ದೇಶದಲ್ಲಿ ಕಾಂಗ್ರೆಸ್‌ಗೆ ಮರು ಚೈತನ್ಯ ತರುವ ದೃಷ್ಟಿಯಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆಯು ಕರ್ನಾಟಕದಲ್ಲಿ ಬರೋಬ್ಬರಿ 27 ದಿನಗಳ ಕಾಲ ನಡೆಯಲಿದೆ.
ಈ ಯಾತ್ರೆ ಕೇರಳ, ತಮಿಳುನಾಡು ಹಾಗೂ ತೆಲಂಗಾಣ ಮೂರು ಮಾರ್ಗಗಳಲ್ಲಿ ಯಾವ ಮಾರ್ಗದ ಮೂಲಕ ಪ್ರವೇಶಿಸಬೇಕು ಎಂಬ ಬಗ್ಗೆ ರಾಜ್ಯ ಕಾಂಗ್ರೆಸ್ ನಾಯಕರು ಚರ್ಚೆ ನಡೆಸಿದ್ದಾರೆ.
ಕೇರಳದ ಕಡೆಯಿಂದ ಬಂದರೆ ಚಾಮರಾಜನಗರ ಜಿಲ್ಲೆಯ ಅರಣ್ಯ ಮಾರ್ಗದಲ್ಲಿ ಪಾದಯಾತ್ರೆ ಸಾಗಬೇಕಾಗುತ್ತದೆ. ತಮಿಳುನಾಡು ಕಡೆಯಿಂದ ಬಂದರೆ ಚೆನ್ನೈ ಮೂಲಕ ಪ್ರವೇಶಿಸಬೇಕು. ತೆಲಂಗಾಣ ಮೂಲಕ ಬಂದರೆ ಕೋಲಾರ ಮೂಲಕ ರಾಜ್ಯ ಪ್ರವೇಶಿಸಬೇಕು. ಚಾಮರಾಜನಗರ ಮಾರ್ಗದಲ್ಲಿ ಹೆಚ್ಚು ಅರಣ್ಯವಿರುವುದರಿಂದ ಆ ಮಾರ್ಗದ ಬದಲು ತಮಿಳುನಾಡು ಇಲ್ಲವೇ ತೆಲಂಗಾಣ ಕಡೆಯಿಂದ ಪ್ರವೇಶಿಸುವುದೇ ಸರಿ ಎಂಬುದು ನಾಯಕರ ಆಲೋಚನೆಯಾಗಿದೆ. ಆದ್ದರಿಂದ ಈ ಎರಡರಲ್ಲಿ ಒಂದು ಮಾರ್ಗವನ್ನು ಅಂತಿಮಗೊಳಿಸಬೇಕಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ