Sunday, March 1, 2026
Sunday, March 1, 2026
Home Blog Page 1579

ಉಕ್ರೇನ್ ಸಮರದ ನಡುವೆಯೂ ಹಾರ್ಕಿವ್ ಅನಿಲ ವಿತರಣಾ ಕೇಂದ್ರ ಆರಂಭ

0

ಹಾರ್ಕಿವ್‌ ಪ್ರಾಂತ್ಯದಲ್ಲಿರುವ 2 ಅನಿಲ ವಿತರಣಾ ಕೇಂದ್ರಗಳನ್ನು ಪುನರಾರಂಭಿಸಲಾಗಿದೆ. 3 ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಅನಿಲ ಸರಬರಾಜು ಮಾಡಲಾಗುತ್ತದೆ ಎಂದು ಉಕ್ರೇನ್‌ನ ಅನಿಲ ಪೂರೈಕೆ ವ್ಯವಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಷ್ಯಾ ದಾಳಿಯ ಪರಿಣಾಮ ಹಾರ್ಕಿವ್‌ನಲ್ಲಿನ 2 ಪ್ರಮುಖ ಅನಿಲ ಪೈಪ್‌ಲೈನ್‌ಗಳಿಗೆ ಹಾನಿಯಾಗಿತ್ತು. ಇದರಿಂದಾಗಿ ಇವುಗಳನ್ನು ಮುಚ್ಚಲಾಗಿತ್ತು. ಇದೀಗ ಹಾನಿಯನ್ನು ಸರಿಪಡಿಸಲಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಉಕ್ರೇನ್‌ 7 ಪ್ರಾಂತ್ಯಗಳಲ್ಲಿರುವ 54 ಅನಿಲ ವಿತರಣಾ ಕೇಂದ್ರಗಳು ಇನ್ನೂ ಮುಚ್ಚಿದ ಸ್ಥಿತಿಯಲ್ಲಿಯೇ ಇವೆ ಎಂದೂ ತಿಳಿಸಲಾಗಿದೆ.

ರಷ್ಯಾ ಸೇನೆ, ಫೆಬ್ರುವರಿ 24ರಂದು ಉಕ್ರೇನ್‌ನಲ್ಲಿ ಆಕ್ರಮಣ ಆರಂಭಿಸಿತ್ತು.

ಕಾಂಗ್ರೆಸ್ ನ ಜ್ಞಾನೋದಯದ ಸಂಕೇತವಾದ ಉದಯಪುರ ಚಿಂತನ ಶಿಬಿರ

0

ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.

ಮೂರು ದಿನಗಳ ಚಿಂತನ ಶಿಬಿರದಲ್ಲಿ ಕೆಲ ಮಹತ್ವದ ನಿರ್ಧಾರಗಳಿಗೆ ಕಾಂಗ್ರೆಸ್ ಬದ್ಧತೆ ತೋರಿದೆ. ಶಿಬಿರದಲ್ಲಿ ನಿರ್ಧರಿಸಲಾದ ಕಾಂಗ್ರೆಸ್ ಆಂತರಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಮುಂದಿನ ಎರಡ್ಮೂರು ದಿನಗಳಲ್ಲಿ ಕಾರ್ಯಪಡೆ ರಚಿಸಲಾಗುವುದು. ಈ ವಿಚಾರವನ್ನು ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದರು.

13 ದಶಕಗಳಷ್ಟು ದೀರ್ಘ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಬದಲಾವಣೆಗೆ ತೆರೆದುಕೊಳ್ಳುವ ಮನಸು ಮಾಡಿದೆ.

ಪಕ್ಷದ ಪುನಾರಚನೆ, ಪಕ್ಷದ ಹುದ್ದೆಗಳಿಗೆ ನೇಮಕಾತಿ ನಿಯಮಗಳು, ಸಂವಹನ, ಪ್ರಚಾರ, ಹಣಕಾಸು, ಚುನಾವಣೆ ನಿರ್ವಹಣೆ ಇತ್ಯಾದಿ ಎಲ್ಲಾ ರೀತಿಯ ಅಂಶಗಳು ಈ ಆಂತರಿಕ ಸುಧಾರಣೆಗಳ ವ್ಯಾಪ್ತಿಗೆ ಬರುತ್ತವೆ ಎಕದರು.

ಚಿಂತನ ಶಿಬಿರ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋನಿಯಾ ಗಾಂಧಿ, “ನಾವು ಸಮಸ್ಯೆ ನಿವಾರಿಸುತ್ತೇವೆ. ಇದು ನಮ್ಮ ದೃಢನಿಶ್ಚಯ, ಇದು ನಮ್ಮ ನಮ್ಮ ಸಂಕಲ್ಪ. ಕಾಂಗ್ರೆಸ್ ನವೋದಯ ಕಾಣಲಿದೆ” ಎಂದು ಆತ್ಮವಿಶ್ವಾಸದ ನುಡಿಗಳನ್ನು ಹೇಳಿದರು.

ನಮ್ಮ ನ್ಯಾಯ ವ್ಯವಸ್ಥೆ ನಮ್ಮ ಹೆಮ್ಮೆ

0

ಪ್ರಜಾಪ್ರಭುತ್ವದಲ್ಲಿ ಕಾರ್ಯಾಂಗ,ಶಾಸಕಾಂಗ ಮತ್ತು ನ್ಯಾಯಾಂಗ ಒಂದಕ್ಕೊಂದು ಹೆಣೆದುಕೊಂಡಿರಬೇಕು.ಯಾವುದೇ
ಕೋನದಿಂದಲೂ ಅರಾಜಕತೆ, ಅಸ್ಥಿರತೆ ಮತ್ತು ಅನ್ಯಾಯದ ಹವೆ
ಬೀಸದಂತೆ ನೋಡಿಕೊಳ್ಳಲಾಗುತ್ತಿದೆ. ಈ ಮೂರೂ ಮುಪ್ಪುರಿಗೊಂಡಿರುವ
ಸಂವಿಧಾನವೆಂಬ ಭದ್ರ ‌ಬಲದಿಂದ
ಸಂರಕ್ಷಣೆಮಾಡಲಾಗುತ್ತಿದೆ.

ಈ ಮಾತುಗಳಿಗೆ ಹಿನ್ನೆಲೆಯಾಗಿ
ನಮ್ಮ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅವರ ಮಾತುಗಳನ್ನ ಮೆಲುಕು ಹಾಕಬೇಕಿದೆ.
” ಜನರ ಘನತೆ ಮತ್ತು ಹಕ್ಕುಗಳನ್ನ
ಗುರುತಿಸಿ ರಕ್ಷಿಸಿದಾಗ ಮಾತ್ರ ಶಾಂತಿ ನೆಲೆಸುತ್ತದೆ.ಭಾರತದಲ್ಲಿ ಹಕ್ಕುಗಳ ತೀರ್ಪು ಮತ್ತು ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಸಾಂವಿಧಾನಿಕ ಕರ್ತವ್ಯವನ್ನು ನ್ಯಾಯಾಲಯಗಳು ಹೊಂದಿವೆ”.

ಘಾಸಿಕೊಂಡ ಅಥವಾ ವಂಚಿನಾದ ವ್ಯಕ್ತಿ ನ್ಯಾಯಕ್ಕಾಗಿ ಕೋರ್ಟಿನ ಮೆಟ್ಟಿಲೇರುತ್ತಾನೆ.ಆದರೆ ಅಲ್ಲಿ ಶೀಘ್ರ ನ್ಯಾಯದಾನವಾಗದೇ
ಎಳೆದಾಡಿದರೆ ನ್ಯಾಯಾಂಗದಲ್ಲಿನ
ಆಸಕ್ತಿ ವಿಚಲಿತವಾಗುತ್ತದೆ.

ಈ ಮನೋಹಂತವನ್ನ ನಮ್ಮ ನ್ಯಾಯಮೂರ್ತಿಗಳು ಬಹಳ ಸರಳವಾಗಿ ಹೇಳಿದ್ದಾರೆ.

“ನ್ಯಾಯದ ನಿರಾಕರಣೆ ಅಂತಿಮವಾಗಿ ಅರಾಜಕತೆಗೆ ಕಾರಣವಾಗುತ್ತದೆ.
ಶೀಘ್ರದಲ್ಲೇ ನ್ಯಾಯಾಂಗದ ಸಂಸ್ಥೆಯು ಅಸ್ಥಿರಗೊಳ್ಳುತ್ತದೆ.
ಏಕೆಂದರೆ ಜನರು ಕಾನೂನುಬಾಹಿರ
ಕಾರ್ಯವಿಧಾನಗಳನ್ನ ಹುಡುಕುತ್ತಾರೆ.”

ಈಗ ಬಹಳಷ್ಟು ಹೀಗೇ ಘಟಿಸುತ್ತಿದೆ.
ನ್ಯಾಯದ ಪರವಾಗಿ ಸಾಕ್ಷಿಗಳು ದುರ್ಬಲವಾಗುವಂತೆ ಮಾಡುವ ಹಿತಾಸಕ್ತಿಗಳು. ಸಾಮಾಜಿಕ ಬದುಕಿನಲ್ಲಿ ನ್ಯಾಯ ನಿರೀಕ್ಷಿತರಿಗೆ
ತೋಳ್ಬಲ,ಹಣಬಲ,ಜನಬಲಗಳಿಂದ
ಶೋಷಿಸುವುದು.ಕೊನೆಗೆ ವಿಚಾರಣೆಯ ವಕೀಲರಿಗೆ ಫೀಸು
ಕಟ್ಟದಂತಹ ಪರಿಸ್ಥಿತಿಗೆ ತಳ್ಳುವುದು.
ಇವೆಲ್ಲ ನಾವು ಸಿನಿಮಾಗಳಲ್ಲಿ ನೋಡಿದ್ದೇವೆ.ಅದೂ ನಮ್ಮ ಜೀವನದಲ್ಲಿ ನಡೆದ ಘಟನೆಗಳ ಅಣಕೂ ಆಗಿದೆ ಎಂಬುದು ನಮಗೆ ಗೊತ್ತಾಗುವುದೇ ಇಲ್ಲ.

ಎಂತೆಂತಹ ಕೇಸುಗಳು ರಾಜಕೀಯ
ಆಡಳಿತದಲ್ಲಿ ದಾರಿತಪ್ಪಿವೆ ಎಂಬುದನ್ನ ನ್ಯಾಯಾಂಗವೇ ಈಗ ಎಚ್ಚರಿಸಬೇಕಿದೆ.ಏಕೆಂದರೆ ಬಹಳಷ್ಟು
ಪ್ರಕರಣಗಳ ಬಗ್ಗೆ ನ್ಯಾಯಾಂಗವೇ
ಸರ್ಕಾರವನ್ನ ತಿವಿದು ಎಚ್ಚರಿಸಬೇಕಾಗುವಂತಹ ವಿದ್ಯಮಾನವಿದೆ.
ಪತ್ರಿಕೆಗಳಿಲ್ಲದ ಸರ್ಕಾರ ಬೇಕೋ
ಪತ್ರಿಕೆಯಿರುವ ಸರ್ಕಾರ ಬೇಕೋ
ಎಂಬ ಪ್ರಶ್ನೆ ಹಳತೆ.ಆದರೆ ಈಗ
ಪತ್ರಿಕಾರಂಗ ಅಥವಾ ಮಾಧ್ಯಮಗಳು ಬಹುಪಾಲು ಓಲೈಕೆಯ ಕ್ಯಾನ್ಸರ್ ನಿಂದ ನರಳಾಡುತ್ತಿದೆ. ಪ್ರಜಾಪ್ರಭುತ್ವದ ನಾಲ್ಕನೇ ಆಯಾಮಕ್ಕೆ ಈ ಸ್ಥಿತಿ ಒದಗಿದೆ. ನ್ಯಾಯಾಂಗ ಮಾತ್ರ ಯಾವುದರ ಸೋಂಕಿಲ್ಲ. ಸಾಮಾನ್ಯ ಜನರ ಬದುಕು ದುರ್ಭರವಾಗಲು
‌ಬಿಡದೇ ಮೂಲಭೂತ ಹಕ್ಕುಗಳ ಬಗ್ಗೆ ಧ್ವನಿ ಸೇರಿಸಿ ಶ್ರೀಸಾಮಾನ್ಯನಿಗೆ
ಆಮ್ಲಜನಕ ನೀಡುತ್ತಿದೆ.
ನ್ಯಾಯಾಂಗ ವಿಲ್ಲದಂತಹ ಸರ್ಕಾರದ ಬಗ್ಗೆ ನಾವು ಕಲ್ಪನೆ ಕೂಡ ಮಾಡಿಕೊಳ್ಳಲು ಅಶಕ್ತರು.
ನಮ್ಮ ಮುಖ್ಯ ನ್ಯಾಯಮೂರ್ತಿ ಶ್ರೀ ರಮಣ ಅವರು ಜಮ್ಮು ಮತ್ತು ಕಾಶ್ಮೀರದ ಲಡಾಖ್ ನಲ್ಲಿ
ಹೈಕೋರ್ಟ್ ನ ಹೊಸ ಸಂಕೀರ್ಣದ ಶಂಕುಸ್ಥಾಪನೆ ನೆರವೇರಿಸಿ ಹೇಳಿದ
ಈ ಮಾತು ಸರ್ವಕಾಲಕ್ಕೂ ಸಲ್ಲುವಂಥದ್ದಾಗಿದೆ.

ವಕೀಲರು ಮತ್ತು ನ್ಯಾಯಾಧೀಶರು
ಸಾಮಾನ್ಯವಾಗಿ ಹೆಚ್ವು ಮಾನಸಿಕ ಒತ್ತಡದಲ್ಲಿರುವ ದಾವೆದಾರರಿಗೆ ಸೌಹಾರ್ದಯುತ ವಾತಾವರಣ ನಿರ್ಮಿಸಲು ಒತ್ತಾಯಿಸಿದ್ದಾರೆ.

ಈ ಮಾತುಗಳು ಆ ಕ್ಷೇತ್ರದಲ್ಲಿರುವವರು ಮತ್ತೊಮ್ಮೆ
ಅವಲೋಕನಕ್ಕೆತೊಡಗುವಂತೆ ಮಾಡಿದೆ.

ತೆಲಂಗಾಣದಲ್ಲಿ ಮುಸ್ಲೀಮರಿಗೆ ಶೇ12 ಮೀಸಲು ಪ್ರಸ್ತಾವನೆ ತಡೆಯುತ್ತೇವೆ-ಅಮಿತ್ ಶಾ

0

ತೆಲಂಗಾಣದಲ್ಲಿ ಚುನಾವಣಾ ರಣಕಹಳೆ ಮೊಳಗಿಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಆಡಳಿತಾರೂಢ ಟಿಆರ್‌ಎಸ್‌ ಸರಕಾರವು ಧರ್ಮಾಧಾರಿತ ಮೀಸಲು ಜಾರಿಗೆ ತರಲು ಹೊರಟಿದ್ದು, ಇದರಿಂದ ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯ ಮೇಲೆ ಪರಿಣಾಮ ಬೀರುತ್ತದೆ.
ಸಿಎಂ ಕೆಸಿಆರ್‌ ಅವರು ಮುಸ್ಲಿಮರಿಗೆ ಶೇ.12ರಷ್ಟು ಮೀಸಲು ನೀಡಲು ಮುಂದಾಗಿರುವುದನ್ನು ತಡೆಯುತ್ತೇವೆ. ನಾವು ಅಲ್ಪಸಂಖ್ಯಾತರ ಮೀಸಲಾತಿಯನ್ನು ಕೊನೆಗೊಳಿಸುತ್ತೇವೆ ಎಂದು ಅಮಿತ್ ಶಾ ಹೇಳಿದರು.

ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ ಕೈಗೊಂಡಿರುವ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್‌ ಶಾ, ರಾಜ್ಯದಲ್ಲಿ ಟಿಆರ್‌ಎಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಭರವಸೆಗಳನ್ನು ಈಡೇರಿಸದ ಆರೋಪದ ಮೇಲೆ ತರಾಟೆಗೆ ತೆಗೆದುಕೊಂಡರು. ತಮ್ಮ ಪಕ್ಷವು ಚುನಾವಣೆಯನ್ನು ಎದುರಿಸಲು ಸಿದ್ಧವಾಗಿದೆ. ಮುಂದಿನ ವರ್ಷ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಬಿಜೆಪಿ ಕೊನೆಗೊಳಿಸಲಿದೆ ಮತ್ತು ಎಸ್‌ಟಿ, ಎಸ್‌ಸಿಗಳು ಮತ್ತು ಹಿಂದುಳಿದ ವರ್ಗಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಮೂಢನಂಬಿಕೆ ಜಾಸ್ತಿ:ಮಕ್ಕಳಿಗೆ ಹೆಸರಿಡುವ ಸ್ವಾತಂತ್ರ್ಯವೂಇಲ್ಲ- ಕುಂ.ವೀ

0

ದೇಶದಲ್ಲಿ ಅಘೋಷಿತ ತುರ್ತು ಸ್ಥಿತಿ ನಿರ್ಮಾಣವಾಗಿದೆ. ಸತ್ಯ ಹೇಳಿದವರಿಗೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ಹೀಗಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಹಿಂಜರಿಯುವಂತಾಗಿದೆ. ಈಗಲಾದರೂ ಧ್ವನಿಯೆತ್ತದಿದ್ದರೆ ಮುಂದಿನ ದಿನಗಳು ಮತ್ತಷ್ಟು ಕಷ್ಟಕರವಾಗಲಿದೆ ಎಂದು ಸಾಹಿತಿ ಕುಂ.
ವೀರಭದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ತುಮಕೂರಿನಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಈ ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಹೈಟೆಕ್ ಸ್ವಾಮಿಗಳ ಸಂಖ್ಯೆ ಹೆಚ್ಚಾಗಿದೆ. ಇಂಥವರ ಕಾಲಿಗೆ ಬೀಳುವ ರಾಜಕಾರಣಿಗಳಿಗಿಂತ ಮೂರ್ಖರು ಬೇರೆ ಯಾರಿಲ್ಲ ಎಂದು ಹೇಳಿದ ಅವರು, ಪುರೋಹಿತರು ಜನರನ್ನು ಭಯಾನಕ ಪರಿಸ್ಥಿತಿ ಇಟ್ಟಿದ್ದಾರೆ. ಮೂಢನಂಬಿಕೆ ಸಹ ಬೇರೂರಿದ್ದು ಮಕ್ಕಳಿಗೆ ಹೆಸರಿಡುವ ಸ್ವಾತಂತ್ರ್ಯವೂ ಇಲ್ಲದಂತಾಗಿದೆ ಎಂದು ಕುಂ. ವೀರಭದ್ರಪ್ಪ ವಿಷಾದ ವ್ಯಕ್ತಪಡಿಸಿದರು.

ಸತ್ಯ ಹೇಳಿದ ಕಾರಣಕ್ಕಾಗಿಯೇ ಸಂಶೋಧಕ ಎಂಎಂ ಕಲಬುರ್ಗಿ, ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಯಿತು ಎಂದು ಕುಂ. ವೀರಭದ್ರಪ್ಪ ತಿಳಿಸಿದ್ದಾರೆ.

ಪುಟಿನ್ ಅನಾರೋಗ್ಯ: ರಷ್ಯದಲ್ಲಿ ಆಂತರಿಕ ದಂಗೆ?-ಜ.ಬುಡಾನೊವ್

0

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಕಾನ್ಸರ್​ ಮತ್ತು ಇನ್ನಿತರ ಗಂಭೀರ ಕಾಯಿಲೆಗಳು ಇವೆ ಎನ್ನಲಾಗಿದೆ.

ರಷ್ಯಾದಲ್ಲಿ ದಂಗೆ ರೂಪುಗೊಳ್ಳುತ್ತಿದ್ದು, ಅವರ ಅಧಿಕಾರದ ಅವಸಾನಕ್ಕೆ ಈ ಯುದ್ಧವೇ ಕಾರಣ ಆಗಲಿದೆ ಯೂಕ್ರೇನ್​ ಆರೋಪಿಸಿದೆ.
ರಷ್ಯಾದಲ್ಲಿ ಜನರು ದಂಗೆಯನ್ನು ತಡೆಯಲು ಯಾರಿದಂಲೂ ಸಾಧ್ಯವಾಗುವುದಿಲ್ಲ. ಇದಕ್ಕೆ ಪುತಿನ್​ ಬಲಿಪಶು ಆಗುವುದು ಮತ್ತು ರಷ್ಯಾ ಪತನ ನಿಶ್ಚಿತ ಎಂದು ಯೂಕ್ರೇನ್​ ಸೇನೆಯ ಬೇಹುಗಾರಿಕಾ ವಿಭಾಗದ ಮುಖ್ಯಸ್ಥ ಮೇಜರ್​ ಜನರಲ್​ ಕಿರಿಲೋ ಬುಡಾ-ನೋವ್​ ಹೇಳಿದ್ದಾರೆ.

ಈ ಯುದ್ಧವು ಆಗಸ್ಟ್​ ಎರಡನೇ ವಾರದಲ್ಲಿ ನಿರ್ಣಾಯಕ ಹಂತ ತಲುಪುವ ಸಾಧ್ಯತೆ ಇದೆ. ಈ ವರ್ಷಾಂತ್ಯಕ್ಕೆ ಸಕ್ರಿಯ ಸಮರ ಕೊನೆಯಾಗಲಿದೆ. ಡಾನ್​ಬಾಸ್​, ಕ್ರಿಮಿಯಾ ಸೇರಿ ನಮ್ಮೆಲ್ಲ ಪ್ರದೇಶಗಳ ಮೇಲೆ ಪಾರಮ್ಯ ಸಾಧಿಸಲಿದ್ದೇವೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಡೊನೆಟ್​ಸ್ಕ್​ ಪ್ರಾಂತ್ಯದ ಕೈಗಾರಿಕಾ ಪ್ರದೇಶಗಳಿಗೆ ಪೂರೈಕೆಯ ಮಾರ್ಗವನ್ನು ನಾಶ ಮಾಡಲು ಮಾರ್ಟರ್​ ದಾಳಿಯನ್ನು ರಷ್ಯಾ ಆರಂಭಿಸಿದೆ ಎಂದು ತಿಳಿಸಿದೆ.

ಖಾರ್ಕಿವ್​ನಿಂದ ಹಿಂದೆ ಸರಿದ ರಷ್ಯಾ ಪಡೆ
ಯೂಕ್ರೇನ್​ ಎರಡನೇ ಅತಿ ದೊಡ್ಡ ನಗರ ಖಾರ್ಕಿವ್​ ಮೇಲೆ ಒಂದು ವಾರ ಬಾಂಬ್​ ಹಾಕಿ, ಅದನ್ನು ಸುತ್ತುವರಿದಿದ್ದ ರಷ್ಯಾ ಸೇನೆ ಈಗ ಹಿಂದೆ ಸರಿಯುತ್ತಿದೆ ಎಂದು ತಿಳಿದುಬಂದಿದೆ.

ಆರ್ ಎಸ್ಎಸ್ ಎದುರಿಸಲು ಸನ್ನದ್ಧರಾಗೋಣ-ರಾಹುಲ್ ಗಾಂಧಿ

0

ಎಲ್ಲೆಡೆ ಸೋಲುಗಳಿಂದ ಬಸವಳಿದಿರುವ ಕಾಂಗ್ರೆಸ್ ಪಕ್ಷಕ್ಕೆ ಪುನರ್‌ವೈಭವ ತಂದುಕೊಡಲು ಉದಯಪುರದಲ್ಲಿ 3 ದಿನಗಳ ಕಾಲ ನಡೆದ ನವಸಂಕಲ್ಪ ಚಿಂತನಾ ಶಿಬಿರದಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಮೋದಿ ಸರ್ಕಾರದ ಹುಳುಕು ಬಯಲು ಮಾಡುವ ಜೊತೆಗೆ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಲು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಭಾರತ್ ಜೋಡೋ ಯಾತ್ರೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ.

ಗಾಂಧಿ ಜಯಂತಿಯಂದು ಅಂದರೆ ಅಕ್ಟೋಬರ್ 2ರಂದು ಪಾದಯಾತ್ರೆಗೆ ಚಾಲನೆ ಸಿಗಲಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಅಕ್ಟೋಬರ್‌ನಿಂದ ಒಂದು ವರ್ಷದಷ್ಟು ಸುದೀರ್ಘ ಮತ್ತು ಬೃಹತ್ ಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಅಗತ್ಯ ಪ್ರದೇಶಗಳಲ್ಲಿ ಜನತಾ ದರ್ಬಾರ್ ಹೆಸರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ.

ಮತ್ತೆ ಪುಟಿದೇಳ್ತೀವಿ ಎಂದು ಸೋನಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಶತಮಾನದ ಹಳೆಯ ಪಕ್ಷ ಜನರೊಂದಿಗೆ ಸಂಪರ್ಕ ಕಡಿತಗೊಂಡಿರೋದನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆ. ಜನರೊಂದಿಗೆ ನಮ್ಮ ಸಂಪರ್ಕದ ಕೊಂಡಿ ಕಳಚಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದನ್ನು ನಾವು ಪುನಶ್ಚೇತನಗೊಳಿಸಿ, ಬಲಪಡಿಸಬೇಕು. ಇದಕ್ಕೆ ಯಾವುದೇ ಅಡ್ಡದಾರಿಯಿಲ್ಲ. ಕಠಿಣ ಪರಿಶ್ರಮವೊಂದೇ ಮಾರ್ಗ. ಪಕ್ಷವನ್ನು ತಳಮಟ್ಟದಿಂದ ಆಕ್ರಮಣಕಾರಿಯಾಗಿ ಬದಲಿಸಿದಾಗ ಮಾತ್ರ ಆರ್‌ಎಸ್‌ಎಸ್ ಎದುರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯ ದ್ವೇಷ ಸಿದ್ಧಾಂತದ ವಿರುದ್ಧ ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್ ಪಕ್ಷದಂತೆ ಹೋರಾಡುವುದು ಸಾಧ್ಯವಿಲ್ಲ ಎಂದು ರಾಹುಲ್ ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಪಕ್ಷ ಒಂದು ಕುಟುಂಬ, ಒಂದು ಟಿಕೆಟ್ ನಿರ್ಣಯದ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದೆ. ಆ ಪಕ್ಷದ್ದು ಧೃತರಾಷ್ಟ ಮೋಹ. ಉತ್ತರ ಪ್ರದೇಶ ಚುನಾವಣೆಯಲ್ಲಿ ವಂಶವಾದದ ವಿರುದ್ಧ ಮೋದಿ ಗಟ್ಟಿಯಾಗಿ ನಿಂತರು. ಆ ರೀತಿಯ ಧೈರ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯಾ ಎಂದು ಬಿಜೆಪಿ ಪ್ರಶ್ನಿಸಿದೆ. ತಾಕತ್ತಿದ್ರೆ ಆಂತರಿಕ ಚುನಾವಣೆ ನಡೆಸಲಿ ಎಂದು ಸವಾಲು ಹಾಕಿದೆ.

ಮಳೆ ನಿಲ್ಲೋಹಂಗೆ ಕಾಣಲ್ಲ ಮಾರಾಯ್ರೆ!

0

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ರಾಜ್ಯದಲ್ಲಿ‌ ಮೇ 18 ರಿಂದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಮತ್ತು ಹಾಸನದಲ್ಲಿ ಮೇ 16, 17ರಂದು ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಬೀಳುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ನೀಡಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆಯಲ್ಲಿ ಮುಂದಿನ 4 ದಿನ, ಬೀದರ್,ವಿಜಯಪುರ, ರಾಯಚೂರು, ಕಲಬುರಗಿ, ರಾದಗಿರಿ, ಕೊಪ್ಪಳ,ಗದಗ, ಹಾವೇರಿ, ಬಾಗಲಕೋಟೆ ಮತ್ತು ಬೆಳಗಾವಿಯಲ್ಲಿ ಮುಂದಿನ 48 ಗಂಟೆ ಎಲ್ಲೋ ಅಲರ್ಟ್ ನೀಡಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ

ಅತಿ ಆಸೆಯಿಂದ ಅಶಾಂತಿ

0

ಬುದ್ಧ ಪೂರ್ಣಿಮಾ ದೇಶದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಬೌದ್ಧಧರ್ಮದ ಅನುಯಾಯಿಗಳಿಗೆ ಇದು ವಿಶಿಷ್ಟವಾದ ಆಚರಣೆ.

ಇದು ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಅಶಾಶ್ವತೆಯನ್ನು ಸೂಚಿಸುತ್ತದೆ. ಈ ಹಬ್ಬವು ಮೊದಲ ಹುಣ್ಣಿಮೆಯ ದಿನದಂದು ಬರುತ್ತದೆ. ಅಂದರೆ, ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಹಿಂದೂ ತಿಂಗಳ ವೈಶಾಖ ಪೂರ್ಣಿಮೆಯ ದಿನ.

ಬುದ್ಧ ಪೂರ್ಣಿಮೆಯಂದು ಬೌದ್ಧ ಧರ್ಮವನ್ನು ನಂಬುವ ಜನರು ಎಲ್ಲೇ ಇದ್ದರೂ ಈ ದಿನದಂದು ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ. ದೀಪವನ್ನು ಬೆಳಗಿಸಿ ಮತ್ತು ಭಗವಾನ್ ಬುದ್ಧನ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ.

ಈ ದಿನವನ್ನು ವಿಶ್ವದಾದ್ಯಂತ ಬೌದ್ಧರು ಮತ್ತು ಹಿಂದೂಗಳು ಸ್ಮರಿಸುತ್ತಾರೆ ಮತ್ತು ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ, ಇಂಡೋನೇಷ್ಯಾ ದೇಶಗಳಲ್ಲಿ ಆಚರಿಸುತ್ತಾರೆ. ಶ್ರೀಲಂಕಾದಲ್ಲಿ ಇದನ್ನು ವೆಸಾಕ್ ಎಂದು ಕರೆಯಲಾಗುತ್ತದೆ.ಎಲ್ಲೆಲ್ಲಿ ಬೌದ್ದರಿದ್ದಾರೋ ಅಲ್ಲಿ ಈ ಆಚರಣೆಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.

ಗೌತಮ ಬುದ್ಧನು ಧರ್ಮ (ಕರ್ತವ್ಯ), ಅಹಿಂಸೆ, ಸಾಮರಸ್ಯ ಮತ್ತು ದಯೆಯನ್ನು ಬೋಧಿಸಿದನು. ತನ್ನ 30 ನೇ ವಯಸ್ಸಿನಲ್ಲಿ ತನ್ನ ಲೌಕಿಕ ಆಸ್ತಿ ಮತ್ತು ರಾಜ ವೈಭವವನ್ನು ತೊರೆದು ಸತ್ಯವನ್ನು ಹುಡುಕುವ ಜೀವನವನ್ನು ಅರಸುತ್ತಾ ಹೋದನು.

ಆದರೆ ಒಂದು ರಾತ್ರಿ, ಅವರು ಆಳವಾದ ಧ್ಯಾನದಲ್ಲಿ ಮುಳುಗಿದ್ದಾಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು.

ಹೀಗೆ, 35 ನೇ ವಯಸ್ಸಿನಲ್ಲಿ ಅವರು ಬುದ್ಧರಾದರು. ಅವರು ತಮ್ಮ ಜೀವನದುದ್ದಕ್ಕೂ ಜನರಿಗೆ ಜ್ಞಾನೋದಯದ ಹಾದಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿದರು.

ಬದುಕಿನಲ್ಲಿ ಎಲ್ಲವೂ ಬೇಕು ಎನ್ನುವ ಆಸೆ ದಟ್ಟವಾದಾಗ ಸ್ವಾರ್ಥವೇ ಮೇಲುಗೈ ಪಡೆದು ದುರಾಸೆಯಾಗುತ್ತದೆ.. ಈ ದುರಾಸೆಯೇ ಕೊನೆಗೆ ಮನುಷ್ಯನ ಜೀವನವನ್ನೇ ದುರಾಸೆಯ ಕಡಲಲ್ಲಿ ಮುಳುಗಿಸುತ್ತದೆ. ಇವತ್ತಿನ ನಮ್ಮ ವರ್ತಮಾನದಲ್ಲಿ ಆಸೆಪಡುವ ಮಂದಿ ಯಾರಿಲ್ಲ ಹೇಳಿ?..
ಅಧಿಕಾರ, ಸಂಪತ್ತು ಎಲ್ಲವನ್ನೂ ಅಕ್ರಮವಾಗಿ ಸಂಪಾದಿಸಿ ಕೊನೆಗೆ ಅಶಾಂತಿಯುತ ಬದುಕನ್ನ ನಡೆಸುತ್ತಿರುವುದನ್ನು ನೋಡುತ್ತಿದ್ದೇವೆ.

ಆಸೆಯೇ ದುಃಖಕ್ಕೆ ಮೂಲ ಎಂಬ ಗೌತಮ ಬುದ್ಧನ ಈ ಪರಮ ಸಂದೇಶದ ಸತ್ಯವನ್ನು ನಾವು ಇನ್ನೂ ಅರ್ಥಮಾಡಿಕೊಂಡಿಲ್ಲ.

ಹೀಗಾಗಿಯೇ ಇನ್ನೂ ಸಮಾಜದಲ್ಲಿ ಅಶಾಂತಿಯ ಹೊರತಾಗಿ ಬೇರೆ ಏನನ್ನೂ ನಾವು ಕಾಣಲಾಗುತ್ತಿಲ್ಲ. ಗೌತಮ ಬುದ್ಧನ ಸಂದೇಶವನ್ನ ಅರ್ಥಮಾಡಿಕೊಳ್ಳಬೇಕಿದೆ.

ಅಲ್ಪ ತೃಪ್ತಿಯಿಂದ ಜೀವನ ಸಾಗಿಸುವವರೇ ಪರಮ ಸುಖಿಗಳು.. ಅತಿ ಆಸೆಯನ್ನ ಪಡುವವರೇ ಅತೀ ದುಃಖಿಗಳು. ಈ ವಾಸ್ತವವನ್ನು ನಾವು ಮನಗಂಡಾಗ ಮಾತ್ರ ಬುದ್ಧನ ಸಂದೇಶಕ್ಕೆ ಗೌರವ ಸೂಚಿಸಿದಂತೆ.

ಕಾಶ್ಮೀರಿ ಪಂಡಿತರಿಗೆ ಲಶ್ಕರೆ ಇಸ್ಲಾಮ್ ನಿಂದ ಬೆದರಿಕೆ ಪತ್ರ

0

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಸರಕಾರಿ ಅಧಿಕಾರಿ ರಾಹುಲ್‌ ಭಟ್‌ ಅವರ ಕೊಲೆ ಖಂಡಿಸಿ ಕಾಶ್ಮೀರಿ ಪಂಡಿತರು ರಾಜ್ಯಾದ್ಯಂತ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಭಯೋತ್ಪಾದಕ ಸಂಘಟನೆ ಲಶ್ಕರೆ ಇಸ್ಲಾಮ್‌, ‘ಕಾಶ್ಮೀರ ಬಿಟ್ಟು ತೊಲಗಿ, ಇಲ್ಲದಿದ್ದರೆ ಹೆಣವಾಗುವಿರಿ’ ಎಂದು ಕಾಶ್ಮೀರಿ ಪಂಡಿತರಿಗೆ ಕೊಲೆ ಬೆದರಿಕೆ ಹಾಕುವ ಮೂಲಕ ದಾರ್ಷ್ಟ್ಯತೆ ತೋರಿದೆ.

ಜಮ್ಮು ಮತ್ತು ಕಾಶ್ಮೀರದ ಹವಾಲದ ನಿರಾಶ್ರಿತರ ಕಾಲೊನಿಯ ಅಧ್ಯಕ್ಷರಿಗೆ ಪತ್ರ ಬರೆದಿರುವ ಲಶ್ಕರೆ ಇಸ್ಲಾಮ್‌, ‘ಕಾಶ್ಮೀರಿ ಪಂಡಿತರೇ ಪುಲ್ವಾಮಾ ಪ್ರದೇಶವನ್ನು ಬಿಟ್ಟು ಹೊರಡಿ. ಇಲ್ಲದಿದ್ದರೆ ಕೊಲೆಯಾಗುವಿರಿ’ ಎಂದು ಬೆದರಿಸಿದೆ.

ಈ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪತ್ರಕ್ಕೆ ಲಶ್ಕರೆ ಇಸ್ಲಾಮ್‌ನ ಕಮಾಂಡರ್‌ ಸಹಿ ಹಾಕಿದ್ದಾನೆ. ಅಲ್ಲದೇ ಪತ್ರದಲ್ಲಿ, ವಲಸಿಗರೆ ಮತ್ತು ಆರ್ ಎಸ್‌ಎಸ್‌ ಏಜೆಂಟರೆ ಕಾಶ್ಮೀರ ಬಿಟ್ಟು ತೊಲಗಿ. ಇಲ್ಲದಿದ್ದರೆ ಕೊಲೆಗೆ ಸಿದ್ಧರಾಗಿರಿ, ಎಂದು ಹೆದರಿಸಿರುವ ಭಯೋತ್ಪಾದಕ ಸಂಘಟನೆ, ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಎಲ್ಲ ವಲಸಿಗರೇ ಹಾಗೂ ಆರ್ ಎಸ್‌ಎಸ್‌ ಏಜೆಂಟರೆ ಜಮ್ಮು ಮತ್ತು ಕಾಶ್ಮೀರ ಬಿಟ್ಟು ಹೊರಡಿ, ಇಲ್ಲದಿದ್ದರೆ ಸಾಯಲು ಸಿದ್ಧರಾಗಿ. ಕಾಶ್ಮೀರಿ ಮುಸ್ಲಿಮರನ್ನು ಕೊಲ್ಲುವ ಮೂಲಕ ಕಾಶ್ಮೀರವನ್ನು ಮತ್ತೊಂದು ಇಸ್ರೇಲ್‌ ಮಾಡಲು ಬಿಡುವುದಿಲ್ಲ. ಕಾಶ್ಮೀರಿ ಪಂಡಿತರಿಗೆ ಇಲ್ಲಿ ಸ್ಥಳವಿಲ್ಲ. ನೀವು ನಿಮ್ಮ ಭದ್ರತೆಯನ್ನು 2-3 ಪಟ್ಟು ಹೆಚ್ಚಿಸಿಕೊಳ್ಳಿ. ಜೊತೆಗೆ ದಾಳಿಗೆ ಸಿದ್ಧವಾಗಿರಿ. ನೀವು ಸಾಯುವುದು ಶತಸಿದ್ಧ ಎಂದು ಬೆದರಿಕೆ ಹಾಕಿದೆ.

ಮೇ 12ರಂದು ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್‌ ಜಿಲ್ಲೆಯಲ್ಲಿ ಸರಕಾರಿ ಅಧಿಕಾರಿ, ಕಾಶ್ಮೀರಿ ಪಂಡಿತ ರಾಹುಲ್‌ ಭಟ್‌ ಅವರನ್ನು ಭಯೋತ್ಪಾದಕ ಸಂಘಟನೆ ಲಶ್ಕರೆ ತೊಯ್ಬಾ ಹತ್ಯೆ ಮಾಡಿತು.

ಇದು ಕಾಶ್ಮೀರಿ ಪಂಡಿತರನ್ನು ಕೆರಳಿಸಿದೆ. ಎಲ್ಲೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರಿಗೆ ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಕಾಶ್ಮೀರ ಪಂಡಿತರಿಗೆ ಭಯೋತ್ಪಾದಕ ಸಂಘಟನೆಯಿಂದ ಬೆದರಿಕೆ ಹಾಕಲಾಗಿದೆ.

ಇನ್ನೊಂದು ಕಡೆ, ರಾಹುಲ್‌ ಭಟ್‌ ಅವರನ್ನು ಹತ್ಯೆ ಮಾಡಿದ ಲಶ್ಕರೆ ತೊಯ್ಬಾ ಸಂಘಟನೆಯ 3 ಭಯೋತ್ಪಾದಕರನ್ನು ಕೆಲವು ದಿನಗಳ ಹಿಂದೆ ಜಮ್ಮು ಹಾಗೂ ಕಾಶ್ಮೀರ ಪೊಲೀಸ್‌ ಪಡೆಯು ಎನ್‌ಕೌಂಟರ್‌ ಮಾಡಿದೆ.