Tuesday, March 17, 2026
Tuesday, March 17, 2026
Home Blog Page 1509

ತೀವ್ರ ಮಳೆ ಕಾರಣ ಕೇದಾರನಾಥ್ ಯಾತ್ರೆನಿಲ್ಲಿಸಲಾಗಿದೆ

0

ಸೋನ್ ಪ್ರಯಾಗದಿಂದ ಮುಂದೆ ಭಾರಿ ಮಳೆಯಿಂದಾಗಿ ಕೇದಾರನಾಥ ಯಾತ್ರೆಯನ್ನು ನಿಲ್ಲಿಸಲಾಗಿದೆ. ಅಹಿತಕರ ಘಟನೆಗಳ ಭೀತಿಯ ನಡುವೆ ಯಾತ್ರಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಏತನ್ಮಧ್ಯೆ, ಅಮರನಾಥದ ಬಳಿಯ ನೂರಾರು ಡೇರೆಗಳನ್ನು ಹಠಾತ್ ಪ್ರವಾಹವು ಕೊಚ್ಚಿಕೊಂಡು ಹೋದ ನಂತರ ಹದಿನಾರು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಹಿಮಾಲಯದ ಪರ್ವತದ ಗುಹೆಯಲ್ಲಿ ನೆಲೆಗೊಂಡಿರುವ ದೂರದ ಅಮರನಾಥ ದೇವಾಲಯದ ಹತ್ತಿರ ಸುಮಾರು 10,000 ಜನರು ಬೀಡುಬಿಟ್ಟಿದ್ದರು. ಆಗ ಇದ್ದಕ್ಕಿದ್ದಂತೆ ಮೇಘಸ್ಫೋಟವು ಪ್ರಳಯಕ್ಕೆ ಕಾರಣವಾಯಿತು.

ಹೆಲಿಕಾಫ್ಟರ್ ವಿಮಾನಗಳು ಸಾವನ್ನಪ್ಪಿದವರನ್ನು ಸ್ಥಳಾಂತರಿಸೋ ಕಾರ್ಯದಲ್ಲಿ, ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಅಜ್ಞಾತ ಸಂಖ್ಯೆಯ ಭಯಭೀತರಾದ ಮತ್ತು ಗಾಯಗೊಂಡ ಯಾತ್ರಾರ್ಥಿಗಳು ದೇವಾಲಯದ ಉತ್ತರಕ್ಕಿರುವ ಬಾಲ್ಟಾಲ್ ಬೇಸ್ ಕ್ಯಾಂಪ್ನಿಂದ ಹೊರಟಿದ್ದರು.ನಾವು ಇಲ್ಲಿಯವರೆಗೆ 16 ಶವಗಳನ್ನು ಕಂಡುಕೊಂಡಿದ್ದೇವೆ. ಕನಿಷ್ಠ 40 ಮಂದಿ ಕಾಣೆಯಾಗಿದ್ದಾರೆ ಎಂದು ರಾಜ್ಯ ವಿಪತ್ತು ಸ್ಪಂದನಾ ಏಜೆನ್ಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಮ್ಮ ದೇಶ,ಭಾಷೆ & ಧರ್ಮದ ಬಗ್ಗೆ ಎಲ್ಲರೂ ಹೆಮ್ಮೆಪಡಬೇಕು- ವೆಂಕಯ್ಯ ನಾಯ್ಡು

0

ಜಾತ್ಯತೀತತೆ ಮತ್ತು ಇತರರ ನಂಬಿಕೆಗಳ ಬಗ್ಗೆ ಸಹಿಷ್ಣುತೆ ಹೊಂದಿರುವುದು ಭಾರತೀಯ ನೈತಿಕತೆಯ ಪ್ರಮುಖ ಸಾರವಾಗಿದೆ. ದೇಶದ ಪ್ರತಿಯೊಬ್ಬರಲ್ಲಿಯೂ ಜಾತ್ಯತೀತತೆ ಎಂಬುದು ರಕ್ತಗತವಾಗಿಯೇ ಬರುತ್ತದೆ. ಇದು ಯಾವುದೇ ಸರ್ಕಾರ ಮತ್ತು ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಂಸ್ಥೆಯ ವಜ್ರ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಯಾವುದೇ ದೇಶಗಳ ಮೇಲೆ ದಾಳಿ ನಡೆಸದೆ ಸಹಿಷ್ಣುತಾ ಮನೋಭಾವದಿಂದ ಇರುವುದು ದೇಶದ ಹಿರಿಮೆ ಮತ್ತು ಶ್ರೀಮಂತಿಕೆಯಾಗಿದೆ. ಇದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ತೋರಿಸುತ್ತದೆ ಎಂದು ಹೇಳಿದರು.

ದೇಶದಲ್ಲಿ ಧರ್ಮ ಪ್ರತಿಯೊಬ್ಬರ ವೈಯಕ್ತಿಕ ವಿಚಾರವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಯಾರೊಬ್ಬರು ತಮ್ಮ ಧರ್ಮದ ಬಗ್ಗೆ ಹೆಮ್ಮೆ ಪಡಬಹುದು ಮತ್ತು ಆಚರಣೆ ಮಾಡಬಹುದು. ಆದರೆ, ಇತರರ ಧಾರ್ಮಿಕ ನಂಬಿಕೆಗಳನ್ನು ಅವಹೇಳನ ಮಾಡುವ ಹಕ್ಕು ಯಾರಿಗೂ ಇಲ್ಲ. ಕೆಲವು ಘಟನೆಗಳು ದೇಶದ ಬಹುತ್ವ ಮತ್ತು ಒಳಗೊಳ್ಳುವಿಕೆಯ ಮೌಲ್ಯಗಳ ಬದ್ಧತೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ನಾವು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಅವರು ಹೇಳಿದರು ಮತ್ತು ಪ್ರತಿಯೊಬ್ಬರೂ ತಮ್ಮ ದೇಶ, ಭಾಷೆ ಮತ್ತು ಧರ್ಮದ ಬಗ್ಗೆ ಹೆಮ್ಮೆ ಪಡಬೇಕು. ಪಾಶ್ಚಿಮಾತ್ಯ ಮಾಧ್ಯಮಗಳು ಭಾರತದ ಸಾಧನೆಗಳನ್ನು ನಿರ್ಲಕ್ಷಿಸುವಾಗ ಅದರ ಮೇಲೆ ನಕಾರಾತ್ಮಕ ಕಥೆಗಳನ್ನು ಹೇಳುವ ಅಭ್ಯಾಸವನ್ನು ಹೊಂದಿವೆ ಎಂದು ಅವರು ಹೇಳಿದರು.

ದೇಶದಲ್ಲಿ ಬಡತನ, ಲಿಂಗ ಅಸಮಾನತೆ ಮತ್ತು ಸಾಮಾಜಿಕ ಅಸಮಾನತೆಯಂತಹ ಹಲವಾರು ಸಮಸ್ಯೆಗಳಿವೆ ಎಂದು ವೆಂಕಯ್ಯನಾಯ್ಡು ಒಪ್ಪಿಕೊಂಡರು.

ಇಂಗ್ಲೆಂಡ್ ವಿರುದ್ಧ ಟಿ20 ಕ್ರಿಕೆಟ್ ಭಾರತಕ್ಕೆ ಸರಣಿ ಕೈವಶ

0

ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಭಾರತ ತಂಡವು 49 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.ಆ ಮೂಲಕ 2-0 ಅಂತರದಲ್ಲಿ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಇಂಗ್ಲೆಂಡ್ ತಂಡವು ಭಾರತ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು.ಭಾರತದ ಪರವಾಗಿ ರವಿಂದ್ರ ಜಡೇಜಾ 46, ರೋಹಿತ್ ಶರ್ಮಾ 31, ಹಾಗೂ ರಿಶಬ್ ಪಂತ್ 26 ರನ್ ಗಳ ನೆರವಿನಿಂದಾಗಿ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು.ಇಂಗ್ಲೆಂಡ್ ತಂಡದ ಪರವಾಗಿ ಕ್ರಿಸ್ ಜೋರ್ಡಾನ್ 4 ಹಾಗೂ ರಿಚರ್ಡ್ ಗ್ಲೀಸನ್ 3 ವಿಕೆಟ್ ಗಳನ್ನು ಕಬಳಿಸುವ ಮೂಲಕ ಗಮನ ಸೆಳೆದರು.

ಭಾರತ ತಂಡವು ನೀಡಿದ 171 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು ಆರಂಭದಲ್ಲಿಯೇ ಭುವನೇಶ್ವರ ಕುಮಾರ್ ಅವರ ಮಾರಕ ದಾಳಿಗೆ ತತ್ತರಿಸಿತು, ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಅವರ ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರಿ ಆಘಾತ ನೀಡಿದರು.

ಇದಾದ ನಂತರ ಇಂಗ್ಲೆಂಡ್ ಚೇತರಿಸಿಕೊಳ್ಳಲೇ ಇಲ್ಲಾ, ಮಧ್ಯಮ ಕ್ರಮಾಂಕದಲ್ಲಿ ಮೊಯಿನ್ ಅಲಿ ಹಾಗೂ ಡೇವಿಡ್ ವಿಲ್ಲೆ ಕ್ರಮವಾಗಿ 35, 33 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರನು ಸಹಿತ ಅಂತಹ ನಿರೀಕ್ಷಿತ ಪ್ರದರ್ಶನವನ್ನು ನೀಡಲಿಲ್ಲ. ಇದರಿಂದಾಗಿ 17 ಓವರ್ ಗಳಲ್ಲಿ ಕೇವಲ 121 ರನ್ ಗಳಿಗೆ ಇಂಗ್ಲೆಂಡ್ ತಂಡವು ಸರ್ವಪತನವನ್ನು ಕಂಡಿತು.

ಭಾರತದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಭುವನೇಶ್ವರ ಕುಮಾರ್ ಮೂರು ವಿಕೆಟ್, ಹಾಗೂ ಬುಮ್ರಾ ಮತ್ತು ಚಹಾಲ್ ತಲಾ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.

ಆಗುಂಬೆ ಘಾಟಿಯಲ್ಲಿ ಮರವುರುಳಿ ಸಂಚಾರ ಸ್ಥಗಿತ

0

ಆಗುಂಬೆ ಘಾಟಿನಲ್ಲಿ ಬೃಹತ್ ಮರಯೊಂದು ರಸ್ತೆಗೆ ಬಿದ್ದ ಕಾರಣ ಸಂಚಾರ ಸ್ಥಗಿತಗೊಂಡಿದೆ. ಆಗುಂಬೆ ಘಾಟಿಯ 10ನೇ ತಿರುವಿನಲ್ಲಿ ಗುಡ್ಡ ಕುಸಿತ ಸಂಭವಿಸಿದೆ.

ಶಿವಮೊಗ್ಗ-ತೀರ್ಥಹಳ್ಳಿ ಸಂಪರ್ಕ ಕಡಿತಗೊಂಡಿದೆ. ಮಲೆನಾಡಿನಲ್ಲಿ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಆಗುಂಬೆ ಘಾಟಿನಲ್ಲಿ ಗುಡ್ಡ ಕುಸಿತ ಸಂಭವಿಸಿದೆ.

ಅಮರನಾಥ್ ಪ್ರವಾಸಿಗಳ ಕುಟುಂಬಸ್ಥರಿಗೆ ರಾಜ್ಯದ ತುರ್ತು ಸಹಾಯವಾಣಿ

0

ವಿಜಯಪುರ ಜಿಲ್ಲೆಯ ಯಾರಾದರು ಅಮರನಾಥ ಗುಹಾ ದೇವಾಲಯ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದರೆ ಅವರ ಸಂಬಂಧಿಕರು ಕರ್ನಾಟಕ ರಾಜ್ಯದ ತುರ್ತು ಸಹಾಯವಾಣಿ ಸಂಖ್ಯೆ 080-1070,22340676 ಅಥವಾ ಇನ್ನೀತರ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳದಲ್ಲಿ ಎನ್ ಡಿ ಆರ್ ಫ್, ಐಟಿಬಿಪಿ, ಭಾರತೀಯ ಸೇನೆ, ಸಿಆರ್ ಪಿ ಎಪ್, ಬಿಎಸ್‌ಎಫ್ ಎಸ್ಡಿಆರ್ ಎಫ್ ಸೇರಿದಂತೆ ಅನೇಕ ಪಡೆಗಳಿಂದ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಲ್ಲಿ ಸಿಕ್ಕಿಬಿದ್ದವರಿಗೆ ಸಹಾಯ ಒದಗಿಸಲು ಪರಿಹಾರ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಅಮರನಾಥ ಪ್ರದೇಶದ ಬಳಿ ಕರ್ನಾಟಕದ ಯಾವುದೇ ಸಿಕ್ಕಿಬಿದ್ದ ವ್ಯಕ್ತಿ ಸಹಾಯಕ್ಕಾಗಿ ಕರ್ನಾಟಕ ರಾಜ್ಯದ ತುರ್ತು ಸಹಾಯವಾಣಿ ಸಂಖ್ಯೆ 080-1070, 22340676 ಅಥವಾ ಎನ್ ಡಿ ಆರ್ ಎಫ್ ಸಹಾಯವಾಣಿ ಸಂಖ್ಯೆ 011-23438252 ಅಥವಾ 011-23438253, ಕಾಶ್ಮೀರ ವಿಭಾಗೀಯ ಸಹಾಯವಾಣಿ 0194-2469240, ದೇಗುಲ ಮಂಡಳಿಯ ಸಹಾಯವಾಣಿ 0194-2313149 ಅಥವಾ ಪೊಲೀಸ್ ನಿಯಂತ್ರಣ ಕೊಠಡಿ ಅನಂತನಾಗ್ ಸಂಖ್ಯೆ 9596777669 ಅಥವಾ ಪೊಲೀಸ್ ನಿಯಂತ್ರಣ ಕೊಠಡಿ ಪಹಲಗಮ್ 9596779039 ಅಥವಾ ರೆಸಿಡೆಂಟ್ ಕಮಷನರ್ ಆಫೀಸ್ 011-24103701, 24103702 ಅಥವಾ ಕರ್ನಾಟಕ ಭವನ ನವದೆಹಲಿ ಸಂಖ್ಯೆ 011-26115515, 011-26117666 ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತರಾದ ಮನೋಜ ರಾಜನ್ ಅವರು ತಿಳಿಸಿದ್ದಾರೆ.

ಈ ಸಹಾಯವಾಣಿ ಸಂಖ್ಯೆ ಬಳಸಿ ಮಾಹಿತಿ ನೀಡಿದಲ್ಲಿ ಅವರ ಸುರಕ್ಷತೆ ಮತ್ತು ಸುರಕ್ಷಿತ ವಾಪಸಾತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಜೆಂಟ್ಸ್ ಕ್ಲಿನಿಕ್; ರಾಜ್ಯದಲ್ಲಿ ಪ್ರಥಮ ಪ್ರಯೋಗ- ಅಶ್ವತ್ಥನಾರಾಯಣ

0

ಅನೇಕ ಬಗೆಯ ಸಂಕೀರ್ಣ ಅನಾರೋಗ್ಯಗಳಿಂದ ನರಳುತ್ತಿರುವ ಪುರುಷರಿಗೆ ಪ್ರತ್ಯೇಕವಾಗಿ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವ ಸೌಲಭ್ಯವನ್ನು ಸದ್ಯದಲ್ಲೇ ಮಲ್ಲೇಶ್ವರಂ ಕ್ಷೇತ್ರದ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತದೆ ಎಂದು ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ.

ದೇಶದಲ್ಲೇ ಅನನ್ಯವಾದ ಪುರುಷರಿಗೆ ಪ್ರತ್ಯೇಕವಾದ ವೈದ್ಯಕೀಯ ಪರೀಕ್ಷಾ ಸೇವಾ ಸೌಲಭ್ಯವನ್ನು ಆರಂಭಿಸುವ ಕುರಿತು ಅಂಕುರ ಹೆಲ್ತ್ ಕೇರ್ ನ ಡಾ.ವಾಸನ್ ಅವರ ಜೊತೆ ಸಚಿವರು ಮಾತುಕತೆ ನಡೆಸಿದರು.

ಈ ಬಗ್ಗೆ ಮಾತನಾಡಿದ ಸಚಿವರು, ಪುರುಷರೂ ಅನೇಕ, ಅನಾರೋಗ್ಯ ಸಮಸ್ಯೆಗನ್ನು ಎದುರಿಸುತ್ತಿರುತ್ತಿರುತ್ತಾರೆ. ಆದರೆ ಇವರಲ್ಲಿ ಹೆಚ್ಚಿನವರು ಆಸ್ಪತ್ರೆಗೇ ಬರುವುದಿಲ್ಲ. ಹೀಗಾಗಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದಡಿಯಲ್ಲಿ ಈ ವಿನೂತನ ಯೋಜನೆಯನ್ನು ಎರಡೂ ಕಡೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ಇದಕ್ಕೆ ಸಿಕ್ಕುವ ಸ್ಪಂದನವನ್ನು ಆಧರಿಸಿ ಮುಂಬರುವ ದಿನಗಳಲ್ಲಿ ಇದನ್ನು ಎಲ್ಲೆಡೆಗೂ ವಿಸ್ತರಿಸಲಾಗುವುದು. ಈ ಯೋಜನೆಯಡಿ ಅಂಕುರ ಹೆಲ್ತ್ ಕೇರ್ ನ ಡಾ.ವಾಸನ್ ಅವರು ವೈದ್ಯಕೀಯ ಪರೀಕ್ಷೆಗಳ ಸೌಲಭ್ಯ ಕಲ್ಪಿಸುತ್ತಾರೆ ಎಂದಿದ್ದಾರೆ.

ಮಧುಮೇಹ, ಕ್ಯಾನ್ಸರ್, ನರಕ್ಕೆ ಸಂಬಂಧಿಸಿದ ಕಾಯಿಲೆಗಳು, ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಪುರುಷರನ್ನು ಹೆಚ್ಚಾಗಿ ಕಾಡುತ್ತಿವೆ. ಇದರ ಜತೆಗೆ ಒತ್ತಡದ ಜೀವನ, ಧೂಮಪಾನ, ಮದ್ಯಪಾನ, ಅವೈಜ್ಞಾನಿಕ ಆಹಾರ ಸೇವನೆಯ ಕ್ರಮ ಇತ್ಯಾದಿಗಳೂ ಪುರುಷರ ಅನಾರೋಗ್ಯಕ್ಕೆ ಕಾರಣಗಳಾಗಿವೆ. ಈಗ ಕೈಗೆತ್ತಿಕೊಂಡಿರುವ ಯೋಜನೆಯಲ್ಲಿ ಜೀವನಶೈಲಿ ಮತ್ತು ಆಹಾರ ಸೇವನೆಗೆ ಸಂಬಂಧಿಸಿದ ದೋಷಗಳನ್ನು ಪರಿಹರಿಸಲು ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಕುಟುಂಬಗಳಿಗೆ ಪುರುಷರೇ ಆಧಾರಸ್ತಂಭದಂತೆ ಇರುತ್ತಾರೆ. ಆದ್ದರಿಂದ ಇಂತಹ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಇದರಿಂದಾಗಿ ಸಂಭವನೀಯ ಅನಾರೋಗ್ಯವು ಸೃಷ್ಟಿಸುವ ಆರ್ಥಿಕ ಹೊರೆ ಮತ್ತಿತರ ಸಮಸ್ಯೆಗಳಿಂದ ಪಾರಾಗಬಹುದು ಎಂದು ಸಚಿವರು ವಿವರಿಸಿದ್ದಾರೆ.

ಮೆದುಳಿನ ರಕ್ತನಾಳಕ್ಕೆ ಹಾನಿ: ಕೊರೋನ ವೈರಸ್ ಕರಾಳ ಮುಖ

0

ಮಹಾಮಾರಿ ಕೊರೋನಾ ವೈರಸ್ ರಣಕೇಕೆಯೂ 2 ವರ್ಷಗಳ ಕಾಲ ಜಗತ್ತಿನ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಡೆಡ್ಲಿ ಕಿಲ್ಲರ್‌ ವೈರಸ್ ಮತ್ತೆ ಹರಡಲಾರಂಭಿಸಿದೆ.

4ನೇ ಅಲೆ ಭೀತಿ ಆರಂಭವಾಗಿದೆ. ಈ ಹಿಂದೆ ಕೊರೋನಾ ಬಾಧಿತರಾದ ವ್ಯಕ್ತಿಗಳಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚು ಎನ್ನಲಾಗಿತ್ತು.

ಇದೀಗ ವಿಜ್ಞಾನಿಗಳು ಮತ್ತೊಂದು ಸಂಶೋಧನೆಯನ್ನು ನಡೆಸಿದ್ದಾರೆ.

ಕೊರೋನಾ ವೈರಸ್‌ ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರದೆ ರಕ್ತನಾಳಗಳ ಮೇಲೆ ಪರಿಣಾಮ ಬೀರಿರುವುದನ್ನು ಪತ್ತೆಯನ್ನು ಅಮೆರಿಕದ ರಾಷ್ಟ್ರೀಯ ಆರೋಗ್ಯ ವಿಜ್ಞಾನಿಗಳ ಸಂಸ್ಥೆಯ ಅಂಗಸಂಸ್ಥೆಯಾದ ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ನ್ಯೂರೋಲಾಜಿಕಲ್‌ ಡಿಸಾರ್ಡರ್ಸ್‌ ಆಂಡ್‌ ಸ್ಟ್ರೋಕ್‌ ಸಂಸ್ಥೆಯ ವಿಜ್ಞಾನಿಗಳು ಮಾಡಿದ್ದಾರೆ.

SARS-CoV-2, ಕೊರೋನಾ ವೈರಸ್ ಗೆ ಕಾರಣವಾಗುವ ವೈರಸ್ ನೇರವಾಗಿ ಮೆದುಳಿನ ಮೇಲೆ ಪರಿಣಾಮ ಬೀರುವುದಿಲ್ಲ. ಸೋಂಕಿನಿಂದ ಮೆದುಳಿನ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ

ಇದು ಅಲ್ಪಾವಧಿಯ ಹಾಗೂ ದೀರ್ಘಾವಧಿಯ ನರರೋಗಲಕ್ಷಣಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

ಕೊರೋನಾ ವೈರಸ್‌ ರೋಗಿಯ ಮೆದುಳಿನಲ್ಲಿ ಪತ್ತೆಯಾಗಿಲ್ಲ ಎನ್ನವ ವಾದಕ್ಕೆ ಬದ್ಧವಾಗಿರುವ ಸಂಸ್ಥೆ, ಕೊರೋನಾ ತಡೆಗಟ್ಟಲು ತಯಾರಾಗುವ ಪ್ರತಿಕಾಯಗಳ ಅಸಮತೋಲನದಿಂದ ವೈರಸ್‌ ರಕ್ತ ಹಾಗೂ ಮೆದುಳಿನ ನಡುವಿನ ಕೋಶಗಳ ಮೇಲೆ ದಾಳಿ ಮಾಡಬಹುದು. ಅಲ್ಲದೆ ಅಲ್ಲಿರುವ ಎಂಡೋಥೀಲಿಯಮ್‌ ಕೋಶಗಳು ರಕ್ತ ಹಾಗೂ ಮೆದುಳಿನ ನಡುವೆ ತಡೆಗೋಡೆಯಂತಿದೆ.ಅಗತ್ಯ ವಸ್ತುಗಳು ಮಾತ್ರ ಮೆದುಳಿಗೆ ಪ್ರವೇಶಿಸುವಂತೆ ಮಾಡುತ್ತದೆ.

ಆದರೆ, ಈ ಕೋಶಗಳ ಮೇಲೆ ಕೊರೋನಾ ವೈರಸ್‌ ದಾಳಿಯಾದಾಗ ರಕ್ತದಲ್ಲಿನ ಪ್ರೊಟೀನ್‌ ಅಂಶ ಸೋರಿಕೆಯಾಗುವ ಮೂಲಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಇರುತ್ತದೆ ಎನ್ನುತ್ತದೆ ಸಂಶೋಧಕರ ತಂಡ.
ಕೊರೋನಾದಿಂದ ಸಾವನ್ನಪ್ಪಿದ 9 ಜನರ ಮೆದುಳಿನ ರಕ್ತನಾಳಗಳನ್ನು ಪರೀಕ್ಷೆಗೆ ಒಳಪಡಿಸಿದ ವಿಜ್ಞಾನಿಗಳ ತಂಡ ಮೆದುಳಿನ ರಕ್ತನಾಳಗಳ ಕೋಶಗಳ ಮೇಲೆ ಕೋವಿಡ್‌ ಆಂಟಿ ಬಾಡೀಸ್‌ ದಾಳಿಯಾಗಿರುವುದನ್ನು ಪತ್ತೆ ಮಾಡಿದ್ದಾರೆ. ಈ ಮೂಲಕ ಮಾರಕ ಕೊರೋನಾ ವೈರಸ್‌ ರಕ್ತನಾಳಗಳನ್ನು ಹಾನಿಗೊಳಿಸುತ್ತವೆ ಎಂದು ಹೇಳಿದ್ದಾರೆ.

ವೈರಸ್‌ಗಳ ಮೆದುಳಿನಲ್ಲಿನ ರಕ್ತನಾಳಗಳ ಜೀವಕೋಶಗಳ ಮೇಲಿನ ದಾಳಿಯಿಂದ, ಉರಿಯೂತ ಮತ್ತು ಹಾನಿಯನ್ನು ಉಂಟುಮಾಡುತ್ತವೆ. ಎಂಡೋಥೀಲಿಯಮ್‌ ಕೋಶಗಳು ಕ್ರಿಯಾಶೀಲವಾದಾಗ ಪ್ಲೇಟ್‌ಲೇಟ್‌ಗಳು ರಕ್ತನಾಳಗಳ ಗೋಡೆಗೆ ಅಂಟಿಕೊಳ್ಳುತ್ತವೆ. ಇದರಿಂದಾಗಿ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುತ್ತದೆ. ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಾದಾಗ ಸೋರುವಿಕೆಗೆ ಕಾರಣವಾಗುತ್ತದೆ.

ಮೆದುಳಿನಲ್ಲಿ ಸೋರುವಿಕೆ ಉಂಟಾದರೆ ಹಾನಿಯನ್ನು ಸರಿಪಡಿಸಲು ಮ್ಯಾಕ್ರೊಫೇಗಸ್‌ ಎನ್ನುವ ಇಮ್ಯೂಮ್‌ ಕೋಶಗಳು ನೆರವಾಗುತ್ತವೆ. ಇದರಿಂದಾಗಿ ತಲೆಯಲ್ಲಿ ಉರಿಯೂತ ಮತ್ತು ನರಗಳಿಗೆ ಹಾನಿಯಾಗುತ್ತದೆ. ಹೀಗಾಗಿ ಮೆದುಳಿಗೆ ಹಾನಿಯಾಗುತ್ತದೆ. ಇದರ ಹೊರತಾಗಿ ಕೊರೋನಾ ವೈರಸ್‌ಗಳು ನೇರವಾಗಿ ಮೆದುಳಿನ ಮೇಲೆ ದಾಳಿ ಮಾಡುವುದಿಲ್ಲ ಎಂದು ಎನ್‌ಐಎನ್‌ಡಿಎಸ್‌ ಕ್ಲಿನಿಲ್‌ ಡೈರೆಕ್ಟರ್‌ ಅವೀಂದ್ರನಾಥ್‌ ಹೇಳಿದ್ದಾರೆ

ಚೀನಾದಲ್ಲಿ ಅನೂಹ್ಯ ಪರಿಸರ ಪತ್ತೆಮಾಡಿದ ಸಂಶೋದನಾ ತಂಡ

0

ಭೂಮಿಯ ಮೇಲೆ ಶೇ.71ರಷ್ಟು ಭಾಗ ನೀರು, ಉಳಿದ ಭಾಗ ಭೂಮಿ ಇದೆ. ಆದರೆ, ಅದೆಷ್ಟೇ ಮುಂದುವರೆದರೂ ಇದುವರೆಗೆ ಮಾನವರು ಭೂಮಿಯ ಹಲವು ಭಾಗಗಳನ್ನು ತಲುಪಲು ಸಾಧ್ಯವಾಗಿಲ್ಲ. ಈಗ ಮಾನವರು ತುಂಬಾ ಹೈಟೆಕ್ ಆಗಿದ್ದಾರೆ. ಆದ್ದರಿಂದ, ಇಲ್ಲಿಯವರೆಗೆ ಯಾರೂ ತಲುಪಲು ಸಾಧ್ಯವಾಗದ ಅನೇಕ ಸ್ಥಳಗಳನ್ನು ಕಂಡುಹಿಡಿಯುತ್ತಿದ್ದಾರೆ.

ಆ ಸ್ಥಳಗಳಲ್ಲಿ ಗೊತ್ತೇ ಇರದ ಅದೆಷ್ಟೋ ರಹಸ್ಯಗಳು ಹೊರಬರುತ್ತಿವೆ. ಭಾರತದ ನೆರೆಯ ದೇಶವಾದ ಚೀನಾದಲ್ಲಿ ಮತ್ತೊಂದು ಜಗತ್ತು ಪತ್ತೆಯಾಗಿದೆ. ಪ್ರಥಮ ಬಾರಿಗೆ ಮಾನವ ಇಲ್ಲಿಗೆ ಭೇಟಿ ನೀಡಿದ್ದಾನೆ.

ಈಗ, ಸಂಪೂರ್ಣ ಮರಗಳಿಂದ ಆವೃತವಾಗಿದ್ದ ಭಾರತದ ನೆರೆಯ ಚೀನಾದ ಅರಣ್ಯದಲ್ಲಿ ಬೃಹತ್ ಹೊಂಡ ಪತ್ತೆಯಾಗಿದೆ. ಹಲವು ಜನರು ಇದನ್ನು ಮತ್ತೊಂದು ಜಗತ್ತು ಎಂದು ಪರಿಗಣಿಸಿದ್ದಾರೆ.

ಮತ್ತೊಂದು, ವಿಶೇಷವೆಂದರೆ ಸೂರ್ಯನ ಬೆಳಕು ಕೂಡ ಇಲ್ಲಿಗೆ ಬೀಳುವುದಿಲ್ಲ. ಇತ್ತೀಚೆಗೆ ಒಂದು ತಂಡ ಇಲ್ಲಿಗೆ ಭೇಟಿ ನೀಡಿದೆ. ಇದರಿಂದಾಗಿ ಈ ಸ್ಥಳ ತನ್ನೊಳಗೆ ಹುದುಗಿರುವ ರಹಸ್ಯಗಳು ಬಹಿರಂಗಗೊಂಡಿವೆ.

ಚೀನಾದ ಮಾಧ್ಯಮಗಳ ಪ್ರಕಾರ, ಈ ದೈತ್ಯ ಕುಳಿಯು 630 ಅಡಿಗಳಷ್ಟಿದೆ. ಇದು ಲೇ ಕೌಂಟಿಯ ಕಾಡುಗಳಲ್ಲಿ ಅಡಗಿದೆ. ಸ್ಥಳೀಯರು ಇದನ್ನು ಶೆನ್ಯಿಂಗ್ ಟಿಯಾನ್ಚೆಂಗ್ ಎಂದು ಕರೆಯುತ್ತಾರೆ. ಇದು ಇತರ ಪ್ರಪಂಚದೊಂದಿಗೆ ಸಂಪರ್ಕಿಸುತ್ತದೆ. ಜೊತೆಗೆ ಇದು ಅಂತ್ಯವಿಲ್ಲದಷ್ಟು ಆಳವಾಗಿದೆ ಎಂದು ನಂಬಲಾಗಿದೆ. ಆದರೆ, ಈಗ ಒಬ್ಬ ವ್ಯಕ್ತಿ ಒಳಗೆ ಪ್ರವೇಶಿಸಿ ಹೊರಬಂದಾಗ, ಇದರಲ್ಲಿ ಅಡಗಿದ್ದ ರಹಸ್ಯಗಳು ಹೊರಬಂದಿವೆ.

ಮೇ 6 ರಂದು ಚೆನ್ ಲಿಕ್ಸಿನ್ ಈ ಹೊಂಡದೊಳಗೆ ಹೋಗಿದ್ದರು ಎಂದು ವರದಿ ತಿಳಿಸಿದೆ. ಅವರೊಂದಿಗೆ ಅವರ ತಂಡವೂ ಇತ್ತು. ಇದರ ಅಗಲವು 490 ಅಡಿಗಳು, ಆದರೆ ತಂಡವು ಅದರೊಳಗೆ ಹೋಗಲು ಮೂರು ವಿಭಿನ್ನ ಮಾರ್ಗಗಳನ್ನು ಕಂಡುಕೊಂಡಿದೆ. ಸಂಶೋಧನೆಗಾಗಿ ಅವರು ಅದರೊಳಗೆ ಸಾಕಷ್ಟು ಫೋಟೋಗಳನ್ನು ತೆಗೆದಿದ್ದಾರೆ. ಆದರೆ, ಅದರಲ್ಲಿ ಯಾವುದೇ ಅನುಮಾನಾಸ್ಪದ ಅಂಶ ಪತ್ತೆಯಾಗಿಲ್ಲ.

ಹೊಂಡದೊಳಗೆ 130 ಅಡಿ ಎತ್ತರದ ಮರಗಳಿವೆ. ಅದರೊಳಗೆ ಹೋಗುವ ಮಾರ್ಗದ ಕಡೆಗೆ ವಾಲಿದ್ದು, ಇದರಿಂದ ಸೂರ್ಯನ ಬೆಳಕು ಒಳಗೆ ತಲುಪುವುದಿಲ್ಲ ಎಂದು ಈ ಹೊಂಡ ಪತ್ತೆ ಮಾಡಿದ ತಂಡ ತಿಳಿಸಿದೆ. ಈ ಪ್ರದೇಶವು ಅಂತಹ ಹೊಂಡಗಳಿಂದ ತುಂಬಿದೆ. ಇಲ್ಲಿಯವರೆಗೆ ಒಟ್ಟು 30 ಸಿಂಕ್‌ಹೋಲ್‌ಗಳು ಅಂದರೆ ದೈತ್ಯ ಹೊಂಡಗಳನ್ನು ಕಂಡುಹಿಡಿಯಲಾಗಿದೆ. ಮಾನವರಿಗೆ ತಿಳಿದಿಲ್ಲದ ಕೆಲವು ಹೊಸ ಜಾತಿಯ ಮರಗಳು ಅಲ್ಲಿವೆ ಎಂದು ತಂಡವು ಭಾವಿಸುತ್ತದೆ.

ಈ ದೈತ್ಯ ಹೊಂಡಗಳು ಹೇಗೆ ರೂಪುಗೊಂಡವು ಎಂಬುದು ಇನ್ನೂ ತಿಳಿದಿಲ್ಲವಾದರೂ, ತಜ್ಞರು ಒಂದು ಆಳವಾದ ಸಂಶೋದನೆ ಇಲ್ಲಿ ಮುಖ್ಯವಾಗಿದೆ ಎಂದು ಪರಿಗಣಿಸುತ್ತಿದ್ದಾರೆ. ಅವರ ಪ್ರಕಾರ, ನೀರಿನ ಹರಿವಿನಿಂದಾಗಿ, ಪರ್ವತಗಳು ಒಳಗೆ ಮುಳುಗಿರಬೇಕು, ನಂತರ ಈ ಸ್ಥಳವು ಹಳ್ಳವಾಗಿ ಮಾರ್ಪಟ್ಟಿದೆ. ಆದಾಗ್ಯೂ, ಈ ಬಗ್ಗೆ ಇನ್ನೂ ಸಂಶೋಧನೆ ಅಗತ್ಯವಿದೆ.

ಸಭೆಗೆ ಗೈರಾದ ಅಧಿಕಾರಿ ಬಗ್ಗೆ ತೀವ್ರ ಕ್ರಮ-ಸಚಿವ ನಾರಾಯಣ ಸ್ವಾಮಿ

0

ಮತ್ತೆ ಸಂಸದನಾಗುವ ಆಸೆ ನನಗಿಲ್ಲ. ಇದೇ ಆಡಳಿತ ವ್ಯವಸ್ಥೆ ಮುಂದುವರಿದರೆ ಜನ ಬೀದಿಗೆ ಬೀಳುತ್ತಾರೆ. ಉದ್ದಟತನದ ಪರಮಾವಧಿ ತಲುಪಿರುವ ಅಧಿಕಾರಿಗಳಿಗೆ ಪ್ರಜಾಪ್ರಭುತ್ವ ಏನು ಎಂಬುದನ್ನು ತೋರಿಸುವೆ ನಿದ್ದೆಯಲ್ಲಿಯೂ ಕಾಡುವೆ ಎಂದು ಸಚಿವ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ಮಾಹಿತಿ ಪಡೆಯುವ ವೇಳೆ ಹೊಸದುರ್ಗ ಭದ್ರಾ ಮೇಲ್ದಂಡೆ ವಿಭಾಗದ ಎಂಜಿನಿಯರ್‌ ಸಭೆಯಲ್ಲಿ ಇರಲಿಲ್ಲ. ಇದರಿಂದ ಕೆಂಡಾಮಂಡಲರಾದ ಸಚಿವರು ಸಭೆಗೆ ಗೈರು ಹಾಜರಾದವರಿಗೆ ನೋಟಿಸ್‌ ನೀಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು. ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ವರದಿ ರವಾನಿಸಿ ಶಿಸ್ತುಕ್ರಮಕ್ಕೆ ಸೂಚಿಸಿದ್ದಾರೆ.

ನನ್ನ ಆಡಳಿತ ವೈಖರಿ ಭಿನ್ನ. ರಾಜಕಾರಣಿಗಳ ಶ್ರೀರಕ್ಷೆಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಅತ್ಯಂತ ಸೌಮ್ಯವಾಗಿ ವರ್ತಿಸುತ್ತಿದ್ದೇನೆ. ಸರಿಯಾಗಿ ಕೆಲಸ ಮಾಡದೇ ತಾಳ್ಮೆ ಪರೀಕ್ಷೆ ಮಾಡುತ್ತಿದ್ದೀರಿ. ಇದರಿಂದ ಜಿಲ್ಲಾಡಳಿತಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರು ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಭದ್ರಾ ಮೇಲ್ದಂಡೆ ನಾಲೆಯ ವೈ ಜಂಕ್ಷನ್‌ ಬಳಿ ನಿರೀಕ್ಷಿತ ರೀತಿಯಲ್ಲಿ ಕೆಲಸ ನಡೆಯುತ್ತಿಲ್ಲ. ಕಾಮಗಾರಿ ಮುಂದುವರಿಸಲು ಪೊಲೀಸ್‌ ಭದ್ರತೆಯ ಅಗತ್ಯವಿದೆ ಎಂಬುದನ್ನು ಮುಖ್ಯಮಂತ್ರಿ ಗಮನ ಸೆಳೆದಿದ್ದೇನೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಬದ್ಧತೆಯಿಂದ ಕೆಲಸ ಮಾಡುವುದಾರೆ ಸಹಿಸಿಕೊಳ್ಳುವೆ. ಇಲ್ಲವಾದರೆ ಜಿಲ್ಲೆಯಿಂದ ಹೊರಹೋಗಿ ಎಂದು ಕಿಡಿಕಾರಿದ್ದಾರೆ.

ತುಂಗ ಭದ್ರಾ ನದಿ ಉಕ್ಕಿ ಹರಿಯುತ್ತಿದೆ.ಮುಂಜಾಗ್ರತೆಗೆ ಹರಿಹರ ತಹಶೀಲ್ದಾರ್ ಮನವಿ

0

ಮಲೆನಾಡಿನಲ್ಲಿ ಬಿಡದೇ ಸುರಿಯುತ್ತಿರುವ ಮಳೆಗೆ ತುಂಗಾಭದ್ರ ನದಿ ತುಂಬಿ ಹರಿದಿದೆ.

ತುಂಗಾಭದ್ರ ನದಿಯಲ್ಲಿ ನೀರು ದಿನೇ ದಿನೆ ಹೆಚ್ಚಾದಂತೆ ದಾವಣಗೆರೆಯ ಶ್ರೀ ಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪ್ರವಾಹ ಸೃಷ್ಟಿಯಾಗುವ ಹಂತ ತಲುಪಿದೆ.

ತುಂಗಭದ್ರಾ ನದಿ ತುಂಬಿರುವುದರಿಂದ ಶ್ರೀ ಕ್ಷೇತ್ರ ಉಕ್ಕಡಗಾತ್ರಿಯ ಕೆಲ ಭಾಗ ಮುಳುಗಿದೆ. ಆ ಭಾಗದಲ್ಲಿ ಯಾರು ಜನ ತೆರಳದಂತೆ ತಾಲೂಕು ಆಡಳಿತ ಸೂಚಿಸಿದೆ. ಇದಲ್ಲದೆ ಉಕ್ಕಡಗಾತ್ರಿಯ ಕರಿಬಸವೇಶ್ವರ ದೇವಸ್ಥಾನದ ಸ್ನಾನಘಟ್ಟ, ಜವಳಘಟ್ಟ ಸೇರಿ ಹದಿನೈದು ಅಂಗಡಿಗಳು ಜಲಾವೃತವಾಗಿವೆ.

ನದಿ ದಂಡೆಯಲ್ಲಿದ್ದ ಗಣಪತಿ ದೇವಸ್ಥಾನ ಮುಳುಗಿದ್ದರಿಂದ ನೀರಿನ ಸೆಳೆತ ಹೆಚ್ಚಾಗಿದೆ. ಪರಿಣಾಮ ಭಕ್ತರು ಅಲ್ಲಿಗೆ ತೆರಳದಂತೆ ದೇವಾಲಯದ ಕಮಿಟಿಯಿಂದ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇನ್ನು ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿಗುಡಿ ಕಡೆಯಿಂದ ಉಕ್ಕಡಗಾತ್ರಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಆದ್ದರಿಂದ, ಉಕ್ಕಡಗಾತ್ರಿ ಶ್ರೀ ಕ್ಷೇತ್ರಕ್ಕೆ ಬರಬೇಕು ಎಂದರೆ ಸುತ್ತುಹಾಕಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.

15 ಅಡಿಯಷ್ಟು ನೀರು ನದಿಗೆ ಬಂದ್ರೆ ಶ್ರೀ ಕ್ಷೇತ್ರ ಜಲಾವೃತ ಆಗಲಿದೆ. ಈಗಾಗಲೇ ಈ ನದಿ ನೀರಿನಿಂದ ತಿಮ್ಮನಕಟ್ಟೆ ರಸ್ತೆ, ಫತೇಪುರ್ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಂಗಡಿಗಳಿಗೆ ನೀರು ನುಗ್ಗಿದೆ. 15 ದಿನಗಳಿಂದ ಅಂಗಡಿ ಬಂದ್ ಆಗಿವೆ ಎಂದು ಗ್ರಾಮಸ್ಥರಾದ ಗಜೇಂದ್ರಪ್ಪ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ತುಂಗಭದ್ರಾ ನದಿಯಲ್ಲಿ ಪ್ರಸ್ತುತವಾಗಿ 9.68 ಮೀಟರ್ ನಷ್ಟು ನೀರು ಹರಿಯುತ್ತಿದೆ. ಇನ್ನು 10 ಮೀಟರ್​ಗಿಂತ ಹೆಚ್ಚು ನೀರು ನದಿಯಲ್ಲಿ ಬಂದರೆ ಪ್ರವಾಹ ಹೆಚ್ಚಾಗುವ ಭೀತಿಯನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಮಳೆಯಿಂದ 15 ಅಂಗಡಿಗಳು ಕೊಚ್ಚಿಕೊಂಡು ಹೋಗಿದೆ. ಅಂಗಡಿ ಮಾಲೀಕರಿಗೆ ದಿಕ್ಕು ತೋಚದಂತಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ನದಿಯಲ್ಲಿ ಸ್ನಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮಳೆಗಾಲದಲ್ಲಿ ನದಿಯಲ್ಲಿ ನೀರು ಹೆಚ್ಚಾದರೆ ಶ್ರೀ ಕ್ಷೇತ್ರಕ್ಕೆ ಹಾಗೂ ಅಂಗಡಿ ಮಾಲೀಕರಿಗೆ ಸಂಕಷ್ಟ ಎಂದು ಅಂಗಡಿ ಮಾಲೀಕರಾದ ಶಂಕರ್ ಅವರು ಹೇಳಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಹರಿಹರ ತಹಶೀಲ್ದಾರ್ ಅಶ್ವತ್ಥ​ ಅವರು ಉಕ್ಕಡಗಾತ್ರಿಗೆ ಭೇಟಿ ನೀಡಿ, ಯಾರು ನದಿಗೆ ಇಳಿಯದಂತೆ ತಾಕೀತು ಮಾಡಿದ್ದಾರೆ.