Monday, August 3, 2026
Monday, August 3, 2026
Home Blog Page 6

B.Y. Raghavendra ಕ್ಷೀರ ಅಭಿವೃದ್ಧಿ ರಾಷ್ಟ್ರೀಯ ಯೋಜನೆ: ಶಿಮುಲ್ ವ್ಯಾಪ್ತಿಯ 37.750 ಕ್ಕೂ ಹೆಚ್ಚು ಕುಟುಂಬಗಳಿಗೆ ನೇರ ಲಾಭ- ಬಿ.ವೈ‌.ರಾಘವೇಂದ್ರ

0

B.Y. Raghavendra ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ, ಗ್ರಾಮೀಣ ಭಾಗದ ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಸಬಲೀಕರಣಕ್ಕಾಗಿ ಹೈನುಗಾರಿಕೆ ಕ್ಷೇತ್ರಕ್ಕೆ ಅಭೂತಪೂರ್ವ ಬೆಂಬಲ ನೀಡುತ್ತಿದೆ. ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಯೋಜನೆ’ (National Programme for Dairy Development – NPDD) ಅಡಿಯಲ್ಲಿ, ರಾಜ್ಯದ ಹೈನುಗಾರರ ಅನುಕೂಲಕ್ಕಾಗಿ, ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್) ಸೇರಿದಂತೆ ರಾಜ್ಯದಾದ್ಯಂತ ಶೀತಲೀಕರಣ ಘಟಕ ಹಾಗೂ ಗುಣಮಟ್ಟ ಪರಿಶೀಲನಾ ವ್ಯವಸ್ಥೆಯನ್ನು ಭಾರಿ ಪ್ರಮಾಣದಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಈ ಕುರಿತು ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಕ್ಷೀರಪಾಲನಾ ಸಚಿವ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಅವರು ವಿವರವಾದ ಉತ್ತರ ನೀಡಿದ್ದಾರೆ.

ಶಿಮುಲ್ ಒಕ್ಕೂಟಕ್ಕೆ ಸಿಕ್ಕ ಬೃಹತ್ ಕೊಡುಗೆ: ವಿಶೇಷವಾಗಿ ರಾಜ್ಯದ ಹೈನುಗಾರರ ಹಿತಾಸಕ್ತಿಗಳ ಬಲವರ್ಧನೆ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ನಿರಂತರವಾಗಿ ಸಂಸತ್ತಿನಲ್ಲಿ ಧ್ವನಿಯೆತ್ತುತ್ತಿದ್ದು, ಶಿವಮೊಗ್ಗ ಹಾಲು ಒಕ್ಕೂಟದ (ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ) ಹೈನುಗಾರಿಕಾ ಜಾಲಕ್ಕೆ ಕೇಂದ್ರದಿಂದ ಭಾರಿ ಆರ್ಥಿಕ ನೆರವು ದೊರಕಿದೆ.

• ಶಿಮುಲ್ ನ 37,750 ರೈತರಿಗೆ ಲಾಭ: ಶಿಮುಲ್ ಒಕ್ಕೂಟದ ವ್ಯಾಪ್ತಿಯಲ್ಲಿ, ಶಿವಮೊಗ್ಗ ಜಿಲ್ಲೆಯ 11,760 ರೈತ ಕುಟುಂಬಗಳು ಸೇರಿದಂತೆ, ಒಟ್ಟು 37,750 ರೈತರು ಈ ಯೋಜನೆಯಿಂದ ನೇರ ಪ್ರಯೋಜನ ಪಡೆದಿದ್ದಾರೆ.

• ಸಂಘಗಳ ಸಬಲೀಕರಣ: ಶಿವಮೊಗ್ಗದ 174 ಸಂಘಗಳು ಸೇರಿ, ಶಿಮುಲ್ ಒಕ್ಕೂಟದ 479 ಡೈರಿ ಸಹಕಾರ ಸಂಘಗಳನ್ನು ಆಧುನಿಕ ಹಾಲು ಪರೀಕ್ಷಾ ಸಾಧನಗಳು (Automatic Milk Collection Unit-AMCU/Electronic Milk Adulteration Testing Machine-EMAT) ಹಾಗೂ ಸೌಲಭ್ಯಗಳೊಂದಿಗೆ ಬಲಪಡಿಸಲಾಗಿದೆ.

• ಹಾಲು ಸಂಗ್ರಹಣೆ ಹೆಚ್ಚಳ: ಶಿಮುಲ್ ವ್ಯಾಪ್ತಿಯಲ್ಲಿ ಪ್ರತಿ ದಿನ 5.27 ಲಕ್ಷ ಲೀಟರ್ ಹೆಚ್ಚುವರಿ ಹಾಲು ಸಂಗ್ರಹಣೆ ಸಾಧಿಸಲಾಗಿದ್ದು, 177 ಬಲ್ಕ್ ಮಿಲ್ಕ್ ಕೂಲರ್‌ಗಳನ್ನು (BMC) ಅಳವಡಿಸಲಾಗಿದೆ.

ಕರ್ನಾಟಕಕ್ಕೆ ಒಟ್ಟು 455.21 ಕೋಟಿ ರೂ. ಯೋಜನೆ – ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಸಂಸದ ರಾಘವೇಂದ್ರ:

B.Y. Raghavendra ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ NPDD ಯೋಜನೆಯ ‘ಘಟಕ-A’ ಅಡಿಯಲ್ಲಿ ಒಟ್ಟು 455.21 ಕೋಟಿ ರೂ. ವೆಚ್ಚದ 22 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಲ್ಲಿ 307.83 ಕೋಟಿ ರೂ. ಗಳನ್ನು ಕೇಂದ್ರ ನೀಡಲಿದೆ. ಇದರಲ್ಲಿ ಈಗಾಗಲೇ 255.80 ಕೋಟಿ ರೂ. ಅನುದಾನ ಕೇಂದ್ರದಿಂದ ಬಿಡುಗಡೆಯಾಗಿದ್ದು, ರಾಜ್ಯದಾದ್ಯಂತ 5.64 ಲಕ್ಷಕ್ಕೂ ಹೆಚ್ಚು ರೈತರು ಸಹಕಾರಿ ಜಾಲಕ್ಕೆ ಸೇರ್ಪಡೆಯಾಗಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳಾ ಹೈನುಗಾರರ ಹಿತ ಕಾಯುವ ಮತ್ತು ಹಾಲಿನ ಸುಧಾರಿತ ಗುಣಮಟ್ಟ ಖಾತರಿಪಡಿಸುವ ಪ್ರಧಾನಿ ಮೋದಿ ಸರ್ಕಾರದ ನಿರಂತರ ಬದ್ಧತೆಗೆ ಸಂಸದ ಬಿ.ವೈ.ರಾಘವೇಂದ್ರ ರಾಜ್ಯದ ಕ್ಷೀರ ಉತ್ಪಾದಕರ ಪರವಾಗಿ ಧನ್ಯವಾದ ಅರ್ಪಿಸಿದ್ದಾರೆ.

Klive Special Article ಇಂದು ,ಗುರು ಪೂರ್ಣಿಮೆ” ಗುರುವಿನಿಂ ಗುರಿಯುಂ…”ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.

0

Klive Special Article “ಗುರುಬ್ರಹ್ಮ ಗುರುವಿಷ್ಣು ಗುರುದೇವೋ
ಮಹೇಶ್ವರ/
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ
ಶ್ರೀಗುರುವೇ ನಮಃ//

ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸುತ್ತ ವಂದಿಸುವ ಈ ಶ್ಲೋಕ ಬಹಳ ಅರ್ಥಪೂರ್ಣವಾಗಿದೆ.
ನಾವು ಯಾವುದೇ ಶ್ಲೋಕಗಳನ್ನು ಪಠಣಮಾಡಲು ಆರಂಭಿಸುವಾಗ ‘ಶ್ರೀಗುರುಭ್ಯೋನಮಃ ಹರಿಃ ಓಂ”
ಎಂದು ಭಕ್ತಿಯಿಂದ ಹೇಳುವುದನ್ನು ಕೇಳಿದ್ದೇವೆ.
ಗುರುವಿನ ಸ್ಥಾನ ಅಂತಹದು.
ಸಂಗೀತ ಪಿತಾಮಹ ಶ್ರೀಪುರಂದರದಾಸರು
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂದು ಬಣ್ಣಿಸಿದ್ದಾರೆ.
“ಗು” ಎಂದರೆ ನೆರಳು “ರು” ಎಂದರೆ ಚದುರಿಸುವುದು ಎಂದರ್ಥ.ಯಾರು ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುತ್ತಾರೋ ಅವರೇನಿಜವಾದ ಗುರುಗಳು.
ಶಿಷ್ಯರಿಗೆ ಕಲಿಸಿಕೊಡುವ ಗುರುಗಳು ಸಾಮಾನ್ಯವಾಗಿ ಶಿಷ್ಯರಿಗೆ ಸರಿಯಾದ ಮಾರ್ಗದರ್ಶಕರಾಗಿರುತ್ತಾರೆ.
ಗುರುಪೂರ್ಣಿಮೆಯ ದಿನ ನಮಗೆ ವಿದ್ಯೆಕಲಿಸಿದ
ಗುರುಗಳನ್ನು ಅಭಿವಂದಿಸುವ ದಿನವಾಗಿದೆ.
ಈಗೆಷ್ಟು ಕಲಿತಿದ್ದೇವೆ,ಮುಂದೆ ಏನು ಕಲಿಯಬೇಕು
ಮತ್ತು ಮುಂದಿನ ಜೀವನದ ದಾರಿಯನ್ನು ನಿರ್ಧಾರಮಾಡಿ ಅದರ ಬಗ್ಗೆ ಸಂಪೂರ್ಣ ಗಮನ
ವಿಡುವುದು ಈ ಶುಭ ದಿನದ ಉದ್ದೇಶ.
ತಂದೆಯು ಮಗನಿಗೆ ಜನ್ಮದಾತನಾದರೆ,ಗುರುಗಳು
ಆತನನ್ನು ಜನನ ಮರಣಗಳ ಸಂಕೋಲೆಯಿಂದ
ಮುಕ್ತ ಗೊಳಿಸಲು ಸಹಕರಿಸುತ್ತಾರೆ.ಪೂಜನೀಯ
ಸ್ಥಾನದಲ್ಲಿ ಗುರುಗಳನ್ನು ನೋಡಬೇಕು.
Klive Special Article ತಂದೆತಾಯಿಗಳ ನಂತರ ಪ್ರಮುಖ ಸ್ಥಾನ ನೀಡಿ
ಆಚಾರ್ಯ ದೇವೋ ಭವ ಎಂದೇ ಗುರುಗಳನ್ನು ಪೂಜಿಸಿ,ಗೌರವಿಸುವ ಭವ್ಯ ಪರಂಪರೆ ನಮ್ಮದು.
ಪೂಜ್ಯ ವ್ಯಾಸ ಮಹರ್ಷಿಗಳು ಹಾಗೂ ಎಲ್ಲ ಗುರು ಪರಂಪರೆಯನ್ನೂ ವಂದಿಸಿ,ಗೌರವಿಸುವ ಗುರುಪೂರ್ಣಿಮಾ ಮಹಾ ಪರ್ವವನ್ನು ಆಷಾಢ
ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ.
ಗುರು ಪೂರ್ಣಿಮೆಯು ಕೇವಲ ವೇದ ಪಾಠಶಾಲೆ
ಗಳಿಗೆ ಮಾತ್ರ ಸೀಮಿತವಾಗಿಲ್ಲ.ಹಿಂದೂಗಳು ಈದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ
ಜೈನ,ಬೌದ್ಧ ಧರ್ಮೀಯರು ಸಹ ಗುರುಪೂರ್ಣಿ
ಮೆಯನ್ನು ಆಚರಿಸುವುದು ರೂಢಿಯಲ್ಲಿದೆ.
ಸಿದ್ಧಾರ್ಥ ಗೌತಮ ಬುದ್ಧನಾಗಿ ಮೊದಲ ಧರ್ಮ ಪ್ರವಚನವನ್ನುಮಾಡಿದಂತಹದಿನಗುರುಪೂರ್ಣಿಮೆ.
ಇಂದು ಶ್ರೇಷ್ಠ ಗ್ರಂಥವಾದ ಮಹಾಭಾರತವನ್ನು ರಚಿಸಿದ ಶ್ರೀವೇದವ್ಯಾಸ ಗುರುಗಳ ಜನ್ಮದಿನವೂ ಆಗಿದೆ.ಹಾಗಾಗಿ ಈ ದಿನವನ್ನುಶ್ರೀವ್ಯಾಸಪೂರ್ಣಿಮೆಎಂದೂಕರೆಯುತ್ತಾರೆ.
ಈ ದಿನ ಶಂಕರನು ಸಪ್ತರ್ಷಿಗಳಿಗೆ ಯೋಗ ವಿದ್ಯೆಯನ್ನು ಉಪದೇಶಿಸಿ ಪ್ರಥಮ ಗುರು ಎಂದೆನಿಸಿಕೊಂಡ ದಿನ ಗುರು ಪೂರ್ಣಿಮ.
ಈ ದಿನ ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ
ಗುರುವೃಂದಕ್ಕೆ ಕೃತಜ್ಞತೆ ಸಲ್ಲಿಸುವ ಸಂಪ್ರದಾಯವೂ ನಡೆದುಬಂದಿರುತ್ತೆ.ಗುರುಗಳು ತಮ್ಮ ಶಿಷ್ಯರಿಗೆ ಸಹಾಯ ಮಾಡಿದ ಒಂದು ಪ್ರಸಂಗ ನೆನಪಿಗೆ ಬರುತ್ತೆ.ಒಮ್ಮೆ ಒಬ್ಬ ಪ್ರತಿಭಾವಂತ ವಿದ್ಯಾರ್ಥಿಗೆ ತನ್ನ ಪಿ.ಯು.ಸಿ ಪರೀಕ್ಷೆಗೆ ಹಣ ಕಟ್ಟಲು ಪರದಾಡುತ್ತಿದ್ದಾಗ ಅವನಿಗೆ ಪಾಠ
ಹೇಳಿಕೊಡುತ್ತಿದ್ದ ಗುರುಗಳು ಶಿಷ್ಯನಿಗೆ ಪರೀಕ್ಷೆಯ ಫೀಸನ್ನುಕಟ್ಟಲುತಾವೇಸಹಾಯಮಾಡುತ್ತಾರೆ.ಪರೀಕ್ಷೆಯ ಫಲಿತಾಂಶ ಹೊರಬಂದಾಗ ಆ ವಿದ್ಯಾರ್ಥಿ ಆ ಶಾಲೆಗೇ ಮೊದಲ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾನೆ.
ಇದನ್ನು ಕೇಳಿದ ಗುರುಗಳಿಗೆ ಬಹಳಸಂತೋಷವಾಗುತ್ತದೆ ಮತ್ತು ಆ ವಿದ್ಯಾರ್ಥಿ ಗುರುಗಳಿಗೆ ತನ್ನ ಕೃತಜ್ಞತೆಗಳನ್ನು ವ್ಯಕ್ತ ಪಡಿಸುತ್ತಾನೆ.ಹೀಗೆ ಗುರುಗಳು ಪಾಠ ಹೇಳಿ
ಕೊಡುವುದು ಮಾತ್ರವಲ್ಲದೆ ಪರೀಕ್ಷೆಗೆ ಕೂಡಲು ಹಣದ ಸಹಾಯವನ್ನು ಸಹ ತಮ್ಮ ಕೈಯಲ್ಲಾಗುವ ಸಹಾಯವೆಂತ ಮಾಡುವ ಗುರುವೃಂದವೂ ಇದೆ..
ಇಂದು ಸೂಕ್ತ ಮಾರ್ಗದರ್ಶನದ ಕೊರತೆ ಕಂಡು ಬರುತ್ತಿದೆ.ಹಾಗಾಗಿ ಸತ್ಯ,ಧರ್ಮ ಮಾರ್ಗದಲ್ಲಿ ನಡೆ
ಯುವವರ ಸಂಖ್ಯೆ ಬಹಳ ಕಡಿಮೆಯಾಗುತ್ತಿದೆ.
ಸರಿಯಾದ ಮಾರ್ಗ ದರ್ಶನ ಸಿಕ್ಕು ಜನತೆ ಧರ್ಮ ಮಾರ್ಗದಲ್ಲಿ ನಡೆದು ಮಾನವೀಯ ಮೌಲ್ಯಗಳನ್ನು
ಮೈಗೂಡಿಸಿಕೊಂಡು ಸೌಹಾರ್ದತೆಯಿಂದ ಬಾಳಿದಾಗ ಪ್ರತಿಯೊಬ್ಬರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ.
ಈ ಬಾರಿ ಬಂದಿರುವ ಗುರುಪೂರ್ಣಿಮೆಯ
ಶುಭ ಸಂದರ್ಭದಲ್ಲಿ ಜಗತ್ತಿನ ಎಲ್ಲಾ ಗುರು ಶ್ರೇಷ್ಠರಿಗೂ ನಮ್ಮ ಅನಂತ ನಮಸ್ಕಾರಗಳನ್ನುಅರ್ಪಿಸೋಣ.


ಎನ್.ಜಯಭೀಮ್ ಜೊಯ್ಸ್

ಸಮಾನತೆಯ ಸಮಾಜ ನಿರ್ಮಾಣದಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಅತ್ಯಂತ ಪ್ರಾಮುಖ್ಯ-ವೇ. ಹಾಲಪ್ಪಯ್ಯ ಶಾಸ್ತ್ರಿ

0

ಹಡಪದ ಅಪ್ಪಣ್ಣನವರು ಬಸವಣ್ಣನವರ ಸಿದ್ಧಾಂತಕ್ಕೆ ಬಲಗೈ ಬಂಟರಾಗಿದ್ದರು : ವೇ|| ಹಾಲಪ್ಪಯ್ಯ ಶಾಸ್ತಿçಗಳು
ಶಿವಮೊಗ್ಗ ಜುಲೈ 29(ಕರ್ನಾಟಕ ವಾರ್ತೆ): ಬಸವಣ್ಣನವರ ತತ್ತ್ವ-ಸಿದ್ಧಾಂತಗಳ ಪ್ರಸಾರ ಹಾಗೂ ಸಮಾನತೆಯ ಸಮಾಜ ನಿರ್ಮಾಣದಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಅತ್ಯಂತ ಪ್ರಮುಖವಾಗಿದ್ದು ನಾವೆಲ್ಲ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಬೇಕಿದೆ ಎಂದು ಕುವೆಂಪು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ವೇ|| ಹಾಲಪ್ಪಯ್ಯ ಶಾಸ್ತ್ರಿಗಳು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಘೂ ಜಿಲ್ಲಾ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪುರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದ ಅಪ್ಪಣ್ಣನವರು, ಅಪ್ರತಿಮ ಭಕ್ತಿ ಮತ್ತು ಜ್ಞಾನವುಳ್ಳ ಕಾಯಕಜೀವಿಯಾಗಿದ್ದರು. ‘ಹಡಪ’ ಎಂದರೆ ವೀಳ್ಯದ ಡಬ್ಬಿ, ಬಸವಣ್ಣನವರ ಮುಖ್ಯವಾದ ವಸ್ತುಗಳನ್ನು ಹೊಂದಿರುವ ಪೆಟ್ಟಿಗೆ ಹಾಗೂ ಕ್ಷೌರ ಸಾಮಗ್ರಿಯ ಪೆಟ್ಟಿಗೆ ಎಂಬ ಅರ್ಥಗಳಿದ್ದು, ಅವರು ಕ್ಷೌರ ವೃತ್ತಿಯನ್ನು ತನು-ಮನ-ಧನಗಳ ತ್ರಿಕರಣ ಶುದ್ಧಿಯಿಂದ ನಡೆಸಿಕೊಂಡು ಬಂದವರು ಎಂದರು.
ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮನವರೂ ಸಹ ಅಪಾರ ಜ್ಞಾನವುಳ್ಳ ಶರಣೆಯಾಗಿದ್ದರು. ಶರಣ ದಂಪತಿಗಳು ಬಸವಣ್ಣನವರ ವಿಚಾರಗಳಿಗೆ ಆಕರ್ಷಿತರಾಗಿ ಇಂಗಳೇಶ್ವರದಿAದ ಕೂಡಲಸಂಗಮಕ್ಕೆ ಬಂದು, ನಂತರ ಕಲ್ಯಾಣವನ್ನು ತಲುಪಿದರು. ಅಂದಿನ ಕಾಲದ ಮೌಢ್ಯತೆ ಹಾಗೂ ಜಾತಿ ಪದ್ಧತಿಯನ್ನು ಧಿಕ್ಕರಿಸಿದ ಬಸವಣ್ಣನವರು, ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು. ಬಸವಣ್ಣನವರನ್ನು ಭೇಟಿಯಾಗಲು ಬರುವ ಪ್ರತಿಯೊಬ್ಬರೂ ಮೊದಲು ಅಪ್ಪಣ್ಣನವರನ್ನೇ ಭೇಟಿಯಾಗಬೇಕೆಂಬ ನಿಯಮವಿತ್ತು. ಕಲ್ಯಾಣಕ್ಕೆ ಬರುವ ಶರಣರ ಸಮೂಹಕ್ಕೆ ತಾಂಬೂಲ ನೀಡಿ ಸ್ವಾಗತಿಸುವ ಜವಾಬ್ದಾರಿಯನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಎಂದು ವಿವರಿಸಿದರು.
ಅವರು ಕೇವಲ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿರದೆ, ಅವರ ಜೀವದ ಒಡನಾಡಿಯಾಗಿದ್ದರು. ಅಂದು ಅನುಭವ ಮಂಟಪದಲ್ಲಿ 353 ಜನ ಶಿವಶರಣರಿದ್ದು, ಸುಮಾರು 96 ಸಾವಿರ ಜಂಗಮರಿಗೆ ದಾಸೋಹ ಜರುಗುತಿತ್ತು”
ಅಪಣ್ಣನವರು ಸುಮಾರು 242 ವಚನಗಳನ್ನು ರಚಿಸಿದ್ದು ಕಾಯಕ, ಆತ್ಮಶುದ್ದಿ, ಶಿವಭಕ್ತಿ, ಸತ್ಯ, ನಿಷ್ಟೆ, ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳನ್ನು ಅತ್ಯಂತ ಸರಳ ಮತ್ತು ಪರಿಣಾಮಕಾರಿಯಾಗಿ ಅಭಿವಕ್ತಿಸಿದ್ದಾರೆ.
ಅಲ್ಲಮಪ್ರಭುದೇವರು ಹಾಗೂ ಸಿದ್ಧರಾಮೇಶ್ವರರು ಕಲ್ಯಾಣಕ್ಕೆ ಬಂದಾಗ, ಇಷ್ಟಲಿಂಗ ಪೂಜೆಯಲ್ಲಿ ಮಗ್ನರಾಗಿದ್ದ ಬಸವಣ್ಣನವರನ್ನು ಜಾಗೃತಗೊಳಿಸಿದ ಶ್ರೇಯಸ್ಸು ಅಪ್ಪಣ್ಣನವರಿಗೆ ಸಲ್ಲುತ್ತದೆ. ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಜ್ಞಾನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಇವರಿಗೆ ಶರಣರು ‘ನಿಜಸುಖಿ ಅಪ್ಪಣ್ಣ’ ಎಂಬ ಬಿರುದನ್ನು ನೀಡಿದರೆ, ಅವರ ಪತ್ನಿ ‘ನಿಜಮುಕ್ತಿ ಲಿಂಗಮ್ಮ’ ಎಂದೇ ಪ್ರಖ್ಯಾತರಾದರು. ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಕರಸ್ಥಲದ ಲಿಂಗಮಧ್ಯದಲ್ಲಿ ಅಣ್ಣ ಬಸವಣ್ಣನವರನ್ನೇ ಕಂಡು, ತಂಗಡಗಿಯಲ್ಲಿ ಲಿಂಗೈಕ್ಯರಾದರು ಎಂದು ತಿಳಿಸಿದರು.
ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಹೆಚ್ ವೀರಭದ್ರಯ್ಯ ಆಲದಹಳ್ಳಿ ಮಾತನಾಡಿ, ಬಸವಣ್ಣನವರಿಂದ ನಿಜಸುಖಿ ಎಂಬ ಬಿರುದು ಪಡೆದ ಅಪ್ಪಣ್ಣನವರು ಸಮಾಜದ ಏಳಿಗೆಗಾಗಿ ಶ್ರಮಿಸಿದ್ದರಿಂದ ಅವರ ಹೆಸರು ಇಂದಿಗೂ ಜೀವಂತವಾಗಿದೆ. ಸಮಾಜ ನಮಗಾಗಿ ಏನನ್ನು ನೀಡಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನನ್ನು ನೀಡಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ನಮ್ಮ ಸಮಾಜದಲ್ಲಿ ಅನೇಕ ಕೊರತೆಗಳಿವೆ. ಆದ್ದರಿಂದ ಮುಖ್ಯವಾಗಿ ನಾವೆಲ್ಲ ಒಗ್ಗೂಡಿ ಸಂಘಟಿತರಾಗಬೇಕು. ಹಾಗೂ ಹಡಪದ ಅಪ್ಪಣ್ಣನವರ ತತ್ವ ಸಿದ್ದಾಂತಗಳನ್ನು ಮೈಗೂಡಿಸಿಕೊಂಡು ನಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾದ ಕೆ ಎಂ ಮಲ್ಲೇಶಪ್ಪ, ತಾಲ್ಲೂಕು ಅಧ್ಯಕ್ಷರಾದ ಎಂ ಷಣ್ಮುಖಪ್ಪ, ತಹಶೀಲ್ದಾರ್ ಲಿಂಗರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್, ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಬರದ ಕಾರ್ಮೋಡ: ಪರ್ಯಾಯ ಬೆಳೆಗಳ ಬೆಳ್ಳಿರೇಖೆ ವಿಶೇಷ ಮಾಹಿತಿ :ವೈ.ಸಿ‌.ಸಂಪತ್ ಕುಮಾರ್

0

ಬರ ಸೆಳೆದ ಭೂಮಿಗೆ ಪರ್ಯಾಯ ಬೆಳೆ ಸಂಜೀವಿನಿ

ಒಣಗುತ್ತಿರುವ ಹೊಲಗಳಿಗೆ ಮರುಜೀವ ನೀಡುವ ಜಾಣ್ಮೆ

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ಭೀಕರ ಬರಗಾಲ ಆವರಿಸಿದೆ. ಜಲಾಶಯಗಳು ಬತ್ತುತ್ತಿವೆ, ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಾಂಪ್ರದಾಯಿಕ ಮತ್ತು ಹೆಚ್ಚು ನೀರು ಬೇಡುವ ಬೆಳೆಗಳನ್ನು ನಂಬಿ ಕೂತರೆ ರೈತರು ಸಂಪೂರ್ಣ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.

ಅದಕ್ಕಾಗಿಯೇ ಕೃಷಿ ತಜ್ಞರು ಈಗ ‘ಪರ್ಯಾಯ ಬೆಳೆ ಪದ್ಧತಿ’ ಯನ್ನು ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ. ಕಡಿಮೆ ನೀರು, ಕಡಿಮೆ ಅವಧಿ ಮತ್ತು ಕನಿಷ್ಠ ವೆಚ್ಚದಲ್ಲಿ ಕೈತುಂಬ ಆದಾಯ ತರುವ ಬೆಳೆಗಳತ್ತ ಮುಖ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ.

ಏನಿದು ಪರ್ಯಾಯ ಬೆಳೆ ಪದ್ಧತಿ? :
ಬರಗಾಲದ ಸಮಯದಲ್ಲಿ ನೀರಾವರಿ ಸೌಲಭ್ಯ ಕಡಿಮೆಯಾದಾಗ, ಹೆಚ್ಚು ನೀರು ಬೇಡುವ ಬೆಳೆಗಳಾದ ಭತ್ತ, ಕಬ್ಬು ಮತ್ತು ಅಡಿಕೆಗೆ ಬೆಳೆಗಳಿಗೆ ಪರ್ಯಾಯವಾಗಿ ಕಡಿಮೆ ನೀರಿನಲ್ಲಿ ಬೆಳೆಯುವ ಅಲ್ಪಾವಧಿ ಬೆಳೆಗಳನ್ನು ಬೆಳೆಯುವುದೇ ಪರ್ಯಾಯ ಬೆಳೆ ಪದ್ಧತಿ. ಇದು ಮಣ್ಣಿನ ತೇವಾಂಶವನ್ನು ಸಮರ್ಥವಾಗಿ ಬಳಸಿಕೊಂಡು, ರೈತರಿಗೆ ಆರ್ಥಿಕ ನಷ್ಟವಾಗದಂತೆ ತಡೆಯುತ್ತದೆ.

ವಲಯವಾರು ಮತ್ತು ಜಿಲ್ಲಾವಾರು ಪರ್ಯಾಯ ಬೆಳೆಗಳ ಮಹತ್ವದ ಮಾಹಿತಿ :

ರಾಜ್ಯದ ಮಣ್ಣಿನ ಗುಣಲಕ್ಷಣ ಮತ್ತು ಹವಾಮಾನ ವೈವಿಧ್ಯತೆಗೆ ಅನುಗುಣವಾಗಿ ಕೃಷಿ ಇಲಾಖೆಯು ಜಿಲ್ಲಾವಾರು ಪರ್ಯಾಯ ಬೆಳೆಗಳನ್ನು ಶಿಫಾರಸು ಮಾಡಿದೆ.

ಉತ್ತರ ಕರ್ನಾಟಕ ವಲಯ (ವಿಜಯಪುರ, ಬಾಗಲಕೋಟೆ, ಕಲಬುರಗಿ, ಬೆಳಗಾವಿ ಜಿಲ್ಲೆಗಳು) :

ಈ ಭಾಗದಲ್ಲಿ ಸಾಂಪ್ರದಾಯಿಕವಾಗಿ ಅತಿ ಹೆಚ್ಚು ನೀರು ಬೇಡುವ ಕಬ್ಬು ಮತ್ತು ಭತ್ತವನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಆದರೆ ಪ್ರಸ್ತುತ ಬರಗಾಲದ ಪರಿಸ್ಥಿತಿಯಲ್ಲಿ ಇವುಗಳ ಬದಲಾಗಿ ಕಡಿಮೆ ನೀರಿನಲ್ಲಿ ಹಾಗೂ ಕಡು ಬಿಸಿಲಲ್ಲೂ ತಡೆದುಕೊಂಡು ನಿಲ್ಲುವ ಸಜ್ಜೆ, ನವಣೆ, ಜೋಳ, ಕಡಲೆ, ಸೂರ್ಯಕಾಂತಿ, ಹೆಸರು ಮತ್ತು ಮಟ್ಕಿ (ಮಡಿಕೆ ಕಾಳು) ಬೆಳೆಗಳನ್ನು ಬೆಳೆಯಲು ಶಿಫಾರಸು ಮಾಡಲಾಗಿದೆ. ಇವು ಕಡಿಮೆ ದಿನಗಳಲ್ಲಿ ರೈತರ ಕೈಸೇರುತ್ತವೆ.

ಮಧ್ಯ ಕರ್ನಾಟಕ ವಲಯ (ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಳ್ಳಾರಿ ಜಿಲ್ಲೆಗಳು) :

ತುಂಗಭದ್ರಾ ಮತ್ತು ಇತರೆ ನದಿ ಪಾತ್ರದ ನಂಬಿಕೆಯಲ್ಲಿ ಇಲ್ಲಿ ಭತ್ತ ಮತ್ತು ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಆದರೆ ಈಗ ನೀರಿನ ಅಭಾವ ತೀವ್ರವಾಗಿರುವುದರಿಂದ, ರೈತರು ರಾಗಿ, ಹರಳು (Castor), ಶೇಂಗಾ (ನೆಲಗಡಲೆ), ಸಾಮೆ, ಕೊರಲೆ ಮತ್ತು ನವಣೆ ಬೆಳೆಗಳತ್ತ ಗಮನ ಹರಿಸಬೇಕು. ವಿಶೇಷವಾಗಿ ಹರಳು ಮತ್ತು ಶೇಂಗಾ ಮಳೆಯಾಶ್ರಿತ ಪ್ರದೇಶಗಳಿಗೂ ಅತ್ಯುತ್ತಮ ಪರ್ಯಾಯವಾಗಿವೆ.

ದಕ್ಷಿಣ ಕರ್ನಾಟಕ ವಲಯ (ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳು) :

ಕೆ.ಆರ್.ಎಸ್. ಜಲಾಶಯದ ಅಚ್ಚುಕಟ್ಟು ಪ್ರದೇಶವಾಗಿರುವ ಈ ವಲಯದಲ್ಲಿ ಭತ್ತ ಮತ್ತು ಕಬ್ಬು ಪ್ರಮುಖ ಬೆಳೆಗಳಾಗಿದ್ದವು. ಪ್ರಸ್ತುತ ನೀರಿನ ಕೊರತೆಯಿಂದಾಗಿ ಇವುಗಳ ಜಾಗದಲ್ಲಿ ಅಲ್ಪಾವಧಿ ದ್ವಿದಳ ಧಾನ್ಯಗಳಾದ ಅಲಸಂದಿ (ಬೆಣ್ಣೆಕಾಳು), ಹೆಸರು ಬೇಳೆ, ಉದ್ದು, ಸಾಸಿವೆ ಮತ್ತು ಮೇವಿನ ಜೋಳವನ್ನು ಬೆಳೆಯುವುದು ಸೂಕ್ತ. ಇದು ಜಾನುವಾರುಗಳ ಮೇವಿನ ಕೊರತೆಯನ್ನೂ ನೀಗಿಸುತ್ತದೆ.

ಕರಾವಳಿ ಮತ್ತು ಮಲೆನಾಡು ವಲಯ (ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳು) :

ಸಾಮಾನ್ಯವಾಗಿ ಅತಿ ಹೆಚ್ಚು ಮಳೆ ಪಡೆಯುವ ಈ ಪ್ರದೇಶಗಳಲ್ಲೂ ಈ ಬಾರಿ ಭತ್ತದ ಬೆಳೆಗೆ ನೀರಿನ ತತ್ವಾರ ಎದುರಾಗಿದೆ. ಹಾಗಾಗಿ, ಇಲ್ಲಿನ ಭತ್ತದ ಗದ್ದೆಗಳಲ್ಲಿ ತೇವಾಂಶ ಇರುವಾಗಲೇ ವಿವಿಧ ತರಕಾರಿಗಳು, ಕಪ್ಪು ಎಳ್ಳು, ಉದ್ದು ಮತ್ತು ಅಲ್ಪಾವಧಿಯ ದ್ವಿದಳ ಧಾನ್ಯಗಳನ್ನು ಬೆಳೆಯುವುದರಿಂದ ಭೂಮಿಯನ್ನು ಖಾಲಿ ಬಿಡದೆ ಆದಾಯ ಗಳಿಸಬಹುದು.

ಬರಗಾಲದಲ್ಲಿ ಸಿರಿಧಾನ್ಯಗಳೇ ರೈತರ ಆಪ್ತ ಮಿತ್ರರು

ಬರಗಾಲವನ್ನು ಮೆಟ್ಟಿ ನಿಲ್ಲುವ ಅದ್ಭುತ ಶಕ್ತಿ ಸಿರಿಧಾನ್ಯಗಳಿಗೆ (Millet) ಇದೆ. ರಾಗಿ, ನವಣೆ, ಸಜ್ಜೆ, ಸಾಮೆ, ಬರಗು ಮತ್ತು ಕೊರಲೆ ಬೆಳೆಗಳಿಗೆ ಅತಿ ಕಡಿಮೆ ನೀರು ಸಾಕು.

ರೋಗ ನಿರೋಧಕ ಶಕ್ತಿ: ಇವುಗಳಿಗೆ ಕೀಟಬಾಧೆ ತೀರಾ ಕಡಿಮೆ, ಹಾಗಾಗಿ ಕೀಟನಾಶಕಗಳ ವೆಚ್ಚ ಉಳಿಯುತ್ತದೆ.

ಆರೋಗ್ಯ ಹಾಗೂ ಮಾರುಕಟ್ಟೆ ಬೇಡಿಕೆ : ಪ್ರಸ್ತುತ ಮಾರುಕಟ್ಟೆಯಲ್ಲಿ ಸಿರಿಧಾನ್ಯಗಳಿಗೆ ಭಾರಿ ಬೇಡಿಕೆಯಿದ್ದು, ರೈತರಿಗೆ ಉತ್ತಮ ಬೆಲೆ ಸಿಗುತ್ತದೆ.

ಮೇವಿಗೆ ಸಹಕಾರಿ : ಧಾನ್ಯದ ಜೊತೆಗೆ ಜಾನುವಾರುಗಳಿಗೆ ಪೌಷ್ಟಿಕಾಂಶಯುಕ್ತ ಒಣ ಮೇವು ಕೂಡ ಸಿಗುತ್ತದೆ.

ದ್ವಿದಳ ಧಾನ್ಯಗಳು : ಮಣ್ಣಿನ ಫಲವತ್ತತೆಗೂ ವರ

ಹೆಸರು, ಉದ್ದು, ಅಲಸಂದಿ ಮತ್ತು ಕಡಲೆಯಂತಹ ದ್ವಿದಳ ಧಾನ್ಯಗಳು ಕೇವಲ 60 ರಿಂದ 75 ದಿನಗಳಲ್ಲಿ ಕಟಾವಿಗೆ ಬರುತ್ತವೆ. ಇವುಗಳ ವಿಶೇಷತೆಯೆಂದರೆ, ಇವು ವಾತಾವರಣದಲ್ಲಿರುವ ಸಾರಜನಕವನ್ನು (Nitrogen) ಹೀರಿ ಮಣ್ಣಿನಲ್ಲಿ ಹಿಡಿದಿಟ್ಟುಕೊಳ್ಳುವುದರಿಂದ ಭೂಮಿಯ ಫಲವತ್ತತೆ ಸ್ವಾಭಾವಿಕವಾಗಿ ಹೆಚ್ಚುತ್ತದೆ. ಇದು ಮುಂದಿನ ಹಂಗಾಮಿನ ಬೆಳೆಗೆ ವರವಾಗಲಿದೆ.

ಕೃಷಿ ತಜ್ಞರ ಪ್ರಮುಖ ಸಲಹೆ : ‘ಬರಗಾಲದ ಸಮಯದಲ್ಲಿ ಹನಿ ನೀರಾವರಿ (Drip Irrigation) ಮತ್ತು ತುಂತುರು ನೀರಾವರಿ (Sprinkler) ಪದ್ಧತಿಯನ್ನು ಕಡ್ಡಾಯವಾಗಿ ಬಳಸಿ. ಇದು ಶೇಕಡಾ 50 ಕ್ಕಿಂತ ಹೆಚ್ಚು ನೀರನ್ನು ಉಳಿಸುತ್ತದೆ ಮತ್ತು ಗಿಡದ ಬೇರುಗಳಿಗೆ ನೇರವಾಗಿ ತೇವಾಂಶವನ್ನು ತಲುಪಿಸುತ್ತದೆ. ಜೊತೆಗೆ ಮಣ್ಣಿಗೆ ಮಲ್ಚಿಂಗ್ (ಹೊದಿಕೆ) ಮಾಡುವುದರಿಂದ ತೇವಾಂಶ ಆವಿಯಾಗುವುದನ್ನು ತಡೆಯಬಹುದು’.

ಬದಲಾವಣೆಯೇ ಬದುಕಿನ ದಾರಿ

ಬರಗಾಲ ಎನ್ನುವುದು ಪ್ರಕೃತಿಯ ವಿಕೋಪ ಇರಬಹುದು, ಆದರೆ ಅದಕ್ಕೆ ಶರಣಾಗದೆ ಬುದ್ಧಿವಂತಿಕೆಯಿಂದ ಕೃಷಿ ಮಾಡುವುದು ನಮ್ಮ ಕೈಯಲ್ಲಿದೆ. ಹೆಚ್ಚು ನೀರು ಬೇಡುವ ಸಾಂಪ್ರದಾಯಿಕ ಬೆಳೆಗಳ ವ್ಯಾಮೋಹವನ್ನು ಬಿಟ್ಟು, ಪರಿಸ್ಥಿತಿಗೆ ತಕ್ಕಂತೆ ಪರ್ಯಾಯ ಬೆಳೆಗಳನ್ನು ಅಳವಡಿಸಿಕೊಂಡರೆ ಮಾತ್ರ ಈ ಭೀಕರ ಬರಗಾಲದಲ್ಲೂ ಕೃಷಿಯನ್ನು ಲಾಭದಾಯಕವಾಗಿಸಲು ಸಾಧ್ಯ.

ನಾಡಿನ ರೈತರು ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳು (KVK) ನೀಡುವ ಉಚಿತ/ರಿಯಾಯಿತಿ ದರದ ಬೀಜಗಳು ಮತ್ತು ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಪರ್ಯಾಯ ಕೃಷಿಯತ್ತ ಹೆಜ್ಜೆ ಇಡಬೇಕಾಗಿದೆ.

ಕರ್ನಾಟಕದಲ್ಲಿ ಮುಂಗಾರು ಬೆಳೆಗಳ ತುರ್ತು ನಿರ್ವಹಣೆ ಮತ್ತು ಪರ್ಯಾಯ ಬೆಳೆ ಯೋಜನೆ: ರೈತರಿಗೆ ಸಮಗ್ರ ಮಾರ್ಗದರ್ಶಿ

ಹೈದರಾಬಾದ್‍ನ ಐಸಿಎಆರ್-ಸಿಆರ್‍ಐಡಿಎ (ICAR-CRIDA) ಸಂಸ್ಥೆಯು ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಮುಂಗಾರು (ಖರೀಫ್) ಋತುವಿನಲ್ಲಿ ಎದುರಾಗುವ ಮಳೆ ಅಭಾವ ಹಾಗೂ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಮಗ್ರ ತುರ್ತು ಬೆಳೆ ಯೋಜನೆಯನ್ನು ರೂಪಿಸಿದೆ.

ಮುಂಗಾರು ಮಳೆಯು ವಿಳಂಬವಾದಾಗ ಅಥವಾ ಋತುವಿನ ವಿವಿಧ ಹಂತಗಳಲ್ಲಿ (ಆರಂಭಿಕ, ಮಧ್ಯಂತರ ಹಾಗೂ ಕೊನೆಯ ಹಂತ) ಮಳೆಯ ಕೊರತೆಯುಂಟಾದಾಗ ರೈತರು ಅನುಸರಿಸಬೇಕಾದ ಪರ್ಯಾಯ ಮಾರ್ಗಸೂಚಿಗಳು.

ವಿವಿಧ ಬೆಳೆಗಳ ತುರ್ತು ನಿರ್ವಹಣೆ

ರಾಗಿ (ಫಿಂಗರ್ ಮಿಲೆಟ್): ಮಳೆ ವಿಳಂಬವಾದರೆ GPU 28, GPU 66, ML 365, MR 1 ನಂತಹ ತಳಿಗಳನ್ನು ಶೇಕಡಾ 15-20 ರಷ್ಟು ಹೆಚ್ಚಿನ ಬಿತ್ತನೆ ಬೀಜ ಬಳಸಿ ಬಿತ್ತನೆ ಮಾಡಬೇಕು. ಬಿತ್ತನೆಗೆ ಮುನ್ನ 18 ಗಂಟೆ ನೀರಿನಲ್ಲಿ ನೆನೆಸಿ, 24 ಗಂಟೆ ನೆರಳಿನಲ್ಲಿ ಒಣಗಿಸಿ ಬೀಜೋಪಚಾರ (Seed hardening) ಮಾಡುವುದು ಸೂಕ್ತ. ಸಾಲು ತೆಳುಗೊಳಿಸುವುದು (Thinning) ಕಳೆ ತೆಗೆದು ಮಣ್ಣಿನ ಹೊದಿಕೆ (Soil mulch) ಮಾಡುವುದು ಮತ್ತು ಮಳೆ ಬಂದ ತಕ್ಷಣ ಸಾರಜನಕ ಗೊಬ್ಬರ ನೀಡುವುದು ಬೆಳೆಗೆ ಸಹಕಾರಿ.

ನೆಲಕಡಲೆ (ಕಡಲೆಕಾಯಿ): ಸಾಧಾರಣವಾಗಿ ಜುಲೈ ಮೊದಲ ವಾರ ಬಿತ್ತನೆಗೆ ಸೂಕ್ತ. ಜುಲೈ ದ್ವಿತೀಯಾರ್ಧದಲ್ಲೂ ಮಳೆಯಾಗದಿದ್ದರೆ ಹರಡುವ ತಳಿಗಳನ್ನು (DSG-1, S-230) ಬಳಸಬಹುದು ಅಥವಾ ಸೂರ್ಯಕಾಂತಿಯನ್ನು ಪರ್ಯಾಯ ಬೆಳೆಯಾಗಿ ಆಯ್ಕೆ ಮಾಡಬಹುದು. 30-40 ದಿನಗಳ ಬೆಳೆಗೆ ಮಣ್ಣು ಏರು ಮಾಡುವುದು, ಜಿಪ್ಸಮ್ ಮತ್ತು ಡಿಎಪಿ (2%) ಚಿಂಪಡಣೆ ಮಾಡುವುದು ಹಾಗೂ ತುರ್ತು ನೀರಾವರಿ ನೀಡುವುದು ಅಗತ್ಯ.

ಮೆಕ್ಕೆಜೋಳ: ಜುಲೈ ಕೊನೆಯಲ್ಲಿ ಸಸಿಗಳ ಸಂಖ್ಯೆ ಕಡಿಮೆಯಿದ್ದರೆ ಮರು ಬಿತ್ತನೆ ಅಥವಾ ಪಾಲಿಥಿನ್ ಚೀಲಗಳಲ್ಲಿ ಬೆಳೆಸಿದ ಸಸಿಗಳನ್ನು ನೆಟ್ಟು ಸಾಲು ತುಂಬಬೇಕು. ಮಣ್ಣಿನಲ್ಲಿ ತೇವಾಂಶವಿದ್ದಾಗ ಮಾತ್ರ ಮೇಲುಗೊಬ್ಬರ ನೀಡಬೇಕು. ನೀರಿನ ಅಭಾವವಿದ್ದಾಗ ಕೆಳಗಿನ ಎಲೆಗಳನ್ನು ತೆಗೆದು ಮೇವಿಗೆ ಬಳಸಬಹುದು.

ಜೋಳ, ತೊಗರಿ, ಸಜ್ಜೆ ಮತ್ತು ಸೂರ್ಯಕಾಂತಿ: ಮಳೆ ವಿಳಂಬವಾದರೆ ಜೋಳದ ಸಾಲುಗಳ ನಡುವೆ ತೊಗರಿ ಅಥವಾ ಸೂರ್ಯಕಾಂತಿಯನ್ನು ಪರ್ಯಾಯವಾಗಿ ಬಿತ್ತಬಹುದು. ಸಜ್ಜೆಯಲ್ಲಿ ತೇವಾಂಶ ಅಭಾವವಿದ್ದಾಗ ಪ್ರತಿ ಮೂರನೇ ಸಾಲನ್ನು ತೆಗೆದು ಮೇವಿಗಾಗಿ ಬಳಸಬಹುದು. ಸೂರ್ಯಕಾಂತಿಗೆ 2% ಯೂರಿಯಾ ಅಥವಾ ಕೆಸಿಎಲ್ (KCl) ಅಥವಾ 5% ಕಾಯೋಲಿನ್ (Kaolin) ಸಿಂಪಡಿಸುವುದರಿಂದ ಒಣಹವೆ ತಡೆಯಬಹುದು.

ಹೆಸರು ಮತ್ತು ಉದ್ದು: ಜುಲೈ ನಂತರದ ದಿನಗಳಲ್ಲಿ ತೇವಾಂಶದ ಅಭಾವವಿದ್ದರೆ ಕಾಯಿಗಳನ್ನು ತರಕಾರಿ ಉದ್ದೇಶಕ್ಕಾಗಿ ಅಥವಾ ಶಾರೀರಿಕ ಪಕ್ವತೆಯ ಹಂತದಲ್ಲೇ ಕೊಯಿಲು ಮಾಡಿ, ಮುಂದಿನ ರಬಿ ಬೆಳೆಗೆ ಭೂಮಿ ಸಿದ್ಧಪಡಿಸಿಕೊಳ್ಳಬೇಕು.

ಎಳ್ಳು: ಮಳೆ ಕೊರತೆಯಿದ್ದರೆ ಗಿಡಗಳ ಸಂಖ್ಯೆ ತೆಳುಗೊಳಿಸಿ, ಸಾಲುಗಳ ನಡುವೆ ಒಣ ಹುಲ್ಲಿನ ಹೊದಿಕೆ (Mulch) ಮಾಡಬೇಕು. ಕೊಯ್ಲಿನ ಸಮಯದಲ್ಲಿ ಕಾಳುಗಳು ಉದುರುವುದನ್ನು ತಡೆಯಲು ಸರಿಯಾದ ಹಂತದಲ್ಲಿ ಕೊಯ್ಲು ಮಾಡುವುದು ಮುಖ್ಯ.

ಹತ್ತಿ: ಜೂನ್ ದ್ವಿತೀಯಾರ್ಧ ಬಿತ್ತನೆಗೆ ಅತ್ಯಂತ ಸೂಕ್ತ. ಸಸಿಗಳ ಸಂಖ್ಯೆ ಕಡಿಮೆಯಿದ್ದರೆ ಪಾಲಿಥಿನ್ ಚೀಲಗಳಲ್ಲಿ ಬೆಳೆಸಿದ ಸಸಿಗಳನ್ನು ನೆಡಬೇಕು. ಹೂವು ಮತ್ತು ಕಾಯಿ ಕಟ್ಟುವ ಹಂತದಲ್ಲಿ 2% DAP + 1% MOP ಹಾಗೂ ಮೈಕ್ರೋನ್ಯೂಟ್ರಿಯೆಂಟ್ಸ್ (ಮೆಗ್ನೀಷಿಯಂ, ಝಿಂಕ್, ಬೋರಾನ್) ಸಿಂಪಡಣೆ ಮಾಡುವುದರಿಂದ ಇಳುವರಿ ಕಾಯ್ದುಕೊಳ್ಳಬಹುದು.

ರೈತರು ಕಡ್ಡಾಯವಾಗಿ ಅನುಸರಿಸಬೇಕಾದ ಸಾಗುವಳಿ ಕ್ರಮಗಳು

ಮಣ್ಣಿನ ತೇವಾಂಶ ಕಾಯ್ದುಕೊಳ್ಳುವಿಕೆ: ಹೊಲದ ಬಂಡ್ ನಿರ್ಮಾಣ (Field bunding) ಬೋದು ಮತ್ತು ಸಾಲುಗಳ ನಿರ್ಮಾಣ (Ridges and furrows), ಪ್ರತಿ 3-4 ಸಾಲುಗಳಿಗೊಮ್ಮೆ ತೇವಾಂಶ ಸಂರಕ್ಷಣಾ ಸಾಲುಗಳನ್ನು ಮಾಡುವುದು ಅತ್ಯಗತ್ಯ.

ಬಿತ್ತನೆಗೆ ಸೂಕ್ತ ಮಳೆ: ಕೆಂಪು ಮಣ್ಣಿನಲ್ಲಿ 50-60 ಮಿ.ಮೀ ಮತ್ತು ಕಪ್ಪು ಮಣ್ಣಿನಲ್ಲಿ 60-75 ಮಿ.ಮೀ ನಷ್ಟು ಉತ್ತಮ ಮಳೆಯಾದ ನಂತರವಷ್ಟೇ ಬಿತ್ತನೆ ಕೈಗೊಳ್ಳಬೇಕು. ತೇವಾಂಶವಿಲ್ಲದೆ ಒಣ ಮಣ್ಣಿನಲ್ಲಿ ಹತ್ತಿ ಮತ್ತು ನೆಲಕಡಲೆ ಬಿತ್ತನೆ ಮಾಡುವುದನ್ನು ಸಂಪೂರ್ಣವಾಗಿ ವಜಾಯಿಸಬೇಕು.

ಬೆಳೆ ಪರಿವರ್ತನೆ ಮತ್ತು ಮಿಶ್ರ ಬೆಳೆ: ಏಕಬೆಳೆಯ ಬದಲು ಧಾನ್ಯಗಳು, ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಮಿಶ್ರಬೆಳೆ (Intercropping) ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಸೂಕ್ತ.

ಪೋಷಕಾಂಶ ಮತ್ತು ನೀರಿನ ನಿರ್ವಹಣೆ: ಬರ ಪರಿಸ್ಥಿತಿಯಲ್ಲಿ ಶೇಕಡಾ 1 ರಿಂದ 3 ರಷ್ಟು ಯೂರಿಯಾ, 2% DAP ಅಥವಾ 19:19:19 ಗೊಬ್ಬರದ ದ್ರಾವಣವನ್ನು ಎಲೆಗಳ ಮೇಲೆ ಸಿಂಪಡಿಸುವುದರಿಂದ ಬೆಳೆ ಚೇತರಿಸಿಕೊಳ್ಳುತ್ತದೆ. ಸಾಧ್ಯವಿದ್ದಲ್ಲಿ ತುಂತುರು (Sprinkler) ಅಥವಾ ಹನಿ ನೀರಾವರಿ (Drip) ಮೂಲಕ ಜೀವ ರಕ್ಷಣಾ ನೀರು ನೀಡಬೇಕು.

ಬೆಳೆ ವಿಮೆ ಮತ್ತು ಹವಾಮಾನ ಮಾಹಿತಿ: ರೈತರು ಕಡ್ಡಾಯವಾಗಿ ಹವಾಮಾನ ಆಧಾರಿತ ಬೆಳೆ ವಿಮೆ ಸೌಲಭ್ಯವನ್ನು ಪಡೆದುಕೊಳ್ಳಬೇಕು ಹಾಗೂ ಸ್ಥಳೀಯ ಕೃಷಿ ಇಲಾಖೆ ನೀಡುವ ಹವಾಮಾನ ಆಧಾರಿತ ಸಲಹೆಗಳನ್ನು ನಿರಂತರವಾಗಿ ಗಮನಿಸಬೇಕು.

ರೈತರಿಗೆ ಇಲಾಖೆಯ ಮುನ್ನೆಚ್ಚರಿಕೆ ಸಂದೇಶ

ಮುಂಗಾರು ಹಂಗಾಮಿನಲ್ಲಿ ವಾತಾವರಣದ ಅನಿಶ್ಚಿತತೆಯಿಂದ ಬೆಳೆ ನಷ್ಟವಾಗುವುದನ್ನು ತಡೆಗಟ್ಟಲು ಈ ಬೆಳೆ ಯೋಜನೆಯು ಅತ್ಯಂತ ಸಹಕಾರಿಯಾಗಿದೆ. ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ತಳಿ ಹಾಗೂ ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಪಡೆದುಕೊಂಡು ಕೃಷಿ ಕೈಗೊಳ್ಳಬಹುದಾಗಿದೆ.

ವೈ.ಸಿ. ಸಂಪತ್ ಕುಮಾರ್
ಮುಖ್ಯ ವರದಿಗಾರ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

ರಾಜ್ಯದಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರರ ಮಕ್ಕಳಿಗೆ ಶಿಷ್ಯವೇತನ:ಇಲಾಖೆ ಪ್ರಕಟಣೆ

0

ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಮೂಲ ನಿವಾಸಿ ಮಿಲಿಟರಿ ಪಿಂಚಣಿದಾರ ಜೆ.ಸಿ.ಓ ಶ್ರೇಣಿವರೆಗಿನ ಮಾಜಿ ಸೈನಿಕರ ಮಕ್ಕಳ ಶಿಷ್ಯವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2026-27ನೇ ಸಾಲಿನಲ್ಲಿ ಒಂದನೇ ತರಗತಿಯಿಂದ ಅಂತಿಮ ಪದವಿ/ಡಿಪ್ಲೋಮಾ ವರೆಗೆ ವ್ಯಾಸಂಗ ಮಾಡುತ್ತಿರುವವರು ದಿನಾಂಕ 31-10-2026 ರೊಳಗಾಗಿ ಮತ್ತು ವೃತ್ತಿಪರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವವರು ದಿನಾಂಕ 30-11-2026 ರೊಳಗಾಗಿ ಶಿಷ್ಯವೇತನಕ್ಕಾಗಿ ಶುಲ್ಕ ರಹಿತ ಅರ್ಜಿಗಳನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಕಛೇರಿಯಿಂದ ಪಡೆದು ಯಾವ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವರೋ ಆ ಜಿಲ್ಲೆಗೆ ಸಂಬಂಧಿತ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಛೇರಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಛೇರಿಯ ದೂರವಾಣಿ ಸಂಖ್ಯೆ 08182-220925 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರಾದ ಸಿ.ಎ ಹಿರೇಮಠ ತಿಳಿಸಿದ್ದಾರೆ.

ಹೊಸನಗರದಿಂದ ವ್ಯಕ್ತಿ ನಾಪತ್ತೆ: ಪೊಲೀಸ್ ಠಾಣೆ ಮಾಹಿತಿ ಪ್ರಕಟಣೆ

0

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸನಗರ ಚರ್ಚ್ ರಸ್ತೆಯ ವಾಸಿ ತಾಸಿನುಲ್ಲಾ ಎಂಬ 28 ವರ್ಷ ಯುವಕ ಜೂ. 25 ರಿಂದ ಕಾಣೆಯಾಗಿದ್ದಾರೆ. ಈ ವ್ಯಕ್ತಿಯು 4.8 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಮತ್ತು ಕಪ್ಪು ಬಣ್ಣದ ಚೌಕಳಿಯ ತುಂಬು ತೋಲಿನ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ಈ ವ್ಯಕ್ತಿಯ ಬಗ್ಗೆ ಸುಳಿವು ದೊರೆತಲ್ಲಿ ಹೊಸನಗರ ಪೊಲೀಸ್ ಠಾಣೆ ದೂ.ಸಂ.9480803337, ತೀರ್ಥಹಳ್ಳಿ ಪೊಲೀಸ್ ಠಾಣೆ ದೂ.ಸಂ.: 08181-220388, ಶಿವಮೊಗ್ಗ ಎಸ್‌ಪಿ ಕಚೇರಿ ದೂ.ಸಂ.: 08182-261400 / 9480803364 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ತಿಳಿಸಿದೆ.

ಕಾರ್ಮಿಕರ ಮೇಲೆ ಹಲ್ಲೆ,ಇಸ್ಪೀಟು ಅಡ್ಡೆಗಿಲ್ಲ ತಡೆ,ಯುವಜನ ಗಾಂಜಾವ್ಯಸನ: ಪೊಲೀಸ್ ಇಲಾಖೆಯಿಂದ ಸಾಕಷ್ಟು ಕ್ರಮವಿಲ್ಲ: ಜಿಲ್ಲಾ ಯುವ ಕಾಂಗ್ರೆಸ್ ಆರೋಪ

0

ಹೊರ ಊರುಗಳಿಂದ ಬಂದು, ತುತ್ತು ಅನ್ನಕ್ಕಾಗಿ ಹೋಟೆಲ್‌ಗಳಲ್ಲಿ ಕ್ಲೀನರ್‌ಗಳಾಗಿ ಕೆಲಸ ಮಾಡುವ ಕಾರ್ಮಿಕನ ಮೇಲೆ ಮೊನ್ನೆ ರಾತ್ರಿ ಏಕಾಏಕಿ ಹಲ್ಲೆ ಮಾಡಿದ ದೊಡ್ಡಪೇಟೆ ಪೋಲೀಸ್ ಠಾಣೆಯ ಪೋಲೀಸ್ ಅಧಿಕಾರಿಯ ವರ್ತನೆ ನಾಗರೀಕ ಸಮಾಜ ತಲೆತಗ್ಗಿಸುವಂಥದ್ದು. ಸಮಯ ಮೀರಿ ಹೋಟೆಲ್ ವ್ಯಾಪಾರವನ್ನು ನಡೆಸುತ್ತಿರುವ ಹೋಟೆಲ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ, ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಹಲ್ಲೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಸಾರ್ವಜನಿಕರ ವಲಯದ ಪ್ರಶ್ನೆಯಾಗಿದೆ

ನಗರದಲ್ಲಿ ಯುವಕರು ಗಾಂಜಾ ವ್ಯಸನಿಗಳಾಗಿ ಸಾರ್ವಜನಿಕ ವಲಯದಲ್ಲಿ ಕಿರಿಕಿರಿ ಉಂಟು ಮಾಡುತ್ತಾ ಭಯದ ವಾತಾವರಣ ಸೃಷ್ಟಿಸಿದ್ದು, ಜೊತೆಗೆ ಶಿವಮೊಗ್ಗ ನಗರ ಸೇರಿದಂತೆ ಹೊರವಲಯ, ಗ್ರಾಮೀಣ ಪ್ರದೇಶದ ಗಡಿ ಭಾಗದಲ್ಲಿ ಅಕ್ರಮವಾಗಿ ಎಗ್ಗಿಲ್ಲದೆ ಯಾವುದೇ ಕಾನೂನಿನ ಭಯವಿಲ್ಲದೆ ಕಾನೂನುಬಾಹಿರ ಇಸ್ಪೀಟ್ ಆಟಗಳ ಚಟುವಟಿಕೆ ಸರಾಗವಾಗಿ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಬೇಕಾದ ಪೋಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಇಸ್ಪೀಟ್ ಅಡ್ಡೆಗಳಿಗೆ ರಕ್ಷಣಾ ಕವಚದಂತೆ ರಕ್ಷಣೆ ನೀಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಇಸ್ಪೀಟು ಅಡ್ಡೆಗಳಿಂದ ಹಲವು ಕುಟುಂಬಗಳು ಮನೆ-ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದು, ತಂದೆ-ತಾಯಿ, ಹೆಂಡತಿ-ಮಕ್ಕಳು ಕಣ್ಣೀರಿಡುತ್ತಾ ಸರ್ಕಾರ ಮತ್ತು ಪೋಲೀಸ್ ಇಲಾಖೆಗೆ ಶಾಪ ಹಾಕುತ್ತಿದ್ದು, ಕೆಲವು ಯುವಕರು ಇಸ್ಪೀಟ್ ಆಟದಲ್ಲಿ ತೊಡಗಿಸಿಕೊಂಡು ನಷ್ಟ ಅನುಭವಿಸಿ, ನಂತರ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುತ್ತಿರುವುದು ಅತ್ಯಂತ ಕಳವಳದ ಸಂಗತಿ. ಇಂತಹ ಹಲವು ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಪೋಲೀಸ್ ಇಲಾಖೆಯ ಕೆಲವೇ ಅಧಿಕಾರಿಗಳು, ತುತ್ತು ಅನ್ನಕ್ಕಾಗಿ ಕೆಲಸ ಮಾಡುವ ಹೋಟೆಲ್ ಕಾರ್ಮಿಕರ ಮೇಲೆ ಹಲ್ಲೆ ನಡೆಸುವುದು ಎಷ್ಟರಮಟ್ಟಿಗೆ ಸರಿ. ಕೂಡಲೇ ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳು ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ ಪೋಲೀಸ್ ಅಧಿಕಾರಿ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು,

ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಇಸ್ಪೀಟು ಅಡ್ಡೆಗಳ ಮೇಲೆ ದಾಳಿ ನಡೆಸಿ ಸಂಪೂರ್ಣ ಬಂದ್ ಮಾಡಿಸಬೇಕು. ಇನ್ನು ಹತ್ತು ದಿನಗಳಲ್ಲಿ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ, ಶಿವಮೊಗ್ಗ ಯುವ ಕಾಂಗ್ರೆಸ್‌ನಿಂದ ಸ್ಥಳೀಯ ನಾಗರೀಕರೊಂದಿಗೆ ನಾವುಗಳೇ ಮುತ್ತಿಗೆ ಹಾಕಲಾಗುವುದು. ಮುಂದಾಗುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗುವುದೆಂದು ಎಚ್ಚರಿಸುತ್ತಿದ್ದೇವೆ

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ನ ಹೆಚ್ ಪಿ ಗಿರೀಶ್, ಹಾಪ್ ಕಾಮ್ಸ್ ನಿರ್ದೇಶಕ ಎಸ್ ಎಮ್ ಶರತ್ ಮರಿಯಪ್ಪ, ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಎಸ್ ಕುಮಾರೇಶ್,ಎಸ್ ಬಸವರಾಜ್, ಯುವ ಕಾಂಗ್ರೆಸ್ ನ ಪದಾಧಿಕಾರಿಗಳಾದ ಪುಷ್ಪಕ್ ಕುಮಾರ್, ಎಂ ರಾಕೇಶ್, ಮೋಹನ್ ಸೋಮಿನಕೊಪ್ಪ, ರಾಹುಲ್ ಸಿಗೆಹಟ್ಟಿ, ಸಚಿನ್, ರಾಜೇಶ್ ಮಂದಾರ, ಅಧ್ಯಾನ್ ಪಾಷಾ, ಎಸ್ ಜೆ, ಮಿಥುನ್ , ಸಂಜಯ್, ಪ್ರಜ್ವಲ್, ಕಿರಣ್ ರಂಗೇಗೌಡ, ವೆಂಕಟೇಶ್ ಕಲ್ಲೂರು, ನಿತಿನ್ ಇತರರು ಇದ್ದರು

ವಿನಯವಂತ ಶಾಸಕ “ಚೆನ್ನಿ” ಅಭಿಮಾನಿಗಳ ಬಂಗಾರ ಬರಹ: ಎಸ್.ಸಂಗಮೇಶ್, ಶಿವಮೊಗ್ಗ

0

ಸಂಘಟನೆಯಿಂದ ಯಶಸ್ಸು, ಸರಳತೆಯೇ ನಿಜವಾದ ವರ್ಚಸ್ಸು

(ಚೆನ್ನಿ ಅಣ್ಣನವರ ಹುಟ್ಟುಹಬ್ಬದ ಸಂದರ್ಭಕ್ಕೆ ವಿಶೇಷ ಅಂಕಣ)

ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರ ಹುಟ್ಟುಹಬ್ಬಗಳು ಎಂದರೆ ಸಾಕು, ಊರಿನ ಪ್ರತಿಯೊಂದು ವೃತ್ತ, ರಸ್ತೆ, ಗೋಡೆ, ವಿದ್ಯುತ್ ಕಂಬಗಳೆಲ್ಲವೂ ಫ್ಲೆಕ್ಸ್‌, ಬ್ಯಾನರ್‌, ಕಟೌಟ್‌ಗಳಿಂದ ತುಂಬಿಹೋಗುತ್ತವೆ. ಕೆಲವೊಮ್ಮೆ ಒಂದು ವಾರ್ಡ್ ಮಟ್ಟದ ಮುಖಂಡರ ಹುಟ್ಟುಹಬ್ಬಕ್ಕೂ ನೂರಾರು ಫ್ಲೆಕ್ಸ್‌ಗಳು ರಾರಾಜಿಸುತ್ತವೆ. ಹುದ್ದೆಗಿಂತ ಪ್ರಚಾರ ದೊಡ್ಡದಾಗುತ್ತದೆ. ಸೇವೆಗಿಂತ ಪ್ರದರ್ಶನವೇ ಮುಖ್ಯವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳ ಸ್ಪರ್ಧೆ, ರಸ್ತೆಗಳಲ್ಲಿ ಬ್ಯಾನರ್‌ಗಳ ಪೈಪೋಟಿ—ಇವೆಲ್ಲವೂ ಇಂದಿನ ರಾಜಕೀಯ ಆಚರಣೆಗಳ ಭಾಗವಾಗಿವೆ.

ಆದರೆ ಈ ಸಂಭ್ರಮದ ಹಿಂದೆ ನಾವು ಮರೆತುಬಿಡುವ ಮತ್ತೊಂದು ಸತ್ಯವಿದೆ. ಪ್ಲಾಸ್ಟಿಕ್ ಫ್ಲೆಕ್ಸ್‌ಗಳಿಂದ ಪರಿಸರಕ್ಕೆ ಆಗುವ ಹಾನಿ, ಕಾರ್ಯಕ್ರಮ ಮುಗಿದ ನಂತರ ಉಳಿಯುವ ಕಸ, ಸಾರ್ವಜನಿಕ ಸ್ಥಳಗಳ ಸೌಂದರ್ಯಕ್ಕೆ ಉಂಟಾಗುವ ಧಕ್ಕೆ ಮತ್ತು ಅನಗತ್ಯ ವೆಚ್ಚ. ಪರಿಸರ ಸಂರಕ್ಷಣೆಯ ಬಗ್ಗೆ ವೇದಿಕೆಗಳಲ್ಲಿ ಮಾತನಾಡುವುದು ಸುಲಭ; ಆದರೆ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಪರೂಪ.

ಇಂತಹ ಸಂದರ್ಭದಲ್ಲಿ ಶಿವಮೊಗ್ಗದ ಹಾಲಿ ಶಾಸಕರಾದ ಶ್ರೀ ಎಸ್. ಎನ್. ಚೆನ್ನಬಸಪ್ಪ (ಚೆನ್ನಿ ಅಣ್ಣ) ಅವರ ಹುಟ್ಟುಹಬ್ಬದ ಆಚರಣೆ ವಿಭಿನ್ನ ಸಂದೇಶವನ್ನು ನೀಡಿದೆ.

ನಗರದಾದ್ಯಂತ ಯಾವುದೇ ಫ್ಲೆಕ್ಸ್‌ಗಳ ಅಬ್ಬರವಿಲ್ಲ. ಬ್ಯಾನರ್‌ಗಳ ಸ್ಪರ್ಧೆಯಿಲ್ಲ. ಕಟೌಟ್‌ಗಳ ಪ್ರದರ್ಶನವಿಲ್ಲ. ಆದರೂ ಅವರ ಮೇಲಿನ ಜನರ ಪ್ರೀತಿ ಕಿಂಚಿತ್ತೂ ಕಡಿಮೆಯಾಗಿಲ್ಲ. ಏಕೆಂದರೆ ಜನರ ಮನಸ್ಸಿನಲ್ಲಿ ಸ್ಥಾನ ಪಡೆದ ನಾಯಕನಿಗೆ ಗೋಡೆಗಳ ಮೇಲೆ ಸ್ಥಾನ ಹುಡುಕುವ ಅಗತ್ಯವಿರುವುದಿಲ್ಲ.

ಸಂಘಟನೆಯ ಸಾಮಾನ್ಯ ಕಾರ್ಯಕರ್ತನಾಗಿ ಆರಂಭವಾದ ಅವರ ಪಯಣ ಇಂದು ವಿಧಾನಸಭೆಯವರೆಗೆ ತಲುಪಿದೆ. ಆದರೆ ಹುದ್ದೆ ಅವರ ವ್ಯಕ್ತಿತ್ವವನ್ನು ಬದಲಾಯಿಸಿಲ್ಲ. ಶಾಸಕರಾದ ನಂತರವೂ ಗುಲಗಂಜಿಯಷ್ಟೂ ಬದಲಾಗದ ಅವರ ನಡೆ-ನುಡಿ, ಕಾರ್ಯಕರ್ತರೊಂದಿಗಿನ ಆತ್ಮೀಯತೆ ಮತ್ತು ಜನಸಾಮಾನ್ಯರೊಂದಿಗೆ ಬೆರೆಯುವ ಸರಳತೆ ಅವರನ್ನು ವಿಶೇಷರನ್ನಾಗಿಸಿದೆ. ಜ್ಯೇಷ್ಠರಿಗೆ ವಿಶ್ವಾಸಾರ್ಹ ಸಹೋದ್ಯೋಗಿ, ಕಾರ್ಯಕರ್ತರಿಗೆ ಬೆನ್ನೆಲುಬು, ಕಿರಿಯರಿಗೆ ಮಾರ್ಗದರ್ಶಿ, ಸಾಮಾನ್ಯ ಜನರಿಗೆ ಮನೆಯ ಸದಸ್ಯನಂತಿರುವ ಆತ್ಮೀಯತೆ—ಇವೆಲ್ಲವೂ ಚೆನ್ನಿ ಅಣ್ಣನವರ ವ್ಯಕ್ತಿತ್ವದ ಪರಿಚಯ.

ಪ್ರತಿದಿನ ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿಯೇ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ, ನಾಗರಿಕರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಸ್ಪಂದಿಸುವುದು ಅವರ ಕಾರ್ಯಶೈಲಿಯ ವಿಶೇಷತೆ. ಅಭಿವೃದ್ಧಿ ಎಂದರೆ ಕೇವಲ ಯೋಜನೆಗಳನ್ನು ಘೋಷಿಸುವುದಲ್ಲ; ಜನರ ಬಳಿಗೆ ಹೋಗಿ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳುವುದೆಂಬ ನಂಬಿಕೆ ಅವರದು.

ಚೆನ್ನಿ ಅಣ್ಣನವರ ವ್ಯಕ್ತಿತ್ವದ ಮತ್ತೊಂದು ಪ್ರಮುಖ ಆಯಾಮವೆಂದರೆ ಅವರ ಅಭಿವೃದ್ಧಿ ಚಿಂತನೆ. ಅಭಿವೃದ್ಧಿ ಎಂಬುದು ಅವರಿಗೆ ಚುನಾವಣಾ ಘೋಷಣೆಯಲ್ಲ; ಅದು ನಿರಂತರ ಚಿಂತನೆ ಮತ್ತು ನಿರಂತರ ಕಾರ್ಯ. ಶಿವಮೊಗ್ಗದ ಮೂಲಸೌಕರ್ಯ, ಶಿಕ್ಷಣ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು, ಸಾರ್ವಜನಿಕ ಸೌಲಭ್ಯಗಳು ಹಾಗೂ ನಾಗರಿಕರ ಬದುಕಿನ ಗುಣಮಟ್ಟವನ್ನು ಉತ್ತಮಗೊಳಿಸುವ ಕೆಲಸಗಳಿಗೆ ಅವರು ವಿಶೇಷ ಆದ್ಯತೆ ನೀಡುತ್ತಿದ್ದಾರೆ. ಅಭಿವೃದ್ಧಿಯ ಪ್ರತಿಯೊಂದು ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಶಿವಮೊಗ್ಗವನ್ನು ಇನ್ನಷ್ಟು ಪ್ರಗತಿಪರ ನಗರವನ್ನಾಗಿಸುವ ಸಂಕಲ್ಪದೊಂದಿಗೆ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅಭಿವೃದ್ಧಿ ಪರವಾದ ಚಿಂತನೆ, ಅಭಿವೃದ್ಧಿ ಪರವಾದ ನಿರ್ಧಾರಗಳು ಮತ್ತು ಅಭಿವೃದ್ಧಿಗಾಗಿ ನಿರಂತರ ಪರಿಶ್ರಮ—ಇವುಗಳ ಮೂಲಕ ಶಿವಮೊಗ್ಗದ ಬೆಳವಣಿಗೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದ್ದಾರೆ.

ಅವರನ್ನು ಹುಡುಕಬೇಕಾದರೆ ದೊಡ್ಡ ವೇದಿಕೆಗಳಿಗೆ ಹೋಗಬೇಕಾಗಿಲ್ಲ. ತಾಸುಗಟ್ಟಳೆ ಕಾಯಬೇಕಿಲ್ಲ, ಪಿಎ ಗಳಿಗೆ ಗೋಗರೆಯಬೇಕಿಲ್ಲ,
ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರೊಂದಿಗೆ ಕುಳಿತು ಪಕ್ಷದ ಕೆಲಸ ಮಾಡವುದನ್ನು ಕಾಣಬಹುದು. ಬೈಟಕ್ ಮುಗಿದ ನಂತರ ಕಚೇರಿ ಎದುರಿನ ಟೀ ಅಂಗಡಿಯಲ್ಲಿ ಎಲ್ಲರೊಂದಿಗೆ ನಗುತ್ತಾ ಚಹಾ ಕುಡಿಯುವುದನ್ನು ಕಾಣಬಹುದು.

ಮಾರಿಕಾಂಬ ದೇವಸ್ಥಾನದ ಎದುರಿನ ಹೋಟೆಲ್‌ನಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಾ
ಕಾಣಬಹುದು. ಅಭಿವೃದ್ಧಿಯ ದೃಷ್ಟಿಯಿಂದ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಅವಲೋಕನ ಮಾಡುತ್ತಾ, ಹಿರಿಯರ ಸಲಹೆಗಳನ್ನು, ಕಿರಿಯರಿಗೆ ಪಕ್ಷ ಸಂಘಟನೆಯ ಮಾರ್ಗದರ್ಶನವನ್ನು ನೀಡುತ್ತಾ ಸಂಘಟನೆಗಾಗಿ ಹಗಲಿರುಳು ಸೇವೆಮಾಡುವ, ಸಂಘಟನೆಯ ರೋಚಕ ಅನುಭವಗಳನ್ನು ಮೇಲಕು ಹಾಕುತ್ತಾ ಎಲ್ಲರಲ್ಲಿಯೂ ಒಂದಾಗಿರುವ ಜನಾನುರಾಗಿ ನಮ್ಮ ಚೆನ್ನಿ ಅಣ್ಣ.

ಎರಡು ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯಲ್ಲಿ ಕೋಟೆ ಕ್ಯಾಂಟೀನ್‌ನಲ್ಲಿ ಸ್ವತಃ ಅನ್ನ ಬಡಿಸುತ್ತಿರುವುದನ್ನು ಕಂಡಿದ್ದೇವೆ.
ಶಿವಮೊಗ್ಗದ ಐತಿಹಾಸಿಕ ಶ್ರೀ ಕೋಟೆ ಭೀಮೇಶ್ವರ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಕಾರ್ಯಕರ್ತರು ಹಾಗೂ ಭಕ್ತರೊಂದಿಗೆ ಹೆಜ್ಜೆ ಹಾಕುತ್ತಾ ಸಂಭ್ರಮಿಸಿ ಲಕ್ಷಾಂತರ ಭಕ್ತರಿಗೆ ಬೇಕಾದ ಎಲ್ಲಾ ವ್ಯವಸ್ಥೆಯ ಮಾಡಿಸಿ, ಬೆಳಗ್ಗೆ ಆರರಿಂದ ಮರುದಿನ ಬೆಳಿಗ್ಗೆಯವರೆಗೂ ಗಣಪತಿಯ ವಿಸರ್ಜನೆಯಾಗುವವರೆಗೂ ಜೊತೆನಿಂತು ಸಂಭ್ರಮಿಸುವ ಭಕ್ತನಾಗಿ,ಹಿಂದುತ್ವದ ಧ್ವನಿಯಾಗಿ ನೋಡಿದ್ದೇವೆ.

ಶಾಸನಸಭೆಯಲ್ಲಿ
ಪಕ್ಷದ ತತ್ವ-ಸಿದ್ಧಾಂತಗಳ ಪರವಾಗಿ ದೃಢವಾಗಿ ಮಾತನಾಡುವ; ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಅವರದೇ ಧಾಟಿಯಲ್ಲಿ ಉತ್ತರಿಸುವುದನ್ನು ಕಂಡು ಹೆಮ್ಮೆಪಟ್ಟಿದ್ದೇವೆ.

ವೈಯಕ್ತಿಕವಾಗಿ ನನಗೆ ತಿಳಿದಿರುವಂತೆ, ಚೆನ್ನಿ ಅಣ್ಣ ಯಾವುದೇ ಕಾರಣಕ್ಕೂ ತಮ್ಮ ಮನೆಯಲ್ಲಿಯೂ ಪ್ಲಾಸ್ಟಿಕ್ ಬಳಕೆಯನ್ನು ದೂರವಿಡುತ್ತಾರೆ. ಪರಿಸರದ ಮೇಲಿನ ಅವರ ಕಾಳಜಿ ಭಾಷಣದಲ್ಲಲ್ಲ, ಬದುಕಿನಲ್ಲಿದೆ.

ಕಳೆದ ವಿಧಾನಸಭಾ ಅಧಿವೇಶನದಲ್ಲಿ ನೂರಾರು ಕಾರ್ಯಕರ್ತರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗಿ, ಪ್ರಜಾಪ್ರಭುತ್ವದ ಶಕ್ತಿಪೀಠವನ್ನು ಕಾರ್ಯಕರ್ತರಿಗೂ ಪರಿಚಯಿಸುವ ಮೂಲಕ ಅವರು ಹೊಸ ಇತಿಹಾಸ ನಿರ್ಮಿಸಿದರು. ಆ ಸಂದರ್ಭದಲ್ಲಿ ಕಾರ್ಯಕರ್ತರಿಗೆ ನೀಡಿದ್ದು ಪ್ಲಾಸ್ಟಿಕ್ ನೀರಿನ ಬಾಟಲಿಗಳಲ್ಲ; ಮರುಬಳಕೆ ಮಾಡಬಹುದಾದ ಸ್ಟೀಲ್ ಬಾಟಲಿಗಳು. ಸಣ್ಣ ವಿಷಯವೆಂದು ಕಾಣಬಹುದಾದ ಈ ನಿರ್ಧಾರದ ಹಿಂದೆಯೂ ಪರಿಸರದ ಮೇಲಿನ ಅವರ ಬದ್ಧತೆಯೇ ಅಡಗಿತ್ತು.

ಮಲೆನಾಡಿನ ಮಗನಿಗೆ ಇರಬೇಕಾದ ದೊಡ್ಡ ಗುಣವೆಂದರೆ ಮಲೆನಾಡನ್ನು ಮಲೆನಾಡಿನಂತೆಯೇ ಪ್ರೀತಿಸುವುದು. ಆ ಗುಣ ಚೆನ್ನಿ ಅಣ್ಣನವರಲ್ಲಿ ಸಹಜವಾಗಿ ಕಾಣುತ್ತದೆ. ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅವರು, ಅದೇ ಸಮಯದಲ್ಲಿ ಪರಿಸರವನ್ನೂ ಪರಿವಾರದಂತೆ ಪ್ರೀತಿಸುತ್ತಾರೆ. ಅಭಿವೃದ್ಧಿ ಮತ್ತು ಪರಿಸರ ಪರಸ್ಪರ ವಿರೋಧಿಗಳಲ್ಲ; ಒಂದಕ್ಕೊಂದು ಪೂರಕವಾಗಬಹುದು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕವೇ ತೋರಿಸುತ್ತಿದ್ದಾರೆ.

ಅವರ ಸರಳತೆ ಕೇವಲ ವೈಯಕ್ತಿಕ ಗುಣವಲ್ಲ; ಅದು ಅವರ ರಾಜಕೀಯದ ತತ್ವ. ಬಂದವರನ್ನು ನಗುಮುಖದಿಂದ ಸ್ವಾಗತಿಸುವುದು, ಸಹಾಯ ಕೇಳಿದವರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದು, ಕಾರ್ಯಕರ್ತರನ್ನು ಗೌರವಿಸುವುದು, ಸಂಘಟನೆಯನ್ನು ಕುಟುಂಬದಂತೆ ಕಾಣುವುದು—ಇವೆಲ್ಲವೂ ಅವರನ್ನು ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಗೊಳಿಸಿವೆ.

ಅದಕ್ಕಾಗಿಯೇ ಅವರು ಅಭ್ಯರ್ಥಿಯಾದಾಗ ಕಾರ್ಯಕರ್ತರು ಅವರನ್ನು “ಕಾರ್ಯಕರ್ತರ ಅಭ್ಯರ್ಥಿ”, ನಂತರ “ವಿನಯವಂತ ಶಾಸಕ” ಎಂದು ಹೃದಯದಿಂದ ಕರೆದರು. ಅದು ಯಾವುದೇ ಪ್ರಚಾರದಿಂದ ಬಂದ ಬಿರುದಲ್ಲ; ಜನರು ಮತ್ತು ಕಾರ್ಯಕರ್ತರು ಅವರ ವ್ಯಕ್ತಿತ್ವಕ್ಕೆ ನೀಡಿದ ಗೌರವ.

ಇಂದು ಅನೇಕರು ತಮ್ಮ ಮುಖವನ್ನು ಊರಿನ ನಗರಗಳಲ್ಲಿ ಕಂಡಕಂಡಲ್ಲಿ ಬಿತ್ತುತ್ತಿದ್ದಾರೆ. ಮುಖಬಿತ್ತುವುದೆ ನಾಯಕನ ಗುಣವೆಂದು ಭಾವಿಸಿದ್ದಾರೆ.
ಆದರೆ ಚೆನ್ನಿ ಅಣ್ಣ ಜನರ ಮನಗಳಲ್ಲಿ ಪ್ರೀತಿ ವಿಶ್ವಾಸ ಅಭಿವೃದ್ಧಿ ಮತ್ತು ಮೌಲ್ಯಗಳನ್ನು ಬಿತ್ತುತ್ತಿದ್ದಾರೆ. ಅದಕ್ಕಾಗಿಯೇ ಅವರಿಗೆ ಫ್ಲೆಕ್ಸ್‌ಗಳ ಅಗತ್ಯವಿಲ್ಲ; ಜನರ ಪ್ರೀತಿಯೇ ಅವರ ಅತಿದೊಡ್ಡ ಬ್ಯಾನರ್.
ಅದೇ ಅವರ ಪವರ್.

ಮಲೆನಾಡಿನ ಹೆಮ್ಮೆಯ ಮಗ, ಕಾರ್ಯಕರ್ತರ ಅಣ್ಣ, ಅಭಿವೃದ್ಧಿಯ ಚಿಂತಕ, ಪರಿಸರದ ಕಾವಲುಗಾರ ಹಾಗೂ ಸರಳತೆಯ ಪ್ರತಿರೂಪವಾದ ಚೆನ್ನಿ ಅಣ್ಣನವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

ನಿಮ್ಮ ಈ ಸರಳ ನಡೆ, ಅಭಿವೃದ್ಧಿಯ ದೃಷ್ಟಿಕೋನ, ಪರಿಸರದ ಮೇಲಿನ ಬದ್ಧತೆ ಮತ್ತು ಕಾರ್ಯಕರ್ತರ ಮೇಲಿನ ಪ್ರೀತಿ ನಮ್ಮಂಥ ಸಾವಿರಾರು ಯುವಕರಿಗೆ ದಾರಿದೀಪವಾಗಲಿ.

– ಸಂಗಮೇಶ್. ಎಸ್.
ಶಿವಮೊಗ್ಗ

ಮನೆಯೆ ಮೊದಲ ಪಾಠಶಾಲೆ, ಪೋಷಕರೇ ಮೊದಲ ಗುರು- ಶಶಿಕುಮಾರ್

0

ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಕುಟುಂಬದ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಶಿವಮೊಗ್ಗದ ಸ್ಟೈಲ್ ಡಾನ್ಸ್ ಗ್ರೂಪ್ ವತಿಯಿಂದ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ ಪಾದಪೂಜೆ ಮಾಡುವ ವಿಶಿಷ್ಟ ಕಾರ್ಯಕ್ರಮವನ್ನು ಸ೦ಸ್ಥೆ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಇಂದಿನ ಆಧುನಿಕ ಯುಗದಲ್ಲಿ ಪೋಷಕರಿಗೆ ಗೌರವ ನೀಡುವ ಸಂಸ್ಕೃತಿ ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಂಸ್ಥೆಯ ಸಂಸ್ಥಾಪಕ ಶಶಿಕುಮಾರ್ ಮಾತನಾಡಿ, “ಮನೆಯೇ ಮೊದಲ ಪಾಠಶಾಲೆ, ಪೋಷಕರೇ ಮೊದಲ ಗುರು” ಎಂಬ ಸಂದೇಶವನ್ನು ಮಕ್ಕಳಿಗೆ ತಿಳಿಸುವುದೇ ನಮ್ಮ ಉದ್ದೇಶ. ನಮ್ಮಲ್ಲಿ ನೃತ್ಯ ಕಲೆಯ ಜೊತೆಗೆ ಸಂಸ್ಕೃತಿ, ಶಿಸ್ತು ಹಾಗೂ ಗುರು ಹಿರಿಯರಿಗೆ ಗೌರವ ನೀಡುವ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಕೆಲಸವನ್ನು ಸ್ಟೈಲ್ ಡಾನ್ಸ್ ಗ್ರೂಪ್ ನಿರಂತರವಾಗಿ ಮಾಡುತ್ತದೆ ಎಂದು ಹೇಳಿದರು.

ಪೋಷಕರು ಸಹ ಈ ಕಾರ್ಯಕ್ರಮವನ್ನು ಮೆಚ್ಚಿ, ಇಂತಹ ಸಂಸ್ಕಾರಯುತ ಶಿಕ್ಷಣವು ಇಂದಿನ ಪೀಳಿಗೆಗೆ ಅಗತ್ಯವಾಗಿದೆ ಇತರಹದ ಆಚರಣೆಯನ್ನು ಸಣ್ಣ ವಯಸ್ಸಲ್ಲೆ ಮಕ್ಕಳಿಗೆ ತಿಳಿಸುವುದರಿ೦ದ ಮುಂಬರುವ ದಿನಗಳಲ್ಲಿ ವೃಧ್ದಾಶ್ರಮಗಳಿಗೆ ಸೇರಿಸುವ ಮಕ್ಕಳ ಸ೦ಖ್ಯೆ ಸಹ ಕಡಿಮೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾದಕ ವಸ್ತುಗಳ ವ್ಯಸನ ತಡೆ: ಗಂಭೀರ ಕಾರ್ಯಾಚರಣೆ- ಪ್ರಭುಲಿಂಗ ಕವಳಿಕಟ್ಟಿ

0

ಮಾದಕ ವ್ಯಸನದಂತಹ ಸಾಮಾಜಿಕ ಪಿಡುಗಿನಿಂದ ವಿದ್ಯಾರ್ಥಿಗಳ ಜೀವನ ಹಾಳಾಗುವುದನ್ನು ತಡೆಯಲು ಎಲ್ಲಾ ಇಲಾಖೆಗಳು ಸಮನ್ವಯದೊಂದಿಗೆ ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ನಾರ್ಕೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಶಾಲಾ-ಕಾಲೇಜುಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚು ಸೇರುವ ಸ್ಥಳಗಳಲ್ಲಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಿಕ್ಷಣ ಇಲಾಖೆ ಪ್ರತಿ ತಿಂಗಳು ಮಕ್ಕಳ ಕ್ಲಬ್‌ಗಳಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ವರದಿ ಸಲ್ಲಿಸಬೇಕು. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ಸಿಗರೇಟ್, ಗುಟ್ಕಾ ಸೇರಿದಂತೆ ಯಾವುದೇ ಮಾದಕ ವಸ್ತುಗಳ ಬಳಕೆ ಮಾಡದಂತೆ ವಾರ್ಡನ್‌ಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಸೂಚಿಸಿದರು.

ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮಾದಕ ದ್ರವ್ಯ ಪತ್ತೆಗಾಗಿ ಟೆಸ್ಟಿಂಗ್ ಕಿಟ್‌ಗಳು ಲಭ್ಯವಿದ್ದು, ವ್ಯಸನ ಮುಕ್ತಿ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದರು. ಅಬಕಾರಿ ಇಲಾಖೆ ಅನಧಿಕೃತ ಮದ್ಯ ಮಾರಾಟವನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಕೃಷಿ ಇಲಾಖೆ ಬೆಳೆ ಸಮೀಕ್ಷೆ ವೇಳೆ ಹಾಗೂ ಅರಣ್ಯ ಇಲಾಖೆ ತಮ್ಮ ನಿಯಮಿತ ಪರಿಶೀಲನೆ ವೇಳೆ ಅಕ್ರಮ ಗಾಂಜಾ ಬೆಳೆ ಕುರಿತು ಮಾಹಿತಿ ಸಂಗ್ರಹಿಸಿ ಸಂಬಂಧಿತ ಇಲಾಖೆಗಳೊಂದಿಗೆ ಹಂಚಿಕೊಳ್ಳಬೇಕು ಎಂದು ತಿಳಿಸಿದರು.

ನಗರದ ಒಂದು ಕಾಂಡಿಮೆಂಟ್ಸ್ ಅಂಗಡಿಯಲ್ಲಿ ಆಯುರ್ವೇದ ಔಷಧಿ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ಮಾತ್ರೆಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅದು ನೋವು ನಿವಾರಕ ಮಾತ್ರೆ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಯುಷ್ ಇಲಾಖೆ ಹಾಗೂ ಔಷಧ ನಿಯಂತ್ರಣಾಧಿಕಾರಿಗಳು ಅಂಗಡಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಟ್ರೇಡ್ ಲೈಸೆನ್ಸ್ ರದ್ದುಪಡಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ, ಗಾಂಜಾ ಸಾಗಾಟ, ಪೆಡ್ಲರ್‌ಗಳ ಮಾಹಿತಿ ಹಾಗೂ ಅಕ್ರಮ ಚಟುವಟಿಕೆಗಳ ವಿರುದ್ಧ ಅರಣ್ಯ, ಅಬಕಾರಿ ಮತ್ತು ಪೊಲೀಸ್ ಇಲಾಖೆಗಳು ನಿರಂತರ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸಬೇಕು ಎಂದರು. ಶಿಕ್ಷಣ ಇಲಾಖೆ ಶಾಲಾ-ಕಾಲೇಜುಗಳ ಸುತ್ತಮುತ್ತ ಮಾದಕ ದ್ರವ್ಯ ತಡೆಗೆ ವಿಶೇಷ ನಿಗಾ ವಹಿಸುವಂತೆ ಸೂಚಿಸಿದರು.