Klive Special Article ಬೇರೆಯವರಿಗಾಗಿ ಬರೆಯುವ ಈ ‘ಅದೃಶ್ಯ’ ಲೇಖಕರು ಯಾರು ಗೊತ್ತೇ?…
ಹೆಸರು ಅವರದ್ದು ಶ್ರಮ ಇವರದ್ದು! ಏನಿದು ಘೋಸ್ಟ್ ರೈಟಿಂಗ್?…
ನಾವು ಓದುವ ಇತ್ತೀಚಿನ ದಿನಗಳ ಬಹುತೇಕ ರಾಜಕಾರಣಿಗಳ ಪೇಸ್ ಬುಕ್ ಪೋಸ್ಟ್ ಬರೆಯುವುದು ಇಂತಹ ಬೂತ ಬರಹಗಾರರೆ ಇದಕ್ಕಾಗಿ ತಿಂಗಳಿಗೆ ಹತ್ತರಿಂದ ಇಪ್ಪತ್ತು ಸಾವಿರ ಪಾವತಿಸುತ್ತಾರೆ.
ಘೋಸ್ಟ್ ರೈಟಿಂಗ್ ಎಂದರೆ ಒಬ್ಬರು ಬರೆದ ಸಾಹಿತ್ಯ, ಲೇಖನ, ಭಾಷಣ, ಪುಸ್ತಕ ಅಥವಾ ಯಾವುದೇ ಲಿಖಿತ ಪ್ರತಿಯನ್ನು ಮತ್ತೊಬ್ಬರ ಹೆಸರಿನಲ್ಲಿ ಪ್ರಕಟಿಸುವ ಅಥವಾ ಬಳಸಿಕೊಳ್ಳುವ ಪ್ರಕ್ರಿಯೆ.
ಇದರಲ್ಲಿ ನಿಜವಾಗಿ ಬರೆದ ಬರಹಗಾರನಿಗೆ (Ghostwriter) ಹಣ ಅಥವಾ ಸಂಭಾವನೆ ಸಿಗುತ್ತದೆಯೇ ಹೊರತು, ಆ ಕೃತಿಯ ಮೇಲೆ ಅವರ ಹೆಸರು ಅಥವಾ ಯಾವುದೇ ಹಕ್ಕು ಇರುವುದಿಲ್ಲ.
ಯಾರು ಹಣ ನೀಡಿ ಆ ಸೇವೆಯನ್ನುಪಡೆದುಕೊಳ್ಳುತ್ತಾರೋ ಅವರೇ ಆ ಬರಹದ ಮಾಲೀಕರಾಗುತ್ತಾರೆ ಮತ್ತು ಅವರ ಹೆಸರಿನಲ್ಲೇ ಅದು ಜಗತ್ತಿಗೆ ಪರಿಚಯವಾಗುತ್ತದೆ.
ಘೋಸ್ಟ್ ರೈಟಿಂಗ್ ಎಲ್ಲೆಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ? …
ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಆತ್ಮಕಥೆಗಳಲ್ಲಿ, ಅನೇಕ ಪ್ರಸಿದ್ಧ ವ್ಯಕ್ತಿಗಳು ತಮ್ಮ ಜೀವನದ ಕಥೆಯನ್ನು ಹೇಳಲು ಇಷ್ಟಪಡುತ್ತಾರೆ ಆದರೆ ಅವರಿಗೆ ಬರೆಯುವ ಕಲೆ ಅಥವಾ ಸಮಯ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಘೋಸ್ಟ್ ರೈಟರ್‌ಗಳನ್ನು ಬಳಸಿಕೊಳ್ಳಲಾಗುತ್ತದೆ.
ರಾಜಕೀಯ ಭಾಷಣಗಳಲ್ಲಿ ಹೆಚ್ಚು ಬಳಕೆ, ರಾಜಕೀಯ ನಾಯಕರು ಸಭೆಗಳಲ್ಲಿ ಮಾತನಾಡುವ ಪ್ರಭಾವಶಾಲಿ ಭಾಷಣಗಳನ್ನು ಹೆಚ್ಚಾಗಿ ವೃತ್ತಿಪರ ಬರಹಗಾರರೇ ಸಿದ್ಧಪಡಿಸಿಕೊಡುತ್ತಾರೆ ಅದನ್ನು ಅವರು #ಟೆಲಿಪ್ರಾಂಟ್ ನಲ್ಲಿ ಓದುತ್ತಾರೆ ಅದರ ಬಾವನೆಗೆ ತಕ್ಕ ಹಾಗೆ ಧ್ವನಿ ಏರಿಳಿಸುತ್ತಾ ಕೈಗಳ ಚಲಿಸುತ್ತಾರೆ.
ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಚಿತ್ರ ನಟರು,ದೊಡ್ಡ ಕಂಪನಿಗಳ ಸಿಇಒಗಳು ಅಥವಾ ಉದ್ಯಮಿಗಳ ಹೆಸರಿನಲ್ಲಿ ಬರುವ ಪತ್ರಿಕಾ ಲೇಖನಗಳು ಅಥವಾ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ಇವರೇ ಬರೆಯುತ್ತಾರೆ.
ಕೆಲವು ಜನಪ್ರಿಯ ಲೇಖಕರು ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಪುಸ್ತಕಗಳನ್ನು ಬಿಡುಗಡೆ ಮಾಡಲು ಘೋಸ್ಟ್ ರೈಟರ್‌ಗಳ ಸಹಾಯ ಪಡೆಯುತ್ತಾರೆ.
ಇದು ಕಾನೂನುಬದ್ಧವೇ?…
Klive Special Article ಹೌದು ಇದು ಸಂಪೂರ್ಣವಾಗಿ ಕಾನೂನುಬದ್ಧ ಮತ್ತು ವೃತ್ತಿಪರ ಒಪ್ಪಂದ, ಬರೆಯುವ ಮುನ್ನವೇ ಬರಹಗಾರ ಮತ್ತು ಕ್ಲೈಂಟ್ (ಸೇವೆ ಪಡೆಯುವವರು) ನಡುವೆ ಒಪ್ಪಂದ (Non-Disclosure Agreement – NDA) ಆಗಿರುತ್ತದೆ.
ಇದರ ಪ್ರಕಾರ “ನಾನು ಬರೆದ ಬರಹದ ಮೇಲೆ ನನ್ನ ಯಾವುದೇ ಹಕ್ಕಿರುವುದಿಲ್ಲ ಮತ್ತು ಇದನ್ನು ನಾನೇ ಬರೆದಿದ್ದು ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ” ಎಂದು ಬರಹಗಾರ ಒಪ್ಪಿರುತ್ತಾರೆ.
ಘೋಸ್ಟ್ ರೈಟರ್ ಆಗಲು ಇರಬೇಕಾದ ಮುಖ್ಯ ಅರ್ಹತೆಗಳು ಏನೆಂದರೆ …
ಬೇರೆಯವರ ಧ್ವನಿ, ಆಲೋಚನೆ ಮತ್ತು ಶೈಲಿಗೆ ತಕ್ಕಂತೆ ಬರೆಯುವ ಸಾಮರ್ಥ್ಯ ಇರಬೇಕು, ಗೌಪ್ಯತೆ ಕಾಯ್ದುಕೊಳ್ಳುವುದು ಯಾವುದೇ ಕಾರಣಕ್ಕೂ ತಾವು ಬರೆದ ವಿಷಯವನ್ನು ಬೇರೆಯವರ ಮುಂದೆ ಹಂಚಿಕೊಳ್ಳಬಾರದು,
ಕೊಟ್ಟ ವಿಷಯದ ಬಗ್ಗೆ ಆಳವಾಗಿ ತಿಳಿದುಕೊಂಡು ಬರೆಯುವ ಜಾಣ್ಮೆ ಇರಬೇಕು.
ಘೋಸ್ಟ್_ರೈಟಿಂಗ್” ಎಂಬ ಹೆಸರು ಬರಲು ಅದರ ಸ್ವರೂಪವೇ ಪ್ರಮುಖ ಕಾರಣ.
ಸರಳವಾಗಿ ಹೇಳಬೇಕೆಂದರೆ ಇಲ್ಲಿ ಬರೆಯುವ ಬರಹಗಾರನು “ಭೂತ” (Ghost) ಅಥವಾ ಅದೃಶ್ಯ ವ್ಯಕ್ತಿಯಂತೆ ಕೆಲಸ ಮಾಡುತ್ತಾನೆ.
ಭೂತಗಳು ಕಣ್ಣಿಗೆ ಕಾಣಿಸುವುದಿಲ್ಲ ಆದರೆ ಅವುಗಳ ಪ್ರಭಾವ ಇರುತ್ತದೆ ಎಂದು ನಂಬಲಾಗುತ್ತದಲ್ಲವೇ? ಅದೇ ರೀತಿ ಈ ಪ್ರಕ್ರಿಯೆಯಲ್ಲಿ ಪುಸ್ತಕ ಅಥವಾ ಲೇಖನವನ್ನು ನಿಜವಾಗಿ ಬರೆದ ಬರಹಗಾರನು ಯಾರಿಗೂ ಕಾಣಿಸುವುದಿಲ್ಲ (ಅವರ ಹೆಸರು ಎಲ್ಲೂ ಪ್ರಕಟವಾಗುವುದಿಲ್ಲ).
ಅವರು ತೆರೆಯ ಮರೆಯಲ್ಲಿಯೇ ಉಳಿಯುವುದರಿಂದ ಅವರಿಗೆ ‘ಘೋಸ್ಟ್ ರೈಟರ್’ (ಅದೃಶ್ಯ ಬರಹಗಾರ) ಎಂದು ಹೆಸರು ಬಂತು.
ಭೂತವು ಮತ್ತೊಬ್ಬರ ದೇಹವನ್ನು ಆವಹಿಸಿಕೊಂಡು ಮಾತನಾಡುವಂತೆ (ಕಾಲ್ಪನಿಕ ನಂಬಿಕೆಗಳ ಪ್ರಕಾರ) ಈ ಬರಹಗಾರನು ತನ್ನ ಸ್ವಂತ ಶೈಲಿಯನ್ನು ಬಿಟ್ಟು ಯಾರಿಗೆ ಬರೆದುಕೊಡುತ್ತಿದ್ದಾರೋ ಅವರ ಆಲೋಚನೆ, ಧ್ವನಿ ಮತ್ತು ಶೈಲಿಯನ್ನು ಅಳವಡಿಸಿಕೊಂಡು ಬರೆಯಬೇಕಾಗುತ್ತದೆ.
ಕೃತಿ ಪ್ರಕಟವಾದ ನಂತರ ಜಗತ್ತಿಗೆ ಕೇವಲ ಆ ಕೃತಿಯ ಮಾಲೀಕರು (ಉದಾಹರಣೆಗೆ: ಸೆಲೆಬ್ರಿಟಿ ಅಥವಾ ರಾಜಕಾರಣಿ) ಮಾತ್ರ ತಿಳಿಯುತ್ತಾರೆ ಇದನ್ನು ಬರೆದ ಅಸಲಿ ಬರಹಗಾರನ ಅಸ್ತಿತ್ವವು ಕೇವಲ ಒಂದು ನೆರಳಿನಂತೆ ರಹಸ್ಯವಾಗಿಯೇ ಉಳಿಯುತ್ತದೆ.
ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಅಮೆರಿಕಾದಲ್ಲಿ ಈ ಪದವು ವೃತ್ತಿಪರ ಜಗತ್ತಿನಲ್ಲಿ ಹೆಚ್ಚು ಬಳಕೆಗೆ ಬಂತು.
ವಿಶೇಷವಾಗಿ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ, ತೆರೆಯ ಮರೆಯಲ್ಲಿದ್ದುಕೊಂಡು ಬೇರೆಯವರಿಗಾಗಿ ಬರೆಯುವವರನ್ನು ಗುರುತಿಸಲು ಈ ರೂಪಕವನ್ನು (Metaphor) ಬಳಸಲು ಪ್ರಾರಂಭಿಸಲಾಯಿತು.
