ಶಿವಮೊಗ್ಗ ತಾಲೂಕಿನ ಅಬ್ಬಲಗೆರೆಯ ಸಮೀಪ ನಡೆದ ಯುವತಿಯೊಬ್ಬರ ಸರ ಕಳವು ಮಾಡಿದ ಪ್ರಕರಣವನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಭೇದಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಮೇ.22 ರ ಸಂಜೆ ಯುವತಿಯೊಬ್ಬರು ಕಾರಿಂದ ಕೆಳಗೆ ಇಳಿಯುತ್ತಿದ್ದ ವೇಳೆ, ಹಿಂಭಾಗದಿಂದ ಇಕೋ ಸ್ಪೋರ್ಟ್ ಕಾರಿನಲ್ಲಿ ಬಂದ ಇಬ್ಬರು ಅಪರಿಚಿತರು ಯುವತಿಯ ಕೊರಳಿನಲ್ಲಿದ್ದ ಬಂಗಾರದ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ಆರೋಪಿಗಳ ಪತ್ತೆ ಹಾಗೂ ಮಾಲು ವಶಕ್ಕೆ ವಿಶೇಷ ತಖಾ ತಂಡವನ್ನು ರಚಿಸಿತು. ಸಿಪಿಐ ರಾಘವೇಂದ್ರ ಕಾಂಡಿಕೆ ಹಾಗೂ ಪಿಎಸ್‌ಐ ನವೀನ್ ಮಠಪತಿ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.
ತನಿಖಾ ತಂಡದಲ್ಲಿ ಸಿಪಿಸಿ ಶ್ರೀಕಾಂತ್, ಕಾಶಿನಾಥ ಹಾಗೂ ಕವನ ಸೇರಿದಂತೆ ಸಿಬ್ಬಂದಿ ಭಾಗವಹಿಸಿದ್ದರು. ಕಾರ್ಯಾಚರಣೆಯ ವೇಳೆ ಆರೋಪಿ ಮಂಜುನಾಥನಾಯ್ಕ ನನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ಸುಮಾರು 5 ಲಕ್ಷ ರೂ. ಮೌಲ್ಯದ ಕಾರು ಹಾಗೂ ಸುಮಾರು 1.50 ಲಕ್ಷ ರೂ. ಮೌಲ್ಯದ 10 ಗ್ರಾಂ ತೂಕದ ಬಂಗಾರದ ಸರವನ್ನು ವಶಪಡಿಸಿಕೊಳ್ಳಲಾಗಿದೆ.
