Gurudutt Hegde ಪ್ರಸಕ್ತ ಸಾಲಿನ ಮುಂಗಾರು ಆರಂಭಗೊಂಡಿದ್ದು, ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಮಳೆಯಿಂದ ಯಾವುದೇ ಅನಾಹುತಗಳಾಗದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಸೂಚಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಹೊಳೆ, ಹಳ್ಳ, ಜಲಪಾತ ಮುಂತಾದ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಆಕಸ್ಮಿಕ ಅಪಘಾತಗಳು ಹಾಗೂ ಜೀವಹಾನಿ ಆಗಬಹುದಾದ ಸಂಭವವಿದೆ. ಆದ್ದರಿಂದ ಅಂತಹ ಸ್ಥಳಗಳನ್ನು ಗುರುತಿಸಿ, ನಿರ್ಬಂಧಿತ ಪ್ರದೇಶ, ಪ್ರವೇಶವಿಲ್ಲ. ನಿಯಮ ಉಲ್ಲಂಘಿಸಿದಲ್ಲಿ ದಂಡನೆಗೆ ಗುರಿಪಡಿಸಲಾಗುವುದೆಂದು ಆ ಪ್ರದೇಶ ವ್ಯಾಪ್ತಿಯ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳು ಪ್ರಚಾರ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶಗಳ ಮುಖ್ಯರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ವಸತಿ ಪ್ರದೇಶಗಳಲ್ಲಿ ಬೆಳೆದು ನಿಂತ ಧೈತ್ಯ ಮರಗಳ ರೆಂಬೆ-ಕೊಂಬೆಗಳು ರಸ್ತೆಗೆ ಚಾಚಿಕೊಂಡಿದ್ದು, ಮಳೆಯಿಂದ ಬಾಗಿ, ಅಥವಾ ಬಿದ್ದು ವಾಹನ ಅಥವಾ ಜೀವಹಾನಿ ಆಗಬಹುದಾದ ಸಂಭವವಿರುವುದನ್ನು ಗುರುತಿಸಿ. ಅಲ್ಲದೇ ಶಿಥಿಲವಾಗಿರುವ, ಒಣಗಿರುವ ಹಾಗೂ ದುರ್ಬಲ ಮರಗಳ ತೆರವಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಹಾಗೂ ಚಾಚಿಕೊಂಡಿರುವ ಮರಗಳ ರೆಂಬೆ-ಕೊಂಬೆಗಳನ್ನು ಕತ್ತರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಶಾಲೆ, ಅಂಗನವಾಡಿಯ ಶಿಥಿಲ ಕಟ್ಟಡಗಳಿದ್ದಲ್ಲಿ ಅಂತಹ ಕೊಠಡಿಗಳನ್ನು ಕೂರಿಸಿ, ತರಗತಿಗಳನ್ನು ನಡೆಸದಂತೆ ಹಾಗೂ ಸ್ಥಳೀಯವಾಗಿ ಲಭ್ಯವಾಗುವ ಸಮುದಾಯ ಭವನಗಳಲ್ಲಿ ತರಗತಿಗಳನ್ನು ನಡೆಸಲು ತ್ವರಿತವಾಗಿ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ ಅವರು, ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಹಶೀಲ್ದಾರರು ಸಮನ್ವಯತೆ ಸಾಧಿಸಿ, ಅಂತಹ ಕಟ್ಟಡಗಳಿದ್ದಲ್ಲಿ ವರದಿ ಪಡೆದು ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರು.
ಪ್ರಸಕ್ತ ಮುಂಗಾರು ಆರಂಭದಿಂದ ಈವರೆಗೆ ಯಾವುದೇ ಜನ-ಜಾನುವಾರು ಹಾನಿಗಳಾಗಿರುವ ಬಗ್ಗೆ ಮಾಹಿತಿ ಲಭ್ಯವಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಶೇ,25ಕ್ಕಿಂತ ಕಡಿಮೆ ಹಾನಿಗೊಳಗಾಗಿರುವ 84ಮನೆಗಳ ಪೈಕಿ ಈಗಾಗಲೇ 39ಮನೆಗಳಿಗೆ ಹಾಗೂ ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿರುವ ಹೊಸನಗರ ತಾಲೂಕಿನ ಒಂದು ಮನೆಗೆ ನಿಯಮಾನುಸಾರ ಪರಿಹಾರಧನ ವಿತರಿಸಲಾಗಿದೆ. ಇತ್ತೀಚಿಗೆ ಬಿದ್ದ ಮಳೆಯಿಂದ ಹಾನಿಯಾಗಿರುವ ಮನೆಗಳ ಸಮೀಕ್ಷೆ ನಡೆಸಲಾಗುತ್ತಿದ್ದು, ವರದಿ ಪಡೆದು, ಸಂತ್ರಸ್ಥ ಕುಟುಂಬಗಳಿಗೆ ಪರಿಹಾರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದರು.
ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿನ ರಾಜಾಕಾಲುವೆಗಳು, ಚರಂಡಿಗಳಲ್ಲಿ ತುಂಬಿರುವ ಕಸ-ಕಡ್ಡಿಗಳನ್ನು ಕೂಡಲೇ ಸ್ವಚ್ಚಗೊಳಿಸಬೇಕು. ಹಾಗೂ ಚರಂಡಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರಿಂದಾಗಿ ಚರಂಡಿಯಲ್ಲಿ ಮಳೆ ನೀರು ತುಂಬಿ ಜನಜೀವನ ಅಸ್ತವ್ಯಸ್ತಗೊಳ್ಳುವುದರಿಂದ ಹಾಗೂ ಸಾಂಕ್ರಾಮಿಕ ರೋಗಗಳ ಹರಡುವಿಕೆಯಿಂದ ಸುರಕ್ಷತೆ ಕಂಡುಕೊಳ್ಳಬಹುದಾಗಿದೆ ಎಂದರು.
Gurudutt Hegde ಸಣ್ಣ ನೀರಾವರಿ ಮತ್ತು ಪಂಚಾಯತ್‌ರಾಜ್‌ಇಲಾಖೆ ವ್ಯಾಪ್ತಿಗೊಳಪಡುವ ಕೆರೆ, ಕಟ್ಟೆ-ಕಾಲುವೆಗಳು, ಸೇತುವೆಗಳು ಸುರಕ್ಷಿತವಾಗಿರುವ ಬಗ್ಗೆ ಹಾಗೂ ಮುಂಗಾರು ಮಳೆಯಿಂದ ಯಾವುದೇ ಹಾನಿಗೊಳ್ಳದಿರುವ ಬಗ್ಗೆ ಈಗಲೇ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ದುರ್ಬಲವಾಗಿರುವ ಕೋಡಿ, ಕಾಲುವೆಗಳು, ಸೇತುವೆಗಳು ಇದ್ದಲ್ಲಿ ಅವುಗಳ ಪೂರ್ಣ ವಿವರಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ, ದುರಸ್ತಿಗೆ ಎನ್.ಡಿ.ಆರ್.ಎಫ್.ನಿಧಿಯಲ್ಲಿ ರೂ.2.00ಲಕ್ಷಗಳ ವರೆಗೆ ಅನುದಾನ ಮಂಜೂರು ಮಾಡಲಾಗುವುದು ಎಂದ ಅವರು, ತಗ್ಗು ಪ್ರದೇಶಗಳನ್ನು ಗುರುತಿಸಿ, ಪುನರ್ವಸತಿಗೆ ಸ್ಥಳಗಳನ್ನು ಗುರುತಿಸಿಟ್ಟುಕೊಳ್ಳುವಂತೆ ಅವರು ಸೂಚಿಸಿದರು.
ಇಂತಹ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಜನಪ್ರತಿನಿಧಿಗಳ ಸಲಹೆ-ಸೂಚನೆಗಳನ್ನು ಆಲಿಸುವಂತೆಯೂ ಸೂಚಿಸಿದ ಅವರು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಹಶೀಲ್ದಾರರು ವಿಶೇಷ ಗಮನಹರಿಸಿ, ಒಂದು ವಾರದಲ್ಲಿ ಬೇಡಿಕೆ ಪಟ್ಟಿ ಸಲ್ಲಿಸುವಂತೆ ಸೂಚಿಸಿದರು.
ಹುಲಿಕಲ್, ಆಗುಂಬೆ, ಕೊಲ್ಲೂರು ಮತ್ತು ಬಾಳೆಬರೆ ಮುಂತಾದ ಘಾಟಿಗಳಲ್ಲಿ ಭೂಕುಸಿತಗೊಂಡು ಸಂಚಾರಕ್ಕೆ ಅಡಚಣೆಯಾಗಬಹುದಾದ ಸ್ಥಳಗಳನ್ನು ಗುರುತಿಸಿ, ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದ ಅವರು, ಅಗತ್ಯವಿರುವಲ್ಲಿ ಮರಳುಚೀಲಗಳನ್ನು ಒದಗಿಸಲು ದಾಸ್ತಾನು ಮಾಡಿಕೊಳ್ಳುವಂತೆಯೂ ಅವರು ಸಲಹೆ ನೀಡಿದರು.
ಅಲ್ಲದೇ ಮಳೆಹಾನಿಯಿಂದಾಗುವ ಅನಾಹುತಗಳಿಗೆ ತ್ವರಿತವಾಗಿ ಅಗತ್ಯ ಕ್ರಮ ಕೈಗೊಳ್ಳಲು ಸದಾ ಮಾನಸಿಕವಾಗಿ ಸಿದ್ಧರಿರುವಂತೆ ಹಾಗೂ ಅಗತ್ಯವಿದ್ದಲ್ಲಿ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಕ್ರಮ ಕೈಗೊಳ್ಳುವಂತೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಹೆಚ್ಚುವರಿ ಪೊಲೀಸ್‌ಅಧೀಕ್ಷಕ ಅನಿಲ್‌ಕುಮಾರ್‌ಭೂಮರೆಡ್ಡಿ, ಉಪವಿಭಾಗಾಧಿಕಾರಿ ಸತ್ಯನಾರಾಯಣ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Gurudutt Hegde ಪ್ರವಾಸಿ ತಾಣಗಳಲ್ಲಿನ ಹೊಳೆ,ಹಳ್ಳ,ಜಲಪಾತ ಸ್ಥಳಗಳ ಬಗ್ಗೆ ಪ್ರವಾಸಿಗರಿಗೆ ಎಚ್ಚರವಹಿಸಲು ಜಾಗೃತಿ ಮೂಡಿಸಿ – ಗುರುದತ್ತ ಹೆಗಡೆ
Date: