Thursday, August 6, 2026
Thursday, August 6, 2026
Home Blog Page 86

IAS Hemanth ಶಿವಮೊಗ್ಗದಲ್ಲಿ ” ಜನ್ ಭಾಗಿದಾರಿ” ಯಶಸ್ವಿ. 17 ಇಲಾಖೆಗಳ ಸಮನ್ವಯದಿಂದ ಜಾಗೃತಿ ವಿಶೇಷ ಅಭಿಯಾನ- ಎನ್.ಹೇಮಂತ್.

0

IAS Hemanth N ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಸೂಚನೆಯಂತೆ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಪಿಎಂ-ಜನ್ ಮನ್ ಹಾಗೂ ಡಿಎ-ಜೆಜಿಯುಎ ಯೋಜನೆಗಳ ಅಡಿಯ “ಜನ್ ಭಾಗೀದಾರಿ ಎಲ್ಲರಿಗಿಂತ ದೂರ, ಎಲ್ಲರಿಗಿಂತ ಮೊದಲು” ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಅಭಿಯಾನವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಜಿ.ಪಂ. ಸಿಇಓ ಎನ್.ಹೇಮಂತ್ ಪ್ರಕಟಣೆಯಲ್ಲಿ‌ ತಿಳಿಸಿದ್ದಾರೆ.
ಮೇ 18 ರಂದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳಿಂದ ಉದ್ಘಾಟನೆಗೊಂಡಿದ್ದ ಈ ವಿಶೇಷ ಅಭಿಯಾನದ ಸಮಾರೋಪ ಸಮಾರಂಭವು ಮೇ 25 ರಂದು ಶಿವಮೊಗ್ಗ ತಾಲ್ಲೂಕಿನ ಸದಾಶಿವಪುರ ಗ್ರಾಮದಲ್ಲಿ ಜರುಗಿತು. ಜಿಲ್ಲೆಯ ವಿರುಪಿನಕೊಪ್ಪ ಹಾಗೂ ಸದಾಶಿವಪುರ ಗ್ರಾಮಗಳಲ್ಲಿ ಈ ಅಭಿಯಾನವನ್ನು ಸಕ್ರಿಯವಾಗಿ ನಡೆಸಲಾಗಿತ್ತು.
17 ಇಲಾಖೆಗಳ ಸಮನ್ವಯದೊಂದಿಗೆ ಜಾಗೃತಿ:
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ ಯೋಜನೆಯಡಿ ಒದಗಿಸಲಾಗುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಬುಡಕಟ್ಟು ಬಹುಪಯೋಗಿ ಮಾರ್ಕೆಟಿಂಗ್ ಕೇಂದ್ರಗಳು, ಆಶ್ರಮ ಶಾಲೆಗಳು, ವಿದ್ಯಾರ್ಥಿನಿಲಯಗಳು ಹಾಗೂ ಬುಡಕಟ್ಟು ವಸತಿ ಶಾಲೆಗಳ ಮೂಲಸೌಕರ್ಯ ಸುಧಾರಣೆ, ಕೌನ್ಸಲಿಂಗ್ ಬೆಂಬಲ, ಮತ್ತು ಅರಣ್ಯ ಹಕ್ಕು ಕಾಯ್ದೆ-2006 ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹದಿನೇಳು ವಿವಿಧ ಇಲಾಖೆಗಳ ಯೋಜನೆಗಳನ್ನು ತಲುಪಿಸುವ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಿದ್ದಾರೆ.
IAS Hemanth N ಅಭಿಯಾನದ ಅಂಗವಾಗಿ ಬುಡಕಟ್ಟು ಸಮುದಾಯದ ಜನರಿಗಾಗಿ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು. ಅಲ್ಲದೆ, ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಅಗತ್ಯವಿರುವ ದಾಖಲಾತಿಗಳನ್ನು ಒದಗಿಸುವ ಕುರಿತು ಜಾಗೃತಿ ಮೂಡಿಸಲಾಗಿದೆ.
ಬುಡಕಟ್ಟು ಸಮುದಾಯದ ಅಲೆಮಾರಿ ಜನಾಂಗವಾದ ‘ಹಕ್ಕಿಪಿಕ್ಕಿ’ ಜನರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಿವಮೊಗ್ಗ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಕರೆ ನೀಡಿದ್ದು, ಸಮುದಾಯದ ಯುವಕರು ಉನ್ನತ ಶಿಕ್ಷಣ ಪಡೆದರೆ ದೇಶ-ವಿದೇಶಗಳ ಪ್ರವಾಸ ಕೈಗೊಳ್ಳುವಾಗ ಹಾಗೂ ವ್ಯಾಪಾರ ವಹಿವಾಟು ನಡೆಸುವ ಸಂದರ್ಭದಲ್ಲಿ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ ಎಂದು ಅವರು ಸಭೆಗೆ ವಿವರಿಸಿದ್ದಾರೆ.
ಈ ವಿಶೇಷ ಅಭಿಯಾನದ ಮೂಲಕ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಕುರಿತು ಬುಡಕಟ್ಟು ಜನಾಂಗದವರಿಗೆ ಸಮಗ್ರ ಮಾಹಿತಿ ನೀಡಿ, ವಿವಿಧ ಯೋಜನೆಗಳಡಿ ಸಲ್ಲಿಕೆಯಾಗಿರುವ ಅರ್ಜಿಗಳ ಫಲಾನುಭವಿಗಳಿಗೆ ಶೀಘ್ರವಾಗಿ ಸೌಲಭ್ಯಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೇಮಂತ್ ಎನ್. ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ತೋಟಗಾರಿಕೆ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಮೀನುಗಾರಿಕೆ, ಪಂಚಾಯತ್ ರಾಜ್, ಆರೋಗ್ಯ, ಕೌಶಲ್ಯಾಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ.

Madhu Bangarappa ಹೊಸ ಶೈಕ್ಷಣಿಕ ವರ್ಷ: ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಿದ್ಧತೆ- ಮಧು ಬಂಗಾರಪ್ಪ.

0

Madhu Bangarappa ‘ಸಮಗ್ರ ಶಿಕ್ಷಣ ಕರ್ನಾಟಕ’ ಕಚೇರಿಯಲ್ಲಿ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಪ್ರಾಂಶುಪಾಲರು ಹಾಗೂ ಎಸ್‌ಡಿಎಂಸಿ (SDMC) ಸದಸ್ಯರೊಂದಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಂತ್ರಿ ಮಧು ಬಂಗಾರಪ್ಪನವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆಸಿದರು.

ಮುಂಬರುವ ಶೈಕ್ಷಣಿಕ ವರ್ಷದ ಸಿದ್ಧತೆಗಳು ಹಾಗೂ ಹೊಸ ಯೋಜನೆಗಳ ಕುರಿತು ಸಮಗ್ರವಾಗಿ ಸಭೆಯಲ್ಲಿ ಚರ್ಚಿಸಿದರು.

​ನಮ್ಮ ಸರ್ಕಾರದ ಪ್ರಮುಖ ಹೆಜ್ಜೆಗಳು ಹೀಗಿವೆ.

​ ಜೂನ್ ೧ – ಶಿಕ್ಷಣದಲ್ಲಿ ಹೊಸ ಶಕೆ: ರಾಜ್ಯಾದ್ಯಂತ ಒಟ್ಟು ೧,೦೦೦ ‘ಕರ್ನಾಟಕ ಪಬ್ಲಿಕ್ ಶಾಲೆಗಳನ್ನು’ (KPS) ಆರಂಭಿಸುವ ಗುರಿ ಹೊಂದಿದ್ದು, ಜೂನ್ ೧ ರಂದು ಶಿವಮೊಗ್ಗದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನೂತನ KPS ಶಾಲೆಗಳ ಶಂಕುಸ್ಥಾಪನೆ ನೆರವೇರಲಿದೆ.

​ ಮಕ್ಕಳ ಹಬ್ಬ – ಅದ್ದೂರಿ ಸ್ವಾಗತ: ಮೇ ೨೯ ರಿಂದ ೩೧ರವರೆಗೆ ಶಾಲಾ ಆವರಣವನ್ನು ಸ್ವಚ್ಛಗೊಳಿಸಿ, ಜೂನ್ ೧ ರಂದು ತಳಿರು ತೋರಣ ಕಟ್ಟಿ, ಸಮುದಾಯದ ಸಹಭಾಗಿತ್ವದಲ್ಲಿ ಊಟದ ವ್ಯವಸ್ಥೆಯೊಂದಿಗೆ ಮಕ್ಕಳನ್ನು ಸಂಭ್ರಮದಿಂದ ಶಾಲೆಗೆ ಬರಮಾಡಿಕೊಳ್ಳಲಾಗುವುದು.

Madhu Bangarappa  ನಮ್ಮ ಶಾಲೆ ನಮ್ಮ ಜವಾಬ್ದಾರಿ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳು, ದಾನಿಗಳು ಹಾಗೂ ಉದ್ಯಮಿಗಳು ಕೈಜೋಡಿಸಿ, ಸ್ಮಾರ್ಟ್ ಟಿವಿ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ವೃದ್ಧಿಗೆ ಸಹಕರಿಸಲು ಕೋರಲಾಗಿದೆ.

​ದಾಖಲಾತಿ ಅಭಿಯಾನ: ನುರಿತ ಶಿಕ್ಷಕರಿರುವ ನಮ್ಮ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಪೋಷಕರಲ್ಲಿ ಜಾಗೃತಿ ಮೂಡಿಸಲಾಗುವುದು.

​ ಪೌಷ್ಟಿಕಾಂಶ ಹಾಗೂ ಸೌಲಭ್ಯ: ಅಜೀಂ ಪ್ರೇಮ್‌ಜಿ ಫೌಂಡೇಶನ್ ನೆರವಿನೊಂದಿಗೆ ಪ್ರತಿದಿನ ಮೊಟ್ಟೆ/ಬಾಳೆಹಣ್ಣು ವಿತರಣೆ ಹಾಗೂ ವಿಶೇಷ ತರಗತಿಗಳಿಗಾಗಿ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ.

​”ಶಿಕ್ಷಣ ಎಂಬುದು ಯಾರಿಂದಲೂ ಕದಿಯಲಾಗದ ಏಕೈಕ ಸಂಪತ್ತು.” ಬನ್ನಿ, ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಈ ಮಹತ್ಕಾರ್ಯದಲ್ಲಿ ಶಿಕ್ಷಕರು, ಪೋಷಕರು ಹಾಗೂ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದು ಸಚಿವ ಮಧುಬಂಗಾರಪ್ಪ ಕರೆ ನೀಡಿದರು.

Breaking News ಕ್ರಿಕೆಟ್ ಆಡುವಾಗಲೇ ಕುಸಿದು ಅಸು ನೀಗಿದ ಕ್ರಿಕೆಟ್ ಪಟು ಅಕ್ಷಯ್.

Breaking News ಕರ್ನಾಟಕದ ಪ್ರತಿಭಾವಂತ ರಣಜಿ ಆಟಗಾರ ಹಾಗೂ ಅಂಡರ್-19 ತಂಡದ ಬೌಲಿಂಗ್ ಕೋಚ್ ಆಗಿದ್ದ ಎಸ್.ಎಲ್. ಅಕ್ಷಯ್ ಅವರು ಹೃದಯಾಘಾತದಿಂದ ನಿಧನರಾಗಿರುವ ಸುದ್ದಿ ಆಘಾತ ಮೂಡಿಸಿದೆ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅವರು ಹೇಳಿದ್ದಾರೆ.

Breaking News ಆಟಗಾರನಾಗಿ ಹಾಗೂ ಯುವ ಕ್ರಿಕೆಟ್ ಪ್ರತಿಭೆಗಳನ್ನು ರೂಪಿಸುವ ತರಬೇತುದಾರನಾಗಿ ಕರ್ನಾಟಕ ಕ್ರಿಕೆಟ್‌ಗೆ ಅವರು ನೀಡಿದ ಕೊಡುಗೆ ಸ್ಮರಣೀಯ. ಅವರ ನಿಧನದಿಂದ ರಾಜ್ಯವು ಒಬ್ಬ ಶ್ರೇಷ್ಠ ಕ್ರೀಡಾ ಪ್ರತಿಭೆಯನ್ನು ಕಳೆದುಕೊಂಡಂತಾಗಿದೆ ಎಂದಿದ್ದಾರೆ.

ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಈ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರು ಸಂತಾಪ ಸೂಚಿಸಿದ್ದಾರೆ

ಕ್ರಿಕೆಟ್ ಆಡುವಾಗಲೇ ಕುಸಿದು ಅಸು ನೀಗಿದ ಕ್ರಿಕೆಟ್ ಪಟು ಅಕ್ಷಯ್

0

ಮಾಜಿ ರಣಜಿ ಕ್ರಿಕೆಟ್ ಆಟಗಾರ ಅಕ್ಷಯ್ ಎಸ್.ಎಲ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಎಸ್ ಎಲ್ ಎಸ್ ಕ್ರೀಡಾಂಗಣದಲ್ಲಿ ನಡೆದ ಕೆಎಸ್‌ಸಿಎ 3ನೇ ಡಿವಿಜನ್ ಲೀಗ್ ಪಂದ್ಯದಲ್ಲಿ ಆಟವಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ನಿನ್ನೆ ಮಧ್ಯಾಹ್ನ ಪಂದ್ಯ ನಡೆಯುತ್ತಿರುವಾಗ ಅಕ್ಷಯ್ ಅವರು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದು, ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅವರ ಅಕಾಲಿಕ ನಿಧನ ಕ್ರಿಕೆಟ್ ವಲಯದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

ಮೃತ ಅಕ್ಷಯ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ. ಶಿವಮೊಗ್ಗ ನಗರದ ಅರವಿಂದ ನಗರದಲ್ಲಿರುವ ಅವರ ನಿವಾಸದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಇಂದು ಮಧ್ಯಾಹ್ನ ಶಿವಮೊಗ್ಗದ ನವುಲೆಯಲ್ಲಿ ಇರುವ ಕೆ ಎಸ್ ಸಿ ಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಒಂದು ಗಂಟೆಯಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಅಕ್ಷಯ್ ಎಸ್.ಎಲ್ ಅವರ ನಿಧನಕ್ಕೆ ಕ್ರೀಡಾಪಟುಗಳು, ಅಭಿಮಾನಿಗಳು ಹಾಗೂ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ಇನ್ನಷ್ಟು ಬಿಗಿಯಾಗಿ ಜಾರಿಗೆ ತರಲು ಮನವಿ

0

ಬಕ್ರೀದ್ ಹಬ್ಬದ ಸಮಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಜಾರಿಯಲ್ಲಿದ್ದರೂ ಸಹಾ ಅವ್ಯಾಹತವಾಗಿ ನಡೆಯುವ ಪ್ರಾಣಿ ವಧೆ ನಡೆಯುತ್ತಿದೆ.

ಗೋ ಹತ್ಯೆಯನ್ನು ತಡೆಯಬೇಕೆಂಬ ಸದುದ್ದೇಶದಿಂದ “ಗೋವರ್ಧನ ಟ್ರಸ್ಟ್” ನ ಮಹಾಪೋಷಕರು ಮತ್ತು ಮಾಜಿ ಡೀಸಿಎಂ ಶ್ರೀ ಕೆ ಎಸ್ ಈಶ್ವರಪ್ಪನವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳಿಗೆ ವಿಶೇಷ ಮನವಿ ಸಲ್ಲಿಸಲಾಯಿತು.

ಶ್ರೀ ಶೃಂಗೇರಿ ಜಗದ್ಗುರುಗಳಿಗೆ ನೇಪಾಳ ರಾಷ್ಟ್ರ ಪೂರ್ಣ ಭಕ್ತಿ ಸ್ಪಂದನ

0

ವಿಶೇಷ ವರದಿ;
ಪ್ರಭಾಕರ ಕಾರಂತ.

ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳ ನೇಪಾಳದ ಪ್ರವಾಸವನ್ನು ಅತ್ಯಂತ ಯಶಸ್ವಿಗೊಳಿಸಲು ನೇಪಾಳದ ಭಾರತೀಯ ರಾಯಭಾರಿ ಕಚೇರಿ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ.ರಾಯಭಾರಿ ಕರ್ತವ್ಯವೇನು?.ತನ್ನ ದೇಶ ಮತ್ತು ತಾನು ಕರ್ತವ್ಯ ನಿರ್ವಹಿಸುತ್ತಿರುವ ದೇಶಗಳ ನಡುವೆ ಉತ್ತಮ ಬಾಂಧವ್ಯ ಮೂಡಿಸಲು ಪ್ರಯತ್ನಿಸುವುದು.ಎರಡೂ ರಾಷ್ಟ್ರಗಳ ಜನ ಸಮೂಹಗಳ ನಡುವೆ ಪರಸ್ಪರ ಗೌರವ ಹೆಚ್ಚಾಗುವಂತೆ ಕಾರ್ಯಕ್ರಮ ಏರ್ಪಡಿಸುವುದು.ಭಾರತದ ಕುರಿತು ನೇಪಾಳದಲ್ಲಿ ನೇಪಾಳದ ಸಾರ್ವಜನಿಕರಲ್ಲಿ ಸೌಹಾರ್ದ ಭಾವ ಉಂಟಾಗುವಂತೆ ಮಾಡುವುದು.ಜಗದ್ಗುರುಗಳ ಆಗಮನ ಮಾತ್ರದಿಂದಲೇ ಈ ಎಲ್ಲಾ ರಾಯಭಾರ ಕಚೇರಿ ಕಾರ್ಯ ಸುಗಮಗೊಂಡಿದೆ.ಬೇರೆ‌ ನೂರು ಕಾರ್ಯಕ್ರಮ ಮಾಡಿದರೂ ಸಾಧ್ಯವಾಗುವುದೇ ಇರುವ ಯಶಸ್ಸು ಜಗದ್ಗುರುಗಳ ಆಗಮನದಿಂದ ಆಗುತ್ತಿದೆ.ರಾಯಭಾರಿ ನವೀನ್ ಶ್ರೀವಾಸ್ತವ ಸೇರಿದಂತೆ ಅಲ್ಲಿರುವ ಎಲ್ಲರಿಗೂ ಇದರ ಅನುಭವ ಜಗದ್ಗುರುಗಳು ಬರುತ್ತಾರೆಂದಾಗಲೇ ಆಗಿದೆ.ಜಗದ್ಗುರುಗಳ ಧರ್ಮ ವಿಜಯ ಯಾತ್ರೆ ಸಂದರ್ಭದಲ್ಲಿ ಅವರು ನೇಪಾಳದ ಸರ್ಕಾರದ ವಿವಿಧ ಇಲಾಖೆಗಳ ಸಂಪರ್ಕ ಮಾಡಿದ್ದಾರೆ.ರಾಷ್ಟ್ರ ಒಂದರ ಮುಖ್ಯಸ್ಥರೋರ್ವರು ಬರುವಾಗ ಆತಿಥೇಯ ಸರ್ಕಾರ ಹೇಗೆ ಸ್ಪಂದಿಸುತ್ತದೋ ಅದಕ್ಕೂ ಮೀರಿ ಭಕ್ತಿ ಶ್ರದ್ಧೆಯಿಂದ ನೇಪಾಳದ ಸರ್ಕಾರ ಸ್ಪಂದಿಸಿದ್ದನ್ನು ಕಂಡು ರಾಯಭಾರಿ ಕಚೇರಿಗೇ ಆಚ್ಚರಿ ಆಗಿದೆ.ಜಗದ್ಗುರುಗಳ ಕುರಿತು ಅವರ ಗೌರವ ಮತ್ತೂ ಹೆಚ್ಚಾಗಿದೆ.ನಾವು ಇಲ್ಲಿರುವಾಗಲೇ ಜಗದ್ಗುರುಗಳ ಆಗಮನವಾಗಿರುವುದು ನಮ್ಮ ಬದುಕಿನ ಭಾಗ್ಯ.ಜೀವನದಲ್ಲಿ ಒಮ್ಮೆ ಮಾತ್ರ ದೊರಕುವ ಇಂತಹ ಅಪೂರ್ವ ಅವಕಾಶ ನಾವು ಸಾರ್ಥಕಗೊಳಿಸಿಕೊಳ್ಳಬೇಕು. ಹೀಗೆಂದೇ ಮತ್ತೆ ಮತ್ತೆ ಗುರು ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.ಜಗದ್ಗುರುಗಳು ರಾಯಭಾರಿ ಕಚೇರಿಗೂ ಚಿತ್ತೈಸಬೇಕು.ಅಲ್ಲಿ ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಿಸಬೇಕು ಎಂದು ಅವರು ಪ್ರಾರ್ಥಿಸಿದ್ದಾರೆ.ಗುರುಕೃಪೆಗೆ ನೇಪಾಳದ ಜನರು ಹಾರೈಸಿದಂತೇ ರಾಯಭಾರಿ ಸಿಬ್ಬಂದಿಯೂ ಹಾರೈಸುತ್ತಿದೆ.ಶೃಂಗೇರಿಯ ಅನನ್ಯತೆ ಇದು.ಜಗತ್ತೆಲ್ಲಾ ಗೌರವಿಸುವಂತೇ ಅವರಿದ್ದಾರೆ.ಜಗತ್ತಿಗೆಲ್ಲಾ ಸರಿದಾರಿಯಲ್ಲಿ ನಡೆವ ಉಪದೇಶ ನೀಡುತ್ತಾರೆ.ಅದಕ್ಕೇ ಅವರು ಜಗದ್ಗುರುಗಳು.ಜಗನ್ಮಾನ್ಯರು. ಜಗದ್ವಂದ್ಯರು.

ಜಗದ್ಗುರುಗಳು ಸರಸ್ವತಿ ಕುಂಡಕ್ಕೆ ತಲುಪಿ ಸರಸ್ವತಿ ಕುಂಡದ ನೀರು ಪ್ರೋಕ್ಷಣೆ ಮಾಡಿಕೊಂಡು ಸರಸ್ವತಿ ವಿಗ್ರಹವನ್ನು ದರ್ಶನ ಮಾಡಿದರು.ಶೃಂಗೇರಿ ಶಾರದಮ್ಮನೇ ಇಲ್ಲಿ ಬಂದು ಗುರುಗಳಿಗೆ ದರ್ಶನ ನೀಡಿದಂತಿತ್ತು.ಶೃಂಗೇರಿಯಲ್ಲಿ ಶಾರದೆಯದು ಅಭಯಹಸ್ತವಾದರೆ ಇಲ್ಲಿ ಆಕೆ ವರದ ಹಸ್ತ ದಿಂದ ಅನುಗ್ರಹಿಸುತ್ತಿದ್ದಾಳೆ.ಈ ಪುಣ್ಯ ಕ್ಷೇತ್ರ ನೇಪಾಳದ ಶೃಂಗೇರಿ ಆಗಬೇಕು ಎಂದು ಅನುಗ್ರಹಿಸಿ ಎಂದು ಅಲ್ಲಿನ ಭಕ್ತರು ಜಗದ್ಗುರುಗಳಲ್ಲಿ ಪ್ರಾರ್ಥಿಸಿದರು.ಅಮ್ಮನವರ ಮತ್ತು ತಮ್ಮ ಗುರುಗಳ ಅನುಗ್ರಹ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದು ಭಕ್ತರ ನಂಬಿಕೆ.
ಇಲ್ಲಿ ತಿಲಶ್ವೂರ್ ಮಹಾದೇವನಿಗೆ ಜಗದ್ಗುರುಗಳು ಪೂಜೆ ಸಮರ್ಪಿಸಿದರು.ಪಕ್ಕದಲ್ಲೇ ಇರುವ ಪಶುಪತಿನಾಥ ದೇವಾಲಯಕ್ಕೂ ಆಗಮಿಸಿ ಪೂಜಿಸಿದರು.ಇದು ಮುಖ್ಯ ಪಶುಪತಿನಾಥ ದೇವಾಲಯದ ಪ್ರತಿರೂಪದಂತಿದ್ದು ನೇಪಾಳವೆಲ್ಲಾ ಪಶುಪತಿನಾಥ ಕ್ಷೇತ್ರವೇ ಆಗಿದೆ.
ಬೃಹಸ್ಪತಿ ತಪವಾಚರಿಸಿ ಶಾರದಾಂಬೆಯನ್ನು ಒಲಿಸಿಕೊಂಡು ಜಲರೂಪದಲ್ಲಿ ಇಲ್ಲಿ ನೆಲೆಸುವಂತೆ ಮಾಡಿದ್ದಾಗಿ ಸ್ಥಳ ಮಹಾತ್ಮೆ ಸರಸ್ವತಿ ಕುಂಡದ ಕುರಿತು ವಿವರಿಸುತ್ತದೆ.ಈ ಜಲವನ್ನು ಸೇವಿಸಿದ ಬೃಹಸ್ಪತಿ ತನ್ನ ಇಚ್ಛೆಯಂತೆ ಸರಸ್ವತಿಯನ್ನು ತನ್ನಲ್ಲಿಯೇ ಇರುವಂತೆ ಮಾಡಿಕೊಂಡನು ಎಂಬ ಕಥೆ ಇದೆ.
ಸರಸ್ವತಿ ಕುಂಡದಿಂದ ಜಗದ್ಗುರುಗಳು ತಲ್ಪಿದ್ದು ಛಾಯಾಂಬಲ್ ಮಠವನ್ನು.ಈ ಸ್ಥಳ ಪಠಾಣ್ ಎಂಬ ವ್ಯಾಪಾರಿ ಕೇಂದ್ರದಲ್ಲಿದೆ.ಶತಮಾನ ಹಳೆಯದಾದ ಪುಟ್ಟ ಮಂದಿರದಲ್ಲಿ ಶ್ರೀ ವಿಶ್ವೇಶ್ವರ ಮಹಾದೇವನ ಮೂರ್ತಿ ಇದೆ.ಸ್ಥಳೀಯ ಭಕ್ತ ಕುಟುಂಬ ಒಂದು ತಲೆತಲಾಂತರದಿಂದ ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.1967 ರಲ್ಲೂ ಇಲ್ಲಿಗೆ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥರು ಆಗಮಿಸಿ ವಿಶ್ವೇಶ್ವರನನ್ನು ಪೂಜಿಸಿದ್ದರು.ಈ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕುಟುಂಬ ಶತಶತಮಾನಗಳಿಂದಲೂ ಶೃಂಗೇರಿಯ ಭಕ್ತರು.
ಇಲ್ಲಿ ಪೂಜೆ ಸಲ್ಲಿಸಿ ಭಕ್ತರನ್ನು ಅನುಗ್ರಹಿಸಿ ಪಠಾಣ್ ನ ಪ್ರಸಿದ್ಧ ಕೃಷ್ಣ ಮಂದಿರಕ್ಕೆ ಜಗದ್ಗುರುಗಳು ಆಗಮಿಸಿದರು.ಶ್ರೀಕೃಷ್ಣ ಪರಮಾತ್ಮನಿಗೆ ಜಗದ್ಗುರುಗಳು ಪೂಜೆ ಸಲ್ಲಿಸಿದರು.ಈ ದೇವಾಲಯದ ಅಪೂರ್ವ ಕಲಾ ವೈಭವವನ್ನು ಜಗದ್ಗುರುಗಳು ಕಣ್ತುಂಬಿಕೊಂಡರು.
ರಾತ್ರಿ ಶಂಕರಾಚಾರ್ಯ‌ ಮಠದಲ್ಲಿ ಎಂದಿನಂತೆ ಭಕ್ತಸಾಗರದ ನಡುವೆ ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಿತು.

Klive Special Article ಬದುಕಿನ ಪುಟದಲ್ಲೊಂದು ಘಟನೆ

0

ಪ್ರಸಾದ್ ಶ್ರೀವತ್ಸ ,
ದಾವಣಗೆರೆ.

Klive Special Article ಮನುಷ್ಯನೆಂದ ಮೇಲೆ ಹಲವಾರು ಸರಿ-ತಪ್ಪು ಒಳ್ಳೆಯ – ಕೆಟ್ಟ, ಮೂರ್ಖ-ಬುದ್ಧಿವಂತ, ಹೀಗೆ ಹಲವಾರು ಗುಣಗಳ ಮಿಶ್ರಣವಿದೆ. ಆದರೆ ಮನುಷ್ಯನೆಂಬ ಹೆಸರಾದರೂ ಏಕೆ ಬಂದಿತು..? ಎಂಬುದನ್ನೊಮ್ಮೆ ವಿಚಾರ ಮಾಡುತ್ತಾ ಕುಳಿತಾಗ. ಅದಕ್ಕೆ ಭಗವಂತನಿಂದಲೇ ಉತ್ತರ ಬರಬೇಕಾಯಿತು. ಮೇಲೆ ತಿಳಿಸಿದ ಹಾಗೆ ನಾನೊಬ್ಬ ಖಾಸಗಿ ಕಾಲೇಜೊಂದರ ಉಪನ್ಯಾಸಕ. ಒಂದು ದೊಡ್ಡ ಹುದ್ದೆಯನ್ನೂ ನಾನು ಅನುಭವಿಸಿದೆ. ಆದರೆ ಅಧಿಕಾರದ ಅತೀ ಹಿಂಸೆ, ಆ ಒಂಟಿತನ, ಆ ಗಾಂಭೀರ್ಯ ಮತ್ತು ಆ ಟೆನ್ಶನ್ನೂ ಎಲ್ಲ ಒಟ್ಟಾರೆಯಾಗಿ ಒಮ್ಮೆ ಬೇಸರವಾಯಿತು.  ಅಧಿಕಾರ ಏಕೆ ಬೇಕು ? ಎನ್ನಿಸಿತು. ಇದಕ್ಕೂ ಮಿಗಿಲಾಗಿ ನನ್ನ ಈ ವಯಸ್ಸಿನಲ್ಲಿ ಅಂದರೆ ನಾನಿನ್ನೂ ಮೂವತ್ತರ ಗಡಿಯನ್ನೂ ದಾಟದವ. ಜವಾಬ್ದಾರಿ ಹೊತ್ತು ಒಂದೇ ವರ್ಷದಲ್ಲಿ ಬೇಸರವಾಗಿ ಯಥಾ ಪ್ರಕಾರ ನನ್ನ ಅತಿಥಿ ಉಪನ್ಯಾಸಕನಾಗಿಯೇ ಇರಲು ಇಚ್ಛಿಸಿದೆ. ಏಕೆಂದರೆ ನನ್ನ ಮಕ್ಕಳ ಒಡನಾಟ, ಅವರ ಮುಗ್ಧ ಮನಸುಗಳು ನನ್ನನ್ನು ಬೋಧನೆಗೆ ಸೆಳೆದವೇ ಹೊರತು, ಅಧಿಕಾರವಾಗಲೀ, ಹೆಚ್ಚಿನ ಸಂಬಳವಾಗಲೀ ನನ್ನನ್ನು ಉನ್ನತ ಹುದ್ದೆಗೆ ಎಳೆಯಲಿಲ್ಲ. ಏಕೆಂದರೆ ಪಂಜರವು ಬಂಗಾರದ್ದಾದರೂ ಹೇಗೆ ಹಕ್ಕಿಯ ಸ್ವಾತಂತ್ರಯವನ್ನು ಕಳೆದು, ಅದರ ಮನೋ ವ್ಯಾಧಿಗೆ ಕಾರಣವಾಗುವುದುಂಟೋ ಹಾಗೆಯೇ ನನಗೂ ಆಯಿತು.
ಸರಿ ನಾನೂ ಯೋಚಿಸಿದೆ. ನಾನೇನು ಹೇಳಿಕೊಳ್ಳುವಷ್ಟು ಶ್ರೀಮಂತನೇನೂ ಅಲ್ಲ, ಹಾಗೆಂದು ತೀರಾ ಬಡತನದ ಕುಟುಂಬವೂ ಅಲ್ಲ. ಅಂದರೆ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವನು ನಾನು. ಮಕ್ಕಳೊಂದಿಗೆ ಸದಾ ಕಾಲ ಕಳೆಯಬೇಕು ಮತ್ತೆ ಎಲ್ಲ ಮಕ್ಕಳಿಗೆ ನನಗೆಷ್ಟು ಗೊತ್ತಿದೆಯೋ ಅದೆಲ್ಲವನ್ನೂ ಹಂಚಿಬಿಡಬೇಕು, ಆ ಮಕ್ಕಳು ಒಂದು ಸಭೆಯಲ್ಲಿ ನಿಂತು, ಎಲ್ಲರ ಮುಂದೆಯೂ ಸತ್ಯದ ಒಕ್ಕಲು ಕೂಡಬೇಕು ಎಂಬ ಆಸೆಯಿಂದ ಈ ವೃತ್ತಿಗೆ ಬಂದೆ. ಈ “ಪ್ರೊಫೆಶನಲ್ ಜಲಸ್” ಎಂಬ ರಾಕ್ಷಸನೊಬ್ಬನು ಎಲ್ಲ ಕಡೆಯಲ್ಲೂ ಇರುತ್ತಾನೆ ಎಂದು ಕೇಳಿದ್ದೆ. ನಾನು ಅಧಿಕಾರದಲ್ಲಿದ್ದಾಗ ಎಲ್ಲರೂ ನನ್ನ ಹಿಂಬಾಲಕರೇ, ಆಜ್ಞಾಪಾಲಕರೇ, ಆದರೆ ಅಪ್ಪ ಯಾವಾಗಲೂ ಹೇಳುತ್ತಿದ್ದರು ” ಲೇ ಮಗನೇ !  ಇವೆಲ್ಲ ಹೋಟೆ ಚಿತ್ರಾನ್ನ ಕಣೋ, ಹೊಟ್ಟೆ ತುಂಬ್ಸೋದಿಲ್ಲ, ನಿನ್ನ ಹುದ್ದೆ, ಜವಾಬ್ದಾರಿ ದೊಡ್ಡದು ನಿಜಕ್ಕೂ ನಿನ್ನ ವೈರಿಗಳು ಹಿಟ್ಟೋದೆ ಇಲ್ಲಿಂದ ಹುಷಾರು !” ಎಂದು. ನನಗೋ ಒಳ್ಳೆಯ ಹುರುಪು. ನನ್ನ ಕೆಲಸ ಪ್ರಾರಂಭಿಸಿದೆ‌. ಎಲ್ಲವನ್ನೂ ಶಿಸ್ತಿನಲ್ಲಿ ನೋಡಬಯಸಿದ ನನಗೆ ಅದು ಎಲ್ಲದರಲ್ಲಿಯೂ ಮರೀಚಿಕೆಯಾಗಿಯೇ ಉಳಿಯಿತು. ಆದರೂ ಎಲ್ಲಿಯೂ ತೋರಿಸಿಕೊಳ್ಳದೇ ಇದ್ದೆ. ಅದು ಹಾಸ್ಟೆಲ್ ಅಂದರೆ ನಮ್ಮದೊಂದು ವಸತಿ ಶಾಲೆ. ಅಲ್ಲಿ ಸುಮಾರು 150-200 ವಿದ್ಯಾರ್ಥಿಗಳಿದ್ದಾರೆ. ಅದು ಒಂದು ಸೇವಾ ಮನೋಭಾವದಿಂದ ಹುಟ್ಟಿದ ಸಂಸ್ಥೆ. ಆದರೆ ನೌಕರರು ಹಾಗೇ ಇರಬೇಕೆಂದಿಲ್ಲವಲ್ಲ.  ಏಕೆಂದರೆ ಸ್ವ-ಪ್ರತಿಷ್ಠೆಯ ಭೂತ ಹಿಡಿದು ಬುದ್ಧಿಗೆ ಮದ್ದು ಕುಡಿಸಿ ಹುಚ್ಚೆಬ್ಬಿಸಿ ಆಡಿಸುತ್ತದೆ.
Klive Special Article ಬಹುಶಃ ಆ ಕಾರಣದಿಂದಲೋ ಏನೋ ಮಹಾತ್ಮರು ಉನ್ನತ ಹುದ್ದೆಯನ್ನೇರಲು ಬಯಸುವುದಿಲ್ಲ. ಆದರೆ ನಾನು ಮಹಾತ್ಮನೇನಲ್ಲ ನೋಡಿ ಹರೆಯದ ಬಿಸಿ ರಕ್ತ ನನ್ನನ್ನು ಪ್ರಚೋದಿಸಿತು. ಚಿಕ್ಕವರಿಂದ ದೊಡ್ಡವರವರೆಗೂ ಶಿಸ್ತು ಮೂಡಿಸಲು ಹೊರಟ ನನಗೆ ಸೆಕ್ಯೂರಿಟಿಯಿಂದ ವಿದ್ಯಾರ್ಥಿಗಳೆಲ್ಲರಲ್ಲಿ ಅದನ್ನು ಜಾರಿಗೊಳಿಸಲು ತಡವಾಗಲಿಲ್ಲ. ಕ್ರಮೇಣ ಎಲ್ಲವನ್ನೂ ಸರಿಯಾಗಿಸುವ ನಿಟ್ಟಿನಲ್ಲಿ ಬಹುತೇಕ ಎಲ್ಲರೂ ನನ್ನ ವಿರೋಧಿಗಳಾದರು. ಕ್ಯಾಬಿನೆಟ್ ಸಭೆಯಲ್ಲಿ ನಾಯಕನ ಬದಲಾವಣೆ ಬೇಕು ಎಂಬ ಅದೇ ಭಿನ್ನಮತ. ಆದರೆ ಹೈಕಮಾಂಡ್ ( ಇಂದಿಗೂ) ನನ್ನ ಮೇಲಿರುವ ಭರವಸೆಯಿಂದ ( ನಾನು ಹುದ್ದೆಯನ್ನು ಬಿಟ್ಟರೂ) ಯಾರದೇ ಆರೋಪಗಳನ್ನು ಪರಿಗಣಿಸಲಿಲ್ಲ. ಇರಲಿ ಇದೆಲ್ಲ ಏಕೆ ಹೇಳಿದೆನೆಂದರೆ ಅದಕ್ಕೆ ಕಾರಣವಿದೆ. ಅಂದು ನಾನು ಮೇನೇಜರ್ ಆದ ಸಂದರ್ಭದಲ್ಲಿ ನಾವೇ ಒಂದು ಹಸು ಸಾಕೋಣ ಅದರಿಂದ ಬಂದ ಹಾಲನ್ನು ಮಕ್ಕಳಿಗೆ ಕೊಡೋಣ ಎಂಬ ನನ್ನ ಸಲಹೆ ನಮ್ಮ ಛೇರ್ಮನ್ ರಿಗೆ ಒಪ್ಪಿಗೆಯಾಗಿ ಕೂಡಲೇ ತಂದರು.

ನಾನು ಬಾಲ್ಯದಿಂದ ಹಸುಗಳು, ಎಮ್ಮೆಗಳನ್ನು ಮೇಯಿಸಲು ನಮ್ಮ ಹೊಲಕ್ಕೆ ಹೋಗುತ್ತಿದ್ದವನು‌. ಹಾಗಾಗಿ ಹಸುಗಳೆಂದರೆ ನನಗೆ ತುಂಬಾ ಪ್ರೀತಿ. ಬಂದ ಹೊಸ ಹಸುವನ್ನು ಆರತಿಯೆತ್ತಿ ‌ಎಲ್ಲರೂ ಬರಮಾಡಿಕೊಂಡರು. ಎಲ್ಲರ ಸ್ಟೇಟಸ್ಗಳಲ್ಲಿಯೂ ಆ ಹಸುವೇ ತುಂಬಿತ್ತು. ಬರು ಬರುತ್ತ ಹಸು ಹಳೆಯದಾಯಿತಲ್ಲವೇ ಅದರಿಂದ ಅದೂ ಕ್ಯಾಂಪಸ್ಸಿನಲ್ಲಿತ್ತು‌. ಆದರೆ ನಮ್ಮ ಕೌ ಬಾಯ್ ಚಿತ್ತಯ್ಯನನ್ನು ನಾನು ಪ್ರತಿದಿನ ಕೇಳುವವ ” ಹಸು ಹೆಂಗಿದೆ ಚಿತ್ತಯ್ಯ…? ಅದರ ಕಡೆ ಗಮನ ಇರಲಿ. ” ಎಂದು. ಚಿತ್ತಯ್ಯ ಅನಕ್ಷರಸ್ಥ ಆದರೆ ತುಂಬಾ ಭಾವುಕ. ” ಚೆನಾಗೈತೆ ಸಾ! ಹಾಲು ಕರಿಯುತ್ತೆ(ಹಿಂಡುತ್ತದೆ), ದಿನಾ ಮೈ ತೊಳಿತೀನಿ ಸಾ ಮಧ್ಯಾನ್ನ ಬಿಸಿಲು ಜಾಸ್ತಿ ” ಎಂದು ತನ್ನ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಾನೆ.

ಬೆಳಗ್ಗೆ ಎದ್ದ ಅವನಿಗೆ ಸುಮಾರು ಕೆಲಸಗಳುಂಟು ಐದು-ಐದೂವರೆಗೆ ಎದ್ದವನು ಹಸುವಿನ ಕೊಟ್ಟಿಗೆ ಚೊಕ್ಕಟಗೊಳಿಸಿ, ಹಸುವಿಗೆ ನೀರು ಕುಡಿಸಿ, ಎಂಟು-ಎಂಟೂವರೆಯ ಹೊತ್ತಿಗೆ ತಿಂಡಿ ತಿಂದು, ಹಸುವನ್ನು ಪಕ್ಕದ ನಮ್ಮ ಸಂಸ್ಥೆಯದೇ ಜಮೀನಿನಲ್ಲಿ ಹನ್ನೊಂದರವರೆಗೆ ಮೇಯಿಸಿ ಮತ್ತೆ ಕ್ಯಾಂಪಸ್ಸಿಗೆ ಬಂದು ಅದರ ಮೈ ತೊಳೆದು ಮರದಡಿಯಲ್ಲಿ ಕಟ್ಟುತ್ತಾನೆ. ಅದು ಅವನ ಗೋಸೇವೆ ತುಂಬಾ ಖುಷಿ ನನಗೆ. ಆದರೆ ಅವನು ಆ ಹಸುವಿನ ಕಣ್ಣು-ಹುಣ್ಣುಗಳನ್ನು ನೋಡಿದರೂ ಸಹಾ ಆ ಹಸು ಯಾರನ್ನು ನೋಡಿ ಒದರುತ್ತಿತ್ತೋ ಗೊತ್ತಿಲ್ಲ.‌ಒಂದುವೇಳೆ ನಾನು ಕಾಲೇಜಿಗೆ ಹೋಗಿ ನನ್ನ ಬೈಕ್ ನಿಲ್ಲಿಸಿದಾಗ ಅದು ಅಲ್ಲಿ ಇತ್ತೆಂದರೆ ನನ್ನೆಡೆಗೆ ನೋಡಿ ಒದರುತ್ತಿತ್ತು. ಅದರ ಹತ್ತಿರ ಹೋಗಿ ಅದರ ಬೆನ್ನು ಚಪ್ಪರಿಸಿ(ಸವರಿ) ” ಏನಮ್ಮ ! ” ಎಂದರೆ ಅದಕ್ಕೇನು ಖುಷಿಯೋ ತಿಳಿಯದು. ಆ ಪ್ರೀತಿಗೆ ಒಮ್ಮೆ ತನ್ನ ಒರಟಾದ ನಾಲಗೆಯಿಂದ ನನ್ನ ಕೈ ನೆಕ್ಕಬೇಕು ಅದು ಅದರ ಪ್ರೀತಿ.

Klive Special Article ಹೀಗಿದ್ದ ಕ್ಷಣಗಳು ತುಂಬಾ ಸಂತಸ. ಆದರೆ‌ ಮೊನ್ನೆ ಸಹಜವಾಗಿ ನಾನು ಒಂಭತ್ತೂ ಮುಕ್ಕಾಲಿಗೆ ಕಾಲೇಜಿಗೆ ಹೋದೆ. ಸೆಕ್ಯೂರಿಟಿ ತಿಮ್ಮಣ್ಣ, ಕಟ್ಟಡದ ಬೇಲ್ದಾರ ಶಿವಣ್ಣ ಮತ್ತೆ ಕೌ ಬಾಯ್ ಚಿತ್ತಯ್ಯ ಹಸುವಿನ ಮುಂದೆ ನಿಂತಿದ್ದರು. ನನ್ನ ನೋಡಿದ ಚಿತ್ತಯ್ಯ. ” ಸಾ ! ಹಸ ಯಾಕೋ ಎದ್ದೇಳ್ತಿಲ್ಲ ಸಾ !” ಎಂದ. ನಾನೂ ಹಾಗೆಯೇ ಹೋಗಿ ಒಮ್ಮೆ ನೋಡಿದೆ ನಾನು ಪಶುವೈದ್ಯನೇನೂಲ್ಲ. ಆದರೆ ಅದನ್ನು ಮುಟ್ಟ ನೋಡಿದಾಗ ಜ್ವರವಿದ್ದಂತಿತ್ತು. ಆದರೆ ನಾನು ಒಮ್ಮೆ ಬಂದು” ಹೇ ! ಏಳು. ” ಎಂದರೆ ಆ ಹಸುವೂ ಸಹ ಏಳಲು ಪ್ರಯತ್ನಿಸಿತು‌. ಆದರೆ ಅತ್ಯಂತ ಸುಸ್ತಾಗಿದ್ದ ಆ ಹಸು ಮತ್ತ ಕುಸಿಯಿತು. ಡ್ರೈವರ್ ಗೌಸ್ ಪೀರ್ ನನ್ನು ಕರೆದು ಹೇಳಿದೆ ” ಗೌಸು ! ಡಾಕ್ಟ್ರುನ ಕರ್ಕೊಂಡು ಬಾ. ಇಲ್ಲಿಲ್ಲದಿದ್ದರೆ, ಪಕ್ಕದ ಹಳ್ಳಿಗೆ ಹೋಗು”. ತಕ್ಷಣವೇ ಗೌಸ್ ಮತ್ತೆ ಚಿತ್ತಯ್ಯ ಇಬ್ಬರೂ ಎರಡು ಮೂರು ಊರುಗಳಲ್ಲಿ ನೋಡಿ ಒಬ್ಬ ವೈದ್ಯರನ್ನು ಕರೆತಂದು ನನಗೆ ತಿಳಿಸಿದರು. ನಾನೂ ಅವರೊಡನೆ ಮಾತನಾಡಿದೆ ” Nothibg to worry sir ! ಸ್ವಲ್ಪ food poison ಆಗಿದೆ” ಈಗ ಗ್ಲೂಕೋಸ್ ಹಾಕೋಣ ಎಂದು ಒಂದು ಬಾಟಲ್ ಹಾಕಿದರು. ನನಗೆ exam duty ಇದ್ದಿದ್ದರಿಂದ ಅವರಿಗೆ ಹಾಕಲು ಹೇಳಿ ನಾನೂ ಹೊರಟೆ‌.
ದಿನದ ಕೆಲಸ ಮುಗಿಯಿತು. ಮಧ್ಯಾಹ್ನ ಒಂದೂವರೆಗೆ ನಾನು ಕಾಲೇಜಿನಿಂದ ಹೊರಡಲನುವಾದಾಗ ಗೌಸ್ ಬಂದು ” ಬಾರಪ್ಪ ಇಲ್ಲಿ, ನೋಡು ” ಎಂದು ನನ್ನನ್ನು ಎಳೆದುಕೊಂಡು ಹಸುವಿನ ಬಳಿಗೆ ಕರೆದೊಯ್ದ. ಹಸು ಗತಪ್ರಾಣವಾಗಿತ್ತು, ನನಗೆ ಮನಸು ತಡೆಯದೇ ನಮ್ಮ ಚೇರ್ಮೆನ್ನರಿಗೆ ಕಾಲ್ ಮಾಡಿದೆ ಅವರೂ ಬಂದು ನೋಡಿದರು. ನನ್ನ ಪರಿಚಯದ ಬಹಳ ಭಾವಜೀವಿಯಾದ ಇನ್ನೊಬ್ಬ ಪಶುವೈದ್ಯರಿಗೆ ತಿಳಿಸಿದೆ ಅದರ ಸಧ್ಯದ ವೀಡಿಯೋ ತುಣುಕು ಕೂಡಾ ಕಳಿಸಿದೆ. ಅವರು ಹೇಳಿದರು ” ಸ್ವಲ್ಪ critical ಇದೆ. ” ಎಂದು ಯಾವುದೋ ಒಂದು ಮೆಡಿಸಿನ್ ಹೇಳಿದರು. ಯಾರು ಹೋಗುವವರಿಲ್ಲದ ಕಾರಣ ನಾನೇ ಹೊರಟೆ. ಗೌಸ್ ಮತ್ತೊಮ್ಮೆ ವೈದ್ಯರನ್ನು ಕರೆತತರಲು ಹೋದ. ನಾನು ಬರುವಷ್ಟರಲ್ಲಿ ವೈದ್ಯರು ಬಂದು ” enrofoxacin, Belamin,” ಇಂಜೆಕ್ಷನ್ ಹಾಕಿದ್ದರು. ಹಸು ಸ್ವಲ್ಪ ಚೇತರಿಸಿಕೊಂಡಂತಿತ್ತು.ನಾನು ತಂದ ಅಂಟಾಸಿಡ್ ಅವರೇ ಕುಡಿಸಿದರು. ಸ್ವಲ್ಪ ತಲೆಯೆತ್ತಿದ ಹಸುವಿನ ಕಣ್ಣಲ್ಲಿ ನೀರು ಬರಲಾರಂಭಿಸಿತು. ಮನ ಕಲುಕುವಂತಿದ್ದ‌ ಅದರ ಕಣ್ಣು, ಒಮ್ಮೆ  ಪೂರ್ಣ ದೃಷ್ಟಿಯಿಂದ ನನ್ನ ಕಡೆಗೆ ನೋಡಿ ಹಾಗೇ ಮಲಗಿತು. ನಾನು ಅಂದುಕೊಂಡೆ may be injections power ಏನೋ ಅಂತ. ಮತ್ತೆ ಹೊರಟೆ. ” ನೋಡ್ತಾ ಇರು ಹಸುನ. ನಾನು ಸಂಜೆ ಸ್ಟಡೀ ಟೈಮ್ ಇದೆ ಆಗ ಬಂದು ಇನ್ನೊಮ್ಮೆ ಅಂಟಾಸಿಡ್ ಹಾಕೋಣ ” ಅಂತ. ಚಿತ್ತಯ್ಯ ತಲೆಯಾಡಿಸಿದ. ನಾನು ಅಲ್ಲಿಂದ ಬಂದು ನನ್ನ ಗೆಳೆಯನ ಅಂಗಡಿಯಲ್ಲಿ ಹೆಜ್ಜೆಯಿಡುವಾಗ ಚಿತ್ತಯ್ಯ ಕಾಲ್‌ಮಾಡಿ ದಃಖಿಸತೊಡಗಿದ. ” ಸಾ ! ಹಸ ಓಯ್ತು ಸಾ !” ಎಂದ. ಊಟ ಸೇರಲಿಲ್ಲ. ಹಾಗೆಯೇ  ಕಾಲೇಜಿನ ಕಡೆಗೆ ಹೊರಟೆ‌. ನಮ್ಮ ಸೆಕ್ರೇಟರಿ ಕಾಲ್ ಮಾಡಿದರು ಅವರಿಗೂ ತುಂಬಾ ನೋವಾಗಿತ್ತು ಅವರು ಅದೇ ಹೇಳಿದರು.‌ಕೊನೆಗೆ ಅದನ್ನು ಸಂಸ್ಕಾರ ಮಾಡಿ ಬಂದರು.

ಇದರಲ್ಲಿ ಏನಿದೆ ? ಎಂದು ಕೇಳುವಿರಾ. ಯಾರಾದರೂ ಒಬ್ಬ ಶಿಕ್ಷಕರೋ, ಉಪನ್ಯಾಸಕರೋ ಇದನ್ನು ಗಮನಿಸಿದ್ದರೆ. ಆ ಜೀವ ಹೋಗುತ್ತಿರಲಿಲ್ಲ. ಅಂದರೆ ನಾನು ಮಾತ್ರ ಮನುಷ್ಯ ಇತರರು ಅಲ್ಲ ಎಂದು ಹೇಳುತ್ತಿಲ್ಲ. ನಾನು ಉನ್ನತ ಹುದ್ದೆಯಲ್ಲಿದ್ದಾಗ ಕೆಲವರ ಅಹಮ್ಮನ್ನು ಅಡಗಿಸಿದ್ದ ಪರಿಣಾಮ ಈಗ ನಾನು ಕೇವಲ ಅತಿಥಿ ಉಪನ್ಯಾಸಕ. ಅದರೊಟ್ಟಿಗೆ ಯಾವುದೋ ವೈಯಕ್ತಿಕ ದ್ವೇಷ, ಪಾಪವೆನಿಸಲಿಲ್ಲ. ” ಹೊಟ್ಟೆಯಲ್ಲಿ ಬೆಂಕಿ ಬಿದ್ದ ಹಾಗಾಯ್ತು ” ಸ್ಟಡೀ ಟೈಂ ಮುಗಿಸಿ ಹೊರಬಿದ್ದೆ. ಸೀದಾ ಮನೆಗೆ ಬಂದೆ” ಅಪ್ಪನಿಗೆ ಹೇಳಿದೆ, ಅಕ್ಕನಿಗೆ ಹೇಳಿದೆ ಅವರೂ ನೊಂದುಕೊಂಡರು. ಏಕೆಂದರೆ ಮನೆಯ ಮಕ್ಕಳಿಗಿಂತಲೂ ನಾವು ಹಸುಗಳನ್ನು ಪ್ರೀತಿಸುತ್ತಿದ್ದವರು. ಅವುಗಳೂ ಅದೇ ರೀತಿ ನಮ್ಮೊಡನೆ ಪ್ರೇಮದಿಂದ ಕೂಡಿದ್ದವುಗಳು. ಅಂತಹುದೇ ಇನ್ನೊಂದು ಹಸು ನಮ್ಮ‌ ನಿರ್ಲಕ್ಷ್ಯದಿಂದ ಸತ್ತರೆ ಅದಕ್ಕೇನೆನ್ನಬೇಕು. ವಿಧಿಯೋ, ಪೌರುಷವೋ ಅಥವಾ ಅಹಮ್ಮೋ…..?

ನಿಜಕ್ಕೂ ನಾವು ಮನುಷ್ಯರೋ ? ಅಥವಾ ಪಶುಗಳೋ ಎನ್ನಿಸಿತು. ಅದರ ಹಾಲು, ಮೊಸರು, ಮಜ್ಜಿಗೆ ಎಲ್ಲ ಬಳಸಿದ ನಾವು ಕೊನೆಗೆ ಅದರ ಸಾವಿಗೂ ಕಾರಣರಾದೆವೇ..? ಎನ್ನಿಸಿತು. ನಮ್ಮ ಚೇರ್ಮನ್ನರು ತುಂಬಾ ಭಾವುಕರು ಅವರು ದುಃಖ ತೋರಲಿಲ್ಲ ಆದರೆ ಅವರ ಮನದಲ್ಲಿದ್ದ ದುಗುಡ ನನಗೆ ಅರಿವಾಯಿತು. ಆದರೇನು ಮಾಡುವುದು ಈಗ ಕಾಲ ಮಿಂಚಿಹೋಗಿದೆ. ಯಾವ ಮಾತಿಗೂ ಅರ್ಥವಿಲ್ಲ ಎನ್ನಿಸಿತು. ಭೂತದಯೆಯನ್ನು ನಾವು ಸಾಧಿಸಬೇಕಾಗಿದೆ. ಅದು ಪಶುವಾಗಿದ್ದರೂ ಹೋದದ್ದ ಪ್ರಾಣವೇ ಅಲ್ಲವೇ…..

( ಪ್ರಸಾದ್ ಶ್ರೀವತ್ಸ)

Vinobanagar Police ಶಿವಮೊಗ್ಗದಲ್ಲಿ ವೃದ್ಧೆಯ ಮಾಂಗಲ್ಯ ಕಳವು.ಈರ್ವರು ಆರೋಪಿಗಳ ಬಂಧನ

0

Vinobanagar Police ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೂರ್ಯ ಬಡಾವಣೆಯಲ್ಲಿ ವೃದ್ಧೆಯೊಬ್ಬರ ಮಾಂಗಲ್ಯ ಸರ ಕಳವು ಮಾಡಿದ ಪ್ರಕರಣವನ್ನು ವಿನೋಬನಗರ ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
73 ವರ್ಷದ ವೃದ್ಧೆಯೊಬ್ಬರು ಮೇ 13ರಂದು ಬೆಳಗಿನ ವಾಕಿಂಗ್‌ಗೆ ತೆರಳಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಪ್ರಕರಣದ ತನಿಖೆಯನ್ನು ವಿನೋಬನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂತೋಷ ಕುಮಾರ್ ಡಿ.ಕೆ ನೇತೃತ್ವದಲ್ಲಿ ಪಿಎಸ್‌ಐ ತಿರುಮಲೇಶ್ ಜಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿತ್ತು.
ತನಿಖಾ ತಂಡವು ಪ್ರಕರಣದ ಆರೋಪಿಗಳಾದ ಚಾಲುಕ್ಯನಗರ ಗೋಪಾಳ ನಿವಾಸಿ ಭರತ್ (21) ಹಾಗೂ ಮೇಲಿನ ತುಂಗಾನಗರ ಗೋಪಾಳ ನಿವಾಸಿ ಮೊಹ್ಮದ್ ಆಬೀದ್ (19) ಎಂಬುವರನ್ನ ಬಂಧಿಸಿದೆ. ಆರೋಪಿಗಳಿಂದ ಸುಮಾರು 7 ಗ್ರಾಂ ತೂಕದ 1 ಲಕ್ಷ ಮೌಲ್ಯದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ 40 ಸಾವಿರ ಮೌಲ್ಯದ ಬೈಕ್ ಸೇರಿದಂತೆ ಒಟ್ಟು 1.40 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೇವಸ್ಥಾನಗಳ ಹುಂಡಿಹಣ ಕಳವು.ಕಳ್ಳನ ಸೆರೆ

0

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕಟ್ಟೆಹಕ್ಕಲು ಸಮೀಪದ ಹೊಸಕೆರೆ ದೇವಸ್ಥಾನದಲ್ಲಿ ಹುಂಡಿ ಹಣ ಕಳವು ಮಾಡುತ್ತಿದ್ದ ಕಳ್ಳನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ದೇವಸ್ಥಾನದ ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯೊಬ್ಬ ಬಳಿಕ ಆ ಹಣದಲ್ಲಿ ಎಣ್ಣೆ ಖರೀದಿಸಲು ಸ್ಥಳೀಯ ಬಾರ್‌ಗೆ ತೆರಳಿದ್ದಾನೆ. ಈ ವೇಳೆ ಆತ ನೀಡಿದ ನೋಟುಗಳಲ್ಲಿ ಕುಂಕುಮದ ಕಲೆ ಇರುವುದನ್ನು ಗಮನಿಸಿದ ಬಾರ್ ಮಾಲೀಕ ವರ್ಧನ್ ಅವರಿಗೆ ಅನುಮಾನ ಬಂದಿದೆ.

ತಕ್ಷಣವೇ ಆರೋಪಿಯನ್ನು ವಿಚಾರಿಸಿದಾಗ ದೇವಸ್ಥಾನದ ಹುಂಡಿ ಹಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ವರ್ಧನ್ ಹಾಗೂ ಅವರ ಸ್ನೇಹಿತ ನಿತಿನ್ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸ್ಥಳೀಯರ ಜಾಗೃತಿಯಿಂದ ದೇವಸ್ಥಾನದ ಹಣ ಕಳವು ಪ್ರಕರಣ ಬಯಲಾಗಿದ್ದು, ಬಾರ್ ಮಾಲೀಕ ವರ್ಧನ್ ಮತ್ತು ನಿತಿನ್ ಅವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Shivaganga Yoga Center ಪ್ರತಿನಿತ್ಯಯುಜನತೆ ಕಡಿಮೆ ವಯಸ್ಸಿನಲ್ಲೇಸಾವನ್ನಪ್ಪುತ್ತಿರುವುದು ಕಳವಳಕಾರಿ- ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ

0

Shivaganga Yoga Center ಒತ್ತಡದ ಬದುಕಿನ ಶೈಲಿಯಿಂದ ಹೊರಬರಲು ಯೋಗ, ಪ್ರಾಣಾಯಾಮ ಹಾಗೂ ಧ್ಯಾನದ ಅಭ್ಯಾಸವು ಸಹಕಾರಿಯಾಗುತ್ತದೆ ಎಂದು ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಹೇಳಿದರು.

ವಿನೋಬನಗರದ ಕಾಶಿಪುರ ಕಲ್ಲಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿ ನಿತ್ಯ ಕಡಿಮೆ ವಯಸ್ಸಿನ ಯುವಜನತೆ ಸಾವನ್ನಪ್ಪುತ್ತಿರುವುದು ಕಳವಳಕಾರಿಯಾಗಿದೆ. ಇದಕ್ಕೆ ಶಿಸ್ತುಬದ್ಧ ಆಹಾರ ಪದ್ಧತಿ ರೂಡಿಸಿಕೊಳ್ಳದೆ ಇರುವುದು ಹಾಗೂ ಒತ್ತಡದ ಜೀವನ ಶೈಲಿ ಮುಖ್ಯ ಕಾರಣವಾಗಿದೆ. ಇದರಿಂದ ಹೊರಬರಲು ಯೋಗ ತುಂಬಾ ಮುಖ್ಯವಾಗಿದೆ ಎಂದು ತಿಳಿಸಿದರು.

ಆಸ್ಟ್ರೇಲಿಯಾದಲ್ಲಿ ಶಿವಗಂಗಾ ಯೋಗ ಕೇಂದ್ರದ ತರಬೇತಿ ಘಟಕ ಪ್ರಾರಂಭಿಸಿದ್ದು, ವಿದೇಶದಲ್ಲಿಯೂ ಸಹ ಸಾಕಷ್ಟು ಜನ ನಮ್ಮ ಭಾರತೀಯ ಯೋಗ ಪದ್ಧತಿಯನ್ನು ಅನುಸರಿಸುತ್ತಿರುವುದು ಭಾರತೀಯ ಜೀವನಶೈಲಿಗೆ ಇರುವ ಪ್ರಾಮುಖ್ಯತೆ ತೋರಿಸುತ್ತದೆ. ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಯೋಗ, ಧ್ಯಾನ ಹಾಗೂ ಪ್ರಾಣಯಾಮ ಜತೆಗೆ ಸಕಾರಾತ್ಮಕ ಮಾಹಿತಿಗಳನ್ನು ಪಡೆದುಕೊಳ್ಳುವುದು ನಮ್ಮ ಆಯುಷ್ಯ ವೃದ್ಧಿ ಮಾಡುತ್ತದೆ ಎಂದು ಹೇಳೀದರು.

Shivaganga Yoga Center ಹಿರಿಯ ಯೋಗ ಶಿಕ್ಷಕ ಜಿ.ಎಸ್.ಓಂಕಾರ್ ಮಾತನಾಡಿ, ಯೋಗ, ಪ್ರಾಣಾಯಾಮ ಮತ್ತು ಧ್ಯಾನವು ಮಾನಸಿಕ ಹಾಗೂ ದೈಹಿಕವಾಗಿ ಸದೃಢರನ್ನಾಗಿಸುತ್ತದೆ. ನಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ. ದೇಹದಲ್ಲಿ ಚೆನ್ನಾಗಿ ರಕ್ತಸಂಚಾರ ಆಗುವುದರಿಂದ ಯಾವುದೇ ಕಾಯಿಲೆಗಳು ನಮ್ಮ ಬಳಿ ಸುಳಿಯುವುದಿಲ್ಲ ಎಂದರು.
ಯೋಗ ಶಿಕ್ಷಕ ಎಚ್.ಕೆ.ಹರೀಶ್ ಮಾತನಾಡಿ, ಕ್ರಮಬದ್ಧವಾದ ಯೋಗಭ್ಯಾಸ ನಮ್ಮಲ್ಲಿ ಆತ್ಮಬಲ ವೃದ್ಧಿಸುವುದರ ಜತೆಗೆ ಜೀವನೋತ್ಸಾಹವನ್ನು ಮೂಡಿಸುತ್ತದೆ. ಶಿವಗಂಗಾ ಯೋಗ ಕೇಂದ್ರದಿಂದ 38 ಕೇಂದ್ರಗಳಲ್ಲಿ ನಡೆಯುವ ಉಚಿತ ಯೋಗ ಪ್ರಾಣಯಾಮ ಧ್ಯಾನದಂತಹ ಶಿಬಿರಗಳಲ್ಲಿ ಸಾರ್ವಜನಿಕರು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ಯೋಗಪಟು ಸುಬ್ರಹ್ಮಣ್ಯ ಯೋಗಾಚಾರ್ಯರನ್ನು ಗೌರವಿಸಲಾಯಿತು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ನರಸೋಜಿರಾವ್ ಮಹೇಶ್, ಶ್ರೀನಿವಾಸ್, ದೀಪಕ್, ಶಿವಕುಮಾರ್, ಗಾಯತ್ರಿ, ರಮೇಶ್, ಸುಜಾತಾ, ಉಷಾ, ಸೌಮ್ಯ, ಲತಾ, ಪ್ರೇಮ, ವಿಕ್ಕಿ, ಶಂಕರ್, ಶಶಿಧರ್ ಉಪಸ್ಥಿತರಿದ್ದರು.