ವಿಶೇಷ ವರದಿ;
ಪ್ರಭಾಕರ ಕಾರಂತ.
ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳ ನೇಪಾಳದ ಪ್ರವಾಸವನ್ನು ಅತ್ಯಂತ ಯಶಸ್ವಿಗೊಳಿಸಲು ನೇಪಾಳದ ಭಾರತೀಯ ರಾಯಭಾರಿ ಕಚೇರಿ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ.ರಾಯಭಾರಿ ಕರ್ತವ್ಯವೇನು?.ತನ್ನ ದೇಶ ಮತ್ತು ತಾನು ಕರ್ತವ್ಯ ನಿರ್ವಹಿಸುತ್ತಿರುವ ದೇಶಗಳ ನಡುವೆ ಉತ್ತಮ ಬಾಂಧವ್ಯ ಮೂಡಿಸಲು ಪ್ರಯತ್ನಿಸುವುದು.ಎರಡೂ ರಾಷ್ಟ್ರಗಳ ಜನ ಸಮೂಹಗಳ ನಡುವೆ ಪರಸ್ಪರ ಗೌರವ ಹೆಚ್ಚಾಗುವಂತೆ ಕಾರ್ಯಕ್ರಮ ಏರ್ಪಡಿಸುವುದು.ಭಾರತದ ಕುರಿತು ನೇಪಾಳದಲ್ಲಿ ನೇಪಾಳದ ಸಾರ್ವಜನಿಕರಲ್ಲಿ ಸೌಹಾರ್ದ ಭಾವ ಉಂಟಾಗುವಂತೆ ಮಾಡುವುದು.ಜಗದ್ಗುರುಗಳ ಆಗಮನ ಮಾತ್ರದಿಂದಲೇ ಈ ಎಲ್ಲಾ ರಾಯಭಾರ ಕಚೇರಿ ಕಾರ್ಯ ಸುಗಮಗೊಂಡಿದೆ.ಬೇರೆ ನೂರು ಕಾರ್ಯಕ್ರಮ ಮಾಡಿದರೂ ಸಾಧ್ಯವಾಗುವುದೇ ಇರುವ ಯಶಸ್ಸು ಜಗದ್ಗುರುಗಳ ಆಗಮನದಿಂದ ಆಗುತ್ತಿದೆ.ರಾಯಭಾರಿ ನವೀನ್ ಶ್ರೀವಾಸ್ತವ ಸೇರಿದಂತೆ ಅಲ್ಲಿರುವ ಎಲ್ಲರಿಗೂ ಇದರ ಅನುಭವ ಜಗದ್ಗುರುಗಳು ಬರುತ್ತಾರೆಂದಾಗಲೇ ಆಗಿದೆ.ಜಗದ್ಗುರುಗಳ ಧರ್ಮ ವಿಜಯ ಯಾತ್ರೆ ಸಂದರ್ಭದಲ್ಲಿ ಅವರು ನೇಪಾಳದ ಸರ್ಕಾರದ ವಿವಿಧ ಇಲಾಖೆಗಳ ಸಂಪರ್ಕ ಮಾಡಿದ್ದಾರೆ.ರಾಷ್ಟ್ರ ಒಂದರ ಮುಖ್ಯಸ್ಥರೋರ್ವರು ಬರುವಾಗ ಆತಿಥೇಯ ಸರ್ಕಾರ ಹೇಗೆ ಸ್ಪಂದಿಸುತ್ತದೋ ಅದಕ್ಕೂ ಮೀರಿ ಭಕ್ತಿ ಶ್ರದ್ಧೆಯಿಂದ ನೇಪಾಳದ ಸರ್ಕಾರ ಸ್ಪಂದಿಸಿದ್ದನ್ನು ಕಂಡು ರಾಯಭಾರಿ ಕಚೇರಿಗೇ ಆಚ್ಚರಿ ಆಗಿದೆ.ಜಗದ್ಗುರುಗಳ ಕುರಿತು ಅವರ ಗೌರವ ಮತ್ತೂ ಹೆಚ್ಚಾಗಿದೆ.ನಾವು ಇಲ್ಲಿರುವಾಗಲೇ ಜಗದ್ಗುರುಗಳ ಆಗಮನವಾಗಿರುವುದು ನಮ್ಮ ಬದುಕಿನ ಭಾಗ್ಯ.ಜೀವನದಲ್ಲಿ ಒಮ್ಮೆ ಮಾತ್ರ ದೊರಕುವ ಇಂತಹ ಅಪೂರ್ವ ಅವಕಾಶ ನಾವು ಸಾರ್ಥಕಗೊಳಿಸಿಕೊಳ್ಳಬೇಕು. ಹೀಗೆಂದೇ ಮತ್ತೆ ಮತ್ತೆ ಗುರು ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.ಜಗದ್ಗುರುಗಳು ರಾಯಭಾರಿ ಕಚೇರಿಗೂ ಚಿತ್ತೈಸಬೇಕು.ಅಲ್ಲಿ ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಿಸಬೇಕು ಎಂದು ಅವರು ಪ್ರಾರ್ಥಿಸಿದ್ದಾರೆ.ಗುರುಕೃಪೆಗೆ ನೇಪಾಳದ ಜನರು ಹಾರೈಸಿದಂತೇ ರಾಯಭಾರಿ ಸಿಬ್ಬಂದಿಯೂ ಹಾರೈಸುತ್ತಿದೆ.ಶೃಂಗೇರಿಯ ಅನನ್ಯತೆ ಇದು.ಜಗತ್ತೆಲ್ಲಾ ಗೌರವಿಸುವಂತೇ ಅವರಿದ್ದಾರೆ.ಜಗತ್ತಿಗೆಲ್ಲಾ ಸರಿದಾರಿಯಲ್ಲಿ ನಡೆವ ಉಪದೇಶ ನೀಡುತ್ತಾರೆ.ಅದಕ್ಕೇ ಅವರು ಜಗದ್ಗುರುಗಳು.ಜಗನ್ಮಾನ್ಯರು. ಜಗದ್ವಂದ್ಯರು.
ಜಗದ್ಗುರುಗಳು ಸರಸ್ವತಿ ಕುಂಡಕ್ಕೆ ತಲುಪಿ ಸರಸ್ವತಿ ಕುಂಡದ ನೀರು ಪ್ರೋಕ್ಷಣೆ ಮಾಡಿಕೊಂಡು ಸರಸ್ವತಿ ವಿಗ್ರಹವನ್ನು ದರ್ಶನ ಮಾಡಿದರು.ಶೃಂಗೇರಿ ಶಾರದಮ್ಮನೇ ಇಲ್ಲಿ ಬಂದು ಗುರುಗಳಿಗೆ ದರ್ಶನ ನೀಡಿದಂತಿತ್ತು.ಶೃಂಗೇರಿಯಲ್ಲಿ ಶಾರದೆಯದು ಅಭಯಹಸ್ತವಾದರೆ ಇಲ್ಲಿ ಆಕೆ ವರದ ಹಸ್ತ ದಿಂದ ಅನುಗ್ರಹಿಸುತ್ತಿದ್ದಾಳೆ.ಈ ಪುಣ್ಯ ಕ್ಷೇತ್ರ ನೇಪಾಳದ ಶೃಂಗೇರಿ ಆಗಬೇಕು ಎಂದು ಅನುಗ್ರಹಿಸಿ ಎಂದು ಅಲ್ಲಿನ ಭಕ್ತರು ಜಗದ್ಗುರುಗಳಲ್ಲಿ ಪ್ರಾರ್ಥಿಸಿದರು.ಅಮ್ಮನವರ ಮತ್ತು ತಮ್ಮ ಗುರುಗಳ ಅನುಗ್ರಹ ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದು ಭಕ್ತರ ನಂಬಿಕೆ.
ಇಲ್ಲಿ ತಿಲಶ್ವೂರ್ ಮಹಾದೇವನಿಗೆ ಜಗದ್ಗುರುಗಳು ಪೂಜೆ ಸಮರ್ಪಿಸಿದರು.ಪಕ್ಕದಲ್ಲೇ ಇರುವ ಪಶುಪತಿನಾಥ ದೇವಾಲಯಕ್ಕೂ ಆಗಮಿಸಿ ಪೂಜಿಸಿದರು.ಇದು ಮುಖ್ಯ ಪಶುಪತಿನಾಥ ದೇವಾಲಯದ ಪ್ರತಿರೂಪದಂತಿದ್ದು ನೇಪಾಳವೆಲ್ಲಾ ಪಶುಪತಿನಾಥ ಕ್ಷೇತ್ರವೇ ಆಗಿದೆ.
ಬೃಹಸ್ಪತಿ ತಪವಾಚರಿಸಿ ಶಾರದಾಂಬೆಯನ್ನು ಒಲಿಸಿಕೊಂಡು ಜಲರೂಪದಲ್ಲಿ ಇಲ್ಲಿ ನೆಲೆಸುವಂತೆ ಮಾಡಿದ್ದಾಗಿ ಸ್ಥಳ ಮಹಾತ್ಮೆ ಸರಸ್ವತಿ ಕುಂಡದ ಕುರಿತು ವಿವರಿಸುತ್ತದೆ.ಈ ಜಲವನ್ನು ಸೇವಿಸಿದ ಬೃಹಸ್ಪತಿ ತನ್ನ ಇಚ್ಛೆಯಂತೆ ಸರಸ್ವತಿಯನ್ನು ತನ್ನಲ್ಲಿಯೇ ಇರುವಂತೆ ಮಾಡಿಕೊಂಡನು ಎಂಬ ಕಥೆ ಇದೆ.
ಸರಸ್ವತಿ ಕುಂಡದಿಂದ ಜಗದ್ಗುರುಗಳು ತಲ್ಪಿದ್ದು ಛಾಯಾಂಬಲ್ ಮಠವನ್ನು.ಈ ಸ್ಥಳ ಪಠಾಣ್ ಎಂಬ ವ್ಯಾಪಾರಿ ಕೇಂದ್ರದಲ್ಲಿದೆ.ಶತಮಾನ ಹಳೆಯದಾದ ಪುಟ್ಟ ಮಂದಿರದಲ್ಲಿ ಶ್ರೀ ವಿಶ್ವೇಶ್ವರ ಮಹಾದೇವನ ಮೂರ್ತಿ ಇದೆ.ಸ್ಥಳೀಯ ಭಕ್ತ ಕುಟುಂಬ ಒಂದು ತಲೆತಲಾಂತರದಿಂದ ಇದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಾರೆ.1967 ರಲ್ಲೂ ಇಲ್ಲಿಗೆ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥರು ಆಗಮಿಸಿ ವಿಶ್ವೇಶ್ವರನನ್ನು ಪೂಜಿಸಿದ್ದರು.ಈ ಮಠದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕುಟುಂಬ ಶತಶತಮಾನಗಳಿಂದಲೂ ಶೃಂಗೇರಿಯ ಭಕ್ತರು.
ಇಲ್ಲಿ ಪೂಜೆ ಸಲ್ಲಿಸಿ ಭಕ್ತರನ್ನು ಅನುಗ್ರಹಿಸಿ ಪಠಾಣ್ ನ ಪ್ರಸಿದ್ಧ ಕೃಷ್ಣ ಮಂದಿರಕ್ಕೆ ಜಗದ್ಗುರುಗಳು ಆಗಮಿಸಿದರು.ಶ್ರೀಕೃಷ್ಣ ಪರಮಾತ್ಮನಿಗೆ ಜಗದ್ಗುರುಗಳು ಪೂಜೆ ಸಲ್ಲಿಸಿದರು.ಈ ದೇವಾಲಯದ ಅಪೂರ್ವ ಕಲಾ ವೈಭವವನ್ನು ಜಗದ್ಗುರುಗಳು ಕಣ್ತುಂಬಿಕೊಂಡರು.
ರಾತ್ರಿ ಶಂಕರಾಚಾರ್ಯ ಮಠದಲ್ಲಿ ಎಂದಿನಂತೆ ಭಕ್ತಸಾಗರದ ನಡುವೆ ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಿತು.
