N Gopinath ದೇವ ಭೂಮಿ ಹಿಮಾಲಯದ ಚಾರಣ ಒಂದು ಅನಿರ್ವಚನೀಯ ಅನುಭವ. ಅದೊಂದು ಅನುಭೂತಿ ಎಂದು ಎನ್. ಗೋಪಿನಾಥ್ ಬಣ್ಣಿಸಿದರು.
ಯುವಜನ ಚಾರಣ ಸಂಸ್ಥೆಯ ತರುಣೋದಯ ಘಟಕ ಆಯೋಜಿಸಿರುವ ಹಿಮಾಚಲ ಪ್ರದೇಶದ ರಮ್ಯ ತಾಣ ‘ರೋಲಿ ಕೋಲಿ’ ಚಾರಣಕ್ಕೆ ತೆರಳುತ್ತಿರುವ ಚಾರಣಿಗರನ್ನು ಬೀಳ್ಕೊಟ್ಟು ಮಾತನಾಡಿದ ಅವರು, ಹಿಮಾಲಯವನ್ನು ದರ್ಶಿಸುವ, ಅಲ್ಲಿಯ ಪ್ರಕೃತಿ ಸೌಂದರ್ಯವನ್ನು ಅನುಭವಿಸುವ ಅವಕಾಶ ಹಾಗೂ ಅದೃಷ್ಟ ತಮಗೆ ಒಲೆದಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಅನುಭವ ಪಡೆಯಿರಿ ಎಂದರು.
ಹಿಮಾಲಯ ಚಾರಣ ಸಾಹಸದ ಕೆಲಸ. ಅದರಲ್ಲಿ ತೊಡಗಿಸಿ ಕೊಳ್ಳಲು ನಮ್ಮ ನಗರದ ಉತ್ಸಾಹಿ ಚಾರಣಿಗರಿಗೆ ಅವಕಾಶ ಮಾಡಿ ಕೊಡುತ್ತಿರುವ ಯೂತ್ ಹಾಸ್ಟೆಲ್ಸ್ ಉತ್ತಮ ಕಾರ್ಯ ಮಾಡುತ್ತಿದೆ ಎಂದ ಅವರು, ಅ.ನಾ.ವಿಜಯೇಂದ್ರ ರವರು ಈ ನಿಟ್ಟಿನಲ್ಲಿ ಭಾರತದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನು ಚಾರಣಕ್ಕೆ ಕಳುಹಿಸಿ ಕೊಡುತ್ತಿದ್ದಾರೆ ಎಂದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಅ.ನ.ವಿಜಯೇಂದ್ರರವರು ತಮ್ಮೆಲ್ಲರ ಅದೃಷ್ಟ, ಯುದ್ಧದ ಕಾರ್ಮೋಡ ಸರಿದು ನಾವು ಹೋಗುವ ಸಮಯಕ್ಕೆ ಯಾವುದೆ ಅಡೆ ತಡೆ ಇಲ್ಲದೆ, ಅವಕಾಶ ದೊರಕಿದೆ. ಈ ಬಾರಿಯ ಚಾರಣದಲ್ಲಿ ಹೊಸಬರು ಬಹಳಷ್ಟು ಸದಸ್ಯರು ಇದ್ದೀರಿ, ಹಿರಿಯ ಸದಸ್ಯರಾದ ವೈದ್ಯನಾಥ್, ಡಾ. ನಾಗಭೂಷಣ್, ವೆಂಕಟೇಶ್ ಮುಂತಾದ ಅನುಭವಿ ಚಾರಣಿಗರು ಜೊತೆಗಿದ್ದಾರೆ. ಯಾವುದೇ ಅಂಜಿಕೆ ಬೇಡ. ಯಶಸ್ವಿಯಾಗಿ ಚಾರಣ ಪೂರೈಸಿ ಬರುತ್ತೀರಿ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಚಾರಣದಲ್ಲಿ ನಾವು ಸಂತೋಷ ಪಡುವುದರೊಂದಿಗೆ ಇತರರೂ ಖುಷಿ ಪಡಲು ಅವಕಾಶ ಮಾಡಿ ಕೊಡಬೇಕು ಎಂದ ಅವರು, ಚಾರಣ ಒಂದು ಸ್ಪರ್ಧೆ ಅಲ್ಲ, ಅದು ಪ್ರಕೃತಿ ಅಧ್ಯಯನ ಎಂದರು.
N Gopinath ಸಂಸ್ಥೆಯ ಜಿಲ್ಲಾ ಛೇರ್ಮನ್ ಎಸ್.ಎಸ್.ವಾಗೇಶ್ ಮಾತನಾಡಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಾರಣಿಗರನ್ನು ಕಲಿಸಿಕೊಡುವ ನಿಟ್ಟಿನಲ್ಲಿ ತರುಣೋದಯ ಘಟಕ ಮುಂಚೋಣೆಯಲ್ಲಿದೆ. ಉತ್ಸಾಹಿಗಳು ಸಂಸ್ಥೆಯ ಆಜೀವ ಸದಸ್ಯತ್ವ ಪಡೆದು ಪ್ರತೀ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಗಳಲ್ಲಿ ಭಾಗವಹಿಸುತ್ತಿರುವುದರಿಂದ ಇಂದು ಭಾರತದಲ್ಲಿಯೇ ಶಿವಮೊಗ್ಗ ಘಟಕ ಅತೀ ಹೆಚ್ಚು ಸದಸ್ಯರನ್ನು ಹಿಮಾಲಯ ಚಾರಣಕ್ಕೆ ಕಳುಹಿಸಿರುವ ದಾಖಲೆ ಮಾಡಿದೆ ಎಂದರು.
ಮಾಜಿ ರಾಜ್ಯ ಉಪಾಧ್ಯಕ್ಷ ಜಿ. ವಿಜಯಕುಮಾರ್ ಮಾತನಾಡಿ, ಪ್ರಕೃತಿಯನ್ನು ಆಸ್ವಾದಿಸಲು ಅದೃಷ್ಟ ಬೇಕು. ಯಾವುದೇ ವಾಹನ ಹೋಗಲಾರದ ಸ್ಥಳಕ್ಕೆ ಚಾರಣಿಗ ಸುಲಭವಾಗಿ ಹೋಗಿ ತಲುಪುತ್ತಾನೆ. ಹಿಮಾಲಯದ ಪ್ರಕೃತಿ ಸವಿ, ಸವಿದವನೆ ಬಲ್ಲ, ಅಂತಹ ಅವಕಾಶವನ್ನು ನಮ್ಮ ತರುಣೋದಯ ಘಟಕ ಹಲವಾರು ವರ್ಷದಿಂದ ಆಯೋಜಿಸುತ್ತಿದೆ ಎಂದರು.
ಆಗಮಿಸಿದ ಎಲ್ಲರನ್ನೂ ರವೀಂದ್ರ ಸ್ವಾಗತಿಸಿದರು, ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿದರು, ರಮೇಶ್, ಮಲ್ಲಿಕಾರ್ಜುನ ಕಾನೂರು, ದಿಲೀಪ್ ನಾಡಿಗ್, ರಾಜು, ಮಂಜುನಾಥ್ ಇತರರು ಇದ್ದರು.