Wednesday, September 16, 2026
Wednesday, September 16, 2026

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಾಕಿ ಇರುವ ಪ್ರಮುಖ ಯೋಜನೆಗಳ ಅನುಮೋದನೆ & ಅನುದಾನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರಿಂದ ದೆಹಲಿಯಲ್ಲಿ ಮಹತ್ವದ ಸಭೆ

Date:

ಜಲಸಂಪನ್ಮೂಲ ಇಲಾಖೆಯನ್ನು ಹೊರತುಪಡಿಸಿ ಕೇಂದ್ರ ಸರ್ಕಾರದಿಂದ ಬಾಕಿ ಇರುವ ಪ್ರಮುಖ ಯೋಜನೆಗಳಿಗೆ ಅನುಮೋದನೆ, ಅನುದಾನಗಳು ಸೇರಿದಂತೆ ಒಟ್ಟು 13 ಅಂಶಗಳ ಬಗ್ಗೆ ಸಿಎಂ ಡಿ ಕೆ ಶಿವಕುಮಾರ್ ಅವರು ಕೇಂದ್ರ ಸಚಿವರು ಹಾಗೂ ರಾಜ್ಯದ ಸಂಸದರ ಜತೆ ಚರ್ಚೆ ನಡೆಸಿದರು.

ನವದೆಹಲಿಯ ಕರ್ನಾಟಕ ಭವನದಲ್ಲಿ ಸೋಮವಾರ ಸಿಎಂ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯದ ಎಲ್ಲಾ ಸಂಸದರ ಜೊತೆಗಿನ ಸಭೆಯಲ್ಲಿ ಈ ಯೋಜನೆಗಳ ಅನುಮೋದನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಲಾಯಿತು.

“ರಾಜ್ಯದ ವಿವಿಧ ವಿಧೇಯಕಗಳಿಗೆ ಅನುಮೋದನೆ ಸೇರಿದಂತೆ ಗ್ರಾಮ ಪಂಚಾಯತಿಗಳ ಅನುದಾನ, ಸಾಗರಮಾಲ 2.0 ಯೋಜನೆಗಳು, ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ, ರಕ್ಷಣಾ ಇಲಾಖೆಯ ಭೂಮಿ ರಾಜ್ಯ ಸರ್ಕಾರಕ್ಕೆ ವರ್ಗಾವಣೆ, ಬೆಂಗಳೂರು ರಿಂಗ್ ರಸ್ತೆ, ಕೋಲಾರ ರೈಲ್ವೆ ಕೋಚ್ ಕಾರ್ಖಾನೆ, ಬೆಂಗಳೂರು ಉಪನಗರ ರೈಲು ಯೋಜನೆ, ಬೆಂಗಳೂರು–ಮುಂಬೈ ಅತಿ ವೇಗದ ರೈಲು ಮಾರ್ಗ, HAL ವಿಮಾನ ನಿಲ್ದಾಣವನ್ನು ವಾಣಿಜ್ಯ ಬಳಕೆಗೆ ಪುನರಾರಂಭಿಸುವುದು, ರಾಯಚೂರಿನಲ್ಲಿ AIIMS ಸ್ಥಾಪನೆ, ತೆಂಗು ಮತ್ತು ಅಡಿಕೆ ಬೆಳೆಗಳ ಕೀಟ ನಿಯಂತ್ರಣ, ಪೊಲೀಸ್ ಆಧುನೀಕರಣದ ಬಗ್ಗೆ ಗಮನ ಹರಿಸುವಂತೆ ಸಭೆಯಲ್ಲಿ ಕೋರಲಾಯಿತು.

ಸಭೆಯಲ್ಲಿ ಚರ್ಚೆಯಾದ ಅಂಶಗಳ ವಿವರಗಳು:

15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ ಬಿಡುಗಡೆ

2025–26ನೇ ಸಾಲಿನ 15ನೇ ಹಣಕಾಸು ಆಯೋಗದ ಗ್ರಾಮ ಪಂಚಾಯಿತಿಗಳ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿದೆ‌. 2025–26ನೇ ಸಾಲಿಗೆ 15ನೇ ಹಣಕಾಸು ಆಯೋಗವು ₹2,186.20 ಕೋಟಿ ನೆರವು ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರವು ಈ ಮೊತ್ತವನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಪಂಚಾಯತ್ ರಾಜ್ ಸಚಿವಾಲಯದೊಂದಿಗೆ ನಿರಂತರ ಅನುಸರಣೆ ನಡೆಸಿ ಅನುದಾನ ಬಿಡುಗಡೆ ಮಾಡಿಸಬೇಕು ಎಂದು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯವರು ಹಲವು ಬಾರಿ ಪತ್ರ ಬರೆದಿದ್ದು, 11.03.2026ರಂದು ಕೇಳಲಾದ ಪ್ರಶ್ನೆಗಳಿಗೆ 25.03.2026ರಂದು ವಿವರವಾಗಿ ಉತ್ತರಿಸಲಾಗಿದೆ.
ಜೊತೆಗೆ ಮುಖ್ಯ ಕಾರ್ಯದರ್ಶಿಯವರು 04.04.2026ರಂದು ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಯವರು ಸಹ 25.02.2026 ಹಾಗೂ 06.04.2026ರಂದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು 19.01.2026, 02.07.2026 ಹಾಗೂ 15.07.2026ರಂದು ಸಂಬಂಧಿತ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರಿನ STRR (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಯೋಜನೆ

ಬೆಂಗಳೂರು ಸುತ್ತ 288 ಕಿ.ಮೀ. ಉದ್ದದ ರಿಂಗ್ ರಸ್ತೆ. ಬೆಂಗಳೂರು ಹಾಗೂ ಸುತ್ತಮುತ್ತಲ ಸ್ಯಾಟಲೈಟ್ ನಗರಗಳಾದ ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಡಾಬಸ್ ಪೇಟೆ, ಮಾಗಡಿ, ರಾಮನಗರ, ಕನಕಪುರ, ಆನೇಕಲ್ ಹಾಗೂ ಹೊಸೂರು ಸಂಪರ್ಕಿಸುವ ಈ ಯೋಜನೆಗೆ ಭೂಸ್ವಾಧೀನ ವೆಚ್ಚದ 30% ರಾಜ್ಯ ಸರ್ಕಾರ ಭರಿಸುತ್ತಿದೆ. ಖನಿಜ ರಾಯಲ್ಟಿ ಹಾಗೂ GST ವಿನಾಯಿತಿಗೆ ರಾಜ್ಯ ಸರ್ಕಾರ ಒಪ್ಪಿದೆ. ₹9,613 ಕೋಟಿ ಮೌಲ್ಯದ ಉಳಿದ ಕಾಮಗಾರಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಇನ್ನೂ ಸಿಕ್ಕಿಲ್ಲ.

ಬೆಂಗಳೂರು ಉಪನಗರ ರೈಲು ಯೋಜನೆ

ಈ ಯೋಜನೆ ಒಟ್ಟು ಉದ್ದ 148 ಕಿ.ಮೀ. ಆಗಿದ್ದು, ಪರಿಷ್ಕೃತ ಯೋಜನಾ ವೆಚ್ಚ ₹23,343 ಕೋಟಿ ಆಗಿದ್ದು, ಈವರೆಗೆ ₹3,342.77 ಕೋಟಿ ವೆಚ್ಚವಾಗಿದೆ. 153 ಕೋಚ್‌ಗಳ ಖರೀದಿಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಅಗತ್ಯವಾಗಿದ್ದು, ಕೇಂದ್ರ ಸಚಿವ ಸಂಪುಟ ಹಾಗೂ ರೈಲ್ವೇ ಇಲಾಖೆ ಅನುಮೋದನೆ ಅಗತ್ಯವಿದೆ.

ಕೋಲಾರದಲ್ಲಿ ರೈಲ್ವೇ ಕೋಚ್ ಕಾರ್ಖಾನೆ

2014ರಲ್ಲಿ ಕೇಂದ್ರ ಸಚಿವ ಸಂಪುಟದಿಂದ ರಾಜ್ಯ ಸರ್ಕಾರ ಹಾಗೂ ರೈಲ್ವೇ ಇಲಾಖೆ 50:50 ಯೋಜನಾ ವೆಚ್ಚ ಭರಿಸಲು ಅನುಮೋದನೆಯಾಗಿದ್ದು, ರಾಜ್ಯ ಸರ್ಕಾರ ಭೂಮಿ ನೀಡಿದ್ದರೂ ಯೋಜನೆ ಇನ್ನೂ ಜಾರಿಯಾಗಿಲ್ಲ.

ವಾಣಿಜ್ಯ ಉದ್ದೇಶಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣ ಪುನರಾರಂಭ

HAL ವಿಮಾನ ನಿಲ್ದಾಣವನ್ನು ವಾಣಿಜ್ಯ ಬಳಕೆಗೆ ಪುನರಾರಂಭಿಸಬೇಕಿದ್ದು, ನಾಗರಿಕ ವಿಮಾನಯಾನ ಸಚಿವಾಲಯ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಸಾಗರಮಾಲಾ 2.0 ಕಾರ್ಯಯೋಜನೆಗೆ ಅನುಮೋದನೆ

ಸಾಗರಮಾಲಾ 2.0 ಯೋಜನೆಯಡಿ ಕರ್ನಾಟಕ ಜಲಸಾರಿಗೆ ಮಂಡಳಿಯು 6 ತಿಂಗಳ ಹಿಂದೆ ಹಾಗೂ 17.07.2026 ರಂದು ₹16,561 ಕೋಟಿ ಮೌಲ್ಯದ 176 ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದೆ. ಭಾರತ ಸರ್ಕಾರ ಇನ್ನೂ ಸಾಗರಮಾಲಾ 2.0 ಕಾರ್ಯಯೋಜನೆಯನ್ನು ಅನುಮೋದಿಸಿಲ್ಲ. ಈ ಯೋಜನೆಗಳಿಂದ ಕರಾವಳಿ ಮೂಲಸೌಕರ್ಯ, ಬಂದರು ಸಂಪರ್ಕ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಈ ಕುರಿತು ಅಗತ್ಯ ಕ್ರಮ ಅವಶ್ಯಕ ಎಂದು ಮನವಿ ಮಾಡಲಾಗಿದೆ.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ

ರಾಯಚೂರಿನಲ್ಲಿ AIIMS ಸ್ಥಾಪನೆಗೆ 21.08.2023ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ. 11.06.2026ರಂದು ಮುಖ್ಯಮಂತ್ರಿ ಮತ್ತೊಮ್ಮೆ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಾರೆ. ಆರೋಗ್ಯ ಸೇವೆ ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ನೆರವಾಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಅನುಮೋದನೆ ಬಾಕಿ ಇದೆ.

ತೆಂಗು ಮತ್ತು ಅಡಿಕೆ ಬೆಳೆಗಳ ಕೀಟ ನಿಯಂತ್ರಣಕ್ಕೆ ನೆರವು

ತೆಂಗು ಮತ್ತು ಅಡಿಕೆ ಬೆಳೆಗಳ ಕೀಟ ನಿಯಂತ್ರಣ
ತೆಂಗು ಹಾಗೂ ಅಡಿಕೆ ಬೆಳೆಗಳಿಗೆ ಒಟ್ಟು ₹1,438.59 ಕೋಟಿಗೂ ಅಧಿಕ ನೆರವು ಕೋರಲಾಗಿದೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ನೆರವು ಬೇಕಾಗಿದೆ.

ಇತರೆ ಅಂಶಗಳ ಪ್ರಸ್ತಾಪ:

ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂಬಗಳ ಸ್ಥಳಾಂತರ CAMPA ಯೋಜನೆಯಡಿ ₹300 ಕೋಟಿ ಅನುದಾನವನ್ನು 02.04.2025ರಂದು ಕೋರಲಾಗಿದ್ದು,
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅನುಮೋದನೆ ಬಾಕಿಯಿದೆ.

ರಕ್ಷಣಾ ಇಲಾಖೆಯ ಭೂಮಿ ರಾಜ್ಯಕ್ಕೆ ವರ್ಗಾವಣೆ ಸಂಬಂಧ 15.12.2025ರಂದು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬೆಂಗಳೂರಿನಲ್ಲಿ 40 ಎಕರೆ, ಬೆಳಗಾವಿಯಲ್ಲಿ 668 ಎಕರೆ ಭೂಮಿ ವರ್ಗಾವಣೆಗೆ ರಕ್ಷಣಾ ಸಚಿವಾಲಯದಿಂದ ಅನುಮೋದನೆ ಪಡೆಯಬೇಕು.

ಬೆಂಗಳೂರು–ಮೈಸೂರು ಹಾಗೂ ಬೆಂಗಳೂರು–ಮುಂಬೈ ಮಾರ್ಗವನ್ನು ಹೈಸ್ಪೀಡ್ ಮಾರ್ಗಕ್ಕೆ ಸೇರಿಸಲು ರಾಜ್ಯ ಮನವಿ ಮಾಡಿದ್ದು, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಬೆಳವಣಿಗೆ, ವೇಗದ ಸಂಚಾರ ಹಾಗೂ ಪ್ರಾದೇಶಿಕ ಸಮತೋಲನಕ್ಕೆ ಸಹಕಾರಿಯಾಗಲಿದೆ. ಈ ಯೋಜನೆಗೆ ಸಂಬಂಧಿತ ಕೇಂದ್ರ ಸಚಿವಾಲಯದಿಂದ ಅನುಮೋದನೆ ಕೊಡಿಸಬೇಕು.

ಪೊಲೀಸ್ ಆಧುನೀಕರಣಕ್ಕೆ ICJS 2.0 ಯೋಜನೆಗೆ ₹270.71 ಕೋಟಿ. ASUMP ಯೋಜನೆಯಡಿ ₹280 ಕೋಟಿ ಬಿಡುಗಡೆ ಬಾಕಿ. ಗೃಹ ಸಚಿವಾಲಯದೊಂದಿಗೆ ಚರ್ಚಿಸಿ ಅನುದಾನ ಕೊಡಿಸಬೇಕು.

ರಾಜ್ಯದ ವಿವಿಧ ವಿಧೇಯಕಗಳು:

  • ಉಚಿತ ಮತ್ತು ಕಡ್ಡಾಯ ಶಿಕ್ಷಣ (ಕರ್ನಾಟಕ ತಿದ್ದುಪಡಿ) ವಿಧೇಯಕ, 2015.
  • ಕರ್ನಾಟಕ ಖನಿಜ ಹಕ್ಕುಗಳು ಮತ್ತು ಖನಿಜಭರಿತ ಭೂಮಿ ತೆರಿಗೆ ವಿಧೇಯಕ, 2024.
  • ಔಷಧ ಮತ್ತು ಸೌಂದರ್ಯವರ್ಧಕ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025.
  • ನೋಟರೀಸ್ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025.

ಈ ವಿಧೇಯಕಗಳಿಗೆ ಗೃಹ ಸಚಿವಾಲಯ ಹಾಗೂ ಸಂಬಂಧಿತ ಕೇಂದ್ರ ಸಚಿವಾಲಯಗಳೊಂದಿಗೆ ತ್ವರಿತ ಒಪ್ಪಿಗೆ ಕೊಡಿಸಬೇಕು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...