋಸದ ಬಲೆಯ ಹಿಂದೆ ಸಿಲುಕಿದವರು”
ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ: ತಂತ್ರಜ್ಞಾನದ ಯುಗದ ಹೊಸ ಸವಾಲು
“ಮನುಷ್ಯನು ಮಾರಾಟದ ವಸ್ತುವಲ್ಲ; ಅವನಿಗೆ ಗೌರವಯುತ ಬದುಕುವ ಹಕ್ಕಿದೆ”
ಜಾಗೃತಿಯ ಗಂಟೆ: ನಿಮ್ಮ ಮಗುವಿನ ಕನಸು ಮಾರಾಟಕ್ಕಲ್ಲ!

ಪ್ರತಿ ವರ್ಷ ಜುಲೈ 30 ರಂದು ವಿಶ್ವಸಂಸ್ಥೆಯು ಆಚರಿಸುವ “

ಈ ಬಾರಿ ಇನ್ನಷ್ಟು ಗಂಭೀರವಾಗಿದೆ. 2026ರ ಜಾಗತಿಕ ಘೋಷವಾಕ್ಯ “Trapped Behind the Scam – ಮೋಸದ ಬಲೆಯ ಹಿಂದೆ ಸಿಲುಕಿದವರು” ನಮಗೆ ಎಚ್ಚರಿಕೆ ನೀಡುತ್ತಿದೆ.

ಹಿಂದೆ ಕಳ್ಳಸಾಗಣೆ ಎಂದರೆ
ಉದ್ಯೋಗ, ಶಿಕ್ಷಣ, ಮದುವೆ, ಸಿನಿಮಾ, ಮಾಡೆಲಿಂಗ್, ವಿದೇಶಿ ಉದ್ಯೋಗ ಅಥವಾ ಉತ್ತಮ ಜೀವನದ ಸುಳ್ಳು ಭರವಸೆ ನೀಡಿ ವ್ಯಕ್ತಿಗಳನ್ನು ಮೋಸ, ಬೆದರಿಕೆ ಅಥವಾ ಬಲವಂತದ ಮೂಲಕ ಸಾಗಿಸಿ ಲೈಂಗಿಕ ಶೋಷಣೆ, ಬಲವಂತದ ದುಡಿಮೆ, ಗೃಹದಾಸ್ಯ, ಭಿಕ್ಷಾಟನೆ, ಬಾಲ್ಯವಿವಾಹ, ಅಂಗಾಂಗ ಕಸಿ ಅಥವಾ ಆನ್‌ಲೈನ್ ಅಪರಾಧ ಚಟುವಟಿಕೆಗಳಿಗೆ ಬಳಸುವುದು ಮಾನವ ಕಳ್ಳಸಾಗಣೆ.

ಇದು ಕೇವಲ ಒಂದು ಅಪರಾಧವಲ್ಲ; ಮಾನವೀಯತೆ, ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳ ಮೇಲಿನ ಘೋರ ದಾಳಿಯಾಗಿದೆ.ಗಡಿ ದಾಟಿಸುವುದು, ಲೈಂಗಿಕ ಶೋಷಣೆ ಮಾತ್ರವಾಗಿತ್ತು.
ಆದರೆ ಇಂದು ಅದು ಮೊಬೈಲ್ ಪರದೆಯಿಂದ ಮನೆಗೆ ನುಗ್ಗಿದೆ ವಾಟ್ಸ್ಆ್ಯಪ್, ಟೆಲಿಗ್ರಾಂ, ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ನಕಲಿ ಉದ್ಯೋಗ ವೆಬ್‌ಸೈಟ್‌ಗಳ ಮೂಲಕ ಯುವಕರು ಮತ್ತು ಯುವತಿಯರನ್ನು ಸಂಪರ್ಕಿಸಿ ಹೆಚ್ಚಿನ ಸಂಬಳ, ವಿದೇಶಿ ಉದ್ಯೋಗ ಅಥವಾ ಸುಲಭ ಆದಾಯದ ಭರವಸೆ ನೀಡಲಾಗುತ್ತದೆ.”ವಿದೇಶದಲ್ಲಿ ಲಕ್ಷ ಸಂಬಳ”, “ಮಾಡೆಲಿಂಗ್ ಅವಕಾಶ”, “ಆನ್‌ಲೈನ್ ಕೆಲಸ” ಎಂಬ ಆಮಿಷದ ಮೂಲಕ ನಮ್ಮ ಮಕ್ಕಳು ಮತ್ತು ಯುವಜನರನ್ನು ಸೈಬರ್ ಅಪರಾಧಕ್ಕೆ ತಳ್ಳಲಾಗುತ್ತಿದೆ. ಇದು ಮಾನವೀಯತೆಯ ವಿರುದ್ಧದ ಅತ್ಯಂತ ಕ್ರೂರ ಅಪರಾಧ.

  1. ಸಮಸ್ಯೆಯ ವ್ಯಾಪ್ತಿ ಎಷ್ಟು? – ಅಂಕಿಅಂಶಗಳು ಕಣ್ಣು ತೆರೆಯುತ್ತವೆ*
  • ಜಾಗತಿಕವಾಗಿ: UNODC ಪ್ರಕಾರ, ಪತ್ತೆಯಾದ ಸಂತ್ರಸ್ತರಲ್ಲಿ 38% ಮಕ್ಕಳು ಮತ್ತು 60% ಮಹಿಳೆಯರು. 2023ರಲ್ಲಿ ಪೂರ್ವ-ಆಗ್ನೇಯ ಏಷ್ಯಾದಲ್ಲಿ ಆನ್‌ಲೈನ್ ವಂಚನೆಯಿಂದ 18 ರಿಂದ 37 ಬಿಲಿಯನ್ ಡಾಲರ್ ನಷ್ಟ. ಇದರ ಹಿಂದೆ ಮಾನವ ಕಳ್ಳಸಾಗಣೆ ಜಾಲಗಳಿವೆ.
  • ಭಾರತದಲ್ಲಿ: NCRB ಪ್ರಕಾರ ಪ್ರತಿ ವರ್ಷ ಸಾವಿರಾರು ಮಹಿಳೆಯರು ಮತ್ತು ಮಕ್ಕಳು ಈ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ದಿನೇ ದಿಂದ ದಿನಕ್ಕೆ ಮಕ್ಕಳು ಕಾಣೆಯಾಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದು ಅವರಲ್ಲಿ ಶೇ. 75% ಬಾಲಕಿಯರು.
  • ಕರ್ನಾಟಕದಲ್ಲಿ: ಬೆಂಗಳೂರು, ಬೆಳಗಾವಿ, ಕಲಬುರಗಿ, ರಾಯಚೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಿಂದ ಹೆಚ್ಚು ಪ್ರಕರಣಗಳು. 12-17 ವರ್ಷದ ಮಕ್ಕಳು ಮತ್ತು 18-25 ವರ್ಷದ ಯುವತಿಯರು ಮುಖ್ಯ ಟಾರ್ಗೆಟ್.
  1. “ಮೋಸದ ಬಲೆ” ಹೇಗೆ ಕೆಲಸ ಮಾಡುತ್ತದೆ?

ಇಂದಿನ ಕಳ್ಳಸಾಗಣೆಗಾರರು ಬೀದಿಯಲ್ಲಿ ಅಲ್ಲ, ವಾಟ್ಸ್ಆ್ಯಪ್, ಟೆಲಿಗ್ರಾಂ, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ನಲ್ಲಿದ್ದಾರೆ.

ಹಂತ 1: “ದುಬೈ/ಥೈಲ್ಯಾಂಡ್‌ನಲ್ಲಿ 50,000 ಸಂಬಳದ ಕಂಪ್ಯೂಟರ್ ಕೆಲಸ” ಎಂದು ಜಾಹೀರಾತು
ಹಂತ 2: ವಿಮಾನ ಟಿಕೆಟ್, ವೀಸಾ ಕೊಡಿಸಿ ಕರೆದೊಯ್ಯುವುದು
ಹಂತ 3: ಅಲ್ಲಿಗೆ ಹೋದ ಮೇಲೆ ಪಾಸ್‌ಪೋರ್ಟ್ ವಶ. ನಂತರ ಪ್ರೇಮ ವಂಚನೆ, ಕ್ರಿಪ್ಟೋ ಹಗರಣ, ಆನ್‌ಲೈನ್ ಹಣ ವಂಚನೆ ಮಾಡಲು ಬಲವಂತ
ಹಂತ 4: ನಿರಾಕರಿಸಿದರೆ ಹಲ್ಲೆ, ಹಸಿವು, ಬೆದರಿಕೆ ಮತ್ತು ಸಾಲದ ಬಂಧನ

ಇದು ಕೇವಲ ವಂಚನೆಯಲ್ಲ. ಇದು ಮಾನವ ಸ್ವಾತಂತ್ರ್ಯದ ಅಪಹರಣ.

  1. ನೈಜ ಘಟನೆಗಳು – ನಮ್ಮ ಮಧ್ಯೆ ನಡೆದ ಸತ್ಯ

Klive Special Article ಪ್ರಕರಣ 1: ಅಂತಾರಾಷ್ಟ್ರೀಯ “ಸ್ಕ್ಯಾಮ್ ಸೆಂಟರ್” ಬಲೆ
ಕಳೆದ 2 ವರ್ಷಗಳಲ್ಲಿ ಭಾರತದ ಸಾವಿರಾರು ಯುವಕರು ಮ್ಯಾನ್ಮಾರ್, ಕಾಂಬೋಡಿಯಾ, ಲಾವೋಸ್‌ಗೆ “ಉದ್ಯೋಗ” ಎಂದು ಹೋದರು. ಅಲ್ಲಿ ಅವರನ್ನು ಕರೆದು ಆನ್‌ಲೈನ್ ವಂಚನೆ ಮಾಡಿಸಲಾಯಿತು. ಭಾರತ ಸರ್ಕಾರದ ರಾಜತಾಂತ್ರಿಕ ಪ್ರಯತ್ನದಿಂದ ಅನೇಕರನ್ನು ರಕ್ಷಿಸಲಾಯಿತು. ಇದೇ “Trapped Behind the Scam”.

ಪ್ರಕರಣ 2: ಶಿವಮೊಗ್ಗ ಜಿಲ್ಲೆ
“ಬೆಂಗಳೂರಿನಲ್ಲಿ ಉತ್ತಮ ಕೆಲಸ” ಎಂಬ ನೆಪದಲ್ಲಿ ಕರೆದೊಯ್ಯಲಾದ ಅಪ್ರಾಪ್ತ ಬಾಲಕಿಯನ್ನು DCPU, CWC ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಿಸಲಾಯಿತು. ಇಂದು ಆಕೆ ಶಾಲೆಗೆ ಮರಳಿದ್ದಾಳೆ.

ಪ್ರಕರಣ 3: ಒಂದು SMS ಉಳಿಸಿದ ಜೀವ
17 ವರ್ಷದ ಬಾಲಕಿಗೆ ಇನ್‌ಸ್ಟಾಗ್ರಾಮ್‌ನಲ್ಲಿ “ವಿದೇಶಿ ಉದ್ಯೋಗ” ಆಮಿಷ ಬಂದಾಗ, ಆಕೆ ಅನುಮಾನಗೊಂಡು ಪೋಷಕರಿಗೆ ಮತ್ತು ಪೊಲೀಸರಿಗೆ ಹೇಳಿದಳು. ಆ ಒಂದು ನಿರ್ಧಾರ ದೊಡ್ಡ ಜಾಲವನ್ನು ಬಯಲು ಮಾಡಿತು.

  1. ಪೋಷಕರಿಗೆ, ಮಕ್ಕಳಿಗೆ, ಯುವಕರಿಗೆ – ಪ್ರಮುಖ ಸಲಹೆಗಳು

ಪೋಷಕರೇ, ದಯವಿಟ್ಟು ಗಮನಿಸಿ:

  1. “ತುಂಬಾ ಒಳ್ಳೆಯ ಆಫರ್” = ಅಪಾಯದ ಗಂಟೆ. ಯಾವುದೇ ಉದ್ಯೋಗ/ವಿದೇಶಿ ಅವಕಾಶವನ್ನು ಕಂಪನಿ ಹೆಸರು, ವಿಳಾಸ ಪರಿಶೀಲಿಸದೆ ನಂಬಬೇಡಿ.
  2. ಮಕ್ಕಳ ಮೊಬೈಲ್ ಸ್ನೇಹಿತನಲ್ಲ, ಕಾವಲುಗಾರನಾಗಿರಲಿ. ಅವರ ಆನ್‌ಲೈನ್ ಚಟುವಟಿಕೆ ಬಗ್ಗೆ ಮುಕ್ತವಾಗಿ ಮಾತನಾಡಿ.
  3. ಪಾಸ್‌ಪೋರ್ಟ್, ಆಧಾರ್, OTP, ಬ್ಯಾಂಕ್ ಮಾಹಿತಿ ಅಪರಿಚಿತರಿಗೆ ಕೊಡಬೇಡಿ ಎಂದು ಮಕ್ಕಳಿಗೆ ಕಟ್ಟುನಿಟ್ಟಾಗಿ ಹೇಳಿ.
  4. ಮಗು ಕಾಣೆಯಾದರೆ 24 ಗಂಟೆ ಕಾಯಬೇಡಿ. ತಕ್ಷಣ 112 ಅಥವಾ 1098 ಗೆ ಕರೆ ಮಾಡಿ.

ಪ್ರತಿ ಪೋಷಕರು ಕಡ್ಡಾಯವಾಗಿ ಮಕ್ಕಳೊಂದಿಗೆ ಪ್ರತಿದಿನ ಸಮಯ ಕಳೆಯಿರಿ ಮತ್ತು ಮುಕ್ತವಾಗಿ ಮಾತನಾಡಿ.

  • ಅವರ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಬಳಕೆಯ ಬಗ್ಗೆ ಜವಾಬ್ದಾರಿಯುತ ಗಮನವಿರಲಿ.
  • ಮಕ್ಕಳಿಗೆ “ಅಪರಿಚಿತರೊಂದಿಗೆ ಹೋಗಬಾರದು” ಮತ್ತು “ಯಾವುದೇ ಆಮಿಷಕ್ಕೆ ಒಳಗಾಗಬಾರದು” ಎಂಬ ಸುರಕ್ಷತಾ ಪಾಠವನ್ನು ಬಾಲ್ಯದಿಂದಲೇ ಕಲಿಸಿ.
  • ಮಕ್ಕಳಲ್ಲಿ ವರ್ತನೆ ಬದಲಾವಣೆ ಕಂಡುಬಂದರೆ ನಿರ್ಲಕ್ಷಿಸದೆ ಕಾರಣ ತಿಳಿದುಕೊಳ್ಳಿ.
    ಮಕ್ಕಳು ಮತ್ತು ಯುವಕರೇ:
  1. ಆನ್‌ಲೈನ್‌ನಲ್ಲಿ ಪರಿಚಯವಾದ “ಸ್ನೇಹಿತ” ಒಬ್ಬರೇ ಭೇಟಿಗೆ ಕರೆದರೆ ಹೋಗಬೇಡಿ.
  2. “ಸುಲಭವಾಗಿ ದುಡ್ಡು” ಎಂದು ಯಾರಾದರೂ ಹೇಳಿದರೆ ಅದು ಬಲೆಯಾಗಿರಬಹುದು.
  3. ಏನಾದರೂ ಅನುಮಾನವಾದರೆ ಶಿಕ್ಷಕರು, ಪೋಷಕರು ಅಥವಾ 1098 Childline ಗೆ ಧೈರ್ಯವಾಗಿ ಹೇಳಿ. ನೀವು ಒಬ್ಬಂಟಿಯಲ್ಲ.
  4. ಸರ್ಕಾರ ಮತ್ತು ಸಮಾಜ ಏನು ಮಾಡಬೇಕು?
  5. ಪ್ರತಿ ಶಾಲೆ, ಕಾಲೇಜಿನಲ್ಲಿ “ಸೈಬರ್ ಸುರಕ್ಷತೆ ಮತ್ತು ಮಾನವ ಕಳ್ಳಸಾಗಣೆ” ಕುರಿತು ಪಂಚಾಯಿತಿ/ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ತರಬೇತಿಗಳು ಕಡ್ಡಾಯ.
  6. CWC, DCPU, ಪೊಲೀಸ್, ಕಾನೂನು ಸೇವೆಗಳ ಪ್ರಾಧಿಕಾರ ನಡುವೆ ತ್ವರಿತ ಸಮನ್ವಯ. ಶಿವಮೊಗ್ಗ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಇತ್ತೀಚಿಗೆ ಪ್ರಾರಂಭಗೊಂಡ ಕಾನೂನು ಸೇವೆಗಳ ಕೇಂದ್ರ (Free Legal Clinic)ಮಾದರಿ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಾರಂಭಿಸಬೇಕಾಗಿದೆ.
  7. ರಕ್ಷಿಸಲ್ಪಟ್ಟ ಸಂತ್ರಸ್ತರಿಗೆ ಶಿಕ್ಷಣ + ಕೌಶಲ್ಯ + ಉದ್ಯೋಗ ಮೂಲಕ ಗೌರವಯುತ ಪುನರ್ವಸತಿ.
  8. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಹಿತಿ ಹಂಚಿಕೆ ಮತ್ತು ಜಂಟಿ ಕಾರ್ಯಾಚರಣೆ.
  9. ಕಾನೂನು ನಿಮ್ಮ ಪರವಿದೆ
    BNS 2023, POCSO 2012, JJ Act 2015, ITPA 1956 – ಅಪರಾಧಿಗಳಿಗೆ ಕಠಿಣ ಶಿಕ್ಷೆ ಇದೆ. 2024ರ UN Cybercrime Convention ಅಂತಾರಾಷ್ಟ್ರೀಯ ಜಾಲಗಳನ್ನು ಕಿತ್ತೊಗೆಯಲು ಹೊಸ ಆಯುಧ.

ಕೊನೆಯ ಮಾತು: ಒಂದು ಕರೆ ಜೀವ ಉಳಿಸಬಹುದು,

ಮಾನವ ಕಳ್ಳಸಾಗಣೆ ಇಂದು ಬೀದಿಯಲ್ಲಿ ಮಾತ್ರವಲ್ಲ, ನಿಮ್ಮ ಮಗುವಿನ ಮೊಬೈಲ್‌ನಲ್ಲೂ ಇದೆ. “Trapped Behind the Scam” ಎಂಬ ಘೋಷವಾಕ್ಯ ನಮಗೆ ನೆನಪಿಸುತ್ತಿದೆ: ಪ್ರತಿಯೊಂದು ಆಕರ್ಷಕ ಜಾಹೀರಾತು ನಿಜವಲ್ಲ, ಪ್ರತಿಯೊಂದು ಆನ್‌ಲೈನ್ ಅವಕಾಶ ಸುರಕ್ಷಿತವಲ್ಲ.

ಒಂದು ಮಗುವಿನ ಕನಸನ್ನು ಉಳಿಸುವುದು ಒಂದು ಕುಟುಂಬವನ್ನು ಉಳಿಸಿದಂತೆಯೇ.
ಒಬ್ಬ ಮಹಿಳೆಯ ಗೌರವವನ್ನು ಕಾಪಾಡುವುದು ಇಡೀ ಸಮಾಜದ ಗೌರವವನ್ನು ಕಾಪಾಡಿದಂತೆಯೇ.

ಈ ಜುಲೈ 30 ರಂದು ನಾವು ಪ್ರತಿಜ್ಞೆ ಮಾಡೋಣ:
“ಜಾಗೃತರಾಗೋಣ. ಮೋಸದ ಬಲೆಗೆ ಬೀಳದಿರೋಣ. ಅನುಮಾನ ಕಂಡರೆ ವರದಿ ಮಾಡೋಣ. ಮಾನವ ಕಳ್ಳಸಾಗಣೆ ಮುಕ್ತ ಸಮಾಜ ಹಾಗೂ ಭಾರತ ನಿರ್ಮಿಸೋಣ.”

ಮಕ್ಕಳನ್ನು ರಕ್ಷಿಸೋಣ – ಮಹಿಳೆಯರ ಗೌರವ ಕಾಪಾಡೋಣ – ಮಾನವೀಯತೆಯನ್ನು ಉಳಿಸೋಣ.

ಹೆಚ್ಚಿನ ಮಾಹಿತಿಗಾಗಿ ತುರ್ತು ಸಂಪರ್ಕ: ಮಕ್ಕಳ ಸಹಾಯವಾಣಿ -1098, ಪೊಲೀಸ್- 112,
ಮಹಿಳಾ ಸಹಾಯವಾಣಿ 181.

ತಾಜುದ್ದೀನ್ ಖಾನ್
ಅಧ್ಯಕ್ಷರು,
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (ನ್ಯಾಯಪೀಠ), ಶಿವಮೊಗ್ಗ ಜಿಲ್ಲೆ

ಜುಲೈ 31. ಶ್ರೀವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಸ್ವರ ಸಮಾರಾಧನೆ

0

ಶಿವಮೊಗ್ಗ ನಗರದ ಸಾಗರ ರಸ್ತೆಯ ಶ್ರೀ ಪಂಡಿತ ಪುಟ್ಟರಾಜ ಗವಾಯಿಗಳವರ ಅಂಧ ಮಕ್ಕಳ ಸಂಗೀತ ವಿದ್ಯಾಲಯ ಶ್ರೀ ವೀರೇಶ್ವರ ಪುಣ್ಯಾಶ್ರಮ ಸಂಸ್ಕೃತ ಪಾಠಶಾಲೆಯಲ್ಲಿ ಜು. ೩೧ರ ಶುಕ್ರವಾರದಿಂದ ಆ. ೨ರ ಭಾನುವಾರದವರೆಗೆ ಗಾನ ಯೋಗಿ ಪಂ. ಪಂಚಾಕ್ಷರಗವಾಯಿಗಳವರ ೮೨ನೇ ಹಾಗೂ ಪಂ. ಪುಟ್ಟರಾಜ ಕವಿಗವಾಯಿಗಳವರ ೧೬ನೇ ಪುಣ್ಯ ಸ್ಮರಣೋತ್ಸವ ಸಂಗೀತ ಸ್ವರ ಸಮಾರಾಧನೆ, ಸಾಂಸ್ಕೃತಿಕ, ಧಾರ್ಮಿಕ, ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜು. 31ರ ಸಂಜೆ 5:30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಡೆಯರ್ ಡಾ. ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಗದಗ ಜಡೆಮಠದ ಡಾ. ಮಹಾಂತ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆಯುವ ಈ ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಗದಗ ಶ್ರೀ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳು ವಹಿಸುವರು.

ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸುವರು. ವಿದ್ಯಾಧರ ಶಾಸ್ತ್ರಿಗಳಿಂದ ವೇದಘೋಷ ಹಾಗೂ ಪ್ರಮುಖರಾದ ಎಸ್. ರುದ್ರೇಗೌಡ್ರು, ನವೀನ ಎಂ. ಪೈಸ್, ಕಿರಣಕುಮಾರ, ಆಶಾ ಚನ್ನಬಸಪ್ಪ ಎಸ್.ವಿ. ಚಂದ್ರಕಲಾ ಭಾಗವಹಿಸು ವರು. ಗೋಪಾಳದ ಶಾರದಾಶಂಕರ ಭಜನಾ ಮಂಡಳಿಯಿಂದ ಭಜನೆ, ಸಿದ್ದಣ್ಣ ಬಡಿಗೇರ ಅವರ ಗಾಯನ ನಡೆಯಲಿದೆ.

ಈ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು.
ಆ. ೧ರಂದು ಸಂಜೆ ೫.೩೦ಕ್ಕೆ ಮೂಲೆ ಗದ್ದೆ ಶಿವಯೋಗಾಶ್ರಮದ ಶ್ರೀ ಚನ್ನಬಸವ ಮಹಾಸ್ವಾಮಿಗಳು ಹಾಗೂ ಬೃಹಮ್ನಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ರೇವಣಸಿದ್ದಯ್ಯ ಶಾಸ್ತ್ರಿಗಳಿಂದ ವೇದಘೋಷ, ಸಿರಿ ಪಿ. ಹಿರೇಮಠ್‌ರಿಂದ ಭರತನಾಟ್ಯ, ಆಶ್ರಮದ ಮಕ್ಕಳಿಂದ ಪ್ರಾರ್ಥನೆ ನಡೆಯಲಿದೆ. ಗೀತಾಮೃತ ಭಜನಾ ಮಂಡಳಿಯಿಂದ ಭಜನಾ ಸೇವೆ, ಜೂನಿಯರ್ ವಿಷ್ಣುವರ್ಧನ್ ಜೈಶ್ರೀರಾಜ್‌ರಿಂದ ಮನರಂಜನೆ, ನಂತರ ಸಂಗೀತ ಗಾಯನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಆ. 2ರಂದು ಶ್ರೀ ಬೆಕ್ಕನಿ ಕಲ್ಮಠ ಶ್ರೀ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ಮತ್ತು ಶ್ರೀ ಶಿವಕುಮಾರ್ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀ ಅಭಿನವ ಪಂಚಾಕ್ಷರ ಶಿವಾ ಚಾರ್ಯ ಸ್ವಾಮಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ತೃತೀಯ ಪೀಠಾಧಿಪತಿ ಶ್ರೀ ಡಾ. ಕಲ್ಲಯ್ಯಜ್ಜ ಅಧ್ಯಕ್ಷತೆ ವಹಿಸುವರು. ರಾಜ ಪುರೋಹಿತ ಶ್ರೀ ಫಕ್ಕೀರಯ್ಯ ಸ್ವಾಮಿ ಅವರಿಂದ ವೇದಘೋಷ, ಶಿವಕುಮಾರಿ ಬಸವಲಿಂಗಪ್ಪರಿಂದ ತುಲಾಭಾರ ನಡೆಯಲಿದ್ದು, ಅತಿಥಿ ಗಳಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಚನ್ನಬಸಪ್ಪ, ಡಿ.ಎಸ್. ಅರುಣ್ ಸೇರಿ ದಂತೆ ಹಲವರು ಭಾಗವಹಿಸಲಿದ್ದಾರೆ.
ಆ. ೨ರಂದು ಬೆಳಿಗ್ಗೆ ಶೇಖರಯ್ಯ ಶಾಸ್ತ್ರಿಗಳಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಆಶ್ರಮದಲ್ಲಿ ನಿರಂತರ ವಾದಕರಾಗಿ ಸೇವೆ ಸಲ್ಲಿಸುತ್ತಿರುವುದರಿಂದಲೇ ವಾಧ್ಯಘೋಷ ನಡೆಯಲಿದೆ. ಆ. 2ರ ಸಂಜೆ 5:30ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಡಾ. ಕಲ್ಲಯ್ಯಜ್ಜ ಅಧ್ಯಕ್ಷತೆಯಲ್ಲಿ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ ರಚನೆಯ ಶ್ರೀಕೃಷ್ಣ ಗಾರುಡಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ವಿಜಯಾನಂದ ರಾಜೋಳ್ಳಿ ಉದ್ಘಾಟಿಸುವರು.
ಮೂರು ದಿನಗಳ ಈ ವಿಶೇಷ ಕಾಯಕ್ರಮಗಳಿಗೆ ವಿವಿಧ ಜಿಲ್ಲೆಗಳಿಂದ ಗಣ್ಯರು ಭಾಗವಹಿಸಲಿದ್ದಾರೆ.

ಮಕ್ಕಳ ಸರಿತಪ್ಪು ತಿದ್ದಿ ತಾಯಿ ಸುಸಂಸ್ಕೃತ ಅಭ್ಯಾಸ ಕಲಿಸಿ ಸಮಾಜಕ್ಕೆ ಮಾದರಿಯಾಗಬೇಕು- ಡಾ.ಧನಂಜಯ ಸರ್ಜಿ

0

ತಾಯಿಗೆ ಮಕ್ಕಳ ಮೇಲೆ ಮಾತ್ರತ್ವ ಸಹಜ. ಆದರೆ ಅತಿಯಾದ ಪ್ರೀತಿ, ಪ್ರೇಮ, ವಿಶ್ವಾಸ ಒಂದು ಹಂತದವರೆಗೆ ಮಾತ್ರ ಸೀಮಿತವಾಗಿರಬೇಕು. ನಂತರದ ದಿನಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಮಕ್ಕಳ ರೀತಿ, ನೀತಿಯನ್ನು ಗಮನಿಸಿ ಸರಿ ತಪ್ಪುಗಳನ್ನು ಸರಿಪಡಿಸುವ ಮೂಲಕ ಸುಸಂಸ್ಕೃತ ಅಭ್ಯಾಸವನ್ನು ಕಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಖ್ಯಾತ ವೈದ್ಯರು ಮತ್ತು ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಧನಂಜಯ ಸರ್ಜಿ ಹೇಳಿದರು.

ನಗರದ ರೋಟರಿ ಕ್ಲಬ್‌ ಶಿವಮೊಗ್ಗ ಉತ್ತರದ ವತಿಯಿಂದ ಏರ್ಪಡಿಸಿದ್ದ ‘ತಾಯಿಗೆ ಮಕ್ಕಳ ಬಗ್ಗೆ ಕಾಳಜಿ’ ಕುರಿತು ಉಪನ್ಯಾಸ ನೀಡಿದ ಅವರು, ತಾಯಿ ಮಕ್ಕಳ ಬಾಂಧವ್ಯದ ಬಗ್ಗೆ ತಿಳಿಸಿ ಹೇಳಿದರು.

ರೋಟರಿ ಪ್ರಪಂಚದಾದ್ಯಂತ ಸಮುದಾಯವನ್ನು ಬಲಪಡಿಸುವ ಪರಿಸರ ಸಂರಕ್ಷಣೆ, ಶಾಲೆಗಳಿಗೆ ಉತ್ತಮ ಕಲಿಕೆಗೆ ಸಹಕಾರಿಯಾಗುವಂತಹ ಪೀಠೋಪಕರಣ, ಯಂತ್ರೋಪಕರಣ, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ನಿರ್ಮಾಣ, ಮುಖಂಡತ್ವ ತರಬೇತಿ, ಶಾಂತಿಯುತ ಸಮಾಜ ನಿರ್ಮಾಣ, ರೋಗಮುಕ್ತ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದು, ಇದಕ್ಕೆ ಕೈಜೋಡಿಸುವ ಮನಸ್ಸು ನಮ್ಮದಾಗಬೇಕು. ಈ ಕೆಲಸ ಮಾಡುತ್ತಿರುವ ರೋಟರಿ ನಾರ್ಥ ಕ್ಲಬ್‌ ಶಿವಮೊಗ್ಗಕ್ಕೆ ಮಾದರಿ. ರೋಟರಿ ಮಾಜಿ ಜಿಲ್ಲಾ ಗೌವರ್ನರ್ ಚಂದ್ರಶೇಖರ ಈ ಕ್ಲಬ್ ಮುಖಾಂತರ ಅವರ ವಯಸ್ಸಿಗೆ ಮೀರಿದ ಸಾಧನೆ ಮಾಡಿದ್ದಾರೆ. ಅವರ ಮುಖಾಂತರ ನಡೆಯುವ ರೋಟರಿಯ ಗ್ಲೋಬಲ್ ಗ್ರಾಂಟ್ ಯೋಜನೆಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಹಾಗೂ ಅವರಿಗೆ ಶ್ರೀ ದೇವರು ಉತ್ತಮ ಆರೋಗ್ಯ ನೀಡಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ರೋಟರಿ ನಾರ್ಥ್ ಅಧ್ಯಕ್ಷ ಶಿವಕುಮಾರ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಧರ ವಂದನಾರ್ಪಣೆ ಮಾಡಿದರು. ವೇದಿಕೆಯಲ್ಲಿ ಇನ್ನರ್ ವ್ಹೀಲ್ ಅಧ್ಯಕ್ಷೆ ಜಲಪಾತ ನಾಗರಾಜ, ಕಾರ್ಯದರ್ಶಿ ಧನಲಕ್ಮಿ ಉಪಸ್ಥಿತರಿದ್ದರು.

ಶಿಕಾರಿಪುರ,ಕುಮದ್ವತಿ ಸೇತುವೆ ಸನಿಹ ಅಪಘಾತ:ಬೈಕ್ ಸವಾರನ ಮರಣ

0

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಕುಮದ್ವತಿ ನದಿ ಸೇತುವೆ ಸಮೀಪ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಸಾಗರ ತಾಲೂಕಿನ ಗೌತಮಪುರ ಗ್ರಾಮದ 19 ವರ್ಷದ ಮಿಲನ್ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಮಿಲನ್ ಐ.ಟಿ.ಐ. ಪರೀಕ್ಷೆ ಬರೆಯಲು ಶಿರಾಳಕೊಪ್ಪಕ್ಕೆ ತೆರಳಿದ್ದು, ಪರೀಕ್ಷೆ ಮುಗಿಸಿಕೊಂಡು ಸ್ನೇಹಿತರೊಂದಿಗೆ ಬೈಕ್‌ನಲ್ಲಿ ಗೌತಮಪುರಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಶಿಕಾರಿಪುರ ಕಡೆಯಿಂದ ಅತಿ ವೇಗವಾಗಿ ಬಂದ ಕ್ಯಾಂಟರ್ ಮತ್ತು ಮಿಲನ್ ಚಲಾಯಿಸುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಮಿಲನ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆಯ ಕುರಿತು ಮಾಹಿತಿ ಪಡೆದ ಶಿಕಾರಿಪುರ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಸಂಬಂಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.