ವಿಶೇಷ ವರದಿ: ಪ್ರಭಾಕರ ಕಾರಂತ
Klive Special Article ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳು ನೇಪಾಳದ ಪುಣ್ಯ ಭೂಮಿಯಲ್ಲಿ ಪಾದಸ್ಪರ್ಶಿಸಿದಾಗ ಕಟ್ಮಂಡುವಿನ ವಿಮಾನ ನಿಲ್ದಾಣದಲ್ಲಿ ಅವರನ್ನು ನೇಪಾಳದ ಸರ್ಕಾರ ಭಕ್ತಿಪೂರ್ವಕವಾಗಿ ಬರಮಾಡಿಕೊಂಡಿತು.ನೇಪಾಳದ ಪೋಲೀಸ್ ಮುಖ್ಯಸ್ಥರು,ಸೇನಾ ನಾಯಕರು,ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಮತ್ತಿತರ ರಾಯಭಾರ ಕಚೇರಿ ಅಧಿಕಾರಿಗಳು,ವಿಮಾನ ಸೇವಾ ಅಧಿಕಾರಿಗಳು,ಗಣ್ಯ ಅಧಿಕಾರಿಗಳ ಕುಟುಂಬ ವರ್ಗ,ಮುಂತಾದ ಗಣ್ಯರು ಎರಡು ಸಾಲಿನಲ್ಲಿ ನಿಂತು ಜಗದ್ಗುರುಗಳು ಸಾಗುವುದನ್ನು ನೋಡುತ್ತಾ ಅವರ ಅಭಯಹಸ್ತದ ಆಶೀರ್ವಾದ ಪಡೆದು ಕೃತಾರ್ಥರಾದರು.
ನೇಪಾಳದ ಅನೇಕ ಸನ್ಯಾಸಿಗಳೂ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸ್ವಾಗತಿಸಿದರು.ಸನಾತನ ಧರ್ಮದ ಮೂಲ ಸ್ಥಂಭವಾದ ಶೃಂಗೇರಿಯ ಶಂಕರಾಚಾರ್ಯರ ಕುರಿತು ಸಹಸ್ರಾರು ಮೈಲಿ ದೂರವಿರುವ ವಿದೇಶದಲ್ಲಿ ಅದೆಷ್ಟು ಶ್ರದ್ಧೆ ಗೌರವ ಮನೆ ಮಾಡಿದೆ ಎಂಬುದು ಲೋಕಕ್ಕೆ ಪ್ರಕಟವಾದ ಸನ್ನಿವೇಶ ಅದು.ಜಗದ್ಗುರುಗಳು ತಮ್ಮ ವಾಹನ ಏರುವವರೆಗೂ ಉಭಯ ಕಡೆಯಲ್ಲೂ ಮಕ್ಕಳಾದಿಯಾಗಿ ಜನಸಮೂಹ ಅವರ ದರ್ಶನ ಭಾಗ್ಯ ಪಡೆದರು.
ನೇಪಾಳದ ರಕ್ಷಣಾ ಪಡೆ, ಸೈನ್ಯ,ಭಾರತೀಯ ರಾಯಭಾರಿ ಕಚೇರಿ ರಕ್ಷಣಾ ಸಿಬ್ಬಂದಿ ವಾಹನಗಳಲ್ಲಿ ಜಗದ್ಗುರುಗಳನ್ನು ಹಿಂಬಾಲಿಸಿ ಜಗದ್ಗುರುಗಳನ್ನು ಶ್ರೀ ಪಶುಪತಿನಾಥ ದೇವಾಲಯದ ವರೆಗೆ ಕರೆದೊಯ್ಯಲಾಯಿತು.ಅಲ್ಲಿನ ಜನಸಾಗರ. ಜಯಗೋಷಗಳೊಂದಿಗೆ ಜಗದ್ಗುರುಗಳನ್ನು ಬರಮಾಡಿಕೊಂಡಿತು.ದೂಳೀ ಪಾದಪೂಜೆ ನಂತರ ನೇಪಾಳಕ್ಕೆ ಆರು ದಶಕಗಳ ನಂತರ ಶಂಕರಾಚಾರ್ಯರ ಆಗಮನ ಆಗಿದ್ದನ್ನು ಸ್ವಾಗತ ಮಾಡುವವರು ತಿಳಿಸಿ ಈ ಪವಿತ್ರ ಭೂಮಿ ಪಾವನವಾಯಿತು ಎಂದರು.
ಜಗದ್ಗುರುಗಳುತಮ್ಮ ಅನುಗ್ರಹ ಭಾಷಣದಲ್ಲಿ ಪರಶಿವನ ಅವತಾರವಾದ ಶಂಕರ ಭಗವತ್ಪಾದರು ಇಲ್ಲಿ ಜಗದೊಡೆಯ ಪಶುಪತಿನಾಥನ ಪೂಜೆ ಮಾಡಿದ್ದನ್ನೂ,ನಂತರ ತಮ್ಮ ಪರಮ ಗುರುಗಳು ಪಶುಪತಿನಾಥನ ಪೂಜೆ ನಡೆಸಿದ್ದನ್ನೂ ಸ್ಮರಿಸಿ ಇದು ಪುಣ್ಯ ಭೂಮಿ ಎಂದರು.ನೇಪಾಳ ಸರ್ಕಾರ, ಸೈನ್ಯ, ಪಶುಪತಿನಾಥನ ಸೇವೆಯಲ್ಲಿ ತೊಡಗಿರುವ ಆರ್ಚಕರು ಮತ್ತು ಸರ್ವ ಸದ್ಭಕ್ತರಿಗೂ ಶುಭಾಶೀರ್ವಾದ ಮಾಡಿದರು.
Klive Special Article ನಂತರ ಶಂಕರಾಚಾರ್ಯ ಮಠ ತಲುಪಿ ಸ್ನಾನಾದಿ ನಿತ್ಯ ನೈಮಿತ್ತಿಕ ಕರ್ಮ ಪೂರೈಸಿ ಭಿಕ್ಷೆಗೆ ತೆರಳುವಾಗ ಗಂಟೆ ನಾಲ್ಕು ಸಮೀಪಿಸಿತ್ತು.
ಸಂಜೆ ಜಗದ್ಗುರುಗಳು ಪಶುಪತಿನಾಥ ಮಂದಿರದ ಪರಿಕ್ರಮ ಮಾಡಿದರು.ಪರಿವಾರ ದೇವತೆಗಳ ದರ್ಶನದ ನಂತರ ಪಶುಪತಿನಾಥ ಸ್ವಾಮಿ ಗರ್ಭಗುಡಿಯನ್ನು ಪ್ರವೇಶಿಸಿದರು.ಮುಖ್ಯ ಅರ್ಚಕರೂ ಸೇರಿದಂತೆ ದೇವಾಲಯದ ಸಿಬ್ಬಂದಿ ತಮ್ಮ ಬದುಕಿನ ಭಾಗ್ಯವೆಂದು ಜಗದ್ಗುರುಗಳನ್ನು ದರ್ಶನ ಮಾಡಿ ಆಶೀರ್ವಾದ ಪಡೆದರು.ನಂತರ ಆಂಜನೇಯ ಸ್ವಾಮಿಯ ದರ್ಶನ ಪಡೆದ ಜಗದ್ಗುರುಗಳು ಸೀತಾ ಸಮೇತ ಶ್ರೀ ರಾಘವೇಂದ್ರ ಸ್ವಾಮಿ ಗುಡಿಗೆ ತೆರಳಿ ದರ್ಶನ ಪಡೆದರು.ಈ ಶಾಲಿಗ್ರಾಮದ ಪಟ್ಟಾಭಿರಾಮ ವಿಗ್ರಹದಲ್ಲಿದ್ದ ಶ್ರೀರಾಮಚಂದ್ರ ಸ್ವಾಮಿ ಜಗದ್ಗುರುಗಳಿಗೆ ದರ್ಶನವಿತ್ತು ಆಶೀರ್ವಾದ ಮಾಡಿದಂತಿತ್ತು.
ನಂತರ ಅನುಗ್ರಹ ಭಾಷಣ ಮಾಡಿದ ಜಗದ್ಗುರುಗಳು ತಾವು ಬೇರೊಂದು ದೇಶಕ್ಕೆ ಬಂದಿರುವೆ ಅಂದುಕೊಂಡಿಲ್ಲ. ಸನಾತನ ಧರ್ಮ ಪರಿಪಾಲಿಸುವ ಭಾರತ ನೇಪಾಳದಲ್ಲಿ ಯಾವುದೇ ಬೇಧ ಇಲ್ಲ.ಧರ್ಮ, ಸಂಸ್ಕೃತಿ ಪರಂಪರೆ ಎಲ್ಲದರಲ್ಲೂ ನಾವು ಒಂದೇ ಆಗಿದ್ದೇವೆ ಎಂದರು.
ರಾತ್ರಿ ಜಗದ್ಗುರುಗಳು ನೆರವೇರಿಸಿದ ಚಂದ್ರಮೌಳೀಶ್ವರ ಪೂಜೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕೃತಾರ್ಥರಾದರು.
ಜಗದ್ಗುರುಗಳ ನೇಪಾಳದ ಧರ್ಮ ವಿಜಯ ಯಾತ್ರೆಯ ಪ್ರಥಮ ದಿನವೇ ಅಭೂತಪೂರ್ವ ಪ್ರತಿಕ್ರಿಯೆ ಸೃಷ್ಟಿಸಿತು.
