Friday, November 6, 2026
Friday, November 6, 2026

B. Y. Raghavendra ಬೆಳೆ ವಿಮಾ ಕಂಪನಿಗಳು ರೈತರಿಗೆ ಘೋಷಿಸಿದ ವಿಮಾ ಪರಿಹಾರ ಮೊತ್ತ ನೀಡಿ- ಬಿ.ವೈ.ರಾಘವೇಂದ್ರ

Date:

B. Y. Raghavendra ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂಗಾರು ಮಳೆ ವೈಫಲ್ಯದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಬೆಳೆ ವಿಮಾ ಕಂಪನಿಗಳು ನೀಡುತ್ತಿರುವ ಪರಿಹಾರ ಮೊತ್ತ ಅತ್ಯಂತ ಕಡಿಮೆಯಾಗಿದ್ದು, ಅವೈಜ್ಞಾನಿಕವಾಗಿ ಅಂದಾಜಿಸಿರುವ ಪರಿಹಾರ ಮೊತ್ತವನ್ನು ಪರಿಷ್ಕರಿಸಿ ರೈತರಿಗೆ ನ್ಯಾಯಯುತ ಪರಿಹಾರ ನೀಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ವಿಮಾ ಕಂಪನಿಗಳ ಮುಖ್ಯಸ್ಥರಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಳೆ ವಿಮೆ ಪಾವತಿಗೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ 125ಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳು ದುರಸ್ತಿಯಲ್ಲಿದ್ದ ಕಾರಣ ಮಳೆಯ ಪ್ರಮಾಣ ಸರಿಯಾಗಿ ದಾಖಲಾಗಿಲ್ಲ. ಇದರಿಂದ ಬೆಳೆ ನಷ್ಟದ ಪ್ರಮಾಣವನ್ನು ವೈಜ್ಞಾನಿಕವಾಗಿ ಅಂದಾಜಿಸಲು ಸಾಧ್ಯವಾಗದೆ ರೈತರಿಗೆ ಅನ್ಯಾಯವಾಗಿದೆ. ಈ ಕುರಿತು ಹಲವು ಬಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರದೊಂದಿಗೂ ಚರ್ಚಿಸಲಾಗಿದ್ದರೂ, ರೈತರಿಗೆ ಸೂಕ್ತ ಪರಿಹಾರ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಸಕ್ತ ಸಾಲಿನಲ್ಲಿ ವಿಮಾ ಕಂಪನಿಗಳು ಘೋಷಿಸಿರುವ ಪರಿಹಾರ ಮೊತ್ತವೂ ಅತ್ಯಂತ ಕಡಿಮೆಯಾಗಿದೆ. ಹೀಗಾಗಿ ಅಧಿಕೃತ ಮಳೆ ಮಾಪನ ಕೇಂದ್ರಗಳ ವರದಿಯ ಜೊತೆಗೆ ಖಾಸಗಿ ಸಂಸ್ಥೆಗಳು ದಾಖಲಿಸಿರುವ ಮಳೆಯ ಪ್ರಮಾಣವನ್ನೂ ಪರ್ಯಾಯವಾಗಿ ಪರಿಗಣಿಸಿ ಪರಿಶೀಲಿಸಬೇಕು. ಸಂಪೂರ್ಣ ಬೆಳೆ ನಷ್ಟವಾಗಿರುವ ರೈತರಿಗೆ ಘೋಷಿಸಬೇಕಾದ ಪರಿಹಾರ ಮೊತ್ತವನ್ನು ಪ್ರಕಟಿಸಿ ತಕ್ಷಣ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಮಾ ಕಂಪನಿಗಳು ರೈತರು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಪಡೆದಿರುವ ವಿಮಾ ವಂತಿಗೆಗೆ ಹೋಲಿಸಿದರೆ ಪರಿಹಾರವಾಗಿ ನೀಡುತ್ತಿರುವ ಮೊತ್ತ ಕಡಿಮೆಯಾಗಿದೆ. ಈ ನ್ಯೂನತೆಗಳನ್ನು ಸರಿಪಡಿಸದಿದ್ದಲ್ಲಿ ರೈತರು ಸಂಘಟಿತರಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಜಿಲ್ಲೆಯ ಮಳೆ ಮಾಪನ ಕೇಂದ್ರಗಳು ಹಾಗೂ ಇತರೆ ಪರ್ಯಾಯ ಕೇಂದ್ರಗಳ ವರದಿಗಳನ್ನು ಪಡೆದು ತುಲನಾತ್ಮಕವಾಗಿ ಪರಿಶೀಲಿಸಿ ವಾಸ್ತವಿಕ ಮಳೆಯ ಪ್ರಮಾಣವನ್ನು ನಿರ್ಧರಿಸಲು ಪ್ರಯತ್ನಿಸಲಾಗುವುದು. ರೈತರಿಗೆ ಆಗಿರುವ ನಷ್ಟದ ಕುರಿತು ಸರ್ಕಾರದ ಕಾರ್ಯದರ್ಶಿಗಳ ಗಮನಕ್ಕೂ ತರಲಾಗುವುದು ಎಂದು ತಿಳಿಸಿದರು.

B. Y. Raghavendra ಸಭೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ರೈತ ಮುಖಂಡರಾದ ಮಲ್ಲಿಕಾರ್ಜುನ ಹಕ್ರೆ, ಮೇಘರಾಜ, ಜಗದೀಶ್ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ವಿಮಾ ಕಂಪನಿಗಳ ಪ್ರತಿನಿಧಿಗಳು ಹಾಗೂ ರೈತರು ಉಪಸ್ಥಿತರಿದ್ದರು.

ಸಭೆಯಲ್ಲಿ ಮಾತನಾಡಿದ ತೀರ್ಥಹಳ್ಳಿ ರೈತ ಮುಖಂಡ ಕೆ.ವಿ. ಕೃಷ್ಣಮೂರ್ತಿ, ದೋಷಪೂರಿತ ಮಳೆ ಮಾಪನ ಕೇಂದ್ರಗಳಿಂದ ರೈತರಿಗೆ ನಿರೀಕ್ಷಿತ ಬೆಳೆ ವಿಮೆ ಪರಿಹಾರ ದೊರೆಯುತ್ತಿಲ್ಲ. ಮಳೆ ಮಾಪನ ಕೇಂದ್ರಗಳ ಅಧಿಕೃತ ದಾಖಲೆಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಾಗುವಂತೆ ಮಾಡಬೇಕು ಹಾಗೂ ಅವುಗಳ ನಿರ್ವಹಣೆಯನ್ನು ಸ್ಥಳೀಯರಿಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಸಾಗರದ ರೈತ ಮುಖಂಡ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ವಿಮಾ ಕಂಪನಿಗಳು ಪಡೆದಿರುವ ವಂತಿಗೆಗಿಂತ ಪರಿಹಾರವಾಗಿ ನೀಡುತ್ತಿರುವ ಮೊತ್ತ ಕಡಿಮೆಯಿದ್ದು, ಕಂಪನಿಗಳಿಗೆ ಹೆಚ್ಚಿನ ಹಣ ಉಳಿಯುತ್ತಿದೆ. ವಿಮಾ ಕಂಪನಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kannada Rajyotsava ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಹೆಚ್.ಸಿ. ಸುರೇಶ್

Kannada Rajyotsava ಅನ್ಯ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿರುವ...

Kannada Rajyotsava ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ

Kannada Rajyotsava ಕನ್ನಡ ರಾಜ್ಯೋತ್ಸವದ ಅಂಗವಾಗಿ 2026ರ ನವೆಂಬರ್ ತಿಂಗಳು ಪೂರ್ತಿ...