Monday, August 3, 2026
Monday, August 3, 2026
Home Blog Page 20

ಜುಲೈ 24 ರಿಂದ 31 ವರೆಗೆ ರಾಜ್ಯಾದ್ಯಂತ ಮದ್ಯದ ಸನ್ನದುಗಳ ಹರಾಜು ಪ್ರಕ್ರಿಯೆ. ಸರ್ಕಾರದ ಅಧಿಸೂಚನೆ

0

​ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು (Licences) ಮುಂದಿನ 5 ವರ್ಷಗಳ ಅವಧಿಗೆ (ಅಂದರೆ 2026-27 ರಿಂದ 2030-31 ರ ವರೆಗೆ) ಎಲೆಕ್ಟ್ರಾನಿಕ್ ಇ-ಹರಾಜು ಮೂಲಕ ಹಂಚಿಕೆ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

ಈ ಸಂಬಂಧ ಬಿಡ್‌ದಾರರ ನೋಂದಣಿ ಪ್ರಕ್ರಿಯೆಯು ಈಗಾಗಲೇ ಜುಲೈ 3 ರಿಂದಲೇ ಆರಂಭವಾಗಿದ್ದು, ಜುಲೈ 24 ರಿಂದ ಜುಲೈ 31 ರವರೆಗೆ ವಿವಿಧ ಹಂತಗಳಲ್ಲಿ ನೇರ ಹರಾಜು (Live Bidding) ಪ್ರಕ್ರಿಯೆ ನಡೆಯಲಿದೆ.

483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಸನ್ನದುಗಳು ಲಭ್ಯ

​ಈ ಬೃಹತ್ ಇ-ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 483 ಸಿಎಲ್(2-ಎ) ಮತ್ತು 96 ಸಿಎಲ್(9-ಎ) ಸನ್ನದುಗಳು ಹರಾಜಿಗೆ ಮುಕ್ತವಾಗಿವೆ. ಇವುಗಳಲ್ಲಿ ಅತ್ಯಂತ ಪ್ರಮುಖವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂದರೆ 119 ಸಿಎಲ್(2-ಎ) ಮತ್ತು 67 ಸಿಎಲ್(9-ಎ) ಸನ್ನದುಗಳು ಲಭ್ಯವಿರುವುದು ವಿಶೇಷವಾಗಿದೆ.

​ಸಂವಿಧಾನಬದ್ಧ ಮೀಸಲಾತಿ ಕಲ್ಪನೆ

​ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಈ ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿಯನ್ನು ಅಳವಡಿಸಲಾಗಿದ್ದು, ಪರಿಶಿಷ್ಟ ಜಾತಿ-ಎ ವರ್ಗದವರಿಗೆ ಶೇ. 5.25 ರಷ್ಟು, ಪರಿಶಿಷ್ಟ ಜಾತಿ-ಬಿ ವರ್ಗದವರಿಗೆ ಶೇ. 5.25 ರಷ್ಟು, ಪರಿಶಿಷ್ಟ ಜಾತಿ-ಸಿ ವರ್ಗದವರಿಗೆ ಶೇ. 4.50 ರಷ್ಟು ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಶೇ. 3 ರಷ್ಟು ಮೀಸಲಾತಿಯನ್ನು ಸರ್ಕಾರ ಕಲ್ಪಿಸಿದೆ.

ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ವಿಧಾನ

​ಈ ಇ-ಹರಾಜಿನಲ್ಲಿ ಭಾಗವಹಿಸಲು ಯಾವುದೇ ವ್ಯಕ್ತಿ ಅಥವಾ ಏಕವ್ಯಕ್ತಿ ಮಾಲೀಕತ್ವ ಸಂಸ್ಥೆಗಳು ಅರ್ಹರಾಗಿರುತ್ತಾರೆ. ಇದರೊಂದಿಗೆ ಭಾರತದ ಕಾನೂನುಗಳ ಅಡಿಯಲ್ಲಿ ನೋಂದಾಯಿಸಲಾದ ಟ್ರಸ್ಟ್, ಸೊಸೈಟಿ, ಪಾಲುದಾರಿಕೆ ಸಂಸ್ಥೆ, ಸೀಮಿತ ಪಾಲುದಾರಿಕೆ ಒಡಂಬಡಿಕೆ (LLP) ಅಥವಾ ಕಂಪನಿಗಳು ಕೂಡ ಅರ್ಜಿ ಸಲ್ಲಿಸಬಹುದು.

ಬಿಡ್ ಮಾಡಲು ಇಚ್ಛಿಸುವವರು ರೂ. 1,000/- ನೋಂದಣಿ ಶುಲ್ಕ ಮತ್ತು ಅನ್ವಯವಾಗುವ ಜಿ.ಎಸ್.ಟಿ (GST) ಪಾವತಿಸಿ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರತಿ ಸನ್ನದಿನ ಅರ್ಜಿಗೆ ರೂ. 50,000/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಇದು ಯಾವುದೇ ಕಾರಣಕ್ಕೂ ಮರುಪಾವತಿಯಾಗುವುದಿಲ್ಲ (Non-Refundable).

ಬಿಡ್‌ದಾರರಿಗೆ ಒಂದಕ್ಕಿಂತ ಹೆಚ್ಚು ಸನ್ನದುಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಯಾ ಜಿಲ್ಲೆಯ ಹರಾಜಿನ ದಿನಕ್ಕೆ ಕನಿಷ್ಠ ಎರಡು ಕೆಲಸದ ದಿನಗಳ ಮೊದಲೇ MSTC ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ದಿನಾಂಕವಾರು ಮತ್ತು ಜಿಲ್ಲಾವಾರು ನೇರ ಹರಾಜಿನ ಸಂಪೂರ್ಣ ವಿವರ

​ಅಬಕಾರಿ ಇಲಾಖೆಯು ಇ-ಹರಾಜಿನ ಸುಗಮ ನಿರ್ವಹಣೆಗಾಗಿ ಪ್ರತಿದಿನ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 12:00 ರವರೆಗೆ ಮೊದಲ ಸ್ಲಾಟ್ (Slot-1) ಹಾಗೂ ಮಧ್ಯಾಹ್ನ 03:00 ರಿಂದ ಸಂಜೆ 05:00 ರವರೆಗೆ ಎರಡನೇ ಸ್ಲಾಟ್ (Slot-2) ಎಂದು ವಿಂಗಡಿಸಿ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ.

​ಜುಲೈ 24, 2026 (ಶುಕ್ರವಾರ): ಅಂದು ಬೆಳಿಗ್ಗೆ ನಡೆಯುವ ಮೊದಲ ಸ್ಲಾಟ್‌ನಲ್ಲಿ BUD-01 ವ್ಯಾಪ್ತಿಯ 21 ಸನ್ನದುಗಳು, ಬೀದರ್‌ನ 11 ಸನ್ನದುಗಳು ಮತ್ತು ಹಾವೇರಿಯ 14 ಸನ್ನದುಗಳು ಸೇರಿ ಒಟ್ಟು 46 ಸನ್ನದುಗಳಿಗೆ ಹರಾಜು ನಡೆಯಲಿದೆ. ಅದೇ ದಿನ ಮಧ್ಯಾಹ್ನದ ಎರಡನೇ ಸ್ಲಾಟ್‌ನಲ್ಲಿ BUD-05 ವ್ಯಾಪ್ತಿಯ 18 ಸನ್ನದುಗಳು, ಚಿಕ್ಕಮಗಳೂರಿನ 12 ಸನ್ನದುಗಳು ಹಾಗೂ ಕಲ್ಬುರ್ಗಿಯ 15 ಸನ್ನದುಗಳು ಸೇರಿ ಒಟ್ಟು 45 ಸನ್ನದುಗಳಿಗೆ ಬಿಡ್ಡಿಂಗ್ ನಡೆಯಲಿದೆ.

​ಜುಲೈ 27, 2026 (ಸೋಮವಾರ): ಮೊದಲ ಸ್ಲಾಟ್‌ನಲ್ಲಿ BUD-02 ರ 28 ಸನ್ನದುಗಳು, ಹಾಸನದ 13 ಸನ್ನದುಗಳು ಹಾಗೂ ರಾಯಚೂರಿನ 9 ಸನ್ನದುಗಳು ಸೇರಿ ಒಟ್ಟು 50 ಸನ್ನದುಗಳಿಗೆ ಹರಾಜು ನಡೆಯಲಿದೆ. ಎರಡನೇ ಸ್ಲಾಟ್‌ನಲ್ಲಿ BUD-06 ರ 26 ಸನ್ನದುಗಳು, ಶಿವಮೊಗ್ಗದ 17 ಸನ್ನದುಗಳು ಮತ್ತು ಯಾದಗಿರಿಯ 6 ಸನ್ನದುಗಳು ಸೇರಿ ಒಟ್ಟು 49 ಸನ್ನದುಗಳಿಗೆ ಬಿಡ್ಡಿಂಗ್ ನಡೆಯಲಿದೆ.

​ಜುಲೈ 28, 2026 (ಮಂಗಳವಾರ): ಮೊದಲ ಸ್ಲಾಟ್‌ನಲ್ಲಿ BUD-3 ರ 25 ಸನ್ನದುಗಳು, ಬೆಳಗಾವಿ ಉತ್ತರದ 10 ಸನ್ನದುಗಳು ಮತ್ತು ಉತ್ತರ ಕನ್ನಡದ 14 ಸನ್ನದುಗಳು ಸೇರಿದಂತೆ ಒಟ್ಟು 49 ಸನ್ನದುಗಳಿಗೆ ಹರಾಜು ನಿಗದಿಯಾಗಿದೆ. ಎರಡನೇ ಸ್ಲಾಟ್‌ನಲ್ಲಿ BUD-7 ರ 22 ಸನ್ನದುಗಳು, ಬಳ್ಳಾರಿಯ 12 ಸನ್ನದುಗಳು ಮತ್ತು ಬಾಗಲಕೋಟೆಯ 8 ಸನ್ನದುಗಳು ಸೇರಿ ಒಟ್ಟು 42 ಸನ್ನದುಗಳಿಗೆ ಬಿಡ್ಡಿಂಗ್ ಜರುಗಲಿದೆ.

​ಜುಲೈ 29, 2026 (ಬುಧವಾರ): ಮೊದಲ ಸ್ಲಾಟ್‌ನಲ್ಲಿ BUD-4 ರ 13 ಸನ್ನದುಗಳು, ತುಮಕೂರಿನ 26 ಸನ್ನದುಗಳು ಮತ್ತು ಕೊಪ್ಪಳದ 6 ಸನ್ನದುಗಳು ಸೇರಿ ಒಟ್ಟು 45 ಸನ್ನದುಗಳಿಗೆ ಹರಾಜು ನಡೆಯಲಿದೆ. ಎರಡನೇ ಸ್ಲಾಟ್‌ನಲ್ಲಿ BUD-8 ರ 33 ಸನ್ನದುಗಳು, ಚಿಕ್ಕಬಳ್ಳಾಪುರದ 11 ಸನ್ನದುಗಳು ಮತ್ತು ಮೈಸೂರು ಗ್ರಾಮಾಂತರದ 14 ಸನ್ನದುಗಳು ಸೇರಿ ಒಟ್ಟು 58 ಸನ್ನದುಗಳಿಗೆ ಬಿಡ್ಡಿಂಗ್ ನಡೆಯಲಿದೆ.

​ಜುಲೈ 30, 2026 (ಗುರುವಾರ): ಮೊದಲ ಸ್ಲಾಟ್‌ನಲ್ಲಿ ದಾವಣಗೆರೆಯ 12 ಸನ್ನದುಗಳು, ವಿಜಯನಗರದ 10 ಸನ್ನದುಗಳು, ಚಿತ್ರದುರ್ಗದ 12 ಸನ್ನದುಗಳು ಹಾಗೂ ಮಂಡ್ಯದ 15 ಸನ್ನದುಗಳು ಸೇರಿ ಒಟ್ಟು 49 ಸನ್ನದುಗಳ ಹರಾಜು ನಡೆಯಲಿದೆ. ಎರಡನೇ ಸ್ಲಾಟ್‌ನಲ್ಲಿ ವಿಜಯಪುರದ 9 ಸನ್ನದುಗಳು, ಚಾಮರಾಜನಗರದ 7 ಸನ್ನದುಗಳು, ದಕ್ಷಿಣ ಕನ್ನಡದ 31 ಸನ್ನದುಗಳು ಮತ್ತು ಗದಗ ಜಿಲ್ಲೆಯ 8 ಸನ್ನದುಗಳು ಸೇರಿ ಒಟ್ಟು 55 ಸನ್ನದುಗಳಿಗೆ ಬಿಡ್ಡಿಂಗ್ ಜರುಗಲಿದೆ.

​ಜುಲೈ 31, 2026 (ಶುಕ್ರವಾರ): ಕೊನೆಯ ದಿನದ ಮೊದಲ ಸ್ಲಾಟ್‌ನಲ್ಲಿ ಕೋಲಾರದ 15 ಸನ್ನದುಗಳು, ಧಾರವಾಡದ 19 ಸನ್ನದುಗಳು, ಕೊಡಗಿನ 3 ಸನ್ನದುಗಳು ಮತ್ತು ಬೆಳಗಾವಿ ದಕ್ಷಿಣದ 11 ಸನ್ನದುಗಳು ಸೇರಿ ಒಟ್ಟು 48 ಸನ್ನದುಗಳಿಗೆ ಹರಾಜು ನಡೆಯಲಿದೆ. ಎರಡನೇ ಸ್ಲಾಟ್‌ನಲ್ಲಿ ಬೆಂಗಳೂರು ಗ್ರಾಮಾಂತರದ 11 ಸನ್ನದುಗಳು, ಮೈಸೂರು ನಗರದ 13 ಸನ್ನದುಗಳು, ಬೆಂಗಳೂರು ದಕ್ಷಿಣದ 11 ಸನ್ನದುಗಳು ಮತ್ತು ಉಡುಪಿಯ 8 ಸನ್ನದುಗಳು ಸೇರಿ ಒಟ್ಟು 43 ಸನ್ನದುಗಳೊಂದಿಗೆ ಇ-ಹರಾಜು ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

​ಹೆಚ್ಚಿನ ಮಾಹಿತಿ ಹಾಗೂ ನೆರವು
​ಇ-ಹರಾಜಿನ ಅಧಿಸೂಚನೆ, ಬಿಡ್ಡಿಂಗ್‌ಗಾಗಿ ಹೆಸರು ನೋಂದಾಯಿಸಿಕೊಳ್ಳುವ ವಿಧಾನ, ಯೂಸರ್ ಮ್ಯಾನುವಲ್ (User Manual), ಸಾಮಾನ್ಯ ಪ್ರಶ್ನೋತ್ತರಗಳು (FAQs) ಮತ್ತು ಸಂಪೂರ್ಣ ಮಾಹಿತಿ ನೀಡುವ ವಿಡಿಯೋ ಟ್ಯುಟೋರಿಯಲ್‌ಗಳು ಅಬಕಾರಿ ಇಲಾಖೆಯ ಅಧಿಕೃತ ವೆಬ್‌ಸೈಟ್ https://stateexcise.karnataka.gov.in ಹಾಗೂ MSTC ಪೋರ್ಟಲ್ https://www.mstcecommerce.com ನಲ್ಲಿ ಲಭ್ಯವಿರುತ್ತವೆ ಎಂದು ರಾಜ್ಯ ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಳೆಯ ಕೊರತೆ ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನದ್ಧ- ಡಿಸಿ ಪ್ರಭುಲಿಂಗ ಕವಳಿಕಟ್ಟಿ

0

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ತಲೆದೋರಿದ್ದು ಜಿಲ್ಲೆಯಲ್ಲೂ ಉದ್ಭವಿಸಿರುವ ಮಳೆಯ ಕೊರತೆಯನ್ನು ಅತ್ಯಂತ ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತವು ಸಂಪೂರ್ಣ ಸಜ್ಜಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಹಲವು ಪ್ರಮುಖ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ :
ಜಿಲ್ಲೆಯ ಜಲಾಶಯಗಳು ಮತ್ತು ಕೆರೆಗಳಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ.
ಪರ್ಯಾಯ ವ್ಯವಸ್ಥೆ: ಕುಡಿಯುವ ನೀರಿನ ಅಭಾವವಿರುವ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಕ್ಷಣವೇ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಟ್ಯಾಂಕರ್‌ಗಳ ಮೂಲಕ ಅಥವಾ ನೀರು ಸರಬರಾಜು ಮಾಡಲು ಕ್ರಿಯಾ ಯೋಜನೆ ರೂಪಿಸಲಾಗಿದೆ.
ಜಿಲ್ಲೆಯ ಮಹಾನಗರಪಾಲಿಕೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಇಲ್ಲ. ಆನವಟ್ಟಿಗೆ ಮಾತ್ರ ಬೋರ್ ವೆಲ್ ನೀರು ವ್ಯವಸ್ಥೆ ಮಾಡಲಾಗಿದ್ದು ಇನ್ನುಳಿದಂತೆ ನದಿಮೂಲದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಸೊರಬ, ಶಿರಾಳಕೊಪ್ಪ, ಹೊಸನಗರಕ್ಕೆ ಇನ್ನೆರಡು ತಿಂಗಳು ಕುಡಿಯುವ ನೀರಿನ ಕೊರತೆ ಇಲ್ಲ ಹಾಗೂ ಉಳಿದೆಡೆ 6-8 ತಿಂಗಳು ಸಮಸ್ಯೆ ಇಲ್ಲ.
ಒಟ್ಟು 44 ಗ್ರಾಮ ಪಂಚಾಯತ್‌ಗಳಲ್ಲಿ ಜನವರಿಯಿಂದ ಜೂನ್ ಮಾಹೆವರೆಗೆ ಒಟ್ಟು 97 ಬೋರ್ ವೆಲ್ ಕೊರೆಸಲಾಗಿದೆ. ಜೂನ್ ಮಾಹೆಯಲ್ಲಿ 27 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 37 ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ಮೂಲಕ ನೀರು ಪೂರೈಸಲಾಗಿದೆ. ಶಿವಮೊಗ್ಗ, ಭದ್ರಾವತಿ, ಸೊರಬ, ಹೊಸನಗರ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಕ್ರಮ ವಹಿಸಲಾಗಿದೆ.
ಕೃಷಿ :
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ, ರೈತರು ಪರಿಸ್ಥಿತಿಗೆ ತಕ್ಕಂತೆ ಪರ್ಯಾಯ ಬೆಳೆ ಹಾಗೂ ಕಡಿಮೆ ಅವಧಿಯ ತಳಿಗಳ ಕಡೆಗೆ ಗಮನಹರಿಸಬೇಕೆಂದು ತಿಳಿಸಲಾಗಿದೆ.
ಜೂನ್ ತಿಂಗಳ ಆರಂಭದಲ್ಲಿ ತೀವ್ರ ಮಳೆ ಅಭಾವ ಕಂಡುಬಂದಿದ್ದರೂ, ಜೂನ್ ಅಂತ್ಯ ಹಾಗೂ ಜುಲೈ ಮೊದಲ ವಾರದಲ್ಲಿ ಬಿದ್ದ ಮಳೆಯು ಬಿತ್ತನೆಗೆ ಉತ್ತಮ ಅವಕಾಶ ಕಲ್ಪಿಸಿತ್ತು. ಆದರೆ, ಕಳೆದ ಒಂದು ವಾರದಿಂದ ಮಳೆ ಸಂಪೂರ್ಣ ಕ್ಷೀಣಿಸಿದ್ದು, ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊAಡಿವೆ. ಭತ್ತದ ಸಸಿಮಡಿ ತಯಾರಿಕೆ ಹಿನ್ನಡೆಯಾಗಿದ್ದು, ಈಗಾಗಲೇ ಶಿಕಾರಿಪುರ ಮತ್ತು ಸೊರಬ ತಾಲ್ಲೂಕುಗಳಲ್ಲಿ ಬಿತ್ತನೆಯಾಗಿರುವ ಖುಷ್ಕಿ ಬೆಳೆಗಳಿಗೆ ತೇವಾಂಶದ ಕೊರತೆ ಎದುರಾಗಿದೆ.
ಜಿಲ್ಲೆಯಲ್ಲಿ ಶೇ. 44 ರಷ್ಟು ಮಳೆ ಕೊರತೆ :
ಭದ್ರಾವತಿ ತಾಲ್ಲೂಕಿನಲ್ಲಿ ಶೇ. 54, ಸೊರಬ ಶೇ. 47, ಹೊಸನಗರ ಶೇ. 45, ಶಿಕಾರಿಪುರ: ಶೇ. 38, ತೀರ್ಥಹಳ್ಳಿ ಶೇ. 36, ಶಿವಮೊಗ್ಗ ಶೇ. 26, ಸಾಗರ ಶೇ. 18 ಮಳೆ ಕೊರತೆ ಇದೆ.
ಜೂನ್ 1 ರಿಂದ ಜುಲೈ 17 ರವರೆಗಿನ ಅವಧಿಯಲ್ಲಿ ಜಿಲ್ಲೆಯ ವಾಡಿಕೆ ಮಳೆ 894.7 ಮಿ.ಮೀ ಆಗಬೇಕಿತ್ತು. ಆದರೆ ಕೇವಲ 501.5 ಮಿ.ಮೀ ನಷ್ಟು ಮಾತ್ರ ಮಳೆಯಾಗಿದ್ದು, ಒಟ್ಟಾರೆ ಶೇ. 44 ರಷ್ಟು ಮಳೆ ಕೊರತೆ ದಾಖಲಾಗಿದೆ. ಭದ್ರಾ ಜಲಾಶಯ ಇನ್ನು ಭರ್ತಿಯಾಗದ ಕಾರಣ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬಿತ್ತನೆಗೆ ಹಿನ್ನಡೆಯಾಗಿದೆ.
ಗುರಿಯ ಶೇ. 28.09 ರಷ್ಟು ಮಾತ್ರ ಬಿತ್ತನೆ :ಮಳೆ ಅಭಾವದಿಂದಾಗಿ ಜಿಲ್ಲೆಯ ಪ್ರಮುಖ ಮುಂಗಾರು ಬೆಳೆಗಳ ಬಿತ್ತನೆ ತೀವ್ರ ಕುಂಠಿತಗೊAಡಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 1,13,458 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಜುಲೈ 17 ರ ವರೆಗೆ ಕೇವಲ 31,868 ಹೆಕ್ಟೇರ್ ಶೇ. 28.09 ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ.
ಭತ್ತ 66,200 ಹೆಕ್ಟೇರ್ ಗುರಿಗೆ ಕೇವಲ 8,743 ಹೆಕ್ಟೇರ್ ಶೇ. 13.21 ಬಿತ್ತನೆಯಾಗಿದೆ. ಮೆಕ್ಕೆಜೋಳ 45,807 ಹೆಕ್ಟೇರ್ ಗುರಿಗೆ 22,405 ಹೆಕ್ಟೇರ್ ಶೇ. 48.91 ಬಿತ್ತನೆಯಾಗಿದೆ. ರಾಗಿ 400 ಹೆಕ್ಟೇರ್ ಗುರಿಗೆ 182 ಹೆಕ್ಟೇರ್ ಶೇ. 45.50 ಬಿತ್ತನೆಯಾಗಿದ್ದು ಇತರ ಬೆಳೆಗಳು 1,051 ಹೆಕ್ಟೇರ್ ಗುರಿಗೆ 538 ಹೆಕ್ಟೇರ್ ಶೇ. 51.18 ಬಿತ್ತನೆಯಾಗಿದೆ.
ರೈತರಿಗೆ ಕೃಷಿ ಇಲಾಖೆಯ ಪ್ರಮುಖ ಸಲಹೆಗಳು:
ಪರ್ಯಾಯ ಬೆಳೆ ಪದ್ಧತಿ: ಮೆಕ್ಕೆಜೋಳದ ಬಿತ್ತನೆ ಅವಧಿ ಮುಗಿಯುತ್ತಾ ಬಂದಿರುವುದರಿAದ ಕಡಿಮೆ ನೀರು ಬೇಡುವ ಪರ್ಯಾಯ ಬೆಳೆಗಳಾದ ರಾಗಿ ತಳಿಗಳು (GPU-28, INDAF-9, KMR-204) ಹಾಗೂ ದ್ವಿದಳ ಧಾನ್ಯಗಳಾದ ಹೆಸರು, ಅಲಸಂದೆ, ಉದ್ದು ಇವುಗಳನ್ನು ಬೆಳೆಯಬಹುದು.
ಭತ್ತದ ಅಲ್ಪಾವಧಿ ತಳಿಗಳು: ಭತ್ತದ ನಾಟಿಗೆ ಆಗಸ್ಟ್ ಅಂತ್ಯದವರೆಗೆ ಅವಕಾಶವಿದ್ದು, ನೀರಿನ ಲಭ್ಯತೆಗೆ ಅನುಗುಣವಾಗಿ ಅಲ್ಪಾವಧಿ ತಳಿಗಳಾದ IR-64, RNR-15048, BPT-5204, JGL-1798, MTU-1001 ಮತ್ತು MTU-1010 ಅನ್ನು ಬೆಳೆಯಲು ಸೂಚಿಸಲಾಗಿದೆ.
ಸ್ವಂತ ನೀರಾವರಿ ಸೌಲಭ್ಯ ಹೊಂದಿರುವ ರೈತರು (ಕೊಳವೆ ಬಾವಿ, ತೆರೆದ ಬಾವಿ, ಕೃಷಿ ಹೊಂಡ) ಬೆಳೆಗಳ ತೇವಾಂಶ ಕೊರತೆಯ ಸಂದಿಗ್ಧ ಹಂತದಲ್ಲಿ ತುಂತುರು ಅಥವಾ ಹನಿ ನೀರಾವರಿ ಮೂಲಕ ನೀರು ಹಾಯಿಸಬೇಕು.
ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳು ಹಾಗೂ ಖಾಸಗಿ ಮಾರಾಟಗಾರರಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದೆ. ಪ್ರಸ್ತುತ ರೈತ ಸಂಪರ್ಕ ಕೇಂದ್ರಗಳಲ್ಲಿ 2,796 ಕ್ವಿಂಟಾಲ್ ಬಿತ್ತನೆ ಬೀಜ ಹಾಗೂ ಜಿಲ್ಲೆಯಾದ್ಯಂತ ಒಟ್ಟು 34,562 ಮೆಟ್ರಿಕ್ ಟನ್ ವಿವಿಧ ಗ್ರೇಡ್‌ಗಳ ರಸಗೊಬ್ಬರ ಲಭ್ಯವಿದೆ.
ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ-1 ವರ್ಷಕ್ಕಾಗುವಷ್ಟು ಮೇವು ಲಭ್ಯತೆ:
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸ್ತುತ ಜಾನುವಾರುಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದ್ದು, ಮುಂದಿನ 50 ವಾರಗಳವರೆಗೆ (ಸುಮಾರು ಒಂದು ವರ್ಷ) ಯಾವುದೇ ಮೇವಿನ ಕೊರತೆ ಇಲ್ಲ.
21ನೇ ಜಾನುವಾರು ಗಣತಿಯ ಪ್ರಕಾರ ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಜಾನುವಾರುಗಳು (ದನ ಮತ್ತು ಎಮ್ಮೆ) 4,84,298, ಸಣ್ಣ ಜಾನುವಾರುಗಳು (ಕುರಿ ಮತ್ತು ಮೇಕೆ) 86,120 ಇದೆ.
ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 10.6 ಲಕ್ಷ ಟನ್ ಮೇವು ಲಭ್ಯವಿದೆ. ಈ ಮೇವು ಜಿಲ್ಲೆಯ ಎಲ್ಲಾ ತಾಲೂಕುಗಳ ಜಾನುವಾರುಗಳಿಗೆ ಮುಂದಿನ 50 ವಾರಗಳವರೆಗೆ ಸಾಕಾಗಲಿದೆ.
ಭದ್ರಾವತಿ ತಾಲ್ಲೂಕಿನಲ್ಲಿ 59 ವಾರಗಳಿಗೆ ಸಾಕಾಗುತ್ತದೆ. ಹೊಸನಗರ 47 ವಾರಗಳಿಗೆ, ಸಾಗರ 55 ವಾರಗಳಿಗೆ, ಶಿಕಾರಿಪುರ 47 ವಾರಗಳಿಗೆ, ಶಿವಮೊಗ್ಗದಲ್ಲಿ 48 ವಾರಗಳಿಗೆ, ಸೊರಬ 51 ವಾರಗಳಿಗೆ ಮತ್ತು ತೀರ್ಥಹಳ್ಳಿಯಲ್ಲಿ 51ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ.
ತೋಟಗಾರಿಕೆ :
ಜಿಲ್ಲೆಯ ಒಟ್ಟು ಸಾಗುವಳಿ ವಿಸ್ತೀರ್ಣ 2,39,995 ಹೆ. ಇದ್ದು, ಇದರಲ್ಲಿ ತೋಟಗಾರಿಕೆಯು ಅತ್ಯಂತ ಪ್ರಧಾನವಾಗಿದ್ದು ಒಟ್ಟು 1,76,291.58 ಹೆಕ್ಟರ್ ಪ್ರದೇಶದಲ್ಲಿ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು.1,46,4009 ಹೆ. ಪ್ರದೇಶದಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗಿದೆ. ಇದಲ್ಲದೇ ಜಿಲ್ಲೆಯಲ್ಲಿ ಶುಂಠಿ, ಕಾಳುಮೆಣಸು, ಮಾವು, ಬಾಳೆ, ಗೋಡಂಬಿ, ಏಲಕ್ಕಿ, ಸಪೋಟ, ಅನಾನಸ್ ಪ್ರಮುಖ ಬೆಳೆಗಳಾಗಿರುತ್ತವೆ.
ಪ್ರಸಕ್ತ ಸಾಲಿನಲ್ಲಿ ಎಲ್ ನಿನೋ ಪರಿಣಾಮದಿಂದಾಗಿ ಮುಂಗಾರು ದುರ್ಬಲವಾಗಿದ್ದು, ಜುಲೈ ಮಾಹೆಯ ಮಧ್ಯಭಾಗ ಮುಗಿದಿದ್ದರೂ ಕೂಡ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತ ಬಾಂಧವರು ಈ ಕೆಳಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ರೈತರಲ್ಲಿ ಮನವಿ ಮಾಡಲಾಗಿದೆ.

  • ಅಡಿಕೆ ಮತ್ತು ಬಹುವಾರ್ಷಿಕ ತೋಟದ ಬೆಳೆಗಳಲ್ಲಿ ಹನಿ ನೀರಾವರಿ ಅಳವಡಿಸಿ ನೀರಿನ ಮಿತ ಬಳಕೆ ಮಾಡುವುದು ಹಾಗೂ ನೀರಿನ ತೀವ್ರ ಸಂಕಷ್ಟದ ಸಮಯದಲ್ಲಿ ಪರ್ಯಾಯ ಸಾಲು ಪದ್ಧತಿಯನ್ನು ಅನುಸರಿಸುವುದು. ಅಡಿಕೆ ಗಿಡದ ಸುತ್ತ ಸಾವಯವ ಹೊದಿಕೆ ಮಾಡಿ ಅಡಿಕೆ ಮತ್ತು ತೆಂಗು ತೋಟಗಳಲ್ಲಿ ಹಸಿರೆಲೆ ಗೊಬ್ಬರದ ಬೆಳೆಗಳಾದ ಹುರುಳಿ, ಅಲಸಂದೆ, ವೆಲ್ವೆಟ್ ಬೀನ್ಸ್ ಬೆಳೆದು ಪುನಃ ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆಯೂ ಹೆಚ್ಚಾಗುತ್ತದೆ. ಅಂತೆಯೇ, ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಸೂಡಮನಾಸ್, ಬೇವಿನ ಹಿಂಡಿ ಮುಂತಾದವುಗಳನ್ನು ಬೆಳೆಗಳಿಗೆ ಒದಗಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದಾಗಿದೆ. ಮಳೆ ಕೊರತೆ ತೀವ್ರವಾಗಿದ್ದಲ್ಲಿ ಅಥವಾ ಅಲ್ಪ ಮಳೆಯ ಪರಿಸ್ಥಿತಿಯಲ್ಲಿ ಬಾಳೆ, ಪಪ್ಪಾಯ ಮತ್ತು ಟಮೊಟೊದಂತಹ ಹೆಚ್ಚು ನೀರಿನ ಅವಶ್ಯಕತೆ ಇರುವ ಬೆಳೆಗಳನ್ನು ಬೆಳೆಯದೆ ಇರುವುದು ಸೂಕ್ತವಾಗುತ್ತದೆ. ರಾಸಾಯನಿಕ ಗೊಬ್ಬರಗಳ ಮಿತ ಬಳಕೆ ಮಾಡುವುದು ಹಾಗೂ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಮಾತ್ರ ಗೊಬ್ಬರಗಳನ್ನು ನೀಡುವುದು, ಕಳೆ ನಿರ್ವಹಣೆ ಮಾಡುವುದು ಹಾಗೂ ಕೀಟ ಮತ್ತು ರೋಗಗಳ ಸಮಗ್ರ ಹತೋಟಿ ಮಾಡಬೇಕಾಗುತ್ತದೆ.
  • ಅನಾವೃಷ್ಟಿಯಲ್ಲಿ ವಿದ್ಯುತ್ ವ್ಯತ್ಯಯವಾಗುವ ಸಂಭವ ಇರುವುದರಿಂದ ವಿದ್ಯುತ್ ಶಕ್ತಿಗೆ ಪರ್ಯಾಯವಾಗಿ ಸೋಲಾರ್ ಪಂಪ್ಸೆಟ್ ಅಳವಡಿಸಿಕೊಂಡು ಬೆಳೆಗಳಿಗೆ ನೀರು ಒದಗಿಸುವುದಕ್ಕೆ ರೈತರೂ ಕಾರ್ಯ ಪ್ರವೃತ್ತರಾಗಬೇಕಿದೆ. ಮಳೆ ಅಭಾವ ಹೀಗೆಯೇ ಮುಂದುವರೆದರೆ ಗುಡ್ಡಗಾಡು ಪರಿಸರ ಪ್ರದೇಶಗಳಲ್ಲಿ ಮಳೆ ನೀರನ್ನು ಸಂಗ್ರಹಿಸಲು ಇಳಿಜಾರಿಗೆ ಅಡ್ಡಲಾಗಿ ನಿಯಮಿತ ಅಂತರಗಳಲ್ಲಿ ಕ್ಯಾಚ್ ಪಿಟ್ಸ್ ನಿರ್ಮಿಸಬೇಕೆಂದು ತಿಳಿಸಲಾಗಿದೆ.

ಜಿಲ್ಲಾಧಿಕಾರಿಗಳ ಕರೆ:
“ಜಿಲ್ಲೆಯಲ್ಲಿನ ಮಳೆ ಕೊರತೆಯನ್ನು ನಿರ್ವಹಿಸಲು ಜಿಲ್ಲಾಡಳಿತವು ಸಿದ್ದತೆ ಮಾಡಿಕೊಂಡಿದೆ. ಸಾರ್ವಜನಿಕರು ಹಾಗೂ ರೈತಬಾಂಧವರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು. ನೀರನ್ನು ಅತ್ಯಂತ ಮಿತವಾಗಿ ಬಳಸಬೇಕು.
-ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿಳು, ಶಿವಮೊಗ್ಗ

Klive Special Article ಕೆ ಲೈವ್ ವಿಶೇಷ “ಘೋಸ್ಟ್ ರೈಟಿಂಗ್” ಅಂದರೆ ಏನು?ವಿವರಣೆ:ಅರುಣ್ ಪ್ರಸಾದ್. ಆನಂದಪುರ

0

​Klive Special Article ಬೇರೆಯವರಿಗಾಗಿ ಬರೆಯುವ ಈ ‘ಅದೃಶ್ಯ’ ಲೇಖಕರು ಯಾರು ಗೊತ್ತೇ?…

​ಹೆಸರು ಅವರದ್ದು ಶ್ರಮ ಇವರದ್ದು! ಏನಿದು ಘೋಸ್ಟ್ ರೈಟಿಂಗ್?…

ನಾವು ಓದುವ ಇತ್ತೀಚಿನ ದಿನಗಳ ಬಹುತೇಕ ರಾಜಕಾರಣಿಗಳ ಪೇಸ್ ಬುಕ್ ಪೋಸ್ಟ್ ಬರೆಯುವುದು ಇಂತಹ ಬೂತ ಬರಹಗಾರರೆ ಇದಕ್ಕಾಗಿ ತಿಂಗಳಿಗೆ ಹತ್ತರಿಂದ ಇಪ್ಪತ್ತು ಸಾವಿರ ಪಾವತಿಸುತ್ತಾರೆ.

ಘೋಸ್ಟ್ ರೈಟಿಂಗ್ ಎಂದರೆ ಒಬ್ಬರು ಬರೆದ ಸಾಹಿತ್ಯ, ಲೇಖನ, ಭಾಷಣ, ಪುಸ್ತಕ ಅಥವಾ ಯಾವುದೇ ಲಿಖಿತ ಪ್ರತಿಯನ್ನು ಮತ್ತೊಬ್ಬರ ಹೆಸರಿನಲ್ಲಿ ಪ್ರಕಟಿಸುವ ಅಥವಾ ಬಳಸಿಕೊಳ್ಳುವ ಪ್ರಕ್ರಿಯೆ.

​ಇದರಲ್ಲಿ ನಿಜವಾಗಿ ಬರೆದ ಬರಹಗಾರನಿಗೆ (Ghostwriter) ಹಣ ಅಥವಾ ಸಂಭಾವನೆ ಸಿಗುತ್ತದೆಯೇ ಹೊರತು, ಆ ಕೃತಿಯ ಮೇಲೆ ಅವರ ಹೆಸರು ಅಥವಾ ಯಾವುದೇ ಹಕ್ಕು ಇರುವುದಿಲ್ಲ.

ಯಾರು ಹಣ ನೀಡಿ ಆ ಸೇವೆಯನ್ನುಪಡೆದುಕೊಳ್ಳುತ್ತಾರೋ ಅವರೇ ಆ ಬರಹದ ಮಾಲೀಕರಾಗುತ್ತಾರೆ ಮತ್ತು ಅವರ ಹೆಸರಿನಲ್ಲೇ ಅದು ಜಗತ್ತಿಗೆ ಪರಿಚಯವಾಗುತ್ತದೆ.

​ಘೋಸ್ಟ್ ರೈಟಿಂಗ್ ಎಲ್ಲೆಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ? …

​ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಆತ್ಮಕಥೆಗಳಲ್ಲಿ, ಅನೇಕ ಪ್ರಸಿದ್ಧ ವ್ಯಕ್ತಿಗಳು ತಮ್ಮ ಜೀವನದ ಕಥೆಯನ್ನು ಹೇಳಲು ಇಷ್ಟಪಡುತ್ತಾರೆ ಆದರೆ ಅವರಿಗೆ ಬರೆಯುವ ಕಲೆ ಅಥವಾ ಸಮಯ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಘೋಸ್ಟ್ ರೈಟರ್‌ಗಳನ್ನು ಬಳಸಿಕೊಳ್ಳಲಾಗುತ್ತದೆ.

​ರಾಜಕೀಯ ಭಾಷಣಗಳಲ್ಲಿ ಹೆಚ್ಚು ಬಳಕೆ, ರಾಜಕೀಯ ನಾಯಕರು ಸಭೆಗಳಲ್ಲಿ ಮಾತನಾಡುವ ಪ್ರಭಾವಶಾಲಿ ಭಾಷಣಗಳನ್ನು ಹೆಚ್ಚಾಗಿ ವೃತ್ತಿಪರ ಬರಹಗಾರರೇ ಸಿದ್ಧಪಡಿಸಿಕೊಡುತ್ತಾರೆ ಅದನ್ನು ಅವರು #ಟೆಲಿಪ್ರಾಂಟ್ ನಲ್ಲಿ ಓದುತ್ತಾರೆ ಅದರ ಬಾವನೆಗೆ ತಕ್ಕ ಹಾಗೆ ಧ್ವನಿ ಏರಿಳಿಸುತ್ತಾ ಕೈಗಳ ಚಲಿಸುತ್ತಾರೆ.

ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಚಿತ್ರ ನಟರು,ದೊಡ್ಡ ಕಂಪನಿಗಳ ಸಿಇಒಗಳು ಅಥವಾ ಉದ್ಯಮಿಗಳ ಹೆಸರಿನಲ್ಲಿ ಬರುವ ಪತ್ರಿಕಾ ಲೇಖನಗಳು ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ಇವರೇ ಬರೆಯುತ್ತಾರೆ.

​ ಕೆಲವು ಜನಪ್ರಿಯ ಲೇಖಕರು ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಪುಸ್ತಕಗಳನ್ನು ಬಿಡುಗಡೆ ಮಾಡಲು ಘೋಸ್ಟ್ ರೈಟರ್‌ಗಳ ಸಹಾಯ ಪಡೆಯುತ್ತಾರೆ.

​ಇದು ಕಾನೂನುಬದ್ಧವೇ?…

​ Klive Special Article ಹೌದು ಇದು ಸಂಪೂರ್ಣವಾಗಿ ಕಾನೂನುಬದ್ಧ ಮತ್ತು ವೃತ್ತಿಪರ ಒಪ್ಪಂದ, ಬರೆಯುವ ಮುನ್ನವೇ ಬರಹಗಾರ ಮತ್ತು ಕ್ಲೈಂಟ್ (ಸೇವೆ ಪಡೆಯುವವರು) ನಡುವೆ ಒಪ್ಪಂದ (Non-Disclosure Agreement – NDA) ಆಗಿರುತ್ತದೆ.

ಇದರ ಪ್ರಕಾರ “ನಾನು ಬರೆದ ಬರಹದ ಮೇಲೆ ನನ್ನ ಯಾವುದೇ ಹಕ್ಕಿರುವುದಿಲ್ಲ ಮತ್ತು ಇದನ್ನು ನಾನೇ ಬರೆದಿದ್ದು ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ” ಎಂದು ಬರಹಗಾರ ಒಪ್ಪಿರುತ್ತಾರೆ.

​ಘೋಸ್ಟ್ ರೈಟರ್ ಆಗಲು ಇರಬೇಕಾದ ಮುಖ್ಯ ಅರ್ಹತೆಗಳು ಏನೆಂದರೆ …

ಬೇರೆಯವರ ಧ್ವನಿ, ಆಲೋಚನೆ ಮತ್ತು ಶೈಲಿಗೆ ತಕ್ಕಂತೆ ಬರೆಯುವ ಸಾಮರ್ಥ್ಯ ಇರಬೇಕು,​ ಗೌಪ್ಯತೆ ಕಾಯ್ದುಕೊಳ್ಳುವುದು ಯಾವುದೇ ಕಾರಣಕ್ಕೂ ತಾವು ಬರೆದ ವಿಷಯವನ್ನು ಬೇರೆಯವರ ಮುಂದೆ ಹಂಚಿಕೊಳ್ಳಬಾರದು,
ಕೊಟ್ಟ ವಿಷಯದ ಬಗ್ಗೆ ಆಳವಾಗಿ ತಿಳಿದುಕೊಂಡು ಬರೆಯುವ ಜಾಣ್ಮೆ ಇರಬೇಕು.

ಘೋಸ್ಟ್_ರೈಟಿಂಗ್” ಎಂಬ ಹೆಸರು ಬರಲು ಅದರ ಸ್ವರೂಪವೇ ಪ್ರಮುಖ ಕಾರಣ.

ಸರಳವಾಗಿ ಹೇಳಬೇಕೆಂದರೆ ಇಲ್ಲಿ ಬರೆಯುವ ಬರಹಗಾರನು “ಭೂತ” (Ghost) ಅಥವಾ ಅದೃಶ್ಯ ವ್ಯಕ್ತಿಯಂತೆ ಕೆಲಸ ಮಾಡುತ್ತಾನೆ.

ಭೂತಗಳು ಕಣ್ಣಿಗೆ ಕಾಣಿಸುವುದಿಲ್ಲ ಆದರೆ ಅವುಗಳ ಪ್ರಭಾವ ಇರುತ್ತದೆ ಎಂದು ನಂಬಲಾಗುತ್ತದಲ್ಲವೇ? ಅದೇ ರೀತಿ ಈ ಪ್ರಕ್ರಿಯೆಯಲ್ಲಿ ಪುಸ್ತಕ ಅಥವಾ ಲೇಖನವನ್ನು ನಿಜವಾಗಿ ಬರೆದ ಬರಹಗಾರನು ಯಾರಿಗೂ ಕಾಣಿಸುವುದಿಲ್ಲ (ಅವರ ಹೆಸರು ಎಲ್ಲೂ ಪ್ರಕಟವಾಗುವುದಿಲ್ಲ).

ಅವರು ತೆರೆಯ ಮರೆಯಲ್ಲಿಯೇ ಉಳಿಯುವುದರಿಂದ ಅವರಿಗೆ ‘ಘೋಸ್ಟ್ ರೈಟರ್’ (ಅದೃಶ್ಯ ಬರಹಗಾರ) ಎಂದು ಹೆಸರು ಬಂತು.

​ಭೂತವು ಮತ್ತೊಬ್ಬರ ದೇಹವನ್ನು ಆವಹಿಸಿಕೊಂಡು ಮಾತನಾಡುವಂತೆ (ಕಾಲ್ಪನಿಕ ನಂಬಿಕೆಗಳ ಪ್ರಕಾರ) ಈ ಬರಹಗಾರನು ತನ್ನ ಸ್ವಂತ ಶೈಲಿಯನ್ನು ಬಿಟ್ಟು ಯಾರಿಗೆ ಬರೆದುಕೊಡುತ್ತಿದ್ದಾರೋ ಅವರ ಆಲೋಚನೆ, ಧ್ವನಿ ಮತ್ತು ಶೈಲಿಯನ್ನು ಅಳವಡಿಸಿಕೊಂಡು ಬರೆಯಬೇಕಾಗುತ್ತದೆ.

​ಕೃತಿ ಪ್ರಕಟವಾದ ನಂತರ ಜಗತ್ತಿಗೆ ಕೇವಲ ಆ ಕೃತಿಯ ಮಾಲೀಕರು (ಉದಾಹರಣೆಗೆ: ಸೆಲೆಬ್ರಿಟಿ ಅಥವಾ ರಾಜಕಾರಣಿ) ಮಾತ್ರ ತಿಳಿಯುತ್ತಾರೆ ಇದನ್ನು ಬರೆದ ಅಸಲಿ ಬರಹಗಾರನ ಅಸ್ತಿತ್ವವು ಕೇವಲ ಒಂದು ನೆರಳಿನಂತೆ ರಹಸ್ಯವಾಗಿಯೇ ಉಳಿಯುತ್ತದೆ.

ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಅಮೆರಿಕಾದಲ್ಲಿ ಈ ಪದವು ವೃತ್ತಿಪರ ಜಗತ್ತಿನಲ್ಲಿ ಹೆಚ್ಚು ಬಳಕೆಗೆ ಬಂತು.

ವಿಶೇಷವಾಗಿ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ, ತೆರೆಯ ಮರೆಯಲ್ಲಿದ್ದುಕೊಂಡು ಬೇರೆಯವರಿಗಾಗಿ ಬರೆಯುವವರನ್ನು ಗುರುತಿಸಲು ಈ ರೂಪಕವನ್ನು (Metaphor) ಬಳಸಲು ಪ್ರಾರಂಭಿಸಲಾಯಿತು.

Kuvempu University ಉಪನ್ಯಾಸಕ ಹೆಚ್.ಟಿ.ಕರಿಬಸಪ್ಪನವರಿಗೆ ಕುವೆಂಪು ವಿವಿಯಿಂದ ಪಿಎಚ್.ಡಿ ಪದವಿ ಘೋಷಣೆ

0

Kuvempu University ಕರಿಬಸಪ್ಪ. ಹೆಚ್. ಟಿ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಆನವಟ್ಟಿ, ಸೊರಬ ತಾ.ಇವರು ಡಾ. ಎಸ್ ಎಂ ಮುತ್ತಯ್ಯರವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ತತ್ವಪದ ಸಾಹಿತ್ಯದ ತಾತ್ವಿಕ ನೆಲೆಗಳು’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್. ಡಿ ಪದವಿ ನೀಡಿ ಗೌರವಿಸಿದೆ. ಕರಿಬಸಪ್ಪನವರು ಮೂಲತಃ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾ. ಇತಿಹಾಸ ಪ್ರಸಿದ್ಧ ತಾಳಗುಂದ ಊರಿನವರಾಗಿದ್ದು, ಶ್ರೀಮತಿ ಕಮಲಮ್ಮ ಮತ್ತು ದಿವಂಗತ ತಡಗಣಿ ಹುಚ್ಚರಾಯಪ್ಪ ನವರ ಮಗನಾಗಿರುತ್ತಾರೆ. ಇವರ ಸಾಧನೆಗೆ ಬಂಧುಗಳು, ಪ್ರಾಚಾರ್ಯರು, ಸಹೋದ್ಯೋಗಿ ಮಿತ್ರರು, ಅಪಾರ ವಿದ್ಯಾರ್ಥಿ ಬಳಗ ಶುಭ ಹಾರೈಸಿದ್ದಾರೆ.

ಮುಜರಾಯಿ ದೇಗುಲಗಳಲ್ಲಿ ಹುಂಡಿ ರಕ್ಷಣೆಗೆ ನಿರಂತರ “ವೆಬ್ ಕ್ಯಾಮ್” ವ್ಯವಸ್ಥೆ

0

ಮುಜರಾಯಿ ದೇವಸ್ಥಾನಗಳಲ್ಲಿ ಭಕ್ತರು ಸಮರ್ಪಿಸುವ ಕಾಣಿಕೆ, ಹುಂಡಿ ಹಣ ಹಾಗೂ ಚಿನ್ನಾಭರಣಗಳ ಸುರಕ್ಷತೆಯನ್ನು ಖಚಿತಪಡಿಸಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಕಳ್ಳತನ ಹಾಗೂ ದುರುಪಯೋಗಕ್ಕೆ ಆಸ್ಪದವಿಲ್ಲದಂತೆ ತಂತ್ರಜ್ಞಾನದ ಆಧಾರದಲ್ಲಿ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ಇದಕ್ಕಾಗಿ ಹುಂಡಿಗಳ ಮೇಲೆ ನಿರಂತರ ವೆಬ್‌ಕ್ಯಾಮ್ ಕಣ್ಗಾವಲು ಇಡಲಾಗುತ್ತಿದ್ದು, ಕಾಣಿಕೆ ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕಗೊಳಿಸಲಾಗಿದೆ. ಜೊತೆಗೆ, ವ್ಯವಹಾರಗಳನ್ನು ಡಿಜಿಟಲೀಕರಣಗೊಳಿಸಲು ಕ್ಯೂಆರ್ ಕೋಡ್ ವ್ಯವಸ್ಥೆ ತರಲಾಗಿದ್ದು, ಉನ್ನತ ಅಧಿಕಾರಿಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಇಡೀ ವ್ಯವಸ್ಥೆ ಕಾರ್ಯನಿರ್ವಹಿಸಲಿದೆ.

ನಾಡಗೀತೆಯಲ್ಲಿ “ಬೌಧ್ದರುದ್ಯಾನ” ಪದ ಸೇರ್ಪಡೆಗೆ ಸರ್ಕಾರದ ಆದೇಶ

0

ಕುವೆಂಪು ಅವರ ʻಜಯ ಭಾರತ ಜನನಿಯ ತನುಜಾತೆʼ ನಾಡಗೀತೆಯಲ್ಲಿ ʻಬೌದ್ಧರುದ್ಯಾನʼ ಪದವನ್ನು ಮರು ಸೇರ್ಪಡೆಗೊಳಿಸುವ ಕುರಿತು ಡಾ. ಪುರುಷೋತ್ತಮ ಬಿಳಿಮಲೆ ನೇತೃತ್ವದ ತಜ್ಞರ ಸಮಿತಿಯು ರಾಜ್ಯ ಸರ್ಕಾರಕ್ಕೆ ಅಧಿಕೃತ ಶಿಫಾರಸು ಮಾಡಿದ್ದು, ಪರಿಷ್ಕೃತ ನಾಡಗೀತೆಯನ್ನು ಮೈಸೂರು ಅನಂತಸ್ವಾಮಿ ಅವರ ಮೂಲ ರಾಗದಲ್ಲೇ ಸಂಯೋಜಿಸಲು ಸರ್ಕಾರ ಆದೇಶಿಸಿದೆ.

Department of Youth Empowerment and Sports ಸೈಕ್ಲಿಂಗ್ ತರಬೇತಿ ಪಡೆಯುತ್ತಿರುವ 35 ಪರಿಶಿಷ್ಠ ಜಾತಿಗೆ ಸೇರಿದ ಕ್ರೀಡಾಪಟುಗಳಿಗೆ ಡೀಸಿಎಂ ಡಾ.ಜಿ.ಪರಮೇಶ್ವರ ಅವರಿಂದ ಅತ್ಯಾಧುನಿಕ ಸೈಕಲ್ ಗಳ ವಿತರಣೆ

0

Department of Youth Empowerment and Sports ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2025–26ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಅಡಿಯಲ್ಲಿ ವಿಜಯಪುರ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳ ಕ್ರೀಡಾ ವಸತಿ ನಿಲಯಗಳಲ್ಲಿ ಸೈಕ್ಲಿಂಗ್ ತರಬೇತಿ ಪಡೆಯುತ್ತಿರುವ 35 ಪರಿಶಿಷ್ಟ ಜಾತಿಯ ಕ್ರೀಡಾಪಟುಗಳಿಗೆ ₹2.52 ಕೋಟಿ ವೆಚ್ಚದಲ್ಲಿ ಖರೀದಿಸಲಾದ ಅತ್ಯಾಧುನಿಕ ಸೈಕಲ್‌ಗಳನ್ನು ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ ಅವರು ಇಂದು ನೃಪತುಂಗ ರಸ್ತೆಯ ಯವನಿಕಾ ಸಭಾಂಗಣ ಮುಂಭಾಗದಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಕ್ರೀಡಾ ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

Department of Agriculture ತೀವ್ರ ಬರದ ಛಾಯೆ: ಜಲಾಶಯ ನಂಬಿ ಬೆಳೆ ಬೆಳೆಯದಂತೆ ರೈತರಲ್ಲಿ ಕೃಷಿ ಇಲಾಖೆ ಮನವಿ

0

Department of Agriculture ರಾಜ್ಯಾದ್ಯಂತ ತೀವ್ರಗೊಳ್ಳುತ್ತಿರುವ ಎಲ್ ನಿನೊ ಪರಿಣಾಮ ಹಾಗೂ ಜಲಾಶಯಗಳ ಒಳಹರಿವು ಬಹುತೇಕ ಶೂನ್ಯಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ, ಪ್ರಸಕ್ತ ಸಾಲಿನಲ್ಲಿ ಜಲಾಶಯಗಳನ್ನು ನಂಬಿಕೊಂಡು ಯಾವುದೇ ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯದಂತೆ ಕ.ನೀ. ನಿ.ನಿ ತುಂಗಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.
ಕಳೆದ ಜುಲೈ 2 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಬರದ ಪರಿಸ್ಥಿತಿ ಕುರಿತು ಸುಧೀರ್ಘ ಚರ್ಚೆ ನಡೆಸಲಾಗಿದ್ದು, “ಜಲಾಶಯ ನಂಬಿಕೊಂಡು ಯಾವ ರೈತರೂ ಬೆಳೆ ಹಾಕಬೇಡಿ” ಎಂದು ಸನ್ಮಾನ್ಯ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು.
ಮುಖ್ಯಮಂತ್ರಿಗಳ ನಿರ್ದೇಶನದಂತೆ ಪ್ರಸ್ತುತ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕಡ್ಡಾಯವಾಗಿ ಕೇವಲ ಕುಡಿಯುವ ನೀರಿಗಾಗಿ ಮಾತ್ರ ಕಾಯ್ದಿರಿಸಬೇಕಾದ ತುರ್ತು ಪರಿಸ್ಥಿತಿ ಎದುರಾಗಿದೆ. ಸರ್ಕಾರದ ಸುತ್ತೋಲೆಯ ಅನ್ವಯ, ರೈತರಿಗೆ ಈ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಲು ಹಾಗೂ ಆಯಾ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಲು ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ಕುಡಿಯುವ ನೀರಿಗೆ ಮಾತ್ರ ಜಲ ಬಿಡುಗಡೆ
“ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆ ಹಾಗೂ ತುಂಗಾ ಅಣೆಕಟ್ಟು ಕಾಲುವೆಗಳಲ್ಲಿ ಕೇವಲ ಜನ-ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕೆ ಸೀಮಿತವಾಗಿ ಮಾತ್ರ ನೀರನ್ನು ಹರಿಸಲು ಈಗಾಗಲೇ ದಿನಾಂಕ: 03.07.2026 ರಂದು ಅಧಿಕೃತ ಪ್ರಕಟಣೆ ಹೊರಡಿಸಿ ಕ್ರಮ ಕೈಗೊಳ್ಳಲಾಗಿದೆ.”
Department of Agriculture ಆದ್ದರಿಂದ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತ ಬಾಂಧವರು ಯಾವುದೇ ನೀರಾವರಿ ಬೆಳೆಗಳನ್ನು ಬೆಳೆಯಲು ಮುಂದಾಗಬಾರದೆಂದು ವಿನಂತಿಸಲಾಗಿದ್ದು ಜಲಕ್ಷಾಮದ ಈ ಸಂದರ್ಭದಲ್ಲಿ ರೈತರು ಪರಿಸ್ಥಿತಿಯನ್ನು ಅರ್ಥೈಸಿಕೊಂಡು, ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕಾಗಿ ಕ ನೀ ನಿ ನಿ, ತುಂಗಾ ಮೇಲ್ದಂಡೆ ಯೋಜನೆ ವಿಭಾಗದ
ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

” ಪುಟ್ಟ ಅಂಧಮಕ್ಕಳ ಸೇವೆಮಾಡಲು ಸಿಕ್ಕ ಅವಕಾಶ .ನನ್ನ ಸುಕೃತ- ಶ್ರೀದೇವಿ.

0

ಶಿವಮೊಗ್ಗ ನಗರದ ದ್ರೌಪದಮ್ಮ ವೃತ್ತದಲ್ಲಿರುವ ಬಿ.ವಿ.ಎಸ್ ಫ್ಯಾಮಿಲಿ ಸಲೂನ್ ವತಿಯಿಂದ ಇಂದು ಅತ್ಯಂತ ಶ್ಲಾಘನೀಯ ಸಮಾಜಮುಖಿ ಕಾರ್ಯ ನಡೆಯಿತು.

ಗೋಪಾಳದಲ್ಲಿರುವ ಶಾರದ ದೇವಿ ಅಂಧರ ವಿಕಾಸ ಶಾಲೆಯ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಕಟಿಂಗ್ ಸೇವೆಯನ್ನು ನೀಡಲಾಯಿತು.

ಸಲೂನ್ ವ್ಯವಸ್ಥಾಪಕಿ ಶ್ರೀಮತಿ ಶ್ರೀದೇವಿ ಹಾಗೂ ಅವರ ಸಹಾಯಕರು ಸುಮಾರು 50ಕ್ಕೂ ಹೆಚ್ಚು ಮಕ್ಕಳಿಗೆ ಅತ್ಯಂತ ಪ್ರೀತಿ, ಕಾಳಜಿ ಮತ್ತು ಶ್ರದ್ಧೆಯಿಂದ ಕಟಿಂಗ್ ಮಾಡಿದರು. ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು, ಮಾತನಾಡಿ, ಅವರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀದೇವಿ ಅವರು ಭಾವುಕರಾಗಿ,
“ಇಂದು ನನ್ನ ಬದುಕಿನ ಅತ್ಯಂತ ಸಾರ್ಥಕ ದಿನ. ಈ ಪುಟ್ಟ ಅಂಧ ಮಕ್ಕಳಿಗೆ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸುಕೃತ. ಅವರ ಮುಗ್ಧ ಮಾತುಗಳು, ಪರಸ್ಪರ ಮೇಲಿನ ಪ್ರೀತಿ, ಸ್ನೇಹವನ್ನು ಕಂಡಾಗ ಹೃದಯ ತುಂಬಿ ಬಂತು. ಸ್ವಾರ್ಥ ತುಂಬಿದ ಈ ಸಮಾಜದಲ್ಲಿ ಇಂತಹ ಮಕ್ಕಳೊಂದಿಗೆ ಕಳೆದ ಪ್ರತಿ ಕ್ಷಣವೂ ನನಗೆ ಆಶೀರ್ವಾದ. ಸೌಂದರ್ಯ ಎಂದರೆ ಕೇವಲ ಹೊರ ನೋಟವಲ್ಲ, ಒಳಗಿನ ಪ್ರೀತಿ ಮತ್ತು ಕಾಳಜಿಯೇ ನಿಜವಾದ ಸೌಂದರ್ಯ ಎಂದು ಈ ಮಕ್ಕಳಿಂದ ನಾನು ಕಲಿತೆ” ಎಂದರು.

ಕಟಿಂಗ್ ಮಾಡಿಸಿಕೊಂಡ ಮಕ್ಕಳು “ವಿಷ್ಣು ತರ ಕಾಣ್ತಿಯ, ಅಂಬಿ ತರ ಇದ್ದೀಯ” ಎಂದು ಪರಸ್ಪರ ತಲೆ ಸವರಿ ಸಂಭ್ರಮಿಸಿದಾಗ ಹೃದಯ ತುಂಬಿ ಬಂತು. ಅಂತರಂಗದ ಕಣ್ಣಿನಿಂದಲೇ ಬೆಳಕು ಮೂಡಿಸಿದಂತಹ ಆ ಕ್ಷಣಗಳು ಎಲ್ಲರ ಮನಸ್ಸನ್ನು ತಟ್ಟಿದವು.

ಹತ್ತನೇ ತರಗತಿ ಓದುತ್ತಿರುವ ಹೆಣ್ಣು ಮಕ್ಕಳ ಆಸೆಯಂತೆ ಮುಂದಿನ ದಿನಗಳಲ್ಲಿ ಅವರಿಗೆ ಉಚಿತ ಮೇಕಪ್ ಮತ್ತು ಸೌಂದರ್ಯ ತರಬೇತಿ ನಡೆಸಿಕೊಡುವುದಾಗಿ ಶ್ರೀದೇವಿ ಅವರು ಭರವಸೆ ನೀಡಿದರು.

ಈ ಮಹತ್ವದ ಸೇವಾ ಕಾರ್ಯಕ್ಕೆ ಶಾರದ ದೇವಿ ಅಂಧರ ವಿಕಾಸ ಶಾಲೆಯ ಮುಖ್ಯಸ್ಥರಾದ ಈಶ್ವರಭಟ್ ಮತ್ತು ಧರ್ಮದರ್ಶಿ ಅನಿತಾ ಅವರು ಬಿ.ವಿ.ಎಸ್ ಫ್ಯಾಮಿಲಿ ಸಲೂನ್ ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸಿದರು.
“ಶ್ರೀದೇವಿ ಅವರ ಈ ಸಾಮಾಜಿಕ ಕಾಳಜಿ ಮತ್ತು ಸೇವಾ ಮನೋಭಾವ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ವ್ಯಾಪಾರದ ಜೊತೆಗೆ ಇಂತಹ ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ನಿಜಕ್ಕೂ ಶ್ಲಾಘನೀಯ” ಎಂದು ಅವರು ಶ್ಲಾಘಿಸಿದರು

ಯಕ್ಷಗಾನದ ಸೊಗಡಿನಲ್ಲಿ ಸಾರ್ಥಕ ಪ್ರದರ್ಶನಗೊಂಡ” ಕಿತ್ತೂರು ರಾಣಿ ಚನ್ನಮ್ಮ” ಚರಿತ್ರೆಯ ಪ್ರಸಂಗ.

0

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ ಸಂಗೀತ ನಾಟಕ ಅಕಾಡೆಮಿಯು ‘ವಂದೇ ಮಾತರಂ’ ರಚನೆಯ 150ನೇ ವರ್ಷದ ಸ್ಮರಣಾರ್ಥ ಹಾಗೂ ಮಹಾಕವಿ ಕಾಳಿದಾಸ ಜಯಂತಿಯ ಅಂಗವಾಗಿ ಜುಲೈ 15ರಂದು ದೇಶಾದ್ಯಂತ ‘ರಾಷ್ಟ್ರೀಯ ರಂಗಮಹೋತ್ಸವ’ವನ್ನು ಆಯೋಜಿಸಿತು. ಈ ಮಹೋತ್ಸವದಲ್ಲಿ ಭಾರತದಾದ್ಯಂತ 150ಕ್ಕೂ ಹೆಚ್ಚು ವೇದಿಕೆಗಳಲ್ಲಿ, 150ಕ್ಕೂ ಅಧಿಕ ರಂಗತಂಡಗಳು, 39ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಸುಮಾರು ನಾಲ್ಕು ಸಾವಿರ ಕಲಾವಿದರ ಭಾಗವಹಿಸುವಿಕೆಯಿಂದ ನಾಟಕ ಪ್ರದರ್ಶನಗಳು ನಡೆಯುವ ಮೂಲಕ ಭಾರತೀಯ ರಂಗಪರಂಪರೆಯ ವೈವಿಧ್ಯವನ್ನು ಅನಾವರಣಗೊಳಿಸಲಾಯಿತು. ಈ ಪ್ರಯುಕ್ತ ಬೆಂಗಳೂರಿನ ಎನ್.ಆರ್. ಕಾಲೋನಿಯ ಸಿ. ಅಶ್ವತ್ಥ್ ಕಲಾಮಂದಿರದಲ್ಲಿ ಯಕ್ಷಕಲಾ ಅಕಾಡೆಮಿ (ರಿ.) ವತಿಯಿಂದ ‘ರಾಣಿ ಕಿತ್ತೂರು ಚೆನ್ನಮ್ಮ’ ಯಕ್ಷಗಾನ ಪ್ರಸಂಗವನ್ನು ಸಂಜೆ 6 ಗಂಟೆಗೆ ಪ್ರದರ್ಶಿಸಲಾಯಿತು. ಹಿರಿಯ ಯಕ್ಷಕವಿ ಶ್ರೀಧರ್ ಡಿ.ಎಸ್. ಅವರ ರಚನೆಯಾದ ಈ ಪ್ರಸಂಗವನ್ನು ಯುವ ನಿರ್ದೇಶಕಿ ಚಿಕ್ಕಲಾ ಕೆ. ತುಂಗ ಅವರ ಸಮರ್ಥ ನಿರ್ದೇಶನದಲ್ಲಿ ಯಶಸ್ವಿಯಾಗಿ ರಂಗಕ್ಕೆ ತರಲಾಯಿತು.

ಪ್ರಸಂಗವು ಕಿತ್ತೂರಿನ ಅರಸ ಮಲ್ಲಸರ್ಜ ದೇಸಾಯಿಯ ಕಥಾನಕದಿಂದ ಆರಂಭಗೊಳ್ಳುತ್ತದೆ. ಬೇಟೆಯ ಸಂದರ್ಭದಲ್ಲಿ ಮಲ್ಲಸರ್ಜರನ್ನು ಭೇಟಿಯಾಗುವ ಚೆನ್ನಮ್ಮ, ಅವರನ್ನು ತನ್ನ ತವರು ಕಾಕತಿಗೆ ಆಹ್ವಾನಿಸುತ್ತಾಳೆ. ತಂದೆ ಧೂಳಪ್ಪ ದೇಸಾಯಿಗೆ ಮಲ್ಲಸರ್ಜರನ್ನು ಪರಿಚಯಿಸಿ, ಭವಿಷ್ಯದಲ್ಲಿ ಅವರನ್ನೇ ವಿವಾಹವಾಗುವ ತನ್ನ ಆಶಯವನ್ನು ವ್ಯಕ್ತಪಡಿಸುತ್ತಾಳೆ. ಮಗಳ ಇಚ್ಛೆಗೆ ಸಮ್ಮತಿಸಿದ ಧೂಳಪ್ಪ ದೇಸಾಯಿ ಮಲ್ಲಸರ್ಜರೊಂದಿಗೆ ವಿವಾಹಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಮಂತ್ರಿ ಗುರುಸಿದ್ದಪ್ಪನ ಸಲಹೆಯ ಮೇರೆಗೆ ಮಲ್ಲಸರ್ಜರು ಚೆನ್ನಮ್ಮಳನ್ನು ವಿವಾಹವಾಗುತ್ತಾರೆ. ಸವತಿಯಾದರೂ ವಿಶಾಲ ಹೃದಯದ ರುದ್ರಮ್ಮ (ರುದ್ರಾಂಬೆ), ಚೆನ್ನಮ್ಮಳನ್ನು ಸಂತೋಷದಿಂದ ಅರಮನೆಗೆ ಬರಮಾಡಿಕೊಂಡು, ತನ್ನ ಪುತ್ರ ಶಿವಲಿಂಗ ರುದ್ರಸರ್ಜನ ಜವಾಬ್ದಾರಿಯನ್ನು ಅವಳಿಗೆ ವಹಿಸುತ್ತಾಳೆ. ಮುಂದೆ ಮರಾಠ ದೊರೆ ಬಾಜೀರಾಯನ ಕುತಂತ್ರದಿಂದ ಮಲ್ಲಸರ್ಜರು ಮರಣಹೊಂದುತ್ತಾರೆ. ನಂತರ ಶಿವಲಿಂಗ ರುದ್ರಸರ್ಜನಿಗೆ ಚೆನ್ನಮ್ಮ ಪಟ್ಟಾಭಿಷೇಕ ನೆರವೇರಿಸುತ್ತಾಳೆ. ಆದರೆ ನಿಗೂಢ ಕಾಯಿಲೆಗೆ ತುತ್ತಾದ ಯುವರಾಜನು ಅಕಾಲಿಕವಾಗಿ ನಿಧನ ಹೊಂದುತ್ತಾನೆ.

ಬ್ರಿಟಿಷರ ‘ದತ್ತು ಪುತ್ರನಿಗೆ ಆಡಳಿತದ ಹಕ್ಕಿಲ್ಲ’ ಎಂಬ ನೀತಿಯನ್ನು ಧಿಕ್ಕರಿಸಿ ಚೆನ್ನಮ್ಮ ದತ್ತು ಪುತ್ರನನ್ನು ಉತ್ತರಾಧಿಕಾರಿಯಾಗಿ ಘೋಷಿಸುತ್ತಾಳೆ. ಈ ವಿಷಯವನ್ನು ಸಂಸ್ಥಾನದ ದ್ರೋಹಿಗಳಾದ ಮಲ್ಲಪ್ಪ ಶೆಟ್ಟಿ ಹಾಗೂ ವೆಂಕಟರಾಯ ಧಾರವಾಡದ ಕಲೆಕ್ಟರ್ ಥ್ಯಾಕರೆಗೆ ತಿಳಿಸುತ್ತಾರೆ. ಕಿತ್ತೂರಿನ ಮೇಲೆ ದಂಡೆತ್ತಿ ಬಂದ ಥ್ಯಾಕರೆಯನ್ನು ಚೆನ್ನಮ್ಮಳ ನಿಷ್ಠಾವಂತ ಸೇನಾನಿ ಬಾಳಪ್ಪ ಸಂಹರಿಸುತ್ತಾನೆ. ಇದರಿಂದ ಕೋಪಗೊಂಡ ಬ್ರಿಟಿಷ್ ಅಧಿಕಾರಿ ಚಾಪ್ಲಿನ್, ಹೆಚ್ಚಿನ ಸೈನ್ಯದೊಂದಿಗೆ ದಾಳಿ ನಡೆಸಿ, ಮಲ್ಲಪ್ಪ ಶೆಟ್ಟಿ ಮತ್ತು ವೆಂಕಟರಾಯರ ದ್ರೋಹದ ನೆರವಿನಿಂದ ಚೆನ್ನಮ್ಮಳನ್ನು ವಂಚನೆಯ ಮೂಲಕ ಸೆರೆಹಿಡಿಯುತ್ತಾನೆ.
ಇತ್ತ ಸಂಗೊಳ್ಳಿ ರಾಯಣ್ಣ, ಚೆನ್ನಮ್ಮಳ ಆಶೀರ್ವಾದ ಪಡೆದು ಯುವಕರನ್ನು ಸಂಘಟಿಸಿ, ಛತ್ರಪತಿ ಶಿವಾಜಿಯವರ ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸಿ ಬ್ರಿಟಿಷರ ವಿರುದ್ಧ ಹೋರಾಟ ಮುಂದುವರಿಸುತ್ತಾನೆ. ರಾಯಣ್ಣನ ಶೌರ್ಯದಿಂದ ಕಂಗೆಟ್ಟ ಚಾಪ್ಲಿನ್, ರಾಯಣ್ಣನ ಮಾವ ಲಕ್ಕಪ್ಪನ ಸಹಾಯದಿಂದ ಸ್ನಾನ ಮಾಡುತ್ತಿದ್ದ ವೇಳೆ ಅವರನ್ನು ಮೋಸದಿಂದ ಬಂಧಿಸಿ ಸೆರೆಮನೆಗೆ ಕಳುಹಿಸುತ್ತಾನೆ. ಈ ಸುದ್ದಿ ತಿಳಿದ ಚೆನ್ನಮ್ಮ, ಕಿತ್ತೂರಿನ ಸ್ವಾತಂತ್ರ್ಯದ ಆಶಾಕಿರಣ ಮಂಕಾಗಿರುವುದನ್ನು ಅರಿತು ತೀವ್ರ ದುಃಖದಿಂದ ಕೊನೆಯುಸಿರೆಳೆಯುತ್ತಾಳೆ. ಅಲ್ಲಿಗೆ ‘ರಾಣಿ ಕಿತ್ತೂರು ಚೆನ್ನಮ್ಮ’ ಪ್ರಸಂಗವು ಅಂತ್ಯಗೊಳ್ಳುತ್ತದೆ.

ಪ್ರಸಂಗದಲ್ಲಿ ಚೆನ್ನಮ್ಮಳ ಪಾತ್ರವನ್ನು ನಿರ್ವಹಿಸಿದ ಕುಮಾರಿ ಪೂಜಾ ಆಚಾರ್ಯ ತಮ್ಮ ಪ್ರಭಾವಶಾಲಿ ಅಭಿನಯ, ಭಾವಪೂರ್ಣ ಸಂಭಾಷಣೆ ಹಾಗೂ ಸ್ವರದ ಏರಿಳಿತಗಳ ಮೂಲಕ ಪ್ರೇಕ್ಷಕರ ಮನಗೆದ್ದರು. ರಾಘವೇಂದ್ರ ಐತಾಳ್ ಮಲ್ಲಸರ್ಜನ ಪಾತ್ರಕ್ಕೆ ಸಮರ್ಪಕ ನ್ಯಾಯ ಒದಗಿಸಿದರೆ, ಅಭಿನವ ತುಂಗ ಸಂಗೊಳ್ಳಿ ರಾಯಣ್ಣನಾಗಿ ತಮ್ಮ ಚುರುಕಿನ ನೃತ್ಯ ಹಾಗೂ ರಂಗಸಾನ್ನಿಧ್ಯದಿಂದ ವಿಶೇಷ ಮೆಚ್ಚುಗೆ ಗಳಿಸಿದರು. ಪ್ರದರ್ಶನದ ಅಂತ್ಯದಲ್ಲಿ ಹದಿನಾರು ಕಲಾವಿದರು ‘ವಂದೇ ಮಾತರಂ’ ಗೀತೆಗೆ ನೀಡಿದ ಸಮೂಹಾಭಿನಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂತು. ರಾಷ್ಟ್ರಭಕ್ತಿ, ಇತಿಹಾಸ ಹಾಗೂ ಯಕ್ಷಗಾನದ ಸೊಗಡನ್ನು ಒಟ್ಟುಗೂಡಿಸಿದ ಈ ಪ್ರದರ್ಶನವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಇಂತಹ ರಾಷ್ಟ್ರೀಯ ಮಟ್ಟದ ಮಹೋತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ ಸಂಗೀತ ನಾಟಕ ಅಕಾಡೆಮಿ ಹಾಗೂ ಪ್ರದರ್ಶನವನ್ನು ಸಮರ್ಥವಾಗಿ ರೂಪಿಸಿದ ಯಕ್ಷಕಲಾ ಅಕಾಡೆಮಿ (ರಿ.) ಅಭಿನಂದನಾರ್ಹವಾಗಿವೆ.