Monday, August 3, 2026
Monday, August 3, 2026
Home Blog Page 23

ಯೋಗ ನಮ್ಮ ಜೀವನವನ್ನುಸುಂದರ ಮತ್ತು ಆರೋಗ್ಯವಾಗಿಡುತ್ತದೆ: ಎಚ್.ಎಂ‌.ಚಂದ್ರಶೇಖರಯ್ಯ

0

ಯೋಗ ಪ್ರಾಣಾಯಾಮ ಧ್ಯಾನ ಹಾಗೂ ಉತ್ತಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಪ್ರಧಾನ ಕಾರ್ಯದರ್ಶಿಗಳಾದ ಎಚ್ ಎಮ್ ಚಂದ್ರಶೇಖರಯ್ಯ ನುಡಿದರು ಅವರು ಕೃಷಿ ನಗರದ ಗಣಪತಿ ದೇವಸ್ಥಾನದ ಯೋಗ ಶಾಖೆಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಯೋಗ ನಮ್ಮ ಜೀವನವನ್ನು ಸುಂದರವಾಗಿ ಹಾಗೂ ಸದಾ ಆರೋಗ್ಯವಂತರನ್ನಾಗಿ ಇಡಲು ಬಹಳ ಪ್ರಮುಖವಾದ ಪಾತ್ರವಹಿಸಿದೆ ಎಷ್ಟೋ ಬಾರಿ ವೈದ್ಯರಿಂದ ಕಾಯಿಲೆಯನ್ನು ಗುಣಪಡಿಸಲಾಗದೆ ಇದ್ದಾಗ ಯೋಗದಲ್ಲಿ ಉತ್ತಮ ಪರಿಹಾರ ಸಿಕ್ಕಿದೆ ಎಂದು ಹಲವಾರು ನಿದರ್ಶನಗಳನ್ನು ತಿಳಿಸಿದರು. ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವುದರಿಂದ ದೇಹ ಸದೃಢವಾಗುವುದರ ಜೊತೆಗೆ ಮನಸ್ಸು ಉಲ್ಲಾಸಿತವಾಗಿರುತ್ತದೆ. ಹಾಗೆ ಶಾಖೆಗಳಲ್ಲಿ ಪ್ರತಿನಿತ್ಯ ಭಜನೆ ಒಳ್ಳೆಯ ಆರೋಗ್ಯ ಮಾಹಿತಿ ಜೊತೆಗೆ ಉತ್ತಮ ಸಂಸ್ಕಾರದಿಂದ ಮನುಷ್ಯ ಪರಿಪಕ್ವವಾಗುತ್ತಾನೆ. ಈಗಾಗಲೇ ಶಿವಗಂಗಾ ಯೋಗ ಕೇಂದ್ರ ನಗರದ 42 ಕಡೆ ಉಚಿತವಾಗಿ ಯೋಗ ಪ್ರಾಣಾಯಾಮ ಧ್ಯಾನ ತರಗತಿಗಳನ್ನು ನಡೆಸುತ್ತಾ ಬರುತ್ತಿದೆ ಇದಕ್ಕೆಲ್ಲಾ ನಮ್ಮ ಕೇಂದ್ರದ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಡಾಕ್ಟರ್ ಸಿವಿ ರುದ್ರಾರಾಧ್ಯರವರು ಹಾಗೂ ಟ್ರಸ್ಟಿಗಳು ಮತ್ತು ಪೋಷಕರ ಮಾರ್ಗದರ್ಶನ ಅತ್ಯಂತ ಪ್ರಮುಖವಾಗಿದೆ ಪ್ರತಿನಿತ್ಯ ಸಾವಿರಾರು ಜನರು ಉಚಿತವಾಗಿ ಯೋಗಭ್ಯಾಸ ಮಾಡುತ್ತಿದ್ದಾರೆ ಎಂದು ನುಡಿದರು. ಕೃಷಿ ನಗರ ಗಣಪತಿ ದೇವಸ್ಥಾನದ ಶಾಖೆಯ ಶಿಕ್ಷಕರಾದ ನೀಲಕಂಠರಾವ್ ಅವರು ಮಾತನಾಡುತ್ತಾ ಕ್ರಮಬದ್ಧವಾಗಿ ಯೋಗಭ್ಯಾಸ ನಮ್ಮ ಬದುಕನ್ನು ಹಸನಾಗಿಸುತ್ತದೆ ಹಾಗೆ ನಮ್ಮನ್ನು ದೀರ್ಘಾಯುಷ್ಯ ಉಳ್ಳವರನ್ನಾಗಿಸುತ್ತದೆ. ಆದ್ದರಿಂದ ಬಾಲ್ಯದಲ್ಲೇ ಮಕ್ಕಳಿಗೆ ಯೋಗಭ್ಯಾಸವನ್ನು ಪರಿಚಯಿಸಬೇಕು ಯೋಗ ಮಾಡುವವರು ಆಸ್ಪತ್ರೆಯಿಂದ ಸದಾ ದೂರವಿರುತ್ತಾರೆ ಹಾಗೆ ಯೋಗಭ್ಯಾಸ ಮಾಡುವವರ ಮುಖದಲ್ಲಿ ಸದಾ ಶಾಂತಿ ಹಾಗೂ ತೇಜಸ್ಸು ತುಂಬಿರುತ್ತದೆ ಎಂದು ನುಡಿದರು. ಶಿಬಿರದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಬಿಂದು ವಿಜಯಕುಮಾರ್, ಶಿಕ್ಷಕರಾದ ಮಹಾಬಲೇಶ್ವರ ಹೆಗಡೆ, ಅನಿಲ್. ಗಣಪತಿ, ಪರಮೇಶ್ವರಪ್ಪ. ರವಿಕುಮಾರ್. ಸುಮಾ ನಟರಾಜ್, ನಾಗರತ್ನಮ್,. ಜಾನಕಮ್ಮ ಹಾಗೂ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ನಿಗದಿತ ಸ್ಥಳದಲ್ಲಿ ಮಾತ್ರ ಸಿಟಿ ಬಸ್ ನಿಲುಗಡೆ:ಆಟೋ ದರ ನಿಷ್ಕರ್ಷೆಗೆ ಚರ್ಚೆಯ ನಂತರ ನಿರ್ಧಾರ : ಪ್ರಭುಲಿಂಗ ಕವಳಿಕಟ್ಟಿ

0

ಶಿವಮೊಗ್ಗ ನಗರ ಸಾರಿಗೆ ಬಸ್‌ಗಳು ನಿಗದಿತ ಬಸ್‌ಸ್ಟಾಪ್‌ಗಳ ಬದಲಾಗಿ ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಳಿಸುತ್ತಿರುವುದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಇನ್ನುಮುಂದೆ ನಿಗದಿತ ಸ್ಥಳಗಳಲ್ಲಿಯೇ ಬಸ್‌ಗಳನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳು ನಗರ ಸಾರಿಗೆ ಬಸ್ ಚಾಲಕರಿಗೆ ಸೂಚನೆ ನೀಡಿದ್ದಾರೆ.

ನಗರದ ಆಟೋರಿಕ್ಷಾ ಸಂಚಾರ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಸ್ ಚಾಲಕರಿಗೆ ಕೂಡಲೇ ಸೂಚನೆ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ನೆರೆಯ ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಆಟೋ ದರ ಪರಿಷ್ಕರಣೆ ಮಾನದಂಡಗಳನ್ನು ಪರಿಶೀಲಿಸಿ, ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ದರ ಪರಿಷ್ಕರಣೆ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರ್ಯಾಪಿಡೋ ಅಥವಾ ಇತರ ಯಾವುದೇ ದ್ವಿಚಕ್ರ ವಾಹನ ಸಾರಿಗೆ ಸೇವೆಗಳು ಸರ್ಕಾರದ ಮಾರ್ಗಸೂಚಿಯಂತೆ ಮಾತ್ರ ಕಾರ್ಯನಿರ್ವಹಿಸಬೇಕು. ಅಗತ್ಯ ಅನುಮತಿ ಮತ್ತು ದಾಖಲೆಗಳಿಲ್ಲದೆ ಸೇವೆ ನೀಡಿದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಆಟೋ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕು. ನಗರದಲ್ಲಿರುವ 5,665 ನೋಂದಾಯಿತ ಆಟೋಗಳಲ್ಲಿ ಚಾಲಕ ಹಾಗೂ ವಾಹನದ ಮಾಹಿತಿ ಫಲಕವನ್ನು ಅಳವಡಿಸಬೇಕು. ವಿಮೆಯನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳಬೇಕು. ಮಾದಕ ವಸ್ತುಗಳ ಸಾಗಾಣಿಕೆ ಕುರಿತು ಮಾಹಿತಿ ದೊರೆತರೆ ಪೊಲೀಸ್ ಇಲಾಖೆಗೆ ತಿಳಿಸಿ ಸಮಾಜದ ಸುರಕ್ಷತೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.

ರ್ಯಾಪಿಡೋ ಸ್ಥಗಿತಕ್ಕೆ ಆಟೋ ಚಾಲಕರ ಒತ್ತಾಯ

ಸಭೆಯಲ್ಲಿ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಲವು ಬೇಡಿಕೆಗಳನ್ನು ಮುಂದಿಟ್ಟರು. ಸರ್ಕಾರ ರ್ಯಾಪಿಡೋ ಸೇವೆಗೆ ಸಂಬಂಧಿಸಿದ ಮಾರ್ಗಸೂಚಿ ಪ್ರಕಟಿಸುವವರೆಗೆ ದ್ವಿಚಕ್ರ ವಾಹನ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದರು. ರ್ಯಾಪಿಡೋ ಸೇವೆಯಿಂದ ಆಟೋ ಚಾಲಕರ ಜೀವನೋಪಾಯಕ್ಕೆ ಧಕ್ಕೆಯಾಗುತ್ತಿದ್ದು, ಹಲವು ಚಾಲಕರು ಅಗತ್ಯ ಪರವಾನಗಿ ಹೊಂದಿಲ್ಲದ ಕಾರಣ ಸಾರ್ವಜನಿಕರ ಸುರಕ್ಷತೆಯ ಮೇಲೂ ಪ್ರಶ್ನೆಗಳು ಉದ್ಭವಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಆಟೋಗಳ ಕನಿಷ್ಠ ಪ್ರಯಾಣ ದರವನ್ನು ₹40ರಿಂದ ₹50ಕ್ಕೆ ಹೆಚ್ಚಿಸಬೇಕು. ನಗರದಲ್ಲಿ 10 ಕಿ.ಮೀ. ವ್ಯಾಪ್ತಿಗೆ ಸೀಮಿತಗೊಳಿಸಿರುವ ಆಟೋ ಪರವಾನಗಿಯನ್ನು 20 ಕಿ.ಮೀ.ವರೆಗೆ ವಿಸ್ತರಿಸಬೇಕು. ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸುವ ವೇಳೆ ದಂಡ ವಿಧಿಸುವ ಕ್ರಮದಲ್ಲಿ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಬಸ್ ಚಾಲಕರ ವಿರುದ್ಧ ಕ್ರಮಕ್ಕೆ ಆಗ್ರಹ

ನಗರ ಸಾರಿಗೆ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಆಟೋ ಚಾಲಕರಿಗೆ ಪ್ರಯಾಣಿಕರು ಸಿಗುತ್ತಿಲ್ಲ. ಆದ್ದರಿಂದ ಬಸ್‌ಗಳು ನಿಗದಿತ ಬಸ್‌ಸ್ಟಾಪ್‌ಗಳಲ್ಲಿಯೇ ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಟೋ ಚಾಲಕರ ಸಂಘದ ಕಾರ್ಯದರ್ಶಿ ಅಕ್ರಮ್ ಪಾಶಾ ಆಗ್ರಹಿಸಿದರು. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಂಭವಿಸುವ ಸಿಗ್ನಲ್ ಉಲ್ಲಂಘನೆ ಪ್ರಕರಣಗಳನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸುವಂತೆ ಮನವಿ ಮಾಡಿದರು.

ಸಂಘದ ಅಧ್ಯಕ್ಷ ಅಲ್ಲಾಭಕ್ಷ ಮಾತನಾಡಿ, ರೈಲು ವಿಳಂಬವಾದಾಗ ರೈಲ್ವೆ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಕಾಯಲು ಅವಕಾಶ ನೀಡಬೇಕು. ಬಸ್ ಹಾಗೂ ರೈಲ್ವೆ ನಿಲ್ದಾಣಗಳ ಬಳಿ ಆಟೋ ಚಾಲಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳಕರ್, ರಾಜ್ಯ ರಸ್ತೆ ಸಾರಿಗೆ ನಿಗಮದ ನಿಯಂತ್ರಣಾಧಿಕಾರಿ ದಿನೇಶ್ ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ- ಡಿ.ಕೆ.ಶಿವಕುಮಾರ್

0

“ಅಪಾರ್ಟ್ ಮೆಂಟ್ ನಿವಾಸಿಗಳ ಹಕ್ಕು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಸಮಸ್ಯೆಗಳ ಮುಕ್ತಿಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಏಕಪಕ್ಷೀಯ ನಿರ್ಧಾರ ನಮ್ಮ ಧೋರಣೆಯಲ್ಲ. ಆಸ್ತಿಯನ್ನು ನೀವು ಕೊಂಡುಕೊಂಡ ಮೇಲೆ ನೀವೇ ಅದರ ಮಾಲೀಕರು. ಈ ವಿಚಾರದಲ್ಲಿ ಅನುಮಾನವಿಲ್ಲ‌” ಎಂದು ಸಿಎಂ‌ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) 2026 ಕುರಿತು ಅಪಾರ್ಟ್ ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನೆಹರು ತಾರಾಲಯ ಸಭಾಂಗಣದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

“ಆಗಸ್ಟ್ 6 ರವರೆಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು, ಸಲಹೆಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರು ಹಾಗೂ ನನಗೆ ಬರೆಯಬಹುದು. ಇದನ್ನು ವಿಧಾನಸಭೆಯಲ್ಲಿ ಮಂಡಿಸಲಾಗುವುದು. ಆಸ್ತಿ ಕೊಂಡವರಿಗೆ ಅನುಕೂಲವಾಗುವಂತೆ ಈ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ. ಎಲ್ಲಾ ಪಕ್ಷದ ನಾಯಕರಿಗೂ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಅವಕಾಶ ನೀಡಲಾಗಿದೆ. ಶಾಸಕರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಏಕಪಕ್ಷೀಯವಾಗಿ ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ” ಎಂದರು.

“ನಿಮ್ಮ ಯಾವುದೇ ಸಲಹೆ ಸೂಚನೆಗಳಿದ್ದರೂ ನನಗೆ ಹಾಗೂ ಕೃಷ್ಣ ಬೈರೇಗೌಡರಿಗೆ ನೀಡಿ. ನನ್ನ ಮೊಬೈಲ್ ಸಂಖ್ಯೆ ನೀಡಲು ತಿಳಿಸುತ್ತೇನೆ. ಅದಕ್ಕೆ ನಿಮ್ಮ ಸಲಹೆಗಳನ್ನು ಕಳುಹಿಸಬಹುದು. ಜೊತೆಗೆ ಡೆವಲಪರ್ ಗಳನ್ನು ಕರೆಸಿ ಅವರ ಜೊತೆಯೂ ಮಾತನಾಡಿ ಕಾನೂನು ಏನಿದೆ ಎಂದು ಮನವರಿಕೆ ಮಾಡಲಾಗುವುದು” ಎಂದರು.

“ಬೆಂಗಳೂರಿನಲ್ಲಿ 40 ಲಕ್ಷ ಆಸ್ತಿಗಳಿದ್ದು ಈಗಾಗಲೇ 26 ಲಕ್ಷ ಆಸ್ತಿಗಳಿಗೆ ಖಾತೆ ನೀಡಲಾಗಿದೆ. ಒಂದಷ್ಟು ಜನ ಕಾನೂನುಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಮೂರು ಮಹಡಿಗಳಿಗೆ ಅನುಮತಿ ಪಡೆದು ಐದು ಮಹಡಿಗಳನ್ನು ನಿರ್ಮಾಣ‌ ಮಾಡಿದ್ದಾರೆ. ಹೆಚ್ಚಿನವರು ಪ್ರಾಮಾಣಿಕರಿದ್ದು ಅವರು ಕಾನೂನಿನ ಅಡಿ ಕೆಲಸ ಮಾಡಿದ್ದಾರೆ” ಎಂದರು.

“ದೊಡ್ಡ, ದೊಡ್ದ ಬಿಲ್ಡರ್ ಗಳ ವಿಚಾರಕ್ಕಿಂತ ಸಣ್ಣ ಪುಟ್ಟ ಬಿಲ್ಡರ್ ಗಳು 60/80 ಅಥವಾ ಕಂದಾಯ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡಿ ಕಾನೂನು ಮುರಿಯುತ್ತಾರೆ. ಅದರ ಗುಣಮಟ್ಟ ಕೂಡ ಸರಿಯಾಗಿರುವುದಿಲ್ಲ” ಎಂದರು.

ನನ್ನ ಹೆಸರನ್ನೇ ನೋಟಿಸ್ ಬೋರ್ಡ್ ನಲ್ಲಿ ಹಾಕಿದ್ದರು

“ಒಮ್ಮೆ ಅಪಾರ್ಟ್ ಮೆಂಟ್ ನಿವಾಸಿಗಳಾದ ಮೇಲೆ ಒಪ್ಪಂದ ಮಾಡಿಕೊಳ್ಳುವಾಗಲೇ ಒಂದು ರೀತಿ, ನೋಂದಣಿ ಮಾಡಿಕೊಳ್ಳುವಾಗಲೇ ಇನ್ನೊಂದು ರೀತಿ, ಮನೆ ಸಿಕ್ಕ ಮೇಲೆಯೇ ಮತ್ತೊಂದು ರೀತಿಯಾಗಿ ಬದಲಾವಣೆ ಆಗುವುದು ನೋಡಿ ನನಗೆ ಬೇಸರವಾಗಿದೆ. ಅಪಾರ್‌ಮೆಂಟ್ ಅಸೋಸಿಯೇಷನ್ ಅಲ್ಲಿ ಒಂದಿಬ್ಬರು ತಕರಾರು ಗಿರಾಕಿಗಳು ಸೇರಿಕೊಂಡು ತೊಂದರೆ ತೊಡಕುಗಳನ್ನು ನೀಡುವುದೇ ಅವರ ಕೆಲಸವಾಗುತ್ತದೆ. ಉದಾಹರಣೆಗೆ ನನ್ನ ಅಪಾರ್ಟ್ ಮೆಂಟ್ ಅಲ್ಲಿ ನನ್ನ ಹೆಸರಿಗೆ ನೋಂದಣಿ ಮಾಡಿಕೊಳ್ಳುವ ಮೊದಲೇ ನನ್ನ ಹೆಸರನ್ನೇ ನೋಟಿಸ್ ಬೋರ್ಡ್ ಅಲ್ಲಿ ಹಾಕಿದ್ದರು. ಬೆನ್ನಿಗಾನಹಳ್ಳಿಯಲ್ಲೂ ಇದೇ ರೀತಿ ನನಗೆ ಮಾಡಿದ್ದರು. ಒಳಗೆ ನನ್ನನ್ನ ಬಿಡುವುದಿಲ್ಲ ಎಂದು ಹೇಳಿದ್ದರು. ಇಂತಹ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಗಳು ಇಲ್ಲಿವೆ” ಎಂದರು.

“ಪ್ರೀತಿ, ವಿಶ್ವಾಸ, ನಂಬಿಕೆಯಿಂದ ನಮ್ಮ ಮೇಲಿನ ಅಭಿಮಾನದಿಂದ ಜನರು ಸೇರಿದ್ದಾರೆ. ಕಳೆದ ಬಾರಿ ಒಬ್ಬರು ನನಗೆ ಹೇಳಿದ್ದರು. ನೀವು ಒಂದಷ್ಟು ನಿಯಮಗಳನ್ನು ನೀವು ಮಾಡದೇ ಇದ್ದರೇ ಮುಂದಿನ ಚುನಾವಣೆಯಲ್ಲಿ ನಿಮಗೆ ಬುದ್ದಿ ಕಲಿಸುತ್ತೇವೆ ಎಂದಿದ್ದರು. ಬುದ್ದಿ ಕಲಿಸೋದು ಎಂದರೆ ಏನು? ಜನರಿಗೆ ಸಹಾಯ ಮಾಡಬೇಕು ಎಂದು ಭಗವಂತ ನಮಗೆ ಈ ಅವಕಾಶ ನೀಡಿದ್ದಾನೆ. ನಮ್ಮ ಪಕ್ಷ ಅವಕಾಶ ನೀಡಿದೆ.‌ ಅದಕ್ಕೆ ನಾನು ಎಂದಿಗೂ ನಕಾರಾತ್ಮಕ ಅಂಶಗಳ ಬಗ್ಗೆ ಗಮನವನ್ನೇ ನೀಡುವುದಿಲ್ಲ. ಧನಾತ್ಮಕ ಚಿಂತನೆಗಳೇ ನನ್ನ ಶಕ್ತಿ” ಎಂದರು.

“ಜನರು ಕಷ್ಟಪಟ್ಟು ತಮ್ಮ ಉಳಿತಾಯ ಸೇರಿಸಿ ತಲೆ ಮೇಲೆ ಸೂರು ಮಾಡಿಕೊಂಡಿರುತ್ತಾರೆ. ಜೀವನದಲ್ಲಿ ಎಷ್ಟೋ ಜನಕ್ಕೆ ಈ ಅವಕಾಶ ಸಿಗುವುದಿಲ್ಲ. ಬೇರೆ, ಬೇರೆ ನಗರಗಳಲ್ಲಿ ಇರುವ ಜನ ತಮ್ಮ ಆಸ್ತಿಗಳನ್ನು ಮಾರಿಕೊಂಡು ಬೆಂಗಳೂರಿಗೆ ಬರುತ್ತಿದ್ದಾರೆ. ಅಪಾರ್ಟ್ ಮೆಂಟ್ ನಿವಾಸಿಗಳು ರಾಜಕೀಯವಾಗಿ ಒಂದಷ್ಟು ವಿರೋಧಾಭಾಸ ಉಂಟಾಗಿ ಆಗಾಗ್ಗೆ ಹೆಚ್ಚು‌ ಕಡಿಮೆ ಮಾಡುತ್ತೀರಿ. ಆದರೂ ನಿಮ್ಮ ಬಗ್ಗೆ ನನಗೆ ನಂಬಿಕೆಯಿದೆ. ಜನರ ತೊಂದರೆಗಳನ್ನು ನಿವಾರಿಸಲು ನಾವು ಅಧಿಕಾರಕ್ಕೆ ಬಂದಿದ್ದೇವೆ ಹೊರತು ವೈಯಕ್ತಿಕ ಅಭಿಲಾಷೆಗಳಿಗಾಗಿ ಅಲ್ಲ” ಎಂದು ಹೇಳಿದರು.

“ಕಷ್ಟಪಟ್ಟು ನೀವು ಗಳಿಸಿದ ಆಸ್ತಿ ನಿಮಗೇ ಸೇರಬೇಕು ಎಂದು ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಿದ್ದೇವೆ. ಒಂದೇ ಒಂದು ರೂಪಾಯಿ ಲಂಚ ಪಡೆಯದೇ ನಿಮ್ಮ ಹಾಗೂ ಆಸ್ತಿಯ ಪೋಟೋ ಸಮೇತ ಇ ಖಾತೆ ನೀಡುವ ಅತ್ಯುತ್ತಮ ಯೋಜನೆಯನ್ನು ನಾವು ನೀಡಿದ್ದೇವೆ. ಇಡೀ ದೇಶದಲ್ಲಿಯೇ ಅತ್ಯುತ್ತಮ ಯೋಜನೆ ಇದಾಗಿದೆ. ದೇಶದ ಯಾವುದೇ ನಗರದಲ್ಲಿ ಇಂತಹ ಯೋಜನೆ ಇದೆಯೇ ಎಂದು ನಿಮ್ಮ ಸ್ನೇಹಿತರನ್ನು ಕೇಳಿನೋಡಿ” ಎಂದರು.

ಎಸ್ ಟಿಪಿ, ಕುಡಿಯುವ ನೀರಿನ ಬಗ್ಗೆ ಗಮನ ಹರಿಸಿ

“ಎಲ್ಲಾ ಅಸೋಸಿಯೇಷನ್ ಗಳು ಎಸ್ ಟಿಪಿ ಬಗ್ಗೆ ಗಮನ ಹರಿಸಬೇಕು. ಅಪಾರ್ಟ್ ಮೆಂಟ್ ಗಲ್ಲಿ STP, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಸರ್ಕಾರ ಸುಧಾರಣೆಗಳನ್ನು ತಂದಿದೆ. ಅಂತರ್ಜಲ ವೃದ್ಧಿ, ಕಾವೇರಿ 5 ನೇ ಹಂತಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ತರಲು ಸಾಕಷ್ಟು ಶ್ರಮವಹಿಸಿದೆ. ಅನೇಕರಿಗೆ ಕಂತುಗಳ ಮೂಲಕ ಹಣ ನೀಡಿ ನೀರಿನ ಸಂಪರ್ಕ ಪಡೆಯಲು ಅವಕಾಶ ನೀಡಲಾಗಿದೆ. ಕೆಲವು ಡೆವಲಪರ್ ಗಳು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಅವರೊಂದಿಗೂ ಮಾತನಾಡಿ ದಾಖಲಾತಿಗಳ ವರ್ಗಾವಣೆ ಸರಾಗವಾಗಿ ಆಗಬೇಕೆಂದು ಸೂಚಿಸಲಾಗುವುದು. ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ” ಎಂದರು.

“ಒಂದಷ್ಟು ಡೆವಲಪರ್ ಗಳು ದಾರಿ ತಪ್ಪಿಸುತ್ತಾರೆ, ಸರಿಯಾದ ದಾಖಲೆ ನೀಡುವುದಿಲ್ಲ. ಇಡೀ ಆಸ್ತಿಯನ್ನು ಅಡವಿಟ್ಟು ಸಾಲ ಮಾಡಿರುತ್ತಾರೆ. ಆಗ ಬ್ಯಾಂಕ್ ನವರು ನಿಮ್ಮ ಸುಪರ್ದಿಗೆ ಮನೆ ಫ್ಲಾಟ್ ನೀಡುವುದಿಲ್ಲ‌” ಎಂದರು.

ಅಧಿಕಾರ ವಿಕೇಂದ್ರೀಕರಣ ನಮ್ಮ ಸರ್ಕಾರದ ಉದ್ದೇಶ

“ಈಸ್ ಆಫ್ ಬಿಸಿನೆಸ್ ಗಾಗಿ ನಗರದಲ್ಲಿ ಐದು ಕಾರ್ಪೊರೇಷನ್ ಗಳನ್ನು ರಚಿಸಲಾಗಿದ್ದು, ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ ಬಳಿ, ಅಕ್ಕಪಕ್ಕದ ಅಪಾರ್ಟ್ ಮೆಂಟ್ ಗಳ ಸಮಸ್ಯೆಗಳನ್ನೂ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಅಧಿಕಾರ ವಿಕೇಂದ್ರೀಕರಣ ನಮ್ಮ ಸರ್ಕಾರದ ಉದ್ದೇಶ. ವ್ಯಾಜ್ಯಗಳಿಗೆ ಹೋಗದೆ ಬಗೆಹರಿಸಿಕೊಳ್ಳಲು ಒತ್ತು ನೀಡಲಾಗುತ್ತಿದೆ ಎಂದರು. ಜನರ ಧ್ವನಿಯೇ ಸರ್ಕಾರದ ಧ್ವನಿಯಾಗಬೇಕು. ಟೀಂ ಕರ್ನಾಟಕವಾಗಿ ನಾವೆಲ್ಲ ಕೆಲಸ ಮಾಡಬೇಕೆಂದು” ಕರೆ ನೀಡಿದರು.

ಬಡವರೂ ಕೂಡ ಮನೆ ಕಟ್ಟಲು ಅಗತ್ಯ ನೆರವಿಗೆ ಸರ್ಕಾರ ಬದ್ಧ

“ಬಡವರೂ ಕೂಡ ಮನೆ ಕಟ್ಟಲು ಅಗತ್ಯ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ. ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ದಾಖಲಾತಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ. ನಿಮ್ಮ ದನಿಯೇ ಸರ್ಕಾರದ ದನಿ” ಎಂದು ಹೇಳಿದರು.

ಹೈ ರೈಸ್ ಕಟ್ಟಡಗಳ ನಿರ್ಮಾಣಕ್ಕೆ ಒತ್ತು

“ನಗರದಲ್ಲಿ ಹೈ ರೈಸ್ ಕಟ್ಟಡಗಳ ಬಗ್ಗೆ ಗಮನಹರಿಸಿ, ರಸ್ತೆಗಳನ್ನು ವಿಸ್ತರಿಸುವ ಬಗ್ಗೆ ಒತ್ತು ನೀಡಲಾಗುತ್ತಿದೆ . ನಗರದಲ್ಲಿ 132 ಕಿಮೀ ಪೆರಿಫೆರಲ್ ವರ್ತುಲ ರಸ್ತೆ,(ಬೆಂಗಳೂರು ಬ್ಯುಸಿನೆಸ್ ಕಾರಿಡಾರ್) ನಿರ್ಮಾಣವಾಗುತ್ತಿದೆ ಎಂದರು. ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಭೂ ಸ್ವಾಧೀನಕ್ಕೆ ರಾಜ್ಯದಲ್ಲಿ ರೈತರಿಗೆ ಗರಿಷ್ಠ ಮೊತ್ತದ ಪರಿಹಾರವನ್ನು ನೀಡಲಾಗುತ್ತಿದೆ” ಎಂದು ಹೇಳಿದರು.

“ಕಾನೂನಾತ್ಮಕ ಸಲಹೆಗಳನ್ನು ನೀಡಿ ಅದರಂತೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಪ್ಲೋರ್ ವೈಜ್ ಪ್ರಿಮಿಯಂ ಎಫ್ ಎಆರ್ ನೀಡುವುದನ್ನು ಪ್ರಾರಂಭ ಮಾಡಿದೆ. ಟಿಡಿಆರ್ ಸಹ ನೀಡಲಾಯಿತು. ಯಾರೋ ಒಂದಿಬ್ಬರು ಬೋಗಸ್ ಪ್ರೀಮಿಯಂ ಎಫ್ ಎಆರ್ ಇಟ್ಟುಕೊಂಡು ಇದರ ವಿರುದ್ಧ ನ್ಯಾಯಾಲಯಕ್ಕೆ ತೆರಳಿ ಒಂದು ವರ್ಷ ನಿಲ್ಲಿಸಿಬಿಟ್ಟರು. ಕೆಲವರೆಲ್ಲಾ ಕಟ್ಟಡ ಕಟ್ಟಲು ಅಡಚಣೆ ಉಂಟಾಯಿತು. ಆನಂತರ ನ್ಯಾಯಾಲಯ‌ ಸರ್ಕಾರ ಉತ್ತಮ ಕೆಲಸ ಮಾಡಿದೆ ಎಂದು ನಮ್ಮ ಪರವಾಗಿ ತೀರ್ಪು ನೀಡಿತು‌. ಜೊತೆಗೆ ಅನುಮತಿ ನೀಡಿತು. ದೊಡ್ಡ ರಸ್ತೆ ಇರುವ ಕಡೆ ಎತ್ತರದ ಕಟ್ಟಡ ಕಟ್ಟಬಹುದು. ಸಣ್ಣ ರಸ್ತೆ ಇರುವ ಕಡೆ ಕಟ್ಟಲು ಆಗುವುದಿಲ್ಲ. ಭೂಮಿ ಬೆಲೆ ಕಡಿಮೆ ಆಗಬೇಕು ಎಂಬುದು ನನ್ನ ಆಸೆ” ಎಂದರು.

ಬೆಂಗಳೂರು ಭಾರತದ ಹೃದಯ

“ದಾವೋಸ್ ಗೆ ತೆರಳಿದಾಗ ಎಲ್ಲಾ ಉದ್ಯಮಿಗಳು ನನ್ನನ್ನೇ ಹುಡುಕಿಕೊಂಡು ಬಂದು ಮಾತನಾಡಿಸುತ್ತಿದ್ದರು. ಆಗ ಮಹಾರಾಷ್ಟ್ರದವರು ಏಕೆ ನಿಮ್ಮನ್ನೇ ಹುಡುಕಿಕೊಂಡು ಬರುತ್ತಿದ್ದಾರೆ ಎಂದು ಕೇಳಿದರು. ಆಗ ನಾನು ಬೇರೆ ದೇಶದವರನ್ನು ಏಕೆ ನಮ್ಮ ಬಗ್ಗೆ ನಿಮಗೆ ಆಸಕ್ತಿ ಎಂದು ಕೇಳಿದಾಗ, “ಬೆಂಗಳೂರಲ್ಲಿ 1 ಡಾಲರ್ ವೆಚ್ಚಕ್ಕೆ ಮುಂಬೈನಲ್ಲಿ ಮೂರುವರೆ ಡಾಲರ್ ಗೆ ಸಮ. ಅಷ್ಟು ವೆಚ್ಚ ಹೆಚ್ಚಳವಾಗಿದೆ ಅಲ್ಲಿ. ಬೆಂಗಳೂರಿನಲ್ಲಿ 2 ಕೋಟಿಗೆ ಒಂದು ಮನೆ ದೊರೆಯಲಿದೆ. ಆದೇ ಮುಂಬೈನಲ್ಲಿ 20 ಕೋಟಿ ವೆಚ್ಚ ಮಾಡಬೇಕಿದೆ. ಅದಕ್ಕೆ ಎಲ್ಲರೂ ಬೆಂಗಳೂರನ್ನು ಮೊದಲ ಆಯ್ಕೆಯನ್ನಾಗಿ ನೋಡುತ್ತಿದ್ದಾರೆ. ಅಂತರರಾಷ್ಟ್ರೀಯ ನಾಯಕರೂ ಬೆಂಗಳೂರನ್ನು ಮೆಚ್ಚುತ್ತಿದ್ದಾರೆ. ಇಲ್ಲಿನ ಶಿಕ್ಷಣ ಗುಣಮಟ್ಟವೂ ಚೆನ್ನಾಗಿದೆ” ಎಂದರು.

“ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಮ್ಮ‌‌ ಸರ್ಕಾರ ಮುಂದಾಗಿದೆ. ಅದಕ್ಕೆ ಸೂಕ್ತ ಸ್ಥಳ ಹುಡುಕಲಾಗುತ್ತಿದೆ. ಬೆಂಗಳೂರು ನಿಮ್ಮೆಲ್ಲರ ಹೃದಯದಂತಿದೆ. ಜೊತೆಗೆ ಭಾರತದ ಹೃದಯದಂತೆ ಕೆಲಸ ಮಾಡುತ್ತಿದೆ” ಎಂದು ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಕಟಣೆ: ಪ್ರತಿಭಾ ಪುರಸ್ಕಾರಕ್ಕಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

0

ರಾಜ್ಯ ಸರ್ಕಾರಿ ನೌಕರರ ಸಂಘವು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲು ಉದ್ದೇಶಿಸಿದೆ.
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಉತ್ತೀರ್ಣರಾಗಿರುವ ಶಿವಮೊಗ್ಗ ನಗರ ಪ್ರದೇಶದ ಯಾವುದೇ ಸಮುದಾಯದ ಪ್ರತಿಭಾವಂತ ಬಡ ವಿದ್ಯಾರ್ಥಿಗಳು, ತಮ್ಮ ಹೆಸರು, ವಿಳಾಸ, ಅಂಕಪಟ್ಟಿ, ಮತ್ತಿತರ ವಿವರಗಳೊಂದಿಗೆ ತಮ್ಮ ಪ್ರಸ್ತಾವನೆಯನ್ನು ಅಧ್ಯಕ್ಷರು/ಕಾರ್ಯದರ್ಶಿ, ರಾಜ್ಯ ಸರ್ಕಾರಿ ನೌಕರರ ಸಂಘ, ಡಿ.ಸಿ.ಕಾಂಪೌಂಡ್‌, ಶಿವಮೊಗ್ಗ ವಿಳಾಸಕ್ಕೆ ಜುಲೈ 20ರೊಳಗಾಗಿ ಸಲ್ಲಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್‌ ಅವರು ಮನವಿ ಮಾಡಿದ್ದಾರೆ.

ರೈತರ ಜಮೀನು ಬಲವಂತ ವಶಪಡಿಸುವುದಿಲ್ಲ.ಆದರೆ ಬಿಡದಿ ಟೌನ್ ಶಿಪ್ ಯೋಜನೆ ನಿಲ್ಲಲ್ಲ: ಡಿ.ಕೆ.ಶಿವಕುಮಾರ್

0

ಪ್ರಸ್ತಾವಿತ ಬಿಡದಿ ಟೌನ್‍ಶಿಪ್ ಯೋಜನೆಗಾಗಿ ಯಾವುದೇ ಒಬ್ಬ ರೈತನ ಜಮೀನನ್ನೂ ಸಹ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ. ಜಮೀನು ನೀಡಲು ಇಷ್ಟವಿಲ್ಲದ ರೈತರು ಮುಕ್ತವಾಗಿ ಕೃಷಿ ಚಟುವಟಿಕೆಗಳನ್ನು ಮುಂದುವರಿಸಬಹುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಯೋಜನೆಯ ಇತಿಹಾಸದ ಅಧಿಕೃತ ದಾಖಲೆಗಳನ್ನು ಪ್ರಸ್ತುತಪಡಿಸಿದರು. ಸರ್ಕಾರ ಯಾರೊಬ್ಬರನ್ನೂ ಭೂಮಿ ನೀಡುವಂತೆ ಒತ್ತಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

“ಯಾರಿಗೆ ಭೂಮಿ ನೀಡಲು ಇಷ್ಟವಿಲ್ಲವೋ ಅವರು ಕೃಷಿ ಮಾಡಿಕೊಂಡಿರಬಹುದು. ಯಾರು ಸ್ವಇಚ್ಛೆಯಿಂದ ಭೂಮಿ ನೀಡಲು ಸಿದ್ಧರಿದ್ದಾರೋ, ಅವರು ಸರ್ಕಾರಕ್ಕೆ ಒಪ್ಪಿಸಿ ಪರಿಹಾರ ಪಡೆದುಕೊಳ್ಳಬಹುದು. ಆದರೆ ಒಂದು ಗುಂಟೆ ಜಮೀನನ್ನೂ ಬಲವಂತವಾಗಿ ಕಿತ್ತುಕೊಳ್ಳುವುದಿಲ್ಲ,” ಎಂದು ಹೇಳಿದರು.

ಸಾಧಕ-ಬಾಧಕಗಳ ಪರಿಶೀಲನೆಗೆ ಸಮಿತಿ ರಚನೆ :

ಯೋಜನೆಯ ಅನುಷ್ಠಾನದ ಕುರಿತು ಪರಿಶೀಲಿಸಲು ಮತ್ತು ರೈತರ ಅಭಿಪ್ರಾಯ ಹಾಗೂ ಆತಂಕಗಳನ್ನು ಆಲಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ತಿಳಿಸಿದ ಅವರು, ಭೂಮಿ ನೀಡದ ರೈತರ ಜಮೀನಿನ ಸದ್ಯದ ಸ್ಥಿತಿಗತಿಯನ್ನು (Land Status) ಬದಲಾಯಿಸುವುದಿಲ್ಲ ಎಂದು ಆಶ್ವಾಸನೆ ನೀಡಿದರು. ಸಮಿತಿಯ ವರದಿ ಬಂದ ನಂತರ ಮುಂದಿನ ನಿರ್ಧಾರವನ್ನು ಸಂಪುಟ ಸಭೆಯ ಮುಂದೆ ಮಂಡಿಸಲಾಗುವುದು ಎಂದರು.

ಬಿಡದಿಯಲ್ಲಿ ಜಮೀನು ಸರ್ವೆ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ರಾಜಕೀಯ ಪ್ರೇರಣೆಯಿಂದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಕೆಲವು ವ್ಯಕ್ತಿಗಳು ರೈತರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.

ಇದು ನನ್ನ ಕನಸಿನ ಯೋಜನೆಯಲ್ಲ!
ಬಿಡದಿ ಟೌನ್‍ಶಿಪ್ ಯೋಜನೆ ನನ್ನ ಕನಸಿನ ಯೋಜನೆಯಲ್ಲ. ನಾನು ಎಂದಿಗೂ ಇದರ ಮಾಲೀಕತ್ವ ಅಥವಾ ಶ್ರೇಯಸ್ಸನ್ನು ಪಡೆದಿಲ್ಲ, ಕನಿಷ್ಠ ಇದಕ್ಕೆ ಶಂಕುಸ್ಥಾಪನೆಯನ್ನೂ ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನಾನು ಕೇವಲ ಹಿಂದಿನ ಸರ್ಕಾರಗಳು ಆರಂಭಿಸಿದ್ದ ಯೋಜನೆಯನ್ನು ಮುಂದುವರಿಸುತ್ತಿದ್ದೇನೆ ಅμÉ್ಟ. ನಾನು ಕೂಡ ಒಬ್ಬ ರೈತನ ಮಗ, ರೈತರ ಕಷ್ಟ ನನಗೆ ಗೊತ್ತು. ರೈತರ ಹಿತಾಸಕ್ತಿಗೆ ಧಕ್ಕೆ ತರುವ ಯಾವುದೇ ಕೆಲಸವನ್ನು ನಾನು ಮಾಡುವುದಿಲ್ಲ,” ಎಂದು ಭಾವುಕರಾಗಿ ನುಡಿದರು.

ಈ ಯೋಜನಾ ಪ್ರದೇಶವನ್ನು ‘ರೆಡ್ ಝೋನ್’ ಎಂದು ಘೋಷಿಸಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಬಿಡಿಎ ಅನುಮೋದನೆ ಇಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವಂತಿರಲಿಲ್ಲ. 2007ರಲ್ಲಿ ಮಾರಂಡಹಳ್ಳಿ, ಒಡೆಯರಹಳ್ಳಿ ಸೇರಿದಂತೆ ಮತ್ತಷ್ಟು ಗ್ರಾಮಗಳನ್ನು ಇದಕ್ಕೆ ಸೇರಿಸಲಾಗಿತ್ತು.

DLF ಕಂಪನಿಗೆ ಅನುಮತಿ: ಹಿಂದಿನ ಸರ್ಕಾರವೇ ಗ್ರಾಮಠಾಣಾ ಸೇರಿದಂತೆ ಆಸ್ತಿಗಳ ಪರಿಹಾರ ಗುರುತಿಸಿ, ಖಾಸಗಿ ಡೆವಲಪರ್ ಡಿಎಲ್‍ಎಫ್ ಕಂಪನಿಯಿಂದ 400 ಕೋಟಿ ರೂ. ಭದ್ರತಾ ಠೇವಣಿ ಪಡೆದು ಯೋಜನೆಗೆ ಪಾಲ್ಗೊಳ್ಳಲು ಅನುಮತಿ ನೀಡಿತ್ತು ಎಂದು ಹೇಳಿದರು.

ಮುಂದುವರಿದು, 2010 ರಲ್ಲಿದ್ದ ಸರ್ಕಾರವೂ ಇದೇ ಯೋಜನೆಯನ್ನು ಮುಂದುವರಿಸಿ ಪಿಪಿಪಿ ಮಾದರಿಯಲ್ಲಿ ಜಾಗತಿಕ ಟೆಂಡರ್ ಆಹ್ವಾನಿಸಿತ್ತು ಎಂದು ನೆನಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಶಾಸಕ ಬಾಲಕೃಷ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಮಳಲೂರು ಗ್ರಾಮದಿಂದ ಕೆ.ಪಿ.ರಾಮಪ್ಪ ಎಂಬುವರು ನಾಪತ್ತ, ಪೊಲೀಸ್ ಪ್ರಕಟಣೆ

0

ತೀರ್ಥಹಳ್ಳಿ ತಾಲೂಕು, ಮಳಲೂರು ಗ್ರಾಮ, ಕೇಳೂರು ವಾಸಿ ಕೆ.ಪಿ.ರಾಮಪ್ಪ ಎಂಬ 73 ವರ್ಷದ ವ್ಯಕ್ತಿ ಜು.05 ರಂದು ಮಧ್ಯಾಹ್ನ 1.30 ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ ಹೋಗಿದ್ದು, ಈವರೆಗೂ ಮನೆಗೆ ವಾಪಾಸ್ಸಾಗಿರುವುದಿಲ್ಲ.
ಕಾಣೆಯಾದ ರಾಮಪ್ಪ 5. 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಎಡಭಾಗದ ಕಿವಿಯಲ್ಲಿ ರಿಂಗು ಹಾಕಿದ ಸಣ್ಣ ತೂತು ಗುರುತು ಇರುತ್ತದೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಟಿಶರ್ಟ್ ಮತ್ತು ನೀಲಿ ಚಡ್ಡಿ ಧರಿಸಿರುತ್ತಾರೆ.
ಈ ವ್ಯಕ್ತಿಯ ಬಗ್ಗೆ ಸುಳಿವು ಪತ್ತೆಯಾದಲ್ಲಿ ಶಿವಮೊಗ್ಗ ಎಸ್‌ಪಿ ಕಚೇರಿ -08182-261400, ತೀರ್ಥಹಳ್ಳಿ – 08181 – 220388, ಮಾಳೂರು – 9480803333, ಆಗುಂಬೆ – 9480803314 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ತಿಳಿಸಿದೆ.

ಸಾಲದ ಉರುಳಿಗೆ ಜೀವ ತೆತ್ತ ಆಟೋ ಚಾಲಕ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

0

ಶಿವಮೊಗ್ಗದಲ್ಲಿ ಸಾಲದ ಬಾಧೆ ಮತ್ತೊಂದು ಜೀವ ಬಲಿ ಪಡೆದಿದೆ. ಆಟೋ ಸಾಲ ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಟೋ ವಶಪಡಿಸಿಕೊಂಡಿದ್ದಾರೆ ಎನ್ನಲಾದ ಘಟನೆ ಬಳಿಕ ಮನನೊಂದ ಆಟೋ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ.

ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು 35 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಮಂಜುನಾಥ್, ತಮ್ಮ ಪ್ಯಾಸೆಂಜರ್ ಆಟೋ ಖರೀದಿಗಾಗಿ ಸುಮಾರು 30 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಸಾಲದ ಹಣವನ್ನು ಮರುಪಾವತಿಸಲು ಸಾಧ್ಯವಾಗದ ಹಿನ್ನೆಲೆ, ಅವರ ಆಟೋವನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ತಮ್ಮ ಜೀವನೋಪಾಯದ ಪ್ರಮುಖ ಆಧಾರವಾಗಿದ್ದ ಆಟೋ ಕೈತಪ್ಪಿದ್ದರಿಂದ ಮಂಜುನಾಥ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದೇ ನೋವಿನಿಂದ ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಇಬ್ಬರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡಪೇಟೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Search on web

ಗ್ರಾಮೀಣ ರಂಗಭೂಮಿಗೆ ಜಾಗತಿಕ ವ್ಯಾಖ್ಯೆ ನೀಡಿದ ಅಕ್ಷರ ತಪಸ್ವಿ

0

ಸ್ಮರಣೆ: ಅರುಣ್ ಪ್ರಸಾದ್ ,ಆನಂದಪುರ.

ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಹೆಗ್ಗೋಡಿನ ಅಕ್ಷರ ತಪಸ್ವಿ, ರಂಗಕರ್ಮಿ ಹಾಗೂ ನೀನಾಸಂ ಸಂಸ್ಥೆಯ ಸಂಸ್ಥಾಪಕ ಕೆ.ವಿ. ಸುಬ್ಬಣ್ಣ ಅವರ 21ನೇ ಪುಣ್ಯತಿಥಿಯ ಅಂಗವಾಗಿ ಇಂದು ವಿವಿಧೆಡೆ ಗೌರವ ನಮನ ಸಲ್ಲಿಸಲಾಯಿತು.

ಮಲೆನಾಡಿನ ಸಣ್ಣ ಹಳ್ಳಿಯಾದ ಹೆಗ್ಗೋಡನ್ನು ಜಾಗತಿಕ ರಂಗಭೂಮಿಯ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಕೆ.ವಿ. ಸುಬ್ಬಣ್ಣ ಅವರು ಕೇವಲ ನಾಟಕಕಾರ, ಲೇಖಕ ಅಥವಾ ನಿರ್ದೇಶಕರಷ್ಟೇ ಅಲ್ಲದೆ, ಕನ್ನಡದ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ ಮಹಾನ್ ಚೇತನರಾಗಿದ್ದರು.
ನೀಲಕಂಠೇಶ್ವರ ನಾಟ್ಯ ಸೇವಾ ಸಂಘ (ನೀನಾಸಂ) ಮೂಲಕ ಗ್ರಾಮೀಣ ಜನರಿಗೆ ರಂಗಭೂಮಿ, ಸಿನಿಮಾ ಮತ್ತು ಸಾಹಿತ್ಯದ ಪರಿಚಯ ಮಾಡಿಕೊಟ್ಟ ಅವರು, ವಿಶ್ವದ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತಂದು ಕಲೆಯು ಎಲ್ಲರಿಗೂ ತಲುಪಬೇಕು ಎಂಬ ಧ್ಯೇಯವನ್ನು ಸಾಕಾರಗೊಳಿಸಿದರು.

ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಮ್ಯಾಗ್ಸೇಸೆ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಲಭಿಸಿವೆ. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯನ್ನು ಅವರು ವಿನಯದಿಂದ ನಿರಾಕರಿಸಿದ್ದೂ ಅವರ ವ್ಯಕ್ತಿತ್ವದ ವಿಶೇಷತೆಯಾಗಿದೆ.

1932ರ ಫೆಬ್ರವರಿ 20ರಂದು ಸಾಗರ ತಾಲ್ಲೂಕಿನ ಮುಂಡಿಗೆಸರದಲ್ಲಿ ಕೆ.ವಿ. ರಾಮಪ್ಪ ಮತ್ತು ಸಾವಿತ್ರಮ್ಮ ದಂಪತಿಗೆ ಜನಿಸಿದ ಸುಬ್ಬಣ್ಣ ಅವರು 1949ರಲ್ಲಿ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆಯನ್ನು ಸ್ಥಾಪಿಸಿ, ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದರು. ಲೇಖಕರಾಗಿ 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ನೀನಾಸಂನ ಅಕ್ಷರ ಪ್ರಕಾಶನದ ಮೂಲಕ 500ಕ್ಕೂ ಹೆಚ್ಚು ಕನ್ನಡ ಪುಸ್ತಕಗಳ ಪ್ರಕಟಣೆಗೆ ಮಾರ್ಗದರ್ಶನ ನೀಡಿದರು.

ಸಾಮಾಜಿಕ ಕಳಕಳಿಯ ವ್ಯಕ್ತಿಯಾಗಿದ್ದ ಅವರು ಗುಟ್ಕಾ ಸೇವನೆಯ ವಿರುದ್ಧ ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ಹಾಗೂ ಪರಿಸರ ಸಂಬಂಧಿತ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇಕ್ಕೇರಿ ಬಂಗಾರದ ಗಣಿ ವಿರೋಧಿ ಹೋರಾಟದಲ್ಲಿಯೂ ಅವರು ಪ್ರಮುಖ ಧ್ವನಿಯಾಗಿದ್ದರು.

ಈ ಸಂದರ್ಭದಲ್ಲಿ ಕೆ.ವಿ. ಸುಬ್ಬಣ್ಣ ಅವರ ಹೆಸರಿನಲ್ಲಿ ಆಚಾಪುರ ಗ್ರಾಮ ಪಂಚಾಯಿತಿಯ ಮುರುಘಾಮಠದ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಿಸಲಾದ “ಕೆ.ವಿ. ಸುಬ್ಬಣ್ಣ ರಂಗಮಂದಿರ”ದ ನೆನಪುಗಳನ್ನು ಹಂಚಿಕೊಳ್ಳಲಾಯಿತು. ರಂಗಮಂದಿರಕ್ಕೆ ಅವರ ಹೆಸರನ್ನು ಇಡುವ ಕುರಿತು ಆರಂಭದಲ್ಲಿ ಅವರು ಮುಜುಗರ ವ್ಯಕ್ತಪಡಿಸಿದ್ದರೂ, ಮನವಿ ಮಾಡಿದ ಬಳಿಕ ಲಿಖಿತ ಅನುಮತಿ ನೀಡಿದ್ದರು. ಆದರೆ ತಮ್ಮ ಹೆಸರಿನ ರಂಗಮಂದಿರವನ್ನು ಸ್ವತಃ ಉದ್ಘಾಟಿಸಲು ಅವರು ಒಪ್ಪದ ಹಿನ್ನೆಲೆಯಲ್ಲಿ ಸ್ಥಳೀಯ ಗಣ್ಯರು, ಶಿಕ್ಷಕರು ಹಾಗೂ ಮಠಾಧೀಶರ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಿಸಲಾಯಿತು.

1999ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸಾಗರದಲ್ಲಿ ನಡೆದ ಅಭ್ಯರ್ಥಿಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ತಮ್ಮ ಭಾಷಣವನ್ನು ಮೆಚ್ಚಿ ಕೆ.ವಿ. ಸುಬ್ಬಣ್ಣ ಅವರು ಎದ್ದು ನಿಂತು ಅಭಿನಂದಿಸಿದ್ದ ಕ್ಷಣ ಜೀವನದ ಅವಿಸ್ಮರಣೀಯ ನೆನಪಾಗಿ ಉಳಿದಿದೆ ಎಂದು ಅವರು ಸ್ಮರಿಸಿದರು.

ಭೌತಿಕವಾಗಿ ನಮ್ಮನ್ನಗಲಿ ಎರಡು ದಶಕಗಳಾದರೂ, ಕೆ.ವಿ. ಸುಬ್ಬಣ್ಣ ಅವರು ಹಾಕಿಕೊಟ್ಟ ರಂಗಹಾದಿ, ಅವರ ವಿಚಾರಧಾರೆಗಳು ಹಾಗೂ ನೀನಾಸಂ ಮೂಲಕ ಬೆಳೆಸಿದ ಸಾಂಸ್ಕೃತಿಕ ಚಳವಳಿ ಇಂದಿಗೂ ಕನ್ನಡಿಗರಿಗೆ ದಾರಿದೀಪವಾಗಿವೆ.

ಕನ್ನಡ ನೆಲದ ಈ ಅಪ್ರತಿಮ ರಂಗಯೋಗಿಗೆ ರಾಜ್ಯದಾದ್ಯಂತ ಭಾವಪೂರ್ಣ ನಮನಗಳು ಸಲ್ಲಿಸಲಾಯಿತು.

ವಾಡಿಕೆಗಿಂತ ಕಡಿಮೆ ಮಳೆ ರೈತರು ಕೃಷಿ ಇಲಾಖೆ ಸೂಚಿಸಿದ ವ್ಯವಸಾಯ ಪದ್ಧತಿ ಅನುಸರಿಸಿ : ಗಿರಿಜಾ ಪಟ್ಟಣಶೆಟ್ಟಿ

0

ಶಿವಮೊಗ್ಗ ತಾಲ್ಲೂಕಿನಲ್ಲಿ ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂದ ಕಡಿಮೆ ಮಳೆಯಾಗಿರುವುದಲ್ಲದೇ, ಸರಿಯಾದ ಸಮಯದಲ್ಲಿ ಮಳೆ ಬಂದಿರುವುದಿಲ್ಲ.

ಆದ್ದರಿಂದ ರೈತರು ಕೆಳಕಂಡ ವ್ಯವಸಾಯ ಪದ್ದತಿಗಳನ್ನು ಅನುಸರಿಸಲು ಸಹಾಯಕ ಕೃಷಿ ನಿರ್ದೇಶಕಿ ಗಿರಿಜಾ ಪಟ್ಟಣ ಶೆಟ್ಟಿ ತಮ್ಮ ತಿಳಿಸಿರುತ್ತಾರೆ.

ಬಿತ್ತನೆಗೆ ಮುಂಚೆ ಭೂಮಿಯ ತೇವಾಂಶ ಹಾಗೂ ನಾಟಿ ಮಾಡುವ ಮುನ್ನ ನೀರಿನ ಲಬ್ಯತೆಯ ಬಗ್ಗೆ ಖಾತರಿ ಪಡಿಸಿಕೊಳ್ಳುವುದು. ಜುಲೈ ಎರಡು ಅಥವಾ ಮೂರನೇ ವಾರದಲ್ಲಿ ಮೆಕ್ಕೆ ಜೋಳ ಬಿತ್ತನೆ ಮಾಡುವ ರೈತರು ಪ್ರತೀ ೮ ಸಾಲು ಮೆಕ್ಕೆಜೋಳದ ಜೊತೆ ೨ ಸಾಲು ದ್ವಿದಳ ಧಾನ್ಯದ ಬೆಳೆಗಳಾದ ತೊಗರಿ, ಅಲಸಂದೆ, ಹೆಸರು, ಉದ್ದು ಬೆಳೆಗಳನ್ನು ಅಂತರ ಬೆಳೆಯಾಗಿ ಬಿತ್ತಬೇಕು.
ಪ್ರತೀ ಕೆ.ಜಿ.ಬೀಜಗಳನ್ನು ೪ ಗ್ರಾಂ ಮೆಟಾಲಾಕ್ಸಿಲ್ ಎಂ.ಝಡ್. ಮತ್ತು ೫ ಎಂ.ಎಲ್ ಕ್ಲೋರೋಪೈರಿಫಾಸ್ ನೊಂದಿಗೆ ಬೀಜೋಪಚಾರ ಮಾಡುವುದು.

ಈಗಾಗಲೇ ಮೆಕ್ಕೆ ಜೋಳ ಬಿತ್ತನೆ ಮಾಡಿ ಮಣ್ಣಿನಲ್ಲಿ ತೇವಂಶ ಕಡಿಮೆ ಇದ್ದ ಪಕ್ಷದಲ್ಲಿ ಹರಳು ರೂಪದ ಗೊಬ್ಬರದ ಬದಲಾಗಿ ನೀರಿನಲ್ಲಿ ಕರಗುವ ೧೯:೧೯:೧೯ ಗೊಬ್ಬರವನ್ನು ೫ ಗ್ರಾಂ ಪ್ರತೀ ಲೀಟರ್ ನೊಂದಿಗೆ ಬೆರಸಿ ಬಿತ್ತನೆಯಾದ ೨೫ ದಿನ ಹಾಗೂ ೪೫ನೇ ದಿನದಂದು ಸಿಂಪಡಿಸಬೇಕು.
ಎರಡು ಸಾಲುಗಳ ಮದ್ಯೆ ಎಡೆಕುಂಟೆ ಹಾಯಿಸುವುದರಿಂದ ಕಳೆಗಳ ನಿಯಂತ್ರಣದ ಜೊತೆಗೆ ನೀರು ಆವಿಯಾಗುವುದನ್ನು ತಡೆಯಬಹುದು. ತಗ್ಗು ಪ್ರದೇಶ ಹಾಗೂ ನೀರಿನ ಲಬ್ಯತೆ ಇದ್ದ ಪಕ್ಷದಲ್ಲ್ಲಿ ಮದ್ಯಮಾವಧಿ ಭತ್ತದ ತಳಿಗಳನ್ನು ಬೆಳೆಯುವುದು.

ಹಾಗೂ ನಾಟಿ ಮಾಡುವುದರ ಬದಲಾಗಿ ಡ್ರಂಸೀಡರ್ ನಿಂದ ಬಿತ್ತನೆ ಮಾಡುವುದು.
ಮುಂಗಾರು ಜುಲೈ ನಾಲ್ಕನೇ ವಾರದ ವರೆಗೂ ತಡವಾದಲ್ಲಿ ರಾಗಿ ಹಾಗೂ ದ್ವಿದಳ ಧಾನ್ಯದ ಬೆಳೆಯನ್ನು ಬಿತ್ತನೆ ಮಾಡುವುದು. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಬೇಟಿ ನೀಡಲು ತಮ್ಮ ತಿಳಿಸಿದ್ದಾರೆ.

2026 ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

0

2026 ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಶಾಲಾ ಶಿಕ್ಷಣ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಯಂ ಆಗಿ ನೇಮಕವಾಗಿ, ಅನುದಾನಿತ ಪ್ರಾಥಮಿಕ ಅಥವಾ ಪ್ರೌಢಶಾಲೆಗಳಲ್ಲಿ ಅನುದಾನ ಸಹಿತವಾಗಿ ಅನುಮೋದನೆಗೊಂಡು ಕನಿಷ್ಠ 10 ವರ್ಷಗಳ ತೃಪ್ತಿದಾಯಕ ಸೇವೆಯನ್ನು ಸಲ್ಲಿಸಿರುವ ಶಿಕ್ಷಕರು, ದೈಹಿಕ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರುಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು,
ಆಸಕ್ತರು ಶಾಲಾ ಶಿಕ್ಷಣ ಇಲಾಖೆಯ ಅಂತರ್ಜಾಲ ತಾಣ https://schooleducation.karnataka.gov.in ಮೂಲಕ ಜು. 31 ರೊಳಗಾಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ತಿಳಿಸಿದ್ದಾರೆ.