ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಂಡಿದ್ದು ಸಾರ್ವಜನಿಕರು ಹಾಗೂ ಯುವ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅರ್ಹರೆಲ್ಲರೂ ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕು ಎಂದು ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ ಎಸ್ ತಿಳಿಸಿದರು.
ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಾದಕವಸ್ತು ಸೇವನೆ ನಿಷೇಧ ದಿನಾಚಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು 2026ರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರ್ಹ ನಾಗರಿಕರೆಲ್ಲರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಮತ್ತು ಹಾಲಿ ಮತದಾರರ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ ಎಂದರು.
ಸ್ವೀಪ್ ಕಾರ್ಯಕ್ರಮದ ರಾಜ್ಯಮಟ್ಟದ ತರಬೇತುದಾರ ನವೀದ್ ಅಹ್ಮದ್ ಪರ್ವೇಜ್ ಮಾತನಾಡಿ, ಅಕ್ಟೋಬರ್ 1 ಕ್ಕೆ 18 ವರ್ಷ ತುಂಬುವವರು ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಜೂನ್ 30 ರಿಂದ ಜುಲೈ 29 ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಲಿದ್ದಾರೆ.
ಆಗಸ್ಟ್ 05 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ ಆಗಲಿದೆ. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಆಗಸ್ಟ್ 5 ರಿಂದ ಸೆಪ್ಟೆಂಬರ್ 04 ರವರೆಗೆ ಸಮಯ ಇದ್ದು, ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 07 ರಂದು ಪ್ರಕಟಿಸಲಾಗುವುದು.
ಬಿಎಲ್ಒಗಳು ಜೂನ್ 30 ರಿಂದ ಜುಲೈ 29ರ ಅವಧಿಯಲ್ಲಿ ನಿಮ್ಮ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರಂಗಳನ್ನು ದ್ವಿಪ್ರತಿಯಲ್ಲಿ ನೀಡಿ, ಭರ್ತಿ ಮಾಡಲು ಸಹಾಯ ಮಾಡುತ್ತಾರೆ. ನಾಗರಿಕರು ಭರ್ತಿ ಮಾಡಿದ ಫಾರಂ ನೀಡಿ ಅದಕ್ಕೆ ಸ್ವೀಕೃತಿ ಪಡೆಯಬೇಕು.
ಹೆಸರು ಪರಿಶೀಲಿಸುವುದು ಹೇಗೆ: ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂದು ತಿಳಿಯಲು ಬಿಎಲ್ಒ ಬಳಿ ಇರುವ ಪಟ್ಟಿ, ಇಸಿಐ ಎನ್ಇಟಿ(ECINET) ಮೊಬೈಲ್ ಆಪ್, ಅಥವಾ ಅಧಿಕೃತ ವೆಬ್ಸೈಟ್ voters.eci.gov.in ಅಥವಾ www.ceo.karnataka.gov.in ಮೂಲಕ ಪರಿಶೀಲಿಸಬಹುದು.
ಅರ್ಜಿ ನಮೂನೆಗಳು: ನಮೂನೆ 6: ಹೊಸ ಮತದಾರರ ನೋಂದಣಿ, ನಮೂನೆ 6ಎ: ಸಾಗರೋತ್ತರ ಮತದಾರರಾಗಿ ನೋಂದಾಯಿಸಲು, ನಮೂನೆ 7: ಹೆಸರು ತೆಗೆದುಹಾಕಲು, ನಮೂನೆ 8: ವಿಳಾಸ ಬದಲಾವಣೆ, ತಿದ್ದುಪಡಿ ಅಥವಾ ಎಪಿಕ್ ಕಾರ್ಡ್ ಬದಲಾವಣೆಗಾಗಿ. ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಉಚಿತ ಸಹಾಯವಾಣಿ 1950 ಅನ್ನು ಸಂಪರ್ಕಿಸಬಹುದು.
ಅಧಿಕೃತ ಪ್ರಕ್ರಿಯೆಗಳಿಗೆ ಸೂಚನಾತ್ಮಕ ದಾಖಲೆಗಳ ಪಟ್ಟಿ ಬಿಡುಗಡೆ: ವಿವಿಧ ಸರ್ಕಾರಿ ಸೇವೆಗಳು ಹಾಗೂ ಅಧಿಕೃತ ಪರಿಶೀಲನಾ ಪ್ರಕ್ರಿಯೆಗಳಿಗಾಗಿ ಬಳಸಬಹುದಾದ ಒಟ್ಟು 12 ಪ್ರಮುಖ ಸೂಚನಾತ್ಮಕ ದಾಖಲೆಗಳ ಅಧಿಕೃತ ಪಟ್ಟಿಯನ್ನು ನಾಗರಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.
ಮಾನ್ಯತೆ ಪಡೆದ ಪ್ರಮುಖ ದಾಖಲೆಗಳು: ಕೇಂದ್ರ/ರಾಜ್ಯ ಸರ್ಕಾರ ಮತ್ತು ಪಿಎಸ್ಯು ನೌಕರರ ಅಥವಾ ಪಿಂಚಣಿದಾರರ ಗುರುತಿನ ಚೀಟಿ, ಜುಲೈ 1, 1987 ಕ್ಕಿಂತ ಮುಂಚೆ ಸರ್ಕಾರಿ ಸಂಸ್ಥೆಗಳು ನೀಡಿದ ದಾಖಲೆಗಳು, ಜನನ ಪ್ರಮಾಣಪತ್ರ, ಪಾಸ್ಪೋರ್ಟ್, ಎಸ್ಎಸ್ಎಲ್ಸಿ/ಶೈಕ್ಷಣಿಕ ಪ್ರಮಾಣಪತ್ರ, ಖಾಯಂ ನಿವಾಸಿ ಪ್ರಮಾಣಪತ್ರ, ಅರಣ್ಯ ಹಕ್ಕುಗಳ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ (ಓಬಿಸಿ/ಎಸ್ ಸಿ/ಎಸ್ ಟಿ) , ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ ಆರ್ ಸಿ), ಕುಟುಂಬ ರಿಜಿಸ್ಟರ್ ಮತ್ತು ಭೂಮಿ/ಮನೆ ಹಂಚಿಕೆ ಪ್ರಮಾಣಪತ್ರಗಳು ಈ ಪಟ್ಟಿಯಲ್ಲಿ ಸೇರಿವೆ.
ಚುನಾವಣಾ ಆಯೋಗದ ಸೂಚನೆ: ಆಧಾರ್ ಸಂಬಂಧಿತ ಪ್ರಕ್ರಿಯೆಗಳಿಗೆ ಭಾರತ ಚುನಾವಣಾ ಆಯೋಗವು ಹೊರಡಿಸಿದ ನಿಯಮಾವಳಿಗಳು ಅನ್ವಯಿಸುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶಶಿರೇಖಾ, ಅಂಗವಿಕಲ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಅಧಿಕಾರಿ ಸುವರ್ಣ ನಾಯಕ್, ದುರ್ಗಿಗುಡಿ ಶಾಲೆಯ ಎಸ್ ಡಿ ಎಂ ಸಿ ಸದಸ್ಯರಾದ ಸತೀಶ್, ಬಾಲ ನ್ಯಾಯ ಮಂಡಳಿ ಸದಸ್ಯರು ಹಾಗೂ ಸುರಭಿ ಮಹಿಳಾ ಮಂಡಳಿ ದಾವಣಗೆರೆಯ ನಿರ್ದೇಶಕರಾದ ರೇಖಾ ಜಿ.ಎಂ, ಮತ್ತು ಸುರಭಿ ಐ ಆರ್ ಸಿ ಎ ನಿರ್ದೇಶಕರಾದ ಲತಾ ಎ ವಿ ಉಪಸ್ಥಿತರಿದ್ದರು.
ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು- ನ್ಯಾ.ಎಂ.ಎಸ್.ಸಂತೋಷ್
Date:
