Wednesday, June 10, 2026
Wednesday, June 10, 2026
Home Blog Page 2020

ಪ್ರತಿ ಮನೆಗೆ ಪಡಿತರ ಸಧ್ಯದಲ್ಲೇ ನಿರ್ಧಾರ

0

ಪಡಿತರ ಚೀಟಿದಾರರಿಗೆ ಮನೆಬಾಗಿಲಿಗೆ ಪಡಿತರ ತಲುಪಿಸುವ ಯೋಜನೆಯನ್ನು ನವೆಂಬರ್ ಒಂದರಂದು ಜಾರಿಗೆ ತರಲು ಸರ್ಕಾರ ಯೋಜಿಸಿದೆ.ಇದರ ಮೊದಲ ಹಂತವಾಗಿ ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಗೆ ತರಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆಹಾರ ಸಚಿವ ಉಮೇಶ್ ಕತ್ತಿ “ಮನೆಬಾಗಿಲಿಗೆ ಪಡಿತರ” ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಸಿದ್ಧತೆ ಆರಂಭಿಸುವಂತೆ ಆದೇಶ ನೀಡಿದ್ದೇವೆ ಎಂದರು.
ಆಂಧ್ರಪ್ರದೇಶದ ಮಾದರಿಯಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಿಸಲು ಮುಂದಾಗಿರುವ ರಾಜ್ಯ ಸರ್ಕಾರ ಯೋಜನೆಯನ್ನು ಸಿದ್ಧಪಡಿಸಿದೆ. ಯೋಜನೆಯ ಜಾರಿಗೆ ಬೇಕಿರುವ ಸೌಲಭ್ಯಗಳು, ವೆಚ್ಚ, ಮತ್ತಿತರ ವಿವರಗಳನ್ನು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯದ ಪ್ರಸ್ತಾವದ ಪ್ರಕಾರ, ಮನೆ ಬಾಗಿಲಿಗೆ ಪಡಿತರ ಸಾಗಿಸುವುದಕ್ಕೆ ಪ್ರತಿ ನ್ಯಾಯಬೆಲೆ ಅಂಗಡಿಗೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಅವರು ಖರೀದಿಸುವ ವಾಹನಕ್ಕೆ ಸರಕು ಮತ್ತು ಸೇವಾ ತೆರಿಗೆ, ಸಹಾಯಧನ ಸೇರಿದಂತೆ ಶೇ.30 ರಷ್ಟು ನೆರವನ್ನು ಇಲಾಖೆಯಿಂದ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.
“ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಇದೆ 28ರಂದು ಉನ್ನತ ಮಟ್ಟದ ಸಭೆ ನಡೆಯಲಿದೆ. ಯೋಜನೆ ಅನುಷ್ಠಾನದ ದಿನಾಂಕ ಕುರಿತು ಸಭೆಯಲ್ಲಿ ನಿರ್ಧರಿಸಲಾಗುವುದು” ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಇಡೀ ರಾಜ್ಯದಲ್ಲಿ ಯೋಜನೆಯ ಜಾರಿಗೆ 10,000 ವಾಹನಗಳ ಅಗತ್ಯವಿದೆ. ವಾಹನ ಖರೀದಿ ಸೇರಿದಂತೆ ಹಲವು ಕೆಲಸಗಳು ಬಾಕಿ ಇವೆ. ಯೋಜನೆ ಆರಂಭ ದಿನಾಂಕವನ್ನು ಈಗಲೇ ಹೇಳುವುದು ಕಷ್ಟ ಎಂದು ಸಚಿವರು ತಿಳಿಸಿದ್ದಾರೆ.

ಆತಂಕ ಸೃಷ್ಟಿಸಿದ ಎವೈ 4.2 ವೈರಾಣು

0

ರಾಜ್ಯದಲ್ಲಿ ಬಹುತೇಕರು ಕೋವಿಡ್ ಲಸಿಕೆ ತೆಗೆದುಕೊಂಡಿರುವುದರಿಂದ ಎವೈ 4.2 ವೈರಾಣು ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ . ಅಶ್ವತ್ ನಾರಾಯಣ್ ಹೇಳಿದ್ದಾರೆ.
ವೈರಾಣುಗಳು ರೂಪಂತರ ಆಗುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ರೋಗ ನಿರೋಧಕ ಲಸಿಕೆ ಪಡೆಯುವ ಮೂಲಕ ಕೋವಿಡ್ ನಿಯಂತ್ರಿಸಬಹುದು ಎಂದು ಹೇಳಿದರು.
ಸುಮಾರು ಎರಡು ವರ್ಷಗಳ ಹಿಂದೆ ಆರಂಭವಾದ ಕೋವಿಡ್-19 ಸಾಂಕ್ರಾಮಿಕ ರೋಗದ ಕಾಟ ಈಗ ಮತ್ತೊಮ್ಮೆ ಕಾಡುವ ಭೀತಿ ಆವರಿಸಿದೆ. ಬ್ರಿಟನ್, ರಷ್ಯಾ, ಯುರೋಪ್ ನ ಕೆಲವು ದೇಶಗಳಲ್ಲಿ ಪತ್ತೆಯಾಗಿರುವ ಕೋವಿಡ್ ನ ಹೊಸ ತಳಿಯ ವೈರಾಣು ಎವೈ 4.2 ರಾಜ್ಯಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನಲ್ಲಿ ಮೂರು ಸೇರಿ ರಾಜ್ಯದಲ್ಲಿ ಒಟ್ಟು ಏಳು ಪ್ರಕರಣಗಳು ದೃಢಪಟ್ಟಿವೆ ಎಂದು ತಿಳಿದು ಬಂದಿದೆ.
ಕೆಲದಿನಗಳ ಹಿಂದೆ ಸೋಂಕಿತರ ಮಾಹಿತಿಯನ್ನು ಅನುಕ್ರಮಣಿಕೆ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಲ್ಲಾ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.
ಈ ವಿಚಾರವಾಗಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮತ್ತು ಹಿರಿಯ ಅಧಿಕಾರಿಗಳ ಜೊತೆಗೆ ಆರೋಗ್ಯ ಸಚಿವ ಡಾಕ್ಟರ್ ಕೆ.ಸುಧಾಕರ್ ಸಭೆ ನಡೆಸಿದರು.
‘ಬ್ರಿಟನ್ ಮತ್ತು ರಷ್ಯಾದಲ್ಲಿ ಪತ್ತೆಯಾಗಿರುವ ಎವೈ 4.2 ವೈರಾಣು ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಕೋವಿಡ್ ನ ಯಾವುದೇ ಹೊಸ ತಳಿ ಬಂದರೂ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿ, ತಜ್ಞರ ಅಭಿಪ್ರಾಯವನ್ನು ಕೇಳಲಾಗುವುದು. ಎವೈ 4.2 ವೈರಾಣು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದನ್ನು ಗಮನಿಸಬೇಕಾಗಿದೆ ಎಂದು ಹೇಳಿದರು.
ಈ ಕುರಿತು ದೆಹಲಿಯ ವಂಶವಾಹಿ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಅನುರಾಗ್ ಅಗರ್ವಾಲ್ ರವರು, “ಪ್ರಯೋಗಾಲಯದಲ್ಲಿ ಈ ಕೆಲವೇ ವೈರಾಣುವನ್ನು ನೋಡಿರುವುದಾಗಿಯೂ ಆದರೆ, ಅವುಗಳನ್ನು ವರ್ಗೀಕರಿಸುವುದು ಕ್ಲಿಷ್ಟಕರವಾಗಿದೆ” ಎಂದಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸೂಖ್ ಮಾಂಡವಿಯಾ ಅವರು ಈ ಹೊಸ ವೈರಾಣುವಿನ ಬಗ್ಗೆ ತಜ್ಞರು ಅನ್ವೇಷಣೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಎಲ್ಲರ ಅಭಿಮಾನದ ಮನುಷ್ಯ, ಬಂಗಾರಪ್ಪ

0

ಸೊರಬ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಜನರ ಸಮಸ್ಯೆಗೆ ಧ್ವನಿಯಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರೆ.
ಸೊರಬದ ಬಂಗಾರ ಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 88ನೇ ಜನ್ಮದಿನದ ಅಂಗವಾಗಿ ಅವರ ಸಮಾಧಿ ಸ್ಥಳಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಕೃಪಾಂಕ, ರೈತರ ಪಂಪಸೆಟ್‍ಗಳಿಗೆ ಉಚಿತ ವಿದ್ಯುತ್ ಸೇರಿದಂತೆ ತಳ ಸಮುದಾಯದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ರೈತರಿಗೆ ಭೂಮಿಯ ಹಕ್ಕನ್ನು ಕೊಡುವುದು ಬಂಗಾರಪ್ಪ ಅವರ ಮೊದಲ ಧ್ಯೇಯವಾಗಿತ್ತು ಎಂದು ಮಧು ಬಂಗಾರಪ್ಪ ನುಡಿದಿದ್ದಾರೆ.

ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಂಡಿದ್ದಾರೆ ಇದು ಬಂಗಾರಪ್ಪ ಅವರ ಬಗೆಗಿನ ಎಲ್ಲರ ಅಭಿಮಾನವನ್ನು ತೋರಿಸುತ್ತದೆ ಎಂದರು.

ರಾಜ್ಯದಲ್ಲಿ ನವೋದ್ಯಮಗಳಿಗೆ ಸ್ವಾಗತ

0

ರಾಜ್ಯದ ನವೋದ್ಯಮಗಳಿಗೆ ಶೇ.90 ರಷ್ಟು ವಿದೇಶಿ ಹೂಡಿಕೆ ಇದೆ. ಸ್ಥಳೀಯರೂ ಬಂಡವಾಳ ಹೂಡಿದರೆ, ಆರ್ಥಿಕತೆಗೆ ವೇಗ ಸಿಗಲಿದೆ ಎಂದು ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾಕ್ಟರ್ ಸಿ.ಎನ್. ಅಶ್ವತ್ ನಾರಾಯಣ್ ಹೇಳಿದರು.
ಮೈಸೂರಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ‘ಬಿಯಾಂಡ್ ಬೆಂಗಳೂರು’ ಅಭಿಯಾನದಡಿಯಲ್ಲಿ ಆಯೋಜಿಸಿದ್ದ “ದಿ ಬಿಗ್ ಟೆಕ್ ಶೋ” ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಉದ್ಘಾಟಿಸಿದರು.
ಐಟಿ, ಬಿಟಿ , ಉದ್ಯೋಗಗಳು ಎಲ್ಲಾ ನಗರಗಳಲ್ಲಿ ದೊರೆಯಲೆಂದೇ ಭೂಸುಧಾರಣಾ ಕಾಯ್ದೆ ಮತ್ತು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ತರಲಾಗಿದೆ. ಎಲ್ಲಾ ಪದವಿಗಳಲ್ಲಿ ತಾಂತ್ರಿಕ ಶಿಕ್ಷಣದ ವಿಷಯವನ್ನು ಕಡ್ಡಾಯಗೊಳಿಸಲು ಚಿಂತಿಸಲಾಗಿದೆ. ಬೆಂಗಳೂರು ಹೊರತಾಗಿ ಇತರೆಡೆ ಇಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 600 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ರಾಜ್ಯ ಐಟಿ-ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಹಾಗೂ ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,ಮೇಯರ್ ಸುನಂದಾ ಫಾಲನೇತ್ರ , ಕೆಡಿಇಎಂ ಮುಖ್ಯಸ್ಥ ಬಿ.ವಿ.ನಾಯ್ಡು ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಏತ ನೀರಾವರಿ ಯೋಜನೆ ಪ್ರಗತಿ ವೀಕ್ಷಿಸಿದ : ಬಿ ಎಸ್ ವೈ

0

ಶಿಕಾರಿಪುರ ತಾಲೂಕು ಕಸಬಾ ಹೋಬಳಿ ಕಾಳೇನಹಳ್ಳಿಯ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಮತ್ತು ಸಂಸದರಾದ ಬಿ. ವೈ. ರಾಘವೇಂದ್ರ ಅವರು ವೀಕ್ಷಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಶಿಕಾರಿಪುರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು ವಿಶ್ರಾಂತಿ ಪಡೆಯದೆ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.

ಕೋವಿಡ್ ನಿಂದ ಲಕ್ಷಾಂತರ ಕಂಪನಿಗಳು ಕಣ್ಮರೆ

0

ದೇಶದಲ್ಲಿ ಕಳೆದ ಸೆಪ್ಟೆಂಬರ್
ಅಂತ್ಯದ ವೇಳೆಗೆ 7.73 ಲಕ್ಷಕ್ಕೂ ಹೆಚ್ಚು ಕಂಪನಿಗಳು ಸ್ಥಗಿತವಾಗಿವೆ ಎಂಬ ಆಘಾತಕಾರಿ ಅಂಶವನ್ನು ಸರ್ಕಾರದ ಅಂಕಿ-ಅಂಶಗಳು ಬಹಿರಂಗ ಪಡಿಸಿವೆ.
ಈ 2021 ರ ಸೆಪ್ಟೆಂಬರ್ ನಲ್ಲಿ 17,000 ಹೊಸ ಕಂಪನಿಗಳು ನೋಂದಣಿಯಾಗಿವೆ. ಇದರೊಂದಿಗೆ ಒಟ್ಟು ಸಕ್ರಿಯ ಕಂಪನಿಗಳ ಸಂಖ್ಯೆ 14.1 ಲಕ್ಷಕ್ಕೆ ಏರಿಕೆಯಾಗಿವೆ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಕಾರ್ಪೊರೇಟರ್ ವ್ಯವಹಾರಗಳ ಸಚಿವಾಲಯದ ಮಾಹಿತಿ ಪ್ರಕಾರ, 2021 ರ ಸೆಪ್ಟೆಂಬರ್ 30 ರ ವೇಳೆಗೆ ಒಟ್ಟು 22,32,699 ಕಂಪನಿಗಳು ನೊಂದಣಿಯಾಗಿದ್ದು, ಅದರಲ್ಲಿ 7,73,070 ಕಂಪನಿಗಳು ಬಂದಾಗಿವೆ. ಮತ್ತು 2,298 ಕಂಪನಿಗಳು ತಾತ್ಕಾಲಿಕವಾಗಿ ನಿಷ್ಕ್ರಿಯವಾಗಿವೆ. 6,944 ಕಂಪನಿಗಳು ಮಾರಾಟ ಅಥವಾ ಹರಾಜಿನ ಮೂಲಕ ನಗದೀಕರಣ ಕಾಯುತ್ತಿವೆ.
36,110 ಕಂಪನಿಗಳು ನೊಂದಣಿ ಕಳೆದುಕೊಳ್ಳುವ ಹಂತದಲ್ಲಿವೆ ಎನ್ನಲಾಗುತ್ತಿದೆ. ನಿರುದ್ಯೋಗದ ಪ್ರಮಾಣ ಶೇ. 7.8 ಮಟ್ಟದಲ್ಲಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆಯು ವರದಿ ಮಾಡಿದೆ.
ಔದ್ಯೋಗಿಕರಣದ ಪ್ರಗತಿಯ ಸಂದರ್ಭದಲ್ಲಿ ಈ ಕಂಪನಿಗಳ ನಿಷ್ಕ್ರಿಯತೆ ಒಂದು ಎಚ್ಚರಿಕೆಯ ಗಂಟೆಯಾಗಿದೆ.

ತಲೈವ ಮುಡಿಗೆ ಫಾಲ್ಕೆ ಮುಕುಟ

0

ಟಿಕೆಟ್ ಟಿಕೆಟ್ ಎಂದು ರಾಜ್ಯ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿದ್ದ ಯುವಕನೊಬ್ಬ ಭಾರೀ ಬೇಡಿಕೆಯ ತಾರೆಯಾಗುತ್ತಾನೆಂದು ಯಾರೂ ಎಣಿಸಿರಲಿಲ್ಲ. ಆತ್ಮೀಯರಾಗಿದ್ದ ಸಹೋದ್ಯೋಗಿ ತನ್ನ ಕಂಡಕ್ಟರಿಗೆ ನೀನು ಸಿನಿಮಾಗೆ ಸೇರು ನಿನಗೆ ನಟನೆಯಲ್ಲಿ ಆಸಕ್ತಿ ಇದೆ ಎಂದು ಸಲಹೆ ನೀಡಿದ. ಆ ಸಲಹೆ ಕಂಡಕ್ಟರ್ ಮಿತ್ರನ ಬದುಕನ್ನೇ ಬದಲಿಸಿತು. ಆ ಸಹೋದ್ಯೋಗಿ ಮಿತ್ರರೇ ರಾಜ್ ಬಹುದ್ದೂರ್ ಮತ್ತು ಇಂದಿನ ಸೂಪರ್ ಸ್ಟಾರ್ ರಜನಿಕಾಂತ್.

ಆಗ ಬಸ್ ಕಂಡಕ್ಟರ್ ಇಂದಿನ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಮಿಂಚಿದ್ದಾರೆ. ಇಂದಿಗೂ ಅವರ ಸಿನಿಮಾಗಳಿಗೆ ನಿರ್ಮಾಪಕರು ಕೋಟಿಗಟ್ಟಲೆ ಬಂಡವಾಳ ಹಾಕಲು ಮುಗಿಬೀಳುತ್ತಾರೆ.

ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಚಲನಚಿತ್ರ ನಟನೆ ಮತ್ತು ಚಿತ್ರರಂಗದಲ್ಲಿ ಅಪಾರ ಸೇವೆಯನ್ನು ಪರಿಗಣಿಸಿ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೋಮವಾರ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಮಾನ್ಯ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರು ರಜನಿಕಾಂತ್ ಅವರಿಗೆ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿದರು.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಾ ಧನ್ಯತಾಭಾವ ವ್ಯಕ್ತಪಡಿಸಿದರು. ಅವರು ನಟಿಸಿದ ಮೊದಲ ಚಿತ್ರ ‘ಅಪೂರ್ವ ರಾಗಂಗಳ್’ ನಿರ್ದೇಶಿಸಿದ ದಿವಂಗತ ಚಲನಚಿತ್ರ ನಿರ್ಮಾಪಕ ಕೆ.ಬಾಲಚಂದರ್, ಸಹೋದರ ಸತ್ಯನಾರಾಯಣರಾವ್, ರಜನಿಕಾಂತ್ ಅಭಿನಯಿಸಿರುವ ಎಲ್ಲಾ ಚಿತ್ರದ ನಿರ್ದೇಶಕರು, ನಿರ್ಮಾಪಕರು ಥಿಯೇಟರ್ ಮಾಲೀಕರು ತಂತ್ರಜ್ಞರು ಮತ್ತು ತಮಗೆ ಜೀವ ನೀಡಿದ ತಮಿಳು ಜನತೆಗೆ ಧನ್ಯವಾದ ಅರ್ಪಿಸಿದರು.

ಇಂತಹ ಮೇರು ನಟ ತನ್ನ ವೃತ್ತಿಬದುಕಿನ ಪೂರ್ವಾರ್ಧವನ್ನು ಕನ್ನಡ ನೆಲದಲ್ಲಿ ಕಳೆದರು ಎಂದು ನಮ್ಮ ಕನ್ನಡಿಗರಲ್ಲಿ ಹೆಮ್ಮೆ ಇದೆ. ಕನ್ನಡ ಚಿತ್ರರಂಗದಲ್ಲು ಕಥಾಸಂಗಮ, ಸಹೋದರರ ಸವಾಲ್, ತಪ್ಪಿದ ತಾಳ, ಕುಂಕುಮ ರಕ್ಷೆ, ಗಲಾಟೆ ಸಂಸಾರ ಮುಂತಾದ ಚಿತ್ರಗಳಲ್ಲೂ ತಮ್ಮ ನಟನಾ ಕೌಶಲ್ಯವನ್ನು ಮೆರೆದಿದ್ದಾರೆ.

ಒಟ್ಟಾರೆ ರಜನಿಕಾಂತ್ ಅಸಾಧಾರಣ ಕಲಾವಿದ. ತನ್ನ ಅಭಿನಯದ ಚಾಣಾಕ್ಷತೆ, ಆಂಗಿಕ ಭಂಗಿ, ಮಿಂಚಿನ ಚಾಕಚಕ್ಯತೆ ಮುಂತಾದವು ಅವರ ಚಿತ್ರರಂಗದ ವಿಶಿಷ್ಟ, ಅನನ್ಯ, ಏಕಮೇವ ನಟನೆ ಅವರದು. ಹೀಗಾಗಿ ತಮಿಳಿನಲ್ಲಿ ತಲೈ‌ವ ಎಂದೇ ಜನಜನಿತರಾಗಿದ್ದಾರೆ. ಇತಂಹ ಅಭಿಜಾತ ಕಲಾವಿದನಿಗೆ ನಮ್ಮೆಲ್ಲರ ಅಭಿನಂದನೆಗಳು.

ಶಾಲೆ ಎಂಬ ಗೂಡಿಗೆ ಹಾರಿ ಬಂದ ಹಕ್ಕಿಗಳು

0

ಸುಮಾರು ಒಂದುವರೆ ವರ್ಷಗಳವರೆಗೂ ಶಾಲಾ ವಾತಾವರಣ ಸ್ತಬ್ಧವಾಗಿತ್ತು. ಈಗ ಒಂದರಿಂದ ಐದನೇ ತರಗತಿಯವರೆಗೆ ಭೌತಿಕ ತರಗತಿಗಳು ನಿನ್ನೆಯಿಂದ ರಾಜ್ಯದ್ಯಂತ ಆರಂಭಗೊಂಡಿವೆ. ಬರಿದಾದ ಗೂಡಿಗೆ ಹಕ್ಕಿಗಳು ಹಾರಿಬಂದಂತೆ ಶಾಲಾ ವಾತಾವರಣದಲ್ಲಿ ಚಿಲಿಪಿಲಿ ಶುರುವಾಗಿದೆ.
ಶಾಲೆಗಳ ಆವರಣದಲ್ಲಿ ಮತ್ತೆ ಮಕ್ಕಳ ಕಲರವ ಶುರುವಾಗಿದೆ. ಹಲವು ಶಾಲೆಗಳಲ್ಲಿ ಪ್ರವೇಶದ್ವಾರವನ್ನು ತಳಿರು-ತೋರಣಗಳಿಂದ ಅಲಂಕೃತ ಗೊಳಿಸಲಾಗಿತ್ತು. ಬಣ್ಣ ಬಣ್ಣದ ಬಲೂನುಗಳು ಆಕಾಶದಲ್ಲಿ ಚಿಮ್ಮುತ್ತಿದ್ದವು. ಶಾಲೆಯ ಅಂಗಳದ ರಂಗೋಲಿಯಿಂದ ಶೋಭಿಸುತ್ತಿತ್ತು. ಉತ್ಸುಕತೆಯಿಂದ ಬಂದ ಮಕ್ಕಳಿಗೆ ಶಾಲಾವೃಂದವು ಹೂವು ಮತ್ತು ಸಿಹಿಯನ್ನು ನೀಡಿ ಬರಮಾಡಿಕೊಂಡಿತು.
ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅರ್ಧ ದಿನ ಮಾತ್ರ ಭೌತಿಕ ತರಗತಿಗಳನ್ನು ನಡೆಸಲಾಯಿತು. ಮೊದಲ ದಿನ ಶೇ. 55 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ತಿಳಿದು ಬಂದಿದೆ.
ಕೋವಿಡ್, ಲಾಕ್ ಡೌನ್ ನಿಂದ ಹುಟ್ಟಿಕೊಂಡ ಆರ್ಥಿಕ ಸಂಕಷ್ಟದಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳ ಬದಲಿಗೆ ಸರ್ಕಾರಿ ಶಾಲೆಗೆ ಸೇರಿಸಲು ಒತ್ತು ನೀಡಿರುವುದು ಕಂಡುಬಂದಿದೆ. ಈ ವರ್ಷ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಒಂದರಿಂದ 10ನೇ ತರಗತಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ 2.35 ಲಕ್ಷ (ಶೇ.5.36) ಏರಿಕೆಯಾಗಿದೆ ಎನ್ನಲಾಗುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚುತ್ತಿರುವುದು ಸಂತೋಷದ ವಿಷಯವಾದರೂ, ಸರ್ಕಾರಿ ಶಾಲೆಯಲ್ಲಿ ಶಿಕ್ಷಕರು ಮತ್ತು ಮೂಲ ಸೌಕರ್ಯಗಳ ಕೊರತೆಯನ್ನು ತುಂಬುವುದು ಸವಾಲಿನ ಕೆಲಸವೇ ಆಗಿದೆ. ಸರ್ಕಾರವು ಶೀಘ್ರವಾಗಿ ಶಾಲಾ ಕಟ್ಟಡ ನಿರ್ವಹಣೆ ಮತ್ತು ಶಿಕ್ಷಕರ ನೇಮಕಾತಿ ಬಗ್ಗೆ ಗಮನಹರಿಸಿ ಈಗಿರುವ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಬೇಕಿದೆ.

T20- ಬಿ ಗ್ರೂಪ್ ಗೆ ಆಫ್ಘನಿಸ್ತಾನ್

0

ಟಿ – 20 ವಿಶ್ವಕಪ್ ಟೂರ್ನಿಯ ಪಂದ್ಯವು ಅಫ್ಘಾನಿಸ್ತಾನ ಮತ್ತು ಸ್ಕಾಟ್ಲೆಂಡ್ ನಡುವೆ ನಡೆಯಿತು. ಅಫ್ಘಾನಿಸ್ತಾನ ತಂಡವು ಸ್ಕಾಟ್ಲೆಂಡ್ ತಂಡದ ವಿರದ್ಧ ನಿರಾಯಾಸ ಗೆಲುವನ್ನು ಸಾಧಿಸಿದೆ.
ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಟಿ – 20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ 2 ನೇ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನವು ಸ್ಕಾಟ್ಲೆಂಡ್ ವಿರುದ್ಧ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಗಳ ನ್ನು ಕಲೆ ಹಾಕಿದೆ.
ಆರಂಭಿಕ ಜೋಡಿಯಲ್ಲಿ ಹಜರತ್ ಉಲ್ಲಾ ಜಜೈ ಮತ್ತು ಮೊಹಮ್ಮದ್ ಶೆಹಜಾದ್ ಭರ್ಜರಿ ಆಟದೊಂದಿಗೆ ಮಿಂಚಿದರು. ಆರಂಭದ ಜೊತೆಯಾಟದಲ್ಲಿ ಆಡಿದ ಅವರು ಕೆಲವು ಎಸೆತಗಳನ್ನು ತಾಳ್ಮೆಯಿಂದ ಎದುರಿಸಿದರು.ಉಲ್ಲಾ ಜಜೈ ಮತ್ತು ಮೊಹಮ್ಮದ್ ಶೆಹಜಾದ್ ನಂತರ ಬೌಂಡರಿಗಳನ್ನು ಸಿಡಿಸಿ.ಕೇವಲ 35 ಎಸೆತಗಳಲ್ಲಿ 54 ರನ್ ಗಳನ್ನು ಸೇರಿಸಿದರು.ನಂತರ ಷರೀಪ್ ಎಸೆತಗಳಲ್ಲಿ ಮೊಹಮ್ಮದ್ ಶೆಹಜಾದ್ ಔಟಾದರು. ನಂತರ 3 ನೆ ಹಂತದ ವಿಕೆಟ್ ಗೆ ಅಂಕಣಕ್ಕೆ ಇಳಿದ ಗುರ್ಬಾಜ್ ರವರು ಜಜೈ ಜೊತೆಗೂಡಿ ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಗುರ್ಬಾಜ್ ರವರು ರನ್ ರೇಟ್ ವೇಗವನ್ನು ಹೆಚ್ಚಿಸಿದರು.
ಕೇವಲ 3 ಎಸೆತಗಳಲ್ಲಿ ತಲಾ 3 ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ ಜಜೈ 44 ರನ್ ಗಳನ್ನ ಕಲೆ ಹಾಕಿ ಔಟಾದರು.
ಜಜೈ ಔಟಾದ ಬಳಿಕ 4 ನೆ ವಿಕೆಟ್ ಹಂತಕ್ಕೆ ಕಾಲಿಟ್ಟು ಅಂಕಣಕ್ಕೆ ಇಳಿದ ಜದ್ರಾನ್. ಗುರ್ಬಾಜ್ ಜೊತೆಗೂಡಿ ಸ್ಕಾಟ್ಲೆಂಡ್ ತಂಡದ ಬೌಲರ್ ಗಳನ್ನ ಕಂಗೇಡುವಂತೆ ಮಾಡಿ 87 ರನ್ ಕಲೆ ಹಾಕಿ ಅಫ್ಘಾನಿಸ್ತಾನದ ಮೊತ್ತವನ್ನು ಗಡಿ ದಾಟಿಸಿದರು.
ಕೊನೆಯ ಓವರ್ ಗಳಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಟ ಆಡಿದ ಜಾದ್ರಾನ್ ರವರು 5 ಬೌಂಡರಿ ಮತ್ತು 3 ಸಿಕ್ಸರ್ ಮೂಲಕ ಬ್ಯಾಟಿಂಗ್ ಆಡಿದ ಅವರು 200 ರನ್ ಸಮೀಪ ತಲುಪಿಸಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.
ತಂಡದ ಎಲ್ಲಾ ಆಟಗಾರರ ಉತ್ತಮ ಪ್ರದರ್ಶನದಿಂದಾಗಿ ಟಿ – 20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಮೊದಲನೇ ಸ್ಥಾನ ತಲುಪಿದೆ.

ಕಾಶ್ಮೀರ ಈಗ ಎಲ್ಲರಿಗೂ ಬಾಗಿಲು ತೆರೆದಿದೆ :ಅಮಿತ್ ಶಾ

0

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಅಳಿಸಿ ಶಾಂತಿಭಂಗ ವನ್ನು ಕೊನೆಗಾಣಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ಜಮ್ಮುವಿನಲ್ಲಿರುವ ಗುರುದ್ವಾರ ಡಿಗಿಯಾನಾದ ಆಶ್ರಮಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರು, ಈ ಕೇಂದ್ರಾಡಳಿತ ಪ್ರದೇಶವು ಪ್ರಧಾನಿ ನರೇಂದ್ರ ಮೋದಿಯವರ ಹೃದಯದಲ್ಲಿ ಜಾಗ ಪಡೆದಿದೆ. ಇದರ ಶಾಂತಿ ಮತ್ತು ಅಭಿವೃದ್ಧಿಗೆ ಧಕ್ಕೆ ಉಂಟು ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದರು.
70 ವರ್ಷದ ಬಳಿಕ ಜಮ್ಮು-ಕಾಶ್ಮೀರದಲ್ಲಿ ತಳಮಟ್ಟದ ಪ್ರಜಾಪ್ರಭುತ್ವ ಸ್ಥಾಪನೆಯ ಗೌರವವು ಬಿಜೆಪಿಗೆ ಸಲ್ಲಬೇಕು. ಈಗ ಯಾರು ಬೇಕಿದ್ದರೂ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಬಹುದು, ಸಚಿವರಾಗಬಹುದು. ಪಂಡಿತ ಸಮುದಾಯವನ್ನು ಮತ ಬ್ಯಾಂಕ್ ಆಗಿ ಮಾತ್ರ ನೋಡಲಾಗಿತ್ತು. ಈಗ ಅವರಿಗೂ ಪ್ರಾತಿನಿಧ್ಯವಿದೆ. ಅವರ ಪ್ರತಿನಿಧಿಗೂ ಮುಖ್ಯಮಂತ್ರಿ ಆಗುವ ಅವಕಾಶವೂ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐಐಟಿ ಜಮ್ಮುವಿನ ಹೊಸ ಕ್ಯಾಂಪಸ್ ಅನ್ನು ಅಮಿತ್ ಶಾ ಅವರು ಉದ್ಘಾಟಿಸಿದರು. ಎರಡು 210 ರೂ. ಕೋಟಿ ವೆಚ್ಚದಲ್ಲಿ ಈ ಕ್ಯಾಂಪಸ್ ನಿರ್ಮಿಸಲಾಗಿದೆ. ಉನ್ನತ ಶಿಕ್ಷಣ ಕೇಂದ್ರದ ಜೊತೆಗೆ ಹಾಸ್ಟೆಲ್, ಜಿಮ್ ಹಾಗೂ ಮತ್ತಿತರ ಸೌಲಭ್ಯಗಳನ್ನು ಕ್ಯಾಂಪಸ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.