ಇಂದಿನಿಂದ ಮತ್ತೆ ಅಮರನಾಥ ಯಾತ್ರೆ ಪುನರಾರಂಭಗೊಂಡಿದೆ. ಜಮ್ಮುವಿನ ಭಗವತಿ ನಗರದಲ್ಲಿರುವ ಯಾತ್ರಿ ನಿವಾಸ ಬೇಸ್ ಕ್ಯಾಂಪ್ನಿಂದ ಯಾತ್ರಾರ್ಥಿಗಳು ಅಮರನಾಥ ಯಾತ್ರೆಯನ್ನು ಆರಂಭಿಸಿದ್ದಾರೆ.
ಶುಕ್ರವಾರ ಸಂಜೆ ಅಮರನಾಥ ಗುಹೆ ಬಳಿ ಭಾರೀ ಮಳೆಯಿಂದಾಗಿ ತಾತ್ಕಾಲಿಕವಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.
ತೀವ್ರ ಮಳೆಯಿಂದಾಗಿ ಉಂಟಾದ ಪ್ರವಾಹದಿಂದ 16 ಜನರು ಸಾವಿಗೀಡಾಗಿದ್ದರು. ಇನ್ನು 40 ಮಂದಿ ನಾಪತ್ತೆಯಾಗಿದ್ದೂ, ಈವರೆಗೆ ಇವರ ಮೃತದೇಹ ಪತ್ತೆಯಾಗಿಲ್ಲ. ಈ ಅನಾಹುತದ ನಡುವೆಯೂ ಯಾತ್ರಾರ್ಥಿಗಳು ಯಾತ್ರೆಗೆ ಸಜ್ಜಾಗಿದ್ದು, ಶಿವನ ನಾಮಸ್ಮರಣೆಯ ಘೋಷಣೆಗಳೊಂದಿಗೆ ಯಾತ್ರೆ ಆರಂಭಿಸಿದ್ದಾರೆ.
ಹವಾಮಾನ ಇಲಾಖೆ ಮೇಘಸ್ಫೋಟವಲ್ಲ ಭಾರೀ ವರ್ಷಧಾರೆಯಿಂದಾಗಿ ಪ್ರವಾಹ ಉಂಟಾಗಿತ್ತು ಎಂದು ಸ್ಪಷ್ಟನೆ ನೀಡಿತ್ತು.
4,026 ಯಾತ್ರಾರ್ಥಿಗಳ 12ನೇ ಬ್ಯಾಚ್ 110 ವಾಹನಗಳ ಬೆಂಗಾವಲಿನೊಂದಿಗೆ ಶಿಬಿರದಿಂದ ರವಾನೆಯಾಗಿದ್ದಾರೆ. ಇನ್ನು 767 ಪುರುಷರು, 240 ಮಹಿಳೆಯರು ಮತ್ತು ಒಂಬತ್ತು ಮಕ್ಕಳು ಸೇರಿದಂತೆ ಒಟ್ಟು 1,016 ಪ್ರಯಾಣಿಕರು ಬೇಸ್ ಕ್ಯಾಂಪ್ ನಿಂದ 25 ಬಸ್ ಗಳು ಮತ್ತು 10 ಲಘು ಮೋಟಾರು ವಾಹನಗಳಲ್ಲಿ ಬಾಲ್ಟಾಲ್ ಮಾರ್ಗಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂಲಗಳ ಪ್ರಕಾರ ಈವರೆಗೆ ಪವಿತ್ರ ಗುಹೆಗೆ 73,554 ಮಂದಿ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.