ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಭಾರತ ತಂಡವು 49 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.ಆ ಮೂಲಕ 2-0 ಅಂತರದಲ್ಲಿ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಇಂಗ್ಲೆಂಡ್ ತಂಡವು ಭಾರತ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು.ಭಾರತದ ಪರವಾಗಿ ರವಿಂದ್ರ ಜಡೇಜಾ 46, ರೋಹಿತ್ ಶರ್ಮಾ 31, ಹಾಗೂ ರಿಶಬ್ ಪಂತ್ 26 ರನ್ ಗಳ ನೆರವಿನಿಂದಾಗಿ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು.ಇಂಗ್ಲೆಂಡ್ ತಂಡದ ಪರವಾಗಿ ಕ್ರಿಸ್ ಜೋರ್ಡಾನ್ 4 ಹಾಗೂ ರಿಚರ್ಡ್ ಗ್ಲೀಸನ್ 3 ವಿಕೆಟ್ ಗಳನ್ನು ಕಬಳಿಸುವ ಮೂಲಕ ಗಮನ ಸೆಳೆದರು.
ಭಾರತ ತಂಡವು ನೀಡಿದ 171 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು ಆರಂಭದಲ್ಲಿಯೇ ಭುವನೇಶ್ವರ ಕುಮಾರ್ ಅವರ ಮಾರಕ ದಾಳಿಗೆ ತತ್ತರಿಸಿತು, ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಅವರ ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರಿ ಆಘಾತ ನೀಡಿದರು.
ಇದಾದ ನಂತರ ಇಂಗ್ಲೆಂಡ್ ಚೇತರಿಸಿಕೊಳ್ಳಲೇ ಇಲ್ಲಾ, ಮಧ್ಯಮ ಕ್ರಮಾಂಕದಲ್ಲಿ ಮೊಯಿನ್ ಅಲಿ ಹಾಗೂ ಡೇವಿಡ್ ವಿಲ್ಲೆ ಕ್ರಮವಾಗಿ 35, 33 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಆಟಗಾರನು ಸಹಿತ ಅಂತಹ ನಿರೀಕ್ಷಿತ ಪ್ರದರ್ಶನವನ್ನು ನೀಡಲಿಲ್ಲ. ಇದರಿಂದಾಗಿ 17 ಓವರ್ ಗಳಲ್ಲಿ ಕೇವಲ 121 ರನ್ ಗಳಿಗೆ ಇಂಗ್ಲೆಂಡ್ ತಂಡವು ಸರ್ವಪತನವನ್ನು ಕಂಡಿತು.
ಭಾರತದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಭುವನೇಶ್ವರ ಕುಮಾರ್ ಮೂರು ವಿಕೆಟ್, ಹಾಗೂ ಬುಮ್ರಾ ಮತ್ತು ಚಹಾಲ್ ತಲಾ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದರು.