ನಿವೃತ್ತ ಸರ್ಕಾರಿ ನೌಕರರಿಗೆ ಆರೋಗ್ಯ ಯೋಜನೆಯ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಈ ಮೂಲಕ ರಾಜ್ಯದ ನಿವೃತ್ತ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ
ನೀಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸುವರ್ಣ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗನೆ ಈ ಬಗ್ಗೆ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ನಿವೃತ್ತ ನೌಕರರು ನಿರಂತರವಾಗಿ ಕ್ರಿಯಾಶೀಲರಾಗಿದ್ದಾರೆ.ಉತ್ತಮ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಮಾನವೀಯತೆ ಇರುವ ನೌಕರರಿದ್ದರೆ ಬಡವರ ಕಷ್ಟ ಕಾರ್ಪಣ್ಯ ದೂರ ಮಾಡಲು ಸಾಧ್ಯ. ಇದರ ತಳಹದಿಯ ಮೇಲೆ ಆಡಳಿತ ನಡೆಯಬೇಕು. ಮತ್ತೊಬ್ಬರ ಬಗ್ಗೆ ಪ್ರೀತಿ, ವಿಶ್ವಾಸ, ಅನುಕಂಪವಿದ್ದಾಗ ನ್ಯಾಯ ಕೊಡಲು ಸಾಧ್ಯ. 6 ಕೋಟಿಗಿಂತ ಹೆಚ್ಚು ಜನಸಂಖ್ಯೆ ನಮ್ಮ ಕೈಗೆ ಜವಾಬ್ದಾರಿ ಕೊಟ್ಟಿದೆ. 6 ಲಕ್ಷಕ್ಕೂ ಹೆಚ್ಚಿರುವ ಸರ್ಕಾರಿ ನೌಕರರು ಹಾಗೂ ಆಡಳಿತ ಮಾಡುವ ಜನಪ್ರತಿನಿಧಿಗಳ ಕೈಯಲ್ಲಿ ಜವಾಬ್ದಾರಿ ಇದೆ. ನಾವೆಲ್ಲ ಜನರ ವಿಶ್ವಾಸದ ಟ್ರಸ್ಟಿಗಳು. ನಮ್ಮ ಮೇಲಿರುವ ವಿಶ್ವಾಸಕ್ಕೆ ಅರ್ಹರಾಗಿ ನಾವು ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.