Monday, March 2, 2026
Monday, March 2, 2026
Home Blog Page 1578

ಅರಣ್ಯ ಒತ್ತುವರಿ ತೆರವು ಕಾನೂನನ್ನ ಕಟ್ಟುನಿಟ್ಟಾಗಿ ಪಾಲಿಸಿ-ರವಿ ಕುಶಾಲಪ್ಪ

0

ಅರಣ್ಯ ಒತ್ತುವರಿ ತೆರವು ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು ಎಂದು ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಪಡೆ ಕಾರ್ಯಕ್ರಮಗಳ ಅನುಷ್ಟಾನ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು.

ಒತ್ತುವರಿಗೆ ಸಂಬಂಧಿಸಿದಂತೆ ಶಿವಮೊಗ್ಗ ವಲಯದಲ್ಲಿ 12700 ಪ್ರಕರಣಗಳಿದ್ದು 12,300 ಎಕ್ರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಭದ್ರಾವತಿ ವಲಯದಲ್ಲಿ 972 ಪ್ರಕರಣಗಳಿದ್ದು 18049 ಎಕ್ರೆ ಒತ್ತುವರಿಯಾಗಿದೆ. ಒತ್ತುವರಿ ತೆರವು ಪ್ರಕರಣಗಳಲ್ಲಿ ನ್ಯಾಯಾಲಯದ ಯಾವುದೇ ಆದೇಶ ಅನುಷ್ಟಾನಕ್ಕೆ ಜಿಲ್ಲೆಯಲ್ಲಿ ಬಾಕಿಯಿರುವುದಿಲ್ಲ. ಇದೇ ರೀತಿ ಅರಣ್ಯ ಹಕ್ಕುಗಳಿಗಾಗಿ ಒಟ್ಟು 97085 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು 2444 ಪ್ರಕರಣಗಳಲ್ಲಿ 3127 ಎಕ್ರೆ ಜಮೀನಿಗೆ ಹಕ್ಕುಪತ್ರ ನೀಡಲಾಗಿದೆ. ಇನ್ನು 42422 ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಪಡೆ ಕಾರ್ಯನಿರ್ವಹಿಸುತ್ತಿದೆ. ಅರಣ್ಯ ಸಂರಕ್ಷಣೆ ಕುರಿತಾಗಿ ಅರಿವು ಮೂಡಿಸಲು ಗ್ರಾಮ ಅರಣ್ಯ ಸಮಿತಿಗಳನ್ನು ಇನ್ನಷ್ಟು ಸಕ್ರಿಯಗೊಳಿಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾಗೃತಿ ಮೂಡಿದರೆ ಮಾತ್ರ ಅರಣ್ಯ ಸಂರಕ್ಷಣೆ ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿದೆ ಎಂದು ಅವರು ಹೇಳಿದರು.

ಅರಣ್ಯ ಇಲಾಖೆ ವತಿಯಿಂದ ಕೇವಲ ನಾಮಕಾವಸ್ತೆಗೆ ಗಿಡಗಳನ್ನು ನೆಡುವ ಕಾರ್ಯ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಸಮುದಾಯದ ಸಹಭಾಗಿತ್ವದಲ್ಲಿ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಆದಿವಾಸಿಗಳ ಹಾಡಿಗಳಲ್ಲಿ ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡಬೇಕು. ಕಾವಾಡಿಗರು ಸೇವಾ ಭದ್ರತೆ ಒದಗಿಸುವ ಕುರಿತು ಮನವಿಯನ್ನು ನೀಡಿದ್ದು, ಈ ಕುರಿತು ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ ಒಳಪಟ್ಟ ಶೇ.90ರಷ್ಟು ಜಮೀನು ಸರ್ವೇ ಕಾರ್ಯ ಪೂರ್ಣಗೊಂಡಿದೆ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಡುವೆ ಜಮೀನು ಕುರಿತು ಗೊಂದಲ ಇರುವುದಿಲ್ಲ. ಪಹಣಿ ಇಂಡೀಕರಣ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಹೊನ್ನಳ್ಳಿ, ಶಿವಮೊಗ್ಗ ವಲಯ ಡಿಎಫ್‍ಒ ಶಂಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮೇ 20 ಅವಧಿ ಮುಗಿದ ಕೆಲವು ಗ್ರಾಪಂ ಗಳ ಚುನಾವಣೆ

0

2022 ರ ಏಪ್ರಿಲ್ ನಿಂದ 2022 ರ ಜುಲೈವರೆಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದಾಗಿ ಖಾಲಿಇರುವ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಿಸಿದೆ.

ಮೇ. 20 ರಂದು ಈ ಸ್ಥಾನಗಳಿಗೆ ಮತದಾನ ನಡೆಯಲಿದೆ. ಚುನಾವಣೆ ನಡೆಯುವ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಶಾಲಾ, ಕಾಲೇಜುಗಳು, ಅನುದಾನಿತ ಹಾಗೂ ಅನುದಾನರಹಿತ ವಿದ್ಯಾಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ರಂಗದ ಸಂಘ ಸಂಸ್ಥೆಗಳಲ್ಲಿ, ಎಲ್ಲ ವ್ಯವಹಾರಿಕ, ಔದ್ಯಮಿಕ ಸಂಸ್ಥೆಗಳಲ್ಲಿ ಕಾಯಂ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ಸೀಮಿತವಾಗಿ ಮೇ. 20 ರಂದು ವೇತನ ಸಹಿತ ರಜೆ ಘೋಷಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಮೇ 21 ಹೊಸನಗರ ತಾ.ಬೆಳ್ಳೂರಿನಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ

0

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ’ ಎಂಬ ಹೊಸ ಪರಿಕಲ್ಪನೆಯೊಂದಿಗೆ ಪ್ರತಿ 3ನೇ ಶನಿವಾರದಂದು ಗ್ರಾಮ ಭೇಟಿ ನೀಡಿ ವಾಸ್ತವ್ಯ ಹೂಡುವ ಬಗೆಗಿನ ಸರ್ಕಾರದ ನಿರ್ದೇಶನದಂತೆ
ಮೇ 21 ರಂದು ಬೆಳಿಗ್ಗೆ 11 ಗಂಟೆಗೆ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ಬೆಳ್ಳೂರು ಗ್ರಾಮ ಪಂಚಾಯ್ತಿಯಲ್ಲಿ ಜಿಲ್ಲಾಧಿಕಾರಿಗಳು ಕಂದಾಯ ಮತ್ತು ಇತರೆ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳೊಂದಿಗೆ ಸಾರ್ವಜನಿಕರನ್ನು ಭೇಟಿ ಮಾಡಿ, ಕುಂದುಕೊರತೆ ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಮಾಡುವರು.

ಈ ಭಾಗದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮುಂಚಿತವಾಗಿ ತಮ್ಮ ಗ್ರಾಮದಲ್ಲಿಯೇ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಲು ಹಾಗೂ ಮೇ 21 ರಂದು ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರ ತಂಡದಿಂದ ಅಂತಾರಾಷ್ಟ್ರೀಯ ಕುಟುಂಬ ದಿನ ಸಂಭ್ರಮ

0

ಜೆಸಿಐ ಶಿವಮೊಗ್ಗ ಶರಾವತಿ ಸಂಸ್ಥೆಯಿಂದ ಮ್ಯಾನ್ ಆಫ್ ದಿ ಮ್ಯಾಚ್ ಚಲನಚಿತ್ರ ಕನ್ನಡದೊಂದಿಗೆ ತಂಡದೊಂದಿಗೆ ಅಂತರಾಷ್ಟ್ರೀಯ ಕುಟುಂಬ ದಿನಾಚರಣೆಯನ್ನು ಆಚರಿಸಲಾಯಿತು .

ಅಧ್ಯಕ್ಷರಾದ ಸೌಮ್ಯ ಅರಳಪ್ಪ, ಕಾರ್ಯದರ್ಶಿಗಳಾದ ಮಮತಾ ಶಿವಣ್ಣ, ಸಂಸ್ಥಾಪಕ ಅಧ್ಯಕ್ಷರಾದ ಜ್ಯೋತಿ ಅರಳಪ್ಪ , ಚಿತ್ರತಂಡದ ಸೂತ್ರದಾರ ಡಿ ಸತ್ಯಪ್ರಕಾಶ್ ಹಾಸ್ಯ ನಟ ಧರ್ಮಣ್ಣ ಕಡೂರು, ನಾಯಕನಟ ನಟರಾಜ್, ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಅಶ್ವಿನಿ ಆನಂದ್ ವೇದಿಕೆಯಲ್ಲಿದ್ದರು.

ಜೆಸಿಐ ಶಿವಮೊಗ್ಗ ಶರಾವತಿ ಉಪಾಧ್ಯಕ್ಷರಾದ ಶೋಭಾ ಸತೀಶ್ ಅವರು ಸೂತ್ರಧಾರ ಸತ್ಯಪ್ರಕಾಶ್ ಅವರ ಪರಿಚಯ ಮಾಡಿಕೊಟ್ಟರು.
ಡಿ ಸತ್ಯ ಪ್ರಕಾಶ್ ಅವರು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ, ಚಿತ್ರಕಥೆಗಾರ ಮತ್ತು ನಿರ್ಮಾಪಕ. ಅವರ ಕೃತಿಗಳು ಸಾಮಾನ್ಯವಾಗಿ ಸಾಮಾಜಿಕ ಸಮಸ್ಯೆಗಳು ಮತ್ತು ಮಾನವ ಸಂಬಂಧಗಳ ಮೇಲೆ ಕೇಂದ್ರೀಕರಿಸುತ್ತವೆ. ಅವರ ಚೊಚ್ಚಲ ಚಿತ್ರ ರಾಮ ರಾಮ ರೇ…, ನಂತರ ಒಂದಲ್ಲಾ ಎರಡಲ್ಲಾ. ಅವರ ಇತ್ತೀಚಿನ ಸಾಹಸವೆಂದರೆ ‘ಮ್ಯಾನ್ ಆಫ್ ದಿ ಮ್ಯಾಚ್’. ವಾಣಿಜ್ಯ ಚಿತ್ರಗಳನ್ನು ಮಾಡುವ ಮೊದಲು, ಪ್ರಕಾಶ್ ಅವರು ಜಯನಗರ 4 ನೇ ಬ್ಲಾಕ್ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು.

ರಾಮ ರಾಮ ರೇ… ಚಿತ್ರಕ್ಕೆ ಚೊಚ್ಚಲ ನಿರ್ದೇಶನಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದರು. ಅವರ ಎರಡನೇ ಚಿತ್ರ ಒಂದಲ್ಲಾ ಎರಡಲ್ಲಾ 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿತು-ರಾಷ್ಟ್ರೀಯ ಏಕೀಕರಣಕ್ಕಾಗಿ ನರ್ಗೀಸ್ ದತ್ ಪ್ರಶಸ್ತಿ ಮತ್ತು ಪಿವಿ ರೋಹಿತ್‌ಗಾಗಿ ಅತ್ಯುತ್ತಮ ಬಾಲ ಕಲಾವಿದೆ.
2020 ರಲ್ಲಿ ವೀಕ್ಷಿಸಲು ಡೆಕ್ಕನ್ ಹೆರಾಲ್ಡ್‌ನ 20 ಬದಲಾವಣೆ ತಯಾರಕರಲ್ಲಿ ಒಬ್ಬರಾಗಿ ಸತ್ಯ ಪ್ರಕಾಶ್ ಆಯ್ಕೆಯಾಗಿದ್ದಾರೆ.

ಚಲನಚಿತ್ರ ನಿರ್ಮಾಣದಲ್ಲಿ ಮತ್ತು ಸಮಾಜದಲ್ಲಿ ಬದಲಾವಣೆಯನ್ನು ತರಲು ಅವರ ನವೀನ ಚಿಂತನೆಗಳಿಗಾಗಿ ಅವರನ್ನು ಚಲನಚಿತ್ರಗಳು ಮತ್ತು ಮಾಧ್ಯಮ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದೆ.
ಡಿ ಸತ್ಯ ಪ್ರಕಾಶ್ ಅವರು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕಡೂರು ಎಂಬಲ್ಲಿ ಉದ್ಯಮಿ ಕೆ ಸಿ ದತ್ತತಾರಿ ಮತ್ತು ಗೃಹಿಣಿ ಗೀತಾ ದಂಪತಿಗೆ ಜನಿಸಿದರು. ಕಡೂರು, ಹಾಸನ, ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಪೂರೈಸಿದರು.

ಶಿವಮೊಗ್ಗ ಡಿವಿಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾ ಮುಗಿಸಿದ ನಂತರ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಲು ಬೆಂಗಳೂರಿಗೆ ತೆರಳಿದರು. ಅವರು ಲೀಗ್ ಹಂತದ ಪಂದ್ಯಗಳು ಮತ್ತು ಕ್ರೀಡಾಕೂಟಗಳ ಭಾಗವಾಗಿದ್ದರು.

ಡಿ ಸತ್ಯ ಪ್ರಕಾಶ್ ಟಿ.ಎಸ್. ನಾಗಭರಣದೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಡಾ.ವಿಷ್ಣುವರ್ಧನ್ ನಟಿಸಿದ ನಮ್ ಯಜಮನ್ರು ಮತ್ತು ಕಮ್‌ಸಾಲೆ ಕೈಸಲೆ ಸೇರಿದಂತೆ ಚಿತ್ರಗಳಿಗೆ ಸಹಾಯ ಮಾಡಿದರು. ಅವರ ಐದು ವರ್ಷಗಳ ಇಂಟರ್ನ್‌ಶಿಪ್‌ನಲ್ಲಿ ಅವರು ಸಾಹಿತ್ಯವನ್ನು ಬರೆಯಲು ಸಂಗೀತ ನಿರ್ದೇಶಕರಾದ ವಿ. ಮನೋಹರ್ ಅವರೊಂದಿಗೆ ಸಹಕರಿಸಿದರು ಮತ್ತು ವಿವಿಧ ಸ್ಕ್ರಿಪ್ಟ್‌ಗಳಿಗೆ ಸಂಭಾಷಣೆ ಬರೆಯುವಲ್ಲಿಯೂ ತೊಡಗಿಸಿಕೊಂಡಿದ್ದರು.

ಜಯನಗರ 4ನೇ ಬ್ಲಾಕ್
ಜಯನಗರ 4ನೇ ಬ್ಲಾಕ್ ಒಬ್ಬ ನಟ, ಹೂಗಾರ ಮತ್ತು ನಿವೃತ್ತ ಶಾಲಾ ಶಿಕ್ಷಕರ ನಡುವಿನ ಸ್ನೇಹದ ಸುತ್ತ ಸುತ್ತುವ ಕಥೆಯಾಗಿದೆ. ಇದು ಅಪರಿಚಿತರ ನಡುವಿನ ಸಂಬಂಧಗಳ ಸೌಂದರ್ಯವನ್ನು ಪರಿಶೋಧಿಸುತ್ತದೆ ಮತ್ತು ಜಯನಗರ 4 ನೇ ಬ್ಲಾಕ್ ನಿರ್ಜೀವ ಸ್ಥಳದಲ್ಲಿ ಸಂತೋಷವನ್ನು ಮರುಶೋಧಿಸುವ ಅವರ ಪ್ರಯಾಣವನ್ನು ಅನ್ವೇಷಿಸುತ್ತದೆ.

ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು, ತಪ್ಪಾಗಿ ಅರ್ಥೈಸಿಕೊಂಡಿರುವ ಸಮಾಜದಲ್ಲಿ ಶುದ್ಧ ಉದ್ದೇಶಗಳ ಅಸ್ತಿತ್ವವನ್ನು ಎತ್ತಿ ತೋರಿಸುತ್ತದೆ. ಸ್ಕ್ರಿಪ್ಟ್ ಅನ್ನು ನಾಯಕ ನಟ ಧನಂಜಯ ಬರೆದಿದ್ದಾರೆ; ಪ್ರಕಾಶ್ ಅವರ ಚಿತ್ರಕಥೆ ಮತ್ತು ನಿರ್ದೇಶನ. ಚಲನಚಿತ್ರವು ಯೂಟ್ಯೂಬ್‌ನಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿತು ಮತ್ತು ಚಲನಚಿತ್ರೋತ್ಸವಗಳಲ್ಲಿ ಪ್ರಶಂಸೆಯನ್ನು ಗಳಿಸಿತು.

ರಾಮ ರಾಮ ರೇ
ರಾಮ ರಾಮ ರೇ… ಸತ್ಯ ಪ್ರಕಾಶ್ ಅವರ ಚೊಚ್ಚಲ ವಾಣಿಜ್ಯ ಚಿತ್ರ. 21 ಅಕ್ಟೋಬರ್ 2016 ರಂದು ಬಿಡುಗಡೆಯಾಯಿತು, ಇದನ್ನು ಸತ್ಯ ಪ್ರಕಾಶ್ ಬರೆದು ನಿರ್ದೇಶಿಸಿದ್ದಾರೆ. ಇದು ಮರಣದಂಡನೆ ಶಿಕ್ಷೆಯಲ್ಲಿರುವ ಅಪರಾಧಿಯ ಕಥೆ. ಚಲನಚಿತ್ರವನ್ನು 2018 ರಲ್ಲಿ ತೆಲುಗಿಗೆ ಆಟಗದರ ಶಿವ ಎಂದು ರಾಕ್‌ಲೈನ್ ವೆಂಕಟೇಶ್ ರಿಮೇಕ್ ಮಾಡಿದ್ದಾರೆ.

ಒಂದಲ್ಲಾ ಎರಡಲ್ಲಾ ಏಳು ವರ್ಷದ ಹುಡುಗ ಸಮೀರ ಮತ್ತು ಅವನ ಮುದ್ದಿನ ಹಸು ಬಾನು. ತನ್ನ ಕಳೆದುಹೋದ ಹಸುವಿನ ಹುಡುಕಾಟದಲ್ಲಿ ಹುಡುಗನ ಪ್ರಯಾಣ, ನಗರದಾದ್ಯಂತ ಪ್ರಯಾಣಿಸುವಾಗ ಮತ್ತು ಸಹಾಯ ಮಾಡುವ ನೆಪದಲ್ಲಿ ಹೊಸ ಜನರನ್ನು ಭೇಟಿಯಾಗುವುದು. ಈ ಚಲನಚಿತ್ರವು ಮಾನವ ಸ್ವಭಾವದ ಸಂಕೀರ್ಣತೆಗಳನ್ನು ಮತ್ತು ಸ್ವಾರ್ಥದಿಂದ ಮರೆಮಾಚಲ್ಪಟ್ಟ ಮುಗ್ಧತೆ ಮತ್ತು ಸಹಾನುಭೂತಿಯಂತಹ ಗುಣಗಳನ್ನು ಅನ್ವೇಷಿಸಲು ಪ್ರಯತ್ನಿಸುತ್ತದೆ. ಕಥೆಯು ತೆರೆದುಕೊಳ್ಳುತ್ತಿದ್ದಂತೆ, ನಕಾರಾತ್ಮಕವಾಗಿ ಚಿತ್ರಿಸಿದ ಜನರೊಳಗಿನ ಸಕಾರಾತ್ಮಕ ಆಲೋಚನೆಗಳನ್ನು ಸಹ ಇದು ಅನಾವರಣಗೊಳಿಸುತ್ತದೆ.

ಮ್ಯಾನ್ ಆಫ್ ದಿ ಮ್ಯಾಚ್
ಮ್ಯಾನ್ ಆಫ್ ದಿ ಮ್ಯಾಚ್ ಡಿ. ಸತ್ಯ ಪ್ರಕಾಶ್ ಅವರ ಇತ್ತೀಚಿನ ಸಾಹಸವಾಗಿದೆ. ಇದನ್ನು ಸತ್ಯ ಮತ್ತು ಮಯೂರ ಪಿಕ್ಚರ್ಸ್ ಸಹಯೋಗದೊಂದಿಗೆ ಕನ್ನಡದ ಸೂಪರ್‌ಸ್ಟಾರ್, ಪುನೀತ್ ರಾಜ್‌ಕುಮಾರ್ ಅವರ ಕಂಪನಿಯಾದ PRK ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿದೆ. ಈ ಚಲನಚಿತ್ರವು ಆಡಿಷನ್‌ಗೆ ಕರೆದ ನಿರ್ದೇಶಕರನ್ನು ಅನುಸರಿಸುತ್ತದೆ ಮತ್ತು ಆಡಿಷನ್‌ಗೆ ಹಾಜರಾದ ಕಲಾವಿದರ ನಡುವೆ ಘರ್ಷಣೆಯನ್ನು ಸೃಷ್ಟಿಸುವ ಮೂಲಕ ಚಲನಚಿತ್ರವನ್ನು ನಿರ್ಮಿಸುತ್ತದೆ.

ಜೆಸಿ ಮೋಹನ್ ಕಲ್ಪತರು ಅವರು ಮ್ಯಾನ್ ಆಫ್ ದಿ ಮ್ಯಾಚ್ ಚಲನಚಿತ್ರದ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ರಘು ಗುಂಡ್ಲು , ನವೀನ್ ತಲಾರಿ, ಸ್ಮಿತಾ ಮೋಹನ್, ಸ್ವಪ್ನ ಸಂತೋಷ್, ಕೀರ್ತನ, ಜೀವನ್, ಪ್ರಸಾದ್, ಜೆಸಿಐ ಸದಸ್ಯರು ಉಪಸ್ಥಿತರಿದ್ದರು.

ಬ್ಯಾಡ್ಮಿಂಟನ್ ಸ್ಪರ್ಧೆ ಥಾಮಸ್ ಕಪ್ ವಿಜೇತ ಭಾರತ

ಉತ್ತಮ ಆಟದಿಂದ ಭಾರತದ ಪುರುಷರ ಬ್ಯಾಡ್ಮಿಂಟನ್​ ತಂಡ ಪ್ರಪ್ರಥಮ ಬಾರಿಗೆ ಪ್ರತಿಷ್ಠಿತ ಥಾಮಸ್​ ಕಪ್​ ಚಾಂಪಿಯನ್​ ಪಟ್ಟಕ್ಕೇರುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.

ಟೂರ್ನಿಯಲ್ಲಿ ಇದೇ ಮೊದಲ ಬಾರಿ ಫೈನಲ್​ ತಲುಪಿದ್ದ ಭಾರತದ ತರುಣರು ಭಾನುವಾರ ನಡೆದ ನಿರ್ಣಾಯಕ ಹಣಾಹಣಿಯಲ್ಲಿ 14 ಬಾರಿಯ ಚಾಂಪಿಯನ್​ ಇಂಡೋನೇಷ್ಯಾವನ್ನು 3-0 ಅಂತರದಿಂದ ಬಗ್ಗುಬಡಿಯುವ ಮೂಲಕ ಹೊಸ ಚರಿತ್ರೆ ಬರೆದರು.

ವಿಶ್ವ ಚಾಂಪಿಯನ್​ಷಿಪ್​ ಪದಕ ವಿಜೇತರಾದ ಲಕ್ಷ್ಯ ಸೇನ್​, ಕೆ. ಶ್ರೀಕಾಂತ್​ ಸಿಂಗಲ್ಸ್​ ವಿಭಾಗಗಳಲ್ಲಿ ಜಯ ದಾಖಲಿಸಿದರೆ, ಡಬಲ್ಸ್​ನಲ್ಲಿ ಚಿರಾಗ್​ ಶೆಟ್ಟಿ&ಸಾತ್ವಿಕ್​ ಸಾಯಿರಾಜ್​ ವಿಜಯ ತಂದುಕೊಟ್ಟರು.

ಪ್ರಾರಂಭಿಕ ಸಿಂಗಲ್ಸ್​ ಪಂದ್ಯದಲ್ಲಿ ಲಕ್ಷ್ಯ ಸೇನ್​ 8&21, 21&17, 21&16 ರಿಂದ ಅಂಥೋನಿ ಸಿನಿಸುಕ ಗಿನ್ಟಿಂಗ್​ ಅವರನ್ನು 1 ಗಂಟೆ 5 ನಿಮಿಷಗಳಲ್ಲಿ ಮಣಿಸಿ ಭಾರತಕ್ಕೆ 1&0 ಮುನ್ನಡೆ ತಂದುಕೊಟ್ಟರು. ಡಬಲ್ಸ್​ ಪಂದ್ಯದಲ್ಲಿ ಸಾತ್ವಿಕ್​ಸಾಯಿರಾಜ್​-ಚಿರಾಗ್​ ಶೆಟ್ಟಿ 18&21, 23&21, 21&19 ರಿಂದ ಮೊಹಮದ್​ ಅಸಾನ್​&ಕೆವಿನ್​ ಸಂಜಯ ಸುಕಮುಲ್ಜೊ ಜೋಡಿಯನ್ನು 73 ನಿಮಿಷಗಳಲ್ಲಿ ಸೋಲಿಸಿದರು.
ಭಾರತದ ಸ್ಟಾರ್​ ಷಟ್ಲರ್​ ಕೆ. ಶ್ರೀಕಾಂತ್​ 21&15, 23&21 ರಿಂದ ಜೊನಾಥನ್​ ಕ್ರಿಸ್ಟಿ ಅವರನ್ನು 48 ನಿಮಿಷಗಳಲ್ಲಿ ಮಣಿಸಿ ಭಾರತಕ್ಕೆ ಹಿರಿಮೆ ತಂದರು.

1979ರಲ್ಲಿ ಆರಂಭಗೊಂಡ ಥಾಮಸ್​ ಕಪ್​ ಟೂರ್ನಿಯಲ್ಲಿ ಭಾರತ ಈ ಹಿಂದೆ ಫೈನಲ್​ ಹಂತಕ್ಕೂ ತಲುಪಿರಲಿಲ್ಲ. ಹೀಗಾಗಿ ಮೊದಲ ಯತ್ನದಲ್ಲೇ ಚಾಂಪಿಯನ್​ ಪಟ್ಟಕ್ಕೇರಿದ್ದು ಅವಿಸ್ಮರಣೀಯ ಸಾಧನೆಯೆನಿಸಿತು. ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಬಲಾಢ್ಯ ಡೆನ್ಮಾರ್ಕ್​ ಸವಾಲನ್ನು ಹೊಸಕಿಹಾಕಿತ್ತು. ಥಾಮಸ್​ ಕಪ್​ಗೆ ಸಮಾನಾಂತರವಾಗಿ ನಡೆಯುವ ಉಬೆರ್​ ಕಪ್​ನಲ್ಲಿ ಭಾರತದ ಮಹಿಳೆಯರು ಈ ಹಿಂದೆ 2 ಬಾರಿ ಕಂಚಿನ ಪದಕ ಜಯಿಸಿದ್ದಾರೆ.

ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದಿಸಿದ್ದಾರೆ. ‘ಭಾರತ ಬ್ಯಾಡ್ಮಿಂಟನ್​ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ನಿಮ್ಮ ಸಾಧನೆ ಇಡೀ ದೇಶಕ್ಕೆ ಪ್ರೇರಣೆಯಾಗಿದ್ದು, ಮುಂದಿನ ಟೂರ್ನಿಗಳಿಗೂ ಶುಭವಾಗಲಿ. ತಂಡದ ಸಾಧನೆ ಭವಿಷ್ಯದ ಯುವ ಕ್ರೀಡಾಪಟುಗಳ ಪಾಲಿಗೆ ಸ್ಫೂರ್ತಿಯಾಗಲಿದೆ’ ಎಂದು ಪ್ರಧಾನಿ ಟ್ವೀಟಿಸಿದ್ದಾರೆ.

ತಂಡದ ಸದಸ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಖುದ್ದು ಅಭಿನಂದಿಸಿದ ಮೋದಿ, ಆಟಗಾರರನ್ನು ತಮ್ಮ ನಿವಾಸಕ್ಕೂ ಆಹ್ವಾನಿಸಿದ್ದಾರೆ. ಶೂಟರ್​ ಅಭಿನವ್​ ಬಿಂದ್ರಾ, ಭಾರತೀಯ ಬ್ಯಾಡ್ಮಿಂಟನ್​ ಸಂಸ್ಥೆ ಅಧ್ಯಕ್ಷ ಹಿಮಂತಾ ಬಿಸ್ವಾ ಶರ್ಮ, ಕ್ರಿಕೆಟಿಗ ವಿರಾಟ್​ ಕೊಹ್ಲಿ, ಷಟ್ಲರ್​ ಸೈನಾ ನೆಹ್ವಾಲ್​, ನಟಿ ತಾಪ್ಸಿ ಪನ್ನು, ಸಂಸದ ಗೌತಮ್​ ಗಂಭೀರ್​ ಅಭಿನಂದನೆ ಸಲ್ಲಿಸಿದ್ದಾರೆ.

ಥಾಮಸ್​ ಕಪ್​ ವಿಜೇತ ಭಾರತ ತಂಡಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ 1 ಕೋಟಿ ರೂ. ಬಹುಮಾನ ಘೋಷಿಸಿದೆ. ‘ಇತಿಹಾಸ ಬರೆದ ಷಟ್ಲರ್​ಗಳಿಗೆ ಅಭಿನಂದನೆಗಳು. ಮಲೇಷ್ಯಾ, ಡೆನ್ಮಾರ್ಕ್​ ಹಾಗೂ ಇಂಡೋನೇಷ್ಯಾ ತಂಡಗಳ ಸವಾಲನ್ನು ಮೀರಿ ಭಾರತ ಈ ಸಾಧನೆ ಮಾಡಿದೆ. ಇಂಥ ತಂಡಕ್ಕೆ ಒಂದು ಕೋಟಿ ಬಹುಮಾನ ಘೋಷಿಸುತ್ತಿದ್ದೇನೆ’ ಎಂದು ಕೇಂದ್ರ ಕ್ರೀಡಾಸಚಿವ ಅನುರಾಗ್​ ಠಾಕೂರ್​ ತಿಳಿಸಿದ್ದಾರೆ.

ಬಿಜೆಪಿಯು ಕಾಂಗ್ರೆಸ್ ಗಿಂತ ಉತ್ತಮ ಸಂವಹನ ಕ್ಷೇತ್ರ ಹೊಂದಿದೆ-ರಾಹುಲ್ ಗಾಂಧಿ

0

ಕಾಂಗ್ರೆಸ್‌ ಪಕ್ಷ ಸಾಮಾನ್ಯ ಜನತೆಯೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳುತ್ತಿದೆ ಎಂದು ಭಾವಿಸಿದ್ದೇನೆ. ಇದನ್ನು ಸರಿಪಡಿಸಲು ತಾವೇ ಜನ ಬಳಿ ತೆರಳಬೇಕು. ಇದಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಪಾದಾಯಾತ್ರೆ ಕೈಗೊಳ್ಳುವುದಾಗಿ ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಅವರು ಹೇಳಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ನವಸಂಕಲ್ಪ ಶಿಬಿರದಲ್ಲಿ ರಾಹುಲ್‌ ಗಾಂಧಿ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ಕಾಂಗ್ರೆಸ್‌ ಪಕ್ಷದೊಳಗಿನ ಆಂತರಿಕ ವಿಚಾರಗಳನ್ನು ಬಿಟ್ಟುಕೊಡುತ್ತಿರುವುದರಿಂದ ಎದುರಾಳಿ ಪಕ್ಷಗಳಿಂದ ದಾಳಿಗೆ ಒಳಗಾಗುತ್ತಿದೆ. ಅಲ್ಲದೆ ಸಾಮಾನ್ಯ ಜನರ ಜೊತೆಗೆ ಸಂಪರ್ಕ ಕಳೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಒಪ್ಪಿಕೊಂಡಿದ್ದಾರೆ.

ಜನ ಸಾಮಾನ್ಯರ ಜೊತೆಗೆ ನಮ್ಮ ಸಂಪರ್ಕ ಕಡಿತಗೊಂಡಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು. ಹಾಗೂ ಅದನ್ನು ಪುನಃ ಮರು ಜೋಡಿಸಲು ಕಠಿಣ ಪರಿಶ್ರಮ ಪಡಬೇಕು. ಜನರಿಗೆ ಕಾಂಗ್ರೆಸ್‌ ಪಕ್ಷ ದೇಶವನ್ನು ಮುನ್ನಡೆಸಬಲ್ಲದು ಎನ್ನುವುದು ಗೊತ್ತಿದೆ ಎಂದು 400 ಕ್ಕೂ ಹೆಚ್ಚಿದ್ದ ಕಾರ್ಯಕರ್ತರ ಮುಂದೆ ರಾಹುಲ್‌ ತಿಳಿಸಿದರು.

ಇನ್ನು ಜನರ ಜೊತೆ ಸಂಪರ್ಕ ಸಾಧಿಸಲು ಯಾವುದೇ ಅಡ್ಡದಾರಿ ಇಲ್ಲ. ಪಕ್ಷ ಅದನ್ನು ಬೆವರು ಹರಿಸಿ ಸಂಪಾದಿಸಬೇಕು. ಇದಕ್ಕಾಗಿ ರೈತರು ಮತ್ತು ಕೂಲಿ ಕಾರ್ಮಿಕರ ಜೊತೆ ಒಂದೆರಡು ದಿನಗಳಲ್ಲ, ತಿಂಗಳ ಕಾಲ ಕಳೆಯಿರಿ ಎಂದು ಪಕ್ಷದ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಮನವಿ ಮಾಡಿದರು.

ತಾವೂ ಕೂಡ ಜೊತೆಗೂಡಿ ಬಿಜೆಪಿ ವಿರುದ್ಧ ಹೋರಾಟ ನಡೆಸುವುದಾಗಿ ಸದಸ್ಯರಿಗೆ ಭರವಸೆ ನೀಡಿದರು.

ಕಾಂಗ್ರೆಸ್‌ ದೇಶದ ಅಸಾಧಾರಣ ಮತ್ತು ಪ್ರಾಥಮಿಕ ರಾಷ್ಟ್ರೀಯ ವಿರೋಧ ಪಕ್ಷವಾಗಿ ತನ್ನನ್ನು ತಾನು ಬಲಪಡಿಸಿಕೊಳ್ಳುವ ಅಗತ್ಯವಿದೆ ಎಂದ ರಾಹುಲ್, ಪ್ರಾದೇಶಿಕ ಪಕ್ಷಗಳಿಗೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ನಂತೆ ಹೋರಾಡಲು ಸಾಧ್ಯವಿಲ್ಲ, ಏಕೆಂದರೆ ಇದು ಸಿದ್ಧಾಂತಗಳ ಹೋರಾಟವಾಗಿದೆ. ಬಿಜೆಪಿ ಯಾವಾಗಲೂ ಕಾಂಗ್ರೆಸ್ ಬಗ್ಗೆ ಮಾತನಾಡುತ್ತದೆ ಹೊರತು ಪ್ರಾದೇಶಿಕ ಪಕ್ಷಗಳ ಬಗ್ಗೆ ಅಲ್ಲ. ಏಕೆಂದರೆ ಅವುಗಳು ಸಿದ್ಧಾಂತವನ್ನು ಹೊಂದಿಲ್ಲದ ಕಾರಣ ಅವರನ್ನು ಸೋಲಿಸಲು ಸಾಧ್ಯವಿಲ್ಲ ಅವರಿಗೆ ಚೆನ್ನಾಗಿ ತಿಳಿದಿದೆ ಎಂದರು.

ಪಕ್ಷದ ಕಾರ್ಯತಂತ್ರದ ಬಗ್ಗೆ ಮಾತನಾಡಿದ ಗಾಂಧಿ, ಬಿಜೆಪಿ ನಮಗಿಂತಲೂ ಉತ್ತಮವಾದ ಕ್ಷೇತ್ರವನ್ನು ಹೊಂದಿದೆ ಎಂದರೆ ಅದು ಸಂವಹನ ಕ್ಷೇತ್ರ. ಬಿಜೆಪಿ ಬಳಿ ಸಾಕಷ್ಟು ಹಣವಿದ್ದು, ಜನರೊಂದಿಗೆ ಉತ್ತಮ ಸಂವಹನ ಸಾಧಿಸುತ್ತಿದೆ. ನಾವು ನಮ್ಮ ಸಂವಹನವನ್ನು ಸುಧಾರಿಸಬೇಕು ಮತ್ತು ಜನರೊಂದಿಗೆ ಸಂಪರ್ಕ ಸಾಧಿಸಬೇಕು ಎಂದು ಅವರು ಹೇಳಿದ್ದಾರೆ.

150 ವರ್ಷಗಳಲ್ಲಿ ಭೂಮಿಯನ್ನ ಶಕ್ತಿಮೀರಿ ಹಾಳುಮಾಡಿದ್ದೇವೆ- ನಾಗೇಶ್ ಹಗ್ಗಡೆ

0

ಪರಿಸರದ ಮೇಲೆ ಮನುಷ್ಯನ ದಬ್ಬಾಳಿಕೆ ಇದೇ ವೇಗದಲ್ಲಿ ಸಾಗಿದರೆ ಉತ್ತರ ಕರ್ನಾಟಕ ದೇಶದ ಮತ್ತೊಂದು ದೊಡ್ಡ ಮರುಭೂಮಿ ಆಗಲಿದೆ.
ಇನ್ನಾದರೂ ನಮ್ಮ ಗಮನವನ್ನು ಭೂಮಿಯ ಕಡೆ ಹರಿಸಬೇಕಿದೆ’ ಎಂದು ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಎಚ್ಚರಿಸಿದರು.

ಚಿತ್ರದುರ್ಗದ ಕ್ರೀಡಾ ಭವನದಲ್ಲಿ ಉಳುಮೆ ಪ್ರತಿಷ್ಠಾನದಿಂದ ಆಯೋಜಿಸಿದ್ದ ‘ಜಾಗತಿಕ ತಾಪಮಾನ ಮತ್ತು ಕೃಷಿ’ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

ತಾಪಮಾನ ಏರಿಕೆಯಿಂದಾಗಿ ಕೆರೆ, ನದಿಗಳು ಬತ್ತುತ್ತಿವೆ. ಬೃಹತ್‌ ಅರಣ್ಯಗಳಲ್ಲಿ ಊಹೆಗೂ ನಿಲುಕದ ರೀತಿ ಬೆಂಕಿ ಕಾಣಿಸಿಕೊಂಡು ಕಾಡು ನಾಶವಾಗುತ್ತಿವೆ. ಅತಿವೃಷ್ಠಿ, ಅನಾವೃಷ್ಠಿ ಉಂಟಾಗುತ್ತಿದೆ. ಈ ಸಮಸ್ಯೆಯಿಂದ ಹೊರ ಬರಬೇಕಾದರೆ ಈಗಿನಿಂದಲೇ ಗಿಡ ಮರಗಳನ್ನು ಬೆಳೆಸಬೇಕು. ಕೆರೆಗಳನ್ನು ಸಂರಕ್ಷಿಸುವ ಕೆಲಸವಾಗಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಎಚ್ಚರಿಸಿದರು.

‘ಮನುಷ್ಯ ವಿಕಾಸದ ಬಳಿಕ ಕೇವಲ 150 ವರ್ಷಗಳಲ್ಲಿ ಭೂಮಿಯನ್ನು ಶಕ್ತಿ ಮೀರಿ ಹಾಳು ಮಾಡಿದ್ದೇವೆ. ಈ ಎಲ್ಲದರ ಪರಿಣಾಮ 10 ವರ್ಷಗಳಲ್ಲಿ ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಭಾರತದ ಮಹಾ ಮರುಭೂಮಿ ಎಂದು ಕರೆಯಲ್ಪಡುವ ‘ಥಾರ್’ ಮರುಭೂಮಿಯಂತೆ ಉತ್ತರ ಕರ್ನಾಟಕ ಭಾಗವೂ ಬದಲಾಗುವ ಸಾಧ್ಯತೆಗಳು ಗೋಚರಿಸುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅಭಿವೃದ್ಧಿ ಹೆಸರಲ್ಲಿ ನದಿಗಳಿಗೆ ಅಣೆಕಟ್ಟು ನಿರ್ಮಾಣ, ವಿದ್ಯುಚ್ಛಕ್ತಿ ಘಟಕಗಳ ಸ್ಥಾಪನೆಯಿಂದ ಸಮುದ್ರಕ್ಕೆ ಸೇರಬೇಕಾದ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇದರಿಂದ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಪ್ರಾಣಿ, ಪಕ್ಷಿ, ಅರಣ್ಯವನ್ನು ವಿವಿಧ ಕಾರಣ ನೀಡಿ ನಾಶ ಮಾಡಲಾಗುತ್ತಿದೆ. ಈ ಎಲ್ಲದರಿಂದ ಶೇ 35ರಷ್ಟು ಜನರಿಗೆ ಪ್ರಯೋಜನವಾಗಿದ್ದು, 65ರಷ್ಟು ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅಭಿವೃದ್ಧಿಯಿಂದ ಹೊಸ ಪ್ರಳಯ ಸೃಷ್ಟಿಯಾಗುತ್ತಿದೆ’ ಎಂದು ಹೇಳಿದರು.

ಪೂರ್ಣಪ್ರಜ್ಞ ಕಾಲೇಜು ಪ್ರಾಚಾರ್ಯ ಗುರುರಾಜ್‌ ಎಸ್‌. ದಾವಣಗೆರೆ ಮಾತನಾಡಿ,

ಸೈನಿಕರಂತೆ ರೈತರ ಸೇವೆಯನ್ನು ‘ರಾಷ್ಟ್ರೀಯ ಸೇವೆ’ ಎಂದು ಸರ್ಕಾರ ಘೋಷಿಸಬೇಕು. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಕೃಷಿ ವಲಯಕ್ಕೆ ಮೀಸಲಿಡಬೇಕು. ಆಗ ಮಾತ್ರ ಆಹಾರದ ಸಮಸ್ಯೆ ನೀಗಿ ರೈತರ ಬದುಕು ಹಸನಾಗುತ್ತದೆ’ ಎಂದು ತಿಳಿಸಿದರು.

‘ಒಂದು ಕಾಲದಲ್ಲಿ ಸಿರಿಧಾನ್ಯಗಳ ಬೀಡಾಗಿದ್ದ ಚಿತ್ರದುರ್ಗದಲ್ಲಿ ಈಗ ಸಿರಿಧಾನ್ಯ ಹುಡುಕಬೇಕಾದ ಸ್ಥಿತಿ ಎದುರಾಗಿದೆ. ಪರಿಸ್ಥಿತಿ ಹೀಗೆ ಸಾಗಿದರೆ 20 ವರ್ಷದಲ್ಲಿ ‘ಕೃಷಿ’ ಪದವನ್ನು ನಾವೆಲ್ಲ ಮರೆಯಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಸರ್ಕಾರಗಳು ಕೃಷಿ ನಾಶ ಮಾಡಲು ಕಾನೂನು ರೂಪಿಸುತ್ತಿವೆ. ಈಗಾಗಲೇ 40 ಕೋಟಿ ಗ್ರಾಮೀಣ ಜನರು ನಗರ ಸೇರಿದ್ದಾರೆ. ಅವರ ಮಕ್ಕಳಿಗೆ ಕೃಷಿಯನ್ನು ಕಲಿಸದೆ ಕೈಗಾರಿಕೆಗಳಿಗೆ ನೂಕುತ್ತಿದ್ದಾರೆ ಎಂದರು.

ಸಂವಾದ ನಡೆಸಿಕೊಟ್ಟ ಪತ್ರಕರ್ತ ಗಾಣಧಾಳು ಶ್ರೀಕಂಠ, ‘ಜಾಗತಿಕ ತಾಪಮಾನ ಮತ್ತು ಕೃಷಿ ಬಿಕ್ಕಟ್ಟು ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಚರ್ಚೆಯಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಕೃಷಿ ತಜ್ಞ ಟಿ.ಜಿ.ಎಸ್‌. ಅವಿನಾಶ್‌, ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ, ಉಳುಮೆ ಸಂಘಟನೆಯ ಉಜನಿಗೌಡ ಇದ್ದರು.

ಸಂಪುಟ ವಿಸ್ತರಣೆ ಇನ್ನೆರಡು ದಿನಗಳಲ್ಲಿ ತೀರ್ಮಾನ

0

ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಹೇಳಿಕೆ ನೀಡಿದ್ದಾರೆ. ಕೇಂದ್ರ ನಾಯಕರನ್ನು ಭೇಟಿ ಮಾಡಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವನ್ನು ಎರಡು ದಿನದಲ್ಲಿ ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂಧ್ರ ನಾಯಕರನ್ನು ಭೇಟಿ ಮಾಡಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವನ್ನು ಎರಡು ದಿನದಲ್ಲಿ ಅಂತಿಮಗೊಳಿಸಲಾಗುವುದು, ಒಂದು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ಬಿ.ವೈ ವಿಜಯೇಂದ್ರ ಅವರಿಗೆ ಎಂಎಲ್ ಸಿ ಸ್ಥಾನ ನೀಡಿ ಮಂತ್ರಿ ಮಾಡುವ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣೆ: ಹೈಕಮಾಂಡ್ ಗೆ ಕಳಿಸಿದ ಪಟ್ಟಿಯಲ್ಲಿ ವಿಜಯೇಂದ್ರ ಹೆಸರು

0

ವಿಧಾನ ಪರಿಷತ್ ಚುನಾವಣೆಗೆ ನನ್ನ ಮತ್ತು ವಿಜಯೇಂದ್ರ ಸೇರಿದಂತೆ 20 ಹೆಸರುಗಳನ್ನು ರಾಜ್ಯ ಬಿಜೆಪಿ ಘಟಕವು ಪಕ್ಷದ ಹೈಕಮಾಂಡ್ ಶಿಫಾರಸು ಮಾಡಿದೆ ಎಂದು ಬಿಜೆಪಿ ಮುಖಂಡ ಲಕ್ಷ್ಮಣ ಸವದಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸವದಿ ಅವರು, ವಿಧಾನ ಪರಿಷತ್ ಚುನಾವಣೆಗೆ ನನ್ನ ಮತ್ತು ವಿಜಯೇಂದ್ರ ಸೇರಿದಂತೆ 20 ಹೆಸರುಗಳನ್ನು ರಾಜ್ಯ ಬಿಜೆಪಿ ಘಟಕವು ಪಕ್ಷದ ಹೈಕಮಾಂಡ್ ಶಿಫಾರಸು ಮಾಡಿದ್ದು, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಯಾರನ್ನೂ ಕಣಕ್ಕಿಳಿಸಬೇಕು ಎಂಬುದರ ಬಗ್ಗೆ ರಾಷ್ಟ್ರೀಯ ನಾಯಕರು ಕೂಲಂಕಷವಾಗಿ ಪರಿಶೀಲಿಸಿದ ನಂತರ ತೀರ್ಮಾನಕ್ಕೆ ಬರುತ್ತಾರೆ. ನಾವು ಪಕ್ಷದ ಶಿಸ್ತಿನ ಕಾರ್ಯಕರ್ತರಾಗಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದರು.

ಪಾಕ್ ನಲ್ಲಿ ಈರ್ವರು ಸಿಖ್ ವ್ಯಕ್ತಿಗಳ ಹತ್ಯೆ: ಭಾರತ ತೀವ್ರ ಖಂಡನೆ

0

ಪಾಕಿಸ್ತಾನದಲ್ಲಿ ಸಿಖ್ ಸಮುದಾಯದ ಇಬ್ಬರು ನಾಗರಿಕರ ಹತ್ಯೆಗೆ ಭಾರತ ತೀವ್ರವಾಗಿ ಖಂಡಿಸಿದ್ದು, ಇದು ಆಘಾತಕಾರಿ ಮತ್ತು ಶೋಚನೀಯ ಎಂದು ಹೇಳಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಕಿಸ್ತಾನ ಸರ್ಕಾರದೊಂದಿಗೆ ತೀವ್ರ ಪ್ರತಿಭಟನೆಯನ್ನು ದಾಖಲಿಸಿದ್ದು, ಹತ್ಯೆಯ ಬಗ್ಗೆ ತನಿಖೆ ನಡೆಸುವಂತೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದೆ.

ಅಫ್ಘಾನಿಸ್ತಾನದ ಗಡಿಯಲ್ಲಿರುವ ಪ್ರಕ್ಷುಬ್ಧ ಪ್ರಾಂತ್ಯದ ದೇಶದ ವಾಯುವ್ಯ ಖೈಬರ್ ಪಖ್ತುಂಖ್ವಾದಲ್ಲಿ ಭಾನುವಾರ ಇಬ್ಬರು ಸಿಖ್ ಉದ್ಯಮಿಗಳನ್ನು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಸಲ್ಜೀತ್ ಸಿಂಗ್(42) ಮತ್ತು ರಂಜೀತ್ ಸಿಂಗ್ (38) ಬೆಳಿಗ್ಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದಾಳಿ ಮಾಡಿದ ನಂತರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸಿವೆ.

ನಾವು ಪೇಶಾವರದಲ್ಲಿ ಅಪರಿಚಿತ ಶಸ್ತ್ರಧಾರಿಗಳಿಂದ ಇಬ್ಬರು ಸಿಖ್ ವ್ಯಾಪಾರಿಗಳನ್ನು ಕ್ರೂರವಾಗಿ ಕೊಂದ ವರದಿಗಳನ್ನು ನಾವು ನೋಡಿದ್ದೇವೆ. ದುಃಖಕರವೆಂದರೆ, ಇದು ಮೊದಲ ಪ್ರಕರಣ ಅಥವಾ ಅಪರೂಪದ ಘಟನೆಯಲ್ಲ ಎಂದು ಎಂಇಎ ವಕ್ತಾರರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಆಘಾತಕಾರಿ ಮತ್ತು ಶೋಚನೀಯ ಘಟನೆಯಲ್ಲಿ ಭಾರತೀಯ ನಾಗರಿಕ ಸಮಾಜ ಮತ್ತು ಸಿಖ್ ಸಮುದಾಯದ ವಿವಿಧ ಸ್ತರಗಳಿಂದ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಗುರಿಯಾಗಿಟ್ಟುಕೊಂಡು ನಾವು ಪಾಕಿಸ್ತಾನ ಸರ್ಕಾರದೊಂದಿಗೆ ನಮ್ಮ ಬಲವಾದ ಪ್ರತಿಭಟನೆಯನ್ನು ದಾಖಲಿಸಿದ್ದೇವೆ. ನಾವು ಈ ವಿಷಯವನ್ನು ಪ್ರಾಮಾಣಿಕವಾಗಿ ತನಿಖೆ ಮಾಡಲು ಮತ್ತು ಈ ಶೋಚನೀಯ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ನೀಡುತ್ತೇವೆ. ಪಾಕಿಸ್ತಾನ ಸರ್ಕಾರವು ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಅದರ ಅಲ್ಪಸಂಖ್ಯಾತರ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಹತ್ಯೆಗೀಡಾ ಈ ಇಬ್ಬರು ಸಿಖ್ಖರು ಮಸಾಲೆ ವ್ಯಾಪಾರದಲ್ಲಿ ಮಾಡಿಕೊಂಡಿದ್ದರು ಮತ್ತು ಪೇಶಾವರದಿಂದ ಸುಮಾರು 17 ಕಿಮೀ ದೂರದಲ್ಲಿರುವ ಸರ್ಬಂದ್‌ನ ಬಟಾ ತಾಲ್ ಬಜಾರ್‌ನಲ್ಲಿ ಅಂಗಡಿಗಳನ್ನು ಹೊಂದಿದ್ದರು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈ ಹತ್ಯೆಯ ಹೊಣೆಯನ್ನು ಇದುವರೆಗೆ ಯಾವುದೇ ಗುಂಪು ಹೊತ್ತುಕೊಂಡಿಲ್ಲ. ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಅವರು ದಾಳಿಯನ್ನು ಖಂಡಿಸಿದ್ದಾರೆ ಮತ್ತು ಅಪರಾಧಿಗಳನ್ನು ಬಂಧಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಘಟನೆಯನ್ನು ಖಂಡಿಸಿ, ಖೈಬರ್ ಪಖ್ತುನ್ಖ್ವಾ ಮುಖ್ಯಮಂತ್ರಿ ಮಹಮೂದ್ ಖಾನ್ ಅವರಿಗೆ ತಕ್ಷಣದ ಬಂಧನ ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುವಂತೆ ಸೂಚಿಸಿದರು. ನಾಗರಿಕರ, ವಿಶೇಷವಾಗಿ ಮುಸ್ಲಿಮೇತರರ ಜೀವ ಮತ್ತು ಆಸ್ತಿಗಳ ರಕ್ಷಣೆಗೆ ಕ್ರಮಗಳನ್ನು ಖಚಿತಪಡಿಸಿಕೊಳ್ಳುವಂತೆ ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು. ಮೃತರ ಕುಟುಂಬಕ್ಕೆ ಷರೀಫ್ ಸಂತಾಪ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದೊಂದಿಗಿನ ದ್ವೇಷವೇ ಈ ಭಯೋತ್ಪಾದನೆಯ ಹಿಂದೆ ಕಾರಣ ಎಂದು ಅವರು ಗಮನಿಸಿದರು ಮತ್ತು ದೇಶದ ಶತ್ರುಗಳನ್ನು ತೊಡೆದುಹಾಕಲು ನಿರ್ಧರಿಸಿದರು ಎಂದು ವರದಿ ಹೇಳಿದೆ.