ರಾಜ್ಯದಲ್ಲಿ ಕೋವಿಡ್-19 ರ ಸೊಂಕಿನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು ಸರ್ಕಾರಿ ವಸತಿ ಶಾಲೆಗಳಿಗೆ ನೇರವಾಗಿ ದಾಖಲಿಸಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್) ನಿರ್ಧರಿಸಿದೆ.
ಮೊರಾರ್ಜಿ ದೇಸಾಯಿ , ಕಿತ್ತೂರು ರಾಣಿ ಚನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್, ಶ್ರೀಮತಿ ಇಂದಿರಾ ಗಾಂಧಿ, ಏಕಲವ್ಯ ಮಾದರಿ ವಸತಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು 5 ನೇ ತರಗತಿಯಲ್ಲಿ ಪ್ರವೇಶ ಪರೀಕ್ಷೆ ಬರೆಯುವ ಮೂಲಕ ವಸತಿ ಶಾಲೆಗಳಿಗೆ ಆಯ್ಕೆಯಾಗುತ್ತಾರೆ.
ಆದರೆ, ಕೋವಿಡ್ – 19ರ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಪೋಷಕರ ಪರಿಶಿಷ್ಟ ಜಾತಿ , ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಮಕ್ಕಳು ರಾಜ್ಯದ ಯಾವುದೇ ವಸತಿ ಶಾಲೆಗಳಲ್ಲಿ ಖಾಲಿ ಇರುವ ಸ್ಥಾನಕ್ಕೆ ನೇರವಾಗಿ ಪ್ರವೇಶ ಕಲ್ಪಿಸಲು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ತೀರ್ಮಾನಿಸಿದೆ.
ರಾಜ್ಯದಲ್ಲಿ ಒಟ್ಟು 826 ವಸತಿ ಶಾಲೆಗಳಿವೆ. ಅದರಲ್ಲಿ 40,540 ಸೀಟುಗಳಿವೆ. ಇಲ್ಲಿ 6 ರಿಂದ 12 ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಬಹುದಾಗಿದೆ.
ಸರ್ಕಾರಿ, ಅನುದಾನಿತ ಹಾಗೂ ನೋಂದಾಯಿತ ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಿಂದ ಮಕ್ಕಳು ಪ್ರವೇಶ ಪರೀಕ್ಷೆಯೊಂದಿಗೆ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಬರುವ ಯಾವುದೇ ವಸತಿ ಶಾಲೆಗೆ ಪ್ರವೇಶ ಪರೀಕ್ಷೆಯೊಂದಿಗೆ 6 ನೇ ತರಗತಿಗೆ ದಾಖಲಾಗಬಹುದು.
11ನೇ ತರಗತಿಗೆ ಪ್ರವೇಶ ಪರೀಕ್ಷೆ ಇಲ್ಲದೇ ಹಾಗೂ 10 ನೇ ತರಗತಿಗೆ ಮೆರಿಟ್ ಆಧಾರದ ಮೇಲೆ ದಾಖಲಿಸಬಹುದಾಗಿದೆ. ಕ್ರೈಸ್ ತೀರ್ಮಾನದ ಕುರಿತಂತೆ ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಜಿಲ್ಲಾಧಿಕಾರಿಗಳು , ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಮಾಹಿತಿ ರವಾನಿಸಿದೆ.
ನಿರ್ಧಿಷ್ಟ ಮಕ್ಕಳಿಗೆ ವಸತಿ ಶಾಲೆಗೆ ನೇರ ಪ್ರವೇಶ
ನಾಡಿನ ಹಿತ ನೋಡಿ ಮಿಸಲಾತಿ : ಬಸವರಾಜ್ ಬೊಮ್ಮಾಯಿ
ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಹೆಚ್ಚಿಸಬೇಕೆಂಬ ವಾಲ್ಮೀಕಿ ಸಮುದಾಯದ ಬೇಡಿಕೆಯನ್ನು ನ್ಯಾಯಯುತವಾಗಿ ಒದಗಿಸಲು ಪ್ರಯತ್ನಿಸುತ್ತೇನೆ. ಆದರೆ, ಇದು ಸುಲಭವಲ್ಲ , ಸವಾಲಿನ ಕೆಲಸ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , “ಯಾವ ರೀತಿ ಮೀಸಲಾತಿ ಹೆಚ್ಚಿಸಬಹುದೆಂಬ ಬಗ್ಗೆ ಕಾನೂನು ತಜ್ಞರ ಸಮಿತಿ ರಚಿಸಲಾಗಿದೆ. ನಾಡಿನ ಹಿತ ಮತ್ತು ಜನಾಂಗದ ಹಿತ ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ” ಎಂದರು.

ಇದೇ ಸಂದರ್ಭದಲ್ಲಿ ಅವರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್, ಹಾಗೂ ಟ್ವಿಟರ್, ಯ್ಯೂಟುಬ್ ಚಾನೆಲ್ ಗೆ ಚಾಲನೆ ನೀಡಿದರು.
” ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿಯವರಲ್ಲಿ ಬೇಡಿಕೆ ಇಟ್ಟಾಗಿದೆ. ಅವರು ಮೀಸಲಾತಿಯನ್ನು ಹೆಚ್ಚಿಸುತ್ತಾರೆಂಬ ವಿಶ್ವಾಸವೂ ಇದೆ”.ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ, ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ರಾಮಾಯಣ ಭಾರತೀಯ ಸಂಸ್ಕೃತಿಯ ಪ್ರತೀಕ : ಡಾ. ಶಿವಾನಂದ ಕೆಳಗಿನಮನಿ
ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ರಾಜಕಾರಣದ ಕೈಪಿಡಿ ಎಂದು ಕುವೆಂಪು ವಿವಿ ಪ್ರಾಧ್ಯಾಪಕ ಡಾ. ಶಿವಾನಂದ ಕೆಳಗಿನಮನಿ ಹೇಳಿದ್ದಾರೆ.
ಶಿವಮೊಗ್ಗದ ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು
ರಾಮಾಯಣ ವಾಲ್ಮೀಕಿ ಬರೆದ ಅತ್ಯಂತ ಶ್ರೇಷ್ಠ ಕೃತಿಯಾಗಿದೆ. ಜನಜೀವನವನ್ನು ಪವಿತ್ರಗೊಳಿಸಿದೆ. ಕುಟುಂಬಗಳಿಗೆ ಗೌರವ ನೀಡಿದೆ. ಸಂಸ್ಕೃತಿಯ ಪ್ರತೀಕವಾಗಿದೆ. ವಿಶೇಷವಾಗಿ ರಾಜಕೀಯ ತಿಳಿವಳಿಕೆ ನೀಡಿದೆ. ರಾಜಕಾರಣದ ಅತ್ಯಂತ ಸೂಕ್ಷ್ಮ ವಿಷಯಗಳು ಇಡೀ ರಾಮಾಯಣದ ತುಂಬಾ ಅಡಗಿವೆ. ರಾಜಧರ್ಮವನ್ನು ಅದು ಹೇಳುತ್ತದೆ. ರಾಮಾಯಣ ಕೃತಿ ರಾಜಕಾರಣದ ಗೃಹಸ್ಥಾಶ್ರಮವೂ ಆಗಿದೆ. ಹಾಗಾಗಿಯೇ ಇದು ರಾಜಕಾರಣದ ಕೈಪಿಡಿ ಎಂದರು.

ಶ್ರೀರಾಮ ಆದರ್ಶ ಎಂಬ ಭಾವನೆಯನ್ನು ಬೆಳೆಸುತ್ತದೆ. ಇಡೀ ರಾಮಾಯಣದ ಕತೆ ಒಂದು ಸಾಮಾನ್ಯ ಜೀವನದ ನೆಲೆಯನ್ನು ಒದಗಿಸುವುದರ ಜೊತೆಗೆ ದ್ವೇಷವನ್ನು ಅಳಿಸುವ ಮತ್ತು ಕರ್ತವ್ಯದ ಸಂಘರ್ಷವನ್ನು ತಿಳಿಸುವ ಜೊತೆಗೆ ಸಾಹಿತ್ಯವನ್ನು ಗುರುತಿಸುವ ಕೆಲಸವನ್ನು ರಾಮಾಯಣ ಕೃತಿ ಮಾಡುತ್ತದೆ. ಸಾಹಿತ್ಯದ ಮೊದಲ ಸೃಷ್ಠಿಯೇ ರಾಮಾಯಣ ಕೃತಿಯಾಗಿದೆ ಎಂದು ಹೇಳಿದರು.
ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ರಾಮಾಯಣ, ಸಂಸ್ಕೃತಿಯ ಪ್ರತೀಕವಾಗಿದೆ. ಶ್ರೀರಾಮ ಒಬ್ಬ ಆದರ್ಶ ಪುರುಷ ಎನ್ನುವುದಕ್ಕೆ ವಾಲ್ಮೀಕಿ ರಾಮಾಯಣದಲ್ಲಿ ಬೇಕಾದಷ್ಟು ಉದಾಹರಣೆಗಳಿವೆ. ಆದರೆ, ಪ್ರಸಕ್ತ ಕೆಲವು ರಾಜಕಾರಣಿಗಳು ಶ್ರೀರಾಮನನ್ನು ಕೇವಲ ರಾಜಕಾರಣಕ್ಕಾಗಿ ಎಳೆದು ತರುತ್ತಿರುವುದು ಅತ್ಯಂತ ದುರಂತವಾಗಿದೆ. ಜಗತ್ತೇ ಶ್ರೀರಾಮ ಹುಟ್ಟಿದ ಜಾಗ ಅಯೋಧ್ಯೆ ಎಂದು ಒಪ್ಪಿಕೊಂಡರೆ ಕೆಲವರು ಮಾತ್ರ ಇದಕ್ಕೆ ಆಧಾರ ಎಲ್ಲಿ ಎಂದು ಕೇಳುತ್ತಾರೆ. ವಾಲ್ಮೀಕಿ ಎಂದರೆ ಚರ್ಚೆಯ ವಸ್ತುವೇ ಅಲ್ಲ, ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಆತ ಸೀಮಿತವಾಗಿಲ್ಲ. ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದಾರೆ. ರಾಮಾಯಣ ಅದೊಂದು ಪುಸ್ತಕವಲ್ಲ, ಜೀವನ ಧರ್ಮವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿ ಪ್ರಕಾಶ್, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ನಿರ್ದೇಶಕ ಬಿ.ಎಸ್. ನಾಗರಾಜ್, ಪಾಲಿಕೆ ಸದಸ್ಯ ಡಿ. ನಾಗರಾಜ್, ವಿಶ್ವಾಸ್, ವಾಲ್ಮೀಕಿ ಸಮಾಜದ ಪ್ರಮುಖರಾದ ಶಿವಪ್ಪ, ರೂಪಾ ಲಕ್ಷ್ಮಣ್, ಸೀತಾರಾಮ್, ಶಿವಾಜಿ, ಲಕ್ಷ್ಮಣಪ್ಪ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ. ಲಕ್ಷ್ಮಿಪ್ರಸಾದ್, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ, ಜಿಪಂ ಸಿಇಒ ಎಂಎಲ್ ವೈಶಾಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್. ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.
ತಾಲಿಬಾನ್: ಮಗು ಚಿವುಟಿ, ತೊಟ್ಟಿಲು ತೂಗುವ ತಂತ್ರ
ಇತ್ತೀಚಿಗೆ ಆಫಘಾನಿಸ್ತಾನದ ಆಂತರಿಕ ಯುದ್ಧದಲ್ಲಿ ಸಾವಿಗೀಡಾದ ಸಂಬಂಧಿಕರಿಗೆ ನಿವೇಶನ ನೀಡುವುದಾಗಿ ಅಲ್ಲಿನ ಪ್ರಸ್ತುತ ತಾಲಿಬಾನ್ ಸರ್ಕಾರದ ಒಳಾಡಳಿತದ ಮಂತ್ರಿ ಸಿರಾಜುದ್ದೀನ್ ಹಕ್ಕಾನಿ ಹೇಳಿದ್ದಾರೆ.
ಕಾಬುಲ್ ಹೋಟೆಲ್ನಲ್ಲಿ ಸೇರಿದ್ದ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಾವಿಗೀಡಾದವರ ಸಂಬಂಧಿಗಳ ಪ್ರತಿ ಕುಟುಂಬಕ್ಕೆ ಒಂದು ನಿವೇಶನ ಮತ್ತು 10 ಸಾವಿರ ಆಫಘಾನಿಸ್ (112 USG) ಹಣ ಪರಿಹಾರ ನೀಡಿದೆ. ಈ ಕ್ರಮದ ಮೂಲಕ ಜಗತ್ತಿಗೆ ತನ್ನ ಪ್ರಜಾ ಪ್ರೀತಿಯನ್ನ ತೋರಿಸಿದೆ. ತನ್ನವರನ್ನೇ ಅಮಾನುಷವಾಗಿ ಮಾರಣಹೋಮಗೈದ ಅಲ್ಲಿನ ತಾಲಿಬಾನಿಗಳ ಈ ನಾಟಕ ಕಣ್ಣೊರೆಸುವ ತಂತ್ರವಾಗಿದೆ ಎನ್ನದೇ ವಿಧಿಯಿಲ್ಲ.
ಈಗಾಗಲೇ ಅಮೆರಿಕ ನಿರೀಕ್ಷಿಸಿದಂತೆ ಆಫಘಾನಿಸ್ತಾನದ ಇಡಿ ಜನಸಂಖ್ಯೆಯು ಬಡತನಕ್ಕೆ ಜಾರಿ ಬೀಳುವ ಸಂದರ್ಭವಿದೆ. ಈ ಅಭಿಪ್ರಾಯದ ವಿರುದ್ಧ ಇಡೀ ಜಗತ್ತನ್ನು ನೆರವಿಗಾಗಿ ತನ್ನತ್ತ ಸೆಳೆಯುವ ಪ್ರಯತ್ನ ಇದಾಗಿದೆ. ಈ ಪರಿಹಾರ ಘೋಷಣೆ ಮಾಡಿರುವುದು ತಾಲಿಬಾನಿಗಳ ಸರ್ಕಾರದಲ್ಲಿ ಆಂತರಿಕವಾಗಿ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದೆ.
ಅಮೇರಿಕಾದ ಬಾಂಬ್ ದಾಳಿಯಲ್ಲಿ ಸಾವಿಗೀಡಾದ ತನ್ನ ಸೈನಿಕರ ಹುತಾತ್ಮರು ಎಂದು ಕರೆದುಕೊಂಡಿದೆ.ಮಹಿಳೆಯರು ಮತ್ತು ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಂಡ ತಾಲಿಬಾನ್ ಸರ್ಕಾರ ಇನ್ನೂ ಏನೇನು ನಾಟಕವಾಡುತ್ತದೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಪರಿಹಾರ ಘೋಷಣೆ ಜಗತ್ತಿನ ಇತರ ದೇಶಗಳನ್ನ ಹುಬ್ಬೇರಿಸುವಂತೆ ಮಾಡಿದೆ.
ವಾಲ್ಮೀಕಿ ಪ್ರಶಸ್ತಿ ಘೋಷಣೆ
2020 – 21 ನೇ ಸಾಲಿನ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಹೆಸರನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀ ರಾಮುಲು ಪ್ರಕಟಿಸಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಪ್ರಶಸ್ತಿ ಪ್ರದಾನ ಮಾಡಿದರು. ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
2021 ನೇ ಸಾಲಿನ ಪ್ರಶಸ್ತಿ ಪುರಸ್ಕೃತರು
ಕೆ. ಸಿ. ನಾಗರಾಜು ( ಸಮಾಜ ಸೇವೆ) ಬೆಂಗಳೂರು ವಿಭಾಗ. ಲಕ್ಷ್ಮಿ ಗಣಪತಿ ಸಿದ್ದಿ ( ಸಮಾಜ ಸೇವೆ), ಬೆಳಗಾವಿ ವಿಭಾಗ. ಟಿ.ಅಶ್ವತ್ಥರಾಮಯ್ಯ ( ಸಮಾಜ ಸೇವೆ). ಜಂಬಯ್ಯ ನಾಯಕ ( ಸಮಾಜ ಸೇವೆ). ಪ್ರೊ.ಎಸ್.ಆರ್.ನಿರಂಜನ ( ಶಿಕ್ಷಣ ಕ್ಷೇತ್ರ), ಮೈಸೂರು ವಿಭಾಗ. ಭಟ್ರ ಹಳ್ಳಿ ಗೂಳಪ್ಪ (ಸಾಮಾಜ ಸೇವೆ), ಕಲಬುರ್ಗಿ ವಿಭಾಗ.
2020 ನೇ ಸಾಲಿನ ಪ್ರಶಸ್ತಿ ಪುರಸ್ಕೃತರು
ಡಾ. ಕೆ. ಆರ್ ಪಾಟೀಲ್ (ಸಾಮಾಜ ಸೇವೆ), ಬೆಳಗಾವಿ ವಿಭಾಗ. ಗೌರಿ ಕೊರಗ (ಸಮಾಜ ಸೇವೆ), ಮೈಸೂರು ವಿಭಾಗ. ಮಾರಪ್ಪ ನಾಯಕ ( ಸಂಘಟನೆ), ಕಲಬುರ್ಗಿ ವಿಭಾಗ. ಡಾ. ಬಿ. ಎಲ್. ವೇಣು (ಸಾಹಿತ್ಯ) , ಬೆಂಗಳೂರು ವಿಭಾಗ. ತಿಪ್ಪೇಸ್ವಾಮಿ ಹೆಚ್.(ಸಿರಿಗೆರೆ ತಿಪ್ಪೇಶ್) (ಸಮಾಜ ಸೇವೆ), ಬೆಂಗಳೂರು ಕೇಂದ್ರ ಸ್ಥಾನ.
ಉತ್ತರಾಖಂಡ್ ನಲ್ಲಿ ವರುಣನ ಆರ್ಭಟ
ಉತ್ತರಾಖಂಡದಲ್ಲಿ ವರುಣನ ಆರ್ಭಟದಿಂದ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 42 ಕ್ಕೆ ಏರಿಕೆಯಾಗಿದೆ. ಉತ್ತರಾಖಂಡ್ ಸರ್ಕಾರವು ಮಳೆಯಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಮಳೆಯಿಂದಾಗಿ ಉತ್ತರಾಖಂಡ್ ನ ನೈನಿತಾಲ್, ಅಲ್ಮೋರಾ, ಚಂಪಾವತ್, ಪಿಥೋರಘರ್, ಉಧಮ್ ಸಿಂಗ್ ನಗರ, ಲಾಲ್ಕೂವಾನ್ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮೂಲಕ ಈವರೆಗೂ 300ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ. ಉತ್ತರಾಖಂಡ್ ನ ಪ್ರವಾಸಿ ತಾಣವಾದ ನೈನಿತಾಲ್ ಸೇರಿದಂತೆ ಇತರೆ ಭಾಗಗಳಲ್ಲಿ ಭೂಕುಸಿತದಿಂದಾಗಿ ಗಿರಿಧಾಮಕ್ಕೆ ಹೋಗುವ ಮೂರು ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕಗಳಲ್ಲಿ ವ್ಯತ್ಯಯ ಉಂಟಾಗಿದೆ.
ವರುಣನ ಅವಾಂತರದಿಂದ ಸೇತುವೆಗಳು ರೈಲ್ವೆ ಹಳಿಗಳು ಹಾನಿಗೊಳಗಾಗಿದ್ದು, ಇದನ್ನು ಸರಿಪಡಿಸಲು 4 ದಿನಗಳು ಬೇಕಾಗಬಹುದು ಎಂದು ರೈಲ್ವೆ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಗೆ “ಎ” ಗ್ರೇಡ್
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕಳೆದ ಒಂದು ವರ್ಷದಿಂದ ಗಣನೀಯ ಪ್ರಗತಿ ಸಾಧಿಸಿದೆ.
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಗೆ ನಬಾರ್ಡ್ “ಎ” ಶ್ರೇಣಿ ನೀಡಿ ಗೌರವಿಸಿದೆ.
2020 – 21 ನೇ ಸಾಲಿನಲ್ಲಿ ಮೊದಲಿಗಿಂತಲೂ ಹೆಚ್ಚಿನ ಒಳ್ಳೆಯ ಲಾಭ ರೂ. 18.46 ಕೋಟಿ ಗಳಿಸಿದೆ. ಇತ್ತೀಚಿಗಷ್ಟೇ ನಬಾರ್ಡ್ ಬ್ಯಾಂಕ್ ನ ಪರಿವೀಕ್ಷಣೆ ನಡೆಸಿತು. ಮೌಲ್ಯಮಾಪನವನ್ನು ಮಾಡಿ ಬ್ಯಾಂಕ್ ಗೆ “ಎ” ಶ್ರೇಣಿಯನ್ನು ನೀಡಿದೆ. ಅಲ್ಲದೇ ಬ್ಯಾಂಕ್ ಆರ್ಥಿಕವಾಗಿ ಅತ್ಯಂತ ಬಲಿಷ್ಠವಾಗಿದೆ ಎಂದು ಪ್ರಶಂಸೆ ಮಾಡಿದೆ. ಈ ಸಂಗತಿಯನ್ನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪನವರು
ತಮ್ಮ ಬ್ಯಾಂಕ್ ಗೆ “ಎ” ಶ್ರೇಣಿ ದೊರೆತಿರುವುದು ಸಂತೋಷದ ವಿಚಾರವಾಗಿದೆ. ಬ್ಯಾಂಕನ್ನು ಇನ್ನೂ ಹೆಚ್ಚಿನ ಪ್ರಗತಿಯತ್ತ ಕೊಂಡೊಯ್ಯಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಅಕ್ಟೋಬರ್ 25ರಿಂದ ಶಾಲೆಗಳು ಆರಂಭ, ಸಚಿವರ ಹೇಳಿಕೆ:
ಕೋವಿಡ್ 19ರ ಭೀತಿಯ ಹಿನ್ನೆಲೆಯಲ್ಲಿ ಕಳೆದ ಒಂದುವರೆ ವರ್ಷಗಳಿಂದ ಶಾಲೆಯನ್ನು ಮುಚ್ಚಲಾಗಿತ್ತು. ಆದರೆ ಈಗ ರಾಜ್ಯ ಸರ್ಕಾರವು ಪ್ರಾರ್ಥಮಿಕ ಶಾಲೆಗಳನ್ನು ಆರಂಭಿಸಲು ನಿರ್ಧರಿಸಿದೆ.
ರಾಜ್ಯದಲ್ಲಿ ಅಕ್ಟೋಬರ್ 25ರಿಂದ ಒಂದರಿಂದ ಐದನೇ ತರಗತಿಗಳ ಭೌತಿಕ ತರಗತಿಗಳನ್ನು ಆರಂಭಿಸಲು ತಜ್ಞರ ನೀಡಿದ ಸಲಹೆ ಆಧರಿಸಿ ಶಿಕ್ಷಣ ಇಲಾಖೆಯು ಅನುಮತಿ ನೀಡಿದೆ. ಕೊರೋನ ಮಾರ್ಗಸೂಚಿ ಅನುಸರಿಸುತ್ತಾ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿಳಿಸಿದ್ದಾರೆ.
ಆಸೆ,ದ್ವೇಷ ಬಿಟ್ಟರೆ, ಧ್ಯೇಯ ಸಾಧನೆ ಸುಲಭ
ಆಸೆ, ದ್ವೇಷ ಬಿಟ್ಟರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂದು ಖ್ಯಾತ ನಾಣ್ಯ ಸಂಗ್ರಾಹಕ ಹೆಚ್. ಖಂಡೋಬರಾವ್ ಹೇಳಿದರು.
ಕುವೆಂಪು ರಂಗಮಂದಿರದಲ್ಲಿ ಖಂಡೋಬರಾವ್ ಅಭಿನಂದನಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಮತ್ತು ಅಮೂಲ್ಯ ಸಿರಿ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮನತುಂಬಿದ ಅಭಿನಂದನೆ ಸಲ್ಲಿಸಿದ್ದಕ್ಕೆ ನನ್ನ ಕೃತಜ್ಞತೆಗಳು. ಮನುಷ್ಯ ಸಾಯುವ ಮೊದಲು ಏನಾದರೂ ಸಾಧನೆ ಮಾಡಲೇಬೇಕು. ಸಾಧನೆ ಹೇಗೆ ಮಾಡಲು ಸಾಧ್ಯ ಎಂದರೆ ಮೊದಲು ಆಸೆ ಮತ್ತು ದ್ವೇಷವನ್ನು ಬಿಡಬೇಕು. ಬಹುಶಃ ಆಸೆ ಮತ್ತು ದ್ವೇಷ ಬಿಟ್ಟಿದ್ದರೆ ರಾಮಾಯಣ ಮತ್ತು ಮಹಾಭಾರತದ ಕತೆಗಳು ನಡೆಯುತ್ತಲೇ ಇರಲಿಲ್ಲ. ಆಸೆ ಬದಲು ಜ್ಞಾನ, ದ್ವೇಷದ ಬದಲು ಸಾಧನೆ ಮಾಡಬೇಕು ಎಂದರು.
ನನ್ನ ಬಗ್ಗೆ ಅಭಿಮಾನಿಗಳು, ಗೆಳೆಯರು, ತುಂಬು ಹೃದಯದಿಂದ ಮಾತನಾಡಿದ್ದಾರೆ. ನನಗೊಂದು ಉನ್ನತ ಸ್ಥಾನ ಕೊಟ್ಟಿದ್ದಾರೆ. ಅಭಿನಂದನಾ ಸ್ಥಾನ ಕೊಟ್ಟಿದ್ದಾರೆ. ಅಭಿನಂದನೆ ಸಲ್ಲಿಸಿದ್ದಾರೆ. ನಮ್ಮ ಪರಿವಾರದವರು ಮತ್ತು ನನ್ನ ಪತ್ನಿಯ ಕಡೆಯವರು ವಿಶೇಷವಾಗಿ ಅಭಿನಂದಿಸಿದ್ದು ನನಗೆ ಹೃದಯ ತುಂಬಿ ಬಂದಿದೆ. ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಋಣಿಯಾಗಿದ್ದೇನೆ ಎಂದರು.

ಆದರ್ಶದ ಬದುಕು ನಮ್ಮದಾಗಬೇಕು. ಮನುಷ್ಯ ಒಳ್ಳೆಯ ಗುಣಗಳನ್ನು ಮತ್ತು ನಿರಂತರ ಚಟುವಟಿಕೆಯನ್ನು ಬೆಲೆಸಿಕೊಂಡರೆ ಉತ್ತಮ ಜೀವನ ಮತ್ತು ಸಂಸ್ಕಾರವನ್ನು ಪಡೆಯಬಹುದಾಗಿದೆ. ನನ್ನೆಲ್ಲಾ ಸಾಧನೆಗೆ ಗೆಳೆಯರ ಜೊತೆಗೆ ನನ್ನ ಪತ್ನಿಯೂ ಮುಖ್ಯ ಎಂದ ಅವರು, ಬಯಲು ಸೀಮೆಯ ಹುಡುಗ ನಾನು ಮಲೆನಾಡ ಹುಡುಗಿ ನನ್ನ ಪತ್ನಿ. ನಾನು ಪತ್ನಿಯನ್ನು ತುಂಬಾ ಪ್ರೀತಿಸುತ್ತಿದ್ದೆ. ಅವಳು ಹೋದ ಮೇಲೆ ಅವಳಿಗಾಗಿಯೇ ಈ ಅಮೂಲ್ಯ ಶೋಧ ನಿರ್ಮಿಸಿದೆ ಎಂದು ಭಾವುಕರಾಗಿ ನುಡಿದರು.
ಈ ಸಂದರ್ಭದಲ್ಲಿಬಾರ್ಕೂರು ಮಹಾಸಂಸ್ಥಾನದ
ಡಾ.ವಿಶ್ವ ಸಂತೋಷಭಾರತಿ ಸ್ವಾಮೀಜಿ, ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಬಾಗಲಕೋಟೆಯ ಉದ್ಯಮಿ ಮಾರುತಿ ರಾವ್ ಶಿಂಧೆ ಮುಂತಾದವರು ಉಪಸ್ಥಿತರಿದ್ದರು.
ಚಂಪಕ ಸರಸ್ಸುಗೆ ಚಂದದ ರೂಪಕೊಟ್ಟ ಯಶೋಮಾರ್ಗ
ಕೆಳದಿ ಅರಸ ವೆಂಕಟಪ್ಪ ನಾಯಕರು ಚಂಪಕ ಎಂಬ ಪ್ರೇಯಸಿ ಸವಿ ನೆನಪಿಗಾಗಿ ನಿರ್ಮಿಸಿದ ಕೊಳ ಅದೆ ಇಂದಿನ ಚಂಪಕ ಸರಸ್ಸು. ಈ ಕೊಳ ಬಿರು ಬೇಸಿಗೆಯಲ್ಲಿ ತುಂಬಿ ತುಳುಕುತ್ತಿರುತ್ತದೆ. ಆನಂದಪುರಂ ಸನಿಹದಲ್ಲಿರುವ ಈ ಕೊಳ ಎತ್ತರದ ಪ್ರದೇಶದಲ್ಲಿದೆ.
ಈ ಕೊಳವು ಕಲ್ಯಾಣಿಯ ವಿನ್ಯಾಸದಲ್ಲಿದ್ದು, ಈ ಕೊಳಕ್ಕೆ ಚಂಪಕ ಸರಸ್ಸು ಅಲ್ಲದೆ ಮಹಂತೇಶ್ವರ ಮಠ, ಮಹಾಂತ ಮಠ, ಮಹಾಂತ ಮಠದ ಕೊಳ ಎಂದು ಜನಜನಿತವಾಗಿದೆ.
ಇತ್ತೀಚಿಗೆ ಈ ಕೊಳವನ್ನು ನಟ ಯಶ್ ಅವರ ನೇತೃತ್ವದಲ್ಲಿ ಯಶೋಮಾರ್ಗ ಸಂಸ್ಥೆಯ ವತಿಯಿಂದ ಸ್ವಚ್ಛ ಗೊಳಿಸುವ ಪುನರುಜ್ಜೀವನ ಯೋಜನೆ ಕೈಗೊಂಡಿದೆ. ಕೊಳದ ಮಧ್ಯದಲ್ಲಿ ಸುಂದರವಾದ ನಂದಿಮಂಟಪ, ಆ ಮಂಟಪ ತಲುಪಲು ಶಿಲಾ ಸೇತುವೆ ಇದ್ದು, ಇದು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರವಾಸಿ ಆಕರ್ಷಣೆಯ ತಾಣವಾಗಿದೆ.
ಇಂತಹ ಸುಂದರ ಕೊಳವನ್ನು ಯಶೋಮಾರ್ಗ ಸಂಸ್ಥೆಯ ಹೈದರಾಬಾದ್ ನ ಫ್ರೀಡಂ ಆಯಿಲ್ ಅಸೋಸಿಯೇಷನ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ. ಚಂಪಕ ಸರಸ್ಸು ಅಭಿವೃದ್ಧಿಗೆ ಜಲ ತಜ್ಞ ಶಿವಾನಂದ ಕಳವೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಹಿಂದೆ ಕೆರೆಗಳ ಅಭಿವೃದ್ಧಿ ಕುರಿತು ಅವರೊಂದಿಗೆ ಚರ್ಚಿಸಿದಾಗ, ನಟ ಯಶ್ ರವರಿಗೆ ಚಂಪಕ ಸರಸ್ಸು ಕೊಳದ ಬಗ್ಗೆ ಪ್ರಸ್ತಾಪಿಸಿದ್ದೆವು. ಈಗ ಅವರ ಅಭಿಮಾನಿಗಳ ಮೂಲಕ ಇದನ್ನು ಅಭಿವೃದ್ದಿ ಪಡಿಸಿರುವುದು ಸಂತಸದ ವಿಚಾರ ಎಂದರು.
