ಪ್ರಸಾದ್ ಶ್ರೀವತ್ಸ ,
ದಾವಣಗೆರೆ.
Klive Special Article ಮನುಷ್ಯನೆಂದ ಮೇಲೆ ಹಲವಾರು ಸರಿ-ತಪ್ಪು ಒಳ್ಳೆಯ – ಕೆಟ್ಟ, ಮೂರ್ಖ-ಬುದ್ಧಿವಂತ, ಹೀಗೆ ಹಲವಾರು ಗುಣಗಳ ಮಿಶ್ರಣವಿದೆ. ಆದರೆ ಮನುಷ್ಯನೆಂಬ ಹೆಸರಾದರೂ ಏಕೆ ಬಂದಿತು..? ಎಂಬುದನ್ನೊಮ್ಮೆ ವಿಚಾರ ಮಾಡುತ್ತಾ ಕುಳಿತಾಗ. ಅದಕ್ಕೆ ಭಗವಂತನಿಂದಲೇ ಉತ್ತರ ಬರಬೇಕಾಯಿತು. ಮೇಲೆ ತಿಳಿಸಿದ ಹಾಗೆ ನಾನೊಬ್ಬ ಖಾಸಗಿ ಕಾಲೇಜೊಂದರ ಉಪನ್ಯಾಸಕ. ಒಂದು ದೊಡ್ಡ ಹುದ್ದೆಯನ್ನೂ ನಾನು ಅನುಭವಿಸಿದೆ. ಆದರೆ ಅಧಿಕಾರದ ಅತೀ ಹಿಂಸೆ, ಆ ಒಂಟಿತನ, ಆ ಗಾಂಭೀರ್ಯ ಮತ್ತು ಆ ಟೆನ್ಶನ್ನೂ ಎಲ್ಲ ಒಟ್ಟಾರೆಯಾಗಿ ಒಮ್ಮೆ ಬೇಸರವಾಯಿತು. ಅಧಿಕಾರ ಏಕೆ ಬೇಕು ? ಎನ್ನಿಸಿತು. ಇದಕ್ಕೂ ಮಿಗಿಲಾಗಿ ನನ್ನ ಈ ವಯಸ್ಸಿನಲ್ಲಿ ಅಂದರೆ ನಾನಿನ್ನೂ ಮೂವತ್ತರ ಗಡಿಯನ್ನೂ ದಾಟದವ. ಜವಾಬ್ದಾರಿ ಹೊತ್ತು ಒಂದೇ ವರ್ಷದಲ್ಲಿ ಬೇಸರವಾಗಿ ಯಥಾ ಪ್ರಕಾರ ನನ್ನ ಅತಿಥಿ ಉಪನ್ಯಾಸಕನಾಗಿಯೇ ಇರಲು ಇಚ್ಛಿಸಿದೆ. ಏಕೆಂದರೆ ನನ್ನ ಮಕ್ಕಳ ಒಡನಾಟ, ಅವರ ಮುಗ್ಧ ಮನಸುಗಳು ನನ್ನನ್ನು ಬೋಧನೆಗೆ ಸೆಳೆದವೇ ಹೊರತು, ಅಧಿಕಾರವಾಗಲೀ, ಹೆಚ್ಚಿನ ಸಂಬಳವಾಗಲೀ ನನ್ನನ್ನು ಉನ್ನತ ಹುದ್ದೆಗೆ ಎಳೆಯಲಿಲ್ಲ. ಏಕೆಂದರೆ ಪಂಜರವು ಬಂಗಾರದ್ದಾದರೂ ಹೇಗೆ ಹಕ್ಕಿಯ ಸ್ವಾತಂತ್ರಯವನ್ನು ಕಳೆದು, ಅದರ ಮನೋ ವ್ಯಾಧಿಗೆ ಕಾರಣವಾಗುವುದುಂಟೋ ಹಾಗೆಯೇ ನನಗೂ ಆಯಿತು.
ಸರಿ ನಾನೂ ಯೋಚಿಸಿದೆ. ನಾನೇನು ಹೇಳಿಕೊಳ್ಳುವಷ್ಟು ಶ್ರೀಮಂತನೇನೂ ಅಲ್ಲ, ಹಾಗೆಂದು ತೀರಾ ಬಡತನದ ಕುಟುಂಬವೂ ಅಲ್ಲ. ಅಂದರೆ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವನು ನಾನು. ಮಕ್ಕಳೊಂದಿಗೆ ಸದಾ ಕಾಲ ಕಳೆಯಬೇಕು ಮತ್ತೆ ಎಲ್ಲ ಮಕ್ಕಳಿಗೆ ನನಗೆಷ್ಟು ಗೊತ್ತಿದೆಯೋ ಅದೆಲ್ಲವನ್ನೂ ಹಂಚಿಬಿಡಬೇಕು, ಆ ಮಕ್ಕಳು ಒಂದು ಸಭೆಯಲ್ಲಿ ನಿಂತು, ಎಲ್ಲರ ಮುಂದೆಯೂ ಸತ್ಯದ ಒಕ್ಕಲು ಕೂಡಬೇಕು ಎಂಬ ಆಸೆಯಿಂದ ಈ ವೃತ್ತಿಗೆ ಬಂದೆ. ಈ “ಪ್ರೊಫೆಶನಲ್ ಜಲಸ್” ಎಂಬ ರಾಕ್ಷಸನೊಬ್ಬನು ಎಲ್ಲ ಕಡೆಯಲ್ಲೂ ಇರುತ್ತಾನೆ ಎಂದು ಕೇಳಿದ್ದೆ. ನಾನು ಅಧಿಕಾರದಲ್ಲಿದ್ದಾಗ ಎಲ್ಲರೂ ನನ್ನ ಹಿಂಬಾಲಕರೇ, ಆಜ್ಞಾಪಾಲಕರೇ, ಆದರೆ ಅಪ್ಪ ಯಾವಾಗಲೂ ಹೇಳುತ್ತಿದ್ದರು ” ಲೇ ಮಗನೇ ! ಇವೆಲ್ಲ ಹೋಟೆ ಚಿತ್ರಾನ್ನ ಕಣೋ, ಹೊಟ್ಟೆ ತುಂಬ್ಸೋದಿಲ್ಲ, ನಿನ್ನ ಹುದ್ದೆ, ಜವಾಬ್ದಾರಿ ದೊಡ್ಡದು ನಿಜಕ್ಕೂ ನಿನ್ನ ವೈರಿಗಳು ಹಿಟ್ಟೋದೆ ಇಲ್ಲಿಂದ ಹುಷಾರು !” ಎಂದು. ನನಗೋ ಒಳ್ಳೆಯ ಹುರುಪು. ನನ್ನ ಕೆಲಸ ಪ್ರಾರಂಭಿಸಿದೆ. ಎಲ್ಲವನ್ನೂ ಶಿಸ್ತಿನಲ್ಲಿ ನೋಡಬಯಸಿದ ನನಗೆ ಅದು ಎಲ್ಲದರಲ್ಲಿಯೂ ಮರೀಚಿಕೆಯಾಗಿಯೇ ಉಳಿಯಿತು. ಆದರೂ ಎಲ್ಲಿಯೂ ತೋರಿಸಿಕೊಳ್ಳದೇ ಇದ್ದೆ. ಅದು ಹಾಸ್ಟೆಲ್ ಅಂದರೆ ನಮ್ಮದೊಂದು ವಸತಿ ಶಾಲೆ. ಅಲ್ಲಿ ಸುಮಾರು 150-200 ವಿದ್ಯಾರ್ಥಿಗಳಿದ್ದಾರೆ. ಅದು ಒಂದು ಸೇವಾ ಮನೋಭಾವದಿಂದ ಹುಟ್ಟಿದ ಸಂಸ್ಥೆ. ಆದರೆ ನೌಕರರು ಹಾಗೇ ಇರಬೇಕೆಂದಿಲ್ಲವಲ್ಲ. ಏಕೆಂದರೆ ಸ್ವ-ಪ್ರತಿಷ್ಠೆಯ ಭೂತ ಹಿಡಿದು ಬುದ್ಧಿಗೆ ಮದ್ದು ಕುಡಿಸಿ ಹುಚ್ಚೆಬ್ಬಿಸಿ ಆಡಿಸುತ್ತದೆ.
Klive Special Article ಬಹುಶಃ ಆ ಕಾರಣದಿಂದಲೋ ಏನೋ ಮಹಾತ್ಮರು ಉನ್ನತ ಹುದ್ದೆಯನ್ನೇರಲು ಬಯಸುವುದಿಲ್ಲ. ಆದರೆ ನಾನು ಮಹಾತ್ಮನೇನಲ್ಲ ನೋಡಿ ಹರೆಯದ ಬಿಸಿ ರಕ್ತ ನನ್ನನ್ನು ಪ್ರಚೋದಿಸಿತು. ಚಿಕ್ಕವರಿಂದ ದೊಡ್ಡವರವರೆಗೂ ಶಿಸ್ತು ಮೂಡಿಸಲು ಹೊರಟ ನನಗೆ ಸೆಕ್ಯೂರಿಟಿಯಿಂದ ವಿದ್ಯಾರ್ಥಿಗಳೆಲ್ಲರಲ್ಲಿ ಅದನ್ನು ಜಾರಿಗೊಳಿಸಲು ತಡವಾಗಲಿಲ್ಲ. ಕ್ರಮೇಣ ಎಲ್ಲವನ್ನೂ ಸರಿಯಾಗಿಸುವ ನಿಟ್ಟಿನಲ್ಲಿ ಬಹುತೇಕ ಎಲ್ಲರೂ ನನ್ನ ವಿರೋಧಿಗಳಾದರು. ಕ್ಯಾಬಿನೆಟ್ ಸಭೆಯಲ್ಲಿ ನಾಯಕನ ಬದಲಾವಣೆ ಬೇಕು ಎಂಬ ಅದೇ ಭಿನ್ನಮತ. ಆದರೆ ಹೈಕಮಾಂಡ್ ( ಇಂದಿಗೂ) ನನ್ನ ಮೇಲಿರುವ ಭರವಸೆಯಿಂದ ( ನಾನು ಹುದ್ದೆಯನ್ನು ಬಿಟ್ಟರೂ) ಯಾರದೇ ಆರೋಪಗಳನ್ನು ಪರಿಗಣಿಸಲಿಲ್ಲ. ಇರಲಿ ಇದೆಲ್ಲ ಏಕೆ ಹೇಳಿದೆನೆಂದರೆ ಅದಕ್ಕೆ ಕಾರಣವಿದೆ. ಅಂದು ನಾನು ಮೇನೇಜರ್ ಆದ ಸಂದರ್ಭದಲ್ಲಿ ನಾವೇ ಒಂದು ಹಸು ಸಾಕೋಣ ಅದರಿಂದ ಬಂದ ಹಾಲನ್ನು ಮಕ್ಕಳಿಗೆ ಕೊಡೋಣ ಎಂಬ ನನ್ನ ಸಲಹೆ ನಮ್ಮ ಛೇರ್ಮನ್ ರಿಗೆ ಒಪ್ಪಿಗೆಯಾಗಿ ಕೂಡಲೇ ತಂದರು.
ನಾನು ಬಾಲ್ಯದಿಂದ ಹಸುಗಳು, ಎಮ್ಮೆಗಳನ್ನು ಮೇಯಿಸಲು ನಮ್ಮ ಹೊಲಕ್ಕೆ ಹೋಗುತ್ತಿದ್ದವನು. ಹಾಗಾಗಿ ಹಸುಗಳೆಂದರೆ ನನಗೆ ತುಂಬಾ ಪ್ರೀತಿ. ಬಂದ ಹೊಸ ಹಸುವನ್ನು ಆರತಿಯೆತ್ತಿ ಎಲ್ಲರೂ ಬರಮಾಡಿಕೊಂಡರು. ಎಲ್ಲರ ಸ್ಟೇಟಸ್ಗಳಲ್ಲಿಯೂ ಆ ಹಸುವೇ ತುಂಬಿತ್ತು. ಬರು ಬರುತ್ತ ಹಸು ಹಳೆಯದಾಯಿತಲ್ಲವೇ ಅದರಿಂದ ಅದೂ ಕ್ಯಾಂಪಸ್ಸಿನಲ್ಲಿತ್ತು. ಆದರೆ ನಮ್ಮ ಕೌ ಬಾಯ್ ಚಿತ್ತಯ್ಯನನ್ನು ನಾನು ಪ್ರತಿದಿನ ಕೇಳುವವ ” ಹಸು ಹೆಂಗಿದೆ ಚಿತ್ತಯ್ಯ…? ಅದರ ಕಡೆ ಗಮನ ಇರಲಿ. ” ಎಂದು. ಚಿತ್ತಯ್ಯ ಅನಕ್ಷರಸ್ಥ ಆದರೆ ತುಂಬಾ ಭಾವುಕ. ” ಚೆನಾಗೈತೆ ಸಾ! ಹಾಲು ಕರಿಯುತ್ತೆ(ಹಿಂಡುತ್ತದೆ), ದಿನಾ ಮೈ ತೊಳಿತೀನಿ ಸಾ ಮಧ್ಯಾನ್ನ ಬಿಸಿಲು ಜಾಸ್ತಿ ” ಎಂದು ತನ್ನ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಾನೆ.
ಬೆಳಗ್ಗೆ ಎದ್ದ ಅವನಿಗೆ ಸುಮಾರು ಕೆಲಸಗಳುಂಟು ಐದು-ಐದೂವರೆಗೆ ಎದ್ದವನು ಹಸುವಿನ ಕೊಟ್ಟಿಗೆ ಚೊಕ್ಕಟಗೊಳಿಸಿ, ಹಸುವಿಗೆ ನೀರು ಕುಡಿಸಿ, ಎಂಟು-ಎಂಟೂವರೆಯ ಹೊತ್ತಿಗೆ ತಿಂಡಿ ತಿಂದು, ಹಸುವನ್ನು ಪಕ್ಕದ ನಮ್ಮ ಸಂಸ್ಥೆಯದೇ ಜಮೀನಿನಲ್ಲಿ ಹನ್ನೊಂದರವರೆಗೆ ಮೇಯಿಸಿ ಮತ್ತೆ ಕ್ಯಾಂಪಸ್ಸಿಗೆ ಬಂದು ಅದರ ಮೈ ತೊಳೆದು ಮರದಡಿಯಲ್ಲಿ ಕಟ್ಟುತ್ತಾನೆ. ಅದು ಅವನ ಗೋಸೇವೆ ತುಂಬಾ ಖುಷಿ ನನಗೆ. ಆದರೆ ಅವನು ಆ ಹಸುವಿನ ಕಣ್ಣು-ಹುಣ್ಣುಗಳನ್ನು ನೋಡಿದರೂ ಸಹಾ ಆ ಹಸು ಯಾರನ್ನು ನೋಡಿ ಒದರುತ್ತಿತ್ತೋ ಗೊತ್ತಿಲ್ಲ.ಒಂದುವೇಳೆ ನಾನು ಕಾಲೇಜಿಗೆ ಹೋಗಿ ನನ್ನ ಬೈಕ್ ನಿಲ್ಲಿಸಿದಾಗ ಅದು ಅಲ್ಲಿ ಇತ್ತೆಂದರೆ ನನ್ನೆಡೆಗೆ ನೋಡಿ ಒದರುತ್ತಿತ್ತು. ಅದರ ಹತ್ತಿರ ಹೋಗಿ ಅದರ ಬೆನ್ನು ಚಪ್ಪರಿಸಿ(ಸವರಿ) ” ಏನಮ್ಮ ! ” ಎಂದರೆ ಅದಕ್ಕೇನು ಖುಷಿಯೋ ತಿಳಿಯದು. ಆ ಪ್ರೀತಿಗೆ ಒಮ್ಮೆ ತನ್ನ ಒರಟಾದ ನಾಲಗೆಯಿಂದ ನನ್ನ ಕೈ ನೆಕ್ಕಬೇಕು ಅದು ಅದರ ಪ್ರೀತಿ.
Klive Special Article ಹೀಗಿದ್ದ ಕ್ಷಣಗಳು ತುಂಬಾ ಸಂತಸ. ಆದರೆ ಮೊನ್ನೆ ಸಹಜವಾಗಿ ನಾನು ಒಂಭತ್ತೂ ಮುಕ್ಕಾಲಿಗೆ ಕಾಲೇಜಿಗೆ ಹೋದೆ. ಸೆಕ್ಯೂರಿಟಿ ತಿಮ್ಮಣ್ಣ, ಕಟ್ಟಡದ ಬೇಲ್ದಾರ ಶಿವಣ್ಣ ಮತ್ತೆ ಕೌ ಬಾಯ್ ಚಿತ್ತಯ್ಯ ಹಸುವಿನ ಮುಂದೆ ನಿಂತಿದ್ದರು. ನನ್ನ ನೋಡಿದ ಚಿತ್ತಯ್ಯ. ” ಸಾ ! ಹಸ ಯಾಕೋ ಎದ್ದೇಳ್ತಿಲ್ಲ ಸಾ !” ಎಂದ. ನಾನೂ ಹಾಗೆಯೇ ಹೋಗಿ ಒಮ್ಮೆ ನೋಡಿದೆ ನಾನು ಪಶುವೈದ್ಯನೇನೂಲ್ಲ. ಆದರೆ ಅದನ್ನು ಮುಟ್ಟ ನೋಡಿದಾಗ ಜ್ವರವಿದ್ದಂತಿತ್ತು. ಆದರೆ ನಾನು ಒಮ್ಮೆ ಬಂದು” ಹೇ ! ಏಳು. ” ಎಂದರೆ ಆ ಹಸುವೂ ಸಹ ಏಳಲು ಪ್ರಯತ್ನಿಸಿತು. ಆದರೆ ಅತ್ಯಂತ ಸುಸ್ತಾಗಿದ್ದ ಆ ಹಸು ಮತ್ತ ಕುಸಿಯಿತು. ಡ್ರೈವರ್ ಗೌಸ್ ಪೀರ್ ನನ್ನು ಕರೆದು ಹೇಳಿದೆ ” ಗೌಸು ! ಡಾಕ್ಟ್ರುನ ಕರ್ಕೊಂಡು ಬಾ. ಇಲ್ಲಿಲ್ಲದಿದ್ದರೆ, ಪಕ್ಕದ ಹಳ್ಳಿಗೆ ಹೋಗು”. ತಕ್ಷಣವೇ ಗೌಸ್ ಮತ್ತೆ ಚಿತ್ತಯ್ಯ ಇಬ್ಬರೂ ಎರಡು ಮೂರು ಊರುಗಳಲ್ಲಿ ನೋಡಿ ಒಬ್ಬ ವೈದ್ಯರನ್ನು ಕರೆತಂದು ನನಗೆ ತಿಳಿಸಿದರು. ನಾನೂ ಅವರೊಡನೆ ಮಾತನಾಡಿದೆ ” Nothibg to worry sir ! ಸ್ವಲ್ಪ food poison ಆಗಿದೆ” ಈಗ ಗ್ಲೂಕೋಸ್ ಹಾಕೋಣ ಎಂದು ಒಂದು ಬಾಟಲ್ ಹಾಕಿದರು. ನನಗೆ exam duty ಇದ್ದಿದ್ದರಿಂದ ಅವರಿಗೆ ಹಾಕಲು ಹೇಳಿ ನಾನೂ ಹೊರಟೆ.
ದಿನದ ಕೆಲಸ ಮುಗಿಯಿತು. ಮಧ್ಯಾಹ್ನ ಒಂದೂವರೆಗೆ ನಾನು ಕಾಲೇಜಿನಿಂದ ಹೊರಡಲನುವಾದಾಗ ಗೌಸ್ ಬಂದು ” ಬಾರಪ್ಪ ಇಲ್ಲಿ, ನೋಡು ” ಎಂದು ನನ್ನನ್ನು ಎಳೆದುಕೊಂಡು ಹಸುವಿನ ಬಳಿಗೆ ಕರೆದೊಯ್ದ. ಹಸು ಗತಪ್ರಾಣವಾಗಿತ್ತು, ನನಗೆ ಮನಸು ತಡೆಯದೇ ನಮ್ಮ ಚೇರ್ಮೆನ್ನರಿಗೆ ಕಾಲ್ ಮಾಡಿದೆ ಅವರೂ ಬಂದು ನೋಡಿದರು. ನನ್ನ ಪರಿಚಯದ ಬಹಳ ಭಾವಜೀವಿಯಾದ ಇನ್ನೊಬ್ಬ ಪಶುವೈದ್ಯರಿಗೆ ತಿಳಿಸಿದೆ ಅದರ ಸಧ್ಯದ ವೀಡಿಯೋ ತುಣುಕು ಕೂಡಾ ಕಳಿಸಿದೆ. ಅವರು ಹೇಳಿದರು ” ಸ್ವಲ್ಪ critical ಇದೆ. ” ಎಂದು ಯಾವುದೋ ಒಂದು ಮೆಡಿಸಿನ್ ಹೇಳಿದರು. ಯಾರು ಹೋಗುವವರಿಲ್ಲದ ಕಾರಣ ನಾನೇ ಹೊರಟೆ. ಗೌಸ್ ಮತ್ತೊಮ್ಮೆ ವೈದ್ಯರನ್ನು ಕರೆತತರಲು ಹೋದ. ನಾನು ಬರುವಷ್ಟರಲ್ಲಿ ವೈದ್ಯರು ಬಂದು ” enrofoxacin, Belamin,” ಇಂಜೆಕ್ಷನ್ ಹಾಕಿದ್ದರು. ಹಸು ಸ್ವಲ್ಪ ಚೇತರಿಸಿಕೊಂಡಂತಿತ್ತು.ನಾನು ತಂದ ಅಂಟಾಸಿಡ್ ಅವರೇ ಕುಡಿಸಿದರು. ಸ್ವಲ್ಪ ತಲೆಯೆತ್ತಿದ ಹಸುವಿನ ಕಣ್ಣಲ್ಲಿ ನೀರು ಬರಲಾರಂಭಿಸಿತು. ಮನ ಕಲುಕುವಂತಿದ್ದ ಅದರ ಕಣ್ಣು, ಒಮ್ಮೆ ಪೂರ್ಣ ದೃಷ್ಟಿಯಿಂದ ನನ್ನ ಕಡೆಗೆ ನೋಡಿ ಹಾಗೇ ಮಲಗಿತು. ನಾನು ಅಂದುಕೊಂಡೆ may be injections power ಏನೋ ಅಂತ. ಮತ್ತೆ ಹೊರಟೆ. ” ನೋಡ್ತಾ ಇರು ಹಸುನ. ನಾನು ಸಂಜೆ ಸ್ಟಡೀ ಟೈಮ್ ಇದೆ ಆಗ ಬಂದು ಇನ್ನೊಮ್ಮೆ ಅಂಟಾಸಿಡ್ ಹಾಕೋಣ ” ಅಂತ. ಚಿತ್ತಯ್ಯ ತಲೆಯಾಡಿಸಿದ. ನಾನು ಅಲ್ಲಿಂದ ಬಂದು ನನ್ನ ಗೆಳೆಯನ ಅಂಗಡಿಯಲ್ಲಿ ಹೆಜ್ಜೆಯಿಡುವಾಗ ಚಿತ್ತಯ್ಯ ಕಾಲ್‌ಮಾಡಿ ದಃಖಿಸತೊಡಗಿದ. ” ಸಾ ! ಹಸ ಓಯ್ತು ಸಾ !” ಎಂದ. ಊಟ ಸೇರಲಿಲ್ಲ. ಹಾಗೆಯೇ ಕಾಲೇಜಿನ ಕಡೆಗೆ ಹೊರಟೆ. ನಮ್ಮ ಸೆಕ್ರೇಟರಿ ಕಾಲ್ ಮಾಡಿದರು ಅವರಿಗೂ ತುಂಬಾ ನೋವಾಗಿತ್ತು ಅವರು ಅದೇ ಹೇಳಿದರು.ಕೊನೆಗೆ ಅದನ್ನು ಸಂಸ್ಕಾರ ಮಾಡಿ ಬಂದರು.
ಇದರಲ್ಲಿ ಏನಿದೆ ? ಎಂದು ಕೇಳುವಿರಾ. ಯಾರಾದರೂ ಒಬ್ಬ ಶಿಕ್ಷಕರೋ, ಉಪನ್ಯಾಸಕರೋ ಇದನ್ನು ಗಮನಿಸಿದ್ದರೆ. ಆ ಜೀವ ಹೋಗುತ್ತಿರಲಿಲ್ಲ. ಅಂದರೆ ನಾನು ಮಾತ್ರ ಮನುಷ್ಯ ಇತರರು ಅಲ್ಲ ಎಂದು ಹೇಳುತ್ತಿಲ್ಲ. ನಾನು ಉನ್ನತ ಹುದ್ದೆಯಲ್ಲಿದ್ದಾಗ ಕೆಲವರ ಅಹಮ್ಮನ್ನು ಅಡಗಿಸಿದ್ದ ಪರಿಣಾಮ ಈಗ ನಾನು ಕೇವಲ ಅತಿಥಿ ಉಪನ್ಯಾಸಕ. ಅದರೊಟ್ಟಿಗೆ ಯಾವುದೋ ವೈಯಕ್ತಿಕ ದ್ವೇಷ, ಪಾಪವೆನಿಸಲಿಲ್ಲ. ” ಹೊಟ್ಟೆಯಲ್ಲಿ ಬೆಂಕಿ ಬಿದ್ದ ಹಾಗಾಯ್ತು ” ಸ್ಟಡೀ ಟೈಂ ಮುಗಿಸಿ ಹೊರಬಿದ್ದೆ. ಸೀದಾ ಮನೆಗೆ ಬಂದೆ” ಅಪ್ಪನಿಗೆ ಹೇಳಿದೆ, ಅಕ್ಕನಿಗೆ ಹೇಳಿದೆ ಅವರೂ ನೊಂದುಕೊಂಡರು. ಏಕೆಂದರೆ ಮನೆಯ ಮಕ್ಕಳಿಗಿಂತಲೂ ನಾವು ಹಸುಗಳನ್ನು ಪ್ರೀತಿಸುತ್ತಿದ್ದವರು. ಅವುಗಳೂ ಅದೇ ರೀತಿ ನಮ್ಮೊಡನೆ ಪ್ರೇಮದಿಂದ ಕೂಡಿದ್ದವುಗಳು. ಅಂತಹುದೇ ಇನ್ನೊಂದು ಹಸು ನಮ್ಮ ನಿರ್ಲಕ್ಷ್ಯದಿಂದ ಸತ್ತರೆ ಅದಕ್ಕೇನೆನ್ನಬೇಕು. ವಿಧಿಯೋ, ಪೌರುಷವೋ ಅಥವಾ ಅಹಮ್ಮೋ…..?
ನಿಜಕ್ಕೂ ನಾವು ಮನುಷ್ಯರೋ ? ಅಥವಾ ಪಶುಗಳೋ ಎನ್ನಿಸಿತು. ಅದರ ಹಾಲು, ಮೊಸರು, ಮಜ್ಜಿಗೆ ಎಲ್ಲ ಬಳಸಿದ ನಾವು ಕೊನೆಗೆ ಅದರ ಸಾವಿಗೂ ಕಾರಣರಾದೆವೇ..? ಎನ್ನಿಸಿತು. ನಮ್ಮ ಚೇರ್ಮನ್ನರು ತುಂಬಾ ಭಾವುಕರು ಅವರು ದುಃಖ ತೋರಲಿಲ್ಲ ಆದರೆ ಅವರ ಮನದಲ್ಲಿದ್ದ ದುಗುಡ ನನಗೆ ಅರಿವಾಯಿತು. ಆದರೇನು ಮಾಡುವುದು ಈಗ ಕಾಲ ಮಿಂಚಿಹೋಗಿದೆ. ಯಾವ ಮಾತಿಗೂ ಅರ್ಥವಿಲ್ಲ ಎನ್ನಿಸಿತು. ಭೂತದಯೆಯನ್ನು ನಾವು ಸಾಧಿಸಬೇಕಾಗಿದೆ. ಅದು ಪಶುವಾಗಿದ್ದರೂ ಹೋದದ್ದ ಪ್ರಾಣವೇ ಅಲ್ಲವೇ…..
( ಪ್ರಸಾದ್ ಶ್ರೀವತ್ಸ)
