B.Y. Raghavendra ಶಿವಮೊಗ್ಗದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಸಜ್ಜಾಗುತ್ತಿದೆ ಪ್ರಾದೇಶಿಕ ವಿಜ್ಞಾನ ಕೇಂದ್ರ: ಕಾಮಗಾರಿ ಪ್ರಗತಿ ಪರಿಶೀಲನೆ!
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿದ್ಯಾರ್ಥಿಗಳಲ್ಲಿ ಜ್ಞಾನ, ಸೃಜನಶೀಲತೆ ಹಾಗೂ ವೈಜ್ಞಾನಿಕ ಕುತೂಹಲವನ್ನು ಬೆಳೆಸುವ ನಿಟ್ಟಿನಲ್ಲಿ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ “ಪ್ರಾದೇಶಿಕ ವಿಜ್ಞಾನ ಕೇಂದ್ರದ” (Regional Science Centre) ಕಟ್ಟಡ ಕಾಮಗಾರಿಯನ್ನು ಇಂದು ಸಂಸದ ಬಿ.ವೈ.ರಾಘವೇಂದ್ರ ವೀಕ್ಷಿಸಿ, ಪ್ರಗತಿ ಪರಿಶೀಲನೆ ನಡೆಸಿದರು.
ನಮ್ಮ ಶಿವಮೊಗ್ಗಕ್ಕೆ ಈ ವಿಜ್ಞಾನ ಕೇಂದ್ರವನ್ನು ಮಂಜೂರು ಮಾಡುವಂತೆ ಬಿ.ವೈ.ರಾಘವೇಂದ್ರ ಅವರ ಪೂಜ್ಯ ತಂದೆಯವರಾದ ಅಂದಿನ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ,ಸಂಸದ ರಾಘವೇಂದ್ರ ರವರು 2020 ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯ ಫಲವಾಗಿ, ಕೇಂದ್ರ ಸರ್ಕಾರವು ಕೆಟಗರಿ-2 ರ ಅಡಿಯಲ್ಲಿ 5 ಎಕರೆ ಪ್ರದೇಶದಲ್ಲಿ ಸುಮಾರು ರೂ 11.70 ಕೋಟಿ ವೆಚ್ಚದಲ್ಲಿ ಈ ಯೋಜನೆಗೆ ಚಾಲನೆ ನೀಡಿದೆ.
ಈ ಕೇಂದ್ರವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 50:50 ಸಹಭಾಗಿತ್ವದ ಅನುದಾನದಡಿ ಅನುಷ್ಠಾನಗೊಳ್ಳುತ್ತಿದ್ದು, ಪ್ರಸ್ತುತ ಕಟ್ಟಡ ನಿರ್ಮಾಣ ಕಾರ್ಯವು ಶೇ.95 ರಷ್ಟು ಭರದಿಂದ ಪೂರ್ಣಗೊಂಡಿದೆ.
ವಿಜ್ಞಾನ ಕೇಂದ್ರದ ಪ್ರಮುಖ ಆಕರ್ಷಣೆಗಳು ಮತ್ತು ಸೌಲಭ್ಯಗಳು:
- Fun Science Gallery: ಆಟ ಮತ್ತು ಪ್ರಾಯೋಗಿಕ ಅನುಭವಗಳ ಮೂಲಕ ಸಾಮಾನ್ಯ ವಿಜ್ಞಾನದ ಕ್ಲಿಷ್ಟಕರ ಪರಿಕಲ್ಪನೆಗಳನ್ನು ವಿದ್ಯಾರ್ಥಿಗಳು ಸುಲಭವಾಗಿ ತಿಳಿಯುವ ಅದ್ಭುತ ವ್ಯವಸ್ಥೆ ಇದೆ.
- Thematic Gallery: ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ, ಸಮುದ್ರದೊಳಗಿನ ವಿಸ್ಮಯ ಜಗತ್ತು ಹಾಗೂ ನೈಸರ್ಗಿಕ ಖನಿಜ ಸಂಪನ್ಮೂಲಗಳ ಕುರಿತಾದ ವಿಶೇಷ ಪ್ರದರ್ಶನ.
- Temporary Exhibition Gallery: ಕಾಲಕಾಲಕ್ಕೆ ಹೊಸ ವೈಜ್ಞಾನಿಕ ಆವಿಷ್ಕಾರಗಳು ಹಾಗೂ ವಿಶೇಷ ವೈಜ್ಞಾನಿಕ ಪ್ರದರ್ಶನಗಳನ್ನು ಆಯೋಜಿಸಲು ಮೀಸಲಾದ ಗ್ಯಾಲರಿ.
- ಆಡಿಟೋರಿಯಂ: ವಿವಿಧ ವೈಜ್ಞಾನಿಕ ಸಂವಾದಗಳು, ಕಾರ್ಯಾಗಾರಗಳು ಹಾಗೂ ಸೆಮಿನಾರ್‌ಗಳನ್ನು ನಡೆಸಲು ಅನುವಾಗುವಂತೆ ಸುಸಜ್ಜಿತ 150 ಆಸನಗಳ ಸಾಮರ್ಥ್ಯವುಳ್ಳ ಆಡಿಟೋರಿಯಂ ನಿರ್ಮಾಣವಾಗುತ್ತಿದೆ.
B.Y. Raghavendra ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಪರಿಷತ್ತು (NCSM) ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (KSTePS) ಮೂಲಕ ಅನುಷ್ಠಾನಗೊಳ್ಳುತ್ತಿರುವ ಈ ಕೇಂದ್ರವು ಕಾರ್ಯಾರಂಭವಾದ ಬಳಿಕ, ಶಿವಮೊಗ್ಗ ಜಿಲ್ಲೆಯ ಪ್ರಾಥಮಿಕ ಶಾಲೆಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗಿನ ಸಮಸ್ತ ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನವನ್ನು ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳಲು ಮತ್ತು ಅವರಲ್ಲಿ ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಲು ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದೆ.
ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ, ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅವಿನಾಶ್, NCSM ನ ಅಧೀಕ್ಷಕ ಇಂಜಿನಿಯರ್ ಶ್ರೀ ಎಂ. ತಿರವಿಯರಾಜ್ ಹಾಗೂ ಕಾಲೇಜಿನ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
