Wednesday, April 30, 2025
Wednesday, April 30, 2025

ಭ್ರಷ್ಟಾಚಾರ ಯಾವ ರೂಪದಲ್ಲಿದ್ದರೂ ಅಪರಾಧ-ನ್ಯಾ.ಮುಸ್ತಫಾ ಹುಸೇನ್

Date:

ಭ್ರಷ್ಟಾಚಾರ ಯಾವ ರೂಪದಲ್ಲೇ ಇದ್ದರೂ ಅದು ಅಪರಾಧ. ಆದ್ದರಿಂದ ಸರ್ಕಾರಿ ಸೇವಕರು ಮತ್ತು ಸಾರ್ವಜನಿಕರು ಇಬ್ಬರೂ ಲೋಕಾಯುಕ್ತ ಕಾಯ್ದೆ ಬಗ್ಗೆ ತಿಳಿದುಕೊಂಡು, ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್.ಎಸ್.ಎ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕರ್ನಾಟಕ ಲೋಕಾಯುಕ್ತ, ಜಿಲ್ಲಾ ನ್ಯಾಯವಾದಿಗಳ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಇಂದು ಏರ್ಪಡಿಸಲಾಗಿದ್ದ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲಂಚ ಪಡೆಯುವುದು ಮತ್ತು ನೀಡುವುದು, ದುರಾಡಳಿತ ಸೇರಿದಂತೆ ಯಾವುದೇ ರೀತಿಯ ಭ್ರಷ್ಟಾಚಾರ ಅಪರಾಧವಾಗುತ್ತದೆ. ಭ್ರಷ್ಟಾಚಾರ ಕುರಿತು ಅರಿವು ಮೂಡಿಸಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಜಾರಿಗೆ ತಂದಿದೆ. ಆದರೆ ಇದು ಪರಿಣಾಮಕಾರಿಯಾಗಿ ಅನುಷ್ಟಾನಕ್ಕೆ ಬಂದಿಲ್ಲ ಎಂದೆನ್ನಿಸುತ್ತಿದೆ. ಸರ್ಕಾರಿ ನೌಕರರ ಬಗ್ಗೆ ಸಾರ್ವಜನಿಕರು, ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ರೀತಿ ಋಣಾತ್ಮಕ ಅಭಿಪ್ರಾಯವಿದೆ. ಇತ್ತೀಚೆಗೆ ಅನೇಕ ಸಾರ್ವಜನಿಕ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ, ಎಸಿಬಿ ದಾಳಿ ನಡೆಸುತ್ತಿರುವುದನ್ನು ಸಹ ಕಾಣಬಹುದಾಗಿದೆ. ಒಮ್ಮೆ ಈ ಪ್ರಕರಣದೊಳಗೆ ಸಿಲುಕಿಕೊಂಡರೆ 10 ರಿಂದ 15 ವರ್ಷ ವಿಚಾರಣೆ ಇತರೆ ಪ್ರಕ್ರಿಯೆಗಳೆಂದು ಅದೇ ಶಿಕ್ಷೆಯಾಗಿ ಪರಿಣಮಿಸುತ್ತವೆ.

ಸರ್ಕಾರಿ ಅಧಿಕಾರಿಗಳಾಗಿ ಒಳ್ಳೆಯ ಜವಾಬ್ದಾರಿಯುತವಾದ ಸ್ಥಾನದಲ್ಲಿದ್ದೇವೆ. ಸರ್ಕಾರ ನಮಗೆ ಉತ್ತಮ ವೇತನ, ಸೌಲಭ್ಯಗಳ ಜೊತೆಗೆ ನಿವೃತ್ತಿ ಹೊಂದಿದ ನಂತರವೂ ನಮ್ಮ ಕಾಳಜಿ ವಹಿಸುತ್ತಿದೆ. ಯಾವುದೇ ದುರಾಸೆಗೆ ಈಡಾಗದೇ ಬದ್ದತೆಯಿಂದ ಕೆಲಸ ಮಾಡಬೇಕು. ಕೊರೋನಾ ಸಮಯದಲ್ಲಿ ಸಹ ಸರ್ಕಾರ ನಮ್ಮ ಹಿತ ಕಾದಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರು ಮುಂದೆ ಬದುಕುವ ದಾರಿ ತೋರಬೇಕು ಹೊರತು ಸಂಪಾದನೆ ಹಿಂದೆಯೇ ಬೀಳಬಾರದು.

ಅಧಿಕಾರಿಗಳು ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗದೆ, ನಿಯಮಾನುಸಾರ ಸಾರ್ವಜನಿಕರ ಕೆಲಸಗಳನ್ನು ಮಾಡಿದಲ್ಲಿ ಈ ಕಾಯ್ದೆಯ ಉದ್ದೇಶ ಸಾಧಿಸಿದಂತಾಗುತ್ತದೆ ಎಂದು ತಿಳಿಸಿದರು.

 ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಕೇವಲ ಲಂಚ ಪಡೆಯುವುದು, ನೀಡುವುದು ಮಾತ್ರವಲ್ಲ, ದುರಾಡಳಿತ ಮತ್ತು ಕರ್ತವ್ಯಲೋಪ ಸಹ ಭ್ರಷ್ಟಾಚಾರವೆಂದು ಬಹಳ ಜನರಿಗೆ ಅರಿವಿಲ್ಲ. ಉದ್ದೇಶಪೂರ್ವಕವಾಗಿ ಯಾವುದೇ ಕಡತವನ್ನು ಬಾಕಿ ಇಟ್ಟುಕೊಂಡರೆ ಅದು ಕೂಡ ಭ್ರಷ್ಟಾಚಾರ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಎಸಿಬಿ, ಲೋಕಾಯುಕ್ತ, ಸಾಮಾಜಿಕ ಮಾಧ್ಯಮದಂತಹ ಅನೇಕ ಕಾವಲುಗಾರರು ನಮ್ಮ ವ್ಯವಸ್ಥೆಯಲ್ಲಿ ಇದ್ದು, ಎಚ್ಚರಿಕೆಯಿಂದ ಕೆಲಸ ಮಾಡಬೇಕು.


  ಕರ್ತವ್ಯ ನಿರ್ವಹಣೆ ವೇಳೆ ಅನೇಕ ರೀತಿಯ ಬಾಹ್ಯ ಒತ್ತಡಗಳು ಬರಬಹುದು. ಅದನ್ನೆಲ್ಲ ಎದುರಿಸಿ ಕರ್ತವ್ಯ ನಿರ್ವಹಿಸಬೇಕು. ಭ್ರಷ್ಟರಹಿತರಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಕಾಲದಲ್ಲಿ ಸೌಲಭ್ಯಗಳನ್ನು ತಲುಪಿಸಬೇಕು ಎಂದರು.   


 ಚಿತ್ರದುರ್ಗ ವಿಭಾಗದ ಲೋಕಾಯುಕ್ತ ಎಸ್‍ಪಿ ಎನ್.ವಾಸುದೇವರಾಮ್ ಮಾತನಾಡಿ, ಮೊದಲು ನಾವು ಮಾನವರಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು. ಕಾಯ್ದೆ ಪ್ರಕಾರ ಕೇವಲ ಲಂಚ ಮಾತ್ರ ಭ್ರಷ್ಟಾಚಾರ ಅಲ್ಲ. ಕರ್ತವ್ಯ ನಿರ್ಲಕ್ಷ್ಯ, ದುರ್ನಡತೆ ಕೂಡ ಅಪರಾಧ. ಸೇವಾನಿರತರು ಮತ್ತು ನಿವೃತ್ತಿ ಹೊಂದಿದ 3 ವರ್ಷದವರೆಗೂ ಈ ಕಾಯ್ದೆಯಡಿ ಕ್ರಮ ವಹಿಸಬಹುದು. ಆದ ಕಾರಣ ಇಂತಹ ಪ್ರಕರಣಗಳಲ್ಲಿ ಸಿಲುಕಿಕೊಂಡು ತೊಂದರೆಗೀಡಾಗದೇ, ನೊಂದವರು, ಬಡವರಿಗೆ ಮೊದಲ ಪ್ರಾಶಸ್ತ್ಯ ನೀಡಿ ಕರ್ತವ್ಯ ನಿರ್ವಹಿಸುವಂತೆ ಕಿವಿ ಮಾತು ಹೇಳಿದರು.
  ಲೋಕಾಯುಕ್ತ ಉಪ ಅಧೀಕ್ಷಕ ಎನ್.ಮೃತ್ಯುಂಜಯ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತು ಮಾಹಿತಿ ನೀಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಡಳಿತದ ಗುಣಮಟ್ಟವನ್ನು ಸುಧಾರಣೆ ಮಾಡುವುದು ಲೋಕಾಯುಕ್ತ ಕಾಯ್ದೆಯ ಉದ್ದೇಶವಾಗಿದೆ. ಕರ್ತವ್ಯಪ್ರಜ್ಞೆಯಿಂದ ನಿಷ್ಟೆಯಿಂದ ಕರ್ತವ್ಯ ನಿರ್ವಹಿಸಿದಲ್ಲಿ ಸರಳವಾಗಿ ಸೇವೆಯಿಂದ ನಿವೃತ್ತಿಯಾಗಬಹುದು. ಅಸಡ್ಡೆ, ವಿಳಂಬ ಇತರೆ ಕರ್ತವ್ಯಲೋಪವನ್ನೆಸಗಿದರೆ ತೊಂದರೆ ತಪ್ಪಿದ್ದಲ್ಲ. ಆದ್ದರಿಂದ ಎಲ್ಲರೂ ಲೋಕಾಯುಕ್ತ ಕಾಯ್ದೆಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಲೋಕಾಯುಕ್ತ ಕಾಯ್ದೆಯಲ್ಲಿ 26 ಕಲಂ ಗಳಿವೆ.

ಕ್ರಮ, ದೂರು, ಆಪಾದನೆ, ದುರಾಡಳಿತ, ವಿಚಾರಣೆ, ನಡವಳಿಕೆ ನಿಯಮಗಳು ಸೇರಿದಂತೆ ಮುಖ್ಯ ಕಲಂಗಳ ಕುರಿತು ವಿವರಿಸಿದ ಅವರು ಸರ್ಕಾರಿ ಅಧಿಕಾರಿಗಳಿಗೆ ಅಪರಿಚತ, ಬೆದರಿಕೆ ಕರೆಗಳು ಬಂದಾಗ ತೆಗೆದುಕೊಳ್ಳಬೇಕಾದ ಕ್ರಮದ ಕುರಿತೂ ಮಾಹಿತಿ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಜಿ.ಶಿವಮೂರ್ತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜಣ್ಣ ಸಂಕಣ್ಣ, ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಓ ಎಂ.ಎಲ್.ವೈಶಾಲಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Yadav School of Chess Institute ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

Yadav School of Chess Institute ರವೀದ್ರನಗರದ ಯಾದವ ಸ್ಕೂಲ್ ಆಫ್...

Shivaganga Yoga Center ನಗರದ ಅತಿದೊಡ್ಡ ಬಾಡಾವಣೆಗಳಿಗೆ ₹140 ಕೋಟಿ ಅನುದಾನದಿಂದ ಅಭಿವೃದ್ಧಿ- ವಿಶ್ವಾಸ್

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ...

Sarva Samriddhi Sadhana Center ರಿಪ್ಪನ್ ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ ಕೇಂದ್ರದಲ್ಲಿ ಮಕ್ಕಳಿಗಾಗಿ ಸಂಸ್ಕಾರ ಶಿಬಿರ

Sarva Samriddhi Sadhana Center ಹೊಸನಗರದ ರಿಪ್ಪನ್‌ಪೇಟೆ ಮೂಗುಡ್ತಿ ಸರ್ವಸಮೃದ್ಧಿ ಸಾಧನಾ...