Monday, August 3, 2026
Monday, August 3, 2026
Home Blog Page 21

ಯಕ್ಷಗಾನದ ಸೊಗಡಿನಲ್ಲಿ ಸಾರ್ಥಕ ಪ್ರದರ್ಶನಗೊಂಡ” ಕಿತ್ತೂರು ರಾಣಿ ಚನ್ನಮ್ಮ” ಚರಿತ್ರೆಯ ಪ್ರಸಂಗ.

0

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಸಂಗೀತ ನಾಟಕ ಅಕಾಡೆಮಿಯು ‘ವಂದೇ ಮಾತರಂ’ ರಚನೆಯ 150ನೇ ವರ್ಷದ ಸ್ಮರಣಾರ್ಥ ಹಾಗೂ ಮಹಾಕವಿ ಕಾಳಿದಾಸ ಜಯಂತಿಯ ಅಂಗವಾಗಿ ಜುಲೈ 15ರಂದು ದೇಶಾದ್ಯಂತ ‘ರಾಷ್ಟ್ರೀಯ ರಂಗಮಹೋತ್ಸವ’ವನ್ನು ಆಯೋಜಿಸಿತು. ಈ ಮಹೋತ್ಸವದಲ್ಲಿ ಭಾರತದಾದ್ಯಂತ 150ಕ್ಕೂ ಹೆಚ್ಚು ವೇದಿಕೆಗಳಲ್ಲಿ, 150ಕ್ಕೂ ಅಧಿಕ ರಂಗತಂಡಗಳು, 39ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಸುಮಾರು ನಾಲ್ಕು ಸಾವಿರ ಕಲಾವಿದರ ಭಾಗವಹಿಸುವಿಕೆಯಿಂದ ನಾಟಕ ಪ್ರದರ್ಶನಗಳು ನಡೆಯುವ ಮೂಲಕ ಭಾರತೀಯ ರಂಗಪರಂಪರೆಯ ವೈವಿಧ್ಯವನ್ನು ಅನಾವರಣಗೊಳಿಸಲಾಯಿತು. ಈ ಪ್ರಯುಕ್ತ ಬೆಂಗಳೂರಿನ ಎನ್.ಆರ್. ಕಾಲೋನಿಯ ಸಿ. ಅಶ್ವತ್ಥ್ ಕಲಾಮಂದಿರದಲ್ಲಿ ಯಕ್ಷಕಲಾ ಅಕಾಡೆಮಿ (ರಿ.) ವತಿಯಿಂದ ‘ರಾಣಿ ಕಿತ್ತೂರು ಚೆನ್ನಮ್ಮ’ ಯಕ್ಷಗಾನ ಪ್ರಸಂಗವನ್ನು ಸಂಜೆ 6 ಗಂಟೆಗೆ ಪ್ರದರ್ಶಿಸಲಾಯಿತು. ಹಿರಿಯ ಯಕ್ಷಕವಿ ಶ್ರೀಧರ್ ಡಿ.ಎಸ್. ಅವರ ರಚನೆಯಾದ ಈ ಪ್ರಸಂಗವನ್ನು ಯುವ ನಿರ್ದೇಶಕಿ ಚಿಕ್ಕಲಾ ಕೆ. ತುಂಗ ಅವರ ಸಮರ್ಥ ನಿರ್ದೇಶನದಲ್ಲಿ ಯಶಸ್ವಿಯಾಗಿ ರಂಗಕ್ಕೆ ತರಲಾಯಿತು.

ಪ್ರಸಂಗವು ಕಿತ್ತೂರಿನ ಅರಸ ಮಲ್ಲಸರ್ಜ ದೇಸಾಯಿಯ ಕಥಾನಕದಿಂದ ಆರಂಭಗೊಳ್ಳುತ್ತದೆ. ಬೇಟೆಯ ಸಂದರ್ಭದಲ್ಲಿ ಮಲ್ಲಸರ್ಜರನ್ನು ಭೇಟಿಯಾಗುವ ಚೆನ್ನಮ್ಮ, ಅವರನ್ನು ತನ್ನ ತವರು ಕಾಕತಿಗೆ ಆಹ್ವಾನಿಸುತ್ತಾಳೆ. ತಂದೆ ಧೂಳಪ್ಪ ದೇಸಾಯಿಗೆ ಮಲ್ಲಸರ್ಜರನ್ನು ಪರಿಚಯಿಸಿ, ಭವಿಷ್ಯದಲ್ಲಿ ಅವರನ್ನೇ ವಿವಾಹವಾಗುವ ತನ್ನ ಆಶಯವನ್ನು ವ್ಯಕ್ತಪಡಿಸುತ್ತಾಳೆ. ಮಗಳ ಇಚ್ಛೆಗೆ ಸಮ್ಮತಿಸಿದ ಧೂಳಪ್ಪ ದೇಸಾಯಿ ಮಲ್ಲಸರ್ಜರೊಂದಿಗೆ ವಿವಾಹಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಮಂತ್ರಿ ಗುರುಸಿದ್ದಪ್ಪನ ಸಲಹೆಯ ಮೇರೆಗೆ ಮಲ್ಲಸರ್ಜರು ಚೆನ್ನಮ್ಮಳನ್ನು ವಿವಾಹವಾಗುತ್ತಾರೆ. ಸವತಿಯಾದರೂ ವಿಶಾಲ ಹೃದಯದ ರುದ್ರಮ್ಮ (ರುದ್ರಾಂಬೆ), ಚೆನ್ನಮ್ಮಳನ್ನು ಸಂತೋಷದಿಂದ ಅರಮನೆಗೆ ಬರಮಾಡಿಕೊಂಡು, ತನ್ನ ಪುತ್ರ ಶಿವಲಿಂಗ ರುದ್ರಸರ್ಜನ ಜವಾಬ್ದಾರಿಯನ್ನು ಅವಳಿಗೆ ವಹಿಸುತ್ತಾಳೆ. ಮುಂದೆ ಮರಾಠ ದೊರೆ ಬಾಜೀರಾಯನ ಕುತಂತ್ರದಿಂದ ಮಲ್ಲಸರ್ಜರು ಮರಣಹೊಂದುತ್ತಾರೆ. ನಂತರ ಶಿವಲಿಂಗ ರುದ್ರಸರ್ಜನಿಗೆ ಚೆನ್ನಮ್ಮ ಪಟ್ಟಾಭಿಷೇಕ ನೆರವೇರಿಸುತ್ತಾಳೆ. ಆದರೆ ನಿಗೂಢ ಕಾಯಿಲೆಗೆ ತುತ್ತಾದ ಯುವರಾಜನು ಅಕಾಲಿಕವಾಗಿ ನಿಧನ ಹೊಂದುತ್ತಾನೆ.

ಬ್ರಿಟಿಷರ ‘ದತ್ತು ಪುತ್ರನಿಗೆ ಆಡಳಿತದ ಹಕ್ಕಿಲ್ಲ’ ಎಂಬ ನೀತಿಯನ್ನು ಧಿಕ್ಕರಿಸಿ ಚೆನ್ನಮ್ಮ ದತ್ತು ಪುತ್ರನನ್ನು ಉತ್ತರಾಧಿಕಾರಿಯಾಗಿ ಘೋಷಿಸುತ್ತಾಳೆ. ಈ ವಿಷಯವನ್ನು ಸಂಸ್ಥಾನದ ದ್ರೋಹಿಗಳಾದ ಮಲ್ಲಪ್ಪ ಶೆಟ್ಟಿ ಹಾಗೂ ವೆಂಕಟರಾಯ ಧಾರವಾಡದ ಕಲೆಕ್ಟರ್ ಥ್ಯಾಕರೆಗೆ ತಿಳಿಸುತ್ತಾರೆ. ಕಿತ್ತೂರಿನ ಮೇಲೆ ದಂಡೆತ್ತಿ ಬಂದ ಥ್ಯಾಕರೆಯನ್ನು ಚೆನ್ನಮ್ಮಳ ನಿಷ್ಠಾವಂತ ಸೇನಾನಿ ಬಾಳಪ್ಪ ಸಂಹರಿಸುತ್ತಾನೆ. ಇದರಿಂದ ಕೋಪಗೊಂಡ ಬ್ರಿಟಿಷ್ ಅಧಿಕಾರಿ ಚಾಪ್ಲಿನ್, ಹೆಚ್ಚಿನ ಸೈನ್ಯದೊಂದಿಗೆ ದಾಳಿ ನಡೆಸಿ, ಮಲ್ಲಪ್ಪ ಶೆಟ್ಟಿ ಮತ್ತು ವೆಂಕಟರಾಯರ ದ್ರೋಹದ ನೆರವಿನಿಂದ ಚೆನ್ನಮ್ಮಳನ್ನು ವಂಚನೆಯ ಮೂಲಕ ಸೆರೆಹಿಡಿಯುತ್ತಾನೆ.
ಇತ್ತ ಸಂಗೊಳ್ಳಿ ರಾಯಣ್ಣ, ಚೆನ್ನಮ್ಮಳ ಆಶೀರ್ವಾದ ಪಡೆದು ಯುವಕರನ್ನು ಸಂಘಟಿಸಿ, ಛತ್ರಪತಿ ಶಿವಾಜಿಯವರ ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸಿ ಬ್ರಿಟಿಷರ ವಿರುದ್ಧ ಹೋರಾಟ ಮುಂದುವರಿಸುತ್ತಾನೆ. ರಾಯಣ್ಣನ ಶೌರ್ಯದಿಂದ ಕಂಗೆಟ್ಟ ಚಾಪ್ಲಿನ್, ರಾಯಣ್ಣನ ಮಾವ ಲಕ್ಕಪ್ಪನ ಸಹಾಯದಿಂದ ಸ್ನಾನ ಮಾಡುತ್ತಿದ್ದ ವೇಳೆ ಅವರನ್ನು ಮೋಸದಿಂದ ಬಂಧಿಸಿ ಸೆರೆಮನೆಗೆ ಕಳುಹಿಸುತ್ತಾನೆ. ಈ ಸುದ್ದಿ ತಿಳಿದ ಚೆನ್ನಮ್ಮ, ಕಿತ್ತೂರಿನ ಸ್ವಾತಂತ್ರ್ಯದ ಆಶಾಕಿರಣ ಮಂಕಾಗಿರುವುದನ್ನು ಅರಿತು ತೀವ್ರ ದುಃಖದಿಂದ ಕೊನೆಯುಸಿರೆಳೆಯುತ್ತಾಳೆ. ಅಲ್ಲಿಗೆ ‘ರಾಣಿ ಕಿತ್ತೂರು ಚೆನ್ನಮ್ಮ’ ಪ್ರಸಂಗವು ಅಂತ್ಯಗೊಳ್ಳುತ್ತದೆ.

ಪ್ರಸಂಗದಲ್ಲಿ ಚೆನ್ನಮ್ಮಳ ಪಾತ್ರವನ್ನು ನಿರ್ವಹಿಸಿದ ಕುಮಾರಿ ಪೂಜಾ ಆಚಾರ್ಯ ತಮ್ಮ ಪ್ರಭಾವಶಾಲಿ ಅಭಿನಯ, ಭಾವಪೂರ್ಣ ಸಂಭಾಷಣೆ ಹಾಗೂ ಸ್ವರದ ಏರಿಳಿತಗಳ ಮೂಲಕ ಪ್ರೇಕ್ಷಕರ ಮನಗೆದ್ದರು. ರಾಘವೇಂದ್ರ ಐತಾಳ್ ಮಲ್ಲಸರ್ಜನ ಪಾತ್ರಕ್ಕೆ ಸಮರ್ಪಕ ನ್ಯಾಯ ಒದಗಿಸಿದರೆ, ಅಭಿನವ ತುಂಗ ಸಂಗೊಳ್ಳಿ ರಾಯಣ್ಣನಾಗಿ ತಮ್ಮ ಚುರುಕಿನ ನೃತ್ಯ ಹಾಗೂ ರಂಗಸಾನ್ನಿಧ್ಯದಿಂದ ವಿಶೇಷ ಮೆಚ್ಚುಗೆ ಗಳಿಸಿದರು. ಪ್ರದರ್ಶನದ ಅಂತ್ಯದಲ್ಲಿ ಹದಿನಾರು ಕಲಾವಿದರು ‘ವಂದೇ ಮಾತರಂ’ ಗೀತೆಗೆ ನೀಡಿದ ಸಮೂಹಾಭಿನಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂತು. ರಾಷ್ಟ್ರಭಕ್ತಿ, ಇತಿಹಾಸ ಹಾಗೂ ಯಕ್ಷಗಾನದ ಸೊಗಡನ್ನು ಒಟ್ಟುಗೂಡಿಸಿದ ಈ ಪ್ರದರ್ಶನವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇಂತಹ ರಾಷ್ಟ್ರೀಯ ಮಟ್ಟದ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ ಸಂಗೀತ ನಾಟಕ ಅಕಾಡೆಮಿ ಹಾಗೂ ಪ್ರದರ್ಶನವನ್ನು ಸಮರ್ಥವಾಗಿ ರೂಪಿಸಿದ ಯಕ್ಷಕಲಾ ಅಕಾಡೆಮಿ (ರಿ.) ಅಭಿನಂದನಾರ್ಹವಾಗಿವೆ.

ಎಫ್.ಸಿ.ನವೀಕರಿಸದ ಆಟೋರಿಕ್ಷಾಗಳ ವಿರುದ್ಧ ಕಾನೂನು ರೀತ್ಯಾ ಕಠಿಣಕ್ರಮ- ಪ್ರಭುಲಿಂಗ ಕವಳಿಕಟ್ಟಿ

0

ಶಿವಮೊಗ್ಗ ನಗರದಲ್ಲಿ ಅರ್ಹತಾ ಪತ್ರ (ಎಫ್ ಸಿ) ನವೀಕರಿಸದೆ ನಿಯಮಬಾಹಿರವಾಗಿ ಸಂಚರಿಸುತ್ತಿರುವ ಆಟೋರಿಕ್ಷಾಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ದಿನಾಂಕ 15-07-2026 ರಂದು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ನಿರ್ದೇಶನ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ, ಅರ್ಹತಾ ಪತ್ರದ ಅವಧಿ ಮುಕ್ತಾಯಗೊಂಡಿರುವ ಆಟೋರಿಕ್ಷಾಗಳ ಚಾಲಕರು ಅಥವಾ ಮಾಲೀಕರು ತಕ್ಷಣವೇ ಸಂಬಂಧಪಟ್ಟ ಸಾರಿಗೆ ಕಛೇರಿಯಲ್ಲಿ ನಿಗದಿತ ಶುಲ್ಕವನ್ನು ಪಾವತಿಸಬೇಕಾಗಿ ವಿನಂತಿಸಲಾಗಿದೆ. ತದನಂತರ, ತಮ್ಮ ವಾಹನಗಳನ್ನು ಮಲವಗೊಪ್ಪದ ಡ್ರೈವಿಂಗ್ ಟ್ರ್ಯಾಕ್‌ನಲ್ಲಿ ಹಾಜರುಪಡಿಸಿ, ಅರ್ಹತಾ ಪತ್ರವನ್ನು ನವೀಕರಿಸಿಕೊಳ್ಳಲು ಸೂಚಿಸಲಾಗಿದೆ.

ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಕುಶಲಕರ್ಮಿಗಳಿಗಾಗಿಸರ್ಕಾರವು ನೀಡುತ್ತಿರುವ ಮೂಲಭೂತ ಸೌಕರ್ಯ,ಬ್ಯಾಂಕ್ ಸಾಲ, ಸಬ್ಸಿಡಿ, ತರಬೇತಿ, ಮತ್ತು ಮಾರುಕಟ್ಟೆ ಸೌಲಭ್ಯಗಳನ್ನ ಸೂಕ್ತ ಬಳಸಿಕೊಳ್ಳಿ- ಡಾ.ಪಿ.ನಾರಾಯಣ್.

0

ಘನತೆಯಿಂದ ಸಮಾಜದ ಒಳಿತಿಗಾಗಿ ದುಡಿಯುತ್ತಿರುವ ಕುಶಲಕರ್ಮಿಗಳ ಕರಕುಶಲ ಪರಂಪರೆಯನ್ನು ಉಳಿಸುವುದರ ಜೊತೆಗೆ, ಗ್ರಾಮೀಣ ಹಾಗೂ ಸಾಂಪ್ರದಾಯಿಕ ಕುಶಲಕರ್ಮಿಗಳ ಆದಾಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು ಅತಿ ಮುಖ್ಯವಾಗಿದೆ ಎಂದು ಎನ್ ಇ ಎಸ್ ಸಂಸ್ಥೆಯ ಜಂಟಿ ನಿರ್ದೇಶಕರಾದ ಡಾ.ಪಿ.ನಾರಾಯಣ್ ಹೇಳಿದರು.

ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಅಧೀನದ ಬೆಂಗಳೂರಿನ ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಜೆ.ಎನ್.ಎನ್.ಸಿ.ಇ ಕಾಲೇಜಿನ ಸಹಯೋಗದಲ್ಲಿ ಗುರುವಾರ ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವಕರ್ಮ ಯೋಜನೆಯಡಿ ಬ್ರ‍್ಯಾಂಡಿಂಗ್ ಮತ್ತು ಮಾರ್ಕೆಟಿಂಗ್’ ಕುರಿತಾದ ಒಂದು ದಿನದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ಕರಕುಶಲ ವೃತ್ತಿದಾರರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕೌಶಲ್ಯಕ್ಕೆ ಅತಿ ಹೆಚ್ಚಿನ ಮಹತ್ವ ಇದೆ. ಹಿಂದೆಲ್ಲ ಕೌಶಲ್ಯ ವಂಶಪಾರಂಪರ್ಯವಾಗಿ ಬರುತ್ತಿತ್ತು. ಈಗ ಹಾಗಿಲ್ಲ. ಕೌಶಲ್ಯದಲ್ಲ್ಲಿ ಉತ್ಸುಕತೆ ಇರುವವರಿಗೆ ಕಲಿಯುವ, ಅದರಲ್ಲಿ ತೊಡಗಿಸಿಕೊಳ್ಳುವ ವ್ಯವಸ್ಥೆ ಇದೆ. ಸರ್ಕಾರ ಕುಶಲಕರ್ಮಿಗಳಿಗಾಗಿ ಮೂಲಭೂತ ವ್ಯವಸ್ಥೆ, ಬ್ಯಾಂಕ್ ಸಾಲ, ಸಬ್ಸಿಡಿ ಮೂಲಕ ಆರ್ಥಿಕ ಸಬಲೀಕರಣ, ತರಬೇತಿ ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಸಹ ನೀಡುತ್ತಿದ್ದು ಕುಶಲಕರ್ಮಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜೆಎನ್‌ಎನ್‌ಸಿಇ ಕಾಲೇಜು ಆರಂಭವಾಗಿ 46 ವರ್ಷಗಳಾಗಿದ್ದು ಅನೇಕ ಅತ್ಯುತ್ತಮ ಇಂಜಿನಿಯರ್‌ಗಳನ್ನು ಸೃಷ್ಟಿಸುತ್ತಾ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ವಿದ್ಯೆ ಜೊತೆ ವೃತ್ತಿ ಕೌಶಲ್ಯ ನೀಡಲು ಸಹ ಸಂಸ್ಥೆ ಮುಂದಾಗಿದೆ.

ವಿದ್ಯೆಯನ್ನು ಅನುಷ್ಠಾನಗೊಳಿಸಲು ಕೌಶಲ್ಯ ಬೇಕೇಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಜೋಡಿಸಿ ನಿಮ್ಮನ್ನು ವಿಶ್ವಕರ್ಮಿಗಳನ್ನಾಗಿ ಮಾಡಿದೆ. ತಮ್ಮ ಕಾಯಕದಿಂದ ಸಮಾಜ ಸುಸ್ಥಿತಿಯಲ್ಲಿಡುವ ಕೆಲಸ ಮಾಡುತ್ತಿರುವ ಕುಶಲಕರ್ಮಿಗಳು ಯೋಜನೆಗಳ ಪ್ರಯೋಜನ ಪಡೆದು ಅಭಿವೃದ್ದಿ ಸಾಧಿಸಬೇಕೆಂದು ಆಶಿಸಿದರು.

ಎಂಎಸ್‌ಎಂಇ ಡಿಎಫ್‌ಓ, ಸಹಾಯಕ ನಿರ್ದೇಶಕರಾದ ಶಿವಕುಮಾರ್ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ರೂ.3 ಲಕ್ಷದವರೆಗೆ ಶೇ.5 ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರಕಲಿದೆ. ಪಿಎಂಇಜಿಪಿ ಯೋಜನೆಯಡಿ ಶೇ.15 ರಿಂದ 30 ಸಬ್ಸಿಡಿಯೊಂದಿಗೆ ರೂ.50 ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯಲಿದೆ. ಬ್ಯಾಂಕುಗಳ ತಮ್ಮ ಕೌಶಲ್ಯದ ಆಧಾರದ ಮೇಲೆ ಸಾಲ ನೀಡಲಿದ್ದು, ಕೌಶಲ್ಯವನ್ನು ಅತ್ಯುತ್ತಮವಾಗಿ ಬಳಕೆ ಮಾಡಿಕೊಂಡು ಸಾಲ ಪಡೆದ ಉದ್ದೇಶಕ್ಕಾಗಿಯೇ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು.
ಈ ಯೋಜನೆಯಡಿ ನೊಂದಾಯಿತರಾದ ಸಾಂಪ್ರದಾಯಿಕ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಕೇವಲ ಸ್ಥಳೀಯ ಮಾರುಕಟ್ಟೆಗೆ ಸೀಮಿತಗೊಳಿಸದೆ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಪರಿಚಯಿಸಿ ಹೆಚ್ಚಿನ ಆದಾಯ ಗಳಿಸುವಂತೆ ಮಾಡುವುದು ಈ ತರಬೇತಿಯ ಪ್ರಮುಖ ಉದ್ದೇಶವಾಗಿದೆ. ಈ ಕಾರ್ಯಕ್ರಮದ ಮೂಲಕ ಕುಶಲಕರ್ಮಿಗಳಿಗೆ ಮಾರುಕಟ್ಟೆ ತಂತ್ರಗಳು, ಬ್ರ‍್ಯಾಂಡಿಂಗ್, ಪ್ಯಾಕೇಜಿಂಗ್, ಡಿಜಿಟಲ್ ಮಾರ್ಕೆಟಿಂಗ್ ಹಾಗೂ ರಫ್ತು ಪ್ರಕ್ರಿಯೆಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ಸುರೇಶ್ ಕುಮಾರ್ ಮಾತನಾಡಿ, ಕುಶಲಕರ್ಮಿಗಳಿಗೆ ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜಿಂಗ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಂದು ಅನೇಕ ಕುಶಲಕರ್ಮಿಗಳು ತರಬೇತಿ ಪಡೆದು ಕುಶಲಕರ್ಮಿ ಎಂಬ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಹಲವರು ಬ್ಯಾಂಕ್ ಸಾಲ ಪಡೆಯುವುದು ಕಷ್ಟವೆಂದು ದೂರುತ್ತಿದ್ದು, ಕುಶಲಕರ್ಮಿಗಳು ತಮ್ಮ ಕೌಶಲ್ಯ ಕುರಿತು ಯೋಜನಾ ವರದಿಯನ್ನು ತಯಾರಿಸಿಕೊಂಡು ಬ್ಯಾಂಕ್‌ನವರಿಗೆ ಮಾಹಿತಿ ನೀಡಿದರೆ, ಬ್ಯಾಂಕ್ ಸಾಲ ದೊರೆಯುವುದು ಸುಲಭವಾಗುತ್ತದೆ.
18 ವರ್ಷ ಮೇಲ್ಪಟ್ಟವರು ಪಿಎಂಇಜಿಪಿ ಯೋಜನೆಯಡಿ ಉತ್ಪಾದನೆ ಮತ್ತು ಸೇವಾ ವಲಯದಡಿ ಸಾಲ ಸೌಲಭ್ಯ ಪಡೆಯಬಹುದು. ನಗರ ಪ್ರದೇಶಕ್ಕೆ ಶೇ.15 ಮತ್ತು ಗ್ರಾಮೀಣ ಭಾಗದ ಫಲಾನುಭವಿಗಳಿಗೆ ಶೇ.25 ಹಾಗೂ ಎಸ್‌ಸಿ, ಎಸ್‌ಟಿ, ಮಹಿಳೆಯರಿಗೆ ಶೇ.35 ಸಬ್ಸಿಡಿಯಲ್ಲಿ ಸಾಲ ಸೌಲಭ್ಯ ಸಿಗಲಿದೆ ಎಂದರು.

ನಮ್ಮ ಸ್ಥಳೀಯ ಸಣ್ಣ ಸಣ್ಣ ಉದ್ಯಮಿಗಳು ಸಾಕಷ್ಟು ಉತ್ತಮ ಉತ್ಪನ್ನಗಳನ್ನು ತಯಾರಿಸುತ್ತಾ ಸಾಧನೆ ಮಾಡಿದ್ದಾರೆ. ಉತ್ತಮ ಮಾರುಕಟ್ಟೆ ಮೌಲ್ಯ ಸಿಗಲು ಆಕರ್ಷಕ ಪ್ಯಾಕೇಜಿಂಗ್, ಲೇಬಲಿಂಗ್ ಮತ್ತು ಸ್ವಂತ ಬ್ರ‍್ಯಾಂಡ್ ನಿರ್ಮಾಣ ಮತ್ತು ಉತ್ಪನ್ನ ರಫ್ತು ಮಾಡುವ ಬಗ್ಗೆ ಸಾಕಷ್ಟು ಮಾಹಿತಿ ಬೇಕಿದ್ದು, ಈ ತರಬೇತಿಯಲ್ಲಿ ನೀಡಲಾಗುವುದು ಎಂದರು.
ಜೆಎನ್‌ಎನ್‌ಸಿಇ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿ, ವಿಶ್ವಕರ್ಮ ಉತ್ಪನ್ನಗಳ ರಫ್ತು ಪ್ರೋತ್ಸಾಹ ಮತ್ತು ಮಾರುಕಟ್ಟೆ ವಿಸ್ತರಣೆಗೆ ಈ ತರಬೇತಿ ಕಾರ್ಯಕ್ರಮವು ಅತ್ಯಂತ ಸಹಕಾರಿಯಾಗಲಿದ್ದು, ಬ್ರ್ಯಾಂಡಿಂಗ್ ಮತ್ತು ಪ್ಯಾಕೇಜಿಂಗ್ ಬಗ್ಗೆ ಉತ್ತಮ ಮಾಹಿತಿ ಲಭಿಸಲಿದೆ. ಉತ್ಪಾದಕರು, ಉದ್ಯಮಿಗಳು ತಮ್ಮ ಉತ್ಪನ್ನಗಳಿಂದ ಲಾಭ ಪಡೆಯುವುದು ಹೇಗೆ ಮತ್ತು ಇತರರಿಗಿಂತ ಹೇಗೆ ಭಿನ್ನವಾಗಿದ್ದೇನೆ ಎಂಬುದನ್ನು ಕಂಡುಕೊಳ್ಳಬೇಕು.
ಇಲ್ಲಿನ ಅನೇಕ ಸ್ಥಳೀಯ ಕೈಗಾರಿಕೆಗಳು ಅತ್ಯುತ್ತಮ ಸಾಧನೆ ಮಾಡಿವೆ. ಅತ್ಯಂತ ಸಣ್ಣ ಉತ್ಪನ್ನವಾದ ಸೇಫ್ಟಿಪಿನ್ ಹೆಚ್ಚಿನ ರಾಯಲ್ಟಿ ಪಡೆಯುತ್ತಿರುವ ಉತ್ಪನ್ನವಾಗಿದೆ. ಆದ್ದರಿಂದ ನನ್ನ ಉತ್ಪನ್ನ ಸಣ್ಣದು, ಮಹತ್ವದ್ದಲ್ಲವೆಂದು ಯೋಚಿಸಬಾರದು, ಶ್ರದ್ದೆಯಿಂದ ಉತ್ಪನ್ನಗಳನ್ನು ತಯಾರಿಸಬೇಕು ಎಂದು ಸಲಹೆ ನೀಡಿದರು.

ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕುಶಲಕರ್ಮಿಗಳು ಸ್ವಂತ ಉದ್ಯೋಗದ ಮೂಲಕ ಸಬಲರಾಗಬೇಕೆಂಬ ಉದ್ದೇಶದಿಂದ ಈ ತರಬೇತಿಯನ್ನು ಆಯೋಜಿಸಲಾಗಿದ್ದು, ಸರ್ಕಾರದ ಸವಲತ್ತುಗಳನ್ನು ಪಡೆಯುವ ಬಗ್ಗೆ ಮಾಹಿತಿ ನೀಡಲಾಗುವುದು. ಈ ಯೋಜನೆಯಡಿ ನೋಂದಣಿಯಾಗಿ ತರಬೇತಿ ಪಡೆದು, ಪರೀಕ್ಷೆಯ ಮೂಲಕ ಅರ್ಹತೆ ಪಡೆದ ನಂತರ ಕಡಿಮೆ ಬಡ್ಡಿ ದರದಲ್ಲಿ ರೂ. 2 ರಿಂದ 3 ಲಕ್ಷ ಸಾಲ ಸೌಲಭ್ಯ, 4 ಸಾವಿರ ಸ್ಟೈಫಂಡ್ ಮತ್ತು ರೂ.15 ಸಾವಿರ ಮೌಲ್ಯದ ಟೂಲ್ ಕಿಟ್ ನೀಡಿ ನಂತರ ಮುಂದುವರೆದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಧ ಕ್ಷೇತ್ರಗಳ ತಜ್ಞರು ಸಾಂಪ್ರದಾಯಿಕ ವೃತ್ತಿಗಳನ್ನು ಇಂದಿನ ಆಧುನಿಕ ಮಾರುಕಟ್ಟೆಗೆ ತಕ್ಕಂತೆ ಹೇಗೆ ಬದಲಾಯಿಸಿಕೊಳ್ಳಬೇಕು ಎಂಬುದರ ಕುರಿತು ಮಹತ್ವದ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮೊದಲ ಹಂತದ ತರಬೇತಿ ಪಡೆದ ಕುಶಲಕರ್ಮಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯ್ಸ್ ರಾಮಾಚಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂಎಸ್‌ಎಂಇ ಡಿಎಫ್‌ಓ, ಸಹಾಯಕ ನಿರ್ದೇಶಕರಾದ ಮರೋತಿ ಸುಬೆ, ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ, ಬ್ಯಾಂಕ್ ಅಧಿಕಾರಿಗಳು, ಕುಶಲಕರ್ಮಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

ರೇಷ್ಮೆ ಇಲಾಖೆಯ ವಿವಿಧ ಯೋಜನೆ : ಸಹಾಯಧನ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನ

0

ರೇಷ್ಮೆ ಇಲಾಖೆ ವತಿಯಿಂದ 2026-27ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಗಳಡಿ ರೇಷ್ಮೆ ಬೆಳೆಗಾರರಿಗೆ ಹಾಗೂ ರೇಷ್ಮೆ ಕೃಷಿಯಲ್ಲಿ ಆಸಕ್ತಿಯುಳ್ಳ ರೈತರಿಗೆ
ವಿವಿಧ ಸಹಾಯಧನ ಪಡೆಯಲು ಅರ್ಹ ರೈತರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಹೊಸದಾಗಿ ಹಿಪ್ಪುನೇರಳೆ ನಾಟಿ ಮಾಡಲು ಬಯಸುವ ರೈತರಿಗೆ ಆರ್ಥಿಕ ನೆರವು ಮತ್ತು ಸ್ವಂತ ನರ್ಸರಿ ಸ್ಥಾಪಿಸಲು ಇಚ್ಛಿಸುವ ಆಸಕ್ತರಿಗೆ ಸಹಾಯಧನ ನೀಡಲಾಗುವುದು.
ಅರ್ಜಿ ಸಲ್ಲಿಸಲು
ಅರ್ಜಿ ಸಲ್ಲಿಸಲು ಆಗಸ್ಟ್ 14‌
ಕೊನೆಯ ದಿನವಾಗಿದ್ದು ಆಸಕ್ತ ರೈತರು ನಿಗದಿತ ಕೊನೆಯ ದಿನಾಂಕದೊಳಗಾಗಿ ಅಧಿಕೃತ ವೆಬ್‌ಸೈಟ್ www.shivamogga.nic.in
ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ.
ಯೋಜನೆಯ ನಿಯಮಗಳು, ಅರ್ಹತೆ ಹಾಗೂ ಅಗತ್ಯ ದಾಖಲಾತಿಗಳ ಕುರಿತು ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ರೇಷ್ಮೆ ಉಪನಿರ್ದೇಶಕರ ಕಚೇರಿ, 100 ಅಡಿರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ ದೂ.ಸಂ.:08182-184637 ನ್ನು ಸಂಪರ್ಕಿಸಬಹುದೆಂದು ರೇಷ್ಮೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ವಿತರಕರ ಸಂಘಕ್ಕೆ ಅಧ್ಯಕ್ಷರಾಗಿ ಎಂ.ಸಿ.ದೇವರಾಜ್ ಪುನರಾಯ್ಕೆ

0

ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ಅಧ್ಯಕ್ಷರಾಗಿ ಎಂ.ಸಿ.ದೇವರಾಜ್ ಅವರು ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಸಂಘದ ನೂತನ ಕಾರ್ಯದರ್ಶಿಯಾಗಿ ಕೆ.ಕೆ.ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲಾ ವಿತರಕರ ಸಂಘದ ನೂತನ ಆಡಳಿತ ಮಂಡಳಿಯು ಇತ್ತೀಚೆಗೆ ಏರ್ಪಡಿಸಿದ್ದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸಂಘದ ಅಧ್ಯಕ್ಷರಾಗಿ ಎಂ.ಸಿ.ದೇವರಾಜ, ಗೌರವ ಅಧ್ಯಕ್ಷರಾಗಿ ಬಿ.ಗೋಪಿನಾಥ್, ಐಪಿಪಿ ಶಿವರಾಜ್ ಉಡುಗಣಿ, ಉಪಾಧ್ಯಕ್ಷರಾಗಿ ಬದ್ರಿನಾಥ್, ಕಾರ್ಯದರ್ಶಿಯಾಗಿ ಕೆ.ಕೆ.ಚಂದ್ರಶೇಖರ್, ಗೌರವ ಕಾರ್ಯದರ್ಶಿಯಾಗಿ ಕೆ.ಎಸ್.ಶ್ರೀನಿವಾಸ್, ಸಹ ಕಾರ್ಯದರ್ಶಿಯಾಗಿ ಕೆ.ಮಧು, ಖಜಾಂಚಿಯಾಗಿ ಎಂ.ವೈ.ರಾಘವೇಂದ್ರ ಆಯ್ಕೆಯಾಗಿದ್ದಾರೆ.
ವಿಶೇಷ ಆಹ್ವಾನಿತರಾಗಿ ಹಾಜಿ ಸುಲೇಮಾನ್ ಅವರನ್ನು ನೇಮಕ ಮಾಡಲಾಗಿದೆ. ನಿರ್ದೇಶಕರಾಗಿ ಹನುಮಂತಪ್ಪ, ಗಿರೀಶ್ ಒಡೆಯರ್, ಸುರೇಂದ್ರನಾಥ್, ಮಹಮ್ಮದ್ ಇಕ್ಬಾಲ್, ಎಸ್.ಎನ್. ಶ್ರೀನಾಗ್, ಮಹಾರುದ್ರಪ್ಪ, ಕೃಷ್ಣಮೂರ್ತಿ, ರಾಜೇಶ್, ಎನ್.ಡಿ.ಸುನಿಲ್ ಹಾಗೂ ವಿಕಾಸ್ ಆಯ್ಕೆಯಾಗಿದ್ದಾರೆ.
ನೂತನ ಆಡಳಿತ ಮಂಡಳಿಯು ಜಿಲ್ಲೆಯ ವಿತರಕರ ಹಿತಾಸಕ್ತಿ ಕಾಪಾಡುವುದು, ಸದಸ್ಯರಿಗೆ ಅಗತ್ಯ ಮಾರ್ಗದರ್ಶನ ನೀಡುವುದು, ಸಂಘವನ್ನು ಮತ್ತಷ್ಟು ಸದೃಢಗೊಳಿಸುವುದು ಹಾಗೂ ವಿತರಕರ ಸಮಸ್ಯೆಗಳ ಪರಿಹಾರಕ್ಕಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದೆ.

ವಸತಿ ಶಾಲೆಗಳ ಮಹಿಳಾ ಕೇರ್ ಟೇಕರ್ ಗಳ ಹುದ್ದೆಗೆ ತಾತ್ಕಾಲಿಕ ಭರ್ತಿಗಾಗಿ ಅರ್ಜಿ ಆಹ್ವಾನ

0

ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಶ್ರೀ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ವಸತಿ ಶಾಲೆಗಳಲ್ಲಿ ಖಾಲಿ ಇರುವ ಮಹಿಳಾ ಕೇರ್‌ಟೇಕರ್ ಹುದ್ದೆಗಳ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
2026-27ನೇ ಸಾಲಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ವಸತಿಶಾಲೆ-ಹಕ್ಕಿಪಿಕ್ಕಿ ಕ್ಯಾಂಪ್, ಸದಾಶಿವಪುರ ಶಿವಮೊಗ್ಗ ತಾಲೂಕು ಹಾಗೂ ಹಿರೇಮನೆ, ಸಾಗರ ತಾಲೂಕು ಇಲ್ಲಿನ ವಸತಿ ಶಾಲೆಗಳಲ್ಲಿ ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಒಂದು ವರ್ಷದ ಅವಧಿಗೆ ಖಾಲಿಯಿರುವ ಮಹಿಳಾ ಕೇರ್‌ಟೇಕರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ನಿಗಧಿಪಡಿಸಿದ ಬಿ.ಎಸ್‌ಸಿ. ನರ್ಸಿಂಗ್ ಮತ್ತು ಜಿಎನ್‌ಎಂ ನರ್ಸಿಂಗ್ ವಿದ್ಯಾರ್ಹತೆಯನ್ನು ಹೊಂದಿದ್ದು, ಕನಿಷ್ಠ 2 ವರ್ಷಗಳ ವೃತ್ತಿ ಅನುಭವ ಹೊಂದಿರಬೇಕು.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲೆಗಳೊಂದಿಗೆ ಜು.28 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ.: 08182-200266 ಹಾಗೂ ಶಿವಮೊಗ್ಗ ಮತ್ತು ಸಾಗರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದೆಂದು
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಮೂಲ ಸೌಕರ್ಯ,ಸುಸಜ್ಜಿತ ರಸ್ತೆ ಸಂಪರ್ಕಕ್ಕೆ ಆದ್ಯತೆ- ಬಿ.ವೈ.ರಾಘವೇಂದ್ರ

0

B.Y. Raghavendra ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಸ್ತುತ ಸ್ಥಿತಿಗತಿ, ಕಾಮಗಾರಿ ವೇಗ ಹಾಗೂ ಎದುರಾಗಿರುವ ಸಮಸ್ಯೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಪ್ರಾದೇಶಿಕ ಅಧಿಕಾರಿ (RO) ಶ್ರೀಧರ್, ಅಪರ ಜಿಲ್ಲಾಧಿಕಾರಿಗಳು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CCF) ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (DFO) ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ–206 (ತುಮಕೂರು–ಶಿವಮೊಗ್ಗ–ಹೊನ್ನಾವರ) ಮಾರ್ಗದ ಭದ್ರಾವತಿ ಬೈಪಾಸ್ ಸೇರಿದಂತೆ ಪ್ರಮುಖ ಬೈಪಾಸ್‌ಗಳು, ಮೇಲ್ಸೇತುವೆಗಳು ಹಾಗೂ ರೈಲ್ವೆ ಮೇಲ್ಸೇತುವೆಗಳ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲಾಯಿತು. ರಾಷ್ಟ್ರೀಯ ಹೆದ್ದಾರಿ–169 (ಶಿವಮೊಗ್ಗ–ಮಂಗಳೂರು) ವ್ಯಾಪ್ತಿಯ ಮೋಟೆಬೆನ್ನೂರು–ಶಿವಮೊಗ್ಗ ಚತುಷ್ಪಥ ರಸ್ತೆ ಸೇರಿದಂತೆ ವಿವಿಧ ಅಗಲೀಕರಣ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ರಾಷ್ಟ್ರೀಯ ಹೆದ್ದಾರಿ–766C (ಬೈಂದೂರು–ರಾಣೇಬೆನ್ನೂರು) ವ್ಯಾಪ್ತಿಯ ಶಿಕಾರಿಪುರ ಬೈಪಾಸ್ ಹಾಗೂ ಸಂಬಂಧಿತ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನೂ ಸಭೆಯಲ್ಲಿ ಅವಲೋಕಿಸಲಾಯಿತು. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ–139ರ ಮಹಾತ್ಮ ಗಾಂಧಿ ರಸ್ತೆ ಹಾಗೂ ಭದ್ರಾವತಿ ಪಟ್ಟಣದ ರಸ್ತೆ ಸುಧಾರಣೆ, ಡಾಂಬರೀಕರಣ ಮತ್ತು ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಯಿತು.

B.Y. Raghavendra ಸಭೆಯಲ್ಲಿ ಕಾಮಗಾರಿಗಳ ಗುಣಮಟ್ಟಕ್ಕೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು. ಭೂಸ್ವಾಧೀನ ಪ್ರಕ್ರಿಯೆ ಹಾಗೂ ಅರಣ್ಯ ಇಲಾಖೆಯ ಅನುಮತಿಗಳಿಂದ ಕಾಮಗಾರಿಗಳಿಗೆ ವಿಳಂಬವಾಗದಂತೆ ಅಗತ್ಯ ಸಮನ್ವಯ ಸಾಧಿಸಲು ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗೆ ನಿರ್ದೇಶನ ನೀಡಲಾಯಿತು. ಮಳೆಗಾಲದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಲಾಯಿತು.

ಶಿವಮೊಗ್ಗ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ರಸ್ತೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸಭೆಯಲ್ಲಿ ಒತ್ತಿ ಹೇಳಲಾಯಿತು.

ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿರುವ “ವಾಮಾಚಾರ” ಸ್ಥಳೀಯರಿಂದ ದೂರು

0

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ವಾಟೆಕೂಡ್ಲು ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ವಾಮಾಚಾರ ನಡೆಸಿರುವ ಆರೋಪ ಕೇಳಿಬಂದಿದೆ.

ಈ ಘಟನೆ ಬೆಳಕಿಗೆ ಬಂದ ಬಳಿಕ ಗ್ರಾಮಸ್ಥರಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಜುಲೈ 15ರಂದು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿದ್ದ ಈ ದೃಶ್ಯವನ್ನು ನೋಡಿ ಭಯಗೊಂಡು ಅಸ್ವಸ್ಥರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶೇಖರಪ್ಪ ಬಿನ್ ಶಂಕ್ರಪ್ಪ ಹಾಗೂ ಶೇಖರ ಶೆಟ್ಟಿ ಬಿನ್ ಗಣಪಯ್ಯ ಶೆಟ್ಟಿ ಅವರ ಮನೆಗಳಿಗೆ ತೆರಳುವ ರಸ್ತೆಯ ಪಕ್ಕದಲ್ಲಿ ಗುರುತಿಸಲಾಗದ ವ್ಯಕ್ತಿಗಳು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಸಂಬಂಧ ಗ್ರಾಮಸ್ಥರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ವಾಮಾಚಾರ ನಡೆಸಿದವರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಗ್ರಾಮಸ್ಥರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ

ಶಿವಮೊಗ್ಗ ಸಾರಿಗೆ ಬಸ್ ನಿಲ್ದಾಣದ ಶೌಚಾಲಯದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣು

0

ಶಿವಮೊಗ್ಗ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಶೌಚಾಲಯ ಸ್ವಚ್ಛಗೊಳಿಸಲು ಸಿಬ್ಬಂದಿ ತೆರಳಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿ ತನ್ನ ಪ್ಯಾಂಟ್‌ನ್ನೇ ಬಳಸಿ ಶೌಚಾಲಯದ ಕಿಟಕಿಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರನ್ನು ಚನ್ನಪಟ್ಟಣ ತಾಲೂಕಿನ ಹೊನ್ನಂಗರನಹಳ್ಳಿಯ ಎಚ್.ಎಂ. ಮರಿಸ್ವಾಮಿ (41) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಶಿವಮೊಗ್ಗ ಶಿವಗಂಗಾ ಯೋಗ‌ಕೇಂದ್ರದ ಕಿರುಮಾಹಿತಿ ಕರಪತ್ರ ಅನಾವರಣ

0

17.07.2026 ಶುಕ್ರವಾರ ಮುಂಜಾನೆ 08.45ಕ್ಕೆ ಶ್ರೀ ಬೆಕ್ಕಿನ ಕಲ್ಮಠದಲ್ಲಿ, ಯೋಗ ಕೇಂದ್ರದ ಮಹಾ ಪೋಷಕರಾದ, ಪೂಜ್ಯ ಶ್ರೀಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀ ಶಿವಗಂಗಾ ಯೋಗ ಕೇಂದ್ರದ ಕಿರು ಮಾಹಿತಿಯನ್ನು ಒಳಗೊಂಡ ಕರಪತ್ರವನ್ನು ಅನಾವರಣ ಗೊಳಿಸಿದರು. ಸಮ್ಮುಖ ಯೋಗಾಚಾರ್ಯ ಶ್ರೀ ಸಿ. ವಿ.ರುದ್ರಾರಾಧ್ಯ, ಕಾರ್ಯಾಧ್ಯಕ್ಷರು, ಶ್ರೀ ಎಸ್. ರುದ್ರೇಗೌಡರು, ಅಧ್ಯಕ್ಷರು, ಶ್ರೀ ಹೊಸತೋಟ ಸೂರ್ಯನಾರಾಯಣ, ಖಜಾಂಚಿ, ಶ್ರೀ ಹಾಲಪ್ಪನವರು, ಶಿವ ಗಂಗಾ ಯೋಗ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿ. ವಿಜಯ ಕುಮಾರ್ ಪೋಷಕರು ಹಾಗೂ ಯೋಗ ಶಿಕ್ಷಕರಾದ ಜಿಎಸ್ ಓಂಕಾರ್ ಇತರೆ ಪ್ರಮುಖರು ಉಪಸ್ಥಿತರಿದ್ದರು.