ರಾಜ್ಯದಲ್ಲಿ ಹೊಸದಾಗಿ 68 ಎಥೆನಾಲ್ ಘಟಕಗಳನ್ನು ಸ್ಥಾಪಿಸಲು ಮತ್ತು ಪ್ರಸ್ತುತ ಇರುವುದರ ಸಾಮರ್ಥ್ಯ ಹೆಚ್ಚಿಸುವ ಸಂಬಂಧ ಕೇಂದ್ರ ಸರಕಾರದಿಂದ ಅನುಮೋದನೆ ಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿಗಮದ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್ ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ 400 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸುತ್ತಿದ್ದು, ಈಗಾಗಲೇ ಶೇ.10ರಷ್ಟು ಮಿಶ್ರಣದ ಗುರಿ ಸಾಧಿಸಲಾಗಿದೆ. 2025ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶೇ.20ರಷ್ಟು ಮಿಶ್ರಣದ ಗುರಿ ಹೊಂದಿದ್ದಾರೆ. ಇದಕ್ಕೆ ಬೇಕಾಗಿರುವ 900 ಕೋಟಿ ಲೀಟರ್ ಉತ್ಪಾದಿಸುವ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪ್ರಸ್ತುತ ಕಾರ್ಯನಿರತ ಸಕ್ಕರೆ ಕಾರ್ಖಾನೆಗಳಲ್ಲಿ 32 ಕಾರ್ಖಾನೆಗಳಲ್ಲಿ ಎಥೆನಾಲ್ ಉತ್ಪಾದನ ಘಟಕಗಳಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಘಟಕ ಸ್ಥಾಪಿಸುವ ಗುರಿ ಇದೆ ಎಂದರು.
ಎಥೆನಾಲ್ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ರೀತಿಯಲ್ಲಿ ರಾಜ್ಯವೂ ಒಂದು ನೀತಿ ರೂಪಿಸುವ ಅಗತ್ಯವಿದೆ. ಜತೆಗೆ ಮುಂದಿನ ದಿನಗಳಲ್ಲಿ ಪೊಟ್ಯಾಷಿಯಂ ಮಿಶ್ರಣ ಘಟಕಗಳನ್ನು ಸ್ಥಾಪಿಸಿ ವ್ಯಾಪಾರ ವಹಿವಾಟು ಸ್ಥಾಪಿಸುವ ಕುರಿತಂತೆ ಚಿಂತನೆ ನಡೆಸಲಾಗಿದೆ ಎಂದರು.
ಮಹಾಮಂಡಲದ ವ್ಯವಸ್ಥಾಪಕ ನಿರ್ದೇಶಕ ಆರ್. ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು