Wednesday, September 16, 2026
Wednesday, September 16, 2026
Home Blog Page 2

ಪಿಇಎಸ್ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಯ ವತಿಯಿಂದ ಇಂಜಿನಿಯರ್ಸ್ ದಿನ ಆಚರಣೆ

0

ಪಿಇಎಸ್ ಟ್ರಸ್ಟ್‌ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಇಎಸ್ ತಾಂತ್ರಿಕ ಮತ್ತು ನಿರ್ವಹಣಾ ಸಂಸ್ಥೆಯ ವತಿಯಿಂದ ಭಾರತದ ಶ್ರೇಷ್ಠ ಇಂಜಿನಿಯರ್, ದೂರದೃಷ್ಟಿಯ ಮಹಾನ್ ವ್ಯಕ್ತಿ ಹಾಗೂ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ್ ದಿನವನ್ನು ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕೃಷ್ಣಪ್ರಸಾದ್ ಎಚ್.ಜಿ. ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣಪ್ರಸಾದ್ ಎಚ್.ಜಿ. ಅವರು, ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ, ಸಾಧನೆಗಳು ಹಾಗೂ ಅಪ್ರತಿಮ ಇಂಜಿನಿಯರಿಂಗ್ ಕೊಡುಗೆಗಳ ಕುರಿತು ವಿವರಿಸಿದರು. ವಿಶ್ವೇಶ್ವರಯ್ಯ ಅವರು ತಮ್ಮ ಜೀವನದಲ್ಲಿ ಕೈಗೊಂಡ ಹಲವು ಮಹತ್ವದ ಹಾಗೂ ಸವಾಲಿನ ಯೋಜನೆಗಳ ಹಿಂದಿನ ಪ್ರೇರಣಾದಾಯಕ ಘಟನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.

ಸಂಸ್ಥೆಯ ಪ್ರಾಂಶುಪಾಲ ಡಾ. ಸ್ವಾಮಿ ಡಿ.ಆರ್. ಅವರು ಅಧ್ಯಕ್ಷೀಯ ಮಾತುಗಳಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಅಪಾರ ಜ್ಞಾನ, ಶಿಸ್ತು, ಸಮರ್ಪಣೆ ಹಾಗೂ ದೂರದೃಷ್ಟಿಯ ಗುಣಗಳನ್ನು ಸ್ಮರಿಸಿದರು. ವಿಶ್ವೇಶ್ವರಯ್ಯ ಅವರ ಆದರ್ಶ ಮೌಲ್ಯಗಳನ್ನು ಇಂದಿನ ಯುವಪೀಳಿಗೆ ಅಳವಡಿಸಿಕೊಂಡು, ಅವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಮುಖ್ಯ ಅತಿಥಿ ಕೃಷ್ಣಪ್ರಸಾದ್ ಎಚ್.ಜಿ. ಅವರನ್ನು ಅವರ ಅಮೂಲ್ಯ ಉಪಸ್ಥಿತಿ ಹಾಗೂ ಪ್ರೇರಣಾದಾಯಕ ಮಾತುಗಳಿಗೆ ಕೃತಜ್ಞತೆಯ ಸಂಕೇತವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಎಲ್ಲ ಇಂಜಿನಿಯರಿಂಗ್ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ನಿಯಂತ್ರಣ ತಪ್ಪಿ ಕಾರು ಅಪಘಾತ – ಸ್ಥಳೀಯರಿಂದ ಇಬ್ಬರ ರಕ್ಷಣೆ

0

ತೀರ್ಥಹಳ್ಳಿ ತಾಲೂಕಿನ ಗುಡ್ಡೆಕೇರಿ ಬಳಿ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದ್ದು, ಕಾರಿನಲ್ಲಿದ್ದ ತಾಯಿ ಹಾಗೂ ಆರು ವರ್ಷದ ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ.

ದಾವಣಗೆರೆಯಿಂದ ಮಣಿಪಾಲಕ್ಕೆ ತೆರಳುತ್ತಿದ್ದ ಕಾರನ್ನು ಮಣಿಪಾಲದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಪ್ರೊಫೆಸರ್ ಚಲಾಯಿಸುತ್ತಿದ್ದರು. ಕಾರಿನಲ್ಲಿ ಅವರ ಆರು ವರ್ಷದ ಮಗು ಕೂಡ ಪ್ರಯಾಣಿಸುತ್ತಿತ್ತು. ಕಾರು ಚಲಾಯಿಸುವ ವೇಳೆ ಮಗು ಕರೆದ ಹಿನ್ನೆಲೆಯಲ್ಲಿ ಮಗುವನ್ನು ನೋಡಲು ಮುಂದಾದಾಗ ಕಾರಿನ ಮೇಲಿನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ ಎನ್ನಲಾಗಿದೆ.

ಕಾರು ಹಳ್ಳಕ್ಕೆ ಬೀಳುತ್ತಿದ್ದಂತೆ ಸ್ಥಳೀಯರು ತಕ್ಷಣ ಧಾವಿಸಿ ತಾಯಿ ಹಾಗೂ ಮಗುವನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತಂದಿದ್ದಾರೆ. ರಸ್ತೆ ಬದಿಯಲ್ಲಿ ತಡೆಗೋಡೆ ಇಲ್ಲದಿರುವುದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಡಾ.ನಾಗಲಕ್ಷ್ಮಿ ಚೌಧರಿ ಭೇಟಿ: ನೀರು,ಆಕ್ಸಿಜನ್,ಶೌಚಾಲಯ ಅಸ್ವಚ್ಛತೆ ವ್ಯವಸ್ಥೆ ವಿದ್ಯುತ್ ಕೊರತೆ ನೆಪ ಕೇಳಿ ಗರಂ

0

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು ಶನಿವಾರದಂದು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಮಹಿಳಾ ಮೆಡಿಸಿನ್ ಜನರಲ್ ವಾರ್ಡ್ ಗೆ ಭೇಟಿ ನೀಡಿ, ಮಹಿಳಾ ಒಳರೋಗಿಗಳೊಂದಿಗೆ ಮಾತನಾಡಿ, ಅಲ್ಲಿನ ನೈರ್ಮಲ್ಯ ಹಾಗೂ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು.
ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರು ಮತ್ತು ಅವರ ಸಂಬಂಧಿಕರೊಂದಿಗೆ ನೇರವಾಗಿ ಸಂವಾದ ನಡೆಸಿ, ಉಚಿತ ಔಷಧ ಸರಬರಾಜು, ವೈದ್ಯರ ಲಭ್ಯತೆ ಹಾಗೂ ಸಿಬ್ಬಂದಿಯ ನಡೆ-ನುಡಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಹೊರಗಿನಿಂದ ಔಷಧಿಗಳನ್ನು ತರಲು ಬರೆದುಕೊಡುತ್ತಾರಾ? ಉಚಿತವಾಗಿ ಕೊಡ್ತಾರಾ? ಕುಡಿಯುವ ನೀರು ಲಭ್ಯವಿದೆಯಾ, ಶೌಚಾಲಯದಲ್ಲಿ ನೀರು ಹಾಗೂ ಸ್ವಚ್ಚತೆ ಇದೆಯಾ ಎಂದು ಒಳರೋಗಿಗಳೊಂದಿಗೆ ವಿಚಾರಿಸಿದರು.
ಸಿಬ್ಬಂದಿಗಳು, ಸ್ವಚ್ಚತಾ ಸಿಬ್ಬಂದಿಗಳ ವೇತನ, ಸೌಲಭ್ಯಗಳ ಬಗ್ಗೆ, ಎಬಿಎಆರ್ ಕೆ ಸೌಲಭ್ಯದ ಬಗ್ಗೆ ಪರಿಶೀಲಿಸಿದರು.
ದುಡಿಯುವ ಮಗ ತೀರಿಕೊಂಡಿದ್ದು, ಬಿಪಿಎಲ್ ಕಾರ್ಡ್ ಎಪಿಎಲ್ ಆಗಿ ಬದಲಾಗಿದ್ದು ಇದರಿಂದ ತಾಯಿಯವರ ಡಯಾಲಿಸಿಸ್ ಮಾಡಿಸುವುದು ಕಷ್ಟ ಆಗುತ್ತಿರುವ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದ ಮಹಿಳೆ ಕುರಿತು, ಆಹಾರ ಇಲಾಖೆಯ ಉಪ ನಿರ್ದೇಶಕ ರೊಂದಿಗೆ ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಅನುಕೂಲ ಮಾಡುವಂತೆ ತಿಳಿಸಿದರು.
ತಾಯಿ ಮತ್ತು ಮಕ್ಕಳ ವಿಭಾಗಕ್ಕೆ ಭೇಟಿ:
ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಗರ್ಭಿಣಿಯರು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲುವ ಪರಿಸ್ಥಿತಿ ತಡೆಯಲು, ನೋಂದಣಿ ಹಾಗೂ ಚಿಕಿತ್ಸಾ ಕೌಂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಈ ಹಿಂದೆಯೇ ಸೂಚಿಸಿದ್ದೆ ಎಂದು ಕೌಂಟರ್ ಬಳಿ ತೆರಳಿ ಪರಿಶೀಲನೆ ನಡೆಸಿದರು. ರೋಗಿಗಳಿಗೆ ತೊಂದರೆಯಾಗದಂತೆ ಆಸ್ಪತ್ರೆಯ ಆಡಳಿತದಲ್ಲಿ ಉತ್ತರದಾಯಿತ್ವ ತರಲು ಹಾಗೂ ವ್ಯವಸ್ಥೆಯನ್ನು ಕೂಡಲೇ ಸರಿಪಡಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ವೇಳೆ ಒಳರೋಗಿಗಳು, ಮತ್ತು ಅವರ ಕಡೆಯವರು ರೋಗಿಗಳ ಕೈಯಲ್ಲೇ ಲ್ಯಾಬ್ ಪರೀಕ್ಷೆಗೆ ಮಾದರಿಗಳನ್ನು ಕಳುಹಿಸಲಾಗುತ್ತದೆ.‌ಪರೀಕ್ಷೆಗಳ ವರದಿ ಸಿಗುವುದು ತುಂಬಾ ತಡ ಮತ್ತು ಸಾಕಷ್ಟು ಓಡಾಟ ಆಗಿ ಕಷ್ಟವಾಗುತ್ತಿದೆ ಎಂದು ದೂರಿದಾಗ, ವರದಿಗಳನ್ನು ಡಿಜಿಟಲೈಜ್ ಮಾಡಿಸುವ ಬಗ್ಗೆ, ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಶೀಘ್ರವಾಗಿ ನೀಡುವ ಬಗ್ಗೆ ಸೂಚನೆಗಳನ್ನು ನೀಡಿ, ರೋಗಿಗಳಿಗೆ ನೀಡುವ
ಮೊಟ್ಟೆ, ಬಾಳೆಹಣ್ಣು, ಆಹಾರ ಹಾಗೂ ಶೌಚಾಲಯ ಕುರಿತು ವಿಚಾರಿಸಿ ಮಾಹಿತಿ ಪಡೆದುಕೊಂಡರು.
ಸ್ವಚ್ಛತೆಯ ಕೊರತೆ: ಆಸ್ಪತ್ರೆಯ ವಾರ್ಡ್‌ಗಳಲ್ಲಿ ಮತ್ತು ಶೌಚಾಲಯಗಳಲ್ಲಿ ಸೂಕ್ತ ಸ್ವಚ್ಛತೆ ಇಲ್ಲದಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಹಾಗೂ ವಾರ್ಡ್‌ಗಳ ಹಿಂಭಾಗದ ಕಿಟಕಿಗಳು ಮುರಿದುಬಿದ್ದಿದ್ದು, ಮುಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಬೆಡ್ ಹಾಗೂ ವಾರ್ಡ್‌ಗಳ ಸುತ್ತಲೂ ವಿಪರೀತ ಧೂಳು ತುಂಬಿದ್ದು, ತಕ್ಷಣವೇ ಇವುಗಳನ್ನು ಸರಿಪಡಿಸಲು ಸೂಚಿಸಿದ್ದೇನೆ ಎಂದರು.
ಔಷಧಗಳ ವಿತರಣೆ: ರೋಗಿಗಳಿಗೆ ಅಗತ್ಯವಿರುವ ಔಷಧಿಗಳನ್ನು ಯಾವುದೇ ಕಾರಣಕ್ಕೂ ಹೊರಗಡೆಯಿಂದ ಬರೆದುಕೊಡಬಾರದು, ಆಸ್ಪತ್ರೆಯ ಈ-ಫಾರ್ಮಸಿಯಲ್ಲೇ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.
ಕುಡಿಯುವ ನೀರಿನ ವ್ಯವಸ್ಥೆ: ಎಲ್ಲ ವಾರ್ಡ್‌ಗಳಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಂತೆ ತಿಳಿಸಿದರು.
ತಾಯಿ ಮತ್ತು ಮಕ್ಕಳಿಗಾಗಿ ನಿರ್ಮಿಸಲಾಗಿರುವ ನೂತನ ಎಂಸಿ ಹೆಚ್ ಆಸ್ಪತ್ರೆಯನ್ನು ಶೀಘ್ರದಲ್ಲೇ ಆರಂಭಿಸಿ ರೋಗಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ವೈದ್ಯಕೀಯ ಅಧೀಕ್ಷಕರಿಗೆ ಸೂಚಿಸಿದರು.
ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಅಗತ್ಯವಿರುವ ಶೌಚಾಲಯ ಮತ್ತು ಕುಡಿಯುವ ನೀರಿನ ನೈರ್ಮಲ್ಯವನ್ನು ಪ್ರಥಮ ಆದ್ಯತೆಯಾಗಿ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ರೋಗಿಗಳಿಗೆ ಮತ್ತು ಅವರ ಆರೈಕೆದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಸ್ಪತ್ರೆಯ ಮುಖ್ಯಸ್ಥರು, ಮೇಲ್ವಿಚಾರಕರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಂತರ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ, ಠಾಣೆಯಲ್ಲಿ ಮಹಿಳೆಯರಿಗೆ ಲಭ್ಯವಿರುವ ಮೂಲಸೌಕರ್ಯಗಳು, ದೂರುಗಳ ಸ್ವೀಕಾರ ಮತ್ತು ನಿರ್ವಹಣೆ, ಮಹಿಳೆಯರ ನಾಪತ್ತೆ ಪ್ರಕರಣಗಳು ಹಾಗೂ ಕ್ರಿಮಿನಲ್ ಪ್ರಕರಣಗಳ ತನಿಖೆಯ ಸ್ಥಿತಿಗತಿಗಳನ್ನು ಅವರು ಪರಿಶೀಲಿಸಿದರು. ಲೈಂಗಿಕ ಕಿರುಕುಳ ತಡೆ ಕಾಯ್ದೆಯನ್ವಯ ಆಂತರಿಕ ದೂರು ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ಸಭೆ ನಡೆಸಿ, ಮಹಿಳಾ ಸಿಬ್ಬಂದಿಗೆ ಸುರಕ್ಷಿತ ಕಾರ್ಯನಿರ್ವಹಣೆಯ ವಾತಾವರಣ ಕಲ್ಪಿಸಬೇಕು ಎಂದು ನಿರ್ದೇಶಿಸಿದರು.
ಠಾಣೆಗೆ ದೂರು ನೀಡಲು ಬರುವ ಮಹಿಳೆಯರ ಕುಂದುಕೊರತೆಗಳಿಗೆ ತಕ್ಷಣವೇ ಸ್ಪಂದಿಸಿ, ನ್ಯಾಯ ಒದಗಿಸಬೇಕು ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.
ಪ್ರವೇಶ ದ್ವಾರದಲ್ಲೇ ಎಲ್ಲಾ ಸಹಾಯ ವಾಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕು ಹಾಗೂ ಸಹಾಯವಾಣಿ ಕ್ಯು ಆರ್ ಕೋಡ್ ನ್ನು ದೊಡ್ಡದಾಗಿ ಹಾಕುವಂತೆ ತಿಳಿಸಿದರು.
ತಿಂಗಳಿಗೆ ದಾಖಲಾಗುವ ಪ್ರಕರಣಗಳ ಬಗ್ಗೆ ಪರಿಶೀಲಿಸಿದರು. ‌
ಭೇಟಿ ವೇಳೆ ಸಿಮ್ಸ್ ನಿರ್ದೇಶಕ ಡಾ.ರಮೇಶ್ ಬಾಬು, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಡಿಹೆಚ್ ಓ ಡಾ.ನಟರಾಜ್, ವೈದ್ಯರು, ವೈದ್ಯಕೀಯ ಸಿಬ್ಬಂದಿ, ಶುಶ್ರೂಣಕಾಧೀಕ್ಷಕರು, ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

ಸೆ.12,13 ರಂದು ಗೌರಿ- ಗಣೇಶ ಹಬ್ಬಕ್ಕೆ ಪೂಜಾ ಸಾಮಗ್ರಿಕೊಳ್ಳಲು ಶಿವಮೊಗ್ಗದಲ್ಲಿ ಒಂದೇ ರಸ್ತೆಯಲ್ಲಿ ವ್ಯವಸ್ಥೆ, ಪೊಲೀಸ್ ಪ್ರಕಟಣೆ

0

ಈ ದಿನ ದಿನಾಂಕ 12-09-2026 ರಂದು ಗೌರಿ-ಗಣಪತಿ ಹಬ್ಬದ ಪ್ರಯುಕ್ತ ಸಾರ್ವಜನಿಕ ವಾಹನ ಸವಾರರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಮತ್ತು ಸಾರ್ವಜನಿಕರಿಗೆ ಒಂದೇ ಕಡೆ ಎಲ್ಲಾ ಪೂಜೆ ಸಾಮಗ್ರಿಗಳು ‌ದೊರೆಯುವಂತೆ ಮಾಡುವ ಉದ್ದೇಶದಿಂದ ಶನಿವಾರ ಮತ್ತು ಭಾನುವಾರ ರಂದು ಶಿವಮೊಗ್ಗ ನಗರದ ಶಿವಪ್ಪನಾಯಕನ ಸರ್ಕಲ್‌ನಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಹಣ್ಣು, ಹೂವು ಹಾಗೂ ಪೂಜಾ ಸಾಮಗ್ರಿಗಳ ವ್ಯಾಪಾರ ಮಾಡಲು ತಾತ್ಕಾಲಿಕವಾಗಿ ಅವಕಾಶ ಕಲ್ಪಿಸಲಾಗಿದೆ.

ಹಬ್ಬದ ಪ್ರಯುಕ್ತ ನಡೆಯುವ ವ್ಯಾಪಾರ ಮುಕ್ತಾಯಗೊಂಡ ನಂತರ ಸದರಿ ರಸ್ತೆಯಲ್ಲಿ ಹಣ್ಣು, ಹೂವು ಹಾಗೂ ಇತರೆ ಯಾವುದೇ ವಸ್ತುಗಳ ವ್ಯಾಪಾರಕ್ಕೆ ಅವಕಾಶ ಇರುವುದಿಲ್ಲ.

ಆದ್ದರಿಂದ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಈ ತಾತ್ಕಾಲಿಕ ವ್ಯವಸ್ಥೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ಎಂದು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ

ಯುವಜನರಿಗೋಸ್ಕರ “ಮೈ ಭಾರತ್” ಕಾರ್ಯಕ್ರಮದಲ್ಲಿ ವಿಕಸಿತ ಭಾರತ್ ಕ್ವಿಜ್, ಇಲಾಖೆ ಪ್ರಕಟಣೆ

0

ಯುವಜನರನ್ನು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ MY Bharat ಯುವಜನರಿಗೆ ವಿವಿಧ ಅವಕಾಶಗಳನ್ನು ಒದಗಿಸುತ್ತಿದೆ. ಯುವಕರಲ್ಲಿ ನಾಯಕತ್ವ ಗುಣ, ಸ್ವಯಂಸೇವಾ ಮನೋಭಾವ, ಕೌಶಲ್ಯ, ಸೃಜನಶೀಲತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವುದರೊಂದಿಗೆ, ದೇಶದ ಅಭಿವೃದ್ಧಿಯಲ್ಲಿ ಯುವಕರನ್ನು ಸಕ್ರಿಯ ಪಾಲುದಾರರನ್ನಾಗಿ ಮಾಡುವುದು MY Bharatನ ಪ್ರಮುಖ ಉದ್ದೇಶವಾಗಿದೆ. ಯುವಕರು ತಮ್ಮ ಆಸಕ್ತಿ, ಪ್ರತಿಭೆ ಮತ್ತು ಆಲೋಚನೆಗಳಿಗೆ ಅನುಗುಣವಾಗಿ ಸ್ವಯಂಸೇವಾ ಚಟುವಟಿಕೆಗಳು, ಅನುಭವಾಧಾರಿತ ಕಲಿಕೆ, ನಾಯಕತ್ವ ಕಾರ್ಯಕ್ರಮಗಳು ಹಾಗೂ ವಿವಿಧ ಅವಕಾಶಗಳಲ್ಲಿ ಭಾಗವಹಿಸಲು MY Bharat ವೇದಿಕೆಯನ್ನು ಒದಗಿಸುತ್ತದೆ.
ಪ್ರತಿವರ್ಷ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಆಯೋಜಿಸಲಾಗುತ್ತಿದ್ದ ರಾಷ್ಟ್ರೀಯ ಯುವ ಜನೋತ್ಸವವನ್ನು 2025ರಿಂದ Viksit Bharat Young Leaders Dialogue (VBYLD) ರೂಪದಲ್ಲಿ ಪುನರ್ರಚಿಸಲಾಗಿದ್ದು, Viksit Bharat @2047ರ ದೃಷ್ಟಿಕೋನಕ್ಕೆ ಅನುಗುಣವಾಗಿ ಯುವಕರನ್ನು ದೇಶದ ಅಭಿವೃದ್ಧಿಯೊಂದಿಗೆ ಮತ್ತಷ್ಟು ನೇರವಾಗಿ ಸಂಪರ್ಕಿಸುವ ಉದ್ದೇಶ ಹೊಂದಿದೆ. VBYLD ಮೂಲಕ ದೇಶದ ವಿವಿಧ ಭಾಗಗಳ ಯುವಕರು ತಮ್ಮ ಆಲೋಚನೆಗಳು, ನವೀನ ಪರಿಹಾರಗಳು ಮತ್ತು ಭಾರತದ ಭವಿಷ್ಯದ ಕುರಿತು ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲು ರಾಷ್ಟ್ರೀಯ ವೇದಿಕೆಯನ್ನು ಪಡೆಯುತ್ತಿದ್ದಾರೆ.
VBYLD 2026ರಲ್ಲಿ ದೇಶಾದ್ಯಂತ ಯುವಜನರಿಂದ ಅಭೂತಪೂರ್ವ ಸ್ಪಂದನೆ ದೊರೆತಿದ್ದು, ವಿಕಸಿತ ಭಾರತ ಚಾಲೆಂಜ್ನ ಕ್ವಿಜ್ನಲ್ಲಿ 50 ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು. ವಿವಿಧ ಹಂತಗಳ ಮೂಲಕ ಪ್ರತಿಭಾವಂತ ಯುವ ನಾಯಕರನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ವೇದಿಕೆಗೆ ತರುವ ಪ್ರಯತ್ನವೂ ನಡೆದಿದೆ. VBYLD 2026ರಲ್ಲಿ ಕ್ವಿಜ್, ಪ್ರಬಂಧ ಮತ್ತು ಪ್ರಸ್ತುತಿ ಸೇರಿದಂತೆ ವಿವಿಧ ಹಂತಗಳ ಜೊತೆಗೆ ಸಾಂಸ್ಕೃತಿಕ ಮತ್ತು ನವೀನತೆ, Design for Bharat ಹಾಗೂ Hack for Social Cause ವಿಭಾಗಗಳಲ್ಲಿಯೂ ಯುವಕರಿಗೆ ತಮ್ಮ ಪ್ರತಿಭೆ ಮತ್ತು ಆಲೋಚನೆಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿತ್ತು.
ಇದೀಗ VBYLD 2027ರ ಪ್ರಕ್ರಿಯೆ ಆರಂಭವಾಗಿದ್ದು, ಇದರ ಮೊದಲ ಹಂತವಾಗಿ Viksit Bharat Quiz ಅನ್ನು MY Bharat ಪೋರ್ಟಲ್ನಲ್ಲಿ ಆಯೋಜಿಸಲಾಗಿದೆ. 15ರಿಂದ 29 ವರ್ಷದೊಳಗಿನ ಯುವ ಭಾರತೀಯರು ಈ ಕ್ವಿಜ್ನಲ್ಲಿ ಭಾಗವಹಿಸಬಹುದು. ಕ್ವಿಜ್ 17 ಆಗಸ್ಟ್ 2026ರಿಂದ 30 ಸೆಪ್ಟೆಂಬರ್ 2026ರವರೆಗೆ ಆನ್ಲೈನ್ನಲ್ಲಿ ನಡೆಯಲಿದ್ದು, ವಿವಿಧ ಭಾರತೀಯ ಭಾಷೆಗಳಲ್ಲಿ ಭಾಗವಹಿಸಲು ಅವಕಾಶವಿದೆ. ಭಾರತ, ಭಾರತೀಯ ಪರಂಪರೆ, ದೇಶದ ಸಾಧನೆಗಳು, ಅಭಿವೃದ್ಧಿಯ ಪಯಣ ಹಾಗೂ Viksit Bharat @2047ರ ದೃಷ್ಟಿಕೋನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಯುವಕರ ಜ್ಞಾನ ಮತ್ತು ಅರಿವನ್ನು ಹೆಚ್ಚಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
Viksit Bharat Quizನಲ್ಲಿ ಭಾಗವಹಿಸುವುದು ಬಹಳ ಸರಳವಾಗಿದೆ. ಯುವಕರು MY Bharat ಪೋರ್ಟಲ್ಗೆ ತೆರಳಿ ನೋಂದಣಿ ಮಾಡಿಕೊಂಡು ಕ್ವಿಜ್ನಲ್ಲಿ ಭಾಗವಹಿಸಬೇಕು. ಕ್ವಿಜ್ನಲ್ಲಿ 20 ಪ್ರಶ್ನೆಗಳಿಗೆ 10 ನಿಮಿಷಗಳ ಅವಧಿಯಲ್ಲಿ ಉತ್ತರಿಸಬೇಕಾಗಿದ್ದು, ಭಾಗವಹಿಸಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2026 ಆಗಿದೆ. ಶಿವಮೊಗ್ಗ ಜಿಲ್ಲೆಯ 15ರಿಂದ 29 ವರ್ಷದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಅವಕಾಶವನ್ನು ಬಳಸಿಕೊಳ್ಳುವಂತೆ MY Bharat ವತಿಯಿಂದ ಮನವಿ ಮಾಡಲಾಗಿದೆ.
ಈ ಕ್ವಿಜ್ ಕೇವಲ ಸಾಮಾನ್ಯ ಜ್ಞಾನ ಸ್ಪರ್ಧೆಯಲ್ಲ; ಇದು ಯುವಕರನ್ನು Viksit Bharat @2047ರ ಚಿಂತನೆಯೊಂದಿಗೆ ಸಂಪರ್ಕಿಸುವ ಮೊದಲ ಹೆಜ್ಜೆಯಾಗಿದೆ. VBYLD 2027ರ ಐದು ಹಂತಗಳ ಪ್ರಕ್ರಿಯೆಯಲ್ಲಿ ಮೊದಲಿಗೆViksit Bharat Quiz, ನಂತರ Essay Challenge, District Championship, State/UT VBYLD ಹಾಗೂ ಅಂತಿಮವಾಗಿ National VBYLD ನಡೆಯಲಿದೆ. ಕ್ವಿಜ್ನಲ್ಲಿ ಉತ್ತಮ ಸಾಧನೆ ಮಾಡುವ ಅಗ್ರ 10 ಶೇಕಡಾ ಸ್ಪರ್ಧಿಗಳು, ಗರಿಷ್ಠ 4 ಲಕ್ಷದವರೆಗೆ, ಮುಂದಿನ ಹಂತವಾದ Viksit Bharat Essay Challenge ಗೆ ಅರ್ಹರಾಗಲಿದ್ದಾರೆ. ನಂತರದ ಹಂತಗಳಲ್ಲಿ ಆಯ್ಕೆಯಾಗುವ ಯುವಕರಿಗೆ ತಮ್ಮ ಆಲೋಚನೆಗಳನ್ನು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ಮಂಡಿಸುವ ಅವಕಾಶ ದೊರೆಯಲಿದೆ.
VBYLD 2027ರ ಮುಂದಿನ ಹಂತವಾಗಿ Essay Challenge ಅಕ್ಟೋಬರ್ 5ರಿಂದ 19ರವರೆಗೆ, District Championship ನವೆಂಬರ್ 10ರಿಂದ 16ರವರೆಗೆ, ಹಾಗೂ State/UT VBYLD ನವೆಂಬರ್ 17ರಿಂದ ಡಿಸೆಂಬರ್ 7ರವರೆಗೆ ನಡೆಯಲಿದೆ. ಅಂತಿಮವಾಗಿ ಜನವರಿ 10ರಿಂದ 12, 2027ರವರೆಗೆ ನವದೆಹಲಿಯಲ್ಲಿ National VBYLD ನಡೆಯಲಿದೆ. ಆಯ್ಕೆಯಾದ ಯುವ ನಾಯಕರಿಗೆ ರಾಷ್ಟ್ರೀಯ ನಾಯಕರು, ನೀತಿ ನಿರೂಪಕರು ಮತ್ತು ತಜ್ಞರೊಂದಿಗೆ ಸಂವಾದ ನಡೆಸುವ ಹಾಗೂ ತಮ್ಮ ಆಲೋಚನೆಗಳನ್ನು ಮಂಡಿಸುವ ಅವಕಾಶ ದೊರೆಯಲಿದೆ.
VBYLD ಮೂಲಕ ಕೇವಲ ಕ್ವಿಜ್ಮತ್ತು ಪ್ರಬಂಧ ಸ್ಪರ್ಧೆಗಳಷ್ಟೇ ಅಲ್ಲದೆ, ಯುವಕರ ವಿವಿಧ ಪ್ರತಿಭೆಗಳನ್ನು ಗುರುತಿಸಲು ಸಾಂಸ್ಕೃತಿಕ ಮತ್ತು ನವೀನತೆ design for Bharath ಹಾಗೂ Design for Bharath ಹಾಗೂ Hack for Social Cause ಮುಂತಾದ ಹಲವು ಅವಕಾಶಗಳನ್ನು MY Bharat ಒದಗಿಸುತ್ತಿದೆ. ಕಲೆ, ಸಾಹಿತ್ಯ, ವಿಜ್ಞಾನ ಮತ್ತು ನವೀನತೆ, ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹಾಗೂ ತಂತ್ರಜ್ಞಾನ ಆಧಾರಿತ ಸಾಮಾಜಿಕ ಉಪಕ್ರಮಗಳಂತಹ ವಿವಿಧ ಕ್ಷೇತ್ರಗಳಲ್ಲಿ ಯುವಕರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಬಹುದು.
ಶಿವಮೊಗ್ಗ ಜಿಲ್ಲೆಯ 15ರಿಂದ 29 ವರ್ಷದ ಪ್ರತಿಯೊಬ್ಬ ಯುವಕರೂ Viksit Bharat Quizನಲ್ಲಿ ಭಾಗವಹಿಸುವ ಮೂಲಕ ಈ ರಾಷ್ಟ್ರೀಯ ಅವಕಾಶದ ಭಾಗವಾಗಬೇಕು ಎಂದು MY Bharat ವತಿಯಿಂದ ಮನವಿ ಮಾಡಲಾಗಿದೆ. ಸೆಪ್ಟೆಂಬರ್ 30 ಕೊನೆಯ ದಿನವಾಗಿರುವುದರಿಂದ ಯುವಕರು ಯಾವುದೇ ವಿಳಂಬ ಮಾಡದೆ MY Bharat ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡು ಕ್ರಿಜ್ನಲ್ಲಿ ಭಾಗವಹಿಸಬೇಕು. ಒಂದು ಕ್ವಿಜ್ನಿಂದ ಆರಂಭವಾಗುವ ಈ ಪ್ರಯಾಣವು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ವೇದಿಕೆಯವರೆಗೆ ಕೊಂಡೊಯ್ಯುವ ಅವಕಾಶವಾಗಿದ್ದು, ಯುವಕರ ಆಲೋಚನೆಗಳು 2047ರ ವಿಕಸಿತ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಲು VBYLD ಒಂದು ಮಹತ್ವದ ವೇದಿಕೆಯಾಗಿದೆ ಎಂದು ಜಿಲ್ಲಾ ಯುವ ಅಧಿಕಾರಿ ಕು.ಐಶ್ವರ್ಯ ಶ್ರೀನಿವಾಸ್ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಭಾಸಾಪದ ದ್ವೈಮಾಸಿಕ”ಸಹಿತ” ಪತ್ರಿಕೆಯ ವಿಜಯದಶಮಿ ವಿಶೇಷಾಂಕಕ್ಕೆ ಬರಹಗಳಿಗೆ ಆಹ್ವಾನ

0

ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ವತಿಯಿಂದ ‘ಸಹಿತ’ ದ್ವೈಮಾಸಿಕ ವಿದ್ಯುನ್ಮಾನ ಗೃಹಪತ್ರಿಕೆಯ ವಿಜಯದಶಮಿ ವಿಶೇಷಾಂಕಕ್ಕೆ ಲೇಖನಗಳನ್ನು ಆಹ್ವಾನಿಸಲಾಗಿದೆ.

‘ಸಹಿತ’ ಪತ್ರಿಕೆಯ ನಾಲ್ಕನೇ ಸಂಚಿಕೆ ತುಲಾ–ವೃಶ್ಚಿಕ ವಿಶೇಷಾಂಕವಾಗಿದ್ದು, ವಿಜಯದಶಮಿಯ ಅಂಗವಾಗಿ ಸಂಪೂರ್ಣವಾಗಿ ಸಾಹಿತ್ಯಿಕ ಮೌಲ್ಯದ ಬರಹಗಳಿಗೆ ಮೀಸಲಾಗಿರಲಿದೆ. ಈ ಸಂಚಿಕೆಯಲ್ಲಿ ಕಥೆ, ಕವಿತೆ, ಲಘು ಬರಹ, ನಗೆ ಬರಹ ಹಾಗೂ ಲಲಿತ ಪ್ರಬಂಧ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಬರಹಗಳನ್ನು ಪ್ರಕಟಿಸಲು ಅವಕಾಶ ಕಲ್ಪಿಸಲಾಗಿದೆ.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಯಾವುದೇ ಕೂಟದ ಸದಸ್ಯರು ಹಾಗೂ ತಾಲ್ಲೂಕು, ಜಿಲ್ಲಾ, ವಿಭಾಗ ಸೇರಿದಂತೆ ವಿವಿಧ ಸಮಿತಿಗಳ ಕಾರ್ಯಕರ್ತರು ತಮ್ಮ ಬರಹಗಳನ್ನು ಪ್ರಕಟಣೆಗಾಗಿ ಕಳುಹಿಸಬಹುದು.

ಬರಹ ಕಳುಹಿಸುವವರು ತಮ್ಮ ಹೆಸರಿನೊಂದಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಯಾವ ಕೂಟದ ಸದಸ್ಯರಾಗಿದ್ದಾರೆ ಅಥವಾ ಯಾವ ಜವಾಬ್ದಾರಿ ಹೊಂದಿದ್ದಾರೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು. ಈ ವಿವರಗಳಿಲ್ಲದ ಬರಹಗಳನ್ನು ಪ್ರಕಟಣೆಗೆ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಕಳುಹಿಸುವ ಬರಹಗಳು ಅಪ್ರಕಟಿತ ಹಾಗೂ ಸ್ವತಂತ್ರ ಬರಹಗಳಾಗಿರಬೇಕು. ಸಣ್ಣ ಕಥೆಗಳು ಗರಿಷ್ಠ 1000 ಪದಗಳ ಮಿತಿಯಲ್ಲಿರಬೇಕು. 350 ಪದಗಳ ಅತಿಸಣ್ಣ ಕಥೆಗಳಿಗೆ ಆದ್ಯತೆ ನೀಡಲಾಗುತ್ತದೆ. ನಗೆ ಬರಹ ಹಾಗೂ ಲಲಿತ ಪ್ರಬಂಧಗಳು 700 ಪದಗಳನ್ನು ಮೀರಬಾರದು. ಕವಿತೆಗಳು ಛಂದೋಬದ್ಧ ಅಥವಾ ಮುಕ್ತಛಂದದಲ್ಲಿರಬಹುದು, ಆದರೆ 30ರಿಂದ 32 ಸಾಲುಗಳನ್ನು ಮೀರಬಾರದು.

ಬರಹಗಳನ್ನು ಕಳುಹಿಸಲು ಕೊನೆಯ ದಿನ ಸೆಪ್ಟೆಂಬರ್ 25, 2026. ಆಸಕ್ತರು ತಮ್ಮ ಬರಹಗಳನ್ನು sahita.absp@gmail.com ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕದ ‘ಸಹಿತ’ ಸಂಪಾದಕರು ಈ ಮೂಲಕ ಸದಸ್ಯರಿಂದ ಉತ್ತಮ ಸಾಹಿತ್ಯಿಕ ಬರಹಗಳನ್ನು ನಿರೀಕ್ಷಿಸಿದ್ದಾರೆ.

ಶಿವಮೊಗ್ಗದ ಪೋದಾರ್ ಶಾಲೆಯ ಮಕ್ಕಳಿಂದ ಅಸ್ಸಾಂ ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಮಾನವೀಯ ನೆರವು, ಶ್ಲಾಘನೆ

0

ಅಸ್ಸಾಂ ರಾಜ್ಯದ ಪ್ರವಾಹ ದಿಂದ ತೊಂದರೆಗೆ ಒಳಗಾದ ಕುಟುಂಬಗಳಿಗೆ ಶಿವಮೊಗ್ಗದ ಪೋದಾರ್ ಶಾಲೆಯ ಮಕ್ಕಳು ಮತ್ತು ಪೋಷಕರು ರೆಡ್ ಕ್ರಾಸ್ ಮೂಲಕ ವಿವಿಧ ಸಾಮಗ್ರಿಗಳ ಕಿಟ್ ಗಳನ್ನು ಕಳಿಸಿ ಕೊಡಲಾಯಿತು. ಮಕ್ಕಳ ಇಂತಹ ಮಾನವೀಯ ಕಳಕಳಿಯ ಕಾರ್ಯ ಶ್ಲಾಘನೀಯವಾಗಿದೆ. ಈ ಸಮಾಜ ಸೇವಾ ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ನ ರಾಷ್ಟ್ರ ಮಟ್ಟದ ತರಬೇತುದಾರರಾದ ವೈದ್ಯರಾದ ಶ್ರೀ ವಿ.ಎಲ್.ಎಸ್. ಕುಮಾರ್, ಶಿವಮೊಗ್ಗ ಶಾಖೆಯ ಕಾರ್ಯದರ್ಶಿ ವೈದ್ಯರಾದ ಶ್ರೀ ದಿನೇಶ್, ನಿರ್ದೇಶಕರಾದ ಕೆ.ಸಿ.ಬಸವರಾಜಪ್ಪಮತ್ತು ಪಿಂಟೋ ರವರು ಪಾಲ್ಗೊಂಡಿದ್ದರು. ಮಾನವೀಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರು ಅಭಿನಂದನಾರ್ಹರು.

ಕರ್ನಾಟಕ ರಾಜ್ಯ ಕೌಶಲ್ಯ ಒಲಂಪಿಕ್ಸ್ 2026-27 ಪ್ರದರ್ಶನ, ಸ್ಪರ್ಧೆಗಳಿಗೆ ಆಹ್ವಾನ

0

ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯ ಹಾಗೂ ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ‘ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ’ (KSDC) ಜಂಟಿಯಾಗಿ ರಾಜ್ಯದ ಯುವಜನರಲ್ಲಿರುವ ವೃತ್ತಿಪರ ಕೌಶಲ್ಯಗಳನ್ನು ಪ್ರದರ್ಶಿಸಲು “ಕರ್ನಾಟಕ ರಾಜ್ಯ ಕೌಶಲ್ಯ ಒಲಂಪಿಕ್ಸ್ (India Skills Competition 2026-27)” ಅನ್ನು ಆಯೋಜಿಸುತ್ತಿವೆ.

​ಈ ಸ್ಪರ್ಧೆಯು ಜಿಲ್ಲಾ, ವಲಯ ಮತ್ತು ರಾಜ್ಯ ಮಟ್ಟಗಳಲ್ಲಿ ನಡೆಯಲಿದ್ದು, ಯುವಜನರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ಹಾಗೂ ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅಪೂರ್ವ ಅವಕಾಶ ಕಲ್ಪಿಸಲಿದೆ.

​ಜಾಗತಿಕ ವೇದಿಕೆಯಲ್ಲಿ ಕರ್ನಾಟಕದ ಹೆಜ್ಜೆ ಗುರುತು:

​2026ರ ಸೆಪ್ಟೆಂಬರ್‌ನಲ್ಲಿ ಚೀನಾದ ಶಾಂಫೈನಲ್ಲಿ ನಡೆಯಲಿರುವ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕದಿಂದ 16 ಅಭ್ಯರ್ಥಿಗಳು ಭಾರತವನ್ನು ಪ್ರತಿನಿಧಿಸುತ್ತಿದ್ದು, ಇದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.

​ಮುಂಬರುವ 2028ರ ವಿಶ್ವ ಕೌಶಲ್ಯ ಸ್ಪರ್ಧೆಯು ಜಪಾನ್ ದೇಶದ ಐಚಿ (Aichi) ಯಲ್ಲಿ ನಡೆಯಲಿದ್ದು, ಅದಕ್ಕಾಗಿ ಈಗಿನಿಂದಲೇ ರಾಜ್ಯದ ಪ್ರತಿಭಾವಂತ ಯುವಜನರನ್ನು ಸಜ್ಜುಗೊಳಿಸಲು ಕೌಶಲ್ಯ ಒಲಂಪಿಕ್ಸ್ ಯೋಜಿಸಲಾಗಿದೆ.

ವಿವಿಧ ಕಾಲೇಜುಗಳು, ತಾಂತ್ರಿಕ ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು/ಯುವಜನರು ಭಾಗವಹಿಸಬಹುದಾಗಿದೆ ಅಸಕ್ತ ಅಭ್ಯರ್ಥಿಗಳು ‘ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್’ ವೆಬ್‌ಸೈಟ್ www.skillindiadigital.gov.in ಮೂಲಕ 2026 ನೇ ಸೆಪ್ಟೆಂಬರ್ 15 ರ ಒಳಗಾಗಿ ನೋಂದಾಯಿಸಿಕೊಳ್ಳುವುದು.

ಹೆಚ್ಚಿನ ಮಾಹಿತಿಗಾಗಿ ​ಶ್ರೀ ಪ್ರಾಣೇಶ್, ಉಪ ಪ್ರಧಾನ ವ್ಯವಸ್ಥಾಪಕರು, ಕೆ.ಎಸ್.ಡಿ.ಸಿ (KSDC), ಬೆಂಗಳೂರು, ಮೊಬೈಲ್ ದೂರವಾಣಿ ಸಂಖ್ಯೆ 9686409096 ಅಥವಾ ಇ-ಮೇಲ್: indiaskillskar@gmail.com ಗೆ ಸಂಪರ್ಕಿಸುವಂತೆ ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀ ಸುಬೋಧ್ ಯಾದವ್ ಅವರು ತಿಳಿಸಿದ್ದಾರೆ.

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

0

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ 11 ರಿಂದ 01 ಗಂಟೆಯವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಅಗತ್ಯ ಮಾಹಿತಿಗಾಗಿ ದೂ. ಸಂ.: 9448289520 ನ್ನು ಸಂಪರ್ಕಿಸುವಂತೆ ಮೆಸ್ಕಾಂ ತಿಳಿಸಿದೆ.

District Consumer Disputes Redressal Commission ಗ್ರಾಹಕರಿಗೆ ಪರಿಹಾರ ನೀಡಲು ಸೇವಾ ನ್ಯೂನತೆ ಎಸಗಿದ ಬ್ಯಾಂಕಿಗೆ ದಂಡವಿಧಿಸಿದ ಗ್ರಾಹಕರ ವ್ಯಾಜ್ಯ ಪರಿಹಾರ ಜಿಲ್ಲಾ ಆಯೋಗ

0

District Consumer Disputes Redressal Commission ವಾಹನವನ್ನು ದೂರುದಾರರ ಹೆಸರಿಗೆ ವರ್ಗಾಯಿಸಿಕೊಡದೆ ಮತ್ತು ಸೂಕ್ತ ಮಾಹಿತಿ ನೀಡದೆ ವಾಹನವನ್ನು ವಶಕ್ಕೆ ಪಡೆದುಕೊಂಡು ಸೇವಾ ನ್ಯೂನತೆ ಎಸಗಿದ ಬ್ಯಾಂಕ್‌ಗೆ ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ರೂ.1.10 ಲಕ್ಷ ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶ ನೀಡಿದೆ.
ಶಿವಮೊಗ್ಗ ತಾಲೂಕಿನ ಕುಸ್ಕೂರಿನ ನಿಖಿಲ್ ಆರ್. ಅವರು ಶಿವಮೊಗ್ಗದ ಶಂಕರ ಮಠ ರಸ್ತೆಯಲ್ಲಿರುವ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವಿರುದ್ಧ ವಕೀಲರ ಮೂಲಕ ದೂರು ಸಲ್ಲಿಸಿದ್ದರು. ದೂರುದಾರರು ಫಯಾಜ್ ಬಿನ್ ಬಾಬು ಎಂಬುವರ ಹೆಸರಿನಲ್ಲಿದ್ದ ಐಷರ್ ಪ್ರೊ 3015 (ಸಂಖ್ಯೆ: KA-51-AF-9323) ಸರಕು ಸಾಗಣೆ ವಾಹನವನ್ನು ಖರೀದಿಸಿದ್ದು, ಎದುರುದಾರ ಬ್ಯಾಂಕ್‌ನಿಂದ ರೂ.13,50,000 ಸಾಲವನ್ನು 48 ಕಂತುಗಳಲ್ಲಿ ಪಾವತಿಸಲು ಮಂಜೂರು ಮಾಡಿಸಿಕೊಂಡಿದ್ದರು.
ವಾಹನವನ್ನು ದೂರುದಾರರ ಹೆಸರಿಗೆ ಆರ್‌ಟಿಒ ಮೂಲಕ ವರ್ಗಾಯಿಸಿಕೊಡಲು ತಗಲುವ ವೆಚ್ಚವನ್ನು ಬ್ಯಾಂಕ್ ಪಡೆದಿದ್ದರೂ, ಹೆಸರು ವರ್ಗಾವಣೆ ಮಾಡದೆ ವಿಳಂಬ ಧೋರಣೆ ಅನುಸರಿಸಿತ್ತು. ದೂರುದಾರರು ವಾಹನವನ್ನು ಉಪಯೋಗಿಸದೆಯೇ ₹90,000 ಇಎಮ್‌ಐ ಪಾವತಿಸಿದ್ದರು. ಆದರೆ, ಎದುರುದಾರ ಬ್ಯಾಂಕ್‌ನವರು ಸಾಲದ ಕಂತು ಪಾವತಿಯಾಗಿಲ್ಲವೆಂದು ನೆಪ ಒಡ್ಡಿ, ದಿನಾಂಕ 27/01/2026 ರಂದು ದೂರುದಾರರ ಮನೆಯ ಬಳಿ ನಿಲ್ಲಿಸಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದರು. ಇದನ್ನು ಪ್ರಶ್ನಿಸಿ ನಿಖಿಲ್ ಅವರು ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.
ಆಯೋಗದ ತೀರ್ಪು:
District Consumer Disputes Redressal Commission ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಬ್ಯಾಂಕ್‌ನಿಂದ ಸೇವಾ ನ್ಯೂನತೆಯಾಗಿರುವುದನ್ನು ಎತ್ತಿಹಿಡಿದು ಆದೇಶಿಸಿದೆ:
ವಾಹನವನ್ನು ವಶಕ್ಕೆ ಪಡೆಯದೇ ದೂರುದಾರರ ಹೆಸರಿಗೆ ದಾಖಲೆಗಳನ್ನು ವರ್ಗಾಯಿಸಿ, ದೂರುದಾರರ ವಶಕ್ಕೆ ನೀಡಬೇಕು.
ಹೆಸರು ವರ್ಗಾವಣೆಯಾದ ನಂತರ ಸಾಲದ ಇಎಂಐ ಅನ್ನು ಆರ್‌ಬಿಐ ಸುತ್ತೋಲೆ ಮತ್ತು ನಿಯಮಾವಳಿಗಳಂತೆ ಮರುನಿಗದಿಪಡಿಸಬೇಕು.
ಮಾನಸಿಕ ಕಿರುಕುಳ ಮತ್ತು ಪರಿಹಾರವಾಗಿ ರೂ.1,00,000 ಹಾಗೂ ದೂರಿನ ಖರ್ಚುವೆಚ್ಚಕ್ಕಾಗಿ ರೂ.10,000 ಸೇರಿದಂತೆ ಒಟ್ಟು ರೂ.1,10,000 ಗಳನ್ನು 45 ದಿನಗಳ ಒಳಗಾಗಿ ಪಾವತಿಸಬೇಕು.
ತಪ್ಪಿದ್ದಲ್ಲಿ ವಾರ್ಷಿಕ ಶೇಕಡಾ 10 ರಷ್ಟು ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡತಕ್ಕದ್ದು ಎಂದು ಆಯೋಗವು ಸೆ. 08 ರಂದು ಆದೇಶಿಸಿದೆ.