Shivaganga Yoga Center ಒತ್ತಡದ ಬದುಕಿನ ಶೈಲಿಯಿಂದ ಹೊರಬರಲು ಯೋಗ, ಪ್ರಾಣಾಯಾಮ ಹಾಗೂ ಧ್ಯಾನದ ಅಭ್ಯಾಸವು ಸಹಕಾರಿಯಾಗುತ್ತದೆ ಎಂದು ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಹೇಳಿದರು.
ವಿನೋಬನಗರದ ಕಾಶಿಪುರ ಕಲ್ಲಳ್ಳಿಯ ಶ್ರೀ ಶಿವಗಂಗಾ ಯೋಗಕೇಂದ್ರದ ರಾಘವ ಶಾಖೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿ ನಿತ್ಯ ಕಡಿಮೆ ವಯಸ್ಸಿನ ಯುವಜನತೆ ಸಾವನ್ನಪ್ಪುತ್ತಿರುವುದು ಕಳವಳಕಾರಿಯಾಗಿದೆ. ಇದಕ್ಕೆ ಶಿಸ್ತುಬದ್ಧ ಆಹಾರ ಪದ್ಧತಿ ರೂಡಿಸಿಕೊಳ್ಳದೆ ಇರುವುದು ಹಾಗೂ ಒತ್ತಡದ ಜೀವನ ಶೈಲಿ ಮುಖ್ಯ ಕಾರಣವಾಗಿದೆ. ಇದರಿಂದ ಹೊರಬರಲು ಯೋಗ ತುಂಬಾ ಮುಖ್ಯವಾಗಿದೆ ಎಂದು ತಿಳಿಸಿದರು.
ಆಸ್ಟ್ರೇಲಿಯಾದಲ್ಲಿ ಶಿವಗಂಗಾ ಯೋಗ ಕೇಂದ್ರದ ತರಬೇತಿ ಘಟಕ ಪ್ರಾರಂಭಿಸಿದ್ದು, ವಿದೇಶದಲ್ಲಿಯೂ ಸಹ ಸಾಕಷ್ಟು ಜನ ನಮ್ಮ ಭಾರತೀಯ ಯೋಗ ಪದ್ಧತಿಯನ್ನು ಅನುಸರಿಸುತ್ತಿರುವುದು ಭಾರತೀಯ ಜೀವನಶೈಲಿಗೆ ಇರುವ ಪ್ರಾಮುಖ್ಯತೆ ತೋರಿಸುತ್ತದೆ. ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಯೋಗ, ಧ್ಯಾನ ಹಾಗೂ ಪ್ರಾಣಯಾಮ ಜತೆಗೆ ಸಕಾರಾತ್ಮಕ ಮಾಹಿತಿಗಳನ್ನು ಪಡೆದುಕೊಳ್ಳುವುದು ನಮ್ಮ ಆಯುಷ್ಯ ವೃದ್ಧಿ ಮಾಡುತ್ತದೆ ಎಂದು ಹೇಳೀದರು.
Shivaganga Yoga Center ಹಿರಿಯ ಯೋಗ ಶಿಕ್ಷಕ ಜಿ.ಎಸ್.ಓಂಕಾರ್ ಮಾತನಾಡಿ, ಯೋಗ, ಪ್ರಾಣಾಯಾಮ ಮತ್ತು ಧ್ಯಾನವು ಮಾನಸಿಕ ಹಾಗೂ ದೈಹಿಕವಾಗಿ ಸದೃಢರನ್ನಾಗಿಸುತ್ತದೆ. ನಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ. ದೇಹದಲ್ಲಿ ಚೆನ್ನಾಗಿ ರಕ್ತಸಂಚಾರ ಆಗುವುದರಿಂದ ಯಾವುದೇ ಕಾಯಿಲೆಗಳು ನಮ್ಮ ಬಳಿ ಸುಳಿಯುವುದಿಲ್ಲ ಎಂದರು.
ಯೋಗ ಶಿಕ್ಷಕ ಎಚ್.ಕೆ.ಹರೀಶ್ ಮಾತನಾಡಿ, ಕ್ರಮಬದ್ಧವಾದ ಯೋಗಭ್ಯಾಸ ನಮ್ಮಲ್ಲಿ ಆತ್ಮಬಲ ವೃದ್ಧಿಸುವುದರ ಜತೆಗೆ ಜೀವನೋತ್ಸಾಹವನ್ನು ಮೂಡಿಸುತ್ತದೆ. ಶಿವಗಂಗಾ ಯೋಗ ಕೇಂದ್ರದಿಂದ 38 ಕೇಂದ್ರಗಳಲ್ಲಿ ನಡೆಯುವ ಉಚಿತ ಯೋಗ ಪ್ರಾಣಯಾಮ ಧ್ಯಾನದಂತಹ ಶಿಬಿರಗಳಲ್ಲಿ ಸಾರ್ವಜನಿಕರು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಯೋಗಪಟು ಸುಬ್ರಹ್ಮಣ್ಯ ಯೋಗಾಚಾರ್ಯರನ್ನು ಗೌರವಿಸಲಾಯಿತು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ನರಸೋಜಿರಾವ್ ಮಹೇಶ್, ಶ್ರೀನಿವಾಸ್, ದೀಪಕ್, ಶಿವಕುಮಾರ್, ಗಾಯತ್ರಿ, ರಮೇಶ್, ಸುಜಾತಾ, ಉಷಾ, ಸೌಮ್ಯ, ಲತಾ, ಪ್ರೇಮ, ವಿಕ್ಕಿ, ಶಂಕರ್, ಶಶಿಧರ್ ಉಪಸ್ಥಿತರಿದ್ದರು.
