ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಅವಧಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಿದ್ದು, ಅರ್ಹ ಮತದಾರರು ಈ ಸದವಕಾಶದ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು. ಆಗಸ್ಟ್ 8ರ ಕೊನೆಯ ದಿನದವರೆಗೂ ಬಿಎಲ್‌ಒ (BLO) ಮನೆಮನೆ ಭೇಟಿಗೆ ನೀಡಿ ಮಾಹಿತಿ ಸಂಗ್ರಹಿಸುವರು. ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ನಂತರ ಸೆಪ್ಟೆಂಬರ್ 16 ರವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಧಿ ಇರುತ್ತದೆ. ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಅಕ್ಟೋಬರ್ 15ರೊಳಗಾಗಿ ವಿಲೇವಾರಿ ಮಾಡಲಾಗುವುದು. ಅಕ್ಟೋಬರ್ 19ರಂದು ಮತದಾರರ ಪಟ್ಟಿಯ ಅಂತಿಮ ಪಟ್ಟಿ ಪ್ರಕಟಗೊಳ್ಳಿದೆ ಎಂದವರು ನುಡಿದರು.
ಜಿಲ್ಲೆಯಲ್ಲಿ ಒಟ್ಟು 15,19,459 ಅರ್ಹ ಮತದಾರರಿದ್ದು, ಈ ಪೈಕಿ 12,93,844ಮತದಾರರನ್ನು ಡಿಜಿಟಲೀಕರಿಸಿ ಶೇ.85.15ರಷ್ಟು ಪ್ರಗತಿ ಸಾಧಿಸಲಾಗಿದೆ. ಇವರಲ್ಲಿ 6196ಮತದಾರರು ಆನ್‌ಲೈನ್‌ಮೂಲಕ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಭಾಗವಹಿಸಿದ್ದಾರೆ. ಇನ್ನೂ 69603ಮಂದಿ ಮತದಾರರು ನೋಂದಣಿ ಕಾರ್ಯದಲ್ಲಿ ಭಾಗವಹಿಸಿರುವುದರಿಂದ ಹಿಂದುಳಿದಿದ್ದಾರೆ. ಅವರನ್ನು ಸದರಿ ಪರಿಷ್ಕರಣೆ ಕಾರ್ಯಕ್ಕೆ ನಿಯೋಜಿತರಾದ 1793 ಮತಗಟ್ಟೆ ಅಧಿಕಾರಿಗಳು ಮತದಾರರ ಮನೆಮನೆಗೆ ತೆರಳಿ ಅವರಿಂದ ಮಾಹಿತಿ ಪಡೆದು ಅಪ್‌ಲೋಡ್‌ಮಾಡಲಿದ್ದಾರೆ ಎಂದವರು ನುಡಿದರು.
ಮತದಾರರ ಪಟ್ಟಿಯಲ್ಲಿ ಗೈರಾಗಿರುವವರು, ಮರಣ ಹೊಂದಿದವರು, ಸ್ಥಳಾಂತರಗೊಂಡಿರುವ ಕುಟುಂಬಗಳು ಹಾಗೂ ಎರೆಡೆರೆಡು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ಉಳಿಸಿಕೊಂಡಿರುವವರು ಸೇರಿದಂತೆ ಒಟ್ಟು 156012ಜನರನ್ನು ಗುರುತಿಸಲಾಗಿದೆ. ಆ ಪೈಕಿ 43,845ಮತದಾರರು ಮರಣ ಹೊಂದಿರುವುದನ್ನು ಗುರುತಿಸಲಾಗಿದೆ. ಗುರುತಿಸಲಾಗದ ಅಥವಾ ಗೈರಾಗಿರುವ 23,738ಮಂದಿಯನ್ನು ಗುರುತಿಸಲಾಗಿದೆ. ಜಿಲ್ಲೆಯ ಒಟ್ಟು ಮತದಾರರಲ್ಲಿ 72,544ಮತದಾರರು ಸ್ಥಳಾಂತರಗೊಂಡಿರುವುದನ್ನು ಗುರುತಿಸಲಾಗಿದೆ. ಉಳಿದ ಹಾಗೂ ಈವರೆಗೆ ಮಾಹಿತಿಯನ್ನು ನೀಡದಿರುವವರ ಮನೆಮನೆಗೆ ಮತಗಟ್ಟೆ ಅಧಿಕಾರಿಗಳು ತೆರಳಿ ಮಾಹಿತಿ ಪಡೆಯುವ ಕಾರ್ಯವನ್ನು ಮುಂದುವರೆಸಲಿದ್ದಾರೆ ಎಂದರು.
ಈ ಎಲ್ಲಾ ಮಾಹಿತಿಯನ್ನು ರಾಷ್ಟ್ರೀಯ ಮತ್ತು ಸ್ಥಳೀಯ ರಾಜಕೀಯ ಪಕ್ಷಗಳ ಮುಖಂಡರಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ಸಹಕರಿಸುವಂತೆ ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಎರೆಡೆರೆಡು ಸಭೆಗಳನ್ನು ನಡೆಸಿ, ಮಾಹಿತಿ ನೀಡಲಾಗಿದೆ ಎಂದವರು ನುಡಿದರು.
ಪ್ರಸಕ್ತ ಮುಂಗಾರಿನಲ್ಲಿ ವಾಡಿಕೆ ಪ್ರಮಾಣದ ಮಳೆಗಿಂತ ಶೇ.44ರಷ್ಟು ಮಳೆಯ ಕೊರತೆ ಇದೆ. ಈವರೆಗೆ ಜಿಲ್ಲೆಯಲ್ಲಿ ಶೇ. 28ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಜಿಲ್ಲೆಯ ಪ್ರಧಾನ ಬೆಳೆಗಳಲ್ಲಿ ಮೆಕ್ಕೆಜೋಳ ಮತ್ತು ಭತ್ತ ಪ್ರಮುಖ ಬೆಳಗಳಾಗಿವೆ. ಭತ್ತದ ಬೆಳೆ ಬಿತ್ತನೆಗೆ ಆಗಸ್ಟ್‌ಕೊನೆಯ ವಾರದವರೆಗೆ ಮಳೆ ಆಗುವ ಆಶಾಭಾವನೆ ಹೊಂದಲಾಗಿದೆ. ಈಗಾಗಲೇ ಬಿತ್ತನೆಯಾಗಿರುವ ಮೆಕ್ಕೆಜೋಳ ನಿರೀಕ್ಷಿತ ಪ್ರಮಾಣದಲ್ಲಿ ಮೊಳಕೆಯಾಗದಿರುವುದು, ಹುಲುಸಾಗಿ ಬೆಳೆ ಬಾರದಿರುವುದು ಕಂಡುಬಂದಿದೆ ಎಂದ ಅವರು, ಜಿಲ್ಲೆಯಲ್ಲಿ ರೈತರ ಅಗತ್ಯಕ್ಕೆ ಸಾಕಾಗುವಷ್ಟು ರಸಗೊಬ್ಬರ ದಾಸ್ತಾನು ಇದೆ. ಕೊರತೆಯಾದಲ್ಲಿ ಸಕಾಲದಲ್ಲಿ ಗೊಬ್ಬರ ಒದಗಿಸಲು ಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಒಟ್ಟು 280ಮಳೆ ಮಾಪನ ಕೇಂದ್ರಗಳಿವೆ. 2026ರ ಜನವರಿ ಮಾಹೆಯ ವೇಳೆಗೆ 208 ಕೇಂದ್ರಗಳು ದುರಸ್ತಿಯಲ್ಲಿದ್ದು, 72ಕೇಂದ್ರಗಳು ಸುಸ್ಥಿತಿಯಲ್ಲಿದ್ದವು. ಇವುಗಳಲ್ಲಿ ಈಗಾಗಲೇ 185ಕೇಂದ್ರಗಳನ್ನು ಸರಿಪಡಿಸಲಾಗಿದೆ. ಉಳಿದವರುಗಳನ್ನು ಮುಂದಿನ 15ದಿನಗಳಲ್ಲಿ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು. ಈ ಸಂಬಂಧ ಜುಲೈ 25ರಂದು ಮಾನ್ಯ ಮುಖ್ಯಮಂತ್ರಿಗಳು ಚಿತ್ರದುರ್ಗದಲ್ಲಿ ಕರೆಯಲಾಗಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಅಲ್ಲದೇ ಕಳೆದ ಏಪ್ರಿಲ್‌ಮತ್ತು ಮೇ ಮಾಹೆಯಲ್ಲಿ ಬಿದ್ದ ಆಲಿಕಲ್ಲು ಮಳೆಯಿಂದಾಗಿ ಹಾನಿಗೊಳಗಾಗಿದ್ದ ತೋಟಗಾರಿಕೆ ಬೆಳೆಗಾರರಿಗೆ ಪರಿಹಾರಧನವನ್ನು ಬಿಡುಗಡೆ ಮಾಡುವಂತೆ ಹಾಗೂ ವಿಶೇಷ ಪ್ಯಾಕೇಜ್‌ಘೋಷಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ. ಉಳಿದಂತೆ ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥ ಕುಟುಂಬಗಳಿಗೆ ಪರಿಹಾರಧನ ಒದಗಿಸಲಾಗಿದೆ ಎಂದರು.
ಜಿಲ್ಲೆಯ ಸೊರಬ ತಾಲೂಕಿನ ಒಂದು ಗ್ರಾಮದಲ್ಲಿನ ನಿವಾಸಿಗಳಿಗೆ ಟ್ಯಾಂಕರ್‌ಮೂಲಕ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ. ಅಲ್ಲದೇ ಜಿಲ್ಲೆಯ ವಿವಿಧ ತಾಲೂಕುಗಳ ಆಯ್ದ 373 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಸಮಸ್ಯೆ ತಾತ್ಕಾಲಿಕ ಪರಿಹಾರ ಕ್ರಮವಾಗಿ ಸ್ಥಳೀಯವಾಗಿರುವ ಕೊಳವೆಬಾವಿಗಳನ್ನು ಬಾಡಿಗೆ ಮೂಲಕ ಪಡೆದು, ನೀರನ್ನು ಒದಗಿಸಲಾಗುತ್ತಿದೆ ಎಂದವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್‌ವಿ. ಮತ್ತು ಚುನಾವಣಾ ತಹಶೀಲ್ದಾರ್ ಶ್ರೀಮತಿ ಮಂಜುಳಾ ಹೆಗಡಾಳ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಗಮನಿಸಿ!ಆಗಸ್ಟ್ 8 ವರೆಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅವಧಿ ವಿಸ್ತರಣೆ- ಪ್ರಭುಲಿಂಗ ಕವಳಿಕಟ್ಟಿ
ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನ
2026-27ನೇ ಸಾಲಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವತಿಯಿಂದ ತಮ್ಮ ಪ್ರಾಣದ ಹಂಗನ್ನು ತೊರೆದು ಹಾಗೂ ಸಮಯ ಪ್ರಜ್ಞೆಯಿಂದ ಇತರರ ಪ್ರಾಣದ ರಕ್ಷಣೆಗಾಗಿ ಧೈರ್ಯ ಸಾಹಸ ಪ್ರದರ್ಶಿಸಿದ 6 ರಿಂದ 18 ವರ್ಷಗೊಳಗಿನ ಬಾಲಕರಿಗೆ ‘ಹೊಯ್ಸಳ’ ಮತ್ತು ಬಾಲಕಿಯರಿಗೆ ‘ಕೆಳದಿ ಚೆನ್ನಮ್ಮ’ ಶೌರ್ಯ ಪ್ರಶಸ್ತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳಿಗೆ ತಲಾ ರೂ.10,000 ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಇದೇ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಟ 05 ವರ್ಷಗಳ ಕಾಲ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ತಲಾ ರೂ.25,000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ ಸಂಸ್ಥೆಗಳಿಗೆ ತಲಾ ರೂ. 1,00,000/- ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು.
ಸಾಹಸ ಪ್ರಕರಣವು ದಿ: 01/08/2025 ರಿಂದ 31/07/2026 ರೊಳಗೆ ನಡೆದಿರಬೇಕು. ಧೈರ್ಯ ಸಾಹಸ ಪ್ರದರ್ಶಿಸಿದ ಕುರಿತು ಜಿಲ್ಲಾ ಮಟ್ಟದಲ್ಲಿ ಗುರುತಿಸಿರಬೇಕು ಮತ್ತು ಈ ಬಗ್ಗೆ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರಬೇಕು. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಶಾಲಾ ಶಿಕ್ಷಕರು ಈ ಸಾಧನೆಯನ್ನು ಗುರುತಿಸಿ ಜಿಲ್ಲಾ ಮಟ್ಟಕ್ಕೆ ತಿಳಿಸಬಹುದು. ಜನ್ಮ ದಿನಾಂಕದ ಬಗ್ಗೆ ನಗರಗಳಲ್ಲಿ ಮಹಾನಗರ ಪಾಲಿಕೆ, ಗ್ರಾಮ ಪಂಚಾಯತ್ ಮಟ್ಟದಲ್ಲಿ ತಾಲೂಕು ತಹಶೀಲ್ದಾರ್‌ರವರಿಂದ ದೃಢೀಕರಣ ಪಡೆದಿರಬೇಕು. ಶೌರ್ಯ ಸಾಧನೆ ತೋರಿದ ಬಗ್ಗೆ ಆರಕ್ಷಕ ಇಲಾಖೆಯ ಪ್ರಾಥಮಿಕ ತನಿಖಾ ವರದಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವವರು ವ್ಯಕ್ತಿ/ಸಂಸ್ಥೆಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಇಲ್ಲದಿರುವ ಬಗ್ಗೆ ಪೊಲೀಸ್ ಇಲಾಖೆಯಿಂದ ಪರಿಶೀಲನಾ ವರದಿ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು.
ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲೆಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿವಮೊಗ್ಗ ಇವರಿಂದ ಪಡೆದುಕೊಂಡು, ಕನ್ನಡ ಭಾಷೆಯಲ್ಲಿ ಭರ್ತಿ ಮಾಡಿ ದಿ: 20/08/2026 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ.: 08182-295514 ನ್ನು ಸಂಪರ್ಕಿಸಬಹುದೆಂದುಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರು, ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಾಕಿ ಇರುವ ಪ್ರಮುಖ ಯೋಜನೆಗಳ ಅನುಮೋದನೆ & ಅನುದಾನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ದೆಹಲಿಯಲ್ಲಿ ಮಹತ್ವದ ಸಭೆ
ಜಲಸಂಪನ್ಮೂಲ ಇಲಾಖೆಯನ್ನು ಹೊರತುಪಡಿಸಿ ಕೇಂದ್ರ ಸರ್ಕಾರದಿಂದ ಬಾಕಿ ಇರುವ ಪ್ರಮುಖ ಯೋಜನೆಗಳಿಗೆ ಅನುಮೋದನೆ, ಅನುದಾನಗಳು ಸೇರಿದಂತೆ ಒಟ್ಟು 13 ಅಂಶಗಳ ಬಗ್ಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಸಚಿವರು ಹಾಗೂ ರಾಜ್ಯದ ಸಂಸದರ ಜತೆ ಚರ್ಚೆ ನಡೆಸಿದರು.
ನವದೆಹಲಿಯ ಕರ್ನಾಟಕ ಭವನದಲ್ಲಿ ಸೋಮವಾರ ಸಿಎಂ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಸಂಸದರ ಜೊತೆಗಿನ ಸಭೆಯಲ್ಲಿ ಈ ಯೋಜನೆಗಳ ಅನುಮೋದನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಲಾಯಿತು.
“ರಾಜ್ಯದ ವಿವಿಧ ವಿಧೇಯಕಗಳಿಗೆ ಅನುಮೋದನೆ ಸೇರಿದಂತೆ ಗ್ರಾಮ ಪಂಚಾಯತಿಗಳ ಅನುದಾನ, ಸಾಗರಮಾಲ 2.0 ಯೋಜನೆಗಳು, ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ, ರಕ್ಷಣಾ ಇಲಾಖೆಯ ಭೂಮಿ ರಾಜ್ಯ ಸರ್ಕಾರಕ್ಕೆ ವರ್ಗಾವಣೆ, ಬೆಂಗಳೂರು ರಿಂಗ್ ರಸ್ತೆ, ಕೋಲಾರ ರೈಲ್ವೆ ಕೋಚ್ ಕಾರ್ಖಾನೆ, ಬೆಂಗಳೂರು ಉಪನಗರ ರೈಲು ಯೋಜನೆ, ಬೆಂಗಳೂರು–ಮುಂಬೈ ಅತಿ ವೇಗದ ರೈಲು ಮಾರ್ಗ, HAL ವಿಮಾನ ನಿಲ್ದಾಣವನ್ನು ವಾಣಿಜ್ಯ ಬಳಕೆಗೆ ಪುನರಾರಂಭಿಸುವುದು, ರಾಯಚೂರಿನಲ್ಲಿ AIIMS ಸ್ಥಾಪನೆ, ತೆಂಗು ಮತ್ತು ಅಡಿಕೆ ಬೆಳೆಗಳ ಕೀಟ ನಿಯಂತ್ರಣ, ಪೊಲೀಸ್ ಆಧುನೀಕರಣದ ಬಗ್ಗೆ ಗಮನ ಹರಿಸುವಂತೆ ಸಭೆಯಲ್ಲಿ ಕೋರಲಾಯಿತು.
ಸಭೆಯಲ್ಲಿ ಚರ್ಚೆಯಾದ ಅಂಶಗಳ ವಿವರಗಳು:
15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ ಬಿಡುಗಡೆ
2025–26ನೇ ಸಾಲಿನ 15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ. 2025–26ನೇ ಸಾಲಿಗೆ 15ನೇ ಹಣಕಾಸು ಆಯೋಗವು ₹2,186.20 ಕೋಟಿ ನೆರವು ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರವು ಈ ಮೊತ್ತವನ್ನು ಇನ್ನೂ ಬಿಡುಗಡೆ ಮಾಡಿಲ್ಲ.
ಪಂಚಾಯತ್ ರಾಜ್ ಸಚಿವಾಲಯದೊಂದಿಗೆ ನಿರಂತರ ಅನುಸರಣೆ ನಡೆಸಿ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯವರು ಹಲವು ಬಾರಿ ಪತ್ರ ಬರೆದಿದ್ದು, 11.03.2026ರಂದು ಕೇಳಲಾದ ಪ್ರಶ್ನೆಗಳಿಗೆ 25.03.2026ರಂದು ವಿವರವಾಗಿ ಉತ್ತರಿಸಲಾಗಿದೆ.
ಜೊತೆಗೆ ಮುಖ್ಯ ಕಾರ್ಯದರ್ಶಿಯವರು 04.04.2026ರಂದು ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಯವರು ಸಹ 25.02.2026 ಹಾಗೂ 06.04.2026ರಂದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು 19.01.2026, 02.07.2026 ಹಾಗೂ 15.07.2026ರಂದು ಸಂಬಂಧಿತ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರಿನ STRR (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಯೋಜನೆ
ಬೆಂಗಳೂರು ಸುತ್ತ 288 ಕಿ.ಮೀ. ಉದ್ದದ ರಿಂಗ್ ರಸ್ತೆ. ಬೆಂಗಳೂರು ಹಾಗೂ ಸುತ್ತಮುತ್ತಲ ಸ್ಯಾಟಲೈಟ್ ನಗರಗಳಾದ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಡಾಬಸ್ ಪೇಟೆ, ಮಾಗಡಿ, ರಾಮನಗರ, ಕನಕಪುರ, ಆನೇಕಲ್ ಹಾಗೂ ಹೊಸೂರು ಸಂಪರ್ಕಿಸುವ ಈ ಯೋಜನೆಗೆ ಭೂಸ್ವಾಧೀನ ವೆಚ್ಚದ 30% ರಾಜ್ಯ ಸರ್ಕಾರ ಭರಿಸುತ್ತಿದೆ. ಖನಿಜ ರಾಯಲ್ಟಿ ಹಾಗೂ GST ವಿನಾಯಿತಿಗೆ ರಾಜ್ಯ ಸರ್ಕಾರ ಒಪ್ಪಿದೆ. ₹9,613 ಕೋಟಿ ಮೌಲ್ಯದ ಉಳಿದ ಕಾಮಗಾರಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಇನ್ನೂ ಸಿಕ್ಕಿಲ್ಲ.
ಬೆಂಗಳೂರು ಉಪನಗರ ರೈಲು ಯೋಜನೆ
ಈ ಯೋಜನೆ ಒಟ್ಟು ಉದ್ದ 148 ಕಿ.ಮೀ. ಆಗಿದ್ದು, ಪರಿಷ್ಕೃತ ಯೋಜನಾ ವೆಚ್ಚ ₹23,343 ಕೋಟಿ ಆಗಿದ್ದು, ಈವರೆಗೆ ₹3,342.77 ಕೋಟಿ ವೆಚ್ಚವಾಗಿದೆ. 153 ಕೋಚ್‌ಗಳ ಖರೀದಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಅಗತ್ಯವಾಗಿದ್ದು, ಕೇಂದ್ರ ಸಚಿವ ಸಂಪುಟ ಹಾಗೂ ರೈಲ್ವೇ ಇಲಾಖೆ ಅನುಮೋದನೆ ಅಗತ್ಯವಿದೆ.
ಕೋಲಾರದಲ್ಲಿ ರೈಲ್ವೇ ಕೋಚ್ ಕಾರ್ಖಾನೆ
2014ರಲ್ಲಿ ಕೇಂದ್ರ ಸಚಿವ ಸಂಪುಟದಿಂದ ರಾಜ್ಯ ಸರ್ಕಾರ ಹಾಗೂ ರೈಲ್ವೇ ಇಲಾಖೆ 50:50 ಯೋಜನಾ ವೆಚ್ಚ ಭರಿಸಲು ಅನುಮೋದನೆಯಾಗಿದ್ದು, ರಾಜ್ಯ ಸರ್ಕಾರ ಭೂಮಿ ನೀಡಿದ್ದರೂ ಯೋಜನೆ ಇನ್ನೂ ಜಾರಿಯಾಗಿಲ್ಲ.
ವಾಣಿಜ್ಯ ಉದ್ದೇಶಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣ ಪುನರಾರಂಭ
HAL ವಿಮಾನ ನಿಲ್ದಾಣವನ್ನು ವಾಣಿಜ್ಯ ಬಳಕೆಗೆ ಪುನರಾರಂಭಿಸಬೇಕಿದ್ದು, ನಾಗರಿಕ ವಿಮಾನಯಾನ ಸಚಿವಾಲಯ ಅಂತಿಮ ನಿರ್ಧಾರ ಕೈಗೊಂಡಿಲ್ಲ.
ಸಾಗರಮಾಲಾ 2.0 ಕಾರ್ಯಯೋಜನೆಗೆ ಅನುಮೋದನೆ
ಸಾಗರಮಾಲಾ 2.0 ಯೋಜನೆಯಡಿ ಕರ್ನಾಟಕ ಜಲಸಾರಿಗೆ ಮಂಡಳಿಯು 6 ತಿಂಗಳ ಹಿಂದೆ ಹಾಗೂ 17.07.2026 ರಂದು ₹16,561 ಕೋಟಿ ಮೌಲ್ಯದ 176 ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದೆ. ಭಾರತ ಸರ್ಕಾರ ಇನ್ನೂ ಸಾಗರಮಾಲಾ 2.0 ಕಾರ್ಯಯೋಜನೆಯನ್ನು ಅನುಮೋದಿಸಿಲ್ಲ. ಈ ಯೋಜನೆಗಳಿಂದ ಕರಾವಳಿ ಮೂಲಸೌಕರ್ಯ, ಬಂದರು ಸಂಪರ್ಕ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಈ ಕುರಿತು ಅಗತ್ಯ ಕ್ರಮ ಅವಶ್ಯಕ ಎಂದು ಮನವಿ ಮಾಡಲಾಗಿದೆ.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ
ರಾಯಚೂರಿನಲ್ಲಿ AIIMS ಸ್ಥಾಪನೆಗೆ 21.08.2023ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ. 11.06.2026ರಂದು ಮುಖ್ಯಮಂತ್ರಿ ಮತ್ತೊಮ್ಮೆ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ. ಆರೋಗ್ಯ ಸೇವೆ ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ನೆರವಾಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಅನುಮೋದನೆ ಬಾಕಿ ಇದೆ.
ತೆಂಗು ಮತ್ತು ಅಡಿಕೆ ಬೆಳೆಗಳ ಕೀಟ ನಿಯಂತ್ರಣಕ್ಕೆ ನೆರವು
ತೆಂಗು ಮತ್ತು ಅಡಿಕೆ ಬೆಳೆಗಳ ಕೀಟ ನಿಯಂತ್ರಣ
ತೆಂಗು ಹಾಗೂ ಅಡಿಕೆ ಬೆಳೆಗಳಿಗೆ ಒಟ್ಟು ₹1,438.59 ಕೋಟಿಗೂ ಅಧಿಕ ನೆರವು ಕೋರಲಾಗಿದೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ನೆರವು ಬೇಕಾಗಿದೆ.
ಇತರೆ ಅಂಶಗಳ ಪ್ರಸ್ತಾಪ:
ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ CAMPA ಯೋಜನೆಯಡಿ ₹300 ಕೋಟಿ ಅನುದಾನವನ್ನು 02.04.2025ರಂದು ಕೋರಲಾಗಿದ್ದು,
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅನುಮೋದನೆ ಬಾಕಿಯಿದೆ.
ರಕ್ಷಣಾ ಇಲಾಖೆಯ ಭೂಮಿ ರಾಜ್ಯಕ್ಕೆ ವರ್ಗಾವಣೆ ಸಂಬಂಧ 15.12.2025ರಂದು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬೆಂಗಳೂರಿನಲ್ಲಿ 40 ಎಕರೆ, ಬೆಳಗಾವಿಯಲ್ಲಿ 668 ಎಕರೆ ಭೂಮಿ ವರ್ಗಾವಣೆಗೆ ರಕ್ಷಣಾ ಸಚಿವಾಲಯದಿಂದ ಅನುಮೋದನೆ ಪಡೆಯಬೇಕು.
ಬೆಂಗಳೂರು–ಮೈಸೂರು ಹಾಗೂ ಬೆಂಗಳೂರು–ಮುಂಬೈ ಮಾರ್ಗವನ್ನು ಹೈಸ್ಪೀಡ್ ಮಾರ್ಗಕ್ಕೆ ಸೇರಿಸಲು ರಾಜ್ಯ ಮನವಿ ಮಾಡಿದ್ದು, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆ, ವೇಗದ ಸಂಚಾರ ಹಾಗೂ ಪ್ರಾದೇಶಿಕ ಸಮತೋಲನಕ್ಕೆ ಸಹಕಾರಿಯಾಗಲಿದೆ. ಈ ಯೋಜನೆಗೆ ಸಂಬಂಧಿತ ಕೇಂದ್ರ ಸಚಿವಾಲಯದಿಂದ ಅನುಮೋದನೆ ಕೊಡಿಸಬೇಕು.
ಪೊಲೀಸ್ ಆಧುನೀಕರಣಕ್ಕೆ ICJS 2.0 ಯೋಜನೆಗೆ ₹270.71 ಕೋಟಿ. ASUMP ಯೋಜನೆಯಡಿ ₹280 ಕೋಟಿ ಬಿಡುಗಡೆ ಬಾಕಿ. ಗೃಹ ಸಚಿವಾಲಯದೊಂದಿಗೆ ಚರ್ಚಿಸಿ ಅನುದಾನ ಕೊಡಿಸಬೇಕು.
ರಾಜ್ಯದ ವಿವಿಧ ವಿಧೇಯಕಗಳು:
- ಉಚಿತ ಮತ್ತು ಕಡ್ಡಾಯ ಶಿಕ್ಷಣ (ಕರ್ನಾಟಕ ತಿದ್ದುಪಡಿ) ವಿಧೇಯಕ, 2015.
- ಕರ್ನಾಟಕ ಖನಿಜ ಹಕ್ಕುಗಳು ಮತ್ತು ಖನಿಜಭರಿತ ಭೂಮಿ ತೆರಿಗೆ ವಿಧೇಯಕ, 2024.
- ಔಷಧ ಮತ್ತು ಸೌಂದರ್ಯವರ್ಧಕ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025.
- ನೋಟರೀಸ್ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025.
ಈ ವಿಧೇಯಕಗಳಿಗೆ ಗೃಹ ಸಚಿವಾಲಯ ಹಾಗೂ ಸಂಬಂಧಿತ ಕೇಂದ್ರ ಸಚಿವಾಲಯಗಳೊಂದಿಗೆ ತ್ವರಿತ ಒಪ್ಪಿಗೆ ಕೊಡಿಸಬೇಕು.
S.N. Channabasappa ಆರೋಗ್ಯ, ಪರಿಸರ, ವಿದ್ಯಾರ್ಥಿಶಿಕ್ಷಣ, ಕಲಿಕಾ ಸಾಧನ ವಿತರಣೆ ಮುಖಾಂತರ ರೋಟರಿ ಸಂಸ್ಥೆಯ ಸಾಮಾಜಿಕ ಸೇವೆ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ
S.N. Channabasappa ಆರೋಗ್ಯ ತಪಾಸಣೆ, ನೇತ್ರ ತಪಾಸಣೆ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಪೋಲಿಯೋ ಮುಕ್ತ ಪ್ರಪಂಚ, ಪರಿಸರ ಇತ್ಯಾದಿ ರೋಟರಿ ಸೇವೆಗಳನ್ನು ಮಾಡುತ್ತಿರುವ ರೊಟೇರಿಯನ್ಸ್ ಗಳ ಸೇವೆ ಭಗವಂತನ ಸೇವೆಗೆ ಸಮಾನವಾಗಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಶ್ಲಾಘಿಸಿದರು.
ನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಏರ್ಪಡಿಸಿದ್ದ “ರೋಟರಿ ಸೇವೆಯಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ” ಕುರಿತ ವಾರದ ಸಭೆಯಲ್ಲಿ ಭಾಗವಹಿಸಿ, ರೋಟರಿ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರೋಟರಿ ಶಾಶ್ವತ ಯೋಜನೆಯಡಿಯ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ರಾಜೇಂದ್ರನಗದಲ್ಲಿರುವ ರೋಟರಿ ಪೂರ್ವ ಶಾಲೆ, ಮೂಲಭೂತ ಶಿಕ್ಷಣ ಮತ್ತು ಸಾಕ್ಷರತೆಗೆ ನಿರಂತರ ಬೆಂಬಲವನ್ನು ಒದಗಿಸುವುದು, ಅದರ ಕ್ಯಾಂಪಸ್ ನಲ್ಲಿ ಸಾಪ್ತಾಹಿಕ ಕ್ಲಬ್ ಸಭೆಗಳು ಮತ್ತು ನಿರಂತರ ಸಮುದಾಯ/ಯುವ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುತ್ತದೆ. ಇಂಟರ್ಯಾಕ್ಟ್ ಕ್ಲಬ್ ಸ್ಥಾಪನೆಗಳಂತಹ ಯುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುವುದು ಹೆಚ್ಚು ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ಧನ, ನಿಘಂಟುಗಳು ಮತ್ತು ಕಲಿಕಾ ಸಾಧನಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ರೋಟರಿ ಸೇವೆಯಾಗಿದೆ. ಶಿವಮೊಗ್ಗದ ವಿದ್ಯಾನಗರದಲ್ಲಿರುವ ರೋಟರಿ ಸ್ಮಶಾನವು ರೋಟರಿ ಶಾಶ್ವತ ಯೋಜನೆಯಡಿಯ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಬೆಂಬಲದೊಂದಿಗೆ ನಿರ್ವಹಿಸಲ್ಪಡುವ ಪ್ರಸಿದ್ಧ ಸಮುದಾಯ ಸೇವಾ ಯೋಜನೆಯಾಗಿದೆ. ಕ್ಲಬ್ ನ ಪ್ರಯತ್ನಗಳ ಮೂಲಕ ನಿರ್ವಹಣೆ ಮತ್ತು ಬೆಂಬಲ, ದೈನಂದಿನ ಕಾರ್ಯಾಚರಣೆಗಳು ಮತ್ತು ಕಾಳಜಿಯನ್ನು ಸ್ಥಳೀಯ ಸಿಬ್ಬಂದಿ ನಿರ್ವಹಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷರಾದ ಶೇಷಗಿರಿ, ಶಿವಮೊಗ್ಗ ವಿಧಾನಸಭಾ ಸದಸ್ಯ ಎಸ್.ಎನ್.ಚನ್ನಬಸಪ್ಪ ಸ್ಥಳೀಯ ರೋಟರಿ ಕ್ಲಬ್ ಗಳು ಆಯೋಜಿಸುವ ಸಮುದಾಯ ಮತ್ತು ಸಾಮಾಜಿಕ ಉಪಕ್ರಮಗಳಲ್ಲಿ ಆಗಾಗ್ಗೆ ಭಾಗವಹಿಸುತ್ತಾರೆ. ನಿಯಮಿತವಾಗಿ ಸೇವಾ ಗುಂಪುಗಳೊಂದಿಗೆ ತೊಡಗಿಸಿಕೊಳ್ಳುತ್ತಾರೆ ಎಂದ ಅವರು, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನಡೆಸಲು ಉದ್ದೇಶಿಸಿರುವ ಕೌಶಲ್ಯ ಕೇಂದ್ರ ಮತ್ತು ಕೆರೆ ಸಂರಕ್ಷಣೆ ಯೋಜನೆಗಳಿಗೆ ಮಾರ್ಗದರ್ಶನ ನೀಡುವಂತೆ ಕೋರಿದರು.
S.N. Channabasappa ಕಾರ್ಯಕ್ರಮದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿ ಆರ್.ಮನೋಹರ, ಪದಾಧಿಕಾರಿಗಳು, ಮಾಜಿ ಅಸಿಸ್ಟೆಂಟ್ ಅಂಡ್ ಝೋನಲ್ ಲೆಫ್ಟಿನೆಂಟ್ಸ್ ಗವರ್ನರ್ ಭಾರ್ಗವಿ ನಾಗರಾಜ್, ಚಂದ್ರಹಾಸ್ ಪಿ. ರಾಯ್ಕರ್, ಚಂದ್ರಶೇಖರಯ್ಯ ಎಂ., ರಘುರಾಜ್ ಹೆಚ್.ಕೆ., ನಾರ್ತ್ ಕ್ಲಬ್ ಅಧ್ಯಕ್ಷರಾದ ಶಿವಕುಮಾರ್, ಮಾಜಿ ಅಸಿಸ್ಟೆಂಟ್ ಗವರ್ನರ್ ಕೋಟೋಜಿ ರವಿ, ಡಿ.ಜಿ.ಬೆನಕಪ್ಪ ಮಾಜಿ ಅಧ್ಯಕ್ಷರಾದ ಆದಿಮೂರ್ತಿ ಹೆಚ್.ಬಿ., ಗಣೇಶ್.ಎಸ್, ಶ್ರೀಕಾಂತ್ ಎನ್.ಹೆಚ್, ಕೃಷ್ಣಮೂರ್ತಿ.ಆರ್, ನಾಗರಾಜ್ ಎಂ.ಪಿ., ಕಾಸಲ ವಿ. ಸುರೇಂದ್ರ, ಡಾ. ಗುಡುದಪ್ಪ ಕಸಬಿ, ನಿಕಟ ಪೂರ್ವ ಅಧ್ಯಕ್ಷರಾದ ಡಿ.ಕಿಶೋರ್ ಕುಮಾರ್, ಶಶಿಕಾಂತ್ ನಾಡಿಗ್, ಸುನಿಲ್ ಕುಮಾರ್ ಜಿ., ಡಾ. ರವಿಕಿರಣ್ ಹೆಚ್.ಕೆ., ರವಿಪ್ರಕಾಶ್ ಕಾಳಾಚಾರ್, ದಿಲೀಪ್ ಕುಮಾರ್ ಜೈನ್ ಆರ್., ಜಗದೀಶ್, ರವಿಶಂಕರ್.ಡಿ.ಎಸ್., ಸಾಧ್ವಿ ಸಿ. ಕಾಂತ್ , ಸಂಜೀವ್.ಎಸ್.ಎನ್., ಅಜಿತ್.ಹೆಚ್.ಎಸ್., ಪೃಥ್ವಿ ಪಿ. ಗೌಡ, ಹೇಮಂತ್ ಎಂ.ಸಿ., ಡಾ. ಮಹಾದೇವಸ್ವಾಮಿ ಕೆ.ಎನ್., ಜಿ. ವಿಜಯ್ ಕುಮಾರ್, ಬಿಂದು ವಿಜಯ್ ಕುಮಾರ್, ಹಾಗೂ ಹೆಚ್ಚಿನ ಸಂಖ್ಯೆಯ ಪದಾಧಿಕಾರಿಗಳು ಹಾಗೂ ಗೌರವಾನ್ವಿತ ಸದಸ್ಯರು ರೊಟೇರಿಯನ್ಸ್ ಉಪಸ್ಥಿತರಿದ್ದರು.
B.Y. Raghavendra ರಾಜ್ಯದ ಯುವಜನತೆಯ ಕೌಶಲ್ಯಾಭಿವೃದ್ಧಿಗೆ ಪ್ರಮುಖ ಯೋಜನೆಗಳ ವಿಸ್ತರಣೆ ಮಾಡಿ- ಸಂಸದ ಬಿ.ವೈ.ರಾಘವೇಂದ್ರ
B.Y. Raghavendra ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಅಪ್ರೆಂಟಿಸ್‌ಷಿಪ್ ಪ್ರೋತ್ಸಾಹಕ ಯೋಜನೆ-2’ (NAPS-2) ಅಡಿಯಲ್ಲಿ ಕರ್ನಾಟಕ ರಾಜ್ಯ ನಿರುದ್ಯೋಗಿ ಯುವಜನರಿಗೆ ಕೌಶಲ್ಯ ತರಬೇತಿ ನೀಡುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ರಾಜ್ಯದಲ್ಲಿ ಇದುವರೆಗೆ 4,47,703 ಯುವಕ-ಯುವತಿಯರು ಅಪ್ರೆಂಟಿಸ್ ತರಬೇತಿಗೆ ಸೇರ್ಪಡೆಗೊಂಡಿದ್ದಾರೆ.
ಈ ಕುರಿತಂತೆ ಪ್ರಸಕ್ತ ಅಧಿವೇಶನಲ್ಲಿ ವಿಷಯ ಪ್ರಸ್ತಾಪಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ರಾಜ್ಯವಾರು ಮತ್ತು ಜಿಲ್ಲಾವಾರು ಅಧಿಕೃತ ಮಾಹಿತಿ ನೀಡಿದೆ.
ಈ ಯೋಜನೆಯಡಿ ಜುಲೈ 2023ರಿಂದ ನೇರ ನಗದು ವರ್ಗಾವಣೆ (DBT) ಮೂಲಕ ಕರ್ನಾಟಕದ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಒಟ್ಟು 98.78 ಕೋಟಿ ರೂ. ಕನಿಷ್ಠ ವೇತನ ನೆರವನ್ನು ಕೇಂದ್ರ ಸರ್ಕಾರ ನೇರವಾಗಿ ಜಮೆ ಮಾಡಿದೆ.
ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಜಯಂತ್ ಚೌಧರಿ ಈ ಕುರಿತಂತೆ ಸಂಸದ ರಾಘವೇಂದ್ರ ಅವರಿಗೆ ಅಧಿಕೃತ ಅಂಕಿ-ಅಂಶಗಳೊಂದಿಗೆ ಮಾಹಿತಿ ನೀಡಿದ್ದು, ಯೋಜನೆ ಜಾರಿ ಹಾಗೂ ರಾಜ್ಯ ಮಟ್ಟದ ಪ್ರಗತಿಯ ಸಮಗ್ರ ವಿವರಗಳನ್ನು ಒದಗಿಸಿದ್ದಾರೆ.
ಅಪ್ರೆಂಟಿಸ್ ತರಬೇತಿ ಪೂರ್ಣಗೊಳಿಸಿದ ಯುವಜನರಲ್ಲಿ ಶೇ.72ರಷ್ಟು ಅಭ್ಯರ್ಥಿಗಳು ಉದ್ಯೋಗ ಪಡೆದಿದ್ದಾರೆ ಎನ್ನುವುದು ಅರುಣ್ ಜೇಟ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್ (AJNIFM) ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ.
ಅಲ್ಲದೆ, ಜೀವನ ವೆಚ್ಚದ ಆಧಾರದ ಮೇಲೆ (CPI-Consumer Price Index) ತರಬೇತಿದಾರರ ಕನಿಷ್ಠ ವೇತನ ದರವನ್ನು ಪರಿಷ್ಕರಿಸಿ 11 ಸೆಪ್ಟೆಂಬರ್ 2025 ರಂದು ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ರಾಜ್ಯದ ಯುವ ಸಮುದಾಯಕ್ಕೆ ಕೈಗಾರಿಕಾ ಆಧಾರಿತ ತರಬೇತಿ ನೀಡುವುದರ ಜೊತೆಗೆ ಶೈಕ್ಷಣಿಕ ಪದವಿಗಳೊಂದಿಗೆ ಅಪ್ರೆಂಟಿಸ್‌ಷಿಪ್ ಸಂಯೋಜಿಸುವ (AEDP – Apprenticeship Embedded Degree Programme) ನೂತನ ಶೈಕ್ಷಣಿಕ ನೀತಿಯು ಯುವಜನರ ಉದ್ಯೋಗಾವಕಾಶ ಹೆಚ್ಚಿಸಲು ಪ್ರಮುಖ ಮೈಲಿಗಲ್ಲಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.
B.Y. Raghavendra ಇದೇ ವೇಳೆ, ಶಿವಮೊಗ್ಗ ಲೋಕಸಭಾ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಮಲೆನಾಡು ಭಾಗಗಳಲ್ಲಿ NAPS-2 ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಸ್ಥಳೀಯ ಯುವಕರು ಪಡೆದುಕೊಳ್ಳಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ 56 ನಂದಾಯಿತ ಸಂಸ್ಥೆಗಳ ಮೂಲಕ 882 ಯುವಕರು ಅಪ್ರೆಂಟಿಸ್ ತರಬೇತಿ ಪಡೆಯುತ್ತಿದ್ದು, ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಮೇಳಗಳನ್ನು (PMNAM – Pradhan Mantri National Apprenticeship Mela) ಹೆಚ್ಚು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳಿಗಳೊಂದಿಗೆ ಸಮನ್ವಯ ಸಾಧಿಸಲಾಗುವುದು ಎಂದು ಸಂಸದರು ಹೇಳಿದ್ದಾರೆ. ಶಿವಮೊಗ್ಗವನ್ನು ಹೆಚ್ಚು ಬೃಹತ್ ಉದ್ಯಮಗಳಿರುವ ಬೆಂಗಳೂರು ಅಥವಾ ಬಳ್ಳಾರಿಗೆ ಹೋಲಿಸುವುದಕ್ಕಿಂತಲೂ, ನಮ್ಮ ಜಿಲ್ಲೆಯ ವಾಸ್ತವ ಪರಿಸ್ಥಿತಿಗಳಿಗೆ ಅನುಗುಣವಾಗಿ, ಬೃಹತ್ ಕೈಗಾರಿಕಾ ವಲಯಗಳಿಗೆ ಸೀಮಿತವಾಗದೆ ಮಾಹಿತಿ ತಂತ್ರಜ್ಞಾನ (IT), ನವೀಕರಿಸಬಹುದಾದ ಇಂಧನ, ಜೈವಿಕ ತಂತ್ರಜ್ಞಾನ ಹಾಗೂ ಸ್ಥಳೀಯ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಲ್ಲಿ (MSME) ನಮ್ಮ ಗ್ರಾಮೀಣ ಭಾಗದ ಯುವಜನರಿಗೆ ಹೆಚ್ಚಿನ ಅವಕಾಶ ಒದಗಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಸಂಸದರು ಬದ್ಧತೆ ವ್ಯಕ್ತಪಡಿಸಿದ್ದಾರೆ.
ಜುಲೈ 29. ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯಲ್ಲಿ ಉದ್ಯೋಗ ಭರ್ತಿಗಾಗಿ ನೇರ ಸಂದರ್ಶನ
ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ದಿನಾಂಕ 29-07-2026 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗಾಕಾಂಕ್ಷಿಗಳಿಗಾಗಿ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.
ಈ ನೇರ ಸಂದರ್ಶನದಲ್ಲಿ ಎಸ್. ಎಂ. ಎಫ್. ಈ. ಇಂಡಿಯಾ ಕ್ರೆಡಿಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಭಾಗವಹಿಸಲಿದ್ದು, ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ.
18 ರಿಂದ 30 ವರ್ಷದೊಳಗಿನ ಪುರುಷ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಪ್ರವೇಶ ಉಚಿತವಾಗಿದ್ದು
ಅಭ್ಯರ್ಥಿಗಳು ಪಿಯುಸಿ ಅಥವಾ ಯಾವುದೇ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಬಯೋ-ಡೇಟಾ ಹಾಗೂ ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ – 577205 ಇಲ್ಲಿ
ಸಂದರ್ಶನಕ್ಕೆ ಹಾಜರಾಗಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳು: 9380663606, 9108235132 ಅಥವಾ
ಖುದ್ದಾಗಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ
ಪೊಲೀಸ್ ಸಿಬ್ಬಂದಿಗಳು ಜೀವವಿಮೆ ಸೌಲಭ್ಯ ಪಡೆದು ಅಸುರಕ್ಷಿತ ಬದುಕಿಗೆ ಸುರಕ್ಷತೆಯ ಕವಚ ಸೃಷ್ಠಿಸಿಕೊಳ್ಳಿ : ಬಿ.ನಿಖಿಲ್
ಹಗಲಿರುಳೆನ್ನದೇ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿ-ಸಿಬ್ಬಂಧಿಗಳು ನಿರ್ಲಕ್ಷ್ಯ ತೋರದೆ ತಮ್ಮ ಮತ್ತು ತಮ್ಮ ಅವಲಂಬಿತ ಕುಟುಂಬದ ಕ್ಷೇಮಕ್ಕಾಗಿ ತಾವು ಪಡೆಯುವ ವೇತನದಲ್ಲಿ ಸ್ಯಾಲರಿ ಪ್ಯಾಕೇಜ್ ಸ್ಕೀಂ ಮತ್ತು ಜೀವವಿಮೆಗಾಗಿ ಸಣ್ಣ ಮೊತ್ತವನ್ನು ಕಟಾವಣೆ ಮಾಡಿಸಿಕೊಂಡು ಅಸುರಕ್ಷಿತ ಬದುಕಿಗೆ ಸುರಕ್ಷತೆಯ ಕವಚ ಸೃಷ್ಠಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ಅವರು ಹೇಳಿದರು. ಅವರು ತಮ್ಮಕಚೇರಿ ಸಭಾಂಗಣದಲ್ಲಿ ಕಳೆದ ಎರಡು ತಿಂಗಳ ಹಿಂದೆ ಶಿರಾಳಕೊಪ್ಪ ಸಮೀಪದಲ್ಲಿ ಅಫಘಾತಕ್ಕೀಡಾಗಿ ಮೃತರಾಗಿದ್ದ ಆನವಟ್ಟಿ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್‌ಇನ್ಸ್‌ಫೆಕ್ಟರ್ ಬಸವರಾಜು ಅವರ ಕುಟುಂಬಕ್ಕೆ ಬ್ಯಾಂಕ್ ಆಫ್ ಬರೋಡದಿಂದ ನೀಡಿದ ಸ್ಯಾಲರಿ ಪ್ಯಾಕೇಜ್ ಸ್ಕೀಂನ ಸೌಲಭ್ಯ ಮತ್ತು ವಿಮಾ ಮೊತ್ತ ಸೇರಿದಂತೆ ಒಟ್ಟು ರೂ.1.08ಕೋಟಿ ಮೊತ್ತದ ಚೆಕ್ಕನ್ನು ವಿತರಿಸಿ ಮಾತನಾಡುತ್ತಿದ್ದರು.
ಯಾವುದೇ ನೌಕರರ ಕುಟುಂಬದಲ್ಲೂ ಇಂತಹ ಆಕಸ್ಮಿಕ ಅಹಿತಕರ ಘಟನೆಗಳು ಘಟಿಸಬಾರದು. ಆದರೆ, ಆಕಸ್ಮಿಕ ಅಫಘಾತಗಳಿಂದ ನೌಕರರ ಕುಟುಂಬಕ್ಕೆ ಆಗುವ ನಷ್ಟ ಅಂದಾಜು ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಮನೆಯ ಕುಟುಂಬದ ಪೋಷಕರು, ಪತ್ನಿ ಪುತ್ರರ ಬದುಕಿಗೆ ಆಸರೆ ಯಾರು? ಎನ್ನುವಂತಾಗುತ್ತದೆ. ಇಂತಹ ಸಂದರ್ಭದಲ್ಲಿ ನೌಕರರು ಭವಿಷ್ಯದ ಬದುಕನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೌಕರರಿಗಾಗಿಯೇ ಕಲ್ಪಿಸಿಕೊಟ್ಟಿರುವ ಸ್ಯಾಲರಿ ಪ್ಯಾಕೇಜ್ ಮತ್ತು ವಿಮಾ ಸೌಲಭ್ಯಗಳ ಲಾಭ ಪಡೆದುಕೊಳ್ಳಬೇಕು.
ಆಗ ನೊಂದ ಕುಟುಂಬಕ್ಕೆ ಅಲ್ಪಮಟ್ಟಿನ ಸಮಾಧಾನ ದೊರೆಯಲಿದೆ ಮಾತ್ರವಲ್ಲ ಮುಂದಿನ ಬದುಕಿಗೆ ಸಂಜೀವಿನಿಯಂತೆ ಆಸರೆ ದೊರೆಯಲಿದೆ ಎಂದರು. ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ನೌಕರರು ಮತ್ತು ಅಧಿಕಾರಿಗಳು ವಿವಿಧ ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ‘ಸಂಬಳ ಪ್ಯಾಕೇಜ್’ ಖಾತೆಗಳನ್ನು ಕಡ್ಡಾಯವಾಗಿ ತೆರೆಯುವುದನ್ನು ಆರ್ಥಿಕ ಇಲಾಖೆಯು ಕಡ್ಡಾಯಗೊಳಿಸಿದೆ.
ಈ ಯೋಜನೆಯಡಿ ನೌಕರರು ಶೂನ್ಯ ಬ್ಯಾಲೆನ್ಸ್ ಖಾತೆ, ಅಪಘಾತ ವಿಮಾ ಸೌಲಭ್ಯ ಮತ್ತು ವಿಶೇಷ ಬ್ಯಾಂಕಿಂಗ್ ಸೌಲಭ್ಯಗಳ ಪ್ರಯೋಜನ ಪಡೆಯಬಹುದಾಗಿದೆ. ಕಡಿಮೆ ಪ್ರೀಮಿಯಂನಲ್ಲಿ ವೈಯಕ್ತಿಕ ಅಪಘಾತ ವಿಮೆ ಮತ್ತು ಜೀವವಿಮಾ ಸೌಲಭ್ಯಗಳು, ಸಾಲಗಳ ಮೇಲೆ ರಿಯಾಯಿತಿ ದರ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ದೊರೆಯಲಿವೆ. ನೌಕರರ ಮತ್ತು ಅವರ ಅವಲಂಬಿತ ಕುಟುಂಬದವರ ಹಿತಾಸಕ್ತಿ ಕಾಪಾಡಲು ಹಾಗೂ ಬ್ಯಾಂಕ್‌ಗಳು ನೀಡುವ ವಿಮಾ ಭದ್ರತೆ ಪಡೆಯಲು ಮಾರ್ಚ್ ಮಾಹೆಯಲ್ಲಿ ಆರ್ಥಿಕ ಇಲಾಖೆಯು ಈ ಆದೇಶ ಹೊರಡಿಸಿದೆ.
ಅದಕ್ಕಾಗಿ ರಾಜ್ಯ ಸರ್ಕಾರಿ ನೌಕರರ ಸಂಘವು ನೌಕರರ ಹಿತಸುಖ ಕಾಯುವ ನಿಟ್ಟಿನಲ್ಲಿ ಅವಿರತವಾಗಿ ಪ್ರಯತ್ನ ಮಾಡಿತ್ತು. ಈ ಯೋಜನೆಯಿಂದಾಗಿ ಮೃತ ಕುಟುಂಬಕ್ಕೆ ಸಹಾಯಕಾರಿಯಾಗಿದೆ. ಸಂಘದ ಸಂಘಟಿತ ಪ್ರಯತ್ನಕ್ಕೆ ಜಯ ದೊರೆತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಅವರು ತಿಳಿಸಿದ್ದಾರೆ.
ತಂದೆ ಬದುಕಿದ್ದಾಗ ಬದುಕಿನ ಕಷ್ಟನಷ್ಟಗಳು ಅರಿವಿಗೆ ಬರಲಿಲ್ಲ. ಅವರ ಆಕಸ್ಮಿಕ ನಿಧನದ ನಂತರ ಆಕಾಶವೇ ಕಳಚಿ ಬಿದ್ದಾಂತಾಯಿತು. ಮುಂದೇನು ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಕಣ್ಣೆದುರಿಗೆ ಬಂದು ನಿಂತಾಗ ಕಣ್ಣಿಗೆ ಕತ್ತಲು ಆವರಿಸಿದಂತಾಗಿ ದಿಕ್ಕೇ ತೋಚದಂತಾಗಿತ್ತು. ತಂದೆಯವರ ಅಂತ್ಯಕ್ರಿಯೆಯ ಎಲ್ಲಾ ಕಾರ್ಯವಿಧಿಗಳು ಪೂರ್ಣಗೊಂಡು ನಿಧಾನವಾಗಿ ವಾಸ್ತವ ಬದುಕಿಗೆ ತೆರೆದುಕೊಳ್ಳುವಾಗ ಅಪ್ಪನ ಸ್ನೇಹಿತರು, ವೃತ್ತಿ ಬಾಂಧವರು ಸ್ಯಾಲರಿ ಪ್ಯಾಕೇಜ್ ಬಗ್ಗೆ ತಿಳಿಸಿದಾಗ ಕಣ್ಣಿಗೆ ಆವರಿಸಿದ್ದ ಅಂಧಕಾರ ಕಳೆದು ಬೆಳಕಿನ ಮಿಂಚುಳ್ಳಿ ಬದುಕಿನ ಹೊಸ ಬಾಗಿಲು ತೆರೆದ ಅನುಭವವಾಯಿತು.
ದಿನಕಳೆದಂತೆ ಒಂದು ದಿನ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳನ್ನು, ಅಪ್ಪ ಖಾತೆ ತೆರೆದಿದ್ದ ಬ್ಯಾಂಕಿನ ಮ್ಯಾನೇಜರರನ್ನು ಮಾತನಾಡಿಸಿದಾಗ ಹೊಸ ಬದುಕು ಪುನರ್ ಆರಂಭವಾದಂತೆ ಭಾಸವಾಯಿತು. ಎರಡು ತಿಂಗಳ ಅವಧಿಯಲ್ಲಿ ಸ್ಯಾಲರಿ ಪ್ಯಾಕೇಜ್ ಮಾಡಿಸಿದ ಅಪ್ಪ ನಮ್ಮ ಕುಟುಂಬದ ಮುಂದಿನ ಸುಂದರ ಬದುಕಿಗೆ ಆಸರೆಯಾಗಿದ್ದ. ಅಪ್ಪ ಮಾಡಿಸಿದ ಸ್ಯಾಲರಿ ಪ್ಯಾಕೇಜ್ ಮತ್ತು ವಿಮೆಯಿಂದಾಗಿ ಒಟ್ಟು 1.08ಕೋಟಿ ರೂ.ಗಳ ಸೌಲಭ್ಯ ದೊರೆತಿದೆ. ಮುಗಿದೇ ಹೋಯಿತೆಂದು ಭಾವಿಸಿದ್ದ ಕುಟುಂಬಕ್ಕೆ ಹೊಸ ದಾರಿ ಸಿಕ್ಕಿದೆ. ಈ ಸೌಲಭ್ಯವನ್ನು ದೊರಕಿಸಿಕೊಡುವಲ್ಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮತ್ತು ಅವರ ತಂಡದವರನ್ನು ಜೀವನ ಪರ್ಯಂತ ಮರೆಯುವುದಿಲ್ಲ. ಅಂತೆಯೇ ಅತ್ಯಲ್ಪ ಅವಧಿಯಲ್ಲಿ ಎಲ್ಲಾ ಸೌಲಭ್ಯವನ್ನು ದೊರಕಿಸಿಕೊಟ್ಟ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಸಿಬ್ಬಂಧಿಗಳು ಅಭಿನಂದಾರ್ಹರು.
ಈ ಮಾತನ್ನು ಹೇಳುವಾಗ ಯಶಸ್ವಿನಿಯ ಕಣ್ಣಾಲಿಗಳು ತುಂಬಿ ಬಂದಿದ್ದವು ಎಂದು ಆನವಟ್ಟಿ ಮೃತ ಅಸಿಸ್ಟೆಂಟ್ ಪೊಲೀಸ್ ಸಬ್ ಇನ್ಸ್‌ಫೆಕ್ಟರ್ ಬಸವರಾಜ ಅವರ ಪುತ್ರಿ, ಕುಮಾರಿ ಯಶಸ್ವಿನಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರಿಯಪ್ಪ, ಬ್ಯಾಂಕ್ ಆಫ್ ಬರೋಡಾದ ವಿಭಾಗೀಯ ವ್ಯವಸ್ಥಾಪಕ ದೀಪಕ್ ಎನ್.ಸಹಕಾರ್, ಪ್ರಧಾನ ವ್ಯವಸ್ಥಾಪಕ ದೀರಜ್ ಚೋಪ್ರಾ, ಹಿರಿಯ ವ್ಯವಸ್ಥಾಪಕ ಚಂದ್ರಶೇಖರ್ ಜಿ.ಕೆ., ಶಾಖಾ ವ್ಯವಸ್ಥಾಪಕ ಬಷೀರ್ ಹುಡೇದ್ ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.
ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ನಲ್ಲಿ ಮೆರಿಟ್ ಹಾಗೂ ರೋಸ್ಟರ್ ಪ್ರಕಾರ ಉಳಿದಿರುವ ಡಿಪಲ್ಒಮಾ ಪ್ರಥಮ ಸೆಮಿಸ್ಟರ್ ಪ್ರವೇಶಾತಿಗೆ ಪ್ರಕಟಣೆ
ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಶಿವಮೊಗ್ಗ ಸಂಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಡಿಪ್ಲೊಮಾ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಾಂಶುಪಾಲರ ಹಂತದಲ್ಲಿಯೇ ಮೆರಿಟ್ ಹಾಗೂ ರೋಸ್ಟರ್‌ಗನುಗುಣವಾಗಿ ಪ್ರವೇಶಾತಿ ಈಗಾಗಲೇ ಪ್ರಾರಂಭವಾಗಿದ್ದು, ಉಳಿದಿರುವ ಸೀಟು ಹಂಚಿಕೆಗಾಗಿ ಅರ್ಜಿ ಸಲ್ಲಿಸಲು ಜು.31 ಕಡೆಯ ದಿನವಾಗಿದೆ.
ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ -05 ಸೀಟುಗಳು, ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್- 01, ಕಮರ್ಷಿಯಲ್ ಪ್ರಾಕ್ಟಿಸ್(ಇಂಗ್ಲಿಷ್) -04 ಸೀಟುಗಳು ಲಭ್ಯವಿರುತ್ತದೆ.
ಅಭ್ಯರ್ಥಿಗಳು ಪ್ರವೇಶ ಪಡೆಯಲು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ/ಎನ್‌ಓಸಿ, 05 ವರ್ಷದ ವ್ಯಾಸಂಗ ಪ್ರಮಾಣ ಪತ್ರ(ಕ್ಷೇತ್ರ ಶಿಕ್ಷಣಾಧಿಕಾರಿಗಳು ದೃಢೀಕರಿಸಿದ ಸಹಿಯೊಂದಿಗೆ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಕನ್ನಡ ಮಾಧ್ಯಮ/ಗ್ರಾಮೀಣ ಅಭ್ಯರ್ಥಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ ಪ್ರಮಾಣ ಪತ್ರ, ವೈದ್ಯಕೀಯ ಪ್ರಮಾಣ ಪತ್ರ ಹಾಗೂ 06 ಭಾವಚಿತ್ರಗಳನ್ನು ಸಲ್ಲಿಸಬೇಕು.
ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ರವಿನಾಯಕ್ ಡಿ,- ಮೊ.ಸಂ: 7975155925ನ್ನು ಸಂಪರ್ಕಿಸಬಹುದೆಂದು ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ನ ಪ್ರಾಂಶುಪಾಲರು ತಿಳಿಸಿದ್ದಾರೆ.
ಶಿವಮೊಗ್ಗದ ಸರ್ಕಾರಿ ಮಹಿಳಾ ವಸತಿ ಪಾಲಿಟಕ್ನಿಕ್ ನಲ್ಲಿ ಐಟಿಐ/ದ್ವಿತೀಯ ಪಿಯುಸಿ ಗಳಿಗೆ ಲ್ಯಾಟರಲ್ ಎಂಟ್ರಿ ಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್ ಶಿವಮೊಗ್ಗ ಸಂಸ್ಥೆಯಲ್ಲಿ ಐ.ಟಿ.ಐ/ದ್ವಿತೀಯ ಪಿಯುಸಿ (ವಿಜ್ಞಾನ/ತಾಂತ್ರಿಕ ವಿಷಯಗಳಲ್ಲಿ) ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಲ್ಯಾಟರಲ್ ಎಂಟ್ರಿ ಮುಖಾಂತರ ಡಿಪ್ಲೊಮಾ 2 ಮತ್ತು 3ನೇ ವರ್ಷದ ಸೆಮಿಸ್ಟರ್ ಡಿಪ್ಲೊಮ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೆರಿಟ್ ಹಾಗೂ ರೋಸ್ಟರ್‌ಗನುಗುಣವಾಗಿ ಪ್ರವೇಶಾತಿ ಈಗಾಗಲೇ ಪ್ರಾರಂಭವಾಗಿದ್ದು, ಉಳಿದಿರುವ ಸೀಟು ಹಂಚಿಕೆಗಾಗಿ ಅರ್ಜಿ ಸಲ್ಲಿಸಲು ಜು.31 ಕಡೆಯ ದಿನವಾಗಿದೆ.
ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ -02, ಕಮರ್ಷಿಯಲ್ ಪ್ರಾಕ್ಟಿಸ್(ಕನ್ನಡ)- 03, ಕಮರ್ಷಿಯಲ್ ಪ್ರಾಕ್ಟಿಸ್(ಇಂಗ್ಲಿಷ್) -03, ಅಪೆರಲ್ ಡಿಸೈನಿಂಗ್ ಫ್ಯಾಬ್ರಿಕೇಷನ್ ಟೆಕ್ನಾಲಜಿ -06 ಸೀಟುಗಳು ಲಭ್ಯವಿರುತ್ತದೆ.
ಅಭ್ಯರ್ಥಿಗಳು ಪ್ರವೇಶ ಪಡೆಯಲು ಎಸ್‌ಎಸ್‌ಎಲ್‌ಸಿ/ಪಿಯುಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ/ಎನ್‌ಓಸಿ, 05 ವರ್ಷದ ವ್ಯಾಸಂಗ ಪ್ರಮಾಣ ಪತ್ರ (ಕ್ಷೇತ್ರ ಶಿಕ್ಷಣಾಧಿಕಾರಿಗಳು ದೃಢೀಕರಿಸಿದ ಸಹಿಯೊಂದಿಗೆ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಕನ್ನಡ ಮಾಧ್ಯಮ/ಗ್ರಾಮೀಣ ಅಭ್ಯರ್ಥಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿರುವ ಪ್ರಮಾಣ ಪತ್ರ, ವೈದ್ಯಕೀಯ ಪ್ರಮಾಣ ಪತ್ರ ಹಾಗೂ 06 ಭಾವಚಿತ್ರಗಳನ್ನು ಸಲ್ಲಿಸಬೇಕು.
ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ರವಿನಾಯಕ್ ಡಿ, ಮೊ.ಸಂ: 9886610245 ನ್ನು ಸಂಪರ್ಕಿಸಬಹುದೆಂದು ಸರ್ಕಾರಿ ಮಹಿಳಾ ವಸತಿ ಪಾಲಿಟೆಕ್ನಿಕ್‌ನ ಪ್ರಾಂಶುಪಾಲರು ತಿಳಿಸಿದ್ದಾರೆ.
D.K. Shivakumar ರಾಜ್ಯದ ಹಿತಕ್ಕಾಗಿ ಪಕ್ಷಾತೀತವಾಗಿ ಒಂದಾಗೋಣ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ
D.K. Shivakumar ರಾಜ್ಯದ ಹಿತಾಸಕ್ತಿ ಮತ್ತು ಜನರ ಕಲ್ಯಾಣವೇ ಎಲ್ಲರ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಪಕ್ಷ ರಾಜಕಾರಣವನ್ನು ಪಕ್ಕಕ್ಕಿಟ್ಟು ರಾಜ್ಯದ ಅಭಿವೃದ್ಧಿಗಾಗಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಸಂಸದರಿಗೆ ಕರೆ ನೀಡಿದರು.
ನವದೆಹಲಿದಲ್ಲಿ ನಡೆದ ಕರ್ನಾಟಕ ರಾಜ್ಯದ ಸಂಸದರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮುಂದೆ ಬಾಕಿ ಉಳಿದಿರುವ ರಾಜ್ಯದ ವಿವಿಧ ಯೋಜನೆಗಳಿಗೆ ಶೀಘ್ರ ಅನುಮೋದನೆ ದೊರಕಿಸುವಲ್ಲಿ ಎಲ್ಲ ಸಂಸದರ ಸಹಕಾರ ಅಗತ್ಯವಾಗಿದೆ ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಎದುರಾಗುತ್ತಿರುವ ತೀವ್ರ ಬರ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ವರ್ಷದ ಮಳೆ ಕೊರತೆ ಹಾಗೂ ಬರದ ಸಾಧ್ಯತೆ ಕುರಿತು ಚರ್ಚೆ ನಡೆದಿರುವುದಾಗಿ ತಿಳಿಸಿದರು. ಆಲಮಟ್ಟಿ ಮತ್ತು ಹಾರಂಗಿ ಜಲಾಶಯಗಳನ್ನು ಹೊರತುಪಡಿಸಿ ಉಳಿದ ಬಹುತೇಕ ಜಲಾಶಯಗಳು ಖಾಲಿಯಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಈ ಸಂಬಂಧ ಪ್ರಧಾನಿಗೆ ಪತ್ರ ಬರೆದು ಅಗತ್ಯ ನೆರವು ಕೋರಲಾಗಿದ್ದು, ರಾಜ್ಯದ ಸಂಸದರ ಬೆಂಬಲವೂ ಅಗತ್ಯವಾಗಿದೆ ಎಂದು ತಿಳಿಸಿದರು.
ಬರದ ಹಿನ್ನೆಲೆಯಲ್ಲಿ ರೈತರು ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ಪರಿಗಣಿಸಿ ಬೆಳೆ ಬೆಳೆಯುವಂತೆ ಮನವಿ ಮಾಡಿರುವುದಾಗಿ ಹೇಳಿದ ಅವರು, ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ತುಂಗಭದ್ರಾ ಯೋಜನೆ ಕುರಿತು ಮಾತನಾಡಿದ ಮುಖ್ಯಮಂತ್ರಿ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರ ಸಮ್ಮುಖದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿರುವುದಾಗಿ ಹೇಳಿದರು. ತುಂಗಭದ್ರಾದಲ್ಲಿ ಸುಮಾರು 30 ಟಿಎಂಸಿ ನೀರು ಸಂರಕ್ಷಿಸುವ ಉದ್ದೇಶದಿಂದ ನವಿಲೆ ಸಮತೋಲನ ಜಲಾಶಯ ನಿರ್ಮಾಣಕ್ಕೆ ಮೂರು ರಾಜ್ಯಗಳೂ ಒಪ್ಪಿಗೆ ಸೂಚಿಸಿದ್ದು, ಗೋದಾವರಿ, ಕೃಷ್ಣಾ, ಪೆನ್ನಾರ್ ಹಾಗೂ ಕಾವೇರಿ ನದಿಗಳ ಜೋಡಣೆ ಯೋಜನೆಗೂ ಸಮ್ಮತಿ ವ್ಯಕ್ತವಾಗಿದೆ ಎಂದು ತಿಳಿಸಿದರು. ಇದು ಐತಿಹಾಸಿಕ ನಿರ್ಧಾರವಾಗಿದೆ ಎಂದ ಅವರು, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಿದರು.
D.K. Shivakumar ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕರ್ನಾಟಕದ ಪರವಾಗಿ ಮಹತ್ವದ ಸ್ಪಷ್ಟನೆ ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕರ್ನಾಟಕದ ವ್ಯಾಪ್ತಿಯಲ್ಲಿ ಸಮತೋಲನ ಅಣೆಕಟ್ಟು ನಿರ್ಮಿಸಲು ಬೇರೆ ರಾಜ್ಯಗಳ ಅನುಮತಿ ಅಗತ್ಯವಿಲ್ಲ ಹಾಗೂ ಆಕ್ಷೇಪಿಸುವ ಹಕ್ಕೂ ಇಲ್ಲ ಎಂದು ನ್ಯಾಯಾಲಯ ಹೇಳಿರುವುದಾಗಿ ವಿವರಿಸಿದರು. ಇದೇ ವಿಷಯವನ್ನು ರಾಜ್ಯಸಭೆಯಲ್ಲಿ ಕೇಂದ್ರ ಜಲಶಕ್ತಿ ಸಚಿವರೂ ಪುನರುಚ್ಚರಿಸಿದ್ದು, ಇದಕ್ಕಾಗಿ ಕರ್ನಾಟಕದ ಪರವಾಗಿ ಧನ್ಯವಾದ ಸಲ್ಲಿಸಿದರು.
ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ನೀರು ಹಂಚಿಕೆ ತೀರ್ಮಾನಕ್ಕೆ ಸಂಬಂಧಿಸಿದ ಗೆಜೆಟ್ ಅಧಿಸೂಚನೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದ್ದು, ಪ್ರಕರಣದ ತ್ವರಿತ ಇತ್ಯರ್ಥಕ್ಕಾಗಿ ವಿಶೇಷ ಪೀಠ ರಚಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮಹದಾಯಿ ಯೋಜನೆಯಲ್ಲಿರುವ ಕಾನೂನು ಅಡೆತಡೆಗಳನ್ನು ನಿವಾರಿಸಲು ಹಿರಿಯ ವಕೀಲರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ, ಕೇಂದ್ರದಲ್ಲಿ ಬಾಕಿ ಉಳಿದಿರುವ ಕರ್ನಾಟಕದ ಯೋಜನೆಗಳ ಮೇಲ್ವಿಚಾರಣೆ ಮತ್ತು ಸಮನ್ವಯಕ್ಕಾಗಿ ಕರ್ನಾಟಕ ಭವನದಲ್ಲಿ ಹೊಸ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆ ತರಲಾಗುವುದು. ಯೋಜನೆಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲು ಪ್ರತ್ಯೇಕ ರೆಸಿಡೆಂಟ್ ಕಮಿಷನರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
