Tuesday, March 17, 2026
Tuesday, March 17, 2026
Home Blog Page 1508

ಎಸಿಬಿಗೆ ಕಳಂಕಿತರನ್ನ ನೇಮಕ ಮಾಡದಿರಲು ಸರ್ಕಾರಕ್ಕೆ ಹೈಕೋರ್ಟ್ ಆದೇಶ

0

ಭ್ರಷ್ಟಾಚಾರ ನಿರ್ಮೂಲನೆಗಾಗಿ ರಚಿಸಲಾಗಿರುವ ಭ್ರಷ್ಟಾಚಾರ ನಿಗ್ರಹ ದಳದಂತಹ (ಎಸಿಬಿ) ಸಂಸ್ಥೆಗಳಿಗೆ ಕಳಂಕಿತ ಅಧಿಕಾರಿಗಳನ್ನು ನೇಮಕ ಮಾಡಬಾರದು ಎಂದು ಹೈಕೋರ್ಟ್, ಸರ್ಕಾರಕ್ಕೆ ಖಡಕ್ ಆದೇಶ ನೀಡಿದೆ.

ಎಸಿಬಿಗೆ ಅಧಿಕಾರಿಗಳನ್ನು ನೇಮಕ ಮಾಡುವಾಗ ಅವರ ಸೇವಾ ದಾಖಲೆ (ಸವೀರ್ಸ್ ರೆಕಾರ್ಡ್‌) ಹಾಗೂ ಅಧಿಕಾರಿಗಳ ದಕ್ಷತೆಯನ್ನು ಪರಿಶೀಲಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ನ್ಯಾ.
ಎಸ್. ಸಂದೇಶ್ ಅವರು ಎಸಿಬಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಜಿಲ್ಲಾಧಿಕಾರಿ ಲಂಚ ಪ್ರಕರಣದಲ್ಲಿ ಎಸಿಬಿ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿರುವ ನ್ಯಾಯಮೂರ್ತಿಗಳು ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಎಸಿಬಿಗೆ ಕಳಂಕಿತರನ್ನು ನೇಮಿಸಬೇಡಿ ಎಂದು ಸರ್ಕಾರಕ್ಕೆ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಉಪ ತಹಸೀಲ್ದಾರ್‌ ಪಿ.ಎಸ್‌. ಮಹೇಶ್‌ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರಿದ್ದ ಪೀಠ ಈ ಕುರಿತು ಆದೇಶ ಹೊರಡಿಸಿ, ಅದನ್ನು ಸರ್ಕಾರಕ್ಕೆ ತಲುಪಿಸಲು ರಿಜಿಸ್ಟ್ರಾರ್ ಜನರಲ್‌ಗೆ ಆದೇಶ ನೀಡಿದೆ.

ಎಡೆಬಿಡದ ಮಳೆ ಶಿವಮೊಗ್ಗ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಶಾಲೆಗೆ ರಜೆ

0

ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಇಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಈ ಸಂಬಂಧ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕುಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ದಿನಾಂಕ 12-07-2022 ರಂದು ಶಾಲೆಗೆ ರಜೆ ಘೋಷಿಸಲಾಗಿದೆ

ಕೋವಿಡ್ ಸೋಂಕು ಹಬ್ಬಿದರೂ ಚೇತರಿಕೆ ಪ್ರಮಾಣ ಶೇ 98.50

0

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 13,615 ಕೋವಿಡ್ 19 ಸೋಂಕು ಪ್ರಕರಣ ದೃಢಪಟ್ಟಿದ್ದು, 20 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶಾದ್ಯಂತ ಈವರೆಗೆ ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 5,25, 474ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

24 ಗಂಟೆಯಲ್ಲಿ 330 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ದೇಶದಲ್ಲಿನ ಕೋವಿಡ್ 19 ಚೇತರಿಕೆ ಪ್ರಮಾಣ ಶೇ.98.50ರಷ್ಟಿದೆ ಎಂದು ಅಂಕಿಅಂಶ ವಿವರಿಸಿದೆ.

ಭಾರತದಾದ್ಯಂತ ಕೋವಿಡ್ 19 ಲಸಿಕೆ ಅಭಿಯಾನದಲ್ಲಿ ಈವರೆಗೆ 199 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಪ್ರತಿದಿನದ ಪಾಸಿಟಿವಿಟಿ ದರ ಶೇ.3.23ರಷ್ಟಿದ್ದು, ವಾರದ ಪಾಸಿಟಿವಿಟಿ ದರ ಶೇ.4.24ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,31,043ಕ್ಕೆ ಹೆಚ್ಚಳವಾಗಿದೆ. ಒಂದೇ ದಿನದಲ್ಲಿ 13,265 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಭಾರತದಲ್ಲಿ ಈವರೆಗೆ ಕೋವಿಡ್ ನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,29,96,427ಕ್ಕೆ ತಲುಪಿದೆ

ರಷ್ಯಾಗೆ ಇರಾನ್ ಆಯುಧ ಸರಬರಾಜು ಅಮೇರಿಕ ಆರೋಪ

0

ಉಕ್ರೇನ್‌ ಮೇಲೆ ಯುದ್ದಕ್ಕೆ ಬಿದ್ದಿರೋ ರಷ್ಯಾಗೆ ಇರಾನ್‌ ಆಯುಧ ಕಳುಹಿಸಿಕೊಡೋದಕ್ಕೆ ತಯಾರಿ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅಮೆರಿಕದ ಭದ್ರತಾ ಸಲಹೆಗಾರ ಜೆಕ್‌ ಸಲ್ಲೀವನ್‌ ಇರಾನ್‌ ರಷ್ಯಾಗೆ ನೂರಾರು ಅನ್‌ಮ್ಯಾನಡ್ ಏರಿಯಲ್‌ ವೆಹಿಕಲ್‌ ಡ್ರೋನ್‌ಗಳನ್ನ ಕೊಡೋಕೆ ರೆಡಿಯಾಗಿದೆ.

ನಮಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ. ಜುಲೈ ಅಂದರೆ ಈ ತಿಂಗಳ ಅಂತ್ಯದಲ್ಲಿ ಅವರ ರಷ್ಯಾಗೆ ತಮ್ಮ ಡ್ರೋನ್‌ಗಳನ್ನ ಪೂರೈಕೆ ಮಾಡಲಿದ್ದಾರೆ. ಆದಷ್ಟು ಬೇಗ ಅದು ರಷ್ಯಾದ ಕೈಗೆ ತಲುಪುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ಸೇನೆಯ ಆಧುನಿಕರಣದ ಪರವಾಗಿದ್ದೇನೆ-ಮನೀಷ್ ತಿವಾರಿ

0

ಭಾರತೀಯ ಸೇನೆಯ ಅಗ್ನಿಪಥ್ ನೇಮಕಾತಿ ಯೋಜನೆಯನ್ನು ವಿರೋಧಿಸಿದ್ದ ಕಾಂಗ್ರೆಸ್​ಗೆ ತೀವ್ರ ಮುಜುಗರ ಎದುರಾಗಿದೆ. ಸಶಸ್ತ್ರ ಪಡೆಗಳಿಗೆ ವಿವಾದಾತ್ಮಕ ಅಗ್ನಿಪಥ್ ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಲು ಬರೆದಿದ್ದ ಪತ್ರಕ್ಕೆ ಕಾಂಗ್ರೆಸ್ ಇಂದು ದೊಡ್ಡ ಮುಖಭಂಗವನ್ನು ಎದುರಿಸಿದೆ.

ಕಾಂಗ್ರೆಸ್ ಹಿರಿಯ ನಾಯಕ ಮನೀಶ್ ತಿವಾರಿ ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ ವಿರೋಧಿಸಿ ಬರೆದಿದ್ದ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸಮಿತಿಯು 20 ಸದಸ್ಯರನ್ನು ಹೊಂದಿದೆ. 13 ಲೋಕಸಭೆಯಿಂದ ಹಾಗೂ ಸುಮಾರು 7 ರಾಜ್ಯಸಭೆಯ ಸದಸ್ಯರನ್ನು ಈ ಸಮಿತಿಯು ಒಳಗೊಂಡಿದೆ. ಈ ಸಮಿತಿಗೆ ನೀಡಲು ಕಾಂಗ್ರೆಸ್ ಈ ಪತ್ರ ಬರೆದಿತ್ತು ಎನ್ನಲಾಗಿದೆ.

ಈ ಮುನ್ನ ಮನೀಷ್ ತಿವಾರಿ ಅವರು ಅಗ್ನಿಪಥ್ ಯೋಜನೆಗೆ ಮೌಖಿಕವಾಗಿ ವಿರೋಧವನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ನಿಲುವನ್ನು ಬೆಂಬಲಿಸಿದ್ದರು. ಇಂದು ಅವರು ಭಾರತೀಯ ಸೇನೆಯ ಆಧುನೀಕರಣದ ಪರವಾಗಿದ್ದೇನೆ. ಆದರೂ ಅಗ್ನಿಪಥ್ ಅನುಷ್ಠಾನಕ್ಕೆ ವಿರುದ್ಧವಾಗಿದ್ದೇನೆ ಎಂದು ತಿಳಿಸಿದ್ದಾರೆ. ಆದರೂ ಅಗ್ನಿಪಥ್ ಯೋಜನೆ ವಿರೋಧಿಸಿ ಕಾಂಗ್ರೆಸ್ ಬರೆದ ಪತ್ರಕ್ಕೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಲ್ನಡಿಗೆಯಲ್ಲೇ 6500 ಕಿಮೀ ಕ್ರಮಿಸಿ ಮೆಕ್ಕಾಗೆ ಬಂದ ಹಜ್ ಯಾತ್ರಿಕ

0

ಇರಾಕಿ ಕುರ್ದಿಶ್ ಮೂಲದ ಬ್ರಿಟಿಷ್ ವ್ಯಕ್ತಿಯೊಬ್ಬರು ಈ ವರ್ಷ ಹಜ್‌ನಲ್ಲಿ ಭಾಗಿಯಾಗಲು ಇಂಗ್ಲೆಂಡ್‌ನ ವಾಲ್ವರ್‌ಹ್ಯಾಂಪ್ಟನ್‌ನಿಂದ 6,500 ಕಿಮೀ ಕಾಲ್ನಡಿಗೆಯಲ್ಲಿ ನಡೆದು ಮೆಕ್ಕಾ ತಲುಪಿದ್ದಾರೆ.

52 ವರ್ಷದ ಆಡಮ್ ಮೊಹಮ್ಮದ್, ನೆದರ್ಲ್ಯಾಂಡ್ಸ್, ಜರ್ಮನಿ, ಆಸ್ಟ್ರಿಯಾ, ಹಂಗೇರಿ, ಸರ್ಬಿಯಾ, ಬಲ್ಗೇರಿಯಾ, ಟರ್ಕಿ, ಲೆಬನಾನ್ ಮತ್ತು ಜೋರ್ಡಾನ್ ಮೂಲಕ ಸೌದಿ ಅರೇಬಿಯಾವನ್ನು ತಲುಪಲು ಸುಮಾರು 6,500 ಕಿಲೋಮೀಟರ್ ದೂರವನ್ನು 10 ತಿಂಗಳು ಮತ್ತು 25 ದಿನಗಳಲ್ಲಿ ಕ್ರಮಿಸಿದರು. ಆಡಮ್ ಆಗಸ್ಟ್ 1, 2021 ರಂದು ಯುಕೆ ನಲ್ಲಿ ನಡೆಯಲು ಪ್ರಾರಂಭಿಸಿ, ಕಳೆದ ತಿಂಗಳು ಸೌದಿ ಅರೇಬಿಯಾಕ್ಕೆ ತಲುಪಿದರು.

ಆಡಮ್ ತಮ್ಮ ಲಗ್ಗೇಜ್‌ನೊಂದಿಗೆ ಪ್ರತಿ ದಿನ ಸರಾಸರಿ ಕಾಲ್ನಡಿಗೆಯಲ್ಲೇ 17.8 ಕಿಮೀ ಕ್ರಮಿಸಿದರು.

ಶಾಂತಿ ಮತ್ತು ಸಮಾನತೆಯ ಸಂದೇಶವನ್ನು ಸಾರುವುದು ಅವರ ಉದ್ದೇಶವಾಗಿದೆ.

ಅವರು ಸ್ವತಃ ಪುಟವನ್ನು ಸಹ ಸ್ಥಾಪಿಸಿದ್ದರು. ಅದರಲ್ಲಿ, ‘ನಾನು ಇದನ್ನು ಕೇವಲ ಖ್ಯಾತಿ ಅಥವಾ ಹಣಕ್ಕಾಗಿ ಮಾಡುತ್ತಿಲ್ಲ. ನಮ್ಮ ಜಾತಿ, ಬಣ್ಣ, ಧರ್ಮವನ್ನು ಲೆಕ್ಕಿಸದೆ ನಾವೆಲ್ಲರೂ ಸಮಾನರು ಎಂದು ಜಗತ್ತಿಗೆ ತಿಳಿಸಲು ಮತ್ತು ನಮ್ಮ ಧರ್ಮ ಇಸ್ಲಾಂ ಕಲಿಸುವ ಶಾಂತಿ ಮತ್ತು ಏಕತೆಯ ಸಂದೇಶವನ್ನು ಸಾರಲು ಇದು ಸಹಾಯಕ ಎಂದಿದ್ದಾರೆ.

ವಾಸ್ತು ಗುರೂಜಿ ಕೊಲೆಗಾರರು ಕೊರ್ಟ್ ಗೆ ಹಾಜರು

0

ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹಂತಕರನ್ನ ಪೊಲೀಸರು ಕೋರ್ಟ್‌ಗೆ ಹಾಜರು ಪಡಿಸಲಿದ್ದಾರೆ.

ಹಂತಕರು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದರು. ಇವತ್ತು ಮತ್ತೆ ಹಂತಕರನ್ನ ಮೂರು ದಿನಗಳ ಕಾಲ ಪೊಲೀಸರು ತಮ್ಮ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಖಾಕಿ ಪಡೆಯಿಂದ 6 ದಿನಗಳ ಕಾಲ ಎಲ್ಲಾ ‌ಮಗ್ಗಲುಗಳಿಂದ ವಿಚಾರಣೆ ನಡೆಯಲಿದೆ.

ಹಂತಕರು ಎಷ್ಟೇ ವಿಚಾರಣೆ ಮಾಡಿದ್ರು ಹತ್ಯೆಗೆ ಪ್ರಮುಖ ಕಾರಣ ಏನು ಎಂಬುದರ ಬಗ್ಗೆ ತುಟಿ ಬಿಚ್ಚಿಲ್ಲ.
ಇದರಿಂದ ವಿಚಾರಣೆ ಮಾಡಲು ಪೊಲೀಸರು ಸುಸ್ತಾಗಿದ್ದರು. ಆದ್ದರಿಂದ ನ್ಯಾಯಾಧೀಶರ ಎದುರು ಹಾಜರು ಪಡಿಸಿ, ಕಸ್ಟಡಿಗೆ ಕೊಡಿ ಎಂದು ಪೊಲೀಸರು ಕೇಳಲಿದ್ದಾರೆ.

ನೂತನ ಸಂಸದ್ ಭವನದ ಮೇಲೆ ಅಶೋಕ ಸ್ತಂಭ ಅನಾವರಣ

0

ನೂತನ ಸಂಸತ್ ಭವನದ ಮೇಲ್ಛಾವಣಿಯ ಮೇಲೆ ನಿರ್ಮಿಸಲಾದ 6.5 ಮೀಟರ್ ಉದ್ದದ ಕಂಚಿನ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದರು.

ಈ ಅಶೋಕ ಸ್ತಂಭವು 20 ಅಡಿಗಳಿಗಿಂತ ಹೆಚ್ಚು ಎತ್ತರವಿದೆ. ಕ್ರೇನ್ ಸಹಾಯದಿಂದ ಈ ಸ್ತಂಭವನ್ನು ಹೊಸ ಸಂಸತ್ ಕಟ್ಟಡದ ಮೇಲೆ ಸ್ಥಾಪಿಸಲಾಗಿದೆ. ಅನಾವರಣದ ನಂತ್ರ ಪ್ರಧಾನಿ ಮೋದಿ ಅವರು ಉದ್ಯೋಗಿಗಳೊಂದಿಗೆ ಮಾತನಾಡಿದರು.

ಮೋದಿ ಸರ್ಕಾರದ ಉಪಕ್ರಮದ ಮೇರೆಗೆ ದೆಹಲಿಯಲ್ಲಿ ಹೊಸ ಸಂಸತ್ ಭವನವನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಸಂಸತ್ ಭವನವು ಸುಮಾರು 93 ವರ್ಷಗಳಷ್ಟು ಹಳೆಯದಾಗಿದ್ದು, ಅನೇಕ ನ್ಯೂನತೆಗಳನ್ನು ಹೊಂದಿದೆ.

ಹೊಸ ಸಂಸತ್ ಕಟ್ಟಡವು ಆಧುನಿಕ ಸೌಲಭ್ಯಗಳು ಮತ್ತು ಸುರಕ್ಷತಾ ಸಲಕರಣೆಗಳನ್ನು ಹೊಂದಿರುತ್ತದೆ. ಇದು ಏಕಕಾಲದಲ್ಲಿ 1,224 ಸದಸ್ಯರನ್ನು ಹೊಂದುವಷ್ಟು ಸಾಮಾರ್ಥ್ಯವನ್ನು ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2020 ರ ಡಿಸೆಂಬರ್ 10 ರಂದು ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಈ ಕಾರ್ಯವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ ಉದ್ಯೋಗಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಮರ ನಾಥ್ ಯಾತ್ರೆ ಮತ್ತೆ ಆರಂಭ

0

ಇಂದಿನಿಂದ ಮತ್ತೆ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ. ಜಮ್ಮುವಿನ ಭಗವತಿ ನಗರದಲ್ಲಿರುವ ಯಾತ್ರಿ ನಿವಾಸ ಬೇಸ್ ಕ್ಯಾಂಪ್​​ನಿಂದ ಯಾತ್ರಾರ್ಥಿಗಳು ಅಮರನಾಥ ಯಾತ್ರೆಯನ್ನು ಆರಂಭಿಸಿದ್ದಾರೆ.

ಶುಕ್ರವಾರ ಸಂಜೆ ಅಮರನಾಥ ಗುಹೆ ಬಳಿ ಭಾರೀ ಮಳೆಯಿಂದಾಗಿ ತಾತ್ಕಾಲಿಕವಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

ತೀವ್ರ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ 16 ಜನರು ಸಾವಿಗೀಡಾಗಿದ್ದರು. ಇನ್ನು 40 ಮಂದಿ ನಾಪತ್ತೆಯಾಗಿದ್ದೂ, ಈವರೆಗೆ ಇವರ ಮೃತದೇಹ ಪತ್ತೆಯಾಗಿಲ್ಲ. ಈ ಅನಾಹುತದ ನಡುವೆಯೂ ಯಾತ್ರಾರ್ಥಿಗಳು ಯಾತ್ರೆಗೆ ಸಜ್ಜಾಗಿದ್ದು, ಶಿವನ ನಾಮಸ್ಮರಣೆಯ ಘೋಷಣೆಗಳೊಂದಿಗೆ ಯಾತ್ರೆ ಆರಂಭಿಸಿದ್ದಾರೆ.

ಹವಾಮಾನ ಇಲಾಖೆ ಮೇಘಸ್ಫೋಟವಲ್ಲ ಭಾರೀ ವರ್ಷಧಾರೆಯಿಂದಾಗಿ ಪ್ರವಾಹ ಉಂಟಾಗಿತ್ತು ಎಂದು ಸ್ಪಷ್ಟನೆ ನೀಡಿತ್ತು.

4,026 ಯಾತ್ರಾರ್ಥಿಗಳ 12ನೇ ಬ್ಯಾಚ್ 110 ವಾಹನಗಳ ಬೆಂಗಾವಲಿನೊಂದಿಗೆ ಶಿಬಿರದಿಂದ ರವಾನೆಯಾಗಿದ್ದಾರೆ. ಇನ್ನು 767 ಪುರುಷರು, 240 ಮಹಿಳೆಯರು ಮತ್ತು ಒಂಬತ್ತು ಮಕ್ಕಳು ಸೇರಿದಂತೆ ಒಟ್ಟು 1,016 ಪ್ರಯಾಣಿಕರು ಬೇಸ್ ಕ್ಯಾಂಪ್ ನಿಂದ 25 ಬಸ್ ಗಳು ಮತ್ತು 10 ಲಘು ಮೋಟಾರು ವಾಹನಗಳಲ್ಲಿ ಬಾಲ್ಟಾಲ್ ಮಾರ್ಗಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಈವರೆಗೆ ಪವಿತ್ರ ಗುಹೆಗೆ 73,554 ಮಂದಿ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ನಿಲ್ಲದ ರಷ್ಯ & ಉಕ್ರೇನ್ ಯುದ್ಧಚಾಸಿನ್ ಯಾರ್ ನಗರದ ಮೇಲೆ ರಷ್ಯ ದಾಳಿ

0

ಪೂರ್ವ ಉಕ್ರೇನ್ ನಗರವಾದ ಚಾಸಿನ್ ಯಾರ್ ನಲ್ಲಿರುವ ಅಪಾರ್ಟ್ ಮೆಂಟ್ ಬ್ಲಾಕ್ ನ ಮೇಲೆ ರಷ್ಯಾದ ಸೇನೆ ರಾಕೆಟ್ ಹಾರಿಸಿದೆ. ಇದರಿಂದಾಗಿ ಕನಿಷ್ಠ 15 ಜನರು ದುರ್ಮರಣಕ್ಕೀಡಾಗಿದ್ದಾರೆ.

ಐದು ಅಂತಸ್ತಿನ ಕಟ್ಟಡದ ಒಂದು ಭಾಗಕ್ಕೆ ರಾಕೆಟ್ ಅಪ್ಪಳಿಸಿದ್ದು, ಚಾಸಿವ್ ಯಾರ್ ಕ್ರಾಮಟೋಸ್ಕ್ ನಗರದ ಸಮೀಪವಿರುವ ಡೊನೆಟ್ಸ್ಕ್ ಪ್ರದೇಶದಲ್ಲಿದೆ. ಪ್ರಾದೇಶಿಕ ಗವರ್ನರ್ ಪಾವ್ಲೋ ಕಿರಿಲೆಂಕೊ ರಷ್ಯಾದ ಉರಾಗಾನ್ ರಾಕೆಟ್ ಗಳಿಂದ ಈ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ದಾಳಿಯ ನಂತರ 20ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿಕೊಂಡಿದ್ದರು ಎಂದು ಬಿಬಿಸಿ ವರದಿ ಮಾಡಿದೆ.
ಕೇವಲ ಐವರನ್ನು ಮಾತ್ರ ಅವಶೇಷಗಳಿಂದ ಸುರಕ್ಷಿತವಾಗಿ ಹೊರತೆಗೆಯಲು ಸಾಧ್ಯವಾಗಿದೆ ಎಂದು ಉಕ್ರೇನಿಯನ್ ತುರ್ತು ಸೇವೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.