ಬುದ್ಧ ಪೂರ್ಣಿಮಾ ದೇಶದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಬೌದ್ಧಧರ್ಮದ ಅನುಯಾಯಿಗಳಿಗೆ ಇದು ವಿಶಿಷ್ಟವಾದ ಆಚರಣೆ.
ಇದು ಗೌತಮ ಬುದ್ಧನ ಜನನ, ಜ್ಞಾನೋದಯ ಮತ್ತು ಅಶಾಶ್ವತೆಯನ್ನು ಸೂಚಿಸುತ್ತದೆ. ಈ ಹಬ್ಬವು ಮೊದಲ ಹುಣ್ಣಿಮೆಯ ದಿನದಂದು ಬರುತ್ತದೆ. ಅಂದರೆ, ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಹಿಂದೂ ತಿಂಗಳ ವೈಶಾಖ ಪೂರ್ಣಿಮೆಯ ದಿನ.
ಬುದ್ಧ ಪೂರ್ಣಿಮೆಯಂದು ಬೌದ್ಧ ಧರ್ಮವನ್ನು ನಂಬುವ ಜನರು ಎಲ್ಲೇ ಇದ್ದರೂ ಈ ದಿನದಂದು ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ. ದೀಪವನ್ನು ಬೆಳಗಿಸಿ ಮತ್ತು ಭಗವಾನ್ ಬುದ್ಧನ ಜನ್ಮದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ.
ಈ ದಿನವನ್ನು ವಿಶ್ವದಾದ್ಯಂತ ಬೌದ್ಧರು ಮತ್ತು ಹಿಂದೂಗಳು ಸ್ಮರಿಸುತ್ತಾರೆ ಮತ್ತು ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ, ಇಂಡೋನೇಷ್ಯಾ ದೇಶಗಳಲ್ಲಿ ಆಚರಿಸುತ್ತಾರೆ. ಶ್ರೀಲಂಕಾದಲ್ಲಿ ಇದನ್ನು ವೆಸಾಕ್ ಎಂದು ಕರೆಯಲಾಗುತ್ತದೆ.ಎಲ್ಲೆಲ್ಲಿ ಬೌದ್ದರಿದ್ದಾರೋ ಅಲ್ಲಿ ಈ ಆಚರಣೆಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.
ಗೌತಮ ಬುದ್ಧನು ಧರ್ಮ (ಕರ್ತವ್ಯ), ಅಹಿಂಸೆ, ಸಾಮರಸ್ಯ ಮತ್ತು ದಯೆಯನ್ನು ಬೋಧಿಸಿದನು. ತನ್ನ 30 ನೇ ವಯಸ್ಸಿನಲ್ಲಿ ತನ್ನ ಲೌಕಿಕ ಆಸ್ತಿ ಮತ್ತು ರಾಜ ವೈಭವವನ್ನು ತೊರೆದು ಸತ್ಯವನ್ನು ಹುಡುಕುವ ಜೀವನವನ್ನು ಅರಸುತ್ತಾ ಹೋದನು.
ಆದರೆ ಒಂದು ರಾತ್ರಿ, ಅವರು ಆಳವಾದ ಧ್ಯಾನದಲ್ಲಿ ಮುಳುಗಿದ್ದಾಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು.
ಹೀಗೆ, 35 ನೇ ವಯಸ್ಸಿನಲ್ಲಿ ಅವರು ಬುದ್ಧರಾದರು. ಅವರು ತಮ್ಮ ಜೀವನದುದ್ದಕ್ಕೂ ಜನರಿಗೆ ಜ್ಞಾನೋದಯದ ಹಾದಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿದರು.
ಬದುಕಿನಲ್ಲಿ ಎಲ್ಲವೂ ಬೇಕು ಎನ್ನುವ ಆಸೆ ದಟ್ಟವಾದಾಗ ಸ್ವಾರ್ಥವೇ ಮೇಲುಗೈ ಪಡೆದು ದುರಾಸೆಯಾಗುತ್ತದೆ.. ಈ ದುರಾಸೆಯೇ ಕೊನೆಗೆ ಮನುಷ್ಯನ ಜೀವನವನ್ನೇ ದುರಾಸೆಯ ಕಡಲಲ್ಲಿ ಮುಳುಗಿಸುತ್ತದೆ. ಇವತ್ತಿನ ನಮ್ಮ ವರ್ತಮಾನದಲ್ಲಿ ಆಸೆಪಡುವ ಮಂದಿ ಯಾರಿಲ್ಲ ಹೇಳಿ?..
ಅಧಿಕಾರ, ಸಂಪತ್ತು ಎಲ್ಲವನ್ನೂ ಅಕ್ರಮವಾಗಿ ಸಂಪಾದಿಸಿ ಕೊನೆಗೆ ಅಶಾಂತಿಯುತ ಬದುಕನ್ನ ನಡೆಸುತ್ತಿರುವುದನ್ನು ನೋಡುತ್ತಿದ್ದೇವೆ.
ಆಸೆಯೇ ದುಃಖಕ್ಕೆ ಮೂಲ ಎಂಬ ಗೌತಮ ಬುದ್ಧನ ಈ ಪರಮ ಸಂದೇಶದ ಸತ್ಯವನ್ನು ನಾವು ಇನ್ನೂ ಅರ್ಥಮಾಡಿಕೊಂಡಿಲ್ಲ.
ಹೀಗಾಗಿಯೇ ಇನ್ನೂ ಸಮಾಜದಲ್ಲಿ ಅಶಾಂತಿಯ ಹೊರತಾಗಿ ಬೇರೆ ಏನನ್ನೂ ನಾವು ಕಾಣಲಾಗುತ್ತಿಲ್ಲ. ಗೌತಮ ಬುದ್ಧನ ಸಂದೇಶವನ್ನ ಅರ್ಥಮಾಡಿಕೊಳ್ಳಬೇಕಿದೆ.
ಅಲ್ಪ ತೃಪ್ತಿಯಿಂದ ಜೀವನ ಸಾಗಿಸುವವರೇ ಪರಮ ಸುಖಿಗಳು.. ಅತಿ ಆಸೆಯನ್ನ ಪಡುವವರೇ ಅತೀ ದುಃಖಿಗಳು. ಈ ವಾಸ್ತವವನ್ನು ನಾವು ಮನಗಂಡಾಗ ಮಾತ್ರ ಬುದ್ಧನ ಸಂದೇಶಕ್ಕೆ ಗೌರವ ಸೂಚಿಸಿದಂತೆ.