Tuesday, March 17, 2026
Tuesday, March 17, 2026
Home Blog Page 1511

ರಾಜ್ಯದಲ್ಲಿ ಭಾರೀ ಮಳೆ: ಮುನ್ನೆಚ್ಚರಿಕೆ ಬಗ್ಗೆ ಸೀಎಂ ಅವರಿಂದ ವಿಡಿಯೋ ಸಂವಾದ

0

ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 13 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು.

ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಕಳೆದ ಮೂರು ನಾಲ್ಕು ದಿನಗಳಿಂದ ಮಲೆನಾಡು, ಕರಾವಳಿ, ಹಾಗೂ ಬಯಲು ಸೀಮೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ ಇದರಿಂದ ಜನ, ಜಾನುವಾರುಗಳಿಗೆ ತೊಂದರೆಯಾಗಿದೆ.
13 ಜಿಲ್ಲೆಗಳಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಇದ್ದು, 17 ತಾಲ್ಲೂಕುಗಳಲ್ಲಿ ಮಳೆ ಹಾವಳಿ ಹೆಚ್ಚಾಗಿದೆ. ಇದುವರೆಗೂ ಜೂನ್ 1 ರಿಂದ ಈವರೆಗೆ 12 ಜನ ಮೃತಪಟ್ಟಿದ್ದು, 65 ಜಾನುವಾರುಗಳಿಗೆ ಜೀವಹಾನಿಯಾಗಿದೆ ಎಂದು ತಿಳಿಸಿದರು.

ಮನೆ ಹಾನಿಯಾದಲ್ಲಿ ಭಾಗಶಃ ಅಥವಾ ನೀರು ನುಗ್ಗಿರುವ ಮನೆಗಳಿಗೆ ಮೊದಲು 10 ಸಾವಿರ ತುರ್ತು ಪರಿಹಾರ ಕೂಡಲೇ ನೀಡುವಂತೆ ಆದೇಶ ಮಾಡಲಾಗಿದೆ. ನಂತರ ಹಾನಿ ಪ್ರಮಾಣವನ್ನು ವರದಿಯನ್ನು 2-3 ದಿನಗಳಲ್ಲಿ ಜಿಲ್ಲಾ ಪಂಚಾಯತ್ ನ ಇಂಜಿನಿಯರ್ ಗಳಿಂದ ಪಡೆದು ನಿಯಮಾನುಸಾರ ಅಂದಾಜು ಮಾಡಿ, ವರ್ಗೀಕರಿಸಿ, ರಾಜೀವ್ ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.

ಮಳೆ ಪ್ರಮಾಣ ಕಡಿಮೆಯಾದ ನಂತರ ಬೆಳೆ ಹಾನಿ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಲು ಪಡೆದು ಪರಿಹಾರ ನೀಡುವಂತೆ ಸೂಚಿಸಲಾಗಿದೆ. ಎಸ್.ಡಿ.ಆರ್.ಎಫ್/ಎನ್.ಡಿ.ಆರ್.ಎಫ್ ತಂಡಗಳನ್ನು ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳವಂತೆ, ಸೂಚಿಸಲಾಯಿತು.

ಉಸ್ತುವಾರಿ ಸಚಿವರೊಂದಿಗಿನ ವೀಡಿಯೋ ಸಂವಾದದಲ್ಲಿ ಭೂ-ಕುಸಿತ ಉಂಟಾಗಿರುವ ಸ್ಥಳಗಳಲ್ಲಿ ಕೆಳಭಾಗದಲ್ಲಿರುವ ಜನರ ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಕೆಲವೆಡೆಗಳಲ್ಲಿ ಸಂಪೂರ್ಣ ಭೂಕುಸಿತವಾಗಿಲ್ಲ. ಭೂಮಿ ಸ್ವಲ್ಪ ಕುಸಿದಿದ್ದು ರಸ್ತೆ ಸಂಚಾರ ಸ್ಥಗಿತವಾಗಿದೆ. ಅದನ್ನು ಟಾಸ್ಕ್ ಪೋರ್ಸ್ ಗಳನ್ನು ರಚಿಸಿ ಕೂಡಲೇ ತೆರವುಗೊಳಿಸಲು ಸೂಚನೆ ನೀಡಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಮಳೆಯಿಂದ ಹಾನಿಗೊಳಗಾದ ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಯ ರಸ್ತೆ ದುರಸ್ತಿಯನ್ನು ಆದ್ಯತೆ ಮೇರೆಗೆ ಕೈಗೊಂಡು ಸಂಚಾರ ಸಂಪರ್ಕ ಸಮರ್ಪಕವಾಗಿರುವಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದು, ಹಾನಿಯಾದ ಪ್ರಮಾಣದ ವರದಿಯನ್ನು ನೀಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ವಿದ್ಯುತ್ ಕಂಬಗಳು ಬಿದ್ದು ಹೋದಲ್ಲಿ ಕೂಡಲೇ ಸರಿಪಡಿಸಿ, ವಿದ್ಯುತ್ ಸರಬರಾಜು ಅಡಚಣೆಯಾಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಕಡಲ ಕೊರೆತ ಆದಲ್ಲಿ ತುರ್ತು ಕಾಮಗಾರಿ ಕೂಡಲೇ ಕೈಗೊಂಡು ಹೆಚ್ಚಿನ ಹಾನಿಯಾಗದಂತೆ ತಾತ್ಕಾಲಿಕವಾಗಿ ಕಡಲ ಕೊರೆತ ಆಗದಂತೆ ಕ್ರಮವಹಿಸಬೇಕು. ರಸ್ತೆಗಳು ಕೊರೆತ ಆಗಿದ್ದು, ಅವುಗಳನ್ನು ಪುನಃಸ್ಥಾಪಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ತಿಳಿಸಲಾಗಿದೆ.

ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಮನ್ವಯದೊಂದಿಗೆ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ರಚಿಸಿ, ನೇರ ಸಂಪರ್ಕ ಹೊಂದಲು ತಿಳಿಸಲಾಗಿದೆ. ನಿಯಂತ್ರಣ ಕೊಠಡಿ ಸ್ಥಾಪಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸೂಚಿಸಲಾಯಿತು. ಪೊಲೀಸರು ಸೇವೆಗೆ ದಿನದ 24 ಗಂಟೆಯೂ ಲಭ್ಯರಿರಬೇಕು ಎಂದು ತಿಳಿಸಿದರು.

ಈ ಬಾರಿ ಸರ್ಕಾರವು ಶಾಶ್ವತವಾಗಿ ಕಡಲ ಕೊರೆತ ಆಗದಂತೆ ಒಂದು ವಿಶೇಷ ತಂತ್ರಜ್ಞಾನದ ಮೂಲಕ ತೆಡೆದು ಇನ್ನು ಮುಂದೆ ಶಾಶ್ವತ ಕಡಲ ಕೊರೆತ ಆಗದ ರೀತಿಯಲ್ಲಿ ಕ್ರಮವಹಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಕನ್ನಡದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ನಟ ಜಗ್ಗೇಶ್

0

ರಾಜ್ಯಸಭಾ ಸದಸ್ಯರಾಗಿ ನಟ ಜಗ್ಗೇಶ್​ ಪ್ರಮಾಣವಚನ ಸ್ವೀಕರಿಸಿದ್ದಾರೆ. ​ರಾಜ್ಯಸಭೆಯಲ್ಲಿ ಇಂದು ನೂತನ ರಾಜ್ಯಸಭಾ ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ. ನಟ ಜಗ್ಗೇಶ್​ ಕನ್ನಡ ಭಾಷೆಯಲ್ಲಿ ರಾಘವೇಂದ್ರ ಸ್ವಾಮಿಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿರುವುದು ಎಲ್ಲರಿಗೂ ಸಂತೋಷ ತಂದಿದೆ.

ದೆಹಲಿಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವ ಮೊದಲು ನಟ ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ ದೆಹಲಿಯಲ್ಲಿರುವ ರಾಯರ ಮಠಕ್ಕೆ ನಟ ಜಗ್ಗೇಶ್ ಭೇಟಿ ನೀಡಿ ಬೃಂದಾವನ ದರ್ಶನ ಮಾಡಿದ್ದರು.

ರಾಜ್ಯಸಭೆಯಲ್ಲಿ ಕನ್ನಡದಲ್ಲಿಯೇ ಜಗ್ಗೇಶ್‌ ಪ್ರಮಾಣವಚನ ಸ್ವೀಕರಿಸಿದ್ದು, ಎಲ್ಲರ ಗಮನಸೆಳೆಯುತ್ತಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿದ್ದ ಪೀಠದ ಸಮ್ಮುಖದಲ್ಲಿ ಜಗ್ಗೇಶ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಲೆಹರ್​​ಸಿಂಗ್ ಹಾಗೂ ಜೈರಾಮ್​​​ ರಮೇಶ್ ಕೂಡ ಇದೇ ವೇಳೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮಳೆಗಾಲ ಎದುರಿಸಲು ಸಮರೋಪಾದಿ ಸಿದ್ಧರಾಗಿ-ಡಾ.ಸೆಲ್ವಮಣಿ

0

ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಆರೆಂಜ್ ಅಲರ್ಟ್ ಇದ್ದು ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಮಳೆಯಿಂದ ಆಗಬಹುದಾದ ಹಾನಿಯನ್ನು ಎದುರಿಸಲು ಯುದ್ದೋಪಾದಿಯಲ್ಲಿ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ತಾಲ್ಲೂಕುಗಳ ತಹಶೀಲ್ದಾರರು, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಳೆ ಹಾನಿ ನಿರ್ವಹಣೆ ಕುರಿತು ಅಗತ್ಯ ಸೂಚನೆಗಳನ್ನು ನೀಡಿದರು.

ಶನಿವಾರ, ಭಾನುವಾರ ರಜೆ ಎಂದು ತಿಳಿಯದೆ, ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಕ್ಷೇತ್ರದಲ್ಲಿ ಸತತವಾಗಿ ಓಡಾಡುತ್ತಾ ಮಳೆಯಿಂದ ಯಾವುದೇ ರೀತಿಯಲ್ಲಿ ಆಗಬಹುದಾದ ಹಾನಿ ಎದುರಿಸಲು ಕ್ರಮ ವಹಿಸಬೇಕು. ಇನ್ನೂ ಎರಡು ದಿನ ಹೆಚ್ಚು ಮಳೆಯಾಗುವ ಸಂಭವ ಇದೆ. ಆದ್ದರಿಂದ ಅಧಿಕಾರಿಗಳು ತಂಡದಲ್ಲಿ ಕೆಲಸ ಮಾಡಬೇಕು ಎಂದರು.

ಎನ್‍ಡಿಆರ್‍ಎಫ್ ನಿಯಮದ ಪ್ರಕಾರ ಮನೆ ಹಾನಿಗೊಳಗಾದವರಿಗೆ ತಕ್ಷಣಕ್ಕೆ ರೂ.10 ಸಾವಿರ ಪರಿಹಾರ ನೀಡಬೇಕು. ಹಾಗೂ ಉಳಿದಂತೆ ಮನೆ, ಜನ-ಜಾನುವಾರು ಹಾನಿಗೊಳಗಾದವರಿಗೆ ಎನ್‍ಡಿಆರ್‍ಎಫ್ ನಿಯಮದ ಪ್ರಕಾರ ಪರಿಹಾರ ಕ್ರಮ ಕೈಗೊಳ್ಳಬೇಕು. ಹಾಗೂ ಬೆಳೆ ಹಾನಿಯಾದಲ್ಲಿ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ವರದಿ ಪಡೆದು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

ಎಲ್ಲ ತಾಲ್ಲೂಕುಗಳಲ್ಲಿ ಮಳೆ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಿ ನಿರ್ವಹಿಸಬೇಕು. ಅಗತ್ಯ ಕಂಡುಬಂದ ಪ್ರದೇಶಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಎಲ್ಲ ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲ ಚರಂಡಿಗಳು, ರಾಜಾ ಕಾಲುವೆಗಳ ಸ್ವಚ್ಚತೆ ಮಾಡಿಸಬೇಕು. ಹೂಳಿದ್ದಲ್ಲಿ ತಕ್ಷಣ ತೆರವುಗೊಳಿಸಬೇಕು. ಮನೆಗಳಿಗೆ ನೀರು ನುಗ್ಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ರಸ್ತೆ ಸಂಪರ್ಕಗಳು ಕಡಿತವಾದಲ್ಲಿ ಪರ್ಯಾಯ ಮಾರ್ಗ ವ್ಯವಸ್ಥೆಗೆ ತಕ್ಷಣ ಪ್ರಸ್ತಾವನೆ ನೀಡಬೇಕು. ಎಲ್ಲಿಯಾದರೂ ಭೂಕುಸಿತವಾದಲ್ಲಿ ತಕ್ಷಣ ಕ್ರಮ ವಹಿಸಬೇಕು ಎಂದು ಸೂಚಿಸಿದ ಅವರು ತೀರ್ಥಹಳ್ಳಿ ಆಗುಂಬೆ ಘಾಟಿ ಮತ್ತು ಹೊಸನಗರ ಹುಲಿಕಲ್ ಘಾಟಿಗಳಲ್ಲಿ ದೊಡ್ಡ ವಾಹನ ಸಂಚಾರ ಕುರಿತು ಪರಿಶೀಲಿಸುವಂತೆ ಎಸಿ ಯವರಿಗೆ ಸೂಚಿಸಿದರು.

ತಹಶೀಲ್ದಾರ್, ಇಓ ಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪಿಆರ್‍ಇಡಿ ಇತರೆ ಇಂಜಿನಿಯರುಗಳು ಒಟ್ಟಾಗಿ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು. ಜೊತೆಗೆ ಮಳೆಯಿಂದಾಗುವ ಮನೆ, ಜನ, ಜಾನುವಾರು ಇತರೆ ಹಾನಿ ಕುರಿತು ವಾಸ್ತವಿಕ ವರದಿಯನ್ನು ಕ್ಷಿಪ್ರವಾಗಿ ನೀಡಬೇಕು ಎಂದು ಸೂಚಿಸಿದ ಅವರು ಕರ್ತವ್ಯದಲ್ಲಿ ಲೋಪಗಳು ಕಂಡು ಬಂದಲ್ಲಿ ಎನ್‍ಡಿಆರ್‍ಎಫ್ ನಿಯಮ ಪ್ರಕಾರ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಎಸಿ ಪ್ರಕಾಶ್, ಶಿವಮೊಗ್ಗ ತಹಶೀಲ್ದಾರ್ ಡಾ.ನಾಗರಾಜ್, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ನಿವೃತ್ತ ನೌಕರರಿಗೆ ಆರೋಗ್ಯ ಯೋಜನೆಯ ವಿಸ್ತರಣೆ- ಬೊಮ್ಮಾಯಿ

0

ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆಯ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಈ ಮೂಲಕ ರಾಜ್ಯದ ನಿವೃತ್ತ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ
ನೀಡಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗನೆ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನಿವೃತ್ತ ನೌಕರರು ನಿರಂತರವಾಗಿ ಕ್ರಿಯಾಶೀಲರಾಗಿದ್ದಾರೆ.ಉತ್ತಮ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಮಾನವೀಯತೆ ಇರುವ ನೌಕರರಿದ್ದರೆ ಬಡವರ ಕಷ್ಟ ಕಾರ್ಪಣ್ಯ ದೂರ ಮಾಡಲು ಸಾಧ್ಯ. ಇದರ ತಳಹದಿಯ ಮೇಲೆ ಆಡಳಿತ ನಡೆಯಬೇಕು. ಮತ್ತೊಬ್ಬರ ಬಗ್ಗೆ ಪ್ರೀತಿ, ವಿಶ್ವಾಸ, ಅನುಕಂಪವಿದ್ದಾಗ ನ್ಯಾಯ ಕೊಡಲು ಸಾಧ್ಯ. 6 ಕೋಟಿಗಿಂತ ಹೆಚ್ಚು ಜನಸಂಖ್ಯೆ ನಮ್ಮ ಕೈಗೆ ಜವಾಬ್ದಾರಿ ಕೊಟ್ಟಿದೆ. 6 ಲಕ್ಷಕ್ಕೂ ಹೆಚ್ಚಿರುವ ಸರ್ಕಾರಿ ನೌಕರರು ಹಾಗೂ ಆಡಳಿತ ಮಾಡುವ ಜನಪ್ರತಿನಿಧಿಗಳ ಕೈಯಲ್ಲಿ ಜವಾಬ್ದಾರಿ ಇದೆ. ನಾವೆಲ್ಲ ಜನರ ವಿಶ್ವಾಸದ ಟ್ರಸ್ಟಿಗಳು. ನಮ್ಮ ಮೇಲಿರುವ ವಿಶ್ವಾಸಕ್ಕೆ ಅರ್ಹರಾಗಿ ನಾವು ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ:ರಾಜ್ಯದಲ್ಲಿ ರಾಹುಲ್ 27 ದಿನ ಪ್ರವಾಸ

0

ದೇಶದಲ್ಲಿ ಕಾಂಗ್ರೆಸ್‌ಗೆ ಮರು ಚೈತನ್ಯ ತರುವ ದೃಷ್ಟಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ನಡೆಯಲಿರುವ ಭಾರತ್‌ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಬರೋಬ್ಬರಿ 27 ದಿನಗಳ ಕಾಲ ನಡೆಯಲಿದೆ.

ಈ ಯಾತ್ರೆ ಕೇರಳ, ತಮಿಳುನಾಡು ಹಾಗೂ ತೆಲಂಗಾಣ ಮೂರು ಮಾರ್ಗಗಳಲ್ಲಿ ಯಾವ ಮಾರ್ಗದ ಮೂಲಕ ಪ್ರವೇಶಿಸಬೇಕು ಎಂಬ ಬಗ್ಗೆ ರಾಜ್ಯ ಕಾಂಗ್ರೆಸ್‌ ನಾಯಕರು ಚರ್ಚೆ ನಡೆಸಿದ್ದಾರೆ.

ಕೇರಳದ ಕಡೆಯಿಂದ ಬಂದರೆ ಚಾಮರಾಜನಗರ ಜಿಲ್ಲೆಯ ಅರಣ್ಯ ಮಾರ್ಗದಲ್ಲಿ ಪಾದಯಾತ್ರೆ ಸಾಗಬೇಕಾಗುತ್ತದೆ. ತಮಿಳುನಾಡು ಕಡೆಯಿಂದ ಬಂದರೆ ಚೆನ್ನೈ ಮೂಲಕ ಪ್ರವೇಶಿಸಬೇಕು. ತೆಲಂಗಾಣ ಮೂಲಕ ಬಂದರೆ ಕೋಲಾರ ಮೂಲಕ ರಾಜ್ಯ ಪ್ರವೇಶಿಸಬೇಕು. ಚಾಮರಾಜನಗರ ಮಾರ್ಗದಲ್ಲಿ ಹೆಚ್ಚು ಅರಣ್ಯವಿರುವುದರಿಂದ ಆ ಮಾರ್ಗದ ಬದಲು ತಮಿಳುನಾಡು ಇಲ್ಲವೇ ತೆಲಂಗಾಣ ಕಡೆಯಿಂದ ಪ್ರವೇಶಿಸುವುದೇ ಸರಿ ಎಂಬುದು ನಾಯಕರ ಆಲೋಚನೆಯಾಗಿದೆ. ಆದ್ದರಿಂದ ಈ ಎರಡರಲ್ಲಿ ಒಂದು ಮಾರ್ಗವನ್ನು ಅಂತಿಮಗೊಳಿಸಬೇಕಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ

ತನ್ನ ಸಾಧನೆಯ ಬಗ್ಗೆ ಹೆಮ್ಮೆ ಪಟ್ಟ ಬ್ರಿಟನ್ನಿರ್ಗಮಿತ ಪ್ರಧಾನಿ

0

ಹಗರಣಗಳಿಂದ ಪೀಡಿತ ಬೋರಿಸ್ ಜಾನ್ಸನ್ ಅವರು ಗುರುವಾರ ತಮ್ಮ ಮಂತ್ರಿಗಳ ಬೆಂಬಲವನ್ನು ನಾಟಕೀಯವಾಗಿ ಕಳೆದುಕೊಂಡ ಬಳಿಕ ಬ್ರಿಟಿಷ್ ಪ್ರಧಾನಿ ಸ್ಥಾನವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ.ಕ್ಯಾಬಿನೆಟ್ ಸದಸ್ಯರ ಸಾಮೂಹಿಕ ರಾಜೀನಾಮೆಗಳ ನಂತರ, ಜಾನ್ಸನ್ ಇಂದು ಬ್ರಿಟಿಷ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ್ದಾರೆ.

ಡೌನಿಂಗ್ ಸ್ಟ್ರೀಟ್‌ನ ಗೇಟ್‌ಗಳ ಹೊರಗಿನಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಮ್ಮ ನಿರ್ಗಮನವನ್ನು ಘೋಷಿಸಿ. ಪ್ರಧಾನ ಮಂತ್ರಿಯಾಗಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಅಸಮರ್ಥತೆಯ ಬಗ್ಗೆ ಅವರು `
ವಿಷಾದ ವ್ಯಕ್ತಪಡಿಸಿದ್ದಾರೆ.ಹಾಗೂ ಅವರು ಕಚೇರಿಯಲ್ಲಿನ ತನ್ನ ಸಾಧನೆಗಳ ಬಗ್ಗೆ ಅಗಾಧವಾಗಿ ಹೆಮ್ಮೆಪಡುತ್ತೇನೆ ಎಂದು ಒತ್ತಿ ಹೇಳಿದ್ದಾರೆ.

ರಾಜಕೀಯದಲ್ಲಿ ಯಾರೂ ಅನಿವಾರ್ಯವಲ್ಲ. ನಾನು ಯಶಸ್ವಿಯಾಗಲಿಲ್ಲ ಎಂದು ವಿಷಾದಿಸುತ್ತೇನೆ.ನಾನು ದುಃಖಿತನಾಗಿದ್ದೇನೆ.ವಿಶ್ವದ ಅತ್ಯುತ್ತಮ ಕೆಲಸವನ್ನು ತ್ಯಜಿಸುತ್ತಿದ್ದೇನೆ. ಸಂಸದೀಯ ಕನ್ಸರ್ವೇಟಿವ್ ಪಕ್ಷದ ಇಚ್ಛೆಯು ಆ ಪಕ್ಷಕ್ಕೆ ಹೊಸ ನಾಯಕರಾಗಿರಬೇಕು.
ಹಾಗಾಗಿ, ಹೊಸ ಪ್ರಧಾನಿಯಾಗಬೇಕು.ನಾನು ಹೊಸ ನಾಯಕನನ್ನು ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಗೋ ರಕ್ಷಣಾ ಕಾಯಿದೆ ಕಡ್ಡಾಯ ಅನುಷ್ಠಾನ-ಭರತ್ ಶೆಟ್ಟಿ

0

ರಾಜ್ಯ ಸರ್ಕಾರದ ನೂತನ ಗೋ ಹತ್ಯೆ ಕಾಯಿದೆಯಲ್ಲಿ ಗೋ ಕಳ್ಳತನ ,ಅಕ್ರಮ ಕಸಾಯಿಖಾನೆ ನಡೆಸುವುದು, ಅಕ್ರಮ ಗೋ ಸಾಗಾಟ ಮಾಡುವ ಆರೋಪಿಗಳ ಆಸ್ತಿ ಮುಟ್ಟು ಗೋಲು ದಂಡನಾಸ್ತ್ರ ಕಾಯಿದೆಯನ್ನು ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಕಟ್ಟು ನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಖಡಕ್ ಆದೇಶ ನೀಡಿದ್ದಾರೆ.

ಇನ್ನು ಮುಂದೆ ಅಕ್ರಮವಾಗಿ ಗೋ ಹತ್ಯೆ,ಕಳ್ಳತನ ಅಪರಾಧ ಪ್ರಕರಣ ಮಟ್ಟ ಹಾಕಲು ಈ ಕಠಿಣ ಅಸ್ತ್ರಗಳ ಬಳಕೆ ಮಾಡುತ್ತೇವೆ. ಪೊಲೀಸರು ಪ್ರಕರಣ ದಾಖಲಿಸಿದ ಕೂಡಲೇ ಕಂದಾಯ ಇಲಾಖೆ ತಕ್ಷಣ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಬೇಕಾದ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಹೈನುಗಾರಿಕೆ ನಡೆಸಿ ಜೀವನ ನಡೆಸುವವರ ಹಟ್ಟಿಯಿಂದ ದನ ಕದಿಯುದನ್ನು, ಬೀಡಾಡಿ ದನಗಳ ಕದ್ದು ಹತ್ಯೆ ಮಾಡುವುದು ಯಾವುದೇ ಕಾರಣಕ್ಕೂ ಸಹಿಸಲಾಗದು. ಬಡವರ, ರೈತರ ಅನ್ನವನ್ನು ಕಸಿಯುವ ಕೆಲಸ ಯಾರೂ ಮಾಡಬಾರದು. ಆರೋಪ ರುಜುವಾತಾದರೆ ಅಂತಹವ ಆಸ್ತಿ ಮುಟ್ಟುಗೋಲು ದಂಡಾಸ್ತ್ರ ಪ್ರಯೋಗಿಸುವಂತೆ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಭದ್ರಾ ಜಲಾಶಯ ನೀರಿನ ಮಟ್ಟ

0

ಶಿವಮೊಗ್ಗ ಜಿಲ್ಲೆಯ ಭದ್ರಾ ಜಲಾಶಯ ಪ್ರದೇಶ ಸುತ್ತಮುತ್ತ ಮಳೆ‌ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದು, ಒಳಹರಿವು ಸ್ವಲ್ಪ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ (ಜು.05) 30,167 ಕ್ಯೂಸೆಕ್ ಒಳ ಹರಿವು ಇತ್ತು. ಇಂದು (ಜು.06) 26,004 ಕ್ಯೂಸೆಕ್ ಒಳ ಹರಿವಿದ್ದು, ಸ್ವಲ್ಪ ತಗ್ಗಿದೆ. ಇಂದಿನ ನೀರಿನ ಮಟ್ಟ 160.11 ಅಡಿಗೆ ತಲುಪಿದೆ. ನಿನ್ನೆ 158.06 ಅಡಿ ಇತ್ತು.
ಕಳೆದ ಒಂದು ವಾರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಳ ಹರಿವು ಹೆಚ್ಚಳವಾಗಿದೆ.

ಈ ಮಳೆ ಮುಂಗಾರು ಹಂಗಾಮಿನ ಭತ್ತ ಬೆಳೆಯುವ ರೈತರ ಸಂತಸಕ್ಕೆ ಕಾರಣವಾಗಿದ್ದು, ಭತ್ತ ನಾಟಿಗೆ ಬೀಜ ಚೆಲ್ಲುವ ಕಾರ್ಯ ನಡೆಯುತ್ತಿದೆ.
ನೀರಿನ ಸಂಗ್ರಹದ ವಿವರ ಹೀಗಿದೆ.
ಇಂದಿನ ನೀರಿನ ಮಟ್ಟ 160.11 ಅಡಿ
ಪೂರ್ಣ ಮಟ್ಟ:186 ಅಡಿ
ಇಂದಿನ ಸಾಮರ್ಥ್ಯ: 43.771 ಟಿಎಂಸಿ
ಒಟ್ಟು ಸಾಮರ್ಥ್ಯ:71.535 ಟಿಎಂಸಿ
ಒಳಹರಿವು: 26004 ಕ್ಯೂಸೆಕ್
ಒಟ್ಟು ಹೊರಹರಿವು: 136 ಕ್ಯೂಸೆಕ್
ಬಲದಂಡೆ ನಾಲೆ: 0.00 ಕ್ಯೂಸೆಕ್
ಎಡದಂಡೆ ನಾಲೆ: 0.00ಕ್ಯೂಸೆಕ್
ಕಳೆದ ವರ್ಷ ಈ ದಿನ : 155.34 ಅಡಿ

ನಮ್ಮ ಒಳ್ಳೆಯ ಕೆಲಸ ದೇಶಾದ್ಯಂತ ವಿಸ್ತರಿಸಬೇಕು- ಡಾ. ವೀರೇಂದ್ರ ಹೆಗ್ಗಡೆ

0

ರಾಜ್ಯಸಭೆಗೆ ನಾಮನಿರ್ದೇಶನ ಆಗುತ್ತೇನೆ ಎಂಬ ಕಲ್ಪನೆ ಕೂಡ ಇಲ್ಲ.
ನಾನು ಅದರ ಹಿಂದೆ ಹೋಗುವವನು ಅಲ್ಲ. ನನಗಾಗಿ ನಾನು ಇದನ್ನ ಬೇಡುವವನು ಅಲ್ಲ, ಕೇಳುವವನು ಅಲ್ಲ. ಅವರು ಕೊಟ್ಟಾಗ ನನಗೆ ಏನು ಅನಿಸಿತ್ತು ಅಂದರೆ, ದೇಶವ್ಯಾಪಿ ತಮ್ಮ ಸೇವೆಯನ್ನ ವಿಸ್ತರಿಸಲು ಒಳ್ಳೆಯ ರಂಗಸ್ಥಳವಾಗಿದೆ ಎಂದು ರಾಜ್ಯಸಭೆಗೆ ನಾಮನಿರ್ದೇಶನದ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ತಿಳಿಸಿದ್ದಾರೆ.

ನೆನ್ನೆ ರಾತ್ರಿವರೆಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಆದಾದ ಮೇಲೆ ಅಭಿನಂದನೆಗಳ ಮಹಾಪೂರ ಹರಿದು ಬಂದಿದೆ. ನಮ್ಮ ಜನತೆ ಬಹಳ ಸಂತೋಷ ಪಟ್ಟಿದ್ದಾರೆ ಎಂದು ಹೇಳಿದರು.

ನನಗೆ ಯಾವುದೇ ರಾಜಕೀಯ ಆಸಕ್ತಿ ಇಲ್ಲ. ನನಗೆ ಮಂಜುನಾಥ ಸ್ವಾಮಿಯ, ಹೆಗ್ಗೆಡೆಯ ಪೀಠಕ್ಕಿಂತ ದೊಡ್ಡದ್ದು ಯಾವುದು ಇಲ್ಲ.
ನಮ್ಮ ಸೇವಾ ಕ್ಷೇತ್ರಕ್ಕೆ ಅನುಕೂಲವಾಗುವ ಕಾರ್ಯಕ್ಷೇತ್ರ ಮೋದಿ ಅವರಿಗೆ ಗಮನ ಸೆಳೆದಿದೆ ಎಂಬುದು ತುಂಬ ಸಂತೋಷ. ನಮ್ಮ ಒಳ್ಳೆಯ ಕೆಲಸ ದೇಶದಾದ್ಯಂತ ವಿಸ್ತರಿಸಬೇಕು ಎಂದರು

ಬಿಜೆಪಿ ಸರ್ಕಾರದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಬಸ್ ಯಾತ್ರೆ

0

ಬಿಜೆಪಿ ಸರ್ಕಾರದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಬಸ್ ಯಾತ್ರೆ ನಡೆಸಲು ಮುಂದಾಗಿದೆ. ಆಗಸ್ಟ್ 15ರ ನಂತರ ರಾಜ್ಯಾದ್ಯಂತ ಬಸ್ ಯಾತ್ರೆಗೆ ನಿರ್ಧಾರ ಮಾಡಿದ್ದು ‘FREEDOM@75’ ಕಾರ್ಯಕ್ರಮದ ಬಗ್ಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಲವು ತಂಡಗಳನ್ನು ರಚಿಸಿ ಬಸ್ ಯಾತ್ರೆ ನಡೆಸಲು ನಿರ್ಧರಿಸಲಾಗಿದೆ.

ಇನ್ನು ಆಗಸ್ಟ್ 15ರಂದು ಬೆಂಗಳೂರಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ.

ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದೆ. ಅಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ‘ಫ್ರೀಡಂ ವಾಕ್’ ಮಾಡಲು ಸೂಚಿಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ರಾಷ್ಟ್ರಧ್ವಜ ಹಿಡಿದು 75 ಕಿ.ಮೀ. ಪಥಸಂಚಲನ ಮಾಡಲು ಸಭೆಯಲ್ಲಿ ಸೂಚಿಸಲಾಗಿದೆ.