Tuesday, March 17, 2026
Tuesday, March 17, 2026
Home Blog Page 1512

ರಾಜ್ಯದಲ್ಲಿ 68 ಎಥೆನಾಲ್ ಘಟಕಗಳ ಸ್ಥಾಪನೆ ಗುರಿ- ರಾಜೇಂದ್ರ ಕುಮಾರ್

0

ರಾಜ್ಯದಲ್ಲಿ ಹೊಸದಾಗಿ 68 ಎಥೆನಾಲ್‌ ಘಟಕಗಳನ್ನು ಸ್ಥಾಪಿಸಲು ಮತ್ತು ಪ್ರಸ್ತುತ ಇರುವುದರ ಸಾಮರ್ಥ್ಯ ಹೆಚ್ಚಿಸುವ ಸಂಬಂಧ ಕೇಂದ್ರ ಸರಕಾರದಿಂದ ಅನುಮೋದನೆ ಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿಗಮದ ಅಧ್ಯಕ್ಷ ಡಾ| ಎಂ.ಎನ್‌.ರಾಜೇಂದ್ರ ಕುಮಾರ್‌ ಅವರು ತಿಳಿಸಿದ್ದಾರೆ‌.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ 400 ಕೋಟಿ ಲೀಟರ್‌ ಎಥೆನಾಲ್‌ ಉತ್ಪಾದಿಸುತ್ತಿದ್ದು, ಈಗಾಗಲೇ ಶೇ.10ರಷ್ಟು ಮಿಶ್ರಣದ ಗುರಿ ಸಾಧಿಸಲಾಗಿದೆ. 2025ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶೇ.20ರಷ್ಟು ಮಿಶ್ರಣದ ಗುರಿ ಹೊಂದಿದ್ದಾರೆ. ಇದಕ್ಕೆ ಬೇಕಾಗಿರುವ 900 ಕೋಟಿ ಲೀಟರ್‌ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರತ ಸಕ್ಕರೆ ಕಾರ್ಖಾನೆಗಳಲ್ಲಿ 32 ಕಾರ್ಖಾನೆಗಳಲ್ಲಿ ಎಥೆನಾಲ್‌ ಉತ್ಪಾದನ ಘಟಕಗಳಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಘಟಕ ಸ್ಥಾಪಿಸುವ ಗುರಿ ಇದೆ ಎಂದರು.

ಎಥೆನಾಲ್‌ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ರೀತಿಯಲ್ಲಿ ರಾಜ್ಯವೂ ಒಂದು ನೀತಿ ರೂಪಿಸುವ ಅಗತ್ಯವಿದೆ. ಜತೆಗೆ ಮುಂದಿನ ದಿನಗಳಲ್ಲಿ ಪೊಟ್ಯಾಷಿಯಂ ಮಿಶ್ರಣ ಘಟಕಗಳನ್ನು ಸ್ಥಾಪಿಸಿ ವ್ಯಾಪಾರ ವಹಿವಾಟು ಸ್ಥಾಪಿಸುವ ಕುರಿತಂತೆ ಚಿಂತನೆ ನಡೆಸಲಾಗಿದೆ ಎಂದರು.

ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕ ಆರ್‌. ಶ್ರೀಧರ್‌ ಮತ್ತಿತರರು ಉಪಸ್ಥಿತರಿದ್ದರು

ಮಾಜಿ ಸಚಿವ ನಖ್ವಿ ಉಪ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ?

0

ರಾಷ್ಟ್ರಪತಿ ಚುನಾವಣೆ ಬಳಿಕ ಉಪ ರಾಷ್ಟ್ರಪತಿ ಚುನಾವಣೆ ಕೂಡ ಕಾವೇರುತ್ತಿದೆ..64 ವರ್ಷದ ನಖ್ವಿ ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಆಯ್ಕೆ ಮಾಡಬಹುದೆಂಬ ವದಂತಿ ಹರಡುತ್ತಿದೆ.

ನಖ್ವಿ ತಮ್ಮ ರಾಜೀನಾಮೆಯನ್ನು ಪ್ರಧಾನಿ ಮೋದಿಗೆ ನೀಡುವ ಮೊದಲು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿಯಾಗಿದ್ದು, ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಮೋದಿ ಕ್ಯಾಬಿನೆಟ್​​ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೊರತುಪಡಿಸಿ, ನಖ್ವಿ ಅವರು ಅಟಲ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿದ್ದ ಏಕೈಕ ಸಚಿವರಾಗಿದ್ದರು.
2ನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯನ್ನ ಕಣಕ್ಕಿಳಿಸುವ ಸಾಧ್ಯತೆ ಇದ್ದು, ಆಗಸ್ಟ್ 6 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ.

ಸರ್ಕಾರಿ ಶಾಲೆಗೆ ಮಕ್ಕಳನ್ನ ಸೇರಿಸಿರುವ ಐಎಎಸ್ ಅಧಿಕಾರಿ

0

ಆಂಧ್ರ ಪ್ರದೇಶ ಕ್ರೀಡಾ ಪ್ರಾಧಿಕಾರದ ಎಂಡಿ ಎನ್. ಪ್ರಭಾಕರ ರೆಡ್ಡಿ ಅವರು ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ವಿಜಯವಾಡದಲ್ಲಿರುವ ಪಟಮಟಾ ಕೊನೇರು ಬಸವಯ್ಯ ಚೌಧರಿ ಜಿಲ್ಲಾ ಪರಿಷತ್ ಪ್ರೌಢಶಾಲೆಗೆ ತಮ್ಮ ಇಬ್ಬರು ಮಕ್ಕಳನ್ನು ಸೇರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಕಾರ್ಪೊರೇಟ್ ಸ್ಟೈಲಿನ ಶಾಲೆಗಳಿಗೆ ಕಳುಹಿಸಲು ಆದ್ಯತೆ ನೀಡುತ್ತಾರೆ. ಆದರೆ ಇವರು ಇದಕ್ಕೆ ತದ್ವಿರುದ್ಧವಾಗಿ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ.

ಅನೇಕರು ಫೀಸು ಕಟ್ಟಲು ಹಣಕಾಸು ಶಕ್ತಿ ಇಲ್ಲದಿದ್ದರೂ ಸಾಲ ಮಾಡಿ, ಪ್ರೈವೇಟ್ ಶಾಲೆಗಳಲ್ಲಿ ಮಕ್ಕಳನ್ನು ಓದಿಸುತ್ತಾರೆ. ಆದರೆ ವಿಜಯವಾಡದ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಈ ಹಿಂದೆ ನೆಲ್ಲೂರು ಜಿಲ್ಲೆಯ ಜಂಟಿ ಕಲೆಕ್ಟರ್ ಆಗಿದ್ದ ಅವಧಿಯಲ್ಲಿ ಕೂಡ ಪ್ರಭಾಕರ ರೆಡ್ಡಿ, ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿಯೇ ಓದಿಸಿದ್ದರು. ಆಗ ಪ್ರಭಾಕರ ರೆಡ್ಡಿ ಅವರ ಪತ್ನಿ ಲಕ್ಷ್ಮಿ ತಮ್ಮ ಇಬ್ಬರು ಮಕ್ಕಳೊಂದಿಗೆ ಶಾಲೆಗೆ ಬಂದು ಅಡ್ಮಿಷನ್ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಶಾಲೆಯಲ್ಲಿ ಸೌಲಭ್ಯ, ತರಗತಿ ಕೊಠಡಿ, ಆಟದ ಮೈದಾನ ಎಲ್ಲವೂ ಉತ್ತಮವಾಗಿವೆ. ಈ ಶಾಲೆಯಲ್ಲಿ ಮಗನಿಗೆ ಆರನೇ ತರಗತಿಗೆ ಮತ್ತು ಮಗಳಿಗೆ 8ನೇ ತರಗತಿಗೆ ಪ್ರವೇಶ ತೆಗೆದುಕೊಂಡಿದ್ದೇವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ರಾಜ್ಯದ ಹೊಸ ಉದ್ಯೋಗ ನೀತಿ ರಚನೆಗೆ ಸಿದ್ಧತೆ

0

ಮುಂದಿನ ಸಂಪುಟ ಸಭೆಯಲ್ಲಿ ರಾಜ್ಯಕ್ಕೆ ಹೊಸ ಉದ್ಯೋಗ ನೀತಿಯನ್ನು ಮಂಡಿಸಲು ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಉದ್ಯೋಗ ನೀತಿ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು,, ಸಭೆಯಲ್ಲಿ ಕೈಗಾರಿಕಾ ನೀತಿಯಲ್ಲಿ ಉದ್ಯೋಗ ಸೃಷಜನೆ ಹೆಚ್ಚಾಗಿ ಮಾಡುವ ವಸ್ತ್ರೋದ್ಯಮ, ಎಫ್.ಎಂಜಿ ಮತ್ತಿತರ ಹೆಚ್ಚಿನ ಮಾನವ ಸಂಪನ್ಮೂಲ ಬೇಡಿಕೆ ಇರುವ ಉದ್ಯಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಕುರಿತಂತೆ ಟಾಸ್ಕ್ ಫೋರ್ಸ್ ಅಧ್ಯಕ್ಷರಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೂ, ಒಟ್ಟಾರೆಯಾಗಿ ಈ ವಲಯವನ್ನು ಪರಿಗಣಿಸಿದಾಗ, ಅಭಿವೃದ್ಧಿಗೆ ವಿಫುಲ ಅವಕಾಶವಿದೆ. ಆದ್ದರಿಂದ ಈ ಕ್ಷೇತ್ರದ ಅಭಿವೃದ್ಧಿಗೆ ವ್ಯವಸ್ಥಿತ ಚೌಕಟ್ಟು ನೀಡುವ ಅಗತ್ಯವಿದೆ ಎಂದರು.

ಕೈಗಾರಿಕೋದ್ಯಮಗಳಲ್ಲಿ ಬೇಡಿಕೆ ಇರುವ ಕ್ಷೇತ್ರಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಸೂಚನೆ ನೀಡಿದರು.

ಹೊಸ ಉದ್ಯೋಗ ನೀತಿಯು ಅತ್ಯಂತ ಸರಳವಾಗಿದ್ದು, ಜನಸಾಮಾನ್ಯರಿಗೂ ಅರ್ಥವಾಗುವಂತಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಶೋಧನೆ ಮತ್ತು ಅಭಿವೃದ್ಧಿಯ ಫಲಶ್ರುತಿ ಮಾನವನ ದೈನಂದಿನ ಜೀವನದಲ್ಲಿ ಬಳಕೆಯಾದಾಗ ಸಾರ್ಥಕವೆನಿಸುತ್ತದೆ ಎಂದ ಮುಖ್ಯಮಂತ್ರಿಗಳು, ಗ್ರಾಮೀಣ ಜನರು, ವ್ಯಕ್ತಿಗಳ ಸಂಶೋಧನೆಗಳಿಗೂ ಮಾನ್ಯತೆ ನೀಡುವ ವ್ಯವಸ್ಥೆ ರೂಪಿಸುವ ಅಗತ್ಯವಿದೆ. ಜೊತೆಗೆ ಈ ನೀತಿ ಯಾವುದೇ ಒಂದು ನಿರ್ದಿಷ್ಟ ವಲಯಕ್ಕೆ ಸೀಮಿತವಾಗದೆ ಎಲ್ಲ ವಲಯಗಳಿಗೂ ಅನ್ವಯವಾಗುವಂತೆ ರೂಪಿಸಬೇಕೆಂದು ಸಲಹೆ ನೀಡಿದರು.

ಕೇಂದ್ರ ಸಚಿವ ಅಬ್ಬಾಸ್ ನಖ್ವಿ ರಾಜಿನಾಮೆ

0

ಪ್ರಧಾನಿ ಮೋದಿ ಸಂಪುಟಕ್ಕೆ ಇಬ್ಬರು ಕೇಂದ್ರ ಸಚಿವರಾದ ಮುಖ್ತಾರ್ ಅಬ್ಬಾಸ್ ನಖ್ವಿ ಹಾಗೂ ಆರ್.ಸಿ.ಪಿ. ಸಿಂಗ್ ರಾಜೀನಾಮೆ ನೀಡಿದ್ದಾರೆ

ರಾಜ್ಯಸಭಾ ಸದಸ್ಯತ್ವ ಜುಲೈ 7 ರಂದು ಕೊನೆಗೊಳ್ಳಲಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದಾರೆ.

ನಾನು ಸಾಂವಿಧಾನಿಕ ಅವಶ್ಯಕತೆಗಳನ್ನು ಅನುಸರಿಸಬೇಕಾಗಿತ್ತು ಎಂದು ಮೋದಿ ಸರ್ಕಾರದಲ್ಲಿ ಮುಸ್ಲಿಂ ಮುಖವಾಗಿದ್ದ ನಖ್ವಿ ತಿಳಿಸಿದ್ದಾರೆ.

ರಾಜ್ಯಸಭೆಗೆ ಮರು ನಾಮನಿರ್ದೇಶನ ಪಡೆಯುವಲ್ಲಿ ವಿಫಲರಾದ ಉಕ್ಕು ಸಚಿವ ಆರ್‌.ಸಿ.ಪಿ. ಸಿಂಗ್ ಕೂಡ ತಮ್ಮ ಸ್ಥಾನ ತೊರೆದಿದ್ದಾರೆ. ಮೇಲ್ಮನೆಯಲ್ಲಿ ಅವರ ಅಧಿಕಾರಾವಧಿಯೂ ಗುರುವಾರ ಕೊನೆಗೊಳ್ಳಲಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಎನ್‌.ಡಿ.ಎ. ಮಿತ್ರಪಕ್ಷವಾದ ಜನತಾ ದಳ ನಾಯಕ ಸಿಂಗ್, ಅವರ ಪಕ್ಷದಿಂದ ಮತ್ತೊಂದು ಅವಧಿಗೆ ರಾಜ್ಯಸಭೆಗೆ ಟಿಕೆಟ್ ನಿರಾಕರಿಸಲಾಗಿತ್ತು.

ರಾಜ್ಯಸಭೆಯಲ್ಲಿ ನಖ್ವಿ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದ್ದಂತೆ, ನರೇಂದ್ರ ಮೋದಿ ಸರ್ಕಾರದಲ್ಲಿ ಬಿಜೆಪಿಗೆ ಮುಸ್ಲಿಂ ಪ್ರಾತಿನಿಧ್ಯವಿಲ್ಲದಂತಾಗಿದೆ.

ನಖ್ವಿ ಅವರ ಭವಿಷ್ಯದ ಬಗ್ಗೆ ಸದ್ಯಕ್ಕೆ ಏನೂ ಹೇಳಲಾಗದ್ದರೂ, ಉಪ ರಾಷ್ಟ್ರಪತಿ ಸ್ಥಾನಕ್ಕೆ ಅವರ ಹೆಸರನ್ನು ಪರಿಗಣಿಸಲಾಗುತ್ತಿದೆ ಎಂಬ ವದಂತಿಗಳು ಹರಡಿವೆ

ಮಹಿಳಾ ಸಬಲೀಕರಣ ಧರ್ಮಸ್ಥಳ ಸಂಸ್ಥೆ ಧ್ಯೇಯ-ವೀರೇಂದ್ರಹೆಗ್ಡೆ

0

ರಾಜ್ಯದಲ್ಲಿ ಮಹಿಳಾ ಸಬಲೀಕರಣವೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಉದ್ದೇಶ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ.

ಮಧುಗಿರಿಯಲ್ಲಿ ನಡೆದ ಸ್ವ ಉದ್ಯೋಗ ಮೇಳ ಮತ್ತು ಸಾಧನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಬಡತನ ಹೋಗಲಾಡಿಸಲು ಯೋಜನೆಯು ಸದಾ ಸಿದ್ಧವಿದೆ.

ಅದರಂತೆ ಸಾಮಾಜಿಕ ಸಾಮರಸ್ಯ ಬೆಸೆಯಲು ಜಾತಿ, ಧರ್ಮ ಮೀರಿ ಸದಸ್ಯರನ್ನು ಹೊಂದಿದೆ. ಎಲ್ಲ ಸಮಸ್ಯೆಗೂ ಸಂಘದಲ್ಲಿ ಪರಿಹಾರವಿದೆ. ಸಂಘವು ಶಿಕ್ಷಣ ಮತ್ತು ಸ್ವ ಸಾಮರ್ಥ್ಯವನ್ನು ನೀಡಲಿದೆ. ದುಡಿದ ಸಂಪತ್ತು ಸೋರಿಕೆಯಾಗದಂತೆ ಆರ್ಥಿಕವಾದ ಸ್ವಾವಲಂಬನೆಯ ಬದುಕನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಡಾ.ಜಿ. ಪರಮೇಶ್ವರ್‌ ಇನ್ನೂ ಮುಂತಾದವರು ಗಣ್ಯರಿದ್ದರು.

ಹೆಗ್ಗಡೆ ಸಂಸ್ಕೃತಿಯ ರಾಯಭಾರಿ
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ವಿ. ವೀರಭದ್ರಯ್ಯ ಮಾತನಾಡಿ, ರಾಜ್ಯದ ಬಡವರ ಸಬಲೀಕರಣಕ್ಕೆ ಪೂಜ್ಯರು ಮಂಜುನಾಥನ ಆಜ್ಞೆಯಂತೆ ಮುಂದಡಿಯಿಟ್ಟಿದ್ದಾರೆ. ಅವರು ನಡೆದಾಡುವ ಮಂಜುನಾಥನೇ ಆಗಿದೆ. ಈ ಕಾರ್ಯಕ್ಕೆ ನಾವೆಲ್ಲ ಜತೆಯಾಗಬೇಕು. ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ಸಹದ್ಯೋಗ ಸೃಷ್ಟಿಗೆ ಪೂಜ್ಯ ಡಾ. ಹೆಗ್ಗಡೆ ಅವರು ಮತ್ತಷ್ಟು ಪ್ರೋತ್ಸಾಹ ನೀಡಬೇಕು ಎಂದು ಹೇಳಿದ್ದಾರೆ.

ಸಂಘದ ಸದಸ್ಯರ 10 ರೂ. ಉಳಿತಾಯದಿಂದ 367 ಕೋಟಿ ರೂ. ಸಂಗ್ರಹವಾಗಿದ್ದು, 1,400 ಕೋಟಿ ರೂ. ಹಣವು ಸಾಲದ ರೂಪದಲ್ಲಿ ಬಳಕೆಯಾಗಿ ಮರುಪಾವತಿಯಾಗಿದೆ. ಸರಕಾರದ ಸವಲತ್ತುಗಳನ್ನು ಪರಿಚಯ ಮಾಡಲು 326 ಸೇವಾ ಕೇಂದ್ರಗಳನ್ನು ಸ್ಥಾಪಿಸಿದೆಸಾರ್ವಜನಿಕರಿಗೆ ಯೋಜನೆಯ ಅರಿವು ಹಾಗೂ ಲಾಭವನ್ನು ತಂದುಕೊಡಲಿದೆ.

ಮಹಿಳೆಯರಿಗೆ ಮುಟ್ಟಿನ ಕಪ್ ವಿತರಿಸಲು ಸರ್ಕಾರದ ಚಿಂತನೆ

0

ರಾಜ್ಯದ ಪ್ರತಿ ಹೆಣ್ಣುಮಕ್ಕಳಿಗೆ ಉಚಿತವಾಗಿ ಮೈತ್ರಿ ಮುಟ್ಟಿನ ಕಪ್‌ಗಳನ್ನು ನೀಡುವ ಚಿಂತನೆ ಸರ್ಕಾರಕ್ಕಿದೆ. ಪ್ರಾಯೋಗಿಕ ಯೋಜನೆ ಪೂರ್ಣಗೊಂಡ ನಂತರ ಈ ಕ್ರಮ ವಹಿಸಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಹೇಳಿದ್ದಾರೆ.

ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿ ಏರ್ಪಡಿಸಿದ್ದ, ಮೈತ್ರಿ ಮುಟ್ಟಿನ ಕಪ್‌ ಶುಚಿ ಯೋಜನೆಯ ರಾಜ್ಯ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಟ್ಟು ಎನ್ನುವುದು ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ಸಹಜವಾಗಿ ಆಗುವ ಪ್ರಕ್ರಿಯೆ. ಶೇ.70 ರಷ್ಟು ಹೆಣ್ಣುಮಕ್ಕಳು ಹಾಗೂ ತಾಯಂದಿರು ಇದನ್ನು ಹೇಳಿಕೊಳ್ಳಲು ಈಗಲೂ ಮುಜುಗರಪಡುತ್ತಾರೆ. ಇದು ಒಂದು ರೀತಿ ಸಾಮಾಜಿಕ ಪಿಡುಗಾಗಿದೆ. ಹದಿಹರಯದ ಹೆಣ್ಣುಮಕ್ಕಳು ಈ ವಿಚಾರದಲ್ಲಿ ಆತಂಕಕ್ಕೊಳಗಾಗಬಾರದು, ನಾಚಿಕೆ ಪಟ್ಟುಕೊಳ್ಳಬಾರದು. ಮುಟ್ಟಿನ ಬಗ್ಗೆ ಧೈರ್ಯವಾಗಿ ಮನೆಯವರೊಂದಿಗೆ ಅಭಿಪ್ರಾಯ ಹಂಚಿಕೊಳ್ಳಬಹುದು ಎಂದರು.

ಇಂದಿನ ಆಧುನಿಕ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ಪ್ಲಾಸ್ಟಿಕ್‌ ಇರುವುದರಿಂದ, ಅದು ಮಣ್ಣಿನಲ್ಲಿ ಕರಗಲು 600-800 ವರ್ಷಗಳು ಬೇಕಾಗುತ್ತವೆ. ಆದರೆ ಈ ಮುಟ್ಟಿನ ಕಪ್‌ಗಳು ಪರಿಸರ ಸ್ನೇಹಿಯಾಗಿವೆ. ಒಂದು ಕಪ್‌ ಅನ್ನು 6 ರಿಂದ 10 ವರ್ಷಗಳ ಕಾಲ ಬಳಸಬಹುದು. ಇದರಿಂದ ಹಣವೂ ಉಳಿತಾಯವಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ಹೆಣ್ಣುಮಕ್ಕಳಿಗೆ ಇದನ್ನು ಉಚಿತವಾಗಿ ನೀಡಲು ಚಿಂತಿಸಿದೆ. ಸದ್ಯಕ್ಕೆ ಇದನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ ಎಂದು ವಿವರಿಸಿದರು.

ಋತುಚಕ್ರದ ವೇಳೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತಿ ಅಗತ್ಯ. ಹಿಂದೆ ಹೆಣ್ಣುಮಕ್ಕಳು ಮುಟ್ಟಿನ ವೇಳೆ ಬಟ್ಟೆ ಬಳಸುತ್ತಿದ್ದರು. ಅದು ಸುರಕ್ಷಿತವಾಗಿರಲಿಲ್ಲ. ಅದು ಅನೇಕ ರೋಗಗಳು ಬರಲು ಕಾರಣವಾಗುತ್ತಿತ್ತು. ಹೆಣ್ಣುಮಕ್ಕಳು ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‌ ಬಳಸುತ್ತಾರೆ. ಆದರೆ ಸ್ಯಾನಿಟರಿ ಪ್ಯಾಡ್‌ನಿಂದ ಕಸದ ಸಮಸ್ಯೆ ಹೆಚ್ಚಾಗಿದೆ ಹಾಗೂ ಇದು ಪರಿಸರಕ್ಕೆ ಹಾನಿಯಾಗುತ್ತದೆ. ಅಲ್ಲದೆ, ಹೆಣ್ಣುಮಕ್ಕಳು ಅನೇಕ ಬಾರಿ ಪ್ಯಾಡ್‌ ಬದಲಿಸಬೇಕಾಗುತ್ತದೆ. ಸರ್ಕಾರ ನೀಡುತ್ತಿರುವ ಮುಟ್ಟಿನ ಕಪ್‌ಗಳು ಈ ಸಮಸ್ಯೆಗಳನ್ನು ನಿವಾರಿಸಲಿದೆ ಎಂದರು.

ತಾಯಿಯ ಹೃದಯವನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ರಾಜ್ಯ ಸರ್ಕಾರ, ತಾಯಿಯಂತೆ ಹೆಣ್ಣುಮಕ್ಕಳ ಬಗ್ಗೆ ವಿಚಾರ ಮಾಡಿ ಈ ಯೋಜನೆಯನ್ನು ಜಾರಿ ಮಾಡಿದೆ. ಬುಡಕಟ್ಟು ಜನಾಂಗವಿರುವ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡು ಇಲ್ಲಿಯೇ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಆರಂಭದಲ್ಲಿ ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಾಗುತ್ತಿದೆ. ಗಡಿಭಾಗದಲ್ಲಿರುವ ಒಂದು ಜಿಲ್ಲೆ ಹಾಗೂ ಹೆಚ್ಚು ಶಿಕ್ಷಿತರಿರುವ ಒಂದು ಜಿಲ್ಲೆಯನ್ನು ಈ ಯೋಜನೆಗೆ ಆರಿಸಲಾಗಿದೆ. ನಮ್ಮ ರಾಜ್ಯ ಆರೋಗ್ಯವಂತ ರಾಜ್ಯವಾದಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ರಾಜ್ಯ ಸರ್ಕಾರ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ಕೆಲಸವನ್ನು ಬದ್ಧತೆಯಿಂದ ಮಾಡಲಿದೆ ಎಂದು ತಿಳಿಸಿದರು.

ಪೊರಕೆ ಹಿಡಿದು ಗುಡಿಸಿದರೆ ದೇಶ ಸ್ವಚ್ಛವಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛತಾ ಅಭಿಯಾನದ ಬಗ್ಗೆ ಅನೇಕರು ತಮಾಷೆ ಮಾಡಿದ್ದರು. ಆದರೆ ಕಳೆದ ಎಂಟು ವರ್ಷಗಳಲ್ಲಿ 10 ಕೋಟಿ ಶೌಚಾಲಯ ನಿರ್ಮಾಣವಾಗಿದೆ. ಇದರಿಂದಾಗಿ ಮಹಿಳೆಯರು ಸ್ವಾಭಿಮಾನದಿಂದ ಬದುಕುವಂತಾಗಿದೆ ಎಂದರು.

ಭ್ರಷ್ಟಾಚಾರ ಯಾವ ರೂಪದಲ್ಲಿದ್ದರೂ ಅಪರಾಧ-ನ್ಯಾ.ಮುಸ್ತಫಾ ಹುಸೇನ್

0

ಭ್ರಷ್ಟಾಚಾರ ಯಾವ ರೂಪದಲ್ಲೇ ಇದ್ದರೂ ಅದು ಅಪರಾಧ. ಆದ್ದರಿಂದ ಸರ್ಕಾರಿ ಸೇವಕರು ಮತ್ತು ಸಾರ್ವಜನಿಕರು ಇಬ್ಬರೂ ಲೋಕಾಯುಕ್ತ ಕಾಯ್ದೆ ಬಗ್ಗೆ ತಿಳಿದುಕೊಂಡು, ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್.ಎಸ್.ಎ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ನ್ಯಾಯವಾದಿಗಳ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಇಂದು ಏರ್ಪಡಿಸಲಾಗಿದ್ದ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲಂಚ ಪಡೆಯುವುದು ಮತ್ತು ನೀಡುವುದು, ದುರಾಡಳಿತ ಸೇರಿದಂತೆ ಯಾವುದೇ ರೀತಿಯ ಭ್ರಷ್ಟಾಚಾರ ಅಪರಾಧವಾಗುತ್ತದೆ. ಭ್ರಷ್ಟಾಚಾರ ಕುರಿತು ಅರಿವು ಮೂಡಿಸಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಜಾರಿಗೆ ತಂದಿದೆ. ಆದರೆ ಇದು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ಬಂದಿಲ್ಲ ಎಂದೆನ್ನಿಸುತ್ತಿದೆ. ಸರ್ಕಾರಿ ನೌಕರರ ಬಗ್ಗೆ ಸಾರ್ವಜನಿಕರು, ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ರೀತಿ ಋಣಾತ್ಮಕ ಅಭಿಪ್ರಾಯವಿದೆ. ಇತ್ತೀಚೆಗೆ ಅನೇಕ ಸಾರ್ವಜನಿಕ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ, ಎಸಿಬಿ ದಾಳಿ ನಡೆಸುತ್ತಿರುವುದನ್ನು ಸಹ ಕಾಣಬಹುದಾಗಿದೆ. ಒಮ್ಮೆ ಈ ಪ್ರಕರಣದೊಳಗೆ ಸಿಲುಕಿಕೊಂಡರೆ 10 ರಿಂದ 15 ವರ್ಷ ವಿಚಾರಣೆ ಇತರೆ ಪ್ರಕ್ರಿಯೆಗಳೆಂದು ಅದೇ ಶಿಕ್ಷೆಯಾಗಿ ಪರಿಣಮಿಸುತ್ತವೆ.

ಸರ್ಕಾರಿ ಅಧಿಕಾರಿಗಳಾಗಿ ಒಳ್ಳೆಯ ಜವಾಬ್ದಾರಿಯುತವಾದ ಸ್ಥಾನದಲ್ಲಿದ್ದೇವೆ. ಸರ್ಕಾರ ನಮಗೆ ಉತ್ತಮ ವೇತನ, ಸೌಲಭ್ಯಗಳ ಜೊತೆಗೆ ನಿವೃತ್ತಿ ಹೊಂದಿದ ನಂತರವೂ ನಮ್ಮ ಕಾಳಜಿ ವಹಿಸುತ್ತಿದೆ. ಯಾವುದೇ ದುರಾಸೆಗೆ ಈಡಾಗದೇ ಬದ್ದತೆಯಿಂದ ಕೆಲಸ ಮಾಡಬೇಕು. ಕೊರೋನಾ ಸಮಯದಲ್ಲಿ ಸಹ ಸರ್ಕಾರ ನಮ್ಮ ಹಿತ ಕಾದಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರು ಮುಂದೆ ಬದುಕುವ ದಾರಿ ತೋರಬೇಕು ಹೊರತು ಸಂಪಾದನೆ ಹಿಂದೆಯೇ ಬೀಳಬಾರದು.

ಅಧಿಕಾರಿಗಳು ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದೆ, ನಿಯಮಾನುಸಾರ ಸಾರ್ವಜನಿಕರ ಕೆಲಸಗಳನ್ನು ಮಾಡಿದಲ್ಲಿ ಈ ಕಾಯ್ದೆಯ ಉದ್ದೇಶ ಸಾಧಿಸಿದಂತಾಗುತ್ತದೆ ಎಂದು ತಿಳಿಸಿದರು.

 ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಕೇವಲ ಲಂಚ ಪಡೆಯುವುದು, ನೀಡುವುದು ಮಾತ್ರವಲ್ಲ, ದುರಾಡಳಿತ ಮತ್ತು ಕರ್ತವ್ಯಲೋಪ ಸಹ ಭ್ರಷ್ಟಾಚಾರವೆಂದು ಬಹಳ ಜನರಿಗೆ ಅರಿವಿಲ್ಲ. ಉದ್ದೇಶಪೂರ್ವಕವಾಗಿ ಯಾವುದೇ ಕಡತವನ್ನು ಬಾಕಿ ಇಟ್ಟುಕೊಂಡರೆ ಅದು ಕೂಡ ಭ್ರಷ್ಟಾಚಾರ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಎಸಿಬಿ, ಲೋಕಾಯುಕ್ತ, ಸಾಮಾಜಿಕ ಮಾಧ್ಯಮದಂತಹ ಅನೇಕ ಕಾವಲುಗಾರರು ನಮ್ಮ ವ್ಯವಸ್ಥೆಯಲ್ಲಿ ಇದ್ದು, ಎಚ್ಚರಿಕೆಯಿಂದ ಕೆಲಸ ಮಾಡಬೇಕು.


  ಕರ್ತವ್ಯ ನಿರ್ವಹಣೆ ವೇಳೆ ಅನೇಕ ರೀತಿಯ ಬಾಹ್ಯ ಒತ್ತಡಗಳು ಬರಬಹುದು. ಅದನ್ನೆಲ್ಲ ಎದುರಿಸಿ ಕರ್ತವ್ಯ ನಿರ್ವಹಿಸಬೇಕು. ಭ್ರಷ್ಟರಹಿತರಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಕಾಲದಲ್ಲಿ ಸೌಲಭ್ಯಗಳನ್ನು ತಲುಪಿಸಬೇಕು ಎಂದರು.   


 ಚಿತ್ರದುರ್ಗ ವಿಭಾಗದ ಲೋಕಾಯುಕ್ತ ಎಸ್‍ಪಿ ಎನ್.ವಾಸುದೇವರಾಮ್ ಮಾತನಾಡಿ, ಮೊದಲು ನಾವು ಮಾನವರಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು. ಕಾಯ್ದೆ ಪ್ರಕಾರ ಕೇವಲ ಲಂಚ ಮಾತ್ರ ಭ್ರಷ್ಟಾಚಾರ ಅಲ್ಲ. ಕರ್ತವ್ಯ ನಿರ್ಲಕ್ಷ್ಯ, ದುರ್ನಡತೆ ಕೂಡ ಅಪರಾಧ. ಸೇವಾನಿರತರು ಮತ್ತು ನಿವೃತ್ತಿ ಹೊಂದಿದ 3 ವರ್ಷದವರೆಗೂ ಈ ಕಾಯ್ದೆಯಡಿ ಕ್ರಮ ವಹಿಸಬಹುದು. ಆದ ಕಾರಣ ಇಂತಹ ಪ್ರಕರಣಗಳಲ್ಲಿ ಸಿಲುಕಿಕೊಂಡು ತೊಂದರೆಗೀಡಾಗದೇ, ನೊಂದವರು, ಬಡವರಿಗೆ ಮೊದಲ ಪ್ರಾಶಸ್ತ್ಯ ನೀಡಿ ಕರ್ತವ್ಯ ನಿರ್ವಹಿಸುವಂತೆ ಕಿವಿ ಮಾತು ಹೇಳಿದರು.
  ಲೋಕಾಯುಕ್ತ ಉಪ ಅಧೀಕ್ಷಕ ಎನ್.ಮೃತ್ಯುಂಜಯ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತು ಮಾಹಿತಿ ನೀಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಡಳಿತದ ಗುಣಮಟ್ಟವನ್ನು ಸುಧಾರಣೆ ಮಾಡುವುದು ಲೋಕಾಯುಕ್ತ ಕಾಯ್ದೆಯ ಉದ್ದೇಶವಾಗಿದೆ. ಕರ್ತವ್ಯಪ್ರಜ್ಞೆಯಿಂದ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಸರಳವಾಗಿ ಸೇವೆಯಿಂದ ನಿವೃತ್ತಿಯಾಗಬಹುದು. ಅಸಡ್ಡೆ, ವಿಳಂಬ ಇತರೆ ಕರ್ತವ್ಯಲೋಪವನ್ನೆಸಗಿದರೆ ತೊಂದರೆ ತಪ್ಪಿದ್ದಲ್ಲ. ಆದ್ದರಿಂದ ಎಲ್ಲರೂ ಲೋಕಾಯುಕ್ತ ಕಾಯ್ದೆಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಲೋಕಾಯುಕ್ತ ಕಾಯ್ದೆಯಲ್ಲಿ 26 ಕಲಂ ಗಳಿವೆ.

ಕ್ರಮ, ದೂರು, ಆಪಾದನೆ, ದುರಾಡಳಿತ, ವಿಚಾರಣೆ, ನಡವಳಿಕೆ ನಿಯಮಗಳು ಸೇರಿದಂತೆ ಮುಖ್ಯ ಕಲಂಗಳ ಕುರಿತು ವಿವರಿಸಿದ ಅವರು ಸರ್ಕಾರಿ ಅಧಿಕಾರಿಗಳಿಗೆ ಅಪರಿಚತ, ಬೆದರಿಕೆ ಕರೆಗಳು ಬಂದಾಗ ತೆಗೆದುಕೊಳ್ಳಬೇಕಾದ ಕ್ರಮದ ಕುರಿತೂ ಮಾಹಿತಿ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಎಂ.ಎಲ್.ವೈಶಾಲಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ದೇಶದಲ್ಲಿ ಮತ್ತೆ ಕೊರೋನ ಸೋಂಕು ಏರಿಕೆ

0

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 18,930 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಯಲ್ಲಿ 18,930 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.
ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿನಿಂದ 35 ಮಂದಿ ಮೃತಪಟ್ಟಿದ್ದು, ಈ ಮೂಲಕ ದೇಶದಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 525305ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 18,930 ಹೊಸ ಪ್ರಕರಣಗಳು, 14,650 ಚೇತರಿಕೆಗಳು ಮತ್ತು 35 ಸಾವುಗಳು ವರದಿಯಾಗಿವೆ.

ಸಕ್ರಿಯ ಪ್ರಕರಣಗಳು 1,19,457

ದೈನಂದಿನ ಪಾಸಿಟಿವಿಟಿ ದರ 4.32%

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ:ಆರೇಂಜ್ ಅಲರ್ಟ್

0

ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಹಲವೆಡೆ ವ್ಯಾಪಕವಾಗಿ ಮಳೆ ಸುರಿಯುತ್ತಿದೆ .

ಕುಂಬಳೆಯ ಪ್ರಸಿದ್ಧ ಶ್ರೀಶಂಕರ ನಾರಾಯಣ ದೇಗುಲವೂ ನೀರಿನಲ್ಲಿ ಮುಳುಗಿದೆ. ಜಿಲ್ಲೆಯಾದ್ಯಂತೆ ಸೋಮವಾರ ರಾತ್ರಿಯಿಂದ ವ್ಯಾಪಕ ಮಳೆ ಸುರಿಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಭಾರಿ ಮಳೆಯಿಂದ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬಂಟ್ವಾಳ ತಾಲ್ಲೂಕಿನ ಸಾರಡ್ಕ ಚೆಕ್​ಪೋಸ್ಟ್​ ಬಳಿ ಗುಡ್ಡ ಕುಸಿದಿದ್ದು, ಸ್ಥಳೀಯ ಆಡಳಿತ ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

ಕರಾವಳಿಯ ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿ-ಹಳ್ಳಗಳು ಉಕ್ಕಿ ಹರಿಯುತ್ತಿದ್ದು, ಸಮುದ್ರದ ಅಬ್ಬರ ಹೆಚ್ಚಾಗಿದೆ. ಕೇರಳದಲ್ಲಿರುವ ಕನ್ನಡ ಭಾಷಿಕ ಜಿಲ್ಲೆ ಕಾಸರಗೋಡಿನ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಾಸರಗೋಡು ನಗರದಲ್ಲಿಯೂ ಹಲವು ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ.

ಬ್ರಹ್ಮಾವರ ತಾಲೂಕಿನಲ್ಲೂ ವ್ಯಾಪಕ ಮಳೆಯಾಗಿದ್ದು, ಸೀತಾ ನದಿ ತುಂಬಿ ಹರಿಯುತ್ತಿದೆ. ಬ್ರಹ್ಮಾವರದ ಮಟಪಾಡಿ, ನೀಲಾವರ, ಹನೇಹಳ್ಳಿ ಪರಿಸರದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಮಟಪಾಡಿಯ ಭತ್ತದ ಗದ್ದೆಗಳಲ್ಲಿ ನೆರೆ ನೀರು ನಿಂತಿದೆ. ತೆಂಗಿನ ತೋಟಗಳಿಗೆ ನದಿ ನೀರು ನುಗ್ಗಿದೆ. ಕಡಲ ಕೊರೆತದ ಸಮಸ್ಯೆಯೂ ಕಾಣಿಸಿಕೊಂಡಿದೆ.

ಉಡುಪಿ ಜಿಲ್ಲೆಯಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ 84 ಮಿಮೀ ಮಳೆ ದಾಖಲಾಗಿದೆ. ಕಾರ್ಕಳ 77, ಹೆಬ್ರಿ 142, ಕುಂದಾಪುರ 78, ಬೈಂದೂರು 68, ಉಡುಪಿ 59, ಬ್ರಹ್ಮಾವರ 86, ಕಾಪು 57 ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಇಂದು ಸರಾಸರಿ 100 ಮಿಮೀಗೂ ಹೆಚ್ಚು ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹೇಳಿರುವ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್​ ಮುಂದುವರಿಸಿದೆ.