B.Y. Raghavendra ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಅಪ್ರೆಂಟಿಸ್ಷಿಪ್ ಪ್ರೋತ್ಸಾಹಕ ಯೋಜನೆ-2’ (NAPS-2) ಅಡಿಯಲ್ಲಿ ಕರ್ನಾಟಕ ರಾಜ್ಯ ನಿರುದ್ಯೋಗಿ ಯುವಜನರಿಗೆ ಕೌಶಲ್ಯ ತರಬೇತಿ ನೀಡುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದು, ರಾಜ್ಯದಲ್ಲಿ ಇದುವರೆಗೆ 4,47,703 ಯುವಕ-ಯುವತಿಯರು ಅಪ್ರೆಂಟಿಸ್ ತರಬೇತಿಗೆ ಸೇರ್ಪಡೆಗೊಂಡಿದ್ದಾರೆ.
ಈ ಕುರಿತಂತೆ ಪ್ರಸಕ್ತ ಅಧಿವೇಶನಲ್ಲಿ ವಿಷಯ ಪ್ರಸ್ತಾಪಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ರಾಜ್ಯವಾರು ಮತ್ತು ಜಿಲ್ಲಾವಾರು ಅಧಿಕೃತ ಮಾಹಿತಿ ನೀಡಿದೆ.
ಈ ಯೋಜನೆಯಡಿ ಜುಲೈ 2023ರಿಂದ ನೇರ ನಗದು ವರ್ಗಾವಣೆ (DBT) ಮೂಲಕ ಕರ್ನಾಟಕದ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಒಟ್ಟು 98.78 ಕೋಟಿ ರೂ. ಕನಿಷ್ಠ ವೇತನ ನೆರವನ್ನು ಕೇಂದ್ರ ಸರ್ಕಾರ ನೇರವಾಗಿ ಜಮೆ ಮಾಡಿದೆ.
ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಜಯಂತ್ ಚೌಧರಿ ಈ ಕುರಿತಂತೆ ಸಂಸದ ರಾಘವೇಂದ್ರ ಅವರಿಗೆ ಅಧಿಕೃತ ಅಂಕಿ-ಅಂಶಗಳೊಂದಿಗೆ ಮಾಹಿತಿ ನೀಡಿದ್ದು, ಯೋಜನೆ ಜಾರಿ ಹಾಗೂ ರಾಜ್ಯ ಮಟ್ಟದ ಪ್ರಗತಿಯ ಸಮಗ್ರ ವಿವರಗಳನ್ನು ಒದಗಿಸಿದ್ದಾರೆ.
ಅಪ್ರೆಂಟಿಸ್ ತರಬೇತಿ ಪೂರ್ಣಗೊಳಿಸಿದ ಯುವಜನರಲ್ಲಿ ಶೇ.72ರಷ್ಟು ಅಭ್ಯರ್ಥಿಗಳು ಉದ್ಯೋಗ ಪಡೆದಿದ್ದಾರೆ ಎನ್ನುವುದು ಅರುಣ್ ಜೇಟ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ (AJNIFM) ನಡೆಸಿದ ಅಧ್ಯಯನದಿಂದ ಸಾಬೀತಾಗಿದೆ.
ಅಲ್ಲದೆ, ಜೀವನ ವೆಚ್ಚದ ಆಧಾರದ ಮೇಲೆ (CPI-Consumer Price Index) ತರಬೇತಿದಾರರ ಕನಿಷ್ಠ ವೇತನ ದರವನ್ನು ಪರಿಷ್ಕರಿಸಿ 11 ಸೆಪ್ಟೆಂಬರ್ 2025 ರಂದು ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ರಾಜ್ಯದ ಯುವ ಸಮುದಾಯಕ್ಕೆ ಕೈಗಾರಿಕಾ ಆಧಾರಿತ ತರಬೇತಿ ನೀಡುವುದರ ಜೊತೆಗೆ ಶೈಕ್ಷಣಿಕ ಪದವಿಗಳೊಂದಿಗೆ ಅಪ್ರೆಂಟಿಸ್ಷಿಪ್ ಸಂಯೋಜಿಸುವ (AEDP – Apprenticeship Embedded Degree Programme) ನೂತನ ಶೈಕ್ಷಣಿಕ ನೀತಿಯು ಯುವಜನರ ಉದ್ಯೋಗಾವಕಾಶ ಹೆಚ್ಚಿಸಲು ಪ್ರಮುಖ ಮೈಲಿಗಲ್ಲಾಗಿದೆ ಎಂದು ಸಂಸದ ರಾಘವೇಂದ್ರ ತಿಳಿಸಿದ್ದಾರೆ.
B.Y. Raghavendra ಇದೇ ವೇಳೆ, ಶಿವಮೊಗ್ಗ ಲೋಕಸಭಾ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಮಲೆನಾಡು ಭಾಗಗಳಲ್ಲಿ NAPS-2 ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಸ್ಥಳೀಯ ಯುವಕರು ಪಡೆದುಕೊಳ್ಳಲು ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ 56 ನಂದಾಯಿತ ಸಂಸ್ಥೆಗಳ ಮೂಲಕ 882 ಯುವಕರು ಅಪ್ರೆಂಟಿಸ್ ತರಬೇತಿ ಪಡೆಯುತ್ತಿದ್ದು, ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್ ಮೇಳಗಳನ್ನು (PMNAM – Pradhan Mantri National Apprenticeship Mela) ಹೆಚ್ಚು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದ ಅಧಿಕಾರಿಗಳಿಗಳೊಂದಿಗೆ ಸಮನ್ವಯ ಸಾಧಿಸಲಾಗುವುದು ಎಂದು ಸಂಸದರು ಹೇಳಿದ್ದಾರೆ. ಶಿವಮೊಗ್ಗವನ್ನು ಹೆಚ್ಚು ಬೃಹತ್ ಉದ್ಯಮಗಳಿರುವ ಬೆಂಗಳೂರು ಅಥವಾ ಬಳ್ಳಾರಿಗೆ ಹೋಲಿಸುವುದಕ್ಕಿಂತಲೂ, ನಮ್ಮ ಜಿಲ್ಲೆಯ ವಾಸ್ತವ ಪರಿಸ್ಥಿತಿಗಳಿಗೆ ಅನುಗುಣವಾಗಿ, ಬೃಹತ್ ಕೈಗಾರಿಕಾ ವಲಯಗಳಿಗೆ ಸೀಮಿತವಾಗದೆ ಮಾಹಿತಿ ತಂತ್ರಜ್ಞಾನ (IT), ನವೀಕರಿಸಬಹುದಾದ ಇಂಧನ, ಜೈವಿಕ ತಂತ್ರಜ್ಞಾನ ಹಾಗೂ ಸ್ಥಳೀಯ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಲ್ಲಿ (MSME) ನಮ್ಮ ಗ್ರಾಮೀಣ ಭಾಗದ ಯುವಜನರಿಗೆ ಹೆಚ್ಚಿನ ಅವಕಾಶ ಒದಗಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಸಂಸದರು ಬದ್ಧತೆ ವ್ಯಕ್ತಪಡಿಸಿದ್ದಾರೆ.
