Friday, July 17, 2026
Friday, July 17, 2026

ನಿಗದಿತ ಸ್ಥಳದಲ್ಲಿ ಮಾತ್ರ ಸಿಟಿ ಬಸ್ ನಿಲುಗಡೆ:ಆಟೋ ದರ ನಿಷ್ಕರ್ಷೆಗೆ ಚರ್ಚೆಯ ನಂತರ ನಿರ್ಧಾರ : ಪ್ರಭುಲಿಂಗ ಕವಳಿಕಟ್ಟಿ

Date:

ಶಿವಮೊಗ್ಗ ನಗರ ಸಾರಿಗೆ ಬಸ್‌ಗಳು ನಿಗದಿತ ಬಸ್‌ಸ್ಟಾಪ್‌ಗಳ ಬದಲಾಗಿ ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಳಿಸುತ್ತಿರುವುದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಇನ್ನುಮುಂದೆ ನಿಗದಿತ ಸ್ಥಳಗಳಲ್ಲಿಯೇ ಬಸ್‌ಗಳನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳು ನಗರ ಸಾರಿಗೆ ಬಸ್ ಚಾಲಕರಿಗೆ ಸೂಚನೆ ನೀಡಿದ್ದಾರೆ.

ನಗರದ ಆಟೋರಿಕ್ಷಾ ಸಂಚಾರ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಹಾಗೂ ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಸ್ ಚಾಲಕರಿಗೆ ಕೂಡಲೇ ಸೂಚನೆ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ನೆರೆಯ ಜಿಲ್ಲೆಗಳಲ್ಲಿ ಜಾರಿಯಲ್ಲಿರುವ ಆಟೋ ದರ ಪರಿಷ್ಕರಣೆ ಮಾನದಂಡಗಳನ್ನು ಪರಿಶೀಲಿಸಿ, ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ದರ ಪರಿಷ್ಕರಣೆ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರ್ಯಾಪಿಡೋ ಅಥವಾ ಇತರ ಯಾವುದೇ ದ್ವಿಚಕ್ರ ವಾಹನ ಸಾರಿಗೆ ಸೇವೆಗಳು ಸರ್ಕಾರದ ಮಾರ್ಗಸೂಚಿಯಂತೆ ಮಾತ್ರ ಕಾರ್ಯನಿರ್ವಹಿಸಬೇಕು. ಅಗತ್ಯ ಅನುಮತಿ ಮತ್ತು ದಾಖಲೆಗಳಿಲ್ಲದೆ ಸೇವೆ ನೀಡಿದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು

ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಆಟೋ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕು. ನಗರದಲ್ಲಿರುವ 5,665 ನೋಂದಾಯಿತ ಆಟೋಗಳಲ್ಲಿ ಚಾಲಕ ಹಾಗೂ ವಾಹನದ ಮಾಹಿತಿ ಫಲಕವನ್ನು ಅಳವಡಿಸಬೇಕು. ವಿಮೆಯನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳಬೇಕು. ಮಾದಕ ವಸ್ತುಗಳ ಸಾಗಾಣಿಕೆ ಕುರಿತು ಮಾಹಿತಿ ದೊರೆತರೆ ಪೊಲೀಸ್ ಇಲಾಖೆಗೆ ತಿಳಿಸಿ ಸಮಾಜದ ಸುರಕ್ಷತೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.

ರ್ಯಾಪಿಡೋ ಸ್ಥಗಿತಕ್ಕೆ ಆಟೋ ಚಾಲಕರ ಒತ್ತಾಯ

ಸಭೆಯಲ್ಲಿ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಲವು ಬೇಡಿಕೆಗಳನ್ನು ಮುಂದಿಟ್ಟರು. ಸರ್ಕಾರ ರ್ಯಾಪಿಡೋ ಸೇವೆಗೆ ಸಂಬಂಧಿಸಿದ ಮಾರ್ಗಸೂಚಿ ಪ್ರಕಟಿಸುವವರೆಗೆ ದ್ವಿಚಕ್ರ ವಾಹನ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದರು. ರ್ಯಾಪಿಡೋ ಸೇವೆಯಿಂದ ಆಟೋ ಚಾಲಕರ ಜೀವನೋಪಾಯಕ್ಕೆ ಧಕ್ಕೆಯಾಗುತ್ತಿದ್ದು, ಹಲವು ಚಾಲಕರು ಅಗತ್ಯ ಪರವಾನಗಿ ಹೊಂದಿಲ್ಲದ ಕಾರಣ ಸಾರ್ವಜನಿಕರ ಸುರಕ್ಷತೆಯ ಮೇಲೂ ಪ್ರಶ್ನೆಗಳು ಉದ್ಭವಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.

ಆಟೋಗಳ ಕನಿಷ್ಠ ಪ್ರಯಾಣ ದರವನ್ನು ₹40ರಿಂದ ₹50ಕ್ಕೆ ಹೆಚ್ಚಿಸಬೇಕು. ನಗರದಲ್ಲಿ 10 ಕಿ.ಮೀ. ವ್ಯಾಪ್ತಿಗೆ ಸೀಮಿತಗೊಳಿಸಿರುವ ಆಟೋ ಪರವಾನಗಿಯನ್ನು 20 ಕಿ.ಮೀ.ವರೆಗೆ ವಿಸ್ತರಿಸಬೇಕು. ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಬಳಿ ಪ್ರಯಾಣಿಕರನ್ನು ಇಳಿಸುವ ವೇಳೆ ದಂಡ ವಿಧಿಸುವ ಕ್ರಮದಲ್ಲಿ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.

ಬಸ್ ಚಾಲಕರ ವಿರುದ್ಧ ಕ್ರಮಕ್ಕೆ ಆಗ್ರಹ

ನಗರ ಸಾರಿಗೆ ಬಸ್‌ಗಳು ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದರಿಂದ ಆಟೋ ಚಾಲಕರಿಗೆ ಪ್ರಯಾಣಿಕರು ಸಿಗುತ್ತಿಲ್ಲ. ಆದ್ದರಿಂದ ಬಸ್‌ಗಳು ನಿಗದಿತ ಬಸ್‌ಸ್ಟಾಪ್‌ಗಳಲ್ಲಿಯೇ ನಿಲ್ಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಟೋ ಚಾಲಕರ ಸಂಘದ ಕಾರ್ಯದರ್ಶಿ ಅಕ್ರಮ್ ಪಾಶಾ ಆಗ್ರಹಿಸಿದರು. ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಂಭವಿಸುವ ಸಿಗ್ನಲ್ ಉಲ್ಲಂಘನೆ ಪ್ರಕರಣಗಳನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸುವಂತೆ ಮನವಿ ಮಾಡಿದರು.

ಸಂಘದ ಅಧ್ಯಕ್ಷ ಅಲ್ಲಾಭಕ್ಷ ಮಾತನಾಡಿ, ರೈಲು ವಿಳಂಬವಾದಾಗ ರೈಲ್ವೆ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಕಾಯಲು ಅವಕಾಶ ನೀಡಬೇಕು. ಬಸ್ ಹಾಗೂ ರೈಲ್ವೆ ನಿಲ್ದಾಣಗಳ ಬಳಿ ಆಟೋ ಚಾಲಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಳಕರ್, ರಾಜ್ಯ ರಸ್ತೆ ಸಾರಿಗೆ ನಿಗಮದ ನಿಯಂತ್ರಣಾಧಿಕಾರಿ ದಿನೇಶ್ ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Aerticle ಚಿನ್ನಕ್ಕಿಂತಲೂ ಚೆನ್ನ, ಚನ್ನಪ್ಪಯ್ಯ ಅವಧೂತರು ...

Klive Special Aerticle ದಾವಣಗೆರೆಯ ಸಮೀಪದ ಆನಗೋಡಿನಿಂದ ಸುಮಾರು 3 ಕಿ.ಮೀ...

ವಾಡಿಕೆಗಿಂತ ಕಡಿಮೆ ಮಳೆ ರೈತರು ಕೃಷಿ ಇಲಾಖೆ ಸೂಚಿಸಿದ ವ್ಯವಸಾಯ ಪದ್ಧತಿ ಅನುಸರಿಸಿ : ಗಿರಿಜಾ ಪಟ್ಟಣಶೆಟ್ಟಿ

ಶಿವಮೊಗ್ಗ ತಾಲ್ಲೂಕಿನಲ್ಲಿ ಈ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂದ ಕಡಿಮೆ ಮಳೆಯಾಗಿರುವುದಲ್ಲದೇ,...