ಬೆಂಗಳೂರಿನಲ್ಲಿ ಉಲ್ಬಣಗೊಂಡಿದ್ದ ಕೋವಿಡ್ ಸೋಂಕು ಈಗ ನಿಧಾನವಾಗಿ ಇಳಿಕೆಯಾಗುತ್ತಿದೆ. ಆದರೆ ಇತರೆ ಜಿಲ್ಲೆಗಳಿಗೆ ಸೋಂಕು ವ್ಯಾಪಿಸುತ್ತಿದೆ. ಈ ನಡುವೆ ಸಾವಿನ ಸಂಖ್ಯೆ ಕೂಡ ಅಧಿಕವಾಗಿದೆ. ಒಂದೇ ದಿನ 52 ಜನರು ಮೃತಪಟ್ಟಿದ್ದಾರೆ. 41,400 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರು ನಗರದಲ್ಲಿ 19, ಕಲಬುರಗಿ 5, ಬೆಳಗಾವಿ ಮತ್ತು ದಕ್ಷಿಣ ಕನ್ನಡ ದಲ್ಲಿ 4, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ 3, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ ,ಮೈಸೂರು, ತುಮಕೂರಿನಲ್ಲಿ ತಲಾ 2, ಉಡುಪಿ, ಮಂಡ್ಯ, ಕೊಡುಗು, ಚಿಕ್ಕಮಗಳೂರು, ಚಾಮರಾಜನಗರ, ಬಳ್ಳಾರಿ ಮತ್ತು ಬಾಗಲ ಕೋಟೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಮೈಸೂರು, ಹಾಸನ,ಮಂಡ್ಯ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಗೆ ಸೋಂಕು ಹೆಚ್ಚುತ್ತಿದೆ. ರಾಜಧಾನಿಯಲ್ಲಿ 2.26 ಲಕ್ಷ ಸಕ್ರಿಯ ಪ್ರಕರಣಗಳಿದ್ದರೆ, ಮೈಸೂರಿನಲ್ಲಿ 18,846, ಹಾಸನದಲ್ಲಿ 11,433 ಮತ್ತು ತುಮಕೂರಿನಲ್ಲಿ 15,128 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಇವು ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳ ಪೈಕಿ ಮೊದಲ ಮೂರು ಸ್ಥಾನದಲ್ಲಿವೆ.
ಬೆಂಗಳೂರು ನಗರದಲ್ಲಿ ಸೋಂಕಿನ ಪ್ರಮಾಣ ಶೇ. 20.13 ಇದ್ದರೆ, ಚಿಕ್ಕಬಳ್ಳಾಪುರ ದಲ್ಲಿ ಶೇ. 50.43, ಮಂಡ್ಯ 40.48, ಮೈಸೂರು 43.01, ಬೆಂಗಳೂರು ಗ್ರಾಮೀಣ 32.81 ಹಾಗೂ ಶಿವಮೊಗ್ಗ ದಲ್ಲಿ ಶೇ. 30.35ರಷ್ಟಿದೆ.
ಗ್ರಾಮೀಣ ಭಾಗದಲ್ಲೂ ಕೋವಿಡ್ ಪರೀಕ್ಷೆಗೆ ಒಳಗಾದ ಹೆಚ್ಚಿನವರಲ್ಲಿ ಪಾಸಿಟಿವ್ ಕಾಣಿಸಿಕೊಳ್ಳುತ್ತಿದೆ. ಇಲ್ಲೂ ಕೂಡ ಏಳು ದಿನ ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಆಡಳಿತ ಸಂಸ್ಥೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೋಮ್ ಕ್ವಾರಂಟೈನ್ ನಲ್ಲಿರುವವರ ಮೇಲೆ ನಿಗಾ ಇಟ್ಟಿವೆ.
ಹಳ್ಳಿ ಗಳಲ್ಲಿ ನಗರ ಪ್ರದೇಶದಷ್ಟು ವೇಗವಾಗಿ ಸೋಂಕು ಹರಡುವುದಿಲ್ಲ.ಮನೆಗಳು ದೂರ ಇರುವುದು ಒಂದು ಕಾರಣವಾದರೆ, ಸೋಂಕು ಪತ್ತೆಯಾದ ತಕ್ಷಣವೇ ಸೋಂಕಿತರು ಸ್ವಯಂ ನಿರ್ಬಂಧದೊಂದಿಗೆ ಮನೆಯಲ್ಲಿರುತ್ತಾರೆ. ಆದ್ದರಿಂದ ಅವರ ಜೊತೆಗಿನ ಸಂಪರ್ಕ ಕೂಡ ಜನರು ಕಡಿಮೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಸೋಂಕು ನಗರ ಪ್ರದೇಶದಲ್ಲಿ ಹಬ್ಬಿದಷ್ಟು ವೇಗದಲ್ಲಿ ಹರಡುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.