ಕರ್ನಾಟಕದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಸಂಭಾವನೆಯನ್ನು ‘ಪರಿಷ್ಕರಣೆ’ ಮಾಡಲಾಗಿದ್ದು, 9,000 ದಿಂದ 12,000 ರೂ.ಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಪ್ರಸಕ್ತ ಸಾಲಿನಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು 3,708 ಅತಿಥಿ ಉಪನ್ಯಾಸಕರ ಸೇವೆಯನ್ನು ಭರ್ತಿ ಮಾಡಲಾಗುತ್ತಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ.
2022-23ನೇ ಶೈಕ್ಷಣಿಕ ಸಾಲಿನಲ್ಲಿ ಬಡ್ತಿ, ವಯೋನಿವೃತ್ತಿ, ನಿಧನ ಹಾಗೂ ಇತರೆ ಕಾರಣಗಳಿಂದ ತೆರವಾಗಿರುವ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳಿಗೆ ಒಟ್ಟು 3708 ಅತಿಥಿ ಉಪನ್ಯಾಸಕರುಗಳನ್ನು ನೇಮಕಾತಿ ಮಾಡಿಕೊಳ್ಳಬೇಕಾಗಿದೆ.
ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಪ್ರತಿಯಾಗಿ ಪ್ರಸಕ್ತ ಸಾಲಿನಲ್ಲೂ 3500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಹಾಗೂ ಆ ಬೋಧಕರ ಸಂಭಾವನೆಯನ್ನು 9 ಸಾವಿರ ರೂ. ನಿಂದ 15 ಸಾವಿರ ರು.ಗೆ ಹೆಚ್ಚಿಸುವಂತೆ ಕೋರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಪಿಯು ಇಲಾಖೆ ನಿರ್ದೇಶಕರಾದ ಆರ್.ರಾಮಚಂದ್ರನ್ 2022-23ನೇ ಸಾಲಿನಲ್ಲಿ ಸರ್ಕಾರಿ ಪಿಯು ಕಾಲೇಜುಗಳಿಗೆ 3500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಹಾಗೂ ಅವರ ಗೌರವ ಧನವನ್ನು 15 ಸಾವಿರ ರು.ಗಳಿಗೆ ಹೆಚ್ಚಿಸಬೇಕೆಂದು ಕೋರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.