ಧ್ಯಾನ ಯೋಗ ಪ್ರಾಣಾಯಾಮಗಳು ಮನಸ್ಸಿನ ಆತಂಕ ಹಾಗೂ ಭಯವನ್ನು ದೂರ ಮಾಡುವುದಲ್ಲದೆ ನಮ್ಮ ಕೆಲಸದಲ್ಲಿ ಗಮನ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಆಂತರಿಕ ಪ್ರಶಾಂತತೆಯನ್ನ ನೀಡುತ್ತದೆ ಎಂದು ಯೋಗ ಪ್ರಾಣಾಯಾಮ ಧ್ಯಾನದ ವಿಶೇಷ ತರಬೇತುದಾರರಾದ ಶ್ರೀಯುತ ಹಾಲಯ್ಯ ವಿರಕ್ತಮಠ ಅಭಿಮತ ಪಡಿಸಿದರು ಅವರು ಶ್ರೀ ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಹಮ್ಮಿಕೊಳ್ಳಲಾದ ವಿಶೇಷ ಯೋಗ ಧ್ಯಾನ ಪ್ರಾಣಾಯಾಮದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದರು. ನಮ್ಮ ದೇಹದಲ್ಲಿ ಇರುವ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡಲು ನಿದ್ರಾಹೀನತೆಯನ್ನು ದೂರ ಮಾಡಲು ಹಾಗೂ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯೋಗ ಪ್ರಾಣಾಯಾಮ ಧ್ಯಾನ ಬಹಳ ವಿಶೇಷವಾದ ಪಾತ್ರವನ್ನು ವಹಿಸಿವೆ ಹಾಗೆ ಇವುಗಳನ್ನು ಕ್ರಮಬದ್ಧವಾಗಿ ಮಾಡಬೇಕು ಮತ್ತು ಯೋಗ ಪ್ರಾಣಾಯಾಮ ಧ್ಯಾನ ಮಾಡುವವರು ದೀರ್ಘಾಯುಷ್ಯವುಳ್ಳವರಾಗುತ್ತಾರೆ ಸಾಕಷ್ಟು ಕಾಯಿಲೆಗಳು ನಮ್ಮ ದೇಹದಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಮಾಯವಾಗುತ್ತವೆ ಹಾಗೆ ನಮ್ಮ ಆತ್ಮವಿಶ್ವಾಸ ಮತ್ತು ದೈಹಿಕ ಹಾಗೂ ಮಾನಸಿಕ ಸದೃಢತೆ ಉಂಟಾಗುತ್ತದೆ ಚಿಕ್ಕ ಮಕ್ಕಳಿಂದ ವಯೋ ವೃದ್ಧರವರೆಗೂ ಯೋಗ ಪ್ರಾಣಾಯಾಮ ಧ್ಯಾನ ಪರಿಪೂರ್ಣವಾದ ಆರೋಗ್ಯ ನೀಡುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ ಎಂದು ನುಡಿದರು. ಇದೇ ಸಂದರ್ಭದಲ್ಲಿ ಹಿರಿಯ ಯೋಗ ಶಿಕ್ಷಕರಾದ ಜಿಎಸ್ ಓಂಕಾರವರು ಮಾತನಾಡುತ್ತಾ ಶಿವಗಂಗಾ ಯೋಗ ಸಂಸ್ಥೆ ನಗರದ 42 ಕಡೆ ಉಚಿತವಾಗಿ ಪ್ರತಿನಿತ್ಯ ಯೋಗ ಪ್ರಾಣಾಯಾಮ ಧ್ಯಾನ ಹಾಗೂ ಸಂಸ್ಕಾರದ ತರಗತಿಗಳನ್ನು ನಡೆಸುತ್ತಿದ್ದು ಇದರ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು ಮತ್ತೋರ್ವ ಯೋಗ ಶಿಕ್ಷಕರಾದ ಹರೀಶ್ ಅವರು ಮಾತನಾಡುತ್ತಾ ಸಾಕಷ್ಟು ನಮ್ಮ ಆಂತರಿಕ ಕಾಯಿಲೆಗಳು ಸಮಸ್ಯೆಗಳು ಯೋಗದಲ್ಲಿ ಪರಿಹಾರವನ್ನು ಕಂಡುಕೊಂಡವರು ಸಾಕಷ್ಟು ಜನರಿದ್ದಾರೆ ಇಂದು ಪ್ರಪಂಚದ ಸಾಕಷ್ಟು ದೇಶಗಳಲ್ಲಿ ಯೋಗವನ್ನು ಒಪ್ಪಿ ಅಭ್ಯಾಸ ಮಾಡುತ್ತಿದ್ದಾರೆ ಪ್ರಪಂಚಕ್ಕೆ ಯೋಗವನ್ನು ಕೊಟ್ಟಂತಹ ನಮ್ಮ ಭಾರತ ದೇಶ ವಿಶೇಷ ಸ್ಥಾನಮಾನ ಗಳಿಸಿದೆ ಎಂದು ನುಡಿದರು. ಶಿಬಿರದಲ್ಲಿ ರೋಟರಿ ಜಿ ವಿಜಯಕುಮಾರ್
ಕಾಟನ್ ಜಗದೀಶ್. ಸುಬ್ರಮಣಿ. ಮಹೇಶ್. ನರಸೂಜಿ ರಾವ್. ಶಂಕರ್. ದೀಪಕ್. ಶಶಿಧರ್. ಶಿವಕುಮಾರ್. ಅರುಣ್ ಹಾಗೂ ಉಷಾ.. ಲತಾ. ಸುಜಾತ.ಸೌಮ್ಯ.. ವಸುಂದರಾ.. ಶೈಲಜಾ ಹಾಗೂ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು
ದೇಹದ ರಕ್ತದೊತ್ತಡ ನಿಯಂತ್ರಣ, ನಿದ್ರಾಹೀನತೆ ದೂರಮಾಡಲು ಯೋಗ ಸಹಕಾರಿ- ಹಾಲಯ್ಯ ವಿರಕ್ತಮಠ
ನೀಟ್ ಬದಲಿಗೆ ಸಿಇಟಿ ಪರೀಕ್ಷಾ ಪದ್ಧತಿ ಜಾರಿಗೆ ತನ್ನಿ.ಕರುನಾಡು ಯುವಶಕ್ತಿ ಆಗ್ರಹ
ದೇಶದ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ರಾಜಕೀಯ ಮಾಡುವುದನ್ನು ನಿಲ್ಲಿಸಿ, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನೀಟ್ (ಓಇಇಖಿ) ಬದಲಾಗಿ ರಾಜ್ಯದ ಸಿಇಟಿ (ಅಇಖಿ) ವ್ಯವಸ್ಥೆಗೆ ಆದ್ಯತೆ ನೀಡಬೇಕು ಎಂದು ಕರುನಾಡ ಯುವಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಎನ್. ಮಿಲನ್‌ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಒಂದೇ ರಾಷ್ಟ್ರವ್ಯಾಪಿ ಪ್ರವೇಶ ಪರೀಕ್ಷೆಯಿಂದ ಗ್ರಾಮೀಣ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಲಭ್ಯವಿರುವ ಗುಣಮಟ್ಟದ ಕೋಚಿಂಗ್, ತರಬೇತಿ ಮತ್ತು ಆರ್ಥಿಕ ಸೌಲಭ್ಯಗಳು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮಾನವಾಗಿ ದೊರೆಯದ ಕಾರಣ ಪ್ರತಿಭಾವಂತ ವಿದ್ಯಾರ್ಥಿಗಳೂ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಶಿಕ್ಷಣ ವ್ಯವಸ್ಥೆ ಹಾಗೂ ಸ್ಥಳೀಯ ವಿದ್ಯಾರ್ಥಿಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಿಇಟಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ದೊರೆಯುವುದರ ಜೊತೆಗೆ ಅವರ ಶೈಕ್ಷಣಿಕ ಹಿತಾಸಕ್ತಿಯೂ ಉತ್ತಮವಾಗಿ ರಕ್ಷಣೆ ಪಡೆಯಲಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ಭವಿಷ್ಯವನ್ನು ರಾಜಕೀಯದ ಸಾಧನವನ್ನಾಗಿ ಬಳಸದೆ, ಅವರ ಉತ್ತಮ ಶಿಕ್ಷಣ ಮತ್ತು ಉಜ್ವಲ ಭವಿಷ್ಯಕ್ಕೆ ಪೂರಕವಾಗುವ ನೀತಿಗಳನ್ನು ಸರ್ಕಾರ ಜಾರಿಗೆ ತರಬೇಕು. ಶಿಕ್ಷಣ ಕ್ಷೇತ್ರದ ನಿರ್ಧಾರಗಳು ಲಕ್ಷಾಂತರ ವಿದ್ಯಾರ್ಥಿಗಳ ಬದುಕಿನ ಮೇಲೆ ಪರಿಣಾಮ ಬೀರುವುದರಿಂದ ಅವುಗಳನ್ನು ಜವಾಬ್ದಾರಿಯುತವಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನ ಅವಕಾಶ ಮತ್ತು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಬೇಕು. ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಬೆಂಬಲ ಯೋಜನೆಗಳನ್ನು ಜಾರಿಗೆ ತರಬೇಕು. ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಿದಾಗ ಮಾತ್ರ ನಿಜವಾದ ಪ್ರತಿಭೆಗೆ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.
ನೀಟ್ ಬದಲಾಗಿ ಸಿಇಟಿ ವ್ಯವಸ್ಥೆಯನ್ನು ಜಾರಿಗೆ ತಂದು ರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನು ಕಾಪಾಡುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಕರುನಾಡ ಯುವಶಕ್ತಿ ಸಂಘಟನೆ ಒತ್ತಾಯಿಸಿದೆ.
Sagara Gangothri College of Education ಕುವೆಂಪು ವಿವಿ ಮಾನ್ಯತೆ ಇಲ್ಲ: ಸಾಗರದ ಬಿಎಡ್.ಕಾಲೇಜಿನ ವಿದ್ಯಾರ್ಥಿವೃಂದದ ಪ್ರತಿಭಟನೆ
Sagara Gangothri College of Education ಸಾಗರದ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿ.ಎಡ್. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಸರ್ಕಾರಿ ಸೀಟು ಪಡೆದು ಕಾಲೇಜಿಗೆ ದಾಖಲಾಗಿದ್ದರೂ ಮೂಲಭೂತ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಬಿ.ಎಡ್. ಕೋರ್ಸ್‌ಗೆ ದಾಖಲಾಗಿ ಆರು ತಿಂಗಳು ಕಳೆದರೂ ವಿದ್ಯಾರ್ಥಿ ನೋಂದಣಿ ಸಂಖ್ಯೆ (ಯುಜಿ ನಂಬರ್) ನೀಡಿಲ್ಲ. ಅಲ್ಲದೆ, ಕುವೆಂಪು ವಿಶ್ವವಿದ್ಯಾಲಯದಿಂದ ಕೋರ್ಸ್‌ಗೆ ಮಾನ್ಯತೆ ದೊರೆತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ವಿದ್ಯಾರ್ಥಿಗಳಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಅದಕ್ಕೆ ತಕ್ಕ ಸೌಲಭ್ಯಗಳನ್ನು ಕಾಲೇಜು ಒದಗಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು. ಪರೀಕ್ಷೆಯ ದಿನಾಂಕ ಸಮೀಪಿಸುತ್ತಿದ್ದರೂ ಯುಜಿ ನಂಬರ್ ನೀಡದಿರುವುದರಿಂದ ತಮ್ಮ ಭವಿಷ್ಯ ಆತಂಕಕ್ಕೆ ಸಿಲುಕಿದೆ ಎಂದು ಹೇಳಿದರು.
Sagara Gangothri College of Education ಪ್ರತಿಭಟನೆ ವೇಳೆ ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲರ ನಡುವೆ ತೀವ್ರ ವಾದ-ವಿವಾದ ನಡೆಯಿತು. ಪರೀಕ್ಷೆಯನ್ನು ಮುಂದೂಡಿ ಮೊದಲು ಯುಜಿ ನಂಬರ್ ನೀಡಬೇಕು. ಒಂದು ವೇಳೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗದಿದ್ದರೆ ತಮ್ಮನ್ನು ಬೇರೆ ಕಾಲೇಜಿಗೆ ವರ್ಗಾವಣೆ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಧ್ಯಪ್ರವೇಶಿಸಿದರು. ಬಳಿಕ ಆಕ್ರೋಶಗೊಂಡ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಶೈಕ್ಷಣಿಕ ಶುಲ್ಕ ಮರುಪಾವತಿ ಮತ್ತು ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಗಳಿಗೆ ಅರ್ಜಿಸಲ್ಲಿಕೆ ಅವಧಿ ವಿಸ್ತರಣೆ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಅರ್ಹ ಸಾಧಕ ಕ್ರೀಡಾಪಟುಗಳು ಹಾಗೂ ಇತರರಿಂದ ವಿವಿಧ ಪ್ರಶಸ್ತಿ ಮತ್ತು ವಿವಿಧ ಪ್ರೋತ್ಸಾಹಧನ ನೀಡುವ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಅಗಸ್ಟ್
31 ರವರೆಗೆ ವಿಸ್ತರಿಸಿದೆ.
2025-26 ನೇ ಸಾಲಿನ ಕ್ರೀಡಾ ವಿದ್ಯಾರ್ಥಿ ವೇತನ ಹಾಗೂ 2026-27 ನೇ ಸಾಲಿನ ಶೈಕ್ಷಣಿಕ ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಕೆಗೆ ಈ ಹಿಂದೆ ಜುಲೈ 31 ಕೊನೆಯ ದಿನವಾಗಿತ್ತು ಈಗ ಅವಧಿಯನ್ನು ಅಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ.ಅರ್ಹ ಕ್ರೀಡಾಪಟುಗಳು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಎಂ.ಎನ್.ಅನುಚೇತ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕುಂಸಿ- ಆನಂದಪುರ ರೈಲು ಮಾರ್ಗದ ಡ್ರೈನೇಜ್ ದುರಸ್ತ: ವಾಹನ ಓಡಾಟಕ್ಕೆ ಬದಲಿ ಮಾರ್ಗ: ಡಿಸಿ ಆದೇಶ
ಶಿವಮೊಗ್ಗ ಜಿಲ್ಲೆಯ ಕುಂಸಿ-ಆನಂದಪುರ ನಡುವೆ ಬರುವ ಎಲ್.ಹೆಚ್/ ಎಲ್‌ಸಿ.ನಂ: 105 ರಲ್ಲಿ ಡ್ರೈನೇಜ್ ಸರಿಪಡಿಸಲು ಎಲ್‌ಸಿ ಓಪನ್ನಿಗೆ ಮತ್ತು ಪರೀಕ್ಷೆಗಾಗಿ ಜು.20 ರಿಂದ 30 ರವರೆಗೆ ವಾಹನಗಳು ಮತ್ತು ಸಾರ್ವಜನಿಕರು ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿ ಆದೇಶ ನೀಡಿದ್ದು, ಈ ಆದೇಶವನ್ನು ಆ. 05 ರವರೆಗೆ ಮುಂದೂಡಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಠಿಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ತೆರೆದು ಡ್ರೈನೇಜ್ ಸರಿಪಡಿಸುವ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ಮೋಟಾರು ವಾಹನ ಕಾಯ್ದೆ 1988 ಕಲಂ 115ರನ್ವಯ
ಎಲ್‌ಸಿ 105- 117/000-100 ಕುಂಸಿ-ಆನಂದಪುರ ರೈಲ್ವೆ ನಿಲ್ದಾಣಗಳ ನಡುವೆ ದಿ:01/08/2026 ರ ಮಧ್ಯಾಹ್ನ 1 ರಿಂದ ದಿ: 05/08/2026 ರ ರಾತ್ರಿ 12.59 ರವರೆಗೆ ತಾತ್ಕಾಲಿಕವಾಗಿ ಯಡೇಹಳ್ಳಿ ಯಿಂದ ರಿಪ್ಪನ್‌ಪೇಟೆ ರಸ್ತೆ – ಹಾಲಗದ್ದೆ-ಬಟ್ಟೆಮಲ್ಲಪ್ಪ-ಹೊಸನಗರ ಹಾಗೂ ಆನಂದಪುರ-ಯಡೆಹಳ್ಳಿ-ಹೆಬೈಲ್ ರಸ್ತೆ-ಆಡೂರು-ಕೋಣನತಲೆ-ಹೊಸೂರು-ಸಾಗರ ಈ ಪರ್ಯಾಯ ಮಾರ್ಗವಾಗಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಲಾಗಿದ್ದು, ಸಾರ್ವಜನಿಕರು/ ವಾಹನ ಸವಾರರು ಈ ಬದಲಿ ಮಾರ್ಗಗಳಲ್ಲಿ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದ್ದಾರೆ.
B.Y. Raghavendra ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ ಜೋಷಿ ಅವರ ನೇತೃತ್ವದಲ್ಲಿ ದೇಶದ ಶಿಕ್ಷಣ ಕ್ಷೇತ್ರ ಮತ್ತಷ್ಟು ಪ್ರಗತಿ ಕಾಣಲಿ : ಬಿ.ವೈ.ರಾಘವೇಂದ್ರ
B.Y. Raghavendra ಕೇಂದ್ರ ಶಿಕ್ಷಣ ಸಚಿವರಾಗಿ ನೂತನ ಜವಾಬ್ದಾರಿ ವಹಿಸಿಕೊಂಡಿರುವ ಸನ್ಮಾನ್ಯ ಶ್ರೀಪ್ರಹ್ಲಾದ ಜೋಷಿ ಅವರನ್ನು ಇಂದು ನವದೆಹಲಿಯಲ್ಲಿ ಸಂಸದರಾದ ಬಿ.ವೈರಾಘವೇಂದ್ರ, ಕೋಟಾ ಶ್ರೀನಿವಾಸ ಪೂಜಾರಿ, ವಿಶ್ವೇಶ್ವರ ಹೆಗಡೆ ಕಾಗೇರಿ ಮುಂತಾದವರು ಭೇಟಿ ಮಾಡಿ ಹೃತ್ಪೂರ್ವಕವಾಗಿ ಅಭಿನಂದಿಸಿದರು
ಪ್ರಹ್ಲಾದ ಜೋಷಿ ಅವರ ಅನುಭವ ಹಾಗೂ ಸಮರ್ಥ ನೇತೃತ್ವದಲ್ಲಿ ದೇಶದ ಶಿಕ್ಷಣ ಕ್ಷೇತ್ರವು ಮತ್ತಷ್ಟು ಪ್ರಗತಿ ಕಾಣಲಿ ಎಂದು ಸಂಸದ ರಾಘವೇಂದ್ರ ಅವರು ವಿಶೇಷವಾಗಿ ಶುಭ ಹಾರೈಸಿದರು
ರಸ್ತೆ ಸಂಪರ್ಕಕ್ಕಾಗಿ ಗ್ರಾಮಸ್ಥರು ಮತ್ತು ಶಾಲಾಮಕ್ಕಳಿಂದ ಪ್ರತಿಭಟನೆ
ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತೀರ್ಥಹಳ್ಳಿ ತಾಲೂಕಿನ ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೇಮನೆ ಗ್ರಾಮಕ್ಕೆ ಸಮರ್ಪಕ ರಸ್ತೆ ಇಲ್ಲದ ಕಾರಣ ವಾಹನ ಸಂಚಾರ ಸಂಪೂರ್ಣ ದುಸ್ತರವಾಗಿದ್ದು, ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಬಿಂತ್ಲಾ ಗ್ರಾಮದವರೆಗೆ ಖಾಸಗಿ ಜಮೀನು ಇರುವ ಕಾರಣ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಆದರೆ ಅಲ್ಲಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಕಡೇಮನೆ ಗ್ರಾಮಕ್ಕೆ ಇದುವರೆಗೆ ಯಾವುದೇ ರಸ್ತೆ ನಿರ್ಮಿಸಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿದಿನ ಶಾಲೆಗೆ ತೆರಳಲು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಮಕ್ಕಳು ಹಾಗೂ ಗ್ರಾಮಸ್ಥರು ಒತ್ತಾಯಿಸಿದರು.
ಪ್ರತಿಭಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಶಿವಮೊಗ್ಗದಲ್ಲಿಅಪ್ರಾಪ್ತನಿಗೆ ಬೈಕ್ ನೀಡಿದ ಮಾಲೀಕನಿಗೆ ಬಿತ್ತು ದಂಡ
ಶಿವಮೊಗ್ಗದಲ್ಲಿ ಅಪ್ರಾಪ್ತನಿಗೆ ಬೈಕ್ ನೀಡಿದ ಹಿನ್ನೆಲೆ ಮಾಲೀಕನಿಗೆ ದಂಡ ಹಾಕಲಾಗಿದೆ. ಬೈಕ್ ಕೊಟ್ಟ ಮಾಲೀಕನಿಗೆ ಬರೋಬ್ಬರಿ 25,000 ರೂ. ದಂಡ ವಿಧಿಸಲಾಗಿದೆ. ಸೋಮಿನಕೊಪ್ಪ ರಸ್ತೆಯಲ್ಲಿ ವಿನೋಬನಗರ ಪೊಲೀಸರ ಕಾರ್ಯಾಚರಣೆ ವೇಳೆ, ರಾಂಗ್ ಸೈಡ್‌ನಲ್ಲಿ ಕೆಟಿಎಂ ಡ್ಯೂಕ್ ರೈಡಿಂಗ್ ಮಾಡುವಾಗ ಪೊಲೀಸರ ಕೈಗೆ ಸವಾರ ಸಿಕ್ಕಿಬಿದ್ದಿದ್ದ. ಅತಿವೇಗ, ರಾಂಗ್ ಸೈಡ್ ಡ್ರೈವಿಂಗ್ ತಡೆದು ನಿಲ್ಲಿಸಿದಾಗ ಅಸಲಿ ಸಂಗತಿ ಹೊರಕ್ಕೆ ಬಂದಿದೆ.
ಪೊಲೀಸರ ತಪಾಸಣೆ ವೇಳೆ ಬೈಕ್ ಸವಾರ 17 ವರ್ಷದ ಅಪ್ರಾಪ್ತ ಎಂಬುದು ತಿಳಿದು ಬಂದಿದೆ. ನಂತರ ಮಾಲೀಕನ ವಿರುದ್ಧ ಕೋರ್ಟ್‌ಗೆ ದೋಷಾರೋಪಣಾ ಪತ್ರ ವಿನೋಬನಗರ ಪೊಲೀಸರು ಸಲ್ಲಿಸಿದ್ದರು. ಶಿವಮೊಗ್ಗ ಕೋರ್ಟ್ 25,000 ರೂ. ದಂಡ ವಿಧಿಸಿ ಆದೇಶ ಮಾಡಿದೆ.
ತಂತ್ರಜ್ಞಾನ ಮತ್ತು ಮಾನವೀಯ ಮೌಲ್ಯಗಳು ಕೂಡಿದಾಗ ಮಾತ್ರ ಸಮಗ್ರ ಅಭಿವೃದ್ಧಿ- ಶಾಲಿನಿ ರಜನೀಶ್
ಕೃತಕ ಬುದ್ಧಿಮತ್ತೆ (Artificial Intelligence – AI) ರೂಪದ ಆಧುನಿಕ ತಂತ್ರಜ್ಞಾನವು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ, ಗ್ರಾಮೀಣ ಭಾಗದ ಪ್ರತಿಯೊಬ್ಬ ಪ್ರತಿಭಾವಂತ ಯುವಕ-ಯುವತಿಯರಿಗೂ ತಲುಪಿದಾಗ ಮಾತ್ರ ದೇಶದ ನೈಜ ಅಭಿವೃದ್ಧಿ ಸಾಧ್ಯ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಐ.ಎ.ಎಸ್. ತಿಳಿಸಿದರು.
ಅವರು ಇಂದು ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ‘ಸತ್ಯಸಾಯಿ ಗ್ರಾಮ’ದಲ್ಲಿ ಏರ್ಪಡಿಸಲಾಗಿದ್ದ ‘ರೂರಲ್ ಶೋರ್ಸ್ AI ಕೌಶಲ್ಯ ಮತ್ತು ಅನುಭವ ಕೇಂದ್ರ’ (RuralShores AI Skilling and Experience Centre) ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, “ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ AI ನಂತಹ ಆಧುನಿಕ ತಂತ್ರಜ್ಞಾನಕ್ಕೆ ಕರುಣೆ, ನೈತಿಕತೆ ಮತ್ತು ಸದ್ಗುಣಗಳ ಸ್ಪರ್ಶವಿರಬೇಕು. ತಂತ್ರಜ್ಞಾನವು ಮಾನವನ ಬುದ್ಧಿವಂತಿಕೆ ಮತ್ತು ಸದ್ಗುಣಗಳನ್ನು ಹೆಚ್ಚಿಸುವಂತಿರಬೇಕು. ಸತ್ಯಸಾಯಿ ಗ್ರಾಮದಂತಹ ಪವಿತ್ರ ಹಾಗೂ ಸೇವಾ ಮನೋಭಾವದ ವಾತಾವರಣದಲ್ಲಿ ಈ ಕೇಂದ್ರ ಪ್ರಾರಂಭವಾಗಿರುವುದು ಅತ್ಯಂತ ಸೂಕ್ತವಾಗಿದೆ,” ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಯುವಕರ ಸಬಲೀಕರಣ :
“ರೂರಲ್ ಶೋರ್ಸ್ ಸಂಸ್ಥೆಯು ಕಳೆದ 18 ವರ್ಷಗಳಿಂದ ಗ್ರಾಮೀಣ ಭಾಗದ ಯುವಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಅವರು ಇದ್ದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ.
ಈವರೆಗೆ ಸುಮಾರು 30,000 ಕ್ಕೂ ಹೆಚ್ಚು ಯುವಕ-ಯುವತಿಯರಿಗೆ ತರಬೇತಿ ಹಾಗೂ ಉದ್ಯೋಗಾವಕಾಶ ನೀಡಿರುವುದು ಮತ್ತು ಅಮೆರಿಕದಲ್ಲೂ ‘ಪೀಪಲ್‌ಶೋರ್ಸ್’ ಮೂಲಕ ಸುಮಾರು 500 ಯುವತಿಯರು/ಮಹಿಳೆಯರಿಗೆ ಉದ್ಯೋಗ ನೀಡುತ್ತಿರುವುದು ಹೆಮ್ಮೆಯ ವಿಷಯ,” ಎಂದರು.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸೇವೆಗೆ ಶ್ಲಾಘನೆ:
“ಉಚಿತ ಶಿಕ್ಷಣ, ಉಚಿತ ಆರೋಗ್ಯ ಮತ್ತು ಪೌಷ್ಟಿಕ ಆಹಾರ ಒದಗಿಸುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶನದ ಸೇವಾ ಕಾರ್ಯಗಳು ಅದ್ಭುತವಾಗಿವೆ. ಭಾರತದ ಪ್ರಥಮ ಸಂಪೂರ್ಣ ಉಚಿತ ಗ್ರಾಮೀಣ ವೈದ್ಯಕೀಯ ಕಾಲೇಜು (ಶ್ರೀ ಮಧುಸೂದನ ಸಾಯಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಸೇರಿದಂತೆ ಅನೇಕ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿರುವುದು ಮಾದರಿಯಾಗಿದೆ,” ಎಂದು ತಿಳಿಸಿದರು.
ತಂತ್ರಜ್ಞಾನ ರಾಜಧಾನಿಯಾಗಿ ಕರ್ನಾಟಕದ ಕೊಡುಗೆ:
“ಕರ್ನಾಟಕವು ದೇಶದ ತಂತ್ರಜ್ಞಾನ ರಾಜಧಾನಿಯಾಗಿ ಬೆಳೆಯುತ್ತಿದ್ದು, ಇಂತಹ AI ಕೌಶಲ್ಯ ಕೇಂದ್ರಗಳು ಗ್ರಾಮೀಣ ಯುವಕರನ್ನು ಭವಿಷ್ಯದ ತಂತ್ರಜ್ಞಾನಕ್ಕೆ ಸಜ್ಜುಗೊಳಿಸಲಿವೆ. ಭಾರತವು ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಾಯಕತ್ವ ವಹಿಸಲು ಗ್ರಾಮೀಣ ಭಾಗದ ಪ್ರತಿಭೆಗಳ ಕೊಡುಗೆ ಅಪಾರವಾಗಲಿದೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಜಿ, ರೂರಲ್ ಶೋರ್ಸ್ ಸಂಸ್ಥೆಯ ನಿರ್ದೇಶಕರು, ಗಣ್ಯರು, ದೇಶ-ವಿದೇಶಗಳ ಭಕ್ತಾದಿಗಳು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೈಕ್ ಸವಾರ ಗಾಡಿಕೊಪ್ಪದ ವೀರೇಶ್ ದಾರುಣ ಸಾವು: ಪೊಲೀಸ್ ತನಿಖೆ ಪ್ರಗತಿಯಲ್ಲಿದೆ
ಶಿವಮೊಗ್ಗ ತಾಲೂಕಿನ ವೀರಗಾರನ ಬೈರನಕೊಪ್ಪ ಸಮೀಪದ ಆಯನೂರು ರಸ್ತೆಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತರನ್ನು ಶಿವಮೊಗ್ಗ ನಗರದ ಗಾಡಿಕೊಪ್ಪ ನಿವಾಸಿ ವೀರೇಶ್ (28) ಎಂದು ಗುರುತಿಸಲಾಗಿದೆ. ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ವೀರೇಶ್ ಅವರ ತಲೆಗೆ ತೀವ್ರ ಗಾಯವಾಗಿದ್ದು, ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ಬಳಿಕ ಡಿಕ್ಕಿ ಹೊಡೆದ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪರಾರಿಯಾದ ವಾಹನ ಹಾಗೂ ಚಾಲಕನ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ವಾಹನವನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಂಡಿದೆ.
