Monday, August 3, 2026
Monday, August 3, 2026
Home Blog Page 22

ತೀವ್ರ ಬರದ ಛಾಯೆ: ಜಲಾಶಯ ನಂಬಿ ಬೆಳೆ ಬೆಳೆಯದಂತೆ ರೈತರಲ್ಲಿ ಕೃಷಿ ಇಲಾಖೆ ಮನವಿ

0

ರಾಜ್ಯಾದ್ಯಂತ ತೀವ್ರಗೊಳ್ಳುತ್ತಿರುವ ಎಲ್ ನಿನೊ ಪರಿಣಾಮ ಹಾಗೂ ಜಲಾಶಯಗಳ ಒಳಹರಿವು ಬಹುತೇಕ ಶೂನ್ಯಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಸಾಲಿನಲ್ಲಿ ಜಲಾಶಯಗಳನ್ನು ನಂಬಿಕೊಂಡು ಯಾವುದೇ ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯದಂತೆ ಕ.ನೀ. ನಿ.ನಿ ತುಂಗಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.
ಕಳೆದ ಜುಲೈ 2 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಬರದ ಪರಿಸ್ಥಿತಿ ಕುರಿತು ಸುಧೀರ್ಘ ಚರ್ಚೆ ನಡೆಸಲಾಗಿದ್ದು, “ಜಲಾಶಯ ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ” ಎಂದು ಸನ್ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು.
ಮುಖ್ಯಮಂತ್ರಿಗಳ ನಿರ್ದೇಶನದಂತೆ ಪ್ರಸ್ತುತ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕಡ್ಡಾಯವಾಗಿ ಕೇವಲ ಕುಡಿಯುವ ನೀರಿಗಾಗಿ ಮಾತ್ರ ಕಾಯ್ದಿರಿಸಬೇಕಾದ ತುರ್ತು ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಸುತ್ತೋಲೆಯ ಅನ್ವಯ, ರೈತರಿಗೆ ಈ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲು ಹಾಗೂ ಆಯಾ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಲು ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ಕುಡಿಯುವ ನೀರಿಗೆ ಮಾತ್ರ ಜಲ ಬಿಡುಗಡೆ
“ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ಹಾಗೂ ತುಂಗಾ ಅಣೆಕಟ್ಟು ಕಾಲುವೆಗಳಲ್ಲಿ ಕೇವಲ ಜನ-ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕೆ ಸೀಮಿತವಾಗಿ ಮಾತ್ರ ನೀರನ್ನು ಹರಿಸಲು ಈಗಾಗಲೇ ದಿನಾಂಕ: 03.07.2026 ರಂದು ಅಧಿಕೃತ ಪ್ರಕಟಣೆ ಹೊರಡಿಸಿ ಕ್ರಮ ಕೈಗೊಳ್ಳಲಾಗಿದೆ.”
ಆದ್ದರಿಂದ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತ ಬಾಂಧವರು ಯಾವುದೇ ನೀರಾವರಿ ಬೆಳೆಗಳನ್ನು ಬೆಳೆಯಲು ಮುಂದಾಗಬಾರದೆಂದು ವಿನಂತಿಸಲಾಗಿದ್ದು ಜಲಕ್ಷಾಮದ ಈ ಸಂದರ್ಭದಲ್ಲಿ ರೈತರು ಪರಿಸ್ಥಿತಿಯನ್ನು ಅರ್ಥೈಸಿಕೊಂಡು, ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕಾಗಿ ಕ ನೀ ನಿ ನಿ, ತುಂಗಾ ಮೇಲ್ದಂಡೆ ಯೋಜನೆ ವಿಭಾಗದ
ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ.

B.Y. Raghavendra ಬಹು ನಿರೀಕ್ಷಿತ “ಪ್ರಾದೇಶಿಕ ವಿಜ್ಞಾನ ಕೇಂದ್ರ”ದ ಕಾಮಗಾರಿ ಶೇ.95ರಷ್ಟು ಪೂರ್ಣ- ಬಿ.ವೈ.ರಾಘವೇಂದ್ರ

0

B.Y. Raghavendra ಶಿವಮೊಗ್ಗದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಸಜ್ಜಾಗುತ್ತಿದೆ ಪ್ರಾದೇಶಿಕ ವಿಜ್ಞಾನ ಕೇಂದ್ರ: ಕಾಮಗಾರಿ ಪ್ರಗತಿ ಪರಿಶೀಲನೆ!

ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿದ್ಯಾರ್ಥಿಗಳಲ್ಲಿ ಜ್ಞಾನ, ಸೃಜನಶೀಲತೆ ಹಾಗೂ ವೈಜ್ಞಾನಿಕ ಕುತೂಹಲವನ್ನು ಬೆಳೆಸುವ ನಿಟ್ಟಿನಲ್ಲಿ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ “ಪ್ರಾದೇಶಿಕ ವಿಜ್ಞಾನ ಕೇಂದ್ರದ” (Regional Science Centre) ಕಟ್ಟಡ ಕಾಮಗಾರಿಯನ್ನು ಇಂದು ಸಂಸದ ಬಿ.ವೈ.ರಾಘವೇಂದ್ರ ವೀಕ್ಷಿಸಿ, ಪ್ರಗತಿ ಪರಿಶೀಲನೆ ನಡೆಸಿದರು.

ನಮ್ಮ ಶಿವಮೊಗ್ಗಕ್ಕೆ ಈ ವಿಜ್ಞಾನ ಕೇಂದ್ರವನ್ನು ಮಂಜೂರು ಮಾಡುವಂತೆ ಬಿ.ವೈ.ರಾಘವೇಂದ್ರ ಅವರ ಪೂಜ್ಯ ತಂದೆಯವರಾದ ಅಂದಿನ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ,ಸಂಸದ ರಾಘವೇಂದ್ರ ರವರು 2020 ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯ ಫಲವಾಗಿ, ಕೇಂದ್ರ ಸರ್ಕಾರವು ಕೆಟಗರಿ-2 ರ ಅಡಿಯಲ್ಲಿ 5 ಎಕರೆ ಪ್ರದೇಶದಲ್ಲಿ ಸುಮಾರು ರೂ 11.70 ಕೋಟಿ ವೆಚ್ಚದಲ್ಲಿ ಈ ಯೋಜನೆಗೆ ಚಾಲನೆ ನೀಡಿದೆ.

ಈ ಕೇಂದ್ರವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 50:50 ಸಹಭಾಗಿತ್ವದ ಅನುದಾನದಡಿ ಅನುಷ್ಠಾನಗೊಳ್ಳುತ್ತಿದ್ದು, ಪ್ರಸ್ತುತ ಕಟ್ಟಡ ನಿರ್ಮಾಣ ಕಾರ್ಯವು ಶೇ.95 ರಷ್ಟು ಭರದಿಂದ ಪೂರ್ಣಗೊಂಡಿದೆ.

ವಿಜ್ಞಾನ ಕೇಂದ್ರದ ಪ್ರಮುಖ ಆಕರ್ಷಣೆಗಳು ಮತ್ತು ಸೌಲಭ್ಯಗಳು:

  • Fun Science Gallery: ಆಟ ಮತ್ತು ಪ್ರಾಯೋಗಿಕ ಅನುಭವಗಳ ಮೂಲಕ ಸಾಮಾನ್ಯ ವಿಜ್ಞಾನದ ಕ್ಲಿಷ್ಟಕರ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳು ಸುಲಭವಾಗಿ ತಿಳಿಯುವ ಅದ್ಭುತ ವ್ಯವಸ್ಥೆ ಇದೆ.
  • ⁠Thematic Gallery: ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ, ಸಮುದ್ರದೊಳಗಿನ ವಿಸ್ಮಯ ಜಗತ್ತು ಹಾಗೂ ನೈಸರ್ಗಿಕ ಖನಿಜ ಸಂಪನ್ಮೂಲಗಳ ಕುರಿತಾದ ವಿಶೇಷ ಪ್ರದರ್ಶನ.
  • ⁠Temporary Exhibition Gallery: ಕಾಲಕಾಲಕ್ಕೆ ಹೊಸ ವೈಜ್ಞಾನಿಕ ಆವಿಷ್ಕಾರಗಳು ಹಾಗೂ ವಿಶೇಷ ವೈಜ್ಞಾನಿಕ ಪ್ರದರ್ಶನಗಳನ್ನು ಆಯೋಜಿಸಲು ಮೀಸಲಾದ ಗ್ಯಾಲರಿ.
  • ⁠ಆಡಿಟೋರಿಯಂ: ವಿವಿಧ ವೈಜ್ಞಾನಿಕ ಸಂವಾದಗಳು, ಕಾರ್ಯಾಗಾರಗಳು ಹಾಗೂ ಸೆಮಿನಾರ್‌ಗಳನ್ನು ನಡೆಸಲು ಅನುವಾಗುವಂತೆ ಸುಸಜ್ಜಿತ 150 ಆಸನಗಳ ಸಾಮರ್ಥ್ಯವುಳ್ಳ ಆಡಿಟೋರಿಯಂ ನಿರ್ಮಾಣವಾಗುತ್ತಿದೆ.

B.Y. Raghavendra ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಪರಿಷತ್ತು (NCSM) ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (KSTePS) ಮೂಲಕ ಅನುಷ್ಠಾನಗೊಳ್ಳುತ್ತಿರುವ ಈ ಕೇಂದ್ರವು ಕಾರ್ಯಾರಂಭವಾದ ಬಳಿಕ, ಶಿವಮೊಗ್ಗ ಜಿಲ್ಲೆಯ ಪ್ರಾಥಮಿಕ ಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಸಮಸ್ತ ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನವನ್ನು ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳಲು ಮತ್ತು ಅವರಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಲು ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ.

ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅವಿನಾಶ್, NCSM ನ ಅಧೀಕ್ಷಕ ಇಂಜಿನಿಯರ್ ಶ್ರೀ ಎಂ. ತಿರವಿಯರಾಜ್ ಹಾಗೂ ಕಾಲೇಜಿನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Sahyadri Narayana Multispeciality Hospital, Shimoga ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಗೋಪಾಳದಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ.

0

Sahyadri Narayana Multispeciality Hospital, Shimoga ನಗರದ ಗೋಪಾಳದಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಆವರಣದಲ್ಲಿ ಜುಲೈ 18ರ ಶನಿವಾರದಂದು ಉಚಿತ ಮೂಳೆ ಸಾಂದ್ರತೆ (Bone Mineral Density – BMD) ಪರೀಕ್ಷೆ ಹಾಗೂ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ನೋಂದಣಿ, ಬಿ.ಎಂ.ಡಿ ಪರೀಕ್ಷೆ ಮತ್ತು ವೈದ್ಯರ ತಪಾಸಣೆ ಸಂಪೂರ್ಣ ಉಚಿತವಾಗಿರುತ್ತದೆ.

ಖ್ಯಾತ ಮೂಳೆರೋಗ ತಜ್ಞರಾದ ಡಾ. ಚೇತನ್ ಎಂ.ಎಲ್ ಅವರು ರೋಗಿಗಳಿಗೆ ಉಚಿತ ತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ದೀರ್ಘಕಾಲದ ಮೊಣಕಾಲು ಮತ್ತು ಸೊಂಟದ ನೋವು, ಕೀಲು ನೋವು, ಮೆಟ್ಟಿಲು ಹತ್ತಲು ಮತ್ತು ಇಳಿಯಲು ಕಷ್ಟಪಡುತ್ತಿರುವವರು, ಮೂಳೆ ಸವೆತ ಅಥವಾ ಮೂಳೆಯ ಸಾಂದ್ರತೆ ಕಡಿಮೆಯಾಗಿರುವ ಸಮಸ್ಯೆಯಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ನೋಂದಾಯಿಸಿಕೊಂಡು ಇದರ ಸದುಪಯೋಗ ಪಡಿಸಿಕೊಳ್ಳಬಹುದು.

Sahyadri Narayana Multispeciality Hospital, Shimoga ವಿಶೇಷವಾಗಿ ಮಹಿಳೆಯರು ಮತ್ತು ವೃದ್ಧರಲ್ಲಿ ಮೂಳೆಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಆಸ್ಟಿಯೊಪೊರೋಸಿಸ್ನಂತಹ (Osteoporosis) ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ನೊಂದಣಿ ಕಡ್ಡಾಯ, ಹೆಚ್ಚಿನ ಮಾಹಿತಿಗಾಗಿ ‎+91 9108243454 ಅನ್ನು ಸಂಪರ್ಕಿಸಬಹುದಾಗಿದೆ.

Pragathi Composite School ಪ್ರಬಂಧ ರಚನಾ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಪ್ರತಿಭಾ ಅನಾವರಣದ ಜೊತೆ ಆತ್ಮವಿಶ್ವಾಸ ವೃದ್ಧಿ – ಡಾ.ಪ್ರಭಾಕರ ರಾವ್.

0

Pragathi Composite School ಪಠ್ಯದ ಜೊತೆಗಿನ ಪಠ್ಯೇತರ ಚಟುವಟಿಕೆಗಳು ವಿದ್ಯಾಭ್ಯಾಸದಲ್ಲಿ ಅಂಕಗಳಿಕೆ, ಪರೀಕ್ಷಾ ಫಲಿತಾಂಶಗಳಲ್ಲಿ ಪೂರಕ ವಾತಾವರಣ ಸೃಷ್ಟಿಸುತ್ತದೆ. ಅಂತಹ ಹೊಳಹುಗಳನ್ನು ಹೊತ್ತೇ ಸಾಗರದ ರವೀಂದ್ರ ಪುಸ್ತಕಾಲಯ ಈ ರೀತಿಯ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದೆ ಎಂದು ನಿವೃತ್ತ ಪ್ರಾಚಾರ್ಯ, ಇತಿಹಾಸ ಉಪನ್ಯಾಸಕ ಡಾ. ಪ್ರಭಾಕರರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಗರ ನಗರದ ಎಂಡಿಎಫ್ ಸಂಸ್ಥೆಯ ಪ್ರಗತಿ ಸಂಯುಕ್ತ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರವೀಂದ್ರ ಪುಸ್ತಕಾಲಯ ನಾಡಿನ ಹೆಮ್ಮೆ, ಮಲೆನಾಡಿನ ಪ್ರೀತಿಯ ಸಾಹಿತಿಯಾಗಿ, ಸಾಮಾಜಿಕ ಹೋರಾಟಗಳ ಧ್ವನಿಯಾಗಿದ್ದ ಹಿರಿಯ ಸಾಹಿತಿ ಡಾ. ನಾ. ಡಿಸೋಜಾ ಅವರ ಕುರಿತು ಪ್ರಬಂಧ ಸ್ಪರ್ಧೆಯನ್ನು ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಲಾಗಿತ್ತು.

ನಾಡಿ ನಮ್ಮಿಂದ ದೂರವಾಗಿ ಈಗ ವರ್ಷ ಆಗಿದೆ. ಈ ಪ್ರಬಂಧ ಸ್ಪರ್ಧೆ ಮೂಲಕ ಮಕ್ಕಳು ನಾಡಿ ಅವರ ಕುರಿತು ಮಾಹಿತಿ ಸಂಗ್ರಹಿಸಿ ಬರೆಯಲು ಪ್ರಯತ್ನಿಸುವುದರಿಂದ ಅವರಿಗೂ ನಮ್ಮೂರಿನ ಸಾಹಿತಿ ಬಗ್ಗೆ ಗೊತ್ತಾಗುತ್ತದೆ ಎಂಬುದು ಸ್ಪರ್ಧೆಯ ಉದ್ದೇಶವಾಗಿತ್ತು ಎಂದು ವಿವರಿಸಿದರು.

ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ತಮ್ಮ ಆಲೋಚನೆಗಳನ್ನು ಬರವಣಿಗೆಯ ಮೂಲಕ ಅಭಿವ್ಯಕ್ತಿಸುವ ಕೌಶಲವನ್ನು ರೂಢಿಸಿಕೊಳ್ಳಬೇಕು. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಮತ್ತು ಸೃಜನಶೀಲತೆಯನ್ನು ವೃದ್ಧಿಸುತ್ತವೆ ಎಂದು ತಿಳಿಸಿದರು.

Pragathi Composite School ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಪ್ರಸಿದ್ಧ ಛಾಯಾಗ್ರಾಹಕ ಜಿ.ಆರ್.ಜಿ.ಪಂಡಿತ್ ಮಾತನಾಡಿ, ಚಿತ್ರಕಲೆ ಎಂಬುದನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಮಾಡಿರುತ್ತಾನೆ. ರೇಖಾಗಣಿತ, ವಿಜ್ಞಾನದ ವಿಷಯದಲ್ಲಿ ಚಿತ್ರ ಬರೆಯುವುದು ಮಕ್ಕಳಿಗೆ ಅನಿವಾರ್ಯ. ಚಿತ್ರಕಲೆಯಲ್ಲಿ ಪ್ರಾಥಮಿಕ ಆಸಕ್ತಿ ಇದ್ದವರು ಅದಕ್ಕೊಂದು ಚೌಕಟ್ಟು ಮೂಡಿಸಲು ಶಾಸ್ತ್ರೀಯವಾಗಿ ಕಲಿಯುವಂತಾಗಬೇಕು ಎಂದರು.

ರವೀಂದ್ರ ಪುಸ್ತಕಾಲಯದ ಪ್ರಕಾಶಕರಾದ ವೈ.ಎ. ದಂತಿ ಅಧ್ಯಕ್ಷತೆ ವಹಿಸಿದ್ದರು. ಶಾಲೆಯಲ್ಲಿ ತನ್ನ ಚಿತ್ರಕಲಾ ಪ್ರದರ್ಶನ ನಡೆಸಿಕೊಟ್ಟ ರಾಜಗೋಪಾಲ್ ಉಳ್ಳೂರು, ಎಂಡಿಎಫ್ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಎಂ. ಶಿವಕುಮಾರ್, ಇಕ್ಕೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಜನೀಶ್ ಸಿ., ಪ್ರಗತಿ ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಇತರರು ವೇದಿಕೆಯಲ್ಲಿದ್ದರು.
ವಿಜೇತ ವಿದ್ಯಾರ್ಥಿಗಳಿಗೆ ರವೀಂದ್ರ ಪುಸ್ತಕಾಲಯದಿಂದ ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪುಸ್ತಕಗಳನ್ನು ವಿತರಿಸಲಾಯಿತು.

೧೦ನೇ ತರಗತಿಯ ಧನುಷ್ ಎಂ.ಪಿ. ಪ್ರಥಮ ಬಹುಮಾನ, ೯ನೇ ತರಗತಿಯ ಶರಣ್ಯ ಆರ್. ಭಟ್ ದ್ವಿತೀಯ ಬಹುಮಾನ ಹಾಗೂ ರಾಮನಾಥ್ ಜಿ. ಶೆಣೈ ತೃತೀಯ ಬಹುಮಾನ ಗಳಿಸಿದರು. ಹರ್ಷ ಕಾರ್ಯಕ್ರಮ ನಿರ್ವಹಿಸಿದರು.

ಎಂಡಿಎಫ್ ಸಂಸ್ಥೆಯ ಪ್ರಗತಿ ಸಂಯುಕ್ತ ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರವೀಂದ್ರ ಪುಸ್ತಕಾಲಯ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.

Dr. G Parameshwara ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆಯಿಂದಮಹತ್ವದ ಕೊಡುಗೆ: ಮಾಧ್ಯಮಗೋಷ್ಠಿಯಲ್ಲಿ ವಿವಿಧ ನಿರ್ಧಾರ ತಿಳಿಸಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ.

0

Dr. G Parameshwara ಯಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕಳೆದ ಮೂರು ವರ್ಷಗಳಲ್ಲಿ ಕ್ರೀಡಾ ಮೂಲಸೌಕರ್ಯ, ಕ್ರೀಡಾಪಟುಗಳ ಕಲ್ಯಾಣ ಹಾಗೂ ಪ್ರೋತ್ಸಾಹ ಧನ ವಿತರಣೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದೆ. ಗ್ರಾಮೀಣ ಕ್ರೀಡೆಗಳಿಗೆ ಜಾಗತಿಕ ಮನ್ನಣೆ ನೀಡುವುದರಿಂದ ಹಿಡಿದು ಒಲಿಂಪಿಕ್ಸ್ ಪದಕ ಬೇಟೆಯವರೆಗೆ ಇಲಾಖೆಯು ಹತ್ತಾರು ಕ್ರಾಂತಿಕಾರಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದರು.

ಇಂದು ಯವನಿಕ ಸಭಾಂಗಣದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, ನಾನು ರಾಜ್ಯದ ನೂತನ ಸರ್ಕಾರದಲ್ಲಿ ಕಂದಾಯ, ಮುಜರಾಯಿ ಹಾಗೂ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಇಂದು ತಮ್ಮ ಮೊದಲ ಅಧಿಕೃತ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದೇನೆ ಎಂದು ತಿಳಿಸಿದ ಅವರು, ರಾಜ್ಯದ ಯುವಜನತೆಯನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಮತ್ತು ಕ್ರೀಡಾ ಕ್ಷೇತ್ರಕ್ಕೆ ಜಾಗತಿಕ ಮಟ್ಟದ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ರೂಪಿಸಿರುವ ಹತ್ತಾರು ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ತಿಳಿಸಿದರು.

ಕಂಠೀರವ ಕ್ರೀಡಾಂಗಣದ ಪುನರಾಭಿವೃದ್ಧಿ:

ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಪಿಪಿಪಿ (PPP) ಮಾದರಿಯಲ್ಲಿ ಸುಮಾರು 5,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗುತ್ತಿದ್ದು, ಶೀಘ್ರದಲ್ಲೇ ಸಂಪುಟದ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಥಮ ಬಾರಿಗೆ ‘ಅಂತರರಾಷ್ಟ್ರೀಯ ಯುವಜನೋತ್ಸವ’:

ಬರುವ ಡಿಸೆಂಬರ್, ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಅದ್ಧೂರಿಯಾಗಿ “ಅಂತರರಾಷ್ಟ್ರೀಯ ಯುವಜನೋತ್ಸವ” (International Youth Festival) ಆಯೋಜಿಸಲು ಮುಖ್ಯಮಂತ್ರಿಗಳ ಒಪ್ಪಿಗೆ ದೊರೆತಿದೆ. ವಿವಿಧ ದೇಶಗಳ ಯುವಜನರು ಇದರಲ್ಲಿ ಭಾಗವಹಿಸಲಿದ್ದು, ನಮ್ಮ ಸಂಸ್ಕøತಿ, ಕ್ರೀಡೆ ಮತ್ತು ವಿಚಾರಧಾರೆಗಳ ವಿನಿಮಯಕ್ಕೆ ಇದು ಸಾಕ್ಷಿಯಾಗಲಿದೆ ಎಂದು ತಿಳಿಸಿದರು.

ಯುವಶಕ್ತಿಯ ಸಬಲೀಕರಣ ಮತ್ತು ಕ್ರೀಡಾಪಟುಗಳಿಗೆ ಉತ್ತೇಜನ:

Dr. G Parameshwara ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 65 ರಷ್ಟು ಜನರು 35 ವರ್ಷದೊಳಗಿನ ಯುವಕರಾಗಿದ್ದಾರೆ. ಇವರೆಲ್ಲರೂ ಪದವಿ ಪಡೆಯುವ ಹೊತ್ತಿಗೆ ಜವಾಬ್ದಾರಿಯುತ ಮತದಾರರಾಗಿರುತ್ತಾರೆ. ಈ ಯುವಶಕ್ತಿ ದಾರಿ ತಪ್ಪದಂತೆ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಮಾಡಲು ಕ್ರೀಡಾ ಇಲಾಖೆಯು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಹಾಜರಾತಿಯಲ್ಲಿ ವಿನಾಯಿತಿ: ಪದವಿ ಮತ್ತು ಡಿಪ್ಲೊಮಾ ಕಲಿಯುತ್ತಿರುವ ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ಶೇ. 15 ರಷ್ಟು ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಶೇ. 25 ರಷ್ಟು ಕಾಲೇಜು ಹಾಜರಾತಿಯಲ್ಲಿ ವಿನಾಯಿತಿ ನೀಡಲಾಗುವುದು.

ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ: ಸರ್ಕಾರವು ನೇಮಕಾತಿ ಮಾಡಿಕೊಳ್ಳಲಿರುವ ಸುಮಾರು 72,000 ಹುದ್ದೆಗಳಲ್ಲಿ ಶೇ. 2 ರಷ್ಟು ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಿಡಲಾಗಿದೆ. ಇಲಾಖಾವಾರು ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಈ ಮೀಸಲಾತಿ ಸಿಗಲಿದ್ದು, ಪೆÇಲೀಸ್ ಇಲಾಖೆಯಲ್ಲಿ ಈಗಾಗಲೇ ಶೇ. 3 ರಷ್ಟು ಮೀಸಲಾತಿಯನ್ನು ಜಾರಿಗೊಳಿಸಲಾಗಿದೆ. ಇತ್ತೀಚೆಗಷ್ಟೇ ಸುನಿಲ್ (ಹಾಕಿ), ನಿಕಿನ್ ಹಾಗೂ ದಿವ್ಯಾ ಅವರಿಗೆ ಈ ಯೋಜನೆಯಡಿ ನೇಮಕಾತಿ ಆದೇಶ ನೀಡಲಾಗಿದೆ.

ಪ್ರೋತ್ಸಾಹ ಧನ ಹೆಚ್ಚಳ : ಕಾಮನ್‍ವೆಲ್ತ್ ಮತ್ತು ಏಷ್ಯನ್ ಗೇಮ್ಸ್‍ನಲ್ಲಿ ಪದಕ ವಿಜೇತರಿಗೆ ನೀಡಲಾಗುವ ನಗದು ಬಹುಮಾನದ (ಚಿನ್ನಕ್ಕೆ 35 ಲಕ್ಷ ರೂ., ಬೆಳ್ಳಿಗೆ 25 ಲಕ್ಷ ರೂ., ಕಂಚಿಗೆ 15 ಲಕ್ಷ ರೂ.) ಜೊತೆಗೆ, ಇನ್ನು ಮುಂದೆ ಕೇವಲ ದೇಶವನ್ನು ಪ್ರತಿನಿಧಿಸುವ ರಾಜ್ಯದ ಪ್ರತಿಯೊಬ್ಬ ಕ್ರೀಡಾಪಟುಗೂ ತಲಾ 5 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಹೊಸ ಯೋಜನೆಯಡಿ ನೀಡಲಾಗುವುದು ಎಂದು ತಿಳಿಸಿದರು.

ತರಬೇತುದಾರರ ನೇಮಕ: ಕ್ರೀಡಾಕೂಟಗಳಿಗೆ ತರಬೇತುದಾರರ ಕೊರತೆಯನ್ನು ನೀಗಿಸಲು ರಾಜ್ಯಾದ್ಯಂತ ಶೀಘ್ರದಲ್ಲೇ 50 ಕ್ರೀಡಾ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದೆ.

ಏಕಲವ್ಯ ಹಾಗೂ ಕ್ರೀಡಾ ಪ್ರಶಸ್ತಿ ಪ್ರದಾನ: ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದಿರುವ ಏಕಲವ್ಯ ಕ್ರೀಡಾರತ್ನ, ಕ್ರೀಡಾ ಪೋಷಕ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಬರುವ ಆಗಸ್ಟ್ 29 ರಂದು (ಹಾಕಿ ಜಾದೂಗಾರ ಧ್ಯಾನ್ ಚಂದ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನಾಚರಣೆ) ಪ್ರದಾನ ಮಾಡಲು ದಿನಾಂಕ ನಿಗದಿಪಡಿಸಲಾಗಿದೆ.

ಮೈಸೂರಿನಲ್ಲಿ ವೆಲೋಡ್ರೋಮ್ ನಿರ್ಮಾಣ: ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು ಮೈಸೂರಿನಲ್ಲಿ 17 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಬಜೆಟ್‍ನಲ್ಲಿ ಘೋಷಿಸಿದಂತೆ ವೆಲೋಡ್ರೋಮ್ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ. ಬಿಜಾಪುರ, ಬಾಗಲಕೋಟೆ ಮತ್ತು ಗದಗ ಭಾಗದ ಕ್ರೀಡಾಪಟುಗಳಿಗೆ ಈಗಾಗಲೇ ಸೈಕಲ್‍ಗಳನ್ನು ವಿತರಿಸಲಾಗಿದೆ.

ಸಿಇಟಿ ಮೀಸಲಾತಿ: ಪ್ರಸ್ತುತ ವರ್ಷ ಕ್ರೀಡಾ ಕೋಟಾದಡಿ ಸುಮಾರು 115 ಕ್ರೀಡಾಪಟು ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.

ಬರ ನಿರ್ವಹಣೆಗೆ ಎಲ್ಲಾ ರೀತಿಯ ಅಗತ್ಯ ಕ್ರಮ:

ಈ ವರ್ಷ ಇಡೀ ದೇಶವೇ ಬರಗಾಲಕ್ಕೆ ತುತ್ತಾಗಿದೆ. ಪ್ರತಿ 5 ರಿಂದ 6 ವರ್ಷಕ್ಕೆ ಒಮ್ಮೆ ಒಂದು ಸೈಕಲ್ (Cycle) ಮಾದರಿಯಲ್ಲಿ ಬರಗಾಲ ಬರುತ್ತದೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಫೆಸಿಪಿಕ್ ಮಹಾಸಾಗರದಲ್ಲಿ ಉಂಟಾಗುವ ಉಷ್ಣ ಹವಾಮಾನ ವೈಪರಿತ್ಯಾ. ಈ ಬಾರಿ ಇದು 2 ಡಿಗ್ರಿಗಿಂತ ಹೆಚ್ಚಾಗಿರುವುದರಿಂದ ಸೂಪರ್ ಎಲ್‍ನೋನ್ ಉಂಟಾಗಿದ್ದು, ಭಾರತ ದೇಶವು ಪ್ರಮುಖವಾಗಿ ಈ ಎಲ್‍ನೋನೋಗೆ ತುತ್ತಾಗಿದೆ. ಇದರಿಂದಾಗಿ ದೇಶದೆಲ್ಲಡೆ ಬರಗಾಲ ಉಂಟಾಗಿದೆ.

ಮಳೆ ಬರದೆ ರೈತರು ಕಂಗಾಲಾಗಿದ್ದು, ರಾಜ್ಯದಲ್ಲಿ 340 ತಾಲ್ಲೂಕುಗಳಲ್ಲಿ 157 ತಾಲ್ಲೂಕುಗಳಲ್ಲಿ ಮಳೆಯ ಅಭಾವ ಉಂಟಾಗಿದೆ. ಇದರಲ್ಲಿ 14 ತಾಲ್ಲೂಕುಗಳು ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಬರ ಪರಿಸ್ಥಿತಿಯನ್ನು ವೀಕ್ಷಣೆ ಮಾಡಲು ನಾನು ಸಿದ್ದನಿದ್ದೆ, ಆದರೆ ಸನ್ಮಾನ್ಯ ಮುಖ್ಯಮಂತ್ರಿಗಳು ನಾನು ತಮ್ಮ ಜೊತೆ ಬರುತ್ತೇನೆ ಎಂದು ತಿಳಿಸಿದರು. ನಾನು ಮತ್ತು ಮುಖ್ಯಮಂತ್ರಿಗಳು ಖುದ್ದು,ಸುಮಾರು 16 ಜಿಲ್ಲೆಗಳಿಗೆ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಶೋಚನೀಯ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿದ್ದೇವೆ ಎಂದು ತಿಳಿಸಿದ ಅವರು ಯಾವುದೇ ರೀತಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ವಹಿಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕುಡಿಯು ನೀರು ತೊಂದರೆ ಇರುವ ಕಡೆ ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ವ್ಯವಸ್ಥೆ ಮಾಡಲು ಈಗಾಗಲೇ 5 ಕೋಟಿ ರೂಪಾಯಿಗಳನ್ನು ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಬರ ಪರಿಸ್ಥಿತಿಯ ಬಗ್ಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಮಾನ್ಯ ಪ್ರಧಾನ ಮಂತ್ರಿಗಳಿಗೆ ಈಗಾಗಲೇ ಪತ್ರ ಬರೆದು ಅಗತ್ಯ ನೆರವು ನೀಡುವಂತೆ ಕೋರಿದ್ದಾರೆ. ನಾನು ಸಹ ಕೇಂದ್ರದ ಕಂದಾಯ ಮಂತ್ರಿಗಳಿಗೆ, ಗೃಹ ಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದು, ಬರಪರಿಸ್ಥಿತಿ ಎದುರಿಸಲು ಅಗತ್ಯ ಮುಂಗಡ ಹಣವನ್ನು ಎನ್.ಡಿ.ಆರ್.ಎಫ್ ನಿಧಿಯಿಂದ ಬಿಡುಗಡೆ ಮಾಡಲು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸುತ್ತಾ, ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರವು ಈಗಾಗಲೇ ಎಲ್ಲಾ ರಿತಿಯ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 39,000 ದೇವಾಲಯಗಳು ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರಲಿವೆ. ಈ ಎಲ್ಲಾ ದೇವಾಲಯಗಳನ್ನು ಎ. ಬಿ ಮತ್ತು ಸಿ. ವರ್ಗಗಳಾಗಿ ವಿಂಗಡಿಸಲಾಗಿದೆ. ಎ. ವರ್ಗದ ದೇವಾಲಯಗಳ ವ್ಯಾಪ್ತಿಯಡಿ, ಕೊಲ್ಲೂರು ಮೂಕಾಂಬಿಕೆ, ಚಾಮುಂಡಿ ದೇವಸ್ಥಾನ, ಕುಕ್ಕೆ ಸುಬ್ರಮಣ್ಯ ಇಂತಹ ದೇವಾಲಯಗಳು ಬರುತ್ತಿದ್ದು, ಈ ದೇವಾಲಯಗಳಲ್ಲಿನ ಹುಂಡಿ ಹಣವನ್ನು ಆಯಾ ದೇವಾಲಯಗಳ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ. ಎ ವರ್ಗದ ದೇವಾಲಯಗಳಲ್ಲಿ ಕ್ರೋಢಿಕೃತವಾಗುವ ಹಣದಲ್ಲಿ ಶೇಕಡ 10 ರಷ್ಟು ಹಣವನ್ನು ಮಾತ್ರ ಸಿ ವರ್ಗದ ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುವುದು.

ಎಷ್ಟೋ ದೇವಾಲಯಗಳಲ್ಲಿ ಹುಂಡಿ ಹಣ ದೋಚಿಕೊಂಡು ಹೋಗಿದ್ದಾರೆ, ಕೆಲವು ದೇವಾಲಯಗಳಲ್ಲಿ ಶೇಖರಣೆಯಾಗುವ ಹುಂಡಿಯ ಹಣದ ಬಗ್ಗೆ ನಿಖರ ಮಾಹಿತಿಯನ್ನು ನೀಡುತ್ತಿಲ್ಲ. ಇಂತಹ ಕ್ರಮಗಳಿಗೆ ಬ್ರೇಕ್ ಹಾಕಲು ಮುಜರಾಯಿ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ಎಲ್ಲಾ ದೇವಾಲಯಗಳಲ್ಲೂ ಸಿ.ಸಿ. ಕ್ಯಾಮೆರಾ ಅಳವಡಿಸಲು ತೀಮಾನ ಮಾಡಿದೆ. ಅಲ್ಲದೇ ಕೇಂದ್ರಿಕೃತ ಮಾಡಲು ಅನುಕೂಲವಾಗುವಂತೆ ಸರ್ವರ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದರಿಂದಾಗಿ ಮುಜರಾಯಿ ಇಲಾಖೆಯ ಆಯುಕ್ತರು ಕೇಂದ್ರಸ್ಥಾನದಲ್ಲೇ ಕುಳಿತು ಎಲ್ಲಾ ದೇವಾಲಯಗಳ ಚಟುವಟಿಕೆಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಮತ್ತು ಹಣ ದುರುಪಯೋಗ ಆಗುವುದನ್ನು ತಪ್ಪಿಸಬಹುದಾಗಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.

ಹೊರ ರಾಜ್ಯಗಳಲ್ಲಿ ಪ್ರಮುಖ ದೇವಾಲಯಗಳಿರುವ ಜಾಗಗಳಲ್ಲಿ ನಮ್ಮ ರಾಜ್ಯದ ಆಸ್ತಿ ಇದೆ. ತಿರುಪತಿಯಲ್ಲಿ ಯಾವುದೇ ರಾಜ್ಯದ ಆಸ್ತಿ ಇರುವುದಿಲ್ಲ. ಆದರೆ ನಮ್ಮ ಕರ್ನಾಟಕ ರಾಜ್ಯಕ್ಕೆ ಮಾತ್ರ 7 ಎಕರೆ ಆಸ್ತಿ ಇದ್ದು, ಇಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಕರ್ನಾಟಕ ಭವನವನ್ನು ನಿರ್ಮಾಣ ಮಾಡಲಾಗಿದೆ. ಈಗ ಅತಿಗಣ್ಯರು ಭೇಟಿ ನೀಡುವ ಸಮಯದಲ್ಲಿ ಅವರು ತಂಗಲು ಅನುಕೂಲವಾಗುವಂತೆ ವಸತಿ ಸಮುಚ್ಛಯವನ್ನು ನಿರ್ಮಾಣ ಮಾಡಲು ಕ್ರಮ ವಹಿಸಲಾಗಿದೆ. ಅದೇ ರೀತಿ ತುಳಜಾಪುರ, ಶ್ರೀಶೈಲ, ವಾರಣಾಸಿ ಇಂತಹ ಪ್ರಮುಖ ಸ್ಥಳಗಳಲ್ಲೂ ಸಹ ನಮ್ಮ ರಾಜ್ಯದ ಆಸ್ತಿ ಇದ್ದು, ಅದನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರರಿಂದ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಎಲ್ಲಾ ದೇವಸ್ಥಾನಗಳಲ್ಲೂ ನಿರೀಕ್ಷೆಗೂ ಮೀರಿ ಹಣ ಇದೆ ಇದನ್ನು ರಕ್ಷಿಸಲು ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ಕ್ರಮ ವಹಿಸಲಾಗಿದೆ. ಕೊಲ್ಲೂರು ಮೂಕಾಂಬಿಕ ದೇವಸ್ಥಾನದಲ್ಲಿ ಸುಮಾರು 300 ಕೋಟಿ ಇದೆ. ಬೆಂಗಳೂರು ಬನಶಂಕರಿ ದೇವಸ್ಥಾನದಲ್ಲಿ ವಾರ್ಷಿಕ 13 ಕೋಟಿ ಬರುತ್ತದೆ ಎಂದು ತಿಳಿಸಿದ್ದರು. ಆದರೆ ಅಲ್ಲಿ ಭೇಟಿ ನೀಡಿದ ವೇಳೆ ಗಮನಿಸಿದಾಗ ಸುಮಾರು 100 ಕೋಟಿ ಆದಾಯ ಬರುತ್ತದೆ ಎಂದು ಅಂದಾಜಿಸಿಲಾಗಿದೆ. ಇವೆಲ್ಲವನ್ನು ರಕ್ಷಣೆ ಮಾಡುವ ಸಲುವಾಗಿ ಒಂದು ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿರುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಮತ್ತು ಆಯುಕ್ತರಾದ ಎಂ. ಎನ್. ಅನುಚೇತ್ ಉಪಸ್ಥಿತರಿದ್ದರು.

ಯುವಜನರು ಡ್ರಗ್ಸ್ ಮತ್ತು ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗದೆ ಕ್ರೀಡೆ ಹಾಗೂ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿದ್ದ 3,600 ಕಿ.ಮೀ ‘ಭಾರತ್ ಜೋಡೋ’ ಪಾದಯಾತ್ರೆಯು ದೇಶದಲ್ಲಿ ಸೋದರತ್ವ ಮತ್ತು ಭಾವೈಕ್ಯತೆಯನ್ನು ಮೂಡಿಸುವಲ್ಲಿ ಯುವಜನತೆಗೆ ಪ್ರೇರಣೆಯಾಗಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.

ಇದರ ಅಂಗವಾಗಿ ಪ್ರತಿ ಗ್ರಾಮ ಪಂಚಾಯತಿಯಲ್ಲೂ ಯುವ ಸಂಘಗಳನ್ನು ಅನುಷ್ಠಾನ ಮಾಡಲು ನಮ್ಮ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರ ಪ್ರಥಮ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಅನುಮೋದನೆ ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಪ್ರತಿ ಗ್ರಾಮ ಪಂಚಾಯತಿಯಲ್ಲೂ ಯಾವುದೇ ಜಾತಿ, ಮತ, ಭೇದ, ಭಾವವಿಲ್ಲದೇ ಹಾಗೂ ಯಾವುದೇ ರಾಜಕೀಯ ಪ್ರೇರಿತಗಳಿಗೆ ಒಳಗಾಗದೇ ಎಲ್ಲಾ ಸಮುದಾಯಗಳಿಂದಲೂ 100 ರಿಂದ 150 ಯುವಕರನ್ನೊಳಗೊಂಡ ಸಂಘವನ್ನು ಆಯ್ಕೆ ಮಾಡಲಾಗುವುದು. ಪ್ರತಿ ಸಂಘಕ್ಕೆ ವಾರ್ಷಿಕ ರೂ. 10.00 ಲಕ್ಷದಂತೆ ಅನುದಾನ ಬಿಡುಗಡೆ ಮಾಡಲಾಗುವುದು. ಈ ಯುವ ಸಂಘಗಳು ರಾಷ್ಟ್ರದ ಇತಿಹಾಸ, ಸಂಸ್ಕøತಿ, ಸಾಹಿತ್ಯ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಯುವಕರನ್ನು ಸೇರಿಸಿಕೊಳ್ಳಲಾಗುವುದು. ಈ ಜವಬ್ದಾರಿಯನ್ನು ನಿರ್ವಹಿಸಲು ಕ್ರೀಡಾ ಇಲಾಖೆಗೆ ನೀಡಲಾಗಿದೆ.

ರಾಜ್ಯದ ಯುವಜನತೆಯನ್ನು ಕ್ರೀಡೆಯಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಲು ಮತ್ತು ಕ್ರೀಡಾ ಸಂಸ್ಕøತಿಯನ್ನು ಬಲಪಡಿಸಲು ಇಲಾಖೆಯು ಸಂಪೂರ್ಣ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು.

Klive Special Aerticle ಚಿನ್ನಕ್ಕಿಂತಲೂ ಚೆನ್ನ, ಚನ್ನಪ್ಪಯ್ಯ ಅವಧೂತರು ಲೇ: ಪ್ರಸಾದ್ ಶ್ರೀವತ್ಸ, ದಾವಣಗೆರೆ

0

Klive Special Aerticle ದಾವಣಗೆರೆಯ ಸಮೀಪದ ಆನಗೋಡಿನಿಂದ ಸುಮಾರು 3 ಕಿ.ಮೀ ಅಂತರದಲ್ಲಿರುವ ಚಿಕ್ಕ ಹಳ್ಳಿ ತುಂಬಿಗೆರೆ. ಸುಮಾರು 100-150 ಮನೆಗಳಿರುವ ಈ ಚಿಕ್ಕಹಳ್ಳಿಯ ಸಮೀಪ ಶಾಸ್ತ್ರಿಹಳ್ಳಿ ಎಂಬ ಇನ್ನೊಂದು ಪುಟ್ಟ ಹಳ್ಳಿಯಿದ್ದು ಅಲ್ಲಿ ಅಭಯಾಶ್ರಮ ಎಂಬ ವೃದ್ಧಾಶ್ರಮವೊಂದಿದೆ. ತುಂಬಿಗೆರೆಯ ವಿಶೇಷವೇನೆಂದರೆ ಸುಮಾರು ಇಸ್ವಿ ಸನ್‌ 1830ರ ಆಸುಪಾಸಿನಲ್ಲಿ ಶ್ರೀ ಬ್ರಹ್ಮಾನಂದರು ಎಂಬ ಸಂತರೊಬ್ಬರು ಇದ್ದರು. ಅವರು ಕಾಶಿಯಿಂದ ತಮ್ಮ ತಲೆಯ ಮೇಲೆ ಹೊತ್ತು ತಂದು ಪ್ರತಿಷ್ಠಾಪಿಸಿದ ವಿಶ್ವನಾಥ ಲಿಂಗವು ಇಲ್ಲಿದೆ. ಇಂದು ಈ ಅಂಕಣದಲ್ಲಿ ನಾನು ತಿಳಿಸಲು ಹೊರಟಿರುವ ಒಬ್ಬ ಅದ್ಭುತ ಸಾಧಕರು ಅವರೇ ತುಂಬಿಗೆರೆಯ ಶ್ರೀ ಬ್ರಹ್ಮಾನಂದರು.
ಚಿದಂಬರಪ್ಪ ಮತ್ತು ಸಾವಿತ್ರಮ್ಮ ದಂಪತಿಗಳಿಗೆ ಮುರಗೋಡು ಚಿದಂಬರನ ವರಪ್ರಸಾದವಾಗಿ ಹುಟ್ಟಿದವರು ಇವರು. ಇವರ ಪೂರ್ವಾಶ್ರಮದ ಹೆಸರು ಚನ್ನಪ್ಪಯ್ಯ. ಚನ್ನಪ್ಪಯ್ಯನವರ ತಂದೆ ಚಿದಂಬರಪ್ಪನವರು ಒಮ್ಮೆ ಅಣಜಿ ವಿರೂಪಾಕ್ಷಜೋಯಿಸರೊಟ್ಟಿಗೆ ಮುರಗೋಡು ಯಾತ್ರಗೆಂದು ಹೋದಾಗ ಒಂದುವಾರವಾದರೂ ಚಿದಂಬರನ ದರ್ಶನವಾಗುವುದಿಲ್ಲ. ಆಗ ಬಹಳ ನೋವಿನಿಂದ ನಾಳೆ ಚಿದಂಬರನ ದರ್ಶನವಾಗದಿದ್ದರೆ ಗ್ರಾಮ ಪ್ರದಕ್ಷಿಣೆ ಮಾಡಿ ಹಿಂತಿರುಗೋಣ ಎಂದು ಮಾತನಾಡಿಕೊಂಡು ಮಲಗುತ್ತಾರೆ. ಬೆಳಗ್ಗೆ ಇನ್ನೇನು ಹೊರಡಲುನುವಾದಾಗ ಚಿದಂಬರನ ಅಪ್ಪಣೆಯಂತೆ ಜನಸಂದಣಿಯಲ್ಲಿ ಒಬ್ಬ ವ್ಯಕ್ತಿಬಂದು ವಿರೂಪಾಕ್ಷ ಜೋಯಿಸರು ಬರಬೇಕು ಚಿದಂಬರನ ದರ್ಶನಕ್ಕೆ ಎಂದಾಗ ಸುಮಾರು 15-20 ವಿರೂಪಾಕ್ಷ ಜೋಯಿಸರು ಬಂದು ಚಿದಂಬರನ ಮುಂದೆ ನಿಲ್ಲುತ್ತಾರೆ ಆದರೆ ಚಿತ್ರದುರ್ಗ ಮೂಲದವರು ಎಂದಾಗ ಇವರು ಹೋಗಿ ಚಿದಂಬರ ಸ್ವಾಮಿಗಳಿಗೆ ನಮಸ್ಕಾರ ಮಾಡಿದಾಗ “ಏನು ಜೋಯಿಸರೇ ಚಿದಂಬರನ ಮೇಲೆ ಇಷ್ಟೊಂದು ಆಗ್ರಹವೇ ? ಗ್ರಾಮ ಪ್ರದಕ್ಷಿಣೆ ಮಾಡಿ ಹೋಗಬೇಕೆಂದಿದ್ದಿರಾ ?, ಇನ್ನೂ ಒಂದು ವಾರಗಳ ಕಾಲ ಇಲ್ಲಿ ಉಳಿಯಬೇಕು”ಎಂದು ಆಜ್ಞಾಪಿಸುತ್ತಾರೆ. ಅದರಂತೆ ಒಂದುವಾರದ ತರುವಾಯ ಚಿದಂಬರ ಸ್ವಾಮಿಗಳು ಪೂರ್ಣಫಲವನ್ನು ನೀಡಿ ಜೋಯಿಸರೇ ಇದು ನಿಮಗೆ, ನಂತರ ಚಿದಂಬರಪ್ಪನವರಿಗೆ ನೀಡಿ ಇದು ನಿಮಗೆ. ಒಬ್ಬ ಮಗನು ಹುಟ್ಟುತ್ತಾನೆ ಮುಂದೆ ಅವನಿಂದ ಉತ್ತಮ ಗತಿಯುಂಟಾಗುವುದು, ಹಾಗು ಜೋಯಿಸರ ಕಡೆಗೆ ತಿರುಗಿ ಜೋಯಿಸರೇ ನಿಮಗೆ ಒಬ್ಬಳು ಮಗಳಾಗುತ್ತಾಳೆ ಅವಳನ್ನು ಯಾರ ಮನೆಗೆ ವಿವಾಹ ಮಾಡಿಕೊಡುವಿರೋ ಆ ಮನೆಯಲ್ಲಿ ಚಿದಂಬರನ ಅವತಾರವಾಗುತ್ತದೆ ಎಂದರು. ಅದರಂತೆ ಮುಂದೆ ಜೋಯಿಸರ ಮಗಳಿಗೆ ಚಿದಂಬರಮ್ಮ ಎಂದು ಹೆಸರಿಟ್ಟು, ಅವರನ್ನು ವಿವಾಹ ಮಾಡಿಕೊಂಡ ಮನೆಯಲ್ಲಿ ಸದ್ಗುರು ಶ್ರೀ ಶಂಕರಲಿಂಗ ಭಗವಾನರ ಅವತಾರವಾಗುತ್ತದೆ.
Klive Special Aerticle ಇಲ್ಲಿ ಚಿದಂಬರಪ್ಪನವರು ಆಗ ಇನ್ನೂ ದಾವಣಗೆರೆಯ ಸಮೀಪದ ಹೊನ್ನೂರು ಎಂಬ ಗ್ರಾಮದಲ್ಲಿದ್ದರು. ಅಲ್ಲಿಯೇ ಚನ್ನಪ್ಪಯ್ಯನವರ ಜನನವಾಯಿತು. ಆಗ ಚನ್ನಪ್ಪಯ್ಯನವರಿಗೆ ಅವರ 8ನೇ ವಯಸ್ಸಿನಲ್ಲಿ ಬ್ರಹ್ಮೋಪದೇಶವಾಯಿತು.ನಂತರ ತ್ರಿಕಾಲ ಸಂಧ್ಯಾವಂದನೆಯನ್ನೂ, ಇಂದ್ರಾಕ್ಷಿಸ್ತೋತ್ರ, ದೇವತಾರ್ಚನೆ ಎಲ್ಲವನ್ನೂ ಕಲಿತು, ನಂತರ ಕುಮಾರವ್ಯಾಸನ ಗದುಗಿನ ಭಾರತದ ವಾಚನ ವ್ಯಾಖ್ಯಾನಗಳನ್ನೂ ಚನ್ನಪ್ಪಯ್ಯ ಕಲಿತರು. ಇದೇ ಸಂದರ್ಭದಲ್ಲಿ ಅವರಿಗೆ ಮುರಿಗೆಪ್ಪನವರ ಪರಿಚಯವಾಗುತ್ತದೆ. ಮುರಿಗೆಪ್ಪನವರೂ ಇವರಂಥದ್ದೇ ಸ್ವಭಾವದವರಾದ್ದರಿಂದ ಬಹಳ ಬೇಗ ಸ್ನೇಹಿತರಾಗುತ್ತಾರೆ. ನಂತರ ಚನ್ನಪ್ಪಯ್ಯನವರದು ಬಹಳ ಶಿಸ್ತು ಮತ್ತು ಮುಂದೆ ಅವರಿಗೆ ವಿವಾಹವಾಗುತ್ತದೆ ಆದರೆ ಅವರ ಮೊದಲ ಮಡದಿ ತಿಮ್ಮಮ್ಮ ಬಹಳ ಬೇಗ ಸ್ವರ್ಗಸ್ತರಾಗುತ್ತಾರೆ.ತದನಂತರ ಅವರು ಅಪುತ್ರವತಿಯಾಗಿ ಮರಣಹೊಂದಿದ ಕಾರಣದಿಂದಾಗಿ ಅವರ ತಂಗಿ ವೆಂಕಟಲಕ್ಷ್ಮಮ್ಮನವರನ್ನು ಮದುವೆಯಾದರು. ಆಮೇಲೆ ಸುಮಾರು ನಲವತ್ತನೇ ವಯಸ್ಸಿನಲ್ಲಿದ್ದಾಗ ಅವರಿಗೆ ಪತ್ನಿವಿಯೋಗವಾಗುತ್ತದೆ. ಆ ಸಂದರ್ಭದಲ್ಲಿ ಚನ್ನಪ್ಪಯ್ಯನವರು ಅತ್ಯಂತ ವ್ಯಾಕುಲರಾಗಿ, ದುಃಖಿತರಾಗಿಬಿಡುತ್ತಾರೆ. ಆಗ ಅವರ ಮಾವ ಕೃಷ್ಣಪ್ಪನವರು ತುಂಬಿಗೆರೆಗೆ ಕರೆದರೂ ಸಹಾ ಅವರು ಬರಲು ಒಪ್ಪುವುದಿಲ್ಲ. ನಂತರ ಅವರ ಸ್ನೇಹಿತರಾದ ಮುರುಗೆಪ್ಪನವರು ಕಾರ್ಯ ನಿಮಿತ್ತ ಹೊನ್ನೂರಿಗೆ ಬರುತ್ತಾರೆ. ಇವರ ಯೋಗ ಕ್ಷೇಮ ವಿಚಾರಿಸಿ ಇವರ ಪರಿಸ್ಥಿತಿಯನ್ನು ಅರಿತು ಅವರು “ಕೈವಲ್ಯ ಕಲ್ಪವಲ್ಲರಿ”ಎಂಬ ಪುಸ್ತಕವನ್ನು ಇವರಿಗೆ ನೀಡುತ್ತಾರೆ. ಅದರಿಂದ ಪುಳಕಿತರಾದ ಚನ್ನಪ್ಪನವರು ಸಂಸಾರ ಜಂಜಾಟದಿಂದ ದೂರಾಗಲು ಕಾಶಿಗೆ ಪ್ರಯಾಣ ಬೆಳೆಸುತ್ತಾರೆ. ಅಲ್ಲಿ ಕಾಶಿ ಸಂಸ್ಥಾನದ ರಾಜಗುರುಗಳಾದ ಶ್ರೀ ವಿಶ್ವನಾಥೇಂದ್ರ ಸರಸ್ವತಿ ಎಂಬುವವರಲ್ಲಿ ಉಳಿದುಕೊಂಡು ಮರು ದಿನ ಮಣಿಕರ್ಣಿಕಾ ಘಾಟಿನಲ್ಲಿ ಸ್ನಾನಕ್ಕೆಂದು ಬಂದಾಗ ಅಲ್ಲಿ ಧ್ಯಾನಸ್ಥರಾಗಿದ್ದವರೊಬ್ಬರನ್ನು ಕಂಡು ಆಕರ್ಷಿತರಾಗುತ್ತಾರೆ. ಅಲ್ಲಿದ್ದ ಕೆಲವರನ್ನು ಇವರ ಬಗ್ಗೆ ವಿಚಾರಿಸಲು “ನಾವೂ ಸುಮಾರು ವರ್ಷಗಳಿಂದ ನೋಡುತ್ತಿದ್ದೇವೆ ಆದರೆ ಅವರು ಆ ಜಾಗದಿಂದ ಎದ್ದಿಲ್ಲ”ಎಂದು ಉತ್ತರಿಸಿದಾಗ, ಉದ್ದ ಬೆಳೆದ ಜಟಾ-ಗಡ್ಡಗಳು, ನೀರಡಿಕೆ ಹಸಿವೆಯ ಆಯಾಸಗಳಿಲ್ಲದೇ ಕುಳಿತಿರುವ ಬ್ರಹ್ಮಾನುಸಂಧಾನಿ ಚನ್ನಪ್ಪಯ್ಯನವರನ್ನು ಅಲ್ಲಿಯೇ ಕೂಡಿಸಿಬಿಟ್ಟಿತು.
ಒಂದುವಾರ ಪರ್ಯಂತ ಊಟತಿಂಡಿ ನಿದ್ರೆಗಳ ಪರಿವೆಯಿಲ್ಲದೇ ಇವರು ಅವರ ಮುಂದೆ ಕುಳಿತಿದ್ದಾರೆ ಕಾರಣ ಇಷ್ಟೇ ಊಟ ಉಪಾಹಾರಗಳಿಗೆ ಹೋದರೆ ಆ ಸಂದರ್ಭದಲ್ಲಿ ಬಹಿರ್ಮುಖರಾದರೆ ನಂತರ ಅದು ಎಷ್ಟು ಕಾಲ ಬಹಿರ್ಮುಖತೆಯಿದೆಯೋ ಒಂದುವೇಳೆ ಕೂಡಲೇ ಅಂತರ್ಮುಖರಾದರೆ ಅವರಿಂದ ಉಪದೇಶ ಪಡೆದು ಮುಕ್ತಿ ಹೊಂದುವ ಭಾಗ್ಯ ಕೈತಪ್ಪುವುದಲ್ಲ ಎಂದು ಕುಳಿತುಬಿಟ್ಟರು. ನಂತರ ಏಳನೇ ದಿವಸ ಅಲ್ಲಿದ್ದ ಅವಧೂತರು ಕಣ್ತೆರೆದು ನೋಡಿದಾಗ ಅವರಿಗೆ ನಮಸ್ಕರಿಸುತ್ತಾರೆ. ಆ ಅವಧೂತರು ಬೇರೆ ಯಾರೂ ಅಲ್ಲ ಸಾಕ್ಷಾತ್‌ ದತ್ತಾತ್ರೆಯರಿಂದ ಅನುಗ್ರಹಪಡೆದವರಾದ ಶ್ರೀಗಣೇಶಾವಧೂತರಾಗಿದ್ದರು. ಎದ್ದವರೇ ಇವರನ್ನು ನೋಡಿ “ಎಲೋ ! ಯಾರು ನೀನು ?”ಎಂದರು ಇವರು “ಸಂಸಾರದಲ್ಲಿ ಬೇಸರಗೊಂಡು ಮುಕ್ತಿಗಾಗಿ ತಮ್ಮತ್ತ ಬಂದಿದ್ದೇನೆಂದರು. “ಎಲೋ ನೀನು ಪಾಪಿ, ಇಲ್ಲಿಂದ ಹೊರಟುಹೋಗು” ಎಂದರು ಆದರೆ ಚನ್ನಪ್ಪಯ್ಯನವರು ಕದಲಲಿಲ್ಲ, ಆಗ ಅವರ ದಂಡದಿಂದ ಇವರ ತಲೆಗೆ ಜೋರಾಗಿ ಹೊಡೆದರು, ಗಾಯವಾಗಿ ರಕ್ತ ಚಿಮ್ಮುತ್ತದೆ, ಆದರೆ ಅವರ ಕಾಲುಗಳನ್ನು ಇವರು ಗಟ್ಟಿಯಾಗಿ ಹಿಡಿದಾಗ, ಗಣೇಶಾವಧೂತರು ಒಂದು ಬಟ್ಟಲು ತರಲು ಹೇಳಿ ಅದರಲ್ಲಿ ಮಲವಿಸರ್ಜಿಸಿ ಅದನ್ನು ತಿನ್ನು ಅದೇ ನಿನಗೆ ಉಪದೇಶ ಎಂದಾಗ ಚನ್ನಪ್ಪಯ್ಯನವರು “ವರ್ಷಾನುಗಟ್ಟಲೇ ಧ್ಯಾನಸ್ಥನಾಗಿರುವ ಈ ಅವಧೂತರು ಮಲವು ಅಸಹ್ಯ ಹೇಗಾಗುತ್ತದೆಂದು ತಿಳಿದು ಸ್ವೀಕರಿಸಲು ಹೋದಾಗ ಗಣೇಶಾವಧೂತರು ಇವರನ್ನು ತಡೆಯುತ್ತಾರೆ. ಹಾಗೂ ಇವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ನಿಜವಾದ ಆತ್ಮವಿದ್ಯಾ ಜಿಜ್ಞಾಸುವೋ ಅಲ್ಲವೋ ಎಂದು ತಿಳಿದು, ನಂತರ ಇವರಿಗೆ ಸನ್ಯಾಸ ನೀಡಲು ಮುಂದಾಗುತ್ತಾರೆ.
ನಂತರ ಇವರನ್ನು ಕುರಿತು ಗಣೇಶಾವಧೂತರು ಹೇಳುತ್ತಾರೆ “ನೀನು ಬಹಳ ಪುಣ್ಯಶಾಲಿ, ನನ್ನನ್ನು ಇದುವರೆಗೆ ಯಾರೂ ಕೂಡಾ ಬ್ರಹ್ಮವಿಚಾರಕ್ಕೆ, ಕಾಡಿರಲಿಲ್ಲ, ನಾನು ನೇರವಾಗಿ ಸಾಕ್ಷಾತ್‌ ದತ್ತಾತ್ರೇಯರಿಂದ ನೇರ ಅನುಗ್ರಹೀತನಾಗಿ ಇಲ್ಲಿಗೆ ಬಂದೆ, ಯಾವಾಗ ಬಂದೆ ತಿಳಿಯದು, ಆದರೆ ಈಗ ಎಚ್ಚರವಾದಾಗ ನಿನ್ನಂತಹ ಜಿಜ್ಞಾಸುವಿನ ಭೆಟ್ಟಿಯಾಗಿದೆ”(ವಾಚಕರು ಇಲ್ಲಿ ಗಮನಿಸಬೇಕು, ದತ್ತಾತ್ರೇಯರು ಕೃತಯುಗದ ಸಂದರ್ಭದಲ್ಲಿ ಪ್ರಕಟವಾದವರು, ಅತ್ರಿ ಅನಸೂಯರ ಪುತ್ರರಾಗಿ, ಅವರ ಶಿಷ್ಯ ಕಾರ್ತವೀರ್ಯಾರ್ಜುನ ದತ್ತನ ಅನುಗ್ರಹದಿಂದ ಸಹಸ್ರಬಾಹುಗಳಿದ್ದವು ಎಂದು ಪುರಾಣದಲ್ಲಿ ಉಲ್ಲೇಖವಿದೆ. ಕಲಿಯುಗದಲ್ಲಿ ರೇಣುಕಾ-ಜಮದಗ್ನಿಯರಿಗೆ ಮುಳುವಾಗಿ ಪರಶುರಾಮರಿಂದ ಹತರಾಗುತ್ತಾರೆ ) ಇಂಥ ಸದ್ಗುರುಗಳ ಕೃಪೆ ಯಾರಿಗೆ ತಾನೇ ಆಗಲು ಸಾಧ್ಯ, ಚನ್ನಪ್ಪಯ್ಯನವರು ಚಿದಂಬರ ಸ್ವಾಮಿಗಳ ಅನುಗ್ರಹದಿಂದ ಜನಿಸಿದವರು, ಈ ಲೋಕೋದ್ಧಾರಕ್ಕಾಗಿಯೇ ಅಲ್ಲವೇ ಮಹಾಪುರುಷರ ಜನನವಾಗುವುದು. ಹಾಗೇ ಗಣೇಶಾವಧೂತರಿಂದ ಅನುಗ್ರಹೀತರಾದ ಚನ್ನಪ್ಪಯ್ಯನವರ ಮುಂದಿನ ಜೀವನ ಚಿತ್ರಣ ಮತ್ತಷ್ಟು ಕುತೂಹಲಕಾರಿಯಾಗಿದೆ.

ಸ್ವ- ಉದ್ಯೋಗ ಉಚಿತ ತರಬೇತಿಗೆ ಅರ್ಜಿ ಆಹ್ವಾನ

0

ಶಿವಮೊಗ್ಗ ತಾಲ್ಲೂಕಿನ ಹೊಳಲೂರಿನಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿವಿಧ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

18ರಿಂದ 49 ವರ್ಷದೊಳಗಿನ, ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರುವ ಗ್ರಾಮೀಣ ಪ್ರದೇಶದ ಬಿಪಿಎಲ್ ಕಾರ್ಡ್ ಹೊಂದಿರುವ ನಿರುದ್ಯೋಗಿ ಯುವಕ-ಯುವತಿಯರು ಈ ತರಬೇತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ಪೂರ್ಣಗೊಂಡ ಬಳಿಕ ಸ್ವ-ಉದ್ಯೋಗ ಆರಂಭಿಸುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಸಂಸ್ಥೆಯಲ್ಲಿ ತರಬೇತಿ ಪಡೆಯುವವರಿಗೆ ತರಬೇತಿ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿದ್ದು, ಸಂಸ್ಥೆಯಲ್ಲಿಯೇ ವಾಸ್ತವ್ಯ ಹೂಡುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಜುಲೈ 23ರಿಂದ 10 ದಿನಗಳ ಅವಧಿಯ ಅಣಬೆ ಬೇಸಾಯ ತರಬೇತಿ ಹಾಗೂ ಜುಲೈ 29ರಿಂದ 35 ದಿನಗಳ ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿ ಆರಂಭವಾಗಲಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ ಹಾಗೂ ವಯಸ್ಸಿನ ವಿವರಗಳೊಂದಿಗೆ ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊನ್ನಾಳಿ ರಸ್ತೆ, ಹೊಳಲೂರು – 577216, ಶಿವಮೊಗ್ಗ ತಾಲ್ಲೂಕು ಇವರಿಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ 94819 55721, 97434 29595, 91644 11580, 94493 71579 ಹಾಗೂ 96329 61707 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

ಉದ್ಯೋಗದಾತರು ,ಶಿಕ್ಷಣ ತಜ್ಞರು, ಸರ್ಕಾರಗಳು ಸಮಗ್ರಭವಿಷ್ಯಕ್ಕಾಗಿ ಯುವಜನತೆಯನ್ನ ಒಟ್ಟಾಗಿಸಿ ವೃತ್ತಿಪರ ಶಿಕ್ಷಣದ ಬಗ್ಗೆ ಚರ್ಚಿಸಬೇಕು- ಎಸ್.ರುದ್ರೇಗೌಡ.

0

ಕೃತಕ ಬುದ್ಧಿಮತ್ತೆ, ಹಸಿರು ಪರಿವರ್ತನೆ ಮತ್ತು ಸಾಮಾಜಿಕ-ಭಾವನಾತ್ಮಕ ಬುದ್ಧಿಮತ್ತೆಯಂತಹ ಕ್ಷೇತ್ರಗಳಲ್ಲಿ ಯುವಕರು ಹೊಂದಿಕೊಳ್ಳಲು ಮತ್ತು ಮುನ್ನಡೆಸಲು ಪ್ರೋತ್ಸಾಹಿಸುವುದು ಅಗತ್ಯ ಪ್ರಸ್ತುತ ಕೌಶಲ್ಯಗಳು ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಉದ್ಯೋಗಗಳು ತಾಂತ್ರಿಕ ಅಡಚಣೆಯಿಂದಾಗಿ ರೂಪಾಂತರಗೊಳ್ಳುವ ನಿರೀಕ್ಷೆಯಿದೆ ಎಂದು ಹಿರಿಯ ಕೈಗಾರಿಕೋದ್ಯಮಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀ ಎಸ್ ರುದ್ರೇಗೌಡರು ರ ಹೇಳಿದರು

ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದಿಂದ ನಡೆದ ವಿಶ್ವ ಯುವ ಕೌಶಲ್ಯ ದಿನ 2026 ಪ್ರಯುಕ್ತ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಕಾರ್ಯಕ್ರಮದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಜಾಗೃತಿ ದಿನಾಚರಣೆಯಲ್ಲಿ ಮಾತನಾಡಿ ಭವಿಷ್ಯದಲ್ಲಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ, ಸರ್ಕಾರಗಳು, ಶಿಕ್ಷಣತಜ್ಞರು, ಉದ್ಯೋಗದಾತರು ಮತ್ತು ಯುವಜನರನ್ನು ಒಟ್ಟುಗೂಡಿಸಿ ಸಮಗ್ರ ಮತ್ತು ಭವಿಷ್ಯಕ್ಕೆ ಸಿದ್ಧವಾದ ವೃತ್ತಿಪರ ಶಿಕ್ಷಣದ ಕುರಿತು ಚರ್ಚಿಸಬೇಕು ಸಾಂಪ್ರದಾಯಿಕ ಪದವಿ-ಕೇಂದ್ರಿತ ಶಿಕ್ಷಣ ಮಾದರಿಗಳನ್ನು ಎದುರಿಸಲು ಮತ್ತು ಜನಸಂಖ್ಯಾ ಲಾಭಾಂಶವನ್ನು ಅನ್ಲಾಕ್ ಮಾಡಲು “ಕೌಶಲ್ಯ-ಮೊದಲು” ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸುತ್ತ ಕೇಂದ್ರೀಕೃತವಾ ಅತ್ಯಗತ್ಯ ಎಂದು ಒತ್ತಿ ಹೇಳಿದರು.

ಸಂಘದ ಕಾರ್ಯದರ್ಶಿ ವಿಶ್ವೇಶ್ವರಯ್ಯ ಎಸ್ ರವರು ಪ್ರಾಸ್ತಾವಿಕ ನುಡಿಗಳಲ್ಲಿ ಶಿವಮೊಗ್ಗ ಹಾಗೂ ರಾಜ್ಯದ ಇತರೆ ಎರಡನೇ ಹಂತ ಮೂರನೇ ಹಂತದ ನಗರಗಳಲ್ಲಿ ಅಗತ್ಯವಾಗಿ ಮಾರುಕಟ್ಟೆ ವ್ಯವಸ್ಥೆ ಮಾಡಲು ಪ್ರೇಡ್ ಸೆಂಟರ್ ಅಗತ್ಯವಾಗಿ ಬೇಕಾಗುತ್ತದೆ ಎಂದು ಸಭೆಗೆ ತಿಳಿಸಿ ಮನವಿಯನ್ನು ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ರವರಿಗೆ ನೀಡಿದರು.

ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಆರ್ ಗಣೇಶ್ ಅವರು ಕೈಗಾರಿಕಾ ಸಂಘದ ಮನವಿಯನ್ನು ಸ್ವೀಕರಿಸಿ ಮಾತನಾಡಿ, ಜಿಲ್ಲಾ ಕೈಗಾರಿಕ ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಕೈಗಾರಿಕಾ ಸಂಘದ ಅಧ್ಯಕ್ಷರು ಡಾಕ್ಟರ್ ಜೋಯಿಸ್ ರಾಮಾಚಾರಿ ಮಾತನಾಡಿ ನಮ್ಮ ಸಂಘವು ಕಳೆದ 40 ವರ್ಷಗಳಿಂದ ನಿರಂತರ ಸೇವೆ ನೀಡಿ ಮುಂದೆ ಈಗ ಕಾರ್ಯನಿರ್ವಹಿಸುತ್ತಿರುವ ಜಾಗದಲ್ಲಿ ಬೃಹತ್ ಟ್ರೇಡ್ ಸೆಂಟರ್ ಮಾಡಲು ಸಂಕಲ್ಪ ಮಾಡಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ ಎಂ ಸುರೇಶ್, ಖಜಾಂಚಿ ಆರ್. ಮನೋಹರ ವಿವಿಧ ಕೈಗಾರಿಕಾ ಹೊಸಹಾತುಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು ಕಾರ್ಯಕ್ರಮವನ್ನು ಸಂಘದ ಖಜಾಂಚಿಗಳಾದ ಹೆಚ್ ಬಿ ರಮೇಶ್ ಬಾಬುರವರು ನಡೆಸಿಕೊಟ್ಟರು ಸ್ವಾಗತವನ್ನು ಭದ್ರಾವತಿ ಪ್ರಕಾಶ್ ರವರು ಮಾಡಿದರು,ವಂದನಾರ್ಪಣೆಯನ್ನು ಎಸ್ ಜಿ ಎಂ ಟೆಕ್ನಾಲಜೀಸ್ ಪ್ರಕಾಶ್ ರವರು ಮಾಡಿದರು.

ಜುಲೈ18. ಗೋಪಾಳದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣೆ ಶಿಬಿರ

0

ಶಿವಮೊಗ್ಗ ನಗರದ ಗೋಪಾಳದಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ಆವರಣದಲ್ಲಿ ಜುಲೈ 18ರ ಶನಿವಾರದಂದು ಉಚಿತ ಮೂಳೆ ಸಾಂದ್ರತೆ (Bone Mineral Density – BMD) ಪರೀಕ್ಷೆ ಹಾಗೂ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ನೋಂದಣಿ, ಬಿ.ಎಂ.ಡಿ ಪರೀಕ್ಷೆ ಮತ್ತು ವೈದ್ಯರ ತಪಾಸಣೆ ಸಂಪೂರ್ಣ ಉಚಿತವಾಗಿರುತ್ತದೆ.

ಖ್ಯಾತ ಮೂಳೆರೋಗ ತಜ್ಞರಾದ ಡಾ. ಚೇತನ್ ಎಂ.ಎಲ್ ಅವರು ರೋಗಿಗಳಿಗೆ ಉಚಿತ ತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ದೀರ್ಘಕಾಲದ ಮೊಣಕಾಲು ಮತ್ತು ಸೊಂಟದ ನೋವು, ಕೀಲು ನೋವು, ಮೆಟ್ಟಿಲು ಹತ್ತಲು ಮತ್ತು ಇಳಿಯಲು ಕಷ್ಟಪಡುತ್ತಿರುವವರು, ಮೂಳೆ ಸವೆತ ಅಥವಾ ಮೂಳೆಯ ಸಾಂದ್ರತೆ ಕಡಿಮೆಯಾಗಿರುವ ಸಮಸ್ಯೆಯಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ನೋಂದಾಯಿಸಿಕೊಂಡು ಇದರ ಸದುಪಯೋಗ ಪಡಿಸಿಕೊಳ್ಳಬಹುದು.

ವಿಶೇಷವಾಗಿ ಮಹಿಳೆಯರು ಮತ್ತು ವೃದ್ಧರಲ್ಲಿ ಮೂಳೆಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಆಸ್ಟಿಯೊಪೊರೋಸಿಸ್ನಂತಹ (Osteoporosis) ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆಹಚ್ಚುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ.

ಶಿಬಿರದಲ್ಲಿ ಪಾಲ್ಗೊಳ್ಳಲು ಆಸಕ್ತಿಯುಳ್ಳವರು ನೊಂದಣಿ ಕಡ್ಡಾಯ, ಹೆಚ್ಚಿನ ಮಾಹಿತಿಗಾಗಿ ‎+91 9108243454 ಅನ್ನು ಸಂಪರ್ಕಿಸಬಹುದಾಗಿದೆ.

ಶಿವಮೊಗ್ಗ ನ್ಯೂಮಂಡ್ಲಿ ಪೇಪರ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ

0

ಶಿವಮೊಗ್ಗ ನಗರದ ನ್ಯೂ ಮಂಡ್ಲಿ ಪ್ರದೇಶದಲ್ಲಿರುವ ಪೇಪರ್ ಕಾರ್ಖಾನೆಯಲ್ಲಿ ಇಂದು ಬೆಂಕಿ ಅವಘಡ ಸಂಭವಿಸಿದೆ.

ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಕಾರ್ಖಾನೆಯಲ್ಲಿ ಸಂಗ್ರಹಿಸಲಾಗಿದ್ದ ಪೇಪರ್ ರೋಲ್‌ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.

ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು.

ಈ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪೇಪರ್ ಬೆಂಕಿಗೆ ಆಹುತಿಯಾಗಿರುವುದಾಗಿ ಅಂದಾಜಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ಈವರೆಗೆ ಮಾಹಿತಿ ಲಭ್ಯವಾಗಿಲ್ಲ.

ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.