Wednesday, June 10, 2026
Wednesday, June 10, 2026
Home Blog Page 2019

ರಾಜ್ಯ ನೌಕರರಿಗೆ ತುಟ್ಟಿಭತ್ಯೆ ಕೊಡುಗೆ

0

ರಾಜ್ಯದ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸರ್ಕಾರ ದೀಪಾವಳಿ ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವದ ಕೊಡುಗೆ ನೀಡಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ಕೆಲ ದಿನಗಳ ಹಿಂದೆಯಷ್ಟೇ ಶೇ.3 ರಷ್ಟು ತುಟ್ಟಿಭತ್ತೆ ಹೆಚ್ಚಿಸಿತ್ತು. ಈಗ ರಾಜ್ಯ ಸರ್ಕಾರಿ ನೌಕರರಿಗೂ ಇದೇ ಸೌಲಭ್ಯ ಒದಗಿಸಲಾಗಿದ್ದು ಹಣಕಾಸು ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.
ಮೂಲ ವೇತನದಲ್ಲಿ ಶೇಕಡಾ ಮೂರರಷ್ಟು ತುಟ್ಟಿಭತ್ಯೆ (ಡಿಎ) ಹೆಚ್ಚಿಸಿ ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಆದೇಶಿಸಿದೆ.
ರಾಜ್ಯದ 5.50 ಲಕ್ಷ ನೌಕರರು ಹಾಗೂ 5 ಲಕ್ಷ ಪಿಂಚಣಿದಾರರು ಸೇರಿದಂತೆ ಒಟ್ಟು 10.50 ಲಕ್ಷ ಮಂದಿ ತುಟ್ಟಿಭತ್ಯೆ ಹೆಚ್ಚಳದ ಲಾಭ ಪಡೆಯಲಿದ್ದಾರೆ.
ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 6,616 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದರೊಂದಿಗೆ ವೇತನ ಮತ್ತು ಪಿಂಚಣಿ ಭರಿಸಲೆಂದು ವಾರ್ಷಿಕ 75,000 ಕೋಟಿ ರೂಪಾಯಿಗಳನ್ನು ಸರ್ಕಾರ ವ್ಯಯ ಮಾಡುತ್ತಿದೆ ಎಂದು ತಿಳಿದುಬಂದಿದೆ.

ಚೀನಾ : ಬೆಂಬಿಡದ ಕೋವಿಡ್

0

ಕಳೆದ ಮಂಗಳವಾರ ಜನನಿಬಿಡ ಲಾನ್ಸೋ ನಗರದಲ್ಲಿ 29 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಇಡೀ ನಗರವನ್ನು ಲಾಕ್ ಡೌನ್ ಮಾಡಲಾಗಿದೆ. ಅಗತ್ಯ ವಸ್ತುಗಳ ಸರಬರಾಜು ಅಥವಾ ವೈದ್ಯಕೀಯ ಚಿಕಿತ್ಸೆಗೆ ನಾಗರೀಕರಿಗೆ ಬಂದು ಹೋಗಲು ಮಾತ್ರ ಅವಕಾಶವಿದೆ.

ಚೀನಾದ ಉತ್ತರಭಾಗದ 10 ಸಾವಿರಕ್ಕೂ ಹೆಚ್ಚು ಜನ ಮನೆಯಲ್ಲಿಯೇ ಇರಬೇಕೆಂದು ನಿರ್ಬಂಧಿಸಲಾಗಿದೆ. ಪ್ರವಾಸಿ ತಾಣಗಳ ಭೇಟಿಗೆ ಮಿತಿ ನಿರ್ಬಂಧ ಜಾರಿಗೊಳಿಸಿದೆ. ಅಗತ್ಯವಿಲ್ಲದೇ ಯಾರು ನಗರವನ್ನು ಬಿಟ್ಟು ಹೋಗಬಾರದೆಂದು ಎಚ್ಚರಿಸಿದೆ. ಡೆಲ್ಟಾ ವೈರಾಣು ಸೋಂಕಿನ ಶೀಘ್ರ ಹರಡುವಿಕೆಯಿಂದ ಚೀನಾದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಗುಂಪು-ಗುಂಪಾಗಿ ಬರುವ ದೇಶಿಯ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಆರೋಗ್ಯ ಸಿಬ್ಬಂದಿಗೆ ಜಾಗೃತಿ ವಹಿಸಲು ಸೂಚನೆ ನೀಡಲಾಗಿದೆ. ಬರುವ ದಿನಗಳಲ್ಲಿ ಈ ವೈರಾಣು ಹೆಚ್ಚು ಸೋಂಕನ್ನು ಹರಡಬಹುದೆಂದು ತಪಾಸಣೆಯನ್ನು ಕೂಡ ಶೀಘ್ರ ಕೈಗೊಳ್ಳಬೇಕೆಂದು ಆದೇಶಿಸಲಾಗಿದೆ.

ಚೀನಾ ರಾಜಧಾನಿ ಬೀಜಿಂಗ್ ನ ಚಾನ್ಸ್ ಪಿಂಗ್ ಜಿಲ್ಲೆಯಲ್ಲಿ ಸ್ಥಳೀಯವಾಗಿ 2 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಈ ಸಂಗತಿಯನ್ನು ಬೀಜಿಂಗ್ ನ ರೋಗ ನಿಯಂತ್ರಣ ಕೇಂದ್ರದ ಉಪನಿರ್ದೇಶಕರಾದ ಪಾಂಗ್ ಜಿಂಗ್ ಹೊ ಹೇಳಿದ್ದಾರೆ. 55 ವರ್ಷ ಮೇಲಿನ ವ್ಯಕ್ತಿಗಳಿಗೆ ಈ ಹೊಸ ಸೋಂಕು ಉಂಟಾಗಿದ್ದು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪಾಂಗ್ ಜಿಂಗ್ ಹೊ ತಿಳಿಸಿದ್ದಾರೆ. ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದಂತೆ ಮಂಗೋಲಿಯಾದ ಒಳನಾಡು, ಗೈಜೊ, ಗ್ಯಾನ್ ಸೂ, ಹೆಬೇ, ಹುನಾನ್ ಮತ್ತು ಶಾಂಜಿ ಮುಂತಾದ ನಗರಗಳಲ್ಲಿ ಈ ಹೊಸ ಪ್ರಕರಣ ಪತ್ತೆಯಾಗಿದೆ.

ಚೀನಾದ ಮುಖ್ಯ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು 96,797 ಆಗಿದ್ದು, ಕಳೆದ ಭಾನುವಾರ ಪತ್ತೆಯಾಗಿದೆ. ಇದರಲ್ಲಿ ಇನ್ನು ಚಿಕಿತ್ಸೆ ಪಡೆಯುತ್ತಿರುವ 573 ರೋಗಿಗಳನ್ನು ಕೂಡ ಒಳಗೊಂಡಿದೆ ಹಾಗೂ ಇದರಲ್ಲಿ 20 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಟಿ-20 : ಬಾಂಗ್ಲಾ ವಿರುದ್ಧ ಇಂಗ್ಲೆಂಡ್ ರೋಚಕ ಗೆಲುವು

0

ಟಿ-20 ವಿಶ್ವಕಪ್ ಟೂರ್ನಿಯ ಸೂಪರ್ 12ರ ‘ಎ’ ಗುಂಪಿನಲ್ಲಿರುವ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ನಡುವೆ ಪಂದ್ಯ ನಡೆಯಿತು. ಬಾಂಗ್ಲಾದೇಶದ ವಿರುದ್ಧ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿತು.

ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶದ ನಡುವಿನ ಆಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತ್ತು. ಆ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಕೇವಲ 14.1 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 126 ರನ್ ಬಾರಿಸಿ ಭರ್ಜರಿ ಜಯಗಳಿಸಿದೆ.

28 ರನ್ ಗಳಿಸಿದ ಡೇವಿಡ್ ಮಲಾನ್ ಮತ್ತು 8 ರನ್ ಗಳಿಸಿದ ಜಾನಿ ಬೋಸ್ಟ್ ಅಜೇಯರಾಗಿ ಉಳಿದರು. ಇಂಗ್ಲೆಂಡಿನ ಆರಂಭಿಕ ಜೋಡಿ ರಾಯ್ ಮತ್ತು ಬಟ್ಲರ್ 18 ರನ್ ಗಳಿಸಿ ಕೇವಲ 4 ಓವರ್ ಗಳಲ್ಲಿ 37 ರನ್ ಗಳನ್ನು ಕಲೆ ಹಾಕಿದರು.
ರಾಯ್ ಮತ್ತು ಡೇವಿಡ್ ಮಲಾನ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 73 ರನ್ ಗಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು.ಆದರೆ 13ನೇ ಓವರ್ ನಲ್ಲಿ ರಾಯ್ ಔಟಾದರು. ನಂತರ ಬಂದ ಮಿಲಾನ್ ಮತ್ತು ಜಾನಿ ವಿಕೆಟ್ ಪತನಕ್ಕೆ ಅವಕಾಶ ಮಾಡಿಕೊಡದೆ ಇಂಗ್ಲೆಂಡ್ ತಂಡವನ್ನು ಗೆಲುವಿನ ಗಡಿ ತಲುಪಿಸಿದರು.

ಬೀದಿ ಬದಿ ವ್ಯಾಪಾರಗಳಿಗೆ ಪೋಲಿಸ್ ಕಟ್ಟೆಚ್ಚರಿಕೆ

0

ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು
ಶಿವಮೊಗ್ಗದ ಬಿ.ಹೆಚ್ ರಸ್ತೆ, ನೆಹರೂ ರಸ್ತೆ, ಗಾಂಧಿ ಬಜಾರ್ ಸೇರಿದಂತೆ ಪ್ರಮುಖ ರಸ್ತೆಯ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಅಂಗಡಿಗಳ ಬೋರ್ಡ್, ಕೆಲವು ಸಾಮಾಗ್ರಿಗಳನ್ನು ಟೈಗರ್ ವಾಹನದಲ್ಲಿ ಕೊಂಡೋಯ್ದ ಅಧಿಕಾರಿಗಳು ಪುಟಪಾತ್ ನಲ್ಲಿ ವ್ಯಾಪಾರ ಮಾಡದಂತೆ ವ್ಯಾಪಾರಸ್ಥರಿಗೆ ಸೂಚನೆ ನೀಡಿದ್ದಾರೆ.
ದಿನನಿತ್ಯ ಶಿವಮೊಗ್ಗದಲ್ಲಿ ಮುಖ್ಯರಸ್ತೆಗಳ ಆಜು-ಬಾಜಿನಲ್ಲಿ ವ್ಯಾಪಾರ ಮಾಡಿ, ಬದುಕು ಕಟ್ಟಿಕೊಳ್ಳುವುದನ್ನು ನೋಡಿದ್ದೇವೆ. ಅವರಿಗೆ ಸ್ವಂತ ಕಟ್ಟಡವಿಲ್ಲ, ಬಾಡಿಗೆ ನೀಡಲು ಶಕ್ತಿಯಿಲ್ಲ. ಹೀಗಾಗಿ ಅನಿವಾರ್ಯತೆಯಿಂದ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದಾಗಿ ಪುಟ್ಬಾತ್ ನಲ್ಲಿ ಸಂಚರಿಸಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೀದಿಬದಿಯ ಇಂಥ ವ್ಯಾಪಾರಿಗಳದ್ದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ.ಈ ಸಮಸ್ಯೆಗಳನ್ನು ಅತ್ಯಂತ ಸಂವೇದನಾಶೀಲತೆಯಿಂದ ಬಗೆಹರಿಸುವುದು ಮಹಾನಗರಪಾಲಿಕೆಯ ಜವಾಬ್ದಾರಿಯೂ ಆಗಿದೆ.

ಟಿ-20 ಪಾಕ್ ಸತತ ಗೆಲುವು

0

ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಗ್ರೂಪ್ 2 ರ ಹಂತದಲ್ಲಿರುವ ಪಾಕಿಸ್ತಾನ. ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡಗಳ ವಿರುದ್ಧ ಪಂದ್ಯ ನಡೆಯಿತು. ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ತಂಡದ ವಿರುದ್ಧ ಭರ್ಜರಿ ಜಯಗಳಿಸಿದೆ.

ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ನ್ಯೂಜಿಲೆಂಡ್ ತಂಡ ಕೇವಲ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು. 134 ರನ್ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿದ ಪಾಕಿಸ್ತಾನ ತಂಡವು ಕೇವಲ 18.4 ಓವರ್ ಗಳಲ್ಲಿ ಕೇವಲ 5 ವಿಕೆಟ್ ನಷ್ಟಕ್ಕೆ 135 ರನ್ ಬಾರಿಸಿ ಜಯ ಸಾಧಿಸಿದೆ.

ಮೊದಲ ವಿಕೆಟ್ ಜೊತೆಯಾಟಕ್ಕೆ ಕಾಲಿಟ್ಟ ಮಲ್ಲಿಕ್ ಮತ್ತು ಆಸಿಫ್ ಇವರ ಆಟ ಭರ್ಜರಿಯಾಗಿತ್ತು. ಮಲ್ಲಿಕ್ ಅವರ ಅಮೂಲ್ಯ ಬ್ಯಾಟಿಂಗ್ ನಿಂದ ಕೇವಲ 20 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಗಳನ್ನು ಸಿಡಿಸಿ 27 ರನ್ ಗಳಿಸಿದರು. ಹಾಗೆಯೇ ಆಸಿಫ್ ಅಲಿ ಅವರು ಕೇವಲ 12 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸಿಡಿಸಿ 27 ರನ್ ಗಳಿಸಿದರು. ಇವರ ನಡುವಿನ ಅಜೇಯ ಜೊತೆಯಾಟದ ನೆರವಿನಿಂದ ಪಾಕಿಸ್ತಾನ ತಂಡ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಘಟ್ಟದಲ್ಲಿ ಸತತ ಎರಡನೇ ಜಯಗಳಿಸಿ ಇತಿಹಾಸ ದಾಖಲಿಸುವುದಕ್ಕೆ ನೆರವಾದರು.
ಗ್ರೂಪ್ -1 ರಲ್ಲಿ ಪಾಕಿಸ್ತಾನ ತಮ್ಮ ಸ್ಥಾನವನ್ನು ಭದ್ರಗೊಳಿಸುವಲ್ಲಿ ಲಗ್ಗೆ ಹಾಕಿದೆ. ಬರುವ 31ರಂದು ಭಾರತ – ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯಲಿರುವ ಪಂದ್ಯ, ಸೆಮಿಫೈನಲ್ ಪಂದ್ಯವನ್ನು ನಿರ್ಧರಿಸುವಲ್ಲಿ ಪ್ರಮುಖವಾಗಿದೆ.

ದೇಶದಲ್ಲಿ ಆರೋಗ್ಯ , ಕ್ಷೇಮ ಕೇಂದ್ರಗಳು

0

ಕ್ಯಾನ್ಸರ್, ಸಕ್ಕರೆ ಖಾಯಿಲೆಯನ್ನು ಆರಂಭ ಹಂತದಲ್ಲೇ ತಪಾಸಣೆ ಮಾಡಲು ಕೇಂದ್ರ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈ ದಿಸೆಯಲ್ಲಿ 1,50,000 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆ ಮಾಡಲಾಗುವುದು ಇದರ ಪೈಕಿ ಈಗಾಗಲೇ 79,000 ಕೇಂದ್ರಗಳು ದೇಶಾದ್ಯಂತ ಸಕ್ರಿಯವಾಗಿವೆ. ಹಳ್ಳಿ ಮತ್ತು ಪಟ್ಟಣಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ ಕಾಯಿಲೆಗಳನ್ನು ಪತ್ತೆ ಹಚ್ಚಲು ಸೌಕರ್ಯಗಳು ಇರುತ್ತವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ಪಕ್ಷ ನಿಷ್ಠೆಯಷ್ಟೇ ಸಮಾಜ ನಿಷ್ಠೆಯೂ ಅಗತ್ಯ

0

ರಾಜಕೀಯ ಅಧಿಕಾರ ಶಾಶ್ವತವಲ್ಲ. ಆದರೆ ಸಮುದಾಯದ ಮತಗಳು ಸೂರ್ಯ ಚಂದ್ರ ಇರುವವರೆಗೂ ಇರುತ್ತವೆ. ಸಮುದಾಯದವರು ಪಕ್ಷನಿಷ್ಠೆ ಜೊತೆಗೆ ಸಮಾಜಕ್ಕೆ ನಿಷ್ಠರಾಗಿರಬೇಕು. ಮಠದ ಕಾರ್ಯಗಳಿಗೆ ಸಮಾಜದವರು ಸಹಕರಿಸಬೇಕು ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
‘ನೂರು ದಿನ ಸಾವಿರ ಹಳ್ಳಿ’ ಕಾರ್ಯಕ್ರಮದ ಪ್ರಯುಕ್ತ ಶಿಕಾರಿಪುರದ ಕನಕ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಠದೊಂದಿಗೆ ಭಕ್ತರು ನಿರಂತರ ಸಂಪರ್ಕ ಹೊಂದಬೇಕು. ನಮ್ಮ ಮತಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸಮರ್ಪಕವಾಗಿ ನಡೆಯಲು ಭಕ್ತರ ಸಹಕಾರ ಮುಖ್ಯವಾಗಿದೆ. ಪಕ್ಷ ರಾಜಕಾರಣಕ್ಕೆ ಸೀಮಿತರಾಗದೇ ಕುರುಬ ಸಮಾಜದ ಸಂಘಟನೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ಸಂಕ್ರಾಂತಿಯಿಂದ ಹೊಸದುರ್ಗ ಶಾಖಾ ಮಠದಿಂದ “ನೂರು ದಿನ ಸಾವಿರ ಹಳ್ಳಿ” ಕಾರ್ಯಕ್ರಮ ಆಯೋಜಿಸಿದ್ದು, ನೂರು ದಿನಗಳಲ್ಲಿ ಸಾವಿರ ಹಳ್ಳಿಗಳಿಗೆ ಭೇಟಿ ನೀಡಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕಬಾಡಿ ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುರುಬ ಸಮಾಜ ಉಪಾಧ್ಯಕ್ಷ ಭದ್ರಾಪುರ ಹಾಲಪ್ಪ, ತಾಲೂಕು ಗೌರವಾಧ್ಯಕ್ಷ ನಗರದ ಮಹಾದೇವಪ್ಪ, ಉಪಾಧ್ಯಕ್ಷ ಗೋಣಿ ಮಾಲತೇಶ್, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಜೆ. ಸುಕೇಂದ್ರಪ್ಪ, ಸಂಚಾರಿ ಕುರಿಗಾರರ ಸಂಘ ರಾಜ್ಯ ಉಪಾಧ್ಯಕ್ಷ ಡಾ.ಪ್ರಶಾಂತ್, ರಾಜ್ಯ ಪ್ರದೇಶ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಎಂ. ಶರತ್, ಹಾಗೂ ಚಂದ್ರಗುಪ್ತ ಮೌರ್ಯ ಸೊಸೈಟಿ ಅಧ್ಯಕ್ಷ ಸಕಲೇಶ್ ಹುಲ್ಮಾರ್, ಪುರಸಭೆ ಅಧ್ಯಕ್ಷೆ ಲಕ್ಷ್ಮಿ ಮಹಾಲಿಂಗಪ್ಪ, ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಮೂಲ ಸೌಕರ್ಯ ಮಿಷನ್ ಉದ್ಘಾಟನೆ

0

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು” ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ ಆರೋಗ್ಯ ಮೂಲ ಸೌಕರ್ಯ ಮಿಷನ್ ಗೆ ವಾರಣಾಸಿಯಲ್ಲಿ ಚಾಲನೆ ನೀಡಿದರು.
ಭಾರತದ ಬೃಹತ್ ಪ್ರಮಾಣದಲ್ಲಿ ಆರೋಗ್ಯ ಸೌಕರ್ಯ ಬಲಪಡಿಸುವ ಬಹು ದೊಡ್ಡ ಯೋಜನೆ ಇದಾಗಿದೆ. ಈ ಯೋಜನೆಯು ಗ್ರಾಮೀಣ ಪ್ರದೇಶದ ಜನರಿಗೆ ಸಹಾಯಕ.

ಕುಲಾಂತರಿ ತಳಿ : ಕೃಷಿಗೆ ಧಕ್ಕೆ

0

ಬೆಳೆಗಳಲ್ಲಿ ಕುಲಾಂತರಿ ಪದ್ಧತಿ ಬಂಡವಾಳಶಾಹಿಗಳಿಗೆ ಮಣೆ ಹಾಕಿದಂತೆ. ಈ ಕುಲಾಂತರಿ ಪದ್ಧತಿ ಆಹಾರ ಮಾಲಿನ್ಯ, ಪರಿಸರ ಮಾಲಿನ್ಯದ ಜೊತೆಗೆ ರೈತರ ಮೂಲ ಬೇಸಾಯ ಪದ್ಧತಿ ಕಸಿದುಕೊಂಡಂತಾಗುತ್ತದೆ ಎಂದು ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದೆಲ್ಲೆಡೆ ಕುಲಾಂತರಿ ತಂತ್ರಜ್ಞಾನ ಅಪಾಯಕಾರಿ. ಹಲವು ದೇಶಗಳು ಕುಲಾಂತರಿ ಬೆಳೆಯನ್ನು ನಿಷೇಧಿಸಿವೆ. ಆದರೆ, ಭಾರತ ಮಾತ್ರ ಇದನ್ನು ಸ್ವೀಕರಿಸುತ್ತಿರುವುದು ದುಃಖದ ಸಂಗತಿಯಾಗಿದೆ. ಈ ತಂತ್ರಜ್ಞಾನದಿಂದ ಕೇವಲ ಪರಿಸರ ಮಾತ್ರ ನಾಶವಲ್ಲ. ಮನುಕುಲಕ್ಕೂ ತೊಂದರೆಯಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಕುಲಾಂತರಿ ಪ್ರಯೋಗ ಅನಿವಾರ್ಯವಲ್ಲ. ಯುರೋಪ್ ನ 28ಕ್ಕೂ ಹೆಚ್ಚು ದೇಶಗಳು ಇದನ್ನು ಒಪ್ಪಿಲ್ಲ. ಒರಿಸ್ಸಾ, ಕೇರಳ, ಛತ್ತಿಸ್ ಗಢ್, ಬಿಹಾರ್, ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ಕೂಡ ಇದನ್ನು ವಿರೋಧಿಸುತ್ತಿವೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಕುಲಾಂತರಿ ಪ್ರಯೋಗಕ್ಕೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಯಶವಂತರಾವ್ ಘೋರ್ಪಡೆ, ವೀರೇಶ್, ಎಚ್.ಪಿ. ಹಿರಣ್ಣಯ್ಯ, ಸಣ್ಣ ರಂಗಪ್ಪ, ಮೋಹನ್, ಜಗದೀಶ್ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮಾದರಿ ಶಾಲೆ, ಶೈಕ್ಷಣಿಕ ಪ್ರಗತಿಗೆ ಮುನ್ನುಡಿ

0

ಕೋವಿಡ್ -19 ಪರಿಣಾಮದಿಂದ ಸುಮಾರು 2 ವರ್ಷಗಳಿಂದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಿರುವುದು ಸುದ್ದಿಯಾಗಿತ್ತು. ಈ ಬಗ್ಗೆ ಶಿಕ್ಷಣ ಹಾಗೂ ಆರೋಗ್ಯ ತಜ್ಞರ ಸಲಹೆಯಂತೆ ಸರ್ಕಾರ ಶಾಲೆಯನ್ನು ಆರಂಭಿಸಿದೆ.

ಸಾರ್ವಜನಿಕ ವಲಯದಿಂದ ಹಲವರು ಈ ನಿರ್ಧಾರದ ಬಗ್ಗೆ ಟೀಕೆ-ಟಿಪ್ಪಣಿಗಳು ಬಂದವು. ಪ್ರಸ್ತುತ ಶಾಲೆಯ ಆರಂಭವಾಗಿದ್ದು ಮಕ್ಕಳು ಮತ್ತು ಪೋಷಕರಲ್ಲಿ ಸಂತಸ ಮನೆಮಾಡಿದೆ. ಮಕ್ಕಳು ಶಾಲೆಗಳಿಗೆ ಉತ್ಸಾಹದಿಂದ ತೆರಳುತ್ತಿದ್ದಾರೆ.

ಗ್ರಾಮೀಣ ಭಾಗದ ಮಕ್ಕಳು ಶಾಲೆಗಳಲ್ಲಿ ಇಂದಿಗೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಪರಿಹಾರ ನೀಡುವುದು ಸರ್ಕಾರದ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮಪಂಚಾಯತಿಗೆ ಒಂದು ಮಾದರಿ ಶಾಲೆ ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಚಿಂತನೆಯ ನಡೆಸಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಶ್ರೀ ಬಿ.ಸಿ. ನಾಗೇಶ್ ಅವರು ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮಾದರಿ ಶಾಲೆಯ ರೂಪರೇಷೆಗಳು ಹೇಗಿರಬೇಕು? ಅವುಗಳ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ಮುಂತಾದ ವಿಷಯಗಳನ್ನ ಸರ್ಕಾರವು ಒಂದು ಮಾರ್ಗ ಸೂಚಿಯಾಗಿ ಸಿದ್ಧಪಡಿಸಬೇಕಿದೆ. ಮಾದರಿ ಶಾಲೆ ಆಗುವಲ್ಲಿ ವೃಥಾ ಪೈಪೋಟಿಗೆ ಬಿಡದೆ ಗುಣಮಟ್ಟಕ್ಕೆ ಗಮನ ನೀಡುವಂತಾಗಬೇಕು. ಮಾದರಿ ಶಾಲೆಯ ಚಿಂತನೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಸಹಕಾರಿಯಾದರೆ ಸರ್ಕಾರದ ಶ್ರಮ ಸಾರ್ಥಕವಾಗುತ್ತದೆ.