Tuesday, August 4, 2026
Tuesday, August 4, 2026
Home Blog Page 41

ರೋಗಿಗಳ ವಿಶ್ವಾಸ ಹೆಚ್ಚಾಗಲು ವೈದ್ಯರ ಮೇಲಿನ ನಂಬಿಕೆಗಳು ಪ್ರಮುಖ ಪಾತ್ರವಹಿಸುತ್ತವೆ- ಡಾ.ಸಂಧ್ಯಾ‌

0

ವೈದ್ಯ ವೃತ್ತಿಯು ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು ಮುಂದಿನ ಜನ್ಮ ಅನ್ನೋದು ಇದ್ದರೆ ನಾನು ಮತ್ತೊಮ್ಮೆ ಡಾಕ್ಟರ್ ಆಗಿ ಜನರ ಸೇವೆ ಸಲ್ಲಿಸಬೇಕೆಂದು ಬಯಸುತ್ತೇನೆ ಎಂದು ಸರ್ಜಿ ಹಾಸ್ಪಿಟಲ್ ಶಿವಮೊಗ್ಗ ದ ಗೈನಾಕಲಜಿಸ್ಟ್
ಡಾ ಸಂಧ್ಯಾ ನುಡಿದರು.

ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಶ್ರೀಮತಿ
ಡಾ ಸಂಧ್ಯಾ ಗೈನಾಕಲಜಿಸ್ಟ್, ಸರ್ಜಿ ಹಾಸ್ಪಿಟಲ್ ಶಿವಮೊಗ್ಗ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಶುಭಾಶಯ ಕೋರಲಾಯಿತು

ವೈದ್ಯ ವೃತ್ತಿಯು ಸಾಕಷ್ಟುಆಧುನಿಕ ಬದಲಾವಣೆಯಾಗುತ್ತಾ ಸುಧಾರಣೆಯನ್ನು ಕಂಡಿದೆ ರೋಗಿಗಳ ವಿಶ್ವಾಸ ಹೆಚ್ಚಾಗಲು ಡಾಕ್ಟರ್ ಮೇಲಿನ ನಂಬಿಕೆಗಳು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ನುಡಿದರು. ಈ ಸಂದರ್ಭದಲ್ಲಿ ನಮ್ಮನ್ನ ಗುರುತಿಸಿ ಗೌರವಿಸಿದ ರೋಟರಿ ಸಂಸ್ಥೆಗೆ ಸದಾ ಚಿರಋಣಿಯಾಗಿರುತ್ತೇನೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ 2026 27ನೇ ಸಾಲಿನ ಉಪಾಧ್ಯರಾದ ಮಾಜಿ ಸಹಾಯಕ ಗೌರ್ನರ್ ವಿಜಯಕುಮಾರ್ ಮಾತನಾಡುತ್ತಾ 30 ವರ್ಷಗಳ ಸುದೀರ್ಘ ವೈದ್ಯಕೀಯ ಸೇವೆಯ ಅನುಭವ ಹೊಂದಿರುವ ಇವರು, 2014 ರಿಂದ ಸರ್ಜಿ ಆಸ್ಪತ್ರೆ ಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವನ್ನು ಶೂನ್ಯದಿಂದ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ 13,000 ಕ್ಕೂ ಹೆಚ್ಚು ಹೆರಿಗೆಗಳನ್ನು ಯಶಸ್ವಿಯಾಗಿ ಮಾಡಿಸಿದ ಕೀರ್ತಿ ಇವರಿಗಿದೆ. ಬಂಜೆತನ ನಿವಾರಣಾ ಚಿಕಿತ್ಸೆ 22 ವಾರಗಳವರೆಗಿನ ಗರ್ಭಾಶಯದ ಸಂಕೀರ್ಣ ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಗಳು, ಅಂಡಾಶಯದ ಸರ್ಜರಿಗಳು ಮತ್ತು ಹಿಸ್ಟರೊಸ್ಕೋಪಿ ಚಿಕಿತ್ಸೆಗಳಲ್ಲಿ ಇವರು ಪರಿಣಿತರು. ಅತ್ಯಂತ ಅಪಾಯಕಾರಿ ಗರ್ಭಾವಸ್ಥೆಯ ಸಂದರ್ಭಗಳಲ್ಲಿ ತಕ್ಷಣದ ಹಾಗೂ ದಕ್ಷ ಚಿಕಿತ್ಸೆ ನೀಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ರೋಗಿಗಳಿಗೆ ಕಷ್ಟದ ಸಮಯದಲ್ಲಿ ಧೈರ್ಯ ತುಂಬುತ್ತಾ, ಅವರ ನಂಬಿಕೆ ಮತ್ತು ಆಶೀರ್ವಾದಗಳನ್ನೇ ತಮಗೊಲಿದ ದೊಡ್ಡ ಪ್ರಶಸ್ತಿ ಎಂದು ಭಾವಿಸಿರುವ ಇವರ ಸೇವಾ ಪ್ರವೃತ್ತಿ ಅನನ್ಯವಾದದ್ದು. ಎಂದರು

ಇದೇ ಸಂದರ್ಭದಲ್ಲಿ 2026 27ನೇ ಸಾಲಿನ ಅಧ್ಯಕ್ಷರಾದ ಡಿಕೆ ಶೇಷಗಿರಿಯವರು ಮಾತನಾಡುತ್ತಾ ಡಾ. ಸಂಧ್ಯಾ ರವರ ವೈದ್ಯಕೀಯ ವೃತ್ತಿಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು

ಕಾರ್ಯಕ್ರಮದಲ್ಲಿ. ಕಾರ್ಯದರ್ಶಿ ಆರ್ ಮನೋಹರ್.. ಮಾಜಿ ಅಧ್ಯಕ್ಷರಾದ ಸತೀಶ್ ಚಂದ್ರ. ನಿರ್ದೇಶಕರಾದ ಸಿ ಕೆ ವಿಜಯಕುಮಾರ್. ಸಂತೋಷ್ ಕುಮಾರ್. ಡಾಕ್ಟರ್ ಅವಿನಾಶ್. ಉಪಸ್ಥಿತರಿದ್ದರು

ಸ್ವಂತ ಉದ್ಯೋಗಿಗಳಾಗ ಬಯಸುವ ಆಸಕ್ತರಿಗೆ ಫೋಟೋ/ ವಿಡಿಯೋಗ್ರಫಿ, ಅಣಬೆ ಕೃಷಿ ಮತ್ತು ಬ್ಯೂಟಿ ಪಾರ್ಲರ್ ಉಚಿತ ತರಬೇತಿಗೆ ಅರ್ಜಿ ಆಹ್ವಾನ

0

ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಸ್ವ-ಉದ್ಯೋಗದ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI), ಹೊಳಲೂರು, ಉಚಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿದಾರರು 18 ರಿಂದ 49 ವರ್ಷದೊಳಗಿನವರಾಗಿರಬೇಕು. ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿದ್ದು, ಗ್ರಾಮೀಣ ಪ್ರದೇಶದ ಬಿಪಿಎಲ್ ಕಾರ್ಡ್ ಹೊಂದಿರಬೇಕು. ತರಬೇತಿ ಪೂರ್ಣಗೊಂಡ ಬಳಿಕ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ತರಬೇತಿ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಸ್ಥೆಯಲ್ಲೇ ಉಳಿದುಕೊಂಡು ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಈ ಬಾರಿ ಮೂರು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜುಲೈ 6, 2026ರಿಂದ 31 ದಿನಗಳ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ, ಜುಲೈ 27, 2026ರಿಂದ 12 ದಿನಗಳ ಅಣಬೆ ಬೇಸಾಯ ತರಬೇತಿ ಹಾಗೂ ಜುಲೈ 29, 2026ರಿಂದ 35 ದಿನಗಳ ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿ ಆರಂಭವಾಗಲಿದೆ.

ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ ಹಾಗೂ ವಯಸ್ಸಿನ ವಿವರಗಳೊಂದಿಗೆ ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊನ್ನಾಳಿ ರಸ್ತೆ, ಹೊಳಲೂರು–577216, ಶಿವಮೊಗ್ಗ ತಾಲ್ಲೂಕು ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ 9481955721, 9743429595, 9164411580, 9449371579 ಹಾಗೂ 9632961707 ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ನ್ಯಾ.ಎಂ.ಎಸ್.ಸಂತೋಷ್. ದಿಢೀರ್ ಭೇಟಿ: ಪರಿಶೀಲನೆ

0

ಶಿವಮೊಗ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸಂತೋಷ್ ಎಂ ಎಸ್ ರವರು ಮಂಗಳವಾರ ಸಂಜೆ ಸಮಯದಲ್ಲಿ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ಹಠಾತ್ ಭೇಟಿ ನೀಡಿ ಸಂಚಾರಿ ಈ ಚಲಾನ್ ಪ್ರಕರಣಗಳಲ್ಲಿ ಪಾವತಿಸಬೇಕಾದ ದಂಡದ ಮೊತ್ತದ ಪ್ರಗತಿಯನ್ನು ಪರಿಶೀಲನೆ ಮಾಡಿದರು.

ಈ ಸಮಯದಲ್ಲಿ ತಿಳಿದು ಬಂದ ಮಾಹಿತಿಯಂತೆ ಶಿವಮೊಗ್ಗದಲ್ಲಿ ದಿನಾಂಕ 21.6.2026 ರಿಂದ ದಿನಾಂಕ 01.07.2026 ರವರೆಗೆ ಒಟ್ಟು 10,778 ಈ ಚಲಾನ್ ಪ್ರಕರಣಗಳಲ್ಲಿ ಒಟ್ಟು ರೂ. 46,06,500 ಹಣವನ್ನು ಶೇಕಡ 50ರಷ್ಟು ರಿಯಾಯಿತಿಯಲ್ಲಿ ಪಾವತಿಸಿ ಹಲವರು ಇತ್ತೀಚಿಗೆ ಘನ ಕರ್ನಾಟಕ ರಾಜ್ಯ ಸರ್ಕಾರವು ಹೊರಡಿಸಿದ ಸರ್ಕಾರಿ ಆದೇಶದ ಲಾಭವನ್ನು ಪಡೆದ ಬಗ್ಗೆ ಹಾಗೂ ದಂಡದ ಮೊತ್ತವನ್ನು ಸಂಗ್ರಹಿಸುವಲ್ಲಿ ಸಂಚಾರಿ ಪೊಲೀಸರ ಕಾರ್ಯವನ್ನು ಶ್ಲಾಘಿಸಿದರು.

ಶಿವಮೊಗ್ಗದಲ್ಲಿ ಒಟ್ಟು 2,99,037 ಪ್ರಕರಣಗಳು ಸರ್ಕಾರಿ ಆದೇಶ ಹೊರಡಿಸಿದ ಸಮಯದಲ್ಲಿ ದಾಖಲಾಗಿ ಒಟ್ಟು ರೂ. 23,71,18,350 ದಂಡದ ಮೊತ್ತ ಪಾವತಿಗೆ ಬಾಕಿ ಇತ್ತು. ಆದ್ದರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ವಾಹನದ ಮೇಲೆ ವಿಧಿಸಲಾದ ಸಂಚಾರಿ ಈ ಚಲಾನ್ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಹಾಗೂ ಎಲ್ಲಾ ವೃತ್ತಗಳಲ್ಲಿ ನಿಯೋಜನೆ ಆಗಿರುವಂತಹ ಸಂಚಾರಿ ಪೊಲೀಸರಲ್ಲಿ ತಮ್ಮ ವಾಹನ ಸಂಖ್ಯೆಯನ್ನು ನೀಡಿ ದಂಡದ ಮೊತ್ತದ ಬಗ್ಗೆ ಪರಿಶೀಲಿಸಿಕೊಳ್ಳುವಂತೆ ಹಾಗೂ ಅಂತರ್ಜಾಲ ಪುಟ https://103.195.218.159/challan ಗೆ ಬೆಟ್ಟಿ ನೀಡಿ ಮಾಹಿತಿಯನ್ನು ಪಡೆದು ಶೀಘ್ರದಲ್ಲಿ, ಅಂದರೆ ದಿನಾಂಕ 10.07.2026ರ ಒಳಗಾಗಿ, ಬಾಕಿ ಉಳಿದ ದಂಡದ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿಯನ್ನು ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಜನರು ದಂಡವನ್ನು ಪಾವತಿಸಿ ಸರ್ಕಾರಿ ಆದೇಶದ ಹೆಚ್ಚಿನ ಲಾಭವನ್ನು ಪಡೆಯಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿಕರು ಕೃಷಿ ವಿವಿ‌ಯಿಂದ ಏರ್ಪಡಿಸುವ ತರಬೇತಿಯಿಂದ ಹೆಚ್ಚಿನ ಲಾಭ ಪಡೆಯಬೇಕು : ಪ್ರೊ.ರಾಮಕೃಷ್ಣ ಹೆಗಡೆ

0

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ವಿಸ್ತರಣಾ ನಿರ್ದೇಶನಾಲಯದ, ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಶಿವಮೊಗ್ಗದಡಿಯಲ್ಲಿ ದಿನಾಂಕ 30.06.2026 ಮಂಗಳವಾರ ದಂದು ” ಶುಂಠಿ ಬೆಳೆಯ ಸಮಗ್ರ ಕೃಷಿ ” ಕುರಿತ ತರಬೇತಿ ಕಾರ್ಯಕ್ರಮವನ್ನು ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಯಲ್ಲಿ ಆಯೋಜಿಸಲಾಗಿತ್ತು. ಈ ಸದರಿ ತರಬೇತಿಗೆ ರೈತರು ಭಾಗವಹಿಸಿ ತರಬೇತಿಯ ಲಾಭವನ್ನು ಪಡೆದುಕೊಂಡರು.

ಈ ತರಬೇತಿಯಲ್ಲಿ ಡಾ. ರಾಮಕೃಷ್ಣ ಹೆಗಡೆ, ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಇವರು ರೈತರನ್ನು ಸ್ವಾಗತಿಸಿ, ತರಬೇತಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ರೈತರನುದ್ದೇಶಿಸಿ ಮಾತನಾಡಿ ಈ ತರಬೇತಿಯಿಂದ ಇನ್ನು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಈ ತರಬೇತಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ರವಿ ಸಿ.ಎಸ್. , ಸಹ ಪ್ರಾಧ್ಯಾಪಕರು (ತೋಟಗಾರಿಕೆ) “ಶುಂಠಿ ಬೆಳೆಯ ತಳಿಗಳು ಮತ್ತು ಆಧುನಿಕ ಕೃಷಿ ತಾಂತ್ರಿಕ ಪದ್ಧತಿಗಳು”, ಡಾ. ನಿರಂಜನ ಕೆ. ಎಸ್. , ಸಹಾಯಕ ಪ್ರಾಧ್ಯಾಪಕರು (ಮಣ್ಣುವಿಜ್ಞಾನ) “ಶುಂಠಿ ಬೆಳೆಯಲ್ಲಿ ಗೊಬ್ಬರ ಮತ್ತು ಪೋಷಕಾಂಶಗಳ ಸಮಗ್ರ ನಿರ್ವಹಣೆ” ಡಾ. ನರಸಿಂಹ ಮೂರ್ತಿ ಹೆಚ್. ಬಿ. , ಸಹಾಯಕ ಪ್ರಾಧ್ಯಾಪಕರು (ಸಸ್ಯರೋಗಶಾಸ್ತ್ರ) “ಶುಂಠಿ ಬೆಳೆಯಲ್ಲಿ ರೋಗಗಳು ಮತ್ತು ನಿರ್ವಹಣಾ ಕ್ರಮಗಳು”, ಶ್ರೀ ಶಿವರಾಜ ಸಹಾಯಕ ತೋಟಗಾರಿಕೆ ಅಧಿಕಾರಿ (ಆನಂದಪುರ) ” ತೋಟಗಾರಿಕೆ ಇಲಾಖೆಯ ವಿವಿಧ ಸೌಲಭ್ಯಗಳು” ಕೊನೆಯದಾಗಿ ಡಾ. ಕೃಷ್ಣ ರೆಡ್ಡಿ ಪಿ. , ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತ್ರ), ರೈತ ತರಬೇತಿ ಸಂಸ್ಥೆ “ಶುಂಠಿ ಬೆಳೆಯಲ್ಲಿ ಕೀಟಗಳು ಮತ್ತು ನಿರ್ವಹಣಾ ಕ್ರಮಗಳು” ಇವರು ರೈತರೊಂದಿಗೆ ಈ ಎಲ್ಲಾ ವಿಷಯದ ಕುರಿತು ಸಂವಾದಿಸಿ ವಂದಿಸಿದರು.

ಅಲೆಮಾರಿ ಜನಾಂಗದವರಿಗೆ ಗುಂಪು ಮನೆಗಳ ನಿರ್ಮಿಸಿ ಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ- ಪ್ರಭುಲಿಂಗ ಕವಳಿಕಟ್ಟಿ

0

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಜನಾಂಗದವರಿಗೆ ನಿವೇಶನ ಕೊರತೆಯಿಂದಾಗಿ ನಿಗಮದ ವಸತಿ ಸೌಲಭ್ಯದಿಂದ ವಂಚಿತರಾಗುತ್ತಿರುವ ಹಿನ್ನೆಲೆ ಗುಂಪು ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಶಿವಮೊಗ್ಗ ಜಿಲ್ಲಾಡಳಿತ ಕಚೇರಿಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಮಗಡಗಳ ಅಲೆಮಾರಿ ಅಭಿವೃದ್ದಿ ನಿಗಮದ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಗಮದ ವಸತಿ ಯೋಜನೆಯಡಿ 2026-27 ನೇ ಸಾಲಿಗೆ ಪರಿಶಿಷ್ಟ ಜಾತಿಗೆ 150 ಮತ್ತು ಪ.ಪಂಗಡಕ್ಕೆ 75 ಗುರಿ ನೀಡಿದ್ದರೂ ಕ್ರಮವಾಗಿ 26 ಮತ್ತು 32 ಸೇರಿ ಒಟ್ಟು 58 ಅರ್ಜಿಗಳು ಮಾತ್ರ ಬಂದಿವೆ. ಇದಕ್ಕೆ ಕಾರಣ ಅನೇಕರಲ್ಲಿ ನಿವೇಶನ ಇಲ್ಲದಿರುವುದು. ಆದ್ದರಿಂದ ಗುಂಪು ಮನೆಗಳನ್ನು ನಿರ್ಮಿಸಿಕೊಟ್ಟರೆ ಜನಾಂಗದವರಿಗೆ ಅನುಕೂಲವಾಗುತ್ತದೆ. ಈ ಕುರಿತು ಸಭಾ ನಡವಳಿಯನ್ನು ಸರ್ಕಾರಕ್ಕೆ ಕಳುಹಿಸಿ ಮುಂದಿನ ಕ್ರಮಕ್ಕೆ ಕೋರಲಾಗುವುದು ಎಂದು ತಿಳಿಸಿದರು.
ನಿಗಮದ ಗಂಗಾ ಕಲ್ಯಾಣ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು. 2025-26 ನೇ ಸಾಲಿಗೆ ನಿಗದಿಪಡಿಸಿರುವ ಗುರಿ 3 ಸೇರಿದಂತೆ ಹಿಂದಿನ ವರ್ಷಗಳ ಗುರಿಯನ್ನು ಇನ್ನು 2 ತಿಂಗಳ ಒಳಗೆ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೆಲವು ಗ್ರಾಮಗಳಲ್ಲಿ ಅಲೆಮಾರಿ ಜನಾಂಗದವರಿಗೆ ಇ-ಸ್ವತ್ತು ಪಡೆಯಲು ಆಗುತ್ತಿಲ್ಲ. ಅಲ್ಲಿ ಕಂದಾಯ ಗ್ರಾಮಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಕ್ರಮ ಕೈಗೊಂಡು, ಕಂದಾಯ ಗ್ರಾಮವಾಗಿ ಮಾಡಲಾಗುವುದು. ಆಗ ಇ-ಸ್ವತ್ತು ಲಭಿಸಲಿದೆ ಎಂದರು.
ಅಲೆಮಾರಿ ಜನಾಂಗದವರಿಗೆ ಸಿದ್ಲೀಪುರದಲ್ಲಿ ವಸತಿ ನಿರ್ಮಿಸಿಕೊಡಲು 3 ರಿಂದ 5 ಎಕರೆ ಜಾಗ ಮಂಜೂರು ಮಾಡುವಂತೆ ಹಾಗೂ ಸಾಗರ ತಾಲ್ಲೂಕಿನ ಬೆಳ್ಳಳ್ಳಿಯಲ್ಲಿ ನಿವೇಶನಕ್ಕಾಗಿ 3 ಎಕರೆ ಜಾಗ ಗುರುತಿಸಿ ಮಂಜೂರು ಮಾಡುವಂತೆ ನಾಮನಿರ್ದೇಶಿತ ಸದಸ್ಯರು ಕೋರಿದರು.
ಹಾಗೂ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ಅಲೆಮಾರಿ ಜನಾಂಗದವರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು, ಅನುಕೂಲಗಳು ದೊರಕುತ್ತಿಲ್ಲ. ಈ ಮನೆಗಳಿಗೆ ಹಕ್ಕು ಪತ್ರ ನೀಡುವಂತೆ ಮತ್ತು ನಿಗಮದ ವಿವಿಧ ಯೋಜನೆಗಳಗಡಿ ನಿಗದಿಪಡಿಸಿರುವ ಗುರಿಗಳ ಸಂಖ್ಯೆ ಕಡಿಮೆ ಇದ್ದು, ಇದನ್ನು ಹೆಚ್ಚಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು, ಸಂಬAಧಿಸಿದ ಅಧಿಕಾರಿಗಳು ಅಲೆಮಾರಿ ಜನಾಂಗದವರಿಗೆ ಅಗತ್ಯವಾದ ನಿವೇಶನ ಹಂಚಿಕೆ ಮಾಡುವ ಸಂಬAಧ ಪರಿಶೀಲಿಸಿ, ಶೀಘ್ರದಲ್ಲಿ ಜಾಗ ಗುರುತಿಸುವಂತೆ ಸೂಚನೆ ನೀಡಿದ ಅವರು ಅರಣ್ಯ ಭೂಮಿಯಲ್ಲಿನ ಮನೆಗಳಿಗೆ ಹಕ್ಕುಪತ್ರ ನೀಡಲು ಜಿ.ಪಂ ಸಮಿತಿ ಇರಬೇಕು. ಈಗ ಸಮಿತಿ ಇಲ್ಲದ ಕಾರಣ, ಸಮಿತಿ ರಚನೆಯಾದ ನಂತರ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಸ್ವಯಂ ಉದ್ಯೋಗ ನೇರಸಾಲ, ಉದ್ಯಮಶೀಲತಾ, ಸ್ವಾವಲಂಬಿ ಸಾರಥಿ, ಗಂಗಾ ಕಲ್ಯಾಣ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದಿರುವ ವಿವಿಧ ಕಲ್ಯಾಣ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿವೆಯೇ ಎಂಬುದನ್ನು ಪರಾಮರ್ಶಿಸಿದರು. ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ವಿಳಂಬ ಧೋರಣೆ ತೋರದೆ ನಿಗದಿತ ಅವಧಿಯೊಳಗೆ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ-1, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್ ಜಿಲ್ಲಾ ಮಟ್ಟದ ಅಧಿಕಾರಿಗಳು, ನಾಮನಿರ್ದೇಶಿತ ಸದಸ್ಯರಾದ ಮಾರುತಿ, ಅಶೋಕ್, ಬಸವೇಶ್ವರ, ಸಂದೀಪ್ ಉಪಸ್ಥಿತರಿದ್ದರು.

ಜುಲೈ 5 ಶಿವಮೊಗ್ಗದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ. ಮೆಸ್ಕಾಂ ಪ್ರಕಟಣೆ

0

ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಈ ವಿತರಣಾ ಕೇಂದ್ರದಿಂದ ಸರಬರಾಜಾಗುವ ಪ್ರದೇಶಗಳಲ್ಲಿ ಜು. 05 ರಂದು ಬೆಳಗ್ಗೆ 09 ರಿಂದ ಸಂಜೆ 06 ರವರೆಗೆ ಗಾಂಧಿನಗರ, ರವೀಂದ್ರ ನಗರ, ವೆಂಕಟೇಶ್‌ನಗರ, ಚೆನ್ನಪ್ಪ ಲೇಔಟ್, ಉಷಾ ನರ್ಸಿಂಗ್ ಹೋಮ್, ಜೈಲ್ ರಸ್ತೆ, ರಾಜೇಂದ್ರ ನಗರ, ಎ.ಎನ್.ಕೆ ರಸ್ತೆ, ವಿನೋಬನಗರ, ದಾಮೋದರ್ ಕಾಲೋನಿ, ಚೇತನಾ ಸ್ಕೂಲ್, ಕಲ್ಲಹಳ್ಳಿ, ವಿನೋಬನಗರ 60 ಅಡಿ ರಸ್ತೆ, ಜೈಲ್ ಸರ್ಕಲ್, ಆಟೋಕಾಂಪ್ಲೆಕ್ಸ್, ಪೋಲೀಸ್ ಚೌಕಿ, ಮೇಧಾರ ಕೇರಿ, ನರಸಿಂಹ ಬಡಾವಣೆ, ಶಾರದಮ್ಮ ಲೇಔಟ್, ಮೈತ್ರಿ ಅಪಾರ್ಟ್ಮೆಂಟ್, ಕನಕ ನಗರ, ದೇವರಾಜ್ ಅರಸ್ ಬಡಾವಣೆ, ಪಿ ಅಂಡ್ ಟಿ ಕಾಲೋನಿ, ಸೂರ್ಯ ಲೇಔಟ್, ಅರವಿಂದ ನಗರ, ಇಂಡಸ್ಟಿçಯಲ್ ಎರಿಯಾ, ಎ.ಪಿ.ಎಂ.ಸಿ., ವೀರಣ್ಣ ಲೇಔಟ್, ಕಾಶೀಪುರ, ಜಯದೇವ ಬಡಾವಣೆ, ಸಹ್ಯಾದ್ರಿನಗರ, ಸಹಕಾರಿ ನಗರ, ಆಲ್ಕೋಳ ವೃತ್ತ, ಸಾಗರ ರಸ್ತೆ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಸಕ್ಯೂಟ್ ಹೌಸ್, ನೀಲಮೇಘಮ್ ಲೇಔಟ್, ರಾಜಮಹಲ್ ಬಡಾವಣೆ, ಪೊಲೀಸ್ ಲೇಔಟ್, ಅಲ್ ಹರೀಮ್ ಲೇಔಟ್, ವಿಜಯನಗರ, ಪಂಪ ನಗರ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಶ್ರೀರಾಮನಗರ, ಟಿಪ್ಪುನಗರ, ಪದ್ಮಾ ಟಾಕೀಸ್ ರಸ್ತೆ, ಸಿದ್ದೇಶ್ವರ ವೃತ್ತ, ಗೋಪಾಳಗೌಡ ಬಡಾವಣೆ ಎ ಯಿಂದ ಎಫ್ ಬ್ಲಾಕ್, ಅಣ್ಣಾನಗರ, ರಂಗನಾಥ ಬಡಾವಣೆ, ಕೆ.ಹೆಚ್.ಬಿ ಗೋಪಾಳ, ಜೆ.ಪಿ.ನಗರ, ಎಸ್.ವಿ.ಬಡಾವಣೆ, ಗಾಡಿಕೊಪ್ಪ, ನಂಜಪ್ಪ ಹೆಲ್ತ್ ಕೇರ್, ಶರಾವತಿ ದಂತ ವೈದ್ಯಾಕೀಯ ಕಾಲೇಜು, ಮಲ್ಲಿಗೇನಹಳ್ಳಿ, ಸೋಮಿನಕೊಪ್ಪ ಪ್ರೆಸ್ ಕಾಲೋನಿ, ಭೈರನಕೊಪ್ಪ, ಎ.ಪಿ.ಎಂ.ಸಿ ಲೇಔಟ್ (ಆಶ್ರಯ ಬಡಾವಣೆ), ಭೋವಿ ಕಾಲೋನಿ, ಆಲದೇವರಹೊಸೂರು, ಶಕ್ತಿಧಾಮ, ಶಿವಸಾಯಿ ಕಾಸ್ಟಿಂಗ್ ಗೆಜ್ಜೆನಹಳ್ಳಿ, ದೇವಕಾತಿಕೊಪ್ಪ, ಶ್ರೀರಾಮ್‌ಪುರ, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ತ್ಯಾವರೆಕೊಪ್ಪ, ಸಿಂಹಧಾಮ, ಗುಡ್ಡದಾರಿ ಕೊಪ್ಪ, ಗಾಲ್ಫ್ ಸ್ಟೇಡಿಯಂ, ಭೂಮಿಕಾ ಇಂಡಸ್ಟಿç, ಪೆಸೆಟ್ ಕಾಲೇಜ್, ಕೋಟೆ ಗಂಗೂರು, ಗೆಜ್ಜೇನಹಳ್ಳಿ, ಬಸವ ಗಂಗೂರು, ಸೋಮಿನಕೊಪ್ಪ, ಆದರ್ಶನಗರ, ಸಹ್ಯಾದ್ರಿ ನಗರ, ಜೆ.ಹೆಚ್. ಪಟೇಲ್ ಬಡಾವಣೆ, ಕಾಶೀಪುರ, ಕಲ್ಲಹಳ್ಳಿ,ಶಿವಪ್ಪನಾಯಕ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಇಂದಿರಾಗಾAಧಿ ಲೇಔಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ನಮ್ಮ ಮಠದ ಭಕ್ತರ ಮನಗೆದ್ದರು ಸ್ವಾಮೀಜಿ.ಧರ್ಮ ಪ್ರಚಾರಕ್ಕೆ ಇದಕ್ಕಿಂತ ಉತ್ತಮ ಸಂದೇಶ ಏನಿದೆ?- ಶ್ರೀಮಹಾಂತ ಶಿವಯೋಗಿಶ್ರೀ

0

ವಿಶೇಷ ವರದಿ: ಪ್ರಭಾಕರ ಕಾರಂತ.

ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳ ಈಚೆಗೆ ಒಂದು ದಿನದ ಜಡೆ ವಾಸ್ತವ್ಯ ಮತ್ತು ಅಲ್ಲಿ ರಂಗನಾಥ ಸ್ವಾಮಿ, ವಿಶ್ವೇಶ್ವರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಕುಂಭಾಭಿಷೇಕ ಕಾರ್ಯಕ್ರಮ ಹಲವು ರೀತಿಯಲ್ಲಿ ವೈಶಿಷ್ಟ್ಯಪೂರ್ಣ ಅನಿಸಿತು.ಪೂರ್ವ ನಿರ್ಧರಿತ ಕಾರ್ಯಕ್ರಮ ಅಲ್ಲದೇ‌ ಆಲ್ಲಲ್ಲೇ ನಿಗಧಿಯಾದ ಅವರ ಕಾರ್ಯಕ್ರಮ ಅಚ್ಚರಿಗೆ ಕಾರಣವಾಯಿತು.
ಜಡೆಯಲ್ಲಿ 16 ನೇ ಶತಮಾನದಲ್ಲಿ ಕೆಳದಿಯವರು ಸ್ಥಾಪಿಸಿದ ಜಡೆ ಸಂಸ್ಥಾನ ಮಠ ಇದೆ.ಜಗದ್ಗುರು ಶ್ರೀ ಕುಮಾರ ಕೆಂಪಿನ ಸಿದ್ದ ಋಷಭೇಂದ್ರ ಶಿವಯೋಗಿಗಳು ಸ್ಥಾಪಿಸಿದ ಸಂಸ್ಥಾನ ಅದು.ಅವರು ಪರಿವ್ರಾಜಕರಾಗಿ ಲೋಕ ಸಂಚಾರ ಮಾಡಿ ಧರ್ಮ ಪ್ರಚಾರ ನಡೆಸಿದ ಶಿವಯೋಗಿ.ಕರ್ನಾಟಕದಾದ್ಯಂತ ಈ ಸಂಸ್ಥಾನದ ನೂರಾರು ಶಾಖೆಗಳು ಸ್ಥಾಪಿಸಲಾಗಿತ್ತು.
ಪ.ಗು.ಹಳಿಕಟ್ಠಿಯವರ ನಿರಂಜನ ಅಂಶ ರತ್ನಾಕರ ಗ್ರಂಥ ದಲ್ಲಿ ಈ ಮಠದ ಮಹತ್ವದ ಇತಿಹಾಸ ದಾಖಲಾಗಿದೆ.ಪ್ರಥಮ ಜಗದ್ಗುರುಗಳ ನಿರ್ವಿಕಲ್ಪ ಸಮಾಧಿಯೂ ಇಲ್ಲೇ ಇದೆ.
ಈಗ ಈ ಸಂಸ್ಥಾನ ಮುಂದುವರೆಸುತ್ತಿರುವವರು ಶ್ರೀ ಮಹಾಂತ ಶಿವಯೋಗಿ ಸ್ವಾಮಿಯವರು.ಯೋಗ ಶಿವಯೋಗ ಎಂಬ ಅವರ ಕೃತಿ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲ್ಪಟ್ಟ ಸಂಶೋಧನಾ ಕೃತಿ.ಇದು ಸ್ವಾಮೀಜಿಗೆ ಡಾಕ್ಟರೇಟ್ ದೊರಕಿಸಿ ಕೊಟ್ಟಿದೆ.ಈ ಸಂಸ್ಥಾನದ 49 ನೇ ಶಿವಯೋಗಿಗಳು ಇವರು.ಆಗಲೇ ಶಿಷ್ಯ ಸ್ವೀಕಾರ ಮಾಡಿ ಸಂಸ್ಥಾನವನ್ನು ಮುನ್ನೆಡೆಸುತ್ತಿದ್ದಾರೆ.ಒಂದು ಶಿಕ್ಷಣ ಸಂಸ್ಥೆಯನ್ನು ಮಠ ನಡೆಸುತ್ತಿದ್ದು, ಸ್ವಾಮೀಜಿ ಒಂದು ಸಂಸ್ಕೃತ ಪಾಠ ಶಾಲೆ ಆರಂಭಿಸಿ ಅಲ್ಲಿ ವೇದ, ಜ್ಯೋತಿಷ್ಯ, ಸಂಸ್ಕೃತದ ಉಚಿತ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದ್ದಾರೆ.ಭಾರತ ಉಳಿಯಬೇಕಾದರೆ ಇಲ್ಲಿನ ಧರ್ಮ, ಸಂಸ್ಕೃತಿ,ಭಾಷೆ ಉಳಿಯಬೇಕು ಎಂಬುದನ್ನು ನಂಬಿರುವ ಸ್ವಾಮೀಜಿ ಆ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ಮಯೋಗಿ.
ತಮ್ಮ ಊರಿಗೆ ಶೃಂಗೇರಿಯ ಜಗದ್ಗುರುಗಳು ಬರುವ ಸಂಗತಿ ತಿಳಿದ ಆವರು ತಮ್ಮ ಸಂಸ್ಥಾನಕ್ಕೂ ಅವರನ್ನು ಬರಮಾಡಿಕೊಳ್ಳಬೇಕು ಎಂಬ ಇಚ್ಛೆಪಟ್ಟರು.ಆದರೆ ಶೃಂಗೇರಿಯ ಜಗದ್ಗುರುಗಳು ವಿಶ್ವ ವ್ಯಾಪಿ ಪ್ರಭಾವ ಇರುವವರು.ನಿಗಧಿತ ಕಾರ್ಯಕ್ರಮ ಅಲ್ಲದಿದ್ದರೆ ಅವರು ಬೇರೆ ಕಾರ್ಯಕ್ರಮಕ್ಕೆ ಒಪ್ಪುವುದು ಕಷ್ಟ.ಅದರಲ್ಲೂ ಹಲವು ಕಟ್ಟುಪಾಡು ಇಟ್ಟುಕೊಂಡ ಕರ್ಮಠ ಮಠವದು.ಕರೆದರೆ ಒಪ್ಪದಿದ್ದರೆ ಎಂಬ ಸಂಶಯ ಅನೇಕ ಕಡೆಯಿಂದ ವ್ಯಕ್ತವಾಗಿತ್ತು.ಹೇಗೂ ಇರಲಿ ಭೇಟಿ ಯಾಗಿ ಅವರಿಗೆ ಗೌರವ ಸಮರ್ಪಿಸಿ ಆಹ್ವಾನ ನೀಡುವುದು ಎಂದು ಶಿವಯೋಗಿಗಳು ದೃಢ ನಿಶ್ಚಯ ಮಾಡಿದ್ದರು.ಅದಕ್ಕೆ ಕಾರಣವೂ ಇದ್ದಿತ್ತು.ಜಗದ್ಗುರುಗಳ ಧರ್ಮ ವಿಜಯ ಯಾತ್ರೆ ಕುರಿತ ಸುದ್ದಿಗಳನ್ನು ಮಹಾಂತ ಶಿವಯೋಗಿಗಳು ಗಮನಿಸುತ್ತಾ ಬಂದವರು.ಈಚೆಗೆ ಜಗದ್ಗುರುಗಳ ನೇಪಾಳ ಯಾತ್ರೆ ಮತ್ತಲ್ಲಿ ಉಂಟಾದ ಸಂಚಲನ ಅವರ ಅಭಿಮಾನ ಹೆಚ್ಚಿಸಿತ್ತು.ಭರತವರ್ಷದ ಧರ್ಮ ಸಂರಕ್ಷಣೆಯಲ್ಲಿ ಶೃಂಗೇರಿಯ ತರುಣ ಯತಿವರ್ಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದವರ ಅಭಿಪ್ರಾಯ ಆಗಿತ್ತು.ಹೀಗೆಂದೇ ಧೈರ್ಯ ಮಾಡಿ ತಮ್ಮೂರಿಗೆ ಬಂದ ಶೃಂಗೇರಿಯ ಜಗದ್ಗುರುಗಳನ್ನು ಭೇಟಿಯಾಗಿ ತಮ್ಮ ಮಠಕ್ಕೆ ಬರುವಂತೆ ಆಹ್ವಾನ ನೀಡಿದರು.”ಅಚ್ಚರಿ ಎಂದರೆ ಒಂದೇ ಮಾತಿಗೆ ಸ್ವಾಮಿಗಳು ಒಪ್ಪಿಕೊಂಡರು.ಇದು ಅವರ ಕುರಿತು ನಮ್ಮ ಗೌರವ ಹೆಚ್ಚಿಸಿತು ” ಎಂದು ಸ್ವಾಮೀಜಿ ಸಂತೋಷದಿಂದ ಹೇಳುತ್ತಾರೆ.”ಜಡೆಯಿಂದ ನಿರ್ಗಮನದ ಮುನ್ನ ಮಾತು ಕೊಟ್ಟಂತೆ ಸ್ವಾಮೀಜಿ ನಮ್ಮ ಮಠಕ್ಕೆ ದಯಮಾಡಿಸಿದರು.ನಮ್ಮ ಮಠದ ಎಲ್ಲಾ ಕಡೆ ಪಾದಬೆಳೆಸಿ ಪ್ರತಿಯೊಂದು ವಿವರವನ್ನೂ ಆಸಕ್ತಿಯಿಂದ ಪಡೆದರು.ಧರ್ಮಕ್ಕೆ ಸಂಭಂದಿಸಿದ ವಿಷಯದಲ್ಲಿ ನಾವಿಬ್ಬರೂ ಙರ್ಚಿಸೀದೆವು.ಉತ್ತಮ ವಾತಾವರಣ ನಿರ್ಮಾಣ ಆಯಿತು.ನಮ್ಮ ಎರಡು ಸಮುದಾಯಗಳ ನಡುವೆ ಭಾಂದವ್ಯ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಮೈಲಿಗಲ್ಲು.ನಮ್ಮ ಮಠದ ಭಕ್ತರ ಮನಗೆದ್ದರು ಸ್ವಾಮೀಜಿ.ಧರ್ಮ ಪ್ರಚಾರಕ್ಕೆ ಸಮಾಜಕ್ಕೆ ಇದಕ್ಕಿಂತ ಉತ್ತಮ ಸಂದೇಶ ಏನಿದೆ.ನಾವು ಅವರನ್ನು ಹೃತ್ಪೂರ್ವಕವಾಗಿ ಗೌರವಿಸಿದೆವು.ನಮ್ಮ ಮನಸ್ಸು ತುಂಬಿದ ಸಂದರ್ಭ ಅದು” ಎಂದು ಶಿವಯೋಗಿಗಳು ಸಂತಸ ವ್ಯಕ್ತಪಡಿಸಿದ್ದಾರೆ .
ಜಡೆ ಸಂಸ್ಥಾನಕ್ಕೆ ಭೇಟಿ ನೀಡುವ ಮುನ್ನ ಜಗದ್ಗುರುಗಳು ಶ್ರೀ ಮುಕ್ತೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಇತ್ತರು.ಮೂಲ ರಂಗನಾಥಸ್ವಾಮಿ ದರ್ಶನ ಮಾಡಿದರು.
ಈಚೆಗೆ ಅರಳಸುರಳಿ ಸಮೀಪದ ಒಂದು ದೇವಸ್ಥಾನ ಕಾರ್ಯಕ್ರಮಕ್ಕೆ ಶೃಂಗೇರಿಯ ಜಗದ್ಗುರುಗಳು ಹೋಗಿದ್ದರು.ಹೆಚ್ಚಾಗಿ ಬಡ ಕೆಳವರ್ಗದ ಜನರಿರುವ ಪ್ರದೇಶ ಅದು.ಆ ಕಾರ್ಯಕ್ರಮಕ್ಕಾಗಿ ಹತ್ತಾರು ತಿಂಗಳು ಆ ದೇವಸ್ಥಾನದವರು ಕಾಯಬೇಕಾಯಿತು.ಆಗ ಕೆಲವರು ಶೃಂಗೇರಿಯ ಜಗದ್ಗುರುಗಳನ್ನು ಕರೆಸಬೇಕಾದರೆ ಮೊದಲೇ ಲಕ್ಷಗಟ್ಟಲೇ ಹಣ ಕಟ್ಟಿ ಕರೆಯಬೇಕು.ಇಂತಹ ಕಡೆಗಳಿಗೆಲ್ಲಾ ಅವರೆಲ್ಲಿ ಬರುತ್ತಾರೆ ಎಂಬ ಮಾತನಾಡಿದ್ದರಂತೆ.”ಈ ಮಾತುಗಳು ನಮ್ಮನ್ನೂ ತಲ್ಪಿದ್ದವು.ನಮ್ಮನ್ನು ಕರೆಯಲು ಹಣ ಕಟ್ಟಬೇಕಿಲ್ಲ.ಅಥವಾ ನಾವು ಬರಬೇಕಾದರೆ ಇಂತಿಷ್ಟು ಹಣ ಕೊಟ್ಟರೆ ಬರುತ್ತೇವೆ ಎಂದು ಯಾವಾಗಲೂ ಹೇಳುವುದಿಲ್ಲ.ನಾವು ನೋಡುವುದು ನಿಮ್ಮ ಶ್ರದ್ಧೆಯನ್ನು.ಇಂದು ನೀವು ಪರಿಶ್ರಮದಿಂದ ನಮ್ಮ ತಾತ್ಕಾಲಿಕ ವಸತಿಗಾಗಿ ಒಂದು ಪರ್ಣಕುಟಿ ನಿರ್ಮಿಸಿದ್ದೀರಿ.ನಮಗಿದೇ ಆನಂದ ತಂದಿದೆ”ಎಂದು ಜಗದ್ಗುರುಗಳು ಹೇಳಿದ್ದರು.ಶೃಂಗೇರಿಯ ಮಠದ ನೆರವಿನಿಂದ ನೂರಾರು ದೇವಾಲಯಗಳು ಪುನರ್ನಿರ್ಮಾಣ ಆಗುತ್ತದೆ.ಹೆಚ್ಚಾಗಿ ಆ ದೇವಸ್ಥಾನಗಳ ಕುಂಭಾಭಿಷೇಕಕ್ಕೆ ಗುರುಗಳು ತೆರಳುತ್ತಾರೆ.ಅವರ ಧರ್ಮ ವಿಜಯ ಯಾತ್ರೆ ಮಠಕ್ಕೆ ಸಂಪನ್ಮೂಲ ಸಂಗ್ರಹಕ್ಕೆ ಅಲ್ಲ,ಮಠದಲ್ಲಿ ಸಂಗ್ರಹವಾಗುವ ಹಣವನ್ನು ಧರ್ಮ ಕಾರ್ಯಕ್ಕೆ ವಿನಿಯೋಗಿಸಲು.
ಜಡೆಗೆ ಆಗಮಿಸುವಾಗ ಜಗದ್ಗುರುಗಳು ಸೊರಬ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಬಳಿ ಬರುವಾಗ ರಾತ್ರಿ 7.30 ಆಗಿತ್ತು.ದೇವಸ್ಥಾನದ ಎದುರು ನೂರಾರು ಜನ ಕಾದು ನಿಂತಿದ್ದರು.ಸ್ವಾಮಿಗಳು ಕ್ಷಣಕ್ಕಾದರೂ ಇಲ್ಲಿ ನಿಂತು ತಮ್ಮ ಫಲಸಮರ್ಪಣೆ ಸ್ವೀಕರಿಸಬೇಕು ಎಂದು ನೆರೆದವರ ಬಯಕೆ ಆಗಿತ್ತು.ಆಗಲೇ ಸಮಯ ಮೀರಿದೆ,ಇನ್ನವರು ಜಡೆ ತಲ್ಪಿ ಅಲ್ಲಿ ನಿತ್ಯ ವಿಧಿಗಳನ್ನು ಮುಗಿಸಿ ಶ್ರೀ ಚಂದ್ರಮೌಳೀಶ್ವರ ಪೂಜೆ ಮಾಡಬೇಕು.ಇಲ್ಲಿ ಅವರ ವಾಹನ ನಿಲ್ಲಲಾರದು ಎಂಬ ಸಂಶಯ ಅನೇಕರು ವ್ಯಕ್ತಪಡಿಸಿದ್ದರು.ಆದರೆ ಜಗದ್ಗುರುಗಳು ವಾಹನ ನಿಲ್ಲಿಸಿ ಅಲ್ಲೇ ಕೆಳಗಿಳಿದರು.ನಂತರ ರಂಗನಾಥ ಸ್ವಾಮಿ ಮಂದಿರಕ್ಕೆ ಬಂದರು.ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿ ಹೊರಬಂದವರು ಐದು ನಿಮಿಷ ಅನುಗ್ರಹ ಸಂದೇಶ ನೀಡಿದರು.ಅಲ್ಲಿ ನೆರಘದವರ ಮನಸ್ಸು ಗೆದ್ದರು.
ಜಡೆಗೆ ಶೃಂಗೇರಿಯ ಜಗದ್ಗುರುಗಳು ಬಾರದೇ ನಾಲ್ಕು ದಶಕವಾಗಿತ್ತು.ರಾತ್ರಿ ಹೊತ್ತಿನಲ್ಲೂ ದಾರಿಯಲ್ಲಿ ಸಾವಿರಾರು ಭಕ್ತರು ಕಾದು ನಿಂತಿದ್ದರು.ಜಗದ್ಗುರುಗಳ ದೂಳೀ ಪಾದಪೂಜೆ ನಡೆದು ಅವರು ಸ್ನಾನಾದಿಗಳನ್ನು ಪೂರೈಸಿ ಶ್ರೀ ಚಂದ್ರಮೌಳೀಶ್ವರ ಪೂಜೆ ಸಂಪನ್ನಗೊಳಿಸುವಾಗ ನಡು ರಾತ್ರಿ ಸಮೀಪಿಸುತ್ತಿತ್ತು.ಆ ಪ್ರದೇಶದಲ್ಲಿ ಈಡಿಗರು ಮತ್ತು ಲಿಂಗಾಯತ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.ಚಂದ್ರಮೌಳೀಶ್ವರ ಪೂಜೆಯನ್ನು ನೆರೆದ ಭಕ್ತರು ಶ್ರದ್ಧಾಭಕ್ತಿಯಿಂದ ವೀಕ್ಷಿಸಿ ಪುನೀತರಾದರು.ಆ ಭಕ್ತರು ಊಟ ಸಹಾ ಮಾಡದೇ ಇದು ತಮ್ಮ ಬದುಕಿನಲ್ಲಿ ದೊರೆತ ಅಪೂರ್ವ ಭಾಗ್ಯ ಎಂದು ಪರಿಗಣಿಸಿದ್ದರು.
ಜೂನ್ 22 ಅಷ್ಟಮಿಯಂದು ಜಡೆ ಶ್ರೀ ರಂಗನಾಥ ಸ್ವಾಮಿ, ವಿಶ್ವೇಶ್ವರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಕುಂಭಾಭಿಷೇಕವನ್ನು ಜಗದ್ಗುರುಗಳು ನೆರವೇರಿಸಿದರು.”ಧರ್ಮ ಉಳಿಸುವುದು ಎಂದರೆ ಧರ್ಮ ಸ್ವತಃ ಆಚರಿಸುವುದು.ಸನಾತನ ಪರಂಪರೆಯ ಮಹತ್ವವನ್ನು ನಾವು ಚೆನ್ನಾಗಿ ಅರಿತುಕೊಂಡು ಮುಂದಿನ ಪೀಳಿಗೆಗೂ ಅದರ ಯೋಗ್ಯ ಪರಿಚಯವನ್ನು ಮಾಡಿಸಬೇಕು.ಭಗವತ್ಪಾದ ಶಂಕರರು ಸನಾತನ ಧರ್ಮವನ್ನು ಗಟ್ಟಿಯಾಗಿ ಮರು ಸಂಸ್ಥಾಪನೆ ಮಾಡಿದ್ದಾರೆ.ಹಲವು ಶತಮಾನಗಳ ಕಾಲ ನಿರಂತರ ಪ್ರಹಾರ ನಡೆದರೂ ನಮ್ಮ ಧರ್ಮ ಗಟ್ಟಿಯಾಗಿ ನಿಲ್ಲಲು ಶಂಕರರ ಅಡಿಪಾಯವೇ ಕಾರಣ.ಧರ್ಮ ಉಳಿಸಿ ಗಟ್ಟಿಗೊಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು.ಎಲ್ಲೋ ಏನೋ ಆದರೆ ನಮಗೇನು ಎಂದು ಕೈಕಟ್ಟಿ ಕುಳಿತ ಕಾರಣ ಅನೇಕ ಕಡೆಗಳಲ್ಲಿ ಧರ್ಮಕ್ಕೆ ಸಂಕಟ ಬಂದಿದೆ.ಇದು ನಮಗೆ ನಿರಂತರ ಜಾಗೃತರಾಗಿರುವಂತೆ ಎಚ್ಚರಿಕೆ ನೀಡುತ್ತಿದೆ.ಧರ್ಮ ದೃಢಪಡಿಸುವ ಕಾರ್ಯದಲ್ಲಿ ಸರ್ವರ ಪಾತ್ರವೂ ಇದೆ.ದೇವಸ್ಥಾನಗಳು ಧರ್ಮದ ರಕ್ಷಣೆಗಾಗಿ ಅಗತ್ಯ.ಅಲ್ಲಿನ ಕಾರ್ಯಗಳಿಗೆ ಆಹ್ವಾನ ಬೇಕಿಲ್ಲ.ಅದು ಪ್ರತಿಯೊಬ್ಬರ ಕಾರ್ಯಕ್ರಮ ಎಂದು ತಿಳಿದು ಪಾಲ್ಗೊಂಡು ಸೇವೆ ಮಾಡಿ ಭಗವಂತನ ಕೃಪೆ ಪಡೆಯಬೇಕು “ಎಂದು ಜಗದ್ಗುರುಗಳು ತಮ್ಮ ಅನುಗ್ರಹ ಭಾಷಣದಲ್ಲಿ ತಿಳಿಸಿದರು.ಸೊರಬ ಭಾಗದಲ್ಲಿ ಹೊಸ ಸಂಚಲನವನ್ನು ಶೃಂಗೇರಿಯ ಜಗದ್ಗುರುಗಳ ಆಗಮನ ಸೃಷ್ಟಿಸಿತು.
ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳ ಈಚೆಗೆ ಒಂದು ದಿನದ ಜಡೆ ವಾಸ್ತವ್ಯ ಮತ್ತು ಅಲ್ಲಿ ರಂಗನಾಥ ಸ್ವಾಮಿ, ವಿಶ್ವೇಶ್ವರ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ಕುಂಭಾಭಿಷೇಕ ಕಾರ್ಯಕ್ರಮ ಹಲವು ರೀತಿಯಲ್ಲಿ ವೈಶಿಷ್ಟ್ಯಪೂರ್ಣ ಅನಿಸಿತು.ಪೂರ್ವ ನಿರ್ಧರಿತ ಕಾರ್ಯಕ್ರಮ ಅಲ್ಲದೇ‌ ಆಲ್ಲಲ್ಲೇ ನಿಗಧಿಯಾದ ಅವರ ಕಾರ್ಯಕ್ರಮ ಅಚ್ಚರಿಗೆ ಕಾರಣವಾಯಿತು.

ಮಳೆ ಕೊರತೆ : ಮುಂಗಾರು ಹಂಗಾಮಿನ ಬೆಳೆಗೆ ಭದ್ರಾ ಜಲಾಶಯದ ನೀರು ಬಿಡುಗಡೆ ಸಾಧ್ಯವಿಲ್ಲ. ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಪ್ರಕಟಣೆ

0

ಭದ್ರಾ ಜಲಾಶಯದ ಅಚ್ಚುಕಟ್ಟುದಾರರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಪ್ರಸ್ತುತ ಮಳೆ ಕೊರತೆಯಿಂದಾಗಿ ಭದ್ರಾ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವುದಿಲ್ಲ. ಆದಕಾರಣ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಲದಂಡೆ ಮತ್ತು ಎಡದಂಡೆ ನಾಲೆಯಲ್ಲಿ ನೀರು ಹರಿಸಲು ಸಾಧ್ಯವಾಗುವುದಿಲ್ಲವೆಂದು ಮತ್ತು ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಕುಡಿಯಲು ಮಾತ್ರ ಬಳಸಲು ಸರ್ಕಾರದ ಆದೇಶವಾಗಿರುವ ಹಿನ್ನಲೆಯಲ್ಲಿ ಅಚ್ಚುಕಟ್ಟು ಭಾಗದ ಎಲ್ಲಾ ರೈತರು ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಈ ಮೂಲಕ ಕೋರಲಾಗಿದೆ. ಮುಂಬರುವ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿ ಜಲಾಶಯ ಭರ್ತಿಯಾದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಆಯೋಜಿಸಿ ಬೆಳೆಗಳಿಗೆ ನೀರು ಹರಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.

ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು- ನ್ಯಾ.ಎಂ.ಎಸ್.ಸಂತೋಷ್

0

ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಂಡಿದ್ದು ಸಾರ್ವಜನಿಕರು ಹಾಗೂ ಯುವ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅರ್ಹರೆಲ್ಲರೂ ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ ಎಸ್ ತಿಳಿಸಿದರು.
ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಾದಕವಸ್ತು ಸೇವನೆ ನಿಷೇಧ ದಿನಾಚಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು 2026ರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರ್ಹ ನಾಗರಿಕರೆಲ್ಲರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಮತ್ತು ಹಾಲಿ ಮತದಾರರ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ ಎಂದರು.
ಸ್ವೀಪ್ ಕಾರ್ಯಕ್ರಮದ ರಾಜ್ಯಮಟ್ಟದ ತರಬೇತುದಾರ ನವೀದ್ ಅಹ್ಮದ್ ಪರ್ವೇಜ್ ಮಾತನಾಡಿ, ಅಕ್ಟೋಬರ್ 1 ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ.
ಆಗಸ್ಟ್ 05 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ ಆಗಲಿದೆ. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಆಗಸ್ಟ್ 5 ರಿಂದ ಸೆಪ್ಟೆಂಬರ್ 04 ರವರೆಗೆ ಸಮಯ ಇದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 07 ರಂದು ಪ್ರಕಟಿಸಲಾಗುವುದು.
ಬಿಎಲ್‌ಒಗಳು ಜೂನ್ 30 ರಿಂದ ಜುಲೈ 29ರ ಅವಧಿಯಲ್ಲಿ ನಿಮ್ಮ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರಂಗಳನ್ನು ದ್ವಿಪ್ರತಿಯಲ್ಲಿ ನೀಡಿ, ಭರ್ತಿ ಮಾಡಲು ಸಹಾಯ ಮಾಡುತ್ತಾರೆ. ನಾಗರಿಕರು ಭರ್ತಿ ಮಾಡಿದ ಫಾರಂ ನೀಡಿ ಅದಕ್ಕೆ ಸ್ವೀಕೃತಿ ಪಡೆಯಬೇಕು.
ಹೆಸರು ಪರಿಶೀಲಿಸುವುದು ಹೇಗೆ: ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂದು ತಿಳಿಯಲು ಬಿಎಲ್‌ಒ ಬಳಿ ಇರುವ ಪಟ್ಟಿ, ಇಸಿಐ ಎನ್‌ಇಟಿ(ECINET) ಮೊಬೈಲ್ ಆಪ್, ಅಥವಾ ಅಧಿಕೃತ ವೆಬ್‌ಸೈಟ್ voters.eci.gov.in ಅಥವಾ www.ceo.karnataka.gov.in ಮೂಲಕ ಪರಿಶೀಲಿಸಬಹುದು.
ಅರ್ಜಿ ನಮೂನೆಗಳು: ನಮೂನೆ 6: ಹೊಸ ಮತದಾರರ ನೋಂದಣಿ, ನಮೂನೆ 6ಎ: ಸಾಗರೋತ್ತರ ಮತದಾರರಾಗಿ ನೋಂದಾಯಿಸಲು, ನಮೂನೆ 7: ಹೆಸರು ತೆಗೆದುಹಾಕಲು, ನಮೂನೆ 8: ವಿಳಾಸ ಬದಲಾವಣೆ, ತಿದ್ದುಪಡಿ ಅಥವಾ ಎಪಿಕ್ ಕಾರ್ಡ್ ಬದಲಾವಣೆಗಾಗಿ. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಉಚಿತ ಸಹಾಯವಾಣಿ 1950 ಅನ್ನು ಸಂಪರ್ಕಿಸಬಹುದು.
ಅಧಿಕೃತ ಪ್ರಕ್ರಿಯೆಗಳಿಗೆ ಸೂಚನಾತ್ಮಕ ದಾಖಲೆಗಳ ಪಟ್ಟಿ ಬಿಡುಗಡೆ: ವಿವಿಧ ಸರ್ಕಾರಿ ಸೇವೆಗಳು ಹಾಗೂ ಅಧಿಕೃತ ಪರಿಶೀಲನಾ ಪ್ರಕ್ರಿಯೆಗಳಿಗಾಗಿ ಬಳಸಬಹುದಾದ ಒಟ್ಟು 12 ಪ್ರಮುಖ ಸೂಚನಾತ್ಮಕ ದಾಖಲೆಗಳ ಅಧಿಕೃತ ಪಟ್ಟಿಯನ್ನು ನಾಗರಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಮಾನ್ಯತೆ ಪಡೆದ ಪ್ರಮುಖ ದಾಖಲೆಗಳು: ಕೇಂದ್ರ/ರಾಜ್ಯ ಸರ್ಕಾರ ಮತ್ತು ಪಿಎಸ್‌ಯು ನೌಕರರ ಅಥವಾ ಪಿಂಚಣಿದಾರರ ಗುರುತಿನ ಚೀಟಿ, ಜುಲೈ 1, 1987 ಕ್ಕಿಂತ ಮುಂಚೆ ಸರ್ಕಾರಿ ಸಂಸ್ಥೆಗಳು ನೀಡಿದ ದಾಖಲೆಗಳು, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಎಸ್‌ಎಸ್‌ಎಲ್‌ಸಿ/ಶೈಕ್ಷಣಿಕ ಪ್ರಮಾಣಪತ್ರ, ಖಾಯಂ ನಿವಾಸಿ ಪ್ರಮಾಣಪತ್ರ, ಅರಣ್ಯ ಹಕ್ಕುಗಳ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ (ಓಬಿಸಿ/ಎಸ್ ಸಿ/ಎಸ್ ಟಿ) , ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ ಆರ್ ಸಿ), ಕುಟುಂಬ ರಿಜಿಸ್ಟರ್ ಮತ್ತು ಭೂಮಿ/ಮನೆ ಹಂಚಿಕೆ ಪ್ರಮಾಣಪತ್ರಗಳು ಈ ಪಟ್ಟಿಯಲ್ಲಿ ಸೇರಿವೆ.
ಚುನಾವಣಾ ಆಯೋಗದ ಸೂಚನೆ: ಆಧಾರ್ ಸಂಬಂಧಿತ ಪ್ರಕ್ರಿಯೆಗಳಿಗೆ ಭಾರತ ಚುನಾವಣಾ ಆಯೋಗವು ಹೊರಡಿಸಿದ ನಿಯಮಾವಳಿಗಳು ಅನ್ವಯಿಸುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶಶಿರೇಖಾ, ಅಂಗವಿಕಲ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿ ಸುವರ್ಣ ನಾಯಕ್, ದುರ್ಗಿಗುಡಿ ಶಾಲೆಯ ಎಸ್ ಡಿ ಎಂ ಸಿ ಸದಸ್ಯರಾದ ಸತೀಶ್, ಬಾಲ ನ್ಯಾಯ ಮಂಡಳಿ ಸದಸ್ಯರು ಹಾಗೂ ಸುರಭಿ ಮಹಿಳಾ ಮಂಡಳಿ ದಾವಣಗೆರೆಯ ನಿರ್ದೇಶಕರಾದ ರೇಖಾ ಜಿ.ಎಂ, ಮತ್ತು ಸುರಭಿ ಐ ಆರ್ ಸಿ ಎ ನಿರ್ದೇಶಕರಾದ ಲತಾ ಎ ವಿ ಉಪಸ್ಥಿತರಿದ್ದರು.

ಸ್ವಚ್ಛತಾಗಾರರಿಗೆ ಆಯಾ ಸಂಸ್ಥೆಯ ಮುಖ್ಯಸ್ಥರೇ ಗುರುತಿನ ಚೀಟಿ ನೀಡಬೇಕು- ಪ್ರಭುಲಿಂಗ ಕವಳಿಕಟ್ಟಿ

0

ಶಿವಮೊಗ್ಗ ಜಿಲ್ಲೆಯ ವಿವಿಧ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಚತಾಗಾರರಿಗೆ ಆಯಾ ಸಂಸ್ಥೆಯ ಮುಖ್ಯಸ್ಥರೇ ಗುರುತಿನ ಚೀಟಿಯನ್ನು ನೀಡಬೇಕು. ಇದರಿಂದ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದಿಂದ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರಸಭೆ, ಪಾಲಿಕೆ ಹೊರತುಪಡಿಸಿ ಸ್ವಚ್ಚತಾಗಾರರಿಗೆ ಬೇರೆಡೆ ಗುರುತಿನ ಚೀಟಿ ನೀಡುತ್ತಿಲ್ಲವೆಂಬ ದೂರುಗಳಿದ್ದು, ಕೆಲಸ ಪಡೆಯುತ್ತಿರುವ ಸಂಸ್ಥೆಗಳು ಸ್ವಚ್ಚತಾ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಪೌರ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ಶಿಕ್ಷಣ, ಶಾಲಾ ದಾಖಲಾತಿ, ಉದ್ಯೋಗ ಮತ್ತು ಇತರೆ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಕೌಶಲ್ಯಾಭಿವೃದ್ದಿ ಇಲಾಖೆ ಸಹಯೋಗದೊಂದಿಗೆ ಸಮಾಜ ಕಲ್ಯಾಣ ಇಲಾಖೆಯು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು. ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮುಖ್ಯಸ್ಥರು ತಮ್ಮ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕೆಂದ ಅವರು ಇಂತಹ ಜಾಗೃತಿ ಕಾರ್ಯಕ್ರಮಕ್ಕೆ ಗೈರಾದ ಅಧಿಕಾರಿ/ನೌಕರರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು.
ಪೌರ ಕಾರ್ಮಿಕರ ಆರೋಗ್ಯದ ಬಗ್ಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಬೇಕು. ವೇತನ ಖಾತೆಗಳಿಗೆ ಅಪಘಾತ ವಿಮೆ ಕವರ್ ಆಗುವ ಪಿಎಂಜೆಜೆಬಿವೈ ಮತ್ತು ಪಿಎಂ ಎಸ್‌ಬಿವೈ ಪಾಲಿಸಿಗಳನ್ನು ಕಡ್ಡಾಯವಾಗಿ ಮಾಡಿಸಬೇಕು. ಹಾಗೂ ಹೊರ ಗುತ್ತಿಗೆ ನೌಕರರಿಗೆ ರೂ.20 ಲಕ್ಷದವರೆಗೆ ಅಪಘಾತ ವಿಮೆ ಮೊತ್ತ ಬರುವಂತಹ,ವಾರ್ಷಿಕವಾಗಿ ರೂ.1000 ಕಟ್ಟುವ ವಿಮೆಯನ್ನು ಮಾಡಿಸುವಂತೆ ತಿಳಿಸಿದರು.
ಖಾಸಗಿ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಗುತ್ತಿಗೆದಾರರು ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಂಡು ಕಡಿಮೆ ಕಾರ್ಮಿಕರಿಂದ ಹೆಚ್ಚಿನ ಕೆಲಸವನ್ನು ತೆಗೆದುಕೊಳ್ಳುತ್ತಿರುವ ಬಗ್ಗೆ ನಾಮ ನಿರ್ದೇಶಿತ ಸದಸ್ಯರು ಗಮನಕ್ಕೆ ತಂದಿದ್ದು, ಈ ರೀತಿ ಆಗದಂತೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಅವರು, ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸುವಂತೆ ತಿಳಿಸಿದರು.
ಹಾಗೂ ನೇರಪಾವತಿ ಮತ್ತು ನೇರ ನೇಮಕಾತಿ ಪ್ರಕ್ರಿಯೆಯನ್ನು ಇನ್ನೊಂದೆರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಡಿಯುಡಿಸಿ ಯೋಜನಾ ನಿರ್ದೇಶಕರಿಗೆ ತಿಳಿಸಿದರು.
8 ಗಂಟೆ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಟ ಪಾವತಿಯನ್ನು ಮಾಡುವಂತೆ ಹಾಗೂ ಪರಿಷ್ಕೃತ ವೇತನವನ್ನು ಕಾರ್ಮಿಕರಿಗೆ ನೀಡುವಂತೆ ಸೂಚಿಸಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಆರೋಗ್ಯ ಸಮಸ್ಯೆಯ ಕಾರಣಕ್ಕೆ ದೀರ್ಘ ರಜೆ ತೆಗೆದುಕೊಂಡವರು ಮತ್ತಿತರೆ ಕಾರಣಕ್ಕೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದು ಬೇರೆಯವರನ್ನು ನೇಮಿಸುವ ಬಗ್ಗೆ ಸದಸ್ಯರು ಗಮನಕ್ಕೆ ತಂದಿದ್ದು, ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಖುದ್ದು ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿ ಕೆಲಸದಿಂದ ತೆಗೆದುಹಾಕಿದವರ ವರದಿ ನೀಡುವಂತೆ ಸೂಚಿಸಿದರು.
ಅಧಿಕಾರಿಗಳಿಗೆ ಸೂಚನೆ: ಸಫಾಯಿ ಕರ್ಮಚಾರಿಗಳ ಜೀವನಮಟ್ಟ ಸುಧಾರಣೆಗೆ ಮತ್ತು ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವAತೆ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ-1, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ ಜಿಲ್ಲಾ ಮಟ್ಟದ ಅಧಿಕಾರಿಗಳು, ನಾಮನಿರ್ದೇಶಿತ ಸದಸ್ಯರಾದ ಚಿನ್ನಯ್ಯ, ಭಾನುಪ್ರಕಾಶ್ ಹಾಜರಿದ್ದರು.