Tuesday, March 31, 2026
Tuesday, March 31, 2026
Home Blog Page 1354

ಪತ್ರಕರ್ತರ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ ಕೆ ಲೈವ್ ನ್ಯೂಸ್ ನ ರಂಜನ್

0

ಚಿತ್ರದುರ್ಗದಲ್ಲಿ ನಡೆಯುತ್ತಿರುವ 6 ಜಿಲ್ಲೆಗಳ ಪತ್ರಕರ್ತ ತಂಡಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ತಂಡವು ಸೆಮಿಫೈನಲ್ ಪ್ರವೇಶಿಸಿದೆ.

ಎರಡನೇ ದಿನದ ಇಂದಿನ ಆರಂಭಿಕ ಪಂದ್ಯಾವಳಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಎ ತಂಡದ ವಿರುದ್ಧ ರೋಚಕ ಆಟವಾಡಿದ ಶಿವಮೊಗ್ಗ ತಂಡವು 22 ರನ್ ಗಳಿಂದ ಗೆಲುವು ಸಾಧಿಸಿ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿತು.

ಟಾಸ್ ಗೆದ್ದ ಚಿತ್ರದುರ್ಗ ಎ ತಂಡದ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಪತ್ರಕರ್ತರ ತಂಡ ನಿಗದಿತ ಐದು ಓವರ್ ಗಳಲ್ಲಿ 65 ರನ್ ಗಳನ್ನು ಗಳಿಸಿತು.

ತಂಡದ ನವೀನ್ , ಅಮೋಘ 35 ರನ್ ಗಳನ್ನು, ಲೋಹಿತ್ 28 ಗಳೊಂದಿಗೆ ಎದುರಾಳಿ ತಂಡದ ಬೌಲರ್ ಗಳನ್ನು ದಂಡಿಸಿದರು.

65 ರನ್ ಗಳ ಬೆನ್ನತ್ತಿದ ಚಿತ್ರದುರ್ಗ ಪತ್ರಕರ್ತರ ತಂಡವು ಶಿವಮೊಗ್ಗ ಪತ್ರಕರ್ತರ ತಂಡದ ಆಕಾಶ್ ಅವರ ಮಾರಕ ಬೌಲಿಂಗ್ ಮುಂದೆ ನೆಲಕಚ್ಚಿತು. ಆಕಾಶ್ ಒಂದೆ ಓವರ್ ನಲ್ಲೆ 3 ವಿಕೆಟ್ ಗಳನ್ನು ಬಲಿ ತೆಗೆದುಕೊಳ್ಳುವ ಮುಖಾಂತರ ಚಿತ್ರದುರ್ಗ ತಂಡವನ್ನು ಸೋಲಿನ ದವಡೆಗೆ ನೂಕಿದರು.

ಕೆ ಲೈವ್ ನ್ಯೂಸ್ ನ ರಂಜನ್ ಅವರು ಒಂದೇ ಕೈ ಯಲ್ಲಿ ಚೆಂಡನ್ನು ಕ್ಯಾಚ್ ಹಿಡಿದಿದ್ದಾರೆ.

ಅಂತಿಮವಾಗಿ ಚಿತ್ರದುರ್ಗ ಪತ್ರಕರ್ತರ ತಂಡವು 5 ಓವರ್ ಗಳಲ್ಲಿ 43 ಗಳಿಗೆ ಸೀಮಿತವಾಗಿ‌ ಶಿವಮೊಗ್ಗ ಪತ್ರಕರ್ತರ ತಂಡದ ಮುಂದೆ ಶರಣಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಚಿತ್ರದುರ್ಗ ಶಾಖೆಯು ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯವಹಿಸಿತ್ತು.

ಪದ್ಮಶ್ರೀ ಹೊಸಹಳ್ಳಿ ಕೇಶವಮೂರ್ತಿ ದಿವಂಗತ

0

ಪದ್ಮಶ್ರೀ ಪುರಸ್ಕೃತ ಹೆಸರಾಂತ ಗಮಕ‌ ಕಲಾವಿದ ಹೊ‌ಸಹಳ್ಳಿಯ ಶ್ರೀ ಹೆಚ್. ಆರ್. ಕೇಶವಮೂರ್ತಿ (88 ವರ್ಷಗಳು) ಇನ್ನಿಲ್ಲ. ಇವರು ಕರ್ನಾಟಕದ ಗಮಕ ಲೋಕದ ಹಿರಿಯ ಕಲಾವಿದರಾಗಿದ್ದರು.

ಇತ್ತೀಚೆಗಷ್ಟೇ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ
ಗೌರವಿಸಿತ್ತು. ಗಮಕ ಕಲಾಪ್ರಕಾರಕ್ಕೆ ಕೇಶವ ಮೂರ್ತಿಯವರು ತಮ್ಮ ಧ್ವನಿ ವೈಶಿಷ್ಟ್ಯ ಹಾಗೂ ಪ್ರಸ್ತುತಿಗಳಿಂದ ಹೆಸರಾಗಿದ್ದರು.

ಸದಾ ನಗುಮುಖದಿಂದ ಎಲ್ಲರೊಂದಿಗೆ ಬೆರೆತು
ಜನಪ್ರಿಯರಾಗಿದ್ದರು.
ಕುಮಾರವ್ಯಾಸ ಕವಿಯ ಕರ್ಣಾಟ ಭಾರತ ಕಥಾಮಂಜರಿ ಕಾವ್ಯವನ್ನ ಪೂರ್ಣ ವಾಚನಮಾಡಿ ಸಿದ್ಧಪಡಿಸಿ ಗಮಕ ಕಲಾರಸಿಕರಿಗೆ ಕೇಳಿಸಿಕೊಳ್ಳುವ ಮಹದೋಪಕಾರಮಾಡಿದ್ದಾರೆ.ಅಗಲಿದ ಹಿರಿಯರ ಆತ್ಮಕ್ಕೆ ಶ್ರದ್ಧಾಂಜಲಿ

ಕ್ಷೇತ್ರದ ಸಮಸ್ಯೆಗಳನ್ನ ಸರ್ಕಾರದ ಗಮನಕ್ಕೆ ತರಲು ಅಧಿವೇಶನಕ್ಕೆ ಶಾಸಕರು ಹಾಜರಾಗಬೇಕು- ಪ್ರಸನ್ನ ಕುಮಾರ್

0

ಸಚಿವ ಸ್ಥಾನ ನೀಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಅಧಿವೇಶನಕ್ಕೆ ಗೈರು ಹಾಜರಾಗುವ ಮೂಲಕ ಶಿವಮೊಗ್ಗ ಜನತೆಗೆ ಈಶ್ವರಪ್ಪ ಅವರು ಮೋಸ ಮಾಡುತ್ತಿದ್ದಾರೆ. ಕಳೆದ ಸಲ ಕಾಲು ನೋವಿನ ಸಮಸ್ಯೆ ಹೇಳಿಕೊಂಡು ವಿಧಾನಸಭೆ ಅಧಿವೇಶನಕ್ಕೆ ಹಾಜರಾಗಿ ರಲಿಲ್ಲ. ಅಧಿವೇಶನಕ್ಕೆ ಗೈರಾಗುವ ಮೂಲಕ ಈಶ್ವರಪ್ಪ ಪಕ್ಷಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎನಿಸುತ್ತಿದೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಬೇಕು, ವಿಧಾನಸಭೆಯಲ್ಲಿ ಪ್ರತಿಧ್ವನಿಸಬೇಕು ಉದ್ದೇಶಕ್ಕೆ ಎಂಬ ಕ್ಷೇತ್ರದ ಜನರು ಕೆ. ಎಸ್.ಈಶ್ವರಪ್ಪ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ, ಸಚಿವ ಸ್ಥಾನ ನೀಡಿಲ್ಲವೆಂದು ಅಧಿವೇಶನಕ್ಕೆ ಹಾಜರಾಗದೇ ಮತದಾರರಿಗೆ ಮೋಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಶಿವಮೊಗ್ಗದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಮಳೆಯಿಂದ ಹಾನಿಗೊಳಗಾದವರಿಗೆ ಪರಿಹಾರ ಸಿಕ್ಕಿಲ್ಲ. ಇದರ ಬಗ್ಗೆ ವಿಧಾನಸಭೆಯಲ್ಲಿ ಗಮನ ಸೆಳೆಯಬೇಕಾಗಿರುವುದು ಅವರ ಆದ್ಯ ಕರ್ತವ್ಯ. ಅದನ್ನು ಬಿಟ್ಟು ಸಚಿವ ಸ್ಥಾನಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿ ರುವುದು ಸರಿಯಲ್ಲ ಎಂದು ಹೇಳಿದರು.

ಸಿಬಿಐ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಬಿಪಿ, ಬಿಜೆಪಿಯ ವಿವಿಧ ಮೋರ್ಚಾಗಳಂತೆ ‘ಐಟಿ, ಇಡಿ ಮೋರ್ಚಾ’ ಶುರುವಾಗಿದೆ. ಎಂದು ಲೇವಡಿ ಮಾಡಿದರು. ಈಶ್ವರಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಆದಾಗ ನೋಟು ಎಣಿಸುವ ಮಿಷನ್ ಸಿಕ್ಕಿತ್ತು. ಹಾಗಾದರೆ ಈ ಇಡಿ ಮತ್ತು ಐಟಿ ಅವರಿಗೆ ಈಶ್ವರಪ್ಪ ಕಣ್ಣಿಗೆ ಬಿದ್ದಿಲ್ಲವೇ? ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಸಿಂಗ್, ಪಾಲಿಕೆ ಸದಸ್ಯ ಆರ್ .ಸಿ. ನಾಯ್ಕ, ಪ್ರಮುಖರಾದ ಬೊಮ್ಮನಕಟ್ಟೆ ಮಂಜುನಾಥ್‌, ಬಾಬಣ್ಣ ಇತರರಿದ್ದರು.

ಪಂಜರವ ತೆರೆದು ಬಿಡಿ -ಕವನಸಂಕಲನ ಲೋಕಾರ್ಪಣೆ

0

ವಾಗೀಶ ಆರಾಧ್ಯ ಮಠದವರ ಮೊದಲ ಪ್ರಯತ್ನ ಪಂಜರವ ತೆರೆಯ ತೆರೆದುಬಿಡಿ ಕವನ ಸಂಕಲನದ ಬಿಡುಗಡೆ ಸಮಾರಂಭ ದಿನಾಂಕ 22-12-2022 ನಡೆಯಲಿದೆ.

ಪಂಜರವ ತೆರೆದುಬಿಡಿ ಎಂಬ ಕವನ ಸಂಕಲನವನ್ನು ವಾಗೀಶ ಆರಾಧ್ಯ ಮಠ, ಗಣಿತ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಕಲ್ಮನೆ, ಶಿಕಾರಿಪುರ ತಾಲೂಕು ಇವರು ಒಬ್ಬ ಹವ್ಯಾಸಿ ಬರಹಗಾರರಾಗಿದ್ದಾರೆ. ಇವರ ಕೆಲವು ಕವನಗಳನ್ನ ಕವನ ಸಂಕಲನದ ರೂಪದಲ್ಲಿ ಹೊರತರಬೇಕೆಂಬ ಇಚ್ಛೆಯಿಂದ ಪಂಜರವ ತೆರೆದುಬಿಡಿ ಎಂಬ ಕವನ ಸಂಕಲನವನ್ನು ಮುದ್ರಣ ಮಾಡಿಸಿದ್ದಾರೆ. ಇದನ್ನು ಲೋಕಾರ್ಪಣೆ ಮಾಡಬೇಕೆಂಬ ಉದ್ದೇಶದಿಂದ ಡಿಸೆಂಬರ್ 22 ಗುರುವಾರದಂದು ಸಂಜೆ 6:00ಗೆ ಮಥುರ ಪ್ಯಾರಡೈಸ್, ಬಾಲ ರಾಜ್ ಅರಸ್ ರಸ್ತೆ ಇಲ್ಲಿ ಸಮಾರಂಭವನ್ನು ಆಯೋಜಿಸಲಾಗಿದೆ. ಆಸಕ್ತರು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

ನಿವೃತ್ತ ನೌಕರರಿಗೆ ಕ್ಷೇಮ ಕೇಂದ್ರ ಆರಂಭಿಸಲು ಸಂಸದ ರಾಘವೇಂದ್ರ ಮನವಿ

0

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯರಾದ
ಶ್ರೀ ಬಿ ವೈ ರಾಘವೇಂದ್ರರವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಮನ್ಸುಖ ಮಾಂಡವೀಯ ಇವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರಿ ನೌಕರರ ಮತ್ತು ನಿವೃತ್ತ ನೌಕರರ ಕುಟುಂಬಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಆರೋಗ್ಯ ಸೇವೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಸುಸರ್ಜಿತ ಕ್ಷೇಮ ಕೇಂದ್ರವನ್ನು ಕೂಡಲೇ ಆರಂಭಿಸಲು ಮನವಿ ಮಾಡಿಕೊಂಡರು.

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 3500 ಸಾವಿರ ಕೇಂದ್ರ ಸರ್ಕಾರದ ನೌಕರರು ಹಾಗೂ ನಿವೃತ್ತ ನೌಕರರಿದ್ದು, ಇವರುಗಳ ಕ್ಷೇಮಾಭಿವೃದ್ಧಿಯನ್ನು ಕಾಪಾಡಿಕೊಂಡು ಬರಲು ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಸುಸರ್ಜಿತ ಕ್ಷೇಮ ಕೇಂದ್ರದ ಅವಶ್ಯಕತೆ ಇದೆ. ಹಾಲಿ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಇಂತಹ ಕ್ಷಮಾ ಕೇಂದ್ರವನ್ನು ಕೇಂದ್ರ ಸರ್ಕಾರ ತೆರೆದಿರುತ್ತದೆ. ಆದರೆ, ತುರ್ತು ಸಂದರ್ಭಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನೆಲೆಸಿರುವ ಕೇಂದ್ರ ಸರ್ಕಾರದ ನೌಕರರಿಗೆ ಈ ಸೇವೆಯನ್ನು ಪಡೆಯಲು ಸಮಯದ ಅಭಾವದಿಂದ ಅನಾನುಕೂಲ ಉಂಟಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಒಂದು ಕ್ಷೇಮ ಕೇಂದ್ರವನ್ನು ಶಿವಮೊಗ್ಗದಲ್ಲಿ ಕೂಡಲೇ ಆರಂಭಿಸಲು ಮನವಿ ಮಾಡಿಕೊಂಡರು. ರಾಜ್ಯ ಸರ್ಕಾರದಿಂದ ಅವಶ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಲಾಗುವುದು ಎಂದು ಈ ಸಂದರ್ಭದಲ್ಲಿ ಕೋರಿದ್ದಾರೆ.

ಶಿವಮೊಗ್ಗದಲ್ಲಿ ಶ್ರೀನವಚಂಡಿಕಾಯಾಗ

0

ಶಿವಮೊಗ್ಗ ಗ್ರಾಮದೇವತೆ ಕೋಟೆ ಶ್ರೀಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ದಿನಾಂಕ 22-12-2022 ಗುರುವಾರ ಬೆಳಿಗ್ಗೆ 8:30 ರಿಂದ 1:00 ವರೆಗೆ ಜನರ ಸುಖ-ಶಾಂತಿ-ನೆಮ್ಮದಿ ಮತ್ತು ದೇಶದ ಸರ್ವಾಭಿವೃದ್ಧಿಗಾಗಿ ಸಂಕಲ್ಪಿಸಿ ಶ್ರೀನವಚಂಡಿಕಾಯಾಗವನ್ನು ನೆರವೇರಿಸಲಾಗುತ್ತದೆ.

ಈ ಮಹತ್ಕಾರ್ಯಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಧಾನ ಅರ್ಚಕರಾದ ವಿದ್ವಾನ್ ಶಂಕರಾನಂದ ಜೋಯ್ಸ್ ಅವರು ತಿಳಿಸಿದ್ದಾರೆ

ಜನನಿ ಆಸ್ಪತ್ರೆಯಲ್ಲಿ ಒಂದು ಅನನ್ಯ ಅನುಭವ

0

ಇಂದು ನಮ್ಮ ಜನನಿ ನ್ಯೂಲೈಫ್ ಆಸ್ಪತ್ರೆಯಲ್ಲಿ ಸಂಜೆ 6ರ ಸುಮಾರಿಗೆ ಹೆತ್ತವರ ಇಚ್ಛೆಗನುಗುಣವಾಗಿ ಒಂದು ಸುಂದರ ಆರೋಗ್ಯವಂತ ಹೆಣ್ಣು ಮಗು ಜನಿಸಿದ್ದು, ಕೇವಲ ಗಂಡು ಮಕ್ಕಳೇ ಹೇರಳವಾಗಿದ್ದ ಆ ಸುಂದರ ಕುಟುಂಬಕ್ಕೆ ಸಹಜವಾಗಿ ಇನ್ನಿಲ್ಲದ ಸಂತಸವನ್ನು ತಂದಿತ್ತು. ಹೆರಿಗೆಯ ಆಸ್ಪತ್ರೆಯಲ್ಲಿ ಇದು ಸರ್ವೇ ಸಾಮಾನ್ಯವಲ್ಲವೇ? ಇದರಲ್ಲೇನಿದೆ ವಿಶೇಷ ಎನ್ನುವಿರೋ…! ಕೇಳಿ….

ಮೊದಲಿಗೆ ನಾನೂ ಹಾಗೇ ಅಂದುಕೊಂಡಿದ್ದೆ. ಆ ನವಜಾತ ಶಿಶುವಿನ ತಂದೆಯದೋ ಕಟ್ಟು ಮಸ್ತಾದ ದೇಹ. ಊರ್ಧ್ವ ಮುಖಿಯಾಗಿ ಹೆಮ್ಮೆಯಿಂದ ಎದ್ದು ನಿಂತು ಬೀಗುತ್ತಿರುವ ಮೀಸೆ…ಯಾವ ಗಂಡೂ ಕೂಡಾ ಸದಾಕಾಲ ಬಯಸುವಂಥ ದೇಹದಾರ್ಢ್ಯ. ಏಕೋ…ಈತ ಯೋಧನಿರಬಹುದೇ ಎಂಬ ಒಂದು ಪ್ರಬಲವಾದ ಗುಮಾನಿ ನನ್ನನ್ನು ಕಾಡತೊಡಗಿತು.

ಹೆಣ್ಣು ಮಗುವಿನ ಜನನದ ಆ ಕ್ಷಣದಲ್ಲಿ ಆತನ ಮುಖದಲ್ಲಿ ಖುಷಿ ಇದ್ದರೂ ತೇವಗೊಂಡ ಕಣ್ಣುಗಳು ಮಾತ್ರ ಏನನ್ನೋ ಕಳೆದುಕೊಂಡ ವಿಷಾದದ ದ್ಯೋತಕವಾಗಿ ನಿಸ್ತೇಜಗೊಂಡು ಸೊರಗಿ ಹೋಗಿದ್ದವು.

ಹೇಳಿಕೇಳಿ ನಾನೋ ಭಾವಜೀವಿ. ತಡೆಯಲಾರದೇ ಕೇಳಿಯೇ ಬಿಟ್ಟೆ…ಏನ್ರೀ ನೀವು ಬಯಸಿದ್ದೇ ಆಯ್ತಲ್ಲಾ….ಸುಂದರವಾದ ಆರೋಗ್ಯವಂತ ಹೆಣ್ಣು ಮಗು…ಆದ್ರೂ ಸಂತೋಷ ಆಗಿಲ್ವೇ…ಎಂದು ಕೇಳಿದೆ.

ಹಾಗೆ ಕೇಳಬಾರದಿತ್ತೇನೋ…ಆತನ ಮುಂದಿನ ಮಾತುಗಳು ನನ್ನನ್ನು ತೀವ್ರವಾಗಿ ಕಾಡುತ್ತಿವೆ…”ಸಾರ್ ನಾನು INDIAN ARMYನಲ್ಲಿ Frontline Soldier. ಸಿಯಾಚಿನ್ ಪ್ರದೇಶದ ರಕ್ಷಣೆಯ ಹೊಣೆ ಹೊತ್ತ ೧೦ ಸೈನಿಕರ ತುಕಡಿ ನಮ್ಮದು. ಎರಡು ದಿನಗಳ ಹಿಂದೆಯಷ್ಟೇ ಪತ್ನಿಯ ಹೆರಿಗೆಯ ನಿಮಿತ್ತ ಸಿಯಾಚಿನ್ ಗಡಿಯಿಂದ ಮರಳಿದ್ದೆ. ಇಂದು ಮಧ್ಯಾಹ್ನ ೪ ಘಂಟೆ ಸುಮಾರಿಗೆ ನಮ್ಮ ತುಕಡಿಯ 2 ಯೋಧರು ಪಾಪಿ ಭಯೋತ್ಪಾದಕರ ಗುಂಡಿಗೆ ವೀರಗತಿಯನ್ನು ಹೊಂದಿದರು.

ನನ್ನ ಹೆಂಡತಿ ಮತ್ತು ಹೆತ್ತವರಿಗಿಂತ ಹೆಚ್ಚಿನ ಸಮಯವನ್ನು ನಾನು ಕಳೆದ ನನ್ನ ಆ ಕುಟುಂಬದ 2 ಜನರನ್ನು ಕಳೆದುಕೊಂಡದ್ದಕ್ಕೆ ಅಳಬೇಕೋ, ಅಥವಾ ಈ ಕುಟುಂಬದಲ್ಲಿ ಮಗು ಹುಟ್ಟಿದ್ದಕ್ಕೆ ಸಂಭ್ರಮಿಸಬೇಕೋ ತಿಳಿಯುತ್ತಿಲ್ಲ….ಛೇ…ಅಲ್ಲಿ ನಾನಿದ್ದರೆ ಹೀಗಾಗಲು ನಾನು ಬಿಡ್ತಾ ಇರಲಿಲ್ಲ…” ಎಂದು ಅವುಡುಕಚ್ಚಿ ನೋವನ್ನು ನುಂಗಿ ಮಂದಸ್ಮಿತನಾಗಲು ಆತ ಪಡುತ್ತಿದ್ದ ಪಾಡು ನೋಡಿ ನನ್ನ ಕಣ್ಣುಗಳೂ ತೇವಗೊಂಡವು.

ಆತ ತನ್ನ ಬೆಟಾಲಿಯನ್ನಿನ ಕಥೆಗಳನ್ನು ಒಂದೊಂದಾಗಿ ಹೇಳುತ್ತಿದ್ದರೆ ನಾವು ಮೈಯೆಲ್ಲಾ ಕಣ್ಣಾಗಿ ಕೇಳುತ್ತಿದ್ದೆವು… ಸಮಯ ರಾತ್ರಿ 10 ಆದರೂ ಹಸಿವೆಯೇ ಇಂದು ಬತ್ತಿ ಹೋದಂತಿತ್ತು. ಆತನನ್ನು ಅಪ್ಪಿಕೊಂಡು ಭಾವನೆಗಳನ್ನು ಹಂಚಿಕೊಂಡೆ. ಸ್ವಲ್ಪ ಮನಸ್ಸು ಹಗುರವಾದಂತೆನಿಸಿತು.

ನಾವು CIVILIAN ಜೀವನದಲ್ಲಿ ಎಷ್ಟೇ ಶ್ರಮ ಪಟ್ಟರೂ ಅದು ಯೋಧರು ಪಡುವ ಕಷ್ಟಗಳ ಸಾವಿರದ ಒಂದು ಭಾಗಕ್ಕೂ ಸಮನಾಗದು. ಮಲೆನಾಡಿನ 13ಡಿಗ್ರಿಯ ಚಳಿಗೇ ಥರಗುಟ್ಪುವ ನಮ್ಮೀ ಶರೀರ, ಸಿಯಾಚಿನ್ನಿನ ಚಳಿಯ ಕಲ್ಪನೆ ಮಾತ್ರದಿಂದಲೇ freeze ಆದೀತೇನೋ. ಇಂಥವರ ಸೇವೆ ಮಾಡುವ ಅವಕಾಶವನ್ನು ನೀಡಿದ ಭಗವಂತನಿಗೆ ನಾನು ಮನಸ್ಸಿನಲ್ಲೇ ಧನ್ಯವಾದಗಳನ್ನು ಅರ್ಪಿಸಿದೆ.

ಯೋಧನ ಮಗುವಿಗೆ ಸಲ್ಲಿಸಿದ ಸೇವೆಯನ್ನೇ ಈಶ್ವರನ ಪೂಜೆ ಎಂದೇ ಭಾವಿಸಿ ಕೃತಾರ್ಥನಾದೆ…. ಮನಸ್ಸು ಗಡಿಯಲ್ಲಿನ ಸೈನಿಕನಿಗೆ ಒಂದು ಮೌನ ಸಲಾಂ ಹೊಡೆಯುತ್ತಿತ್ತು.

ಮನೆಗೆ ಬಂದು ಟಿವಿ ಹಾಕಿದ್ರೆ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನೊಬ್ಬ ಸೈನಿಕರ ಕುರಿತು ಅವಹೇಳನಕಾರಿ ಭಾಷೆಯ ಪ್ರಯೋಗವನ್ನು ಮಾಡುತ್ತಿರುವುದನ್ನು ಕಂಡು ನನ್ನ ರಕ್ತ ಕುದಿಯತೊಡಗಿತು. ಇಂಥ ನಾ(ಲಾ)ಯಕರನ್ನು ಪಡೆದ ನಾವೇ ಧನ್ಯರು.

ಇಂಥವರು ಅಪ್ಪಿ ತಪ್ಪಿ ಇಸ್ರೇಲಿನಲ್ಲಿ ಏನಾದರೂ ಹುಟ್ಟಿದ್ದರೆ ಬಂದೂಕಿನ ನಳಿಕೆಗೆ ಇವರನ್ನು ಕಟ್ಟಿ ಢಂ ಎನ್ನಿಸಿಬಿಡುತ್ತಿದ್ದರೇನೋ…ಥೂ ನಿಮ್ಮ ಜನ್ಮಕ್ಕಿಷ್ಟು… ಇದರಿಂದ ದೇಶಕ್ಕೆ ಮತ್ತು ನಮ್ಮ ಧ್ವಜದ ಗೌರವದ ರಕ್ಷಣೆಗೆ ಪ್ರಾಣವನ್ನು ಒತ್ತೆಯಿಟ್ಟು ಗಡಿಯಲ್ಲಿ ನಿಂತಿರುವ ಕಟ್ಟ ಕಡೆಯ ಸೈನಿಕನ ಆತ್ಮ ವಿಶ್ವಾಸಕ್ಕೆ ಎಷ್ಟು ಆಘಾತವಾದೀತು… ಎಂದಾದರೂ ಹೀಗೆ ಯೋಚಿಸಿದ್ದೀರಾ…

ಈ ದೇಶ ನಮ್ಮದು ಎಂಬ ಭಾವನೆಯೇ ಇಲ್ಲದಿದ್ದರೆ ಹಾಗೊಂದು ಸಂವೇದನೆ ಜಾಗೃತವಾಗುವುದು ಸಾಧ್ಯವೇ? ಇಂಥವರಿಂದ ದೇಶ ಪ್ರೇಮ ನನ್ನು ಬಯಸುವುದೂ… ಬಂಜೆಯಿಂದ ಕೂಸನ್ನು ಬಯಸುವುದೂ ಎರಡೂ….ಒಂದೇ…

ತನ್ನ ಎದೆಯಲ್ಲಿ 8 ವರ್ಷಗಳ ಹಿಂದೆ ಹೊಕ್ಕ 29 ಗುಂಡುಗಳ ಗುರುತುಗಳನ್ನು ತೋರಿಸುತ್ತಿದ್ದಂತೆ, ಜಗದ ಎಲ್ಲಾ ಕಷ್ಟಗಳನ್ನು ಒತ್ತಟ್ಟಿಗಿಟ್ಟರೂ ಅದು ಸೈನಿಕರ ಪರಿಸ್ಥಿತಿಯ ಮುಂದೆ ಕೇವಲ ತೃಣಸಮಾನ ಎಂದೆನಿಸಿತ್ತು… ವೀರಸ್ವರ್ಗವನ್ನಪ್ಪಿದ ಆತ್ಮಗಳಿಗೆ ಸದ್ಗತಿಯನ್ನು ಬೇಡುತ್ತಾ ಆ ಯೋಧನ ಕುಟುಂಬಕ್ಕೆ ಶುಭ ಹಾರೈಸಿ ರಸ್ತೆಗೆ ಬರುವಷ್ಟರಲ್ಲಿ ಕಣ್ಣುಗಳು ಆರ್ದ್ರ ಗೊಂಡಿದ್ದವು…ಕಾಲುಗಳು ಭಾರವೆನಿಸತೊಡಗಿದ್ದವು….ಕಂಠ ಬಿಗಿದು ಬಂದಿತ್ತು…ಮನೆಗೆ ಬಂದ ಮೇಲೂ ಆತನ ಮಾತುಗಳೇ ಇನ್ನೂ ನನ್ನನ್ನು ಕಾಡುತ್ತಿವೆ… ಸಾಲದೆಂಬಂತೆ ನಿದ್ರೆಯೂ ಹತ್ತುತ್ತಿಲ್ಲ… ದೇವರೇ ಯಾರಿಗೂ ಇಂತಹಾ ಪರಿಸ್ಥಿತಿ ತಂದೊಡ್ಡದಿರು… ಇನ್ನೇನೂ ಬರೆಯಲಾಗುತ್ತಿಲ್ಲ…

ಇದೀಗ ಬಂದ ವರದಿ…. ನಮ್ಮ ಜವಾನ್ ಮತ್ತೆ ಗಡಿಯಿಂದ ತುರ್ತಾಗಿ ಬುಲಾವ್ ಬಂದ ಹಿನ್ನೆಲೆಯಲ್ಲಿ ಎರಡು ದಿನದ ಹಸುಳೆಯನ್ನು ಬಿಟ್ಟು ನಾಳೆ ಮತ್ತೆ ಗಡಿಯತ್ತ ಮರಳುತ್ತಾನೆ. ಮತ್ತೆ ಮುಂದಿನ ಭೇಟಿ…2023 ಸೆಪ್ಟೆಂಬರ್…. I sincerely wish he comes back to reunite with his baby & family. ಇಂಥ ನಡೆದಾಡುವ ದೇವರುಗಳಿಗೊಂದು ಮೌನ ಸಲಾಂ….ಜೈ ಜವಾನ್

ಜೈ ಹಿಂದ್….

ಡಾ.ರಾಘವೇಂದ್ರ ವೈಲಾಯ.ನವಜಾತ ಶಿಶು ಪರಿಣಿತರು.
ಜನನಿ ಆಸ್ಪತ್ರೆ.ಶಿವಮೊಗ್ಗ.

ಸ್ಕೌಟ್ ಮತ್ತು ಗೈಡ್ಸ್ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರ- ಡಾ.ಸರ್ಜಿ

0

ಅಂತಾರಾಷ್ಟ್ರೀಯ ಜಾಂಬೂರಿ ಉತ್ಸವದಲ್ಲಿ ಭಾಗವಹಿಸುವುದರಿಂದ ಬೇರೆ ಬೇರೆ ದೇಶದ ಮಕ್ಕಳೊಂದಿಗೆ ಅನುಭವ ಹಂಚಿಕೊಳ್ಳಲು ಹಾಗೂ ಬಾಂಧವ್ಯ ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ಮ್ಯಾನೇಜಿಂಗ್‌ ಡೈರೆಕ್ಟರ್‌ ಡಾ. ಧನಂಜಯ ಸರ್ಜಿ ಹೇಳಿದರು.

ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಭಾರತ್‌ ಸ್ಕೌಟ್‌ ಆ್ಯಂಡ್‌ ಗೈಡ್ಸ್ ನ ಮಕ್ಕಳು ಮೂಡುಬಿದರೆಯಲ್ಲಿ ನಡೆಯುವ ಏಳು ದಿನಗಳ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಶಿವಮೊಗ್ಗ ಜಿಲ್ಲೆಯಿಂದ 1409 ಮಕ್ಕಳು ತೆರಳುತ್ತಿರುವ ಹಿನ್ನಲೆಯಲ್ಲಿ ಅವರಿಗೆ ಬೀಳ್ಕೊಟ್ಟ ಬಳಿಕ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಅಂತಾರಾಷ್ಟ್ರೀಯ ಜಾಂಬೂರಿಯನ್ನು ನೋಡುವುದೇ ಒಂದು ವಿಶೇಷವಾಗಿದೆ. ಅಲ್ಲದೇ ಸ್ಕೌಟ್‌ ಆ್ಯಂಡ್‌ ಗೈಡ್ಸ್ ವಿದ್ಯಾರ್ಥಿಗಳು ಭವಿಷ್ಯದ ಕನ್ನಡಿ ಇದ್ದಂತೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸ್ಕೌಟ್‌ ಆ್ಯಂಡ್‌ ಗೈಡ್ಸ್ ದಾರಿದೀಪವಾಗಿದೆ. ವಿದ್ಯಾಭ್ಯಾಸದೊಂದಿಗೆ ಉತ್ತಮ ಸಂಸ್ಕಾರ ಹಾಗೂ ಶಿಸ್ತು ಬದ್ಧ ಜೀವನಕ್ಕೆ ನೂರಾರು ವರ್ಷ ಇತಿಹಾಸವಿರುವ ಸ್ಕೌಟ್‌ ಅತ್ಯಂತ ಸಹಕಾರಿಯಾಗಿದೆ ಎಂದು ಅಭಿಪ್ರಾಯಿಸಿದರು.

ಸ್ಕೌಟ್‌ ಆ್ಯಂಡ್‌ ಗೈಡ್ಸ್ ಮುಖ್ಯ ಆಯುಕ್ತರಾದ ಎಚ್‌ ಡಿ ರಮೇಶ್‌ ಶಾಸ್ತ್ರಿ ಅವರು ಮಾತನಾಡಿ, ಸುಮಾರು 50 ಸಾವಿರ ಜನ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಪಾಲ್ಗೊಳ್ಳಲಿದ್ದು, ಏಳು ದಿನಗಳ ಕಾಲ ಈ ವಿಶ್ವ ಜಂಬೂರಿ ನೆರವೇರಲಿದೆ. ಇದು ಭಾರತ ದೇಶದಲ್ಲಿ ಪ್ರಪ್ರಥಮವಾಗಿ ಅದರಲ್ಲೂ ಕರ್ನಾಟಕದಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ಜಿಲ್ಲಾ ಆಯುಕ್ತಾರಾದ ಕೆ.ಪಿ. ಬಿಂದು ಕುಮಾರ್‌, ಜಿ. ವಿಜಯಕುಮಾರ್‌, ಚುಡಾಮಣಿ , ಭಾರತಿ ಡಯಾಸ್‌, ವೈ. ಆರ್‌. ವೀರೇಶಪ್ಪ, ಶಕುಂತಲಾ ಚಂದ್ರಶೇಖರ್‌ ಮತ್ತಿತರರು ಭಾಗವಹಿಸಿದ್ದರು.

ಜಿಲ್ಲಾಮಟ್ಟದ ಥ್ರೋಬಾಲ್ ಸ್ಪರ್ಧೆ

0

ಸಹ್ಯಾದ್ರಿ ಸಹೋದಯ ಶಾಲಾ ಸಂಕೀರ್ಣ ಅಡಿಯಲ್ಲಿ ನಡೆದ ಜಿಲ್ಲಾಮಟ್ಟದ ಥ್ರೋ ಬಾಲ್ ಪಂದ್ಯಾವಳಿಯನ್ನು ವಾಸವಿ ಪಬ್ಲಿಕ್ ಶಾಲೆ ಆಯೋಜಿಸಲಾಗಿತ್ತು.

ಈ ತ್ರೋಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಅಕ್ಷರ ಶಾಲೆ ಪಡೆದುಕೊಂಡಿದೆ.

ಈ ಪಂದ್ಯಾವಳಿಯಲ್ಲಿ 15ಕ್ಕೂ ಅಧಿಕ ಶಾಲೆಗಳು ಭಾಗವಹಿಸಿದವು. ಈ ಸಂದರ್ಭದಲ್ಲಿ ಅಕ್ಷರ ಶಾಲೆಯ ಅಧ್ಯಕ್ಷರಾದ ಶ್ರೀಮತಿ ರತ್ನಕುಮಾರಿ ಮೇಡಂ ರವರು ಕ್ರೀಡಾಪಟುಗಳಿಗೆ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಜಯ ಗಣೀಶ್ , ದೈಹಿಕ ಶಿಕ್ಷಣ ಶಿಕ್ಷಕರಾದ ಹರ್ಷ ಸಿಎಂ, ಶ್ರೀ ಲಕ್ಕಪ್ಪ ಹಾಗೂ ಶಿಕ್ಷಕಿಯಾದ ಶ್ರೀಮತಿ ಶೃತಿ ಫೈ ಉಪಸ್ಥಿತರಿದ್ದರು

ಅಕ್ರಮ ದಾಸ್ತಾನಾಗಿರುವ ಪಡಿತರ ಅಕ್ಕಿ ಬಹಿರಂಗ ಹರಾಜು

0

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಶಿಕಾರಿಪುರ ಕಿರಣ್ ಟಾಕೀಸ್ ಹಿಂಭಾಗದ ಮಳಿಗೆಯಲ್ಲಿ ಸಚಿನ್ ಬಿನ್ ವೀರಪ್ಪ ಚನ್ನಕೇಶವನಗರ ಇವರು ಅಕ್ರಮವಾಗಿ ದಾಸ್ತಾನು ಇರಿಸಿದ್ದ 6.75 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡು ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಈ ಅಕ್ಕಿಯನ್ನು ಡಿಸೆಂಬರ್ 28 ರಂದು ಬೆಳಿಗ್ಗೆ 11.00 ಕ್ಕೆ ಶಿಕಾರಿಪುರ ಎಪಿಎಂಸಿ ಆವರಣದ ಕೆ.ಎಫ್.ಸಿ.ಎಸ್.ಸಿ. ಸಗಟು ಮಳಿಗೆಯಲ್ಲಿ ತಹಶೀಲ್ದಾರ್‍ರವರ ಸಮಕ್ಷಮ ಬಹಿರಂಗ ಹರಾಜು ಮಾಡಲಾಗುತ್ತದೆ.

ಹರಾಜಿನಲ್ಲಿ ಭಾಗವಹಿಸಲು ಆಸಕ್ತರಿರುವ ಎಪಿಎಂಸಿ ಪರವಾನಗಿ ಹೊಂದಿರುವ ಬಿಡ್ಡುದಾರರು ಷರತ್ತುಗಳಿಗೆ ಒಳಪಟ್ಟು ಭದ್ರತಾ ಠೇವಣಿ ಪಾವತಿಸಿ ಗೊತ್ತುಪಡಿಸಿದ ದಿನಾಂಕದಂದು ಒಂದು ಗಂಟೆ ಮುಂಚಿತವಾಗಿ ಹಾಜರಿದ್ದು, ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಶಿಕಾರಿಪುರ ತಾಲೂಕು ತಹಶೀಲ್ದಾರ್ ಅವರು ತಿಳಿಸಿದ್ದಾರೆ.