ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಸದ್ಯ 13,418 ಕ್ಯೂಸೆಕ್ ನೀರು ಡ್ಯಾಂಗೆ ಹರಿದು ಬರುತ್ತಿದೆ. ಕೆಆರ್‌ಎಸ್ ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಸದ್ಯ 109.52 ಅಡಿ ಭರ್ತಿಯಾಗಿದೆ. ಟಿಎಂಸಿ ಪ್ರಮಾಣದಲ್ಲಿ ಕೆಆರ್‌ಎಸ್ ಗರಿಷ್ಠ ಸಾಂದ್ರತೆ 49.452 ಟಿಎಂಸಿ ಇದ್ದರೆ, ಪ್ರಸ್ತುತ 31.242 ಟಿಎಂಸಿಯಷ್ಟು ನೀರು ತುಂಬಿದೆ.
ಶಿವಮೊಗ್ಗ ನಗರದ ಮಧ್ಯ ಭಾಗದಲ್ಲಿ ಹರಿಯುವ ತುಂಗಾ ನದಿಯು ತುಂಬಿ ಹರಿಯುತ್ತಿದೆ. ತುಂಗಾ ನದಿ ಹುಟ್ಟುವ ಪಶ್ಚಿಮ ಘಟ್ಟದ ಶೃಂಗೇರಿ, ಕಿಗ್ಗಾ ಸೇರಿದಂತೆ ಇತರೆ ಕಡೆ ವಿಪರೀತ ಮಳೆಯಾಗುತ್ತಿದೆ. ಇದರಿಂದ ತುಂಗಾ ಅಣೆಕಟ್ಟೆಗೆ ಸುಮಾರು 50 ಸಾವಿರ ಕ್ಯೂಸೆಕ್ ನೀರು ಬರುತ್ತಿದೆ. ಇದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.