Madhu Bangarappa ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಲು 51,000 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕರಿಗೆ ₹12 ಸಾವಿರ, ಪ್ರೌಢಶಾಲೆಯ ಅತಿಥಿ ಶಿಕ್ಷಕರಿಗೆ ₹12,500 ಗೌರವಧನ ನಿಗದಿ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.
Kavita Thorat ಆಸಂಘಟಿತ ಕೂಲಿ ಕಾರ್ಮಿಕ ಮಹಿಳೆಯರು ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು- ಕವಿತಾ ಥೋರತ್
Kavita Thorat ಮಹಿಳೆಯರು ಸಾಮಾಜಿಕ, ಆರ್ಥಿಕ ಹಾಗೂ ಕೌಟುಂಬಿಕ ಸ್ಥಿತಿಗತಿಗಳನ್ನು ಉತ್ತಮ ಪಡಿಸಲು ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಹೊಣೆಗಾರಿಕೆ ಮಹಿಳೆಯರ ಮೇಲಿದೆ ಎಂದು ಅಸಂಘಟಿತ ಕೂಲಿ ಕಾರ್ಮಿಕರ ಮಹಿಳಾ ಜಿಲ್ಲಾಧ್ಯಕ್ಷೆ ಕವಿತಾ ಥೋರತ್ ಹೇಳಿದರು.
ಅವರು ನಗರದ ಆಲ್ಕೋಳದಲ್ಲಿರುವ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ ಎಸ್.ಎಂ.ಎಸ್.ಎಸ್. ಚೈತನ್ಯದಲ್ಲಿ ಆಯೋಜಿಸಿದ್ದ ಒಕ್ಕೂಟದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಉನ್ನತ ಸ್ಥಾನಮಾನ ಗೌರವವಿದೆ. ಮಹಿಳೆಯರು ಸಂಘಗಳ ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಬೇಕು. ಮಹಿಳೆ ಎಲ್ಲ ಕೆಲಸ ನಿಭಾಯಿಸಲು ಸಶಕ್ತಳಾಗಿದ್ದಾಳೆ. ಮಗಳಾಗಿ, ಸೊಸೆಯಾಗಿ, ತಾಯಿಯಾಗಿ ವಿವಿಧ ಸ್ತರಗಳಲ್ಲಿ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದ್ದಾಳೆ. ಆದರೆ, ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ಭಾರತದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
Kavita Thorat ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೇಮ್ ಕುಮಾರ್ ಮಾತನಾಡಿ, ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ ಮಾನ ಕಲ್ಪಿಸಲಾಗಿದೆ. ಯಾವುದೇ ಕ್ಷೇತ್ರಗಳಲ್ಲಿ ಹೆಣ್ಣು ಕೆಲಸ ಮಾಡುವುದಕ್ಕೆ ಹಿಂಜರಿಯುವ ಕಾಲ ಈಗಿಲ್ಲ. ಇದೀಗ ಮಹಿಳೆಯರು ಪುರುಷರು ನಿರ್ವಹಿಸಬಹುದಾದ ಎಲ್ಲ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷೆ ರೂಪ, ರಾಜ್ಯ ಮಹಿಳಾ ಒಕ್ಕೂಟದ ಪ್ರತಿನಿಧಿ ಶ್ವೇತಾ , ಜನಶಿಕ್ಷಣ ಸಂಸ್ಥೆಯ ಜಗದೀಶ್ ಸೇರಿದಂತೆ ಒಕ್ಕೂಟದ ಪ್ರತಿನಿಧಿಗಳು ಇದ್ದರು.
DAVANGERE UNIVERSITY ಜಾಗತಿಕ ಆರ್ಥಿಕ ಹಿಂಜರಿತದಲ್ಲೂ ಭಾರತ ಮಾತ್ರ ಮುಂದುವರೆಯುತ್ತಿದೆ – ಡಾ.ಬಿ.ಬಕ್ಕಪ್ಪ
DAVANGERE UNIVERSITY ದಾವಣಗೆರೆ.ಮೇ. 24. ವಿಶ್ವದಲ್ಲಿ ಆರ್ಥಿಕ ಅಭಿವೃದ್ಧಿಯು ಶೇಕಡ 2.8 ರ ಮಂದಗತಿಯಲ್ಲಿದ್ದರೂ ಭಾರತದಲ್ಲಿ ಮಾತ್ರ ಶೇಕಡ 6.2ರ ತೀವ್ರಗತಿಯಲ್ಲಿದೆ. ನಮ್ಮ ಪದವೀಧರರು ಕ್ರಿಯಾಶೀಲರಾಗಿ ದೇಶವು ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗುವಲ್ಲಿ ದುಡಿಯಬೇಕಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ನಿವೃತ್ತ ರಿಜಿಸ್ಟಾರ್ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ನಿರ್ದೇಶಕ ಡಾ ಬಿ ಬಕ್ಕಪ್ಪ ಮ್ಯಾನೇಜ್ಮೆಂಟ್ ಪದವೀಧರರಿಗೆ ಕರೆ ಕೊಟ್ಟರು.
ಅವರಿಂದು ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್ಮೆಂಟ್ ಮತ್ತು ರಿಸರ್ಚ್ ನ ಪದವಿ ಪ್ರದಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಕೈಗಾರಿಕಾ ಕ್ರಾಂತಿಯ ಯುಗದ ವೇಗಕ್ಕಿಂತ ತಂತ್ರಜ್ಞಾನ ಅಭಿವೃದ್ಧಿ ವೇಗವು 300 ಪಟ್ಟು ಮುಂದೆ ಇದೆ, ಹಿಂದೆ ದೇಶೀಯವಾಗಿದ್ದ ಜ್ಞಾನ ಅಷ್ಟೇ ಸಾಕಾಗುತ್ತಿತ್ತು ಆದರೆ ಈಗ ಹಾಗಲ್ಲ ಜಾಗತಿಕ ಜ್ಞಾನ ಅತ್ಯವಶ್ಯ, ಇದರ ಪ್ರಾಪ್ತಿಗೆ ಆಧುನಿಕ ತಂತ್ರಜ್ಞಾನವು ಅತ್ಯಂತ ಸಹಕಾರಿಯಾಗಿದೆ. ಡಿಜಿಟಲ್ ರೂಪಾಂತರ ಕೃತಕ ಬುದ್ಧಿಮತ್ತೆಯ ಹಂತ ತಲುಪಿದ್ದು ಇದು ವಿಧಾಯಕ ಕಾರ್ಯಗಳಿಗಷ್ಟೇ ಬಳಕೆಯಾಗಬೇಕು, ವಾರ್ಷಿಕ 65 ಮಿಲಿಯನ್ ಜನಸಂಖ್ಯೆ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದು ಈ ಮಾನವ ಶಕ್ತಿಯ ಗರಿಷ್ಠ ಬಳಕೆಯ ಬಗ್ಗೆಯೂ ಮ್ಯಾನೇಜ್ಮೆಂಟ್ ಪದವೀಧರರು ಆಲೋಚಿಸಬೇಕಿದೆ ಎಂದರು.
DAVANGERE UNIVERSITY ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಚೇರ್ಮನ್ ಡಾ. ಅಥಣಿ ಎಸ್ ವೀರಣ್ಣನವರು ಈಚಿನ ದಶಕಗಳಲ್ಲಿ ಸ್ತ್ರೀಯರು ಉನ್ನತ ಶಿಕ್ಷಣಕ್ಕೆ ಬರುತ್ತಿರುವುದೇ ಅಭಿವೃದ್ಧಿಯ ಸಂಕೇತವಾಗಿದ್ದು ತೀವ್ರ ವೇಗದಲ್ಲಿರುವ ತಂತ್ರಜ್ಞಾನ ಅಭಿವೃದ್ಧಿಯ ತಿಳುವಳಿಕೆ ಹಾಗೂ ಅಳವಡಿಕೆಯು ಸಾಧನೆಗೆ ಅತ್ಯವಶ್ಯ ಎಂದರು.
ಜಯಶ್ರೀ ಸಿ, ಲತಾ ಎಸ್ ಪಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕ ಡಾ. ಸ್ವಾಮಿ ತ್ರಿ ಭುವಾನಂದ ಹೆಚ್ ವಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತ ಕೋರಿದರು. ಸಹಾಯಕ ಪ್ರಾಧ್ಯಾಪಕಿ ಪ್ರೊ.ಸರೋಜಾ ಎಸ್ ವರದಿ ವಾಚನ ಮಾಡಿದರು. ಶ್ವೇತಾ ಜಿ ಬಿ ಹಾಗೂ ವರ್ಷಾ ರಾಯ್ಕರ್ ಅತಿಥಿಗಳ ಪರಿಚಯ ಮಾಡಿದರು. ಸಹ ಪ್ರಾಧ್ಯಾಪಕ ಡಾ. ವಿಜಯ್ ಕೆಎಸ್, ಡಾ.ಶ್ರುತಿ ಮಾಕನೂರು ಪದವಿ ಪ್ರದಾನ ನಿರ್ವಹಿಸಿದರೆ ಪ್ರತಿಜ್ಞಾವಿಧಿಯನ್ನು ವಿಭಾಗ ಮುಖ್ಯಸ್ಥ ಡಾ ಸುಜಿತ್ ಕುಮಾರ್ ಎಸ್ ಹೆಚ್
ಬೋಧಿಸಿದರು. ಪ್ರಾಂಶುಪಾಲ ಡಾ ಪ್ರಕಾಶ್ ಎಸ್ ಅಳಲಗೇರಿ ವಂದನೆ ಸಮರ್ಪಿಸಿದರು.
Madhu Bangarappa ಶಿವಮೊಗ್ಗ ಜಿಲ್ಲೆಗೆ ಐದು ವಿದ್ಯಾರ್ಥಿ ವಸತಿ ನಿಲಯ ಮಂಜೂರು- ಮಧು ಬಂಗಾರಪ್ಪ
Madhu Bangarappa ಜಿಲ್ಲೆಗೆ ಐದು ಹೊಸ ವಿದ್ಯಾರ್ಥಿ ವಸತಿ ನಿಲಯಗಳನ್ನು ಮಂಜೂರು ಮಾಡಲಾಗಿದೆ. ವಿದ್ಯಾರ್ಥಿಗಳು ಈ ನಿಲಯಗಳ ಪ್ರಯೋಜನ ಪಡೆಯಬೇಕು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಹೊರವಲಯ ಬೊಮ್ಮನಕಟ್ಟೆಯಲ್ಲಿನ ಇಂದಿರಾಗಾಂಧಿ ನರ್ಸಿಂಗ್ ಮಹಿಳಾ ವಿದ್ಯಾರ್ಥಿ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶಿವಮೊಗ್ಗ, ಸೊರಬ, ಸಾಗರ, ಶಿರಾಳಕೊಪ್ಪ, ತೀರ್ಥಹಳ್ಳಿಯಲ್ಲಿ ಈ ವಸತಿ ನಿಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಎರಡು ಮೆಟ್ರಿಕ್ ವಿದ್ಯಾಲಯಗಳನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇಲ್ಲಿ ₹24 ಕೋಟಿ ಮೊತ್ತದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಅಂದಾಜು ₹5 ಕೋಟಿ ಮೊತ್ತದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್ ಇವರ ನಿರ್ವಹಣೆಯಲ್ಲಿ ಈ ವಿದ್ಯಾರ್ಥಿ ನಿಲಯ ಕಟ್ಟಡದ ಕಾಮಗಾರಿ ಮುಕ್ತಾಯಗೊಂಡಿದೆ. ಪ್ರಸ್ತುತ 100 ಹಾಸಿಗೆಯ ವಸತಿ ನಿಲಯ ಇದಾಗಿದ್ದು, ಇದನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯ ಬಿಸಿಎಂ ಇಲಾಖೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಫಲಿತಾಂಶ ಶೇ 93 ರಷ್ಟಿದೆ. ಇದು ಉತ್ತಮ ಬೆಳವಣಿಗೆಯಾಗಿದೆ. ಜಿಲ್ಲೆಯಲ್ಲಿ 137 ವಿದ್ಯಾರ್ಥಿ ನಿಲಯಗಳು ಇದ್ದು, ಅದರಲ್ಲಿ 14,106 ವಿದ್ಯಾರ್ಥಿಗಳು ವಾಸ್ತವ್ಯ ಹೂಡಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿ ನಿಲಯಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗುವುದು ಎಂದರು.
Madhu Bangarappa ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದೆ. ಹಾಗೂ ಬಹಳ ಪಾರದರ್ಶಕವಾಗಿ ಪರೀಕ್ಷೆಯನ್ನು ನಡೆಸಲಾಗಿದೆ. ಈ ಬಾರಿ ಮೂರು ಅವಕಾಶಗಳನ್ನು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇದರಿಂದ ಶಿಕ್ಷಣ ಇಲಾಖೆಯಲ್ಲಿ ಹೊಸ ಕ್ರಾಂತಿ ಆಗಲಿದೆ ಎಂದರು.
ನರ್ಸಿಂಗ್ ವಿದ್ಯಾರ್ಥಿಗಳು ಈ ವಸತಿ ನಿಲಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಶಾಸಕರಾದ ಶ್ರೀಮತಿ ಬಲ್ಕೀಸ್ ಬಾನು, ಡಾ. ಧನಂಜಯ ಸರ್ಜಿ, ಭೋವಿ ಅಭಿವೃದ್ಧಿ ನಿಗಮ ರಾಜ್ಯಾಧ್ಯಕ್ಷ ಎಸ್.ರವಿ ಕುಮಾರ್, ಶಿವಮೊಗ್ಗ– ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಎಸ್.ಚಂದ್ರ ಭೂಪಾಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಖೆ ಜಿಲ್ಲಾ ಅಧಿಕಾರಿ ಶ್ರೀಮತಿ ಕೆ.ಆರ್.ಶೋಭಾ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್.ಪವಿತ್ರಾನಂದರಾಜು, ಪ್ರಮುಖರಾದ ಆರ್.ಪ್ರಸನ್ನ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Dinesh Gundu Rao ಔಷಧ ಸರ್ಕಾರಿ ಆಸ್ಪತ್ರೆಗಲ್ಲೇ ಉಚಿತ ಲಭ್ಯವಿವೆ. ಜನೌಷಧಿ ಮಳಿಗೆ ಅಗತ್ಯವಿಲ್ಲ- ಸಚಿವ ದಿನೇಶ್ ಗುಂಡೂರಾವ್
Dinesh Gundu Rao ರಾಜ್ಯದಲ್ಲಿರುವ 1400 ಜನೌಷಧಿ ಕೇಂದ್ರಗಳಲ್ಲಿ ನಮ್ಮ ಸರ್ಕಾರೀ ಆಸ್ಪತ್ರೆ ಆವರಣದಲ್ಲಿರುವ 180 ಜನೌಷಧಿ ಕೇಂದ್ರಗಳನ್ನು ಮುಚ್ಚಲು ಮಾತ್ರ ಆದೇಶಿಸಲಾಗಿದೆ.
ಈ ಬಗ್ಗೆ ಅನಗತ್ಯ ಸುಳ್ಳುಗಳ ಮೂಲಕ ಜನರ ದಿಕ್ಕು ತಪ್ಪಿಸಬೇಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರ ಟೀಕೆಗೆ ಉತ್ತರಿಸಿದ್ದಾರೆ
Dinesh Gundu Rao ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಸಾರ್ವಜನಿಕರಿಗೆ ಔಷಧಿಗಳು ಉಚಿತವಾಗಿ ಲಭ್ಯವಾಗಬೇಕು. ನಮ್ಮ ಸರ್ಕಾರೀ ಆಸ್ಪತ್ರೆಗಳಲ್ಲೇ ಜನರಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಗುತ್ತಿದೆ. ಹೀಗಿರುವಾಗ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರಗಳ ಅಗತ್ಯವಿಲ್ಲ.
ಒಂದು ವೇಳೆ ಸರ್ಕಾರೀ ಆಸ್ಪತ್ರೆಗಳಲ್ಲಿ ಔಷಧಿಗಳು ಲಭ್ಯವಿಲ್ಲದೆ ಹೋದರೆ ಸರ್ಕಾರೀ ಆಸ್ಪತ್ರೆಗಳು ಭಾರತೀಯ ಔಷಧ ಬ್ಯೂರೋ (ಬಿಪಿಪಿಐ) ಮೂಲಕ ನೇರವಾಗಿ ಜೆನೆರಿಕ್ ಔಷಧಿಗಳನ್ನು ಖರೀದಿಸಲು ಸೂಚಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
N Gopinath ಮಥುರಾ ಪ್ಯಾರಡೈಸ್ಮಧುರ ಮಾತಿನ ಗೋಪಿನಾಥ್ ಗೆ”ಆತಿಥ್ಯ ರತ್ನ” ಪುರಸ್ಕಾರ
N Gopinath ಕರ್ನಾಟಕ ರಾಜ್ಯ ಹೋಟೆಲ್ ಸಂಘದ ಪ್ರತಿಷ್ಠಿತ ಪ್ರಶಸ್ತಿ “ಆತಿಥ್ಯರತ್ನ”ವನ್ನು ಶಿವಮೊಗ್ಗ ನಗರದ ಮಥುರಾ ಪ್ಯಾರಡೈಸ್ ಹೋಟೆಲ್ ಮಾಲಿಕರಾದ ಶ್ರೀಯುತ ಎನ್.ಗೋಪಿನಾಥ್ ರವರಿಗೆ ಘೋಷಣೆಯಾಗಿದೆ. ಈ ಪ್ರಶಸ್ತಿಯನ್ನು ದಿ.29ನೇ ಮೇ ತಿಂಗಳಲ್ಲಿ ರಾಜ್ಯಪಾಲರು ಬೆಂಗಳೂರಿನಲ್ಲಿ ಕೊಡುವರು. ಇವರಿಗೆ ಸಂದ ಗೌರವಕ್ಕೆ ಸಂಸ್ಕೃತ ಭಾರತಿಯ ಅ.ನ.ವಿಜಯೇಂದ್ರ, ಯೂತ್ ಹಾಸ್ಟೆಲ್ಸ್ ನ ಛೇರ್ಮನ್ ಎಸ್.ಎಸ್.ವಾಗೇಶ್, ರೋಟರಿ ಜಿ.ವಿಜಯಕುಮಾರ್, ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್, ಬೈಕ್ ಕ್ಲಬ್ ಅಧ್ಯಕ್ಷ ಸಚ್ಚಿದಾನಂದ ರಕ್ತದಾನಿ ಸಂಘದ ಅಧ್ಯಕ್ಷ ಧರಣೇಂದ್ರ ದಿನಕರ್, ಇತಿಹಾಸ ಅಕಾಡೆಮಿ ಕಾರ್ಯದರ್ಶಿ ದಿಲೀಪ್ ನಾಡಿಗ್, ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಎ.ಮಂಜುನಾಥ್, ನಾಗರಾಜ್, ಸುರೇಶ್ ಕುಮಾರ್, ಮಲ್ಲಿಕಾರ್ಜುನ, ರಾಜು, ಮತ್ತು ಕೆ.ಲೈವ್ ನ್ಯೂಸ್ ಪ್ರಧಾನ ಸಂಪಾದಕ
ಡಾ.ಸುಧೀಂದ್ರ ಮುಂತಾದವರು ಅಭಿನಂದಿಸಿರುತ್ತಾರೆ.
Sagara News ಸಾಗರದ ಚರಕ ಅಂಗಡಿಯಲ್ಲಿಮೇ 26 ರಂದು “ಅವ್ವ ಸಂತೆ”
Sagara News ಜೀವನ್ಮುಖಿ ಹಾಗೂ ಚರಕ ವತಿಯಿಂದ ದಿನಾಂಕ 26:05:25 ರ ಮಧ್ಯಾಹ್ನ 3 ರಿಂದ ರಾತ್ರಿ 8:30 ರವರೆಗೆ ಸಾಗರದ ಎಸ್ ಪಿ ಎಂ ರಸ್ತೆಯ ಚರಕ ಅಂಗಡಿ ಯಲ್ಲಿ ಅವ್ವ ಸಂತೆಯನ್ನು ಆಯೋಜಿಸಲಾಗಿದೆ.
ಈ ಬಾರಿ ಹಲಸು ಮತ್ತು ಮಾವಿನ ವಿಶೇಷ ಸೇರಿದಂತೆ ಹಲವು ಬಗೆಯ ಆಹಾರ ಖಾದ್ಯಗಳು ಲಭ್ಯವಿರುತ್ತವೆ.
ಹಾಗು ಚರಕದ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ.
Sagara News ಗ್ರಾಹಕರು ಆಗಮಿಸಿ ನಮ್ಮ ಮಹಿಳಾ ಗ್ರಾಮೋದ್ಯೋಗವನ್ನು ಬೆಂಬಲಿಸುವಂತೆ ಈ ಮೂಲಕ ಕೋರುತ್ತೇವೆ.
ಎಂದು ಜೀವನ್ಮುಖಿ ಸಂಸ್ಥೆಯ ಪರವಾಗಿ ಎಂ ವಿ ಪ್ರತಿಭಾ ಕೋರಿದ್ದಾರೆ.
Gurudutt Hegde ಪ್ರವಾಸಿ ತಾಣಗಳಲ್ಲಿನ ಹೊಳೆ,ಹಳ್ಳ,ಜಲಪಾತ ಸ್ಥಳಗಳ ಬಗ್ಗೆ ಪ್ರವಾಸಿಗರಿಗೆ ಎಚ್ಚರವಹಿಸಲು ಜಾಗೃತಿ ಮೂಡಿಸಿ – ಗುರುದತ್ತ ಹೆಗಡೆ
Gurudutt Hegde ಪ್ರಸಕ್ತ ಸಾಲಿನ ಮುಂಗಾರು ಆರಂಭಗೊಂಡಿದ್ದು, ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಮಳೆಯಿಂದ ಯಾವುದೇ ಅನಾಹುತಗಳಾಗದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಹೊಳೆ, ಹಳ್ಳ, ಜಲಪಾತ ಮುಂತಾದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಕಸ್ಮಿಕ ಅಪಘಾತಗಳು ಹಾಗೂ ಜೀವಹಾನಿ ಆಗಬಹುದಾದ ಸಂಭವವಿದೆ. ಆದ್ದರಿಂದ ಅಂತಹ ಸ್ಥಳಗಳನ್ನು ಗುರುತಿಸಿ, ನಿರ್ಬಂಧಿತ ಪ್ರದೇಶ, ಪ್ರವೇಶವಿಲ್ಲ. ನಿಯಮ ಉಲ್ಲಂಘಿಸಿದಲ್ಲಿ ದಂಡನೆಗೆ ಗುರಿಪಡಿಸಲಾಗುವುದೆಂದು ಆ ಪ್ರದೇಶ ವ್ಯಾಪ್ತಿಯ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳು ಪ್ರಚಾರ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ವಸತಿ ಪ್ರದೇಶಗಳಲ್ಲಿ ಬೆಳೆದು ನಿಂತ ಧೈತ್ಯ ಮರಗಳ ರೆಂಬೆ-ಕೊಂಬೆಗಳು ರಸ್ತೆಗೆ ಚಾಚಿಕೊಂಡಿದ್ದು, ಮಳೆಯಿಂದ ಬಾಗಿ, ಅಥವಾ ಬಿದ್ದು ವಾಹನ ಅಥವಾ ಜೀವಹಾನಿ ಆಗಬಹುದಾದ ಸಂಭವವಿರುವುದನ್ನು ಗುರುತಿಸಿ. ಅಲ್ಲದೇ ಶಿಥಿಲವಾಗಿರುವ, ಒಣಗಿರುವ ಹಾಗೂ ದುರ್ಬಲ ಮರಗಳ ತೆರವಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಹಾಗೂ ಚಾಚಿಕೊಂಡಿರುವ ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಶಾಲೆ, ಅಂಗನವಾಡಿಯ ಶಿಥಿಲ ಕಟ್ಟಡಗಳಿದ್ದಲ್ಲಿ ಅಂತಹ ಕೊಠಡಿಗಳನ್ನು ಕೂರಿಸಿ, ತರಗತಿಗಳನ್ನು ನಡೆಸದಂತೆ ಹಾಗೂ ಸ್ಥಳೀಯವಾಗಿ ಲಭ್ಯವಾಗುವ ಸಮುದಾಯ ಭವನಗಳಲ್ಲಿ ತರಗತಿಗಳನ್ನು ನಡೆಸಲು ತ್ವರಿತವಾಗಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಹಶೀಲ್ದಾರರು ಸಮನ್ವಯತೆ ಸಾಧಿಸಿ, ಅಂತಹ ಕಟ್ಟಡಗಳಿದ್ದಲ್ಲಿ ವರದಿ ಪಡೆದು ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರು.
ಪ್ರಸಕ್ತ ಮುಂಗಾರು ಆರಂಭದಿಂದ ಈವರೆಗೆ ಯಾವುದೇ ಜನ-ಜಾನುವಾರು ಹಾನಿಗಳಾಗಿರುವ ಬಗ್ಗೆ ಮಾಹಿತಿ ಲಭ್ಯವಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಶೇ,25ಕ್ಕಿಂತ ಕಡಿಮೆ ಹಾನಿಗೊಳಗಾಗಿರುವ 84ಮನೆಗಳ ಪೈಕಿ ಈಗಾಗಲೇ 39ಮನೆಗಳಿಗೆ ಹಾಗೂ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿರುವ ಹೊಸನಗರ ತಾಲೂಕಿನ ಒಂದು ಮನೆಗೆ ನಿಯಮಾನುಸಾರ ಪರಿಹಾರಧನ ವಿತರಿಸಲಾಗಿದೆ. ಇತ್ತೀಚಿಗೆ ಬಿದ್ದ ಮಳೆಯಿಂದ ಹಾನಿಯಾಗಿರುವ ಮನೆಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ವರದಿ ಪಡೆದು, ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ರಾಜಾಕಾಲುವೆಗಳು, ಚರಂಡಿಗಳಲ್ಲಿ ತುಂಬಿರುವ ಕಸ-ಕಡ್ಡಿಗಳನ್ನು ಕೂಡಲೇ ಸ್ವಚ್ಚಗೊಳಿಸಬೇಕು. ಹಾಗೂ ಚರಂಡಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರಿಂದಾಗಿ ಚರಂಡಿಯಲ್ಲಿ ಮಳೆ ನೀರು ತುಂಬಿ ಜನಜೀವನ ಅಸ್ತವ್ಯಸ್ತಗೊಳ್ಳುವುದರಿಂದ ಹಾಗೂ ಸಾಂಕ್ರಾಮಿಕ ರೋಗಗಳ ಹರಡುವಿಕೆಯಿಂದ ಸುರಕ್ಷತೆ ಕಂಡುಕೊಳ್ಳಬಹುದಾಗಿದೆ ಎಂದರು.
Gurudutt Hegde ಸಣ್ಣ ನೀರಾವರಿ ಮತ್ತು ಪಂಚಾಯತ್‌ರಾಜ್‌ಇಲಾಖೆ ವ್ಯಾಪ್ತಿಗೊಳಪಡುವ ಕೆರೆ, ಕಟ್ಟೆ-ಕಾಲುವೆಗಳು, ಸೇತುವೆಗಳು ಸುರಕ್ಷಿತವಾಗಿರುವ ಬಗ್ಗೆ ಹಾಗೂ ಮುಂಗಾರು ಮಳೆಯಿಂದ ಯಾವುದೇ ಹಾನಿಗೊಳ್ಳದಿರುವ ಬಗ್ಗೆ ಈಗಲೇ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ದುರ್ಬಲವಾಗಿರುವ ಕೋಡಿ, ಕಾಲುವೆಗಳು, ಸೇತುವೆಗಳು ಇದ್ದಲ್ಲಿ ಅವುಗಳ ಪೂರ್ಣ ವಿವರಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ, ದುರಸ್ತಿಗೆ ಎನ್.ಡಿ.ಆರ್.ಎಫ್.ನಿಧಿಯಲ್ಲಿ ರೂ.2.00ಲಕ್ಷಗಳ ವರೆಗೆ ಅನುದಾನ ಮಂಜೂರು ಮಾಡಲಾಗುವುದು ಎಂದ ಅವರು, ತಗ್ಗು ಪ್ರದೇಶಗಳನ್ನು ಗುರುತಿಸಿ, ಪುನರ್ವಸತಿಗೆ ಸ್ಥಳಗಳನ್ನು ಗುರುತಿಸಿಟ್ಟುಕೊಳ್ಳುವಂತೆ ಅವರು ಸೂಚಿಸಿದರು.
ಇಂತಹ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಸಲಹೆ-ಸೂಚನೆಗಳನ್ನು ಆಲಿಸುವಂತೆಯೂ ಸೂಚಿಸಿದ ಅವರು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರರು ವಿಶೇಷ ಗಮನಹರಿಸಿ, ಒಂದು ವಾರದಲ್ಲಿ ಬೇಡಿಕೆ ಪಟ್ಟಿ ಸಲ್ಲಿಸುವಂತೆ ಸೂಚಿಸಿದರು.
ಹುಲಿಕಲ್, ಆಗುಂಬೆ, ಕೊಲ್ಲೂರು ಮತ್ತು ಬಾಳೆಬರೆ ಮುಂತಾದ ಘಾಟಿಗಳಲ್ಲಿ ಭೂಕುಸಿತಗೊಂಡು ಸಂಚಾರಕ್ಕೆ ಅಡಚಣೆಯಾಗಬಹುದಾದ ಸ್ಥಳಗಳನ್ನು ಗುರುತಿಸಿ, ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ ಅವರು, ಅಗತ್ಯವಿರುವಲ್ಲಿ ಮರಳುಚೀಲಗಳನ್ನು ಒದಗಿಸಲು ದಾಸ್ತಾನು ಮಾಡಿಕೊಳ್ಳುವಂತೆಯೂ ಅವರು ಸಲಹೆ ನೀಡಿದರು.
ಅಲ್ಲದೇ ಮಳೆಹಾನಿಯಿಂದಾಗುವ ಅನಾಹುತಗಳಿಗೆ ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳಲು ಸದಾ ಮಾನಸಿಕವಾಗಿ ಸಿದ್ಧರಿರುವಂತೆ ಹಾಗೂ ಅಗತ್ಯವಿದ್ದಲ್ಲಿ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಹೆಚ್ಚುವರಿ ಪೊಲೀಸ್‌ಅಧೀಕ್ಷಕ ಅನಿಲ್‌ಕುಮಾರ್‌ಭೂಮರೆಡ್ಡಿ, ಉಪವಿಭಾಗಾಧಿಕಾರಿ ಸತ್ಯನಾರಾಯಣ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Department of Agriculture ರೈತರೆ, ನಿಮ್ಮಲ್ಲಿ ದೇಸಿತಳಿಗಳಿವೆಯೆ? ಹಾಗಿದ್ದಲ್ಲಿ ಕೃಷಿ ಇಲಾಖೆಯಲ್ಲಿ ತಳಿಗಳ ನೋಂದಣಿ ಮಾಡಿಸಿ.-ಕೃಷಿ ಇಲಾಖೆ ಪ್ರಕಟಣೆ
Department of Agriculture ಜಿಲ್ಲಾ ಕೃಷಿ ಇಲಾಖೆಯಿಂದ ದೇಸಿ ತಳಿಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮದಡಿ ಕಣ್ಮರೆಯಾಗುತ್ತಿರುವ ಹಾಗೂ ನಶಿಸಿಹೋಗುತ್ತಿರುವ ಸ್ಥಳೀಯ ಬೆಳೆಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಒಂದು ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಲಾಗುತ್ತಿದ್ದು, ರೈತರು ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದೆ.
ಆಯಾ ಪ್ರದೇಶದಲ್ಲಿ ಸ್ಥಳೀಯ ಅಥವಾ ಸಾಂಪ್ರದಾಯಕವಾಗಿ ಕೃಷಿ ಪದ್ದತಿಯಿಂದ ಅಭಿವೃದ್ದಿ ಮತ್ತು ನಿರ್ವಹಿಸುವ ತಳಿಗಳನ್ನು ದೇಶಿ ತಳಿಗಳೆಂದು ಕರೆಯಲಾಗಿದ್ದು, ಈ ಕಾರ್ಯಕ್ರಮದಡಿ ಆಯ್ಕೆಯಾದ ಭತ್ತ, ರಾಗಿ, ಜೋಳ, ತೊಗರಿ, ಹುರುಳಿ, ಅವರೆ, ಅಲಸಂದೆ, ಮಡಕಿಕಾಳು, ಹುಚ್ಚೆಳ್ಳು, ಕುಸುಬೆ, ಎಳ್ಳು, ನವಣೆ, ಊದಲು, ಕೊರಲೆ, ಹಾರಕ, ಬರಗು ಮತ್ತು ಇತರೆ ಬೆಳೆಗಳಲ್ಲಿ ದೇಸಿ ತಳಿಗಳಿದ್ದರೆ ಅದನ್ನು ಸಲಹಾ ಸಮಿತಿಗೆ ಶಿಫಾರಸು ಮಾಡಲು ರೈತರು ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳುವುದು.
Department of Agriculture ಇತ್ತೀಚಿಗೆ ಕಣ್ಮರೆಯಾಗುತ್ತಿರುವ ದೇಸಿ ತಳಿಗಳನ್ನು ಮೂಲ ಸಮೀಕ್ಷೆ ಮೂಲಕ ಗುರುತಿಸಿ ಸಂರಕ್ಷಣೆಯನ್ನು ಮಾಡುವ ಗುರಿಯನ್ನು ಹೊಂದಲಾಗಿದ್ದು, ಯೋಜನೆಯನ್ನು ದೇಸಿ ತಳಿಗಳ ಸಂರಕ್ಷಣೆ ಮತ್ತು ಕೃಷಿಯಲ್ಲಿ ತೊಡಗಿರುವ ರೈತರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಇರಬೇಕು. ಹಾಗೂ ಬೀಜ ಬ್ಯಾಂಕ್‌ನಲ್ಲಿರಿಸಲು ರೈತರು ಕಡ್ಡಾಯವಾಗಿ ಅಗತ್ಯ ಪ್ರಮಾಣದ ದೇಸಿ ತಳಿಗಳ ಬೀಜಗಳನ್ನು ನೀಡಲು ಸಿದ್ದರಿರಬೇಕು. ಜಾನುವಾರು ನಿರ್ವಹಣೆ, ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಪುನರುತ್ಪಾದಕ ಕೃಷಿ ಮತ್ತು ಇತರೆ ಸುಸ್ಥಿರ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರಬೇಕು.
ಈ ಯೋಜನೆಯಡಿ ತಳಿಗಳನ್ನು ನೋಂದಾಯಿಸಿಕೊಳ್ಳಲು ಇಚ್ಚಿಸುವರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
MESCOM ಮೇ25. ಸೂಳೆ ಬೈಲ್ ಸುತ್ತಮುತ್ತ ವಿದ್ಯುತ್‌ಸರಬರಾಜು ವ್ಯತ್ಯಯ. ಮೆಸ್ಕಾಂ ಪ್ರಕಟಣೆ
MESCOM ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ತುರ್ತು ನಿರ್ವಹಣೆ ಕಾಮಗಾರಿ ಇರುವುದರಿಂದ ಫೀಡರ್-7ರ ವ್ಯಾಪ್ತಿಯಲ್ಲಿ ಮೇ 25 ರಂದು ಬೆಳಗ್ಗೆ 09.00 ರಿಂದ ಸಂಜೆ 6.00 ರವರೆಗೆ ಈ ವ್ಯಾಪ್ತಿಗೆ ಸೇರಿರುವ ಸೂಳೆಬೈಲ್, ಊರುಗಡೂರು, ಮದಾರಿಪಾಳ್ಯ, ನಿಸರ್ಗಲೇಔಟ್, ಮಳಲಿಕೊಪ್ಪ, ಇಂದಿರಾನಗರ, ವಾದಿ ಎ ಹುದಾ, ಪುಟ್ಟಪ್ಪ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಸ್ಕಾಂ ಪ್ರಕಟಣೆ ತಿಳಿಸಿದೆ.
